Homeಮುಖಪುಟತ್ರಿವರ್ಣಕಾರಣ: ರಾಷ್ಟ್ರಧ್ವಜದ ನಿಯಮಾವಳಿ ಸುತ್ತಮುತ್ತಲ ರಾಜಕೀಯ

ತ್ರಿವರ್ಣಕಾರಣ: ರಾಷ್ಟ್ರಧ್ವಜದ ನಿಯಮಾವಳಿ ಸುತ್ತಮುತ್ತಲ ರಾಜಕೀಯ

- Advertisement -
- Advertisement -

ವಿಶ್ವದಲ್ಲಿಯೇ ಅತಿ ದೊಡ್ಡ ಸೈನ್ಯಗಳಲ್ಲಿ ಒಂದಾದ ಅಮೆರಿಕ ಸೈನ್ಯ ತನ್ನ ಇಮೇಜ್ ಕಾಯ್ದುಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡುತ್ತದೆ. ಅದರಲ್ಲಿ ಒಂದು ‘ಎಂಬೆಡೆಡ್ ಮೀಡಿಯಾ’. ಅಲ್ಲಿನ ಸಶಸ್ತ್ರ ಪಡೆಗಳ ಬಗ್ಗೆ ಸದಾಕಾಲವೂ ಒಳ್ಳೆಯದನ್ನೇ ಬರೆಯುವ ಹಾಗೂ ಮಾತಾಡುವ ಪತ್ರಕರ್ತರಿಗೆ ಈ ಉಪಾಧಿ ಬಳಸಲಾಗುತ್ತದೆ.

ಅನವಶ್ಯಕವಾಗಿ ಇತರ ದೇಶಗಳ ಆಂತರಿಕ ರಾಜಕೀಯದಲ್ಲಿ ಮೂಗುತೂರಿಸುವ ಅಮೆರಿಕದ ಸರಕಾರ ಹಾಗೂ ಸೈನ್ಯ ಈ ಕಾರಣಕ್ಕಾಗಿ ಅನೇಕ ಬರೀ ಟೀಕೆಗೆ ಒಳಗಾಗುತ್ತವೆ.

“ನಾವು ನಮ್ಮ ನೆಲ ಹೊರತುಪಡಿಸಿ, ಬೇರೆ ದೇಶದಲ್ಲಿಯೇ ಹೆಚ್ಚು ಯುದ್ಧಗಳನ್ನು ನಡೆಸಿದ್ದೇವೆ. ಕೆಲವನ್ನು ನಾವೇ ಹುಟ್ಟು ಹಾಕಿದ್ದೇವೆ,” ಎಂದು ಅಮೆರಿಕೆಯ ಕೆಲ ಶಾಂತಿಪ್ರಿಯ ಚಿಂತಕರು, ವಿದೇಶಿ ವ್ಯವಹಾರ ತಜ್ಞರು, ಹಾಗೂ ಹೋರಾಟಗಾರರು ಟೀಕೆ ಮಾಡುತ್ತಿರುತ್ತಾರೆ. ಅತ್ಯಂತ ಪ್ರಾಯೋಗಿಕ ರಾಜಕಾರಣ ಮಾಡುವ ಅಲ್ಲಿನ ನಾಯಕರು ಹಾಗೂ ಅಧಿಕಾರಿಗಳು, “ಕೇವಲ ಹೊರಗಿನವರು ನಮ್ಮನ್ನು ಟೀಕೆ ಮಾಡಿದರೆ ಚನ್ನಾಗಿರುವುದಿಲ್ಲ. ಕೆಲವು ಸಲ ನಮ್ಮವರೇ ನಮ್ಮನ್ನು ಟೀಕೆ ಮಾಡಬೇಕು. ಆ ಅವಕಾಶಗಳನ್ನು ನಾವು ಬೇರೆಯವರಿಗೆ ಬಿಟ್ಟುಕೊಡಬಾರದು”, ಎಂದುಕೊಂಡೋ ಏನೋ ಕೆಲವೊಮ್ಮೆ ತಮ್ಮ ’ನಾಟಿದ ಪತ್ರಕರ್ತರು’ಗಳಿಗೂ (ಎಂಬೆಡೆಡ್ ಜರ್ನಲಿಸ್ಟ್) ಕೂಡ ಟೀಕೆಯ ಅಸೈನ್‌ಮೆಂಟ್ ಕೊಡುತ್ತಾರೆ. ಚಿಂತಕ ಡಿ.ಆರ್ ನಾಗರಾಜ್ ಅವರು ಬಣ್ಣಿಸಿದಂತೆ ‘ಆತ್ಮೀಯ ಶತ್ರುತ್ವ ಸಾಧಕರು’ ಅವರು.

ನಮ್ಮ ನಾಡಿನ ಖಡಕ್ ಹಿಂದುತ್ವವಾದಿಗಳು ಹಾಗೂ ಜೋರದಾರ ನಾಯಕರಾದ ಪ್ರಮೋದ್ ಮುತಾಲಿಕ್ ಅವರನ್ನು ನೋಡಿದಾಗ ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ. ಮುತಾಲಿಕ್ ಅವರು ಮೊನ್ನೆ ಧಾರವಾಡದಲ್ಲಿ ಬಿಜೆಪಿಯನ್ನು ಬಹಳ ಜೋರಾಗಿ ತರಾಟೆಗೆ ತೆಗೆದುಕೊಂಡರು. ಈ ಬಾರಿ ಅವರಿಗೆ ಸಿಕ್ಕ ಅಸ್ತ್ರ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ದವರು ಬದಲುಮಾಡಿದ ರಾಷ್ಟ್ರಧ್ವಜದ ನಿಯಮಾವಳಿ. “ಈ ಹಿಂದೆ ಕೇವಲ ಖಾದಿ ವಸ್ತ್ರದಿಂದ ಮಾತ್ರ ರಾಷ್ಟ್ರಧ್ವಜ ತಯಾರು ಮಾಡಬಹುದು ಎನ್ನುವ ನಿಯಮ ಇತ್ತು. ಅದನ್ನು ಈ ಬಿಜೆಪಿ ನಾಯಕರು ಬದಲು ಮಾಡಿದ್ದಾರೆ.”

ಪ್ರಮೋದ್ ಮುತಾಲಿಕ್

“ಬಿಜೆಪಿಯವರು ತಿರಂಗಾವನ್ನು ಪಾಲಿಸ್ಟರ್ ಬಟ್ಟೆಯಿಂದ, ಆಮದು ಮಾಡಿಕೊಂಡ ಬಟ್ಟೆಯಿಂದ ತಯಾರಿಸಬಹುದು ಎಂದು ಬದಲಾಯಿಸಿದ್ದಾರೆ. ಯಾಕೆ ಮಾಡಿದ್ದಾರೆನ್ನುವುದು ಸ್ಪಷ್ಟ ಇಲ್ಲ. ಇವೆಲ್ಲಾ ತಿದ್ದುಪಡಿಗಳನ್ನು ಮಾಡಿ ಬಿಜೆಪಿಯವರು ಯಾರನ್ನು ಓಲೈಸಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ ಇದನ್ನು ಬಿಜೆಪಿಯವರು ಮಾಡಬಾರದಾಗಿತ್ತು” ಎಂದು ತಮ್ಮ ಎಂದಿನ ಶೈಲಿಯಲ್ಲಿ ಜೋರು ಮಾಡಿದರು ಮುತಾಲಿಕ್.

“ಅಷ್ಟು ಸಾಲದೆ, ಅಶೋಕ ಚಕ್ರದ ಲಾಂಛನವನ್ನು ಯಂತ್ರ ಮುದ್ರಣ ಮಾಡಿಸಿ ಬಳಸಲು ಅವಕಾಶ ಕೊಟ್ಟಿದ್ದಾರೆ. ಇದನ್ನು ನೋಡಿದ ಕೆಲವು ವ್ಯಾಪಾರಸ್ಥರು ಕೇವಲ ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಧ್ವಜಗಳನ್ನು ತಯಾರು ಮಾಡಿ ಮಾರುತ್ತಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಅವಮಾನ ಅಲ್ಲವೇ?” ಎಂದು ಅವರು ಕೇಳಿದರು.

“ಇದು ‘ಮನೆಗೊಂದು ತಿರಂಗಾ’ ಹೆಸರಿನಲ್ಲಿ ಬಿಜೆಪಿಯವರು ಮಾಡುತ್ತಿರುವ ರಾಜಕೀಯ. ಇದು ಖಾದಿ ಧ್ವಜ ತಯಾರು ಮಾಡುತ್ತಿರುವ ಸಾವಿರಾರು ಹಳ್ಳಿಯ ಹೆಣ್ಣು ಮಕ್ಕಳ ಹೊಟ್ಟೆಗೆ ಹೊಡೆದಂತೆ ಅಲ್ಲವೇ?” ಎಂದು ಖರಾವಾಗಿ ಪ್ರಶ್ನಿಸಿದರು.

“ಈ ತಿದ್ದುಪಡಿ ಅವಮಾನಕರ. ಇದನ್ನು ಬಿಜೆಪಿಯವರು ವಾಪಸ್ ಪಡೆಯಬೇಕು” ಎಂದು ತಾಕೀತು ಮಾಡಿದರು.
ಮುತಾಲಿಕ್ ಅವರು ತಮ್ಮ ಕಿಸೆಯಿಂದ ಹಣಕೊಟ್ಟು ತಂದಿರುವುದಾಗಿ ಕೆಲವು ಧ್ವಜಗಳನ್ನು ತೋರಿಸಿದರು. “ಇವುಗಳಲ್ಲಿ ಕೆಲವು ಹರಿದುಹೋಗಿವೆ; ನಮ್ಮ ಧ್ವಜ ಎರಡು ಗುಣಿಲೆ ಮೂರು ಆಯಾಮದಲ್ಲಿ ಇರಬೇಕು; ಆದರೆ ಇವು ಇಲ್ಲ; ಅಶೋಕ ಚಕ್ರ ಸರಿಯಾಗಿ ವೃತ್ತಾಕಾರದಲ್ಲಿ ಇರಬೇಕು-ಅದೂ ಇಲ್ಲ; ಇವು ತತ್ತಿಯ ಆಕಾರದಲ್ಲಿ ಇವೆ” ಎಂದು ಸಂಕಟ ಪಟ್ಟರು. ಆದರೆ ಮುತಾಲಿಕ್ ಅವರ ಮಾತನ್ನು ಅಷ್ಟೊತ್ತೂ ಕೇಳಿದ ಧಾರವಾಡದ ಬಾತ್ಮಿದಾರರಿಗೆ ಅವರು ಶಾಲೆಯಲ್ಲಿ ಮಕ್ಕಳು ತಿನ್ನುವ ತತ್ತಿಯ ಬಗ್ಗೆ ಮಾತಾಡಿದರೋ ಅಥವಾ ವರಕವಿ ಬೇಂದ್ರೆ ಅವರ ‘ತತ್ತಿನ ತತ್ತಿ’ಯ ಮಾತು ಹೇಳಿದರೋ ಗೊತ್ತಾಗಲಿಲ್ಲ.

ಸ್ವಾತಂತ್ರ್ಯ ಬರುವ ಮುಂಚಿನಿಂದಲೂ ಭಾರತಕ್ಕೆ ತನ್ನದೇ ಆದ ಅನೇಕ ಧ್ವಜಗಳು ಇದ್ದವು. ಹಲವಾರು ದೇಶಭಕ್ತರು ತಮ್ಮ ದೇಶಪ್ರೇಮ ನಿರೂಪಿಸಲು ಸೃಷ್ಟಿಸಿದ ವಿಭಿನ್ನ ವಿನ್ಯಾಸಗಳನ್ನು ಅವು ಹೊಂದಿದ್ದವು. ಇವೆಲ್ಲವನ್ನು ಅಭ್ಯಾಸ ಮಾಡಿ ಒಂದು ದೇಶಕ್ಕೆ ಒಂದು ಧ್ವಜವನ್ನು ರೂಪಿಸಲು ಒಕ್ಕೂಟ ಸರಕಾರ ಹಾಗೂ ಸಂವಿಧಾನ ರಚನಾ ಮಂಡಳಿಯ ಸದಸ್ಯರು ಒಂದು ಸಮಿತಿ ರಚನೆ ಮಾಡಿದರು. ಆ ಸಮಿತಿ ಅಂತಿಮವಾಗಿ ನಿರ್ಣಯಿಸಿದ್ದು ಅಶೋಕ ಚಕ್ರ ಹೊಂದಿದ ತ್ರಿವರ್ಣ ಧ್ವಜವನ್ನು.

ಈ ರೀತಿ ಸಕಲ ಭಾರತೀಯರ ಮನಸ್ಸನ್ನು (ಜನ-ಗಣ-ಮನ) ಆಳುವ ಈ ಧ್ವಜವನ್ನು ಗೌರವಿಸುವ, ಅದನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವದಕ್ಕೆ ಒಂದು ನಿಯಮಾವಳಿ ರೂಪಿಸಲಾಯಿತು. ಇದು ಇಲ್ಲಿಯವರೆಗೆ ಮೂರು ಬಾರಿ ಬದಲಾಗಿದೆ. ಕೆಲವೊಮ್ಮೆ ಸರ್ಕಾರದ ಒಲವು-ನಿಲುವುಗಳಿಗೆ ತಕ್ಕಂತೆ ರೂಪಿಸಲಾಯಿತು. ಇನ್ನು ಕೆಲವನ್ನು ನ್ಯಾಯಾಲಯಗಳ ತೀರ್ಪುಗಳನುಸಾರವಾಗಿ ಬದಲಾಯಿಸಲಾಯಿತು.

ಈಗ ಸದ್ಯಕ್ಕೆ ಬಹು ಚರ್ಚಿತವಾದ ವಿಷಯವಾಗಿರುವುದು 2022ರಲ್ಲಿ ಈ ನಿಯಮಾವಳಿಗಳಿಗೆ ಕೇಂದ್ರ ಸರಕಾರ ಮಾಡಿರುವ ತಿದ್ದುಪಡಿ. ಇದು ನಿಯಮಾವಳಿ 1(2)ಕ್ಕೆ ಸಂಬಂಧ ಪಟ್ಟಿದ್ದು; ಹೊಸ ನಿಯಮದ ಪ್ರಕಾರ ಧ್ವಜಗಳನ್ನು ಖಾದಿ ಮತ್ತು ರೇಷ್ಮೆಯಲ್ಲದೆ ಯಾವುದೇ ನೈಸರ್ಗಿಕ ಹಾಗೂ ಪಾಲಿಸ್ಟರ್ ಸೇರಿದಂತೆ ಸ್ವದೇಶಿ ಅಥವಾ ಆಮದು ಮಾಡಲಾದ ಬಟ್ಟೆಗಳಿಂದ ತಯಾರು ಮಾಡಬಹುದು. ಇದು ಕೇವಲ ಸಣ್ಣ ನಿಯಮಾವಳಿಯ ಬದಲಾವಣೆ ಆದ್ದರಿಂದ ಇದನ್ನು ಸಂಸತ್ತಿನ ಮುಂದೆ ತರುವ ಅವಶ್ಯಕತೆಯೇ ಇರಲಿಲ್ಲ. ಇದು ಕೇವಲ ಇಲಾಖಾ ಮಟ್ಟದಲ್ಲಿ ಮಾಡಿದ ಆಡಳಿತಾತ್ಮಕ ಬದಲಾವಣೆ ಎಂದು ಕೇಂದ್ರ ಮಂತ್ರಿಯೊಬ್ಬರು ಹೇಳಿದ್ದಾರೆ.

ನಾವು ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ‘ಪ್ರತಿ ಮನೆಗೂ ತ್ರಿವರ್ಣ ಧ್ವಜ’ ಎನ್ನುವ ಯೋಜನೆ ಹಾಕಿಕೊಂಡಿದ್ದೇವೆ. ಈ ಲೆಕ್ಕದಲ್ಲಿ ಭಾರತಕ್ಕೆ 30-40 ಕೋಟಿ ಧ್ವಜಗಳು ಬೇಕಾಗುತ್ತವೆ. ಅಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಗ್ರಾಮೋದ್ಯೋಗ ಸಂಘಗಳು ಧ್ವಜಗಳನ್ನು ಉತ್ಪಾದನೆ ಮಾಡಲು ಸಾಧ್ಯ ಇರಲಿಲ್ಲ. ಹೀಗಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಆದರೀಗ ಖಾದಿ ಬಳಸುವವರು, ಪ್ರಚಾರಕರು, ಕೆಲಸಗಾರರು ಎಲ್ಲ ಸೇರಿ ಈ ತಿದ್ದುಪಡಿಯನ್ನು ವಿರೋಧ ಮಾಡುತ್ತಿದ್ದಾರೆ. ಇದು ದೇಶದಾದ್ಯಂತ ಇರುವ ಲಕ್ಷಾಂತರ ಖಾದಿ ಭಂಡಾರಗಳಲ್ಲಿ ದುಡಿಯುವ ಕೋಟ್ಯಂತರ ಕೆಲಸಗಾರರಿಗೆ ಮಾಡಿದ ಮೋಸದಂತೆ ಕೆಲವರಿಗೆ ಕಾಣುತ್ತಿದೆ. ನ್ಯೂ ಎಜ್ ಖಾದಿ ಎನ್ನುವ ಬ್ರಾಂಡ್‌ನಲ್ಲಿ ಅಂಗಡಿ ತೆರೆದಿರುವ ರೇಮಂಡ್ ಮುಂತಾದ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ಒಪ್ಪಿಸುವ ಷಡ್ಯಂತ್ರವಾಗಿ ಇನ್ನು ಕೆಲವರಿಗೆ ಕಾಣುತ್ತಿದೆ. ಬಿಜೆಪಿ ಸರ್ಕಾರದ ಪ್ರತಿ ಹೆಜ್ಜೆಯನ್ನು ಒಂದು ರಾಜಕೀಯ ನಡೆ ಎಂದು ನೋಡುವವರು ಈ ತಿದ್ದುಪಡಿಯನ್ನು ಭಾರತೀಯರ ಮನಸ್ಸಿನಿಂದ ಸ್ವಾತಂತ್ರ್ಯ ಸಂಗ್ರಾಮದ, ಅಹಿಂಸಾತ್ಮಕ ಹೋರಾಟದ, ಖಾದಿಯ, ಹಾಗೂ ಗಾಂಧೀಜಿ ಅವರ ನೆನಪನ್ನು ಅಳಿಸುವ ಪ್ರಯತ್ನವಾಗಿ ಇದನ್ನು ಅರ್ಥೈಸುತ್ತಿದ್ದಾರೆ. ಇದೆಲ್ಲದರ ಧೂಳು ಸರಿದ ಮೇಲೆ ಎಲ್ಲರ ನೋಟ ನಿಚ್ಚಳವಾದೀತು.

ಅಂದಹಾಗೆ ಮೊನ್ನೆಯಷ್ಟೇ ಮಹಿಳಾ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡುವ ಸೇವಾ ಸಂಸ್ಥೆಯೊಂದು ಜಾಹೀರಾತೊಂದನ್ನು ಬಿಡುಗಡೆ ಮಾಡಿತು: ’ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ತಮ್ಮ ಡ್ರೆಸ್ ಬಗ್ಗೆ ಮಾತಾಡಿಕೊಳ್ಳುತ್ತಾರೆ. ಒಬ್ಬಳು ಬರಿಯ ಬಿಳಿಯ ಬಟ್ಟೆ ಹಾಕಿಕೊಂಡಿರುತ್ತಾಳೆ. ನೀನು ತಿರಂಗಾ ಬಣ್ಣದ ಬಟ್ಟೆ ಹಾಕಿಕೊಳ್ಳಬಾರದೇ ಎಂದು ಇನ್ನೊಬ್ಬಳು ಕೇಳಿದಾಗ ಆಕೆ ನನ್ನ ತಿರಂಗಾ ನನ್ನ ಹೃದಯದಲ್ಲಿದೆ ಎನ್ನುತ್ತಾಳೆ’.

ಈ ಹಿನ್ನೆಲೆಯಲ್ಲಿ ಕೆಲ ಪ್ರಶ್ನೆಗಳು ಕೇಳಿಬರುತ್ತಿವೆ. ದೇಶಕ್ಕೆ ಒಂದು ಧ್ವಜ ಅಂತ ಬೇಕೆ? ಅದನ್ನು ಎತ್ತಿಕೊಂಡು ಮೆರೆಸುವುದು ತೋರಿಕೆಯ ಭಕ್ತಿ ಆಗಲಾರದೇ? ನಮ್ಮ ದೇಶಭಕ್ತಿ ನಮ್ಮ ಮನದಲ್ಲಿ ಇದ್ದರೆ ಸಾಲದೇ? ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಬೀರುತ್ತಿದ್ದಾರೆ.

ಇದರ ಹಿನ್ನೆಲೆಯಲ್ಲಿ ನಮ್ಮ ಪೂರ್ವಸೂರಿಗಳ ಕೆಲವು ವಿವೇಕದ ಮಾತುಗಳನ್ನು ಕೇಳೋಣ. ಗೋಪಾಲ ಹಾಗೂ ಗೋವಿಂದ ಎನ್ನುವ ಇಬ್ಬರು ಮಕ್ಕಳು ರಾಮಕೃಷ್ಣ ಪರಮಹಂಸರ ಹತ್ತಿರ ಒಂದು ಪ್ರಶ್ನೆ ಕೇಳಿದರಂತೆ, “ನಾವು ಸುಗ್ಗಿಯ ಕಾಲದಲ್ಲಿ ಮಣ್ಣಿನ ಎತ್ತುಗಳನ್ನು ಮಾಡಿ ಪೂಜೆ ಮಾಡುವುದು ಏಕೆ? ನಮ್ಮ ಹಟ್ಟಿಯ ಎತ್ತುಗಳ ಬಗ್ಗೆ ನಮಗೆ ಪೂಜ್ಯ ಭಾವನೆ ನಮ್ಮ ಮನದಲ್ಲಿ ಇದ್ದರೆ ಸಾಲದೇ?” ಅಂತ. ಅದಕ್ಕೆ ಅವರು “ಎರಡಕ್ಕೆ ಎರಡು ಕೂಡಿಸಿದರೆ ನಾಲ್ಕು ಎನ್ನುವ ಲೆಕ್ಕ ಕೆಲವರಿಗೆ ಬಾಯಲ್ಲಿ ಬರುತ್ತದೆ, ಇನ್ನು ಕೆಲವರು ಕೈ ಬೆರಳು ಎಣಿಸಬೇಕಾಗುತ್ತದೆ. ಅಂತೆಯೇ ನಮ್ಮಲ್ಲಿ ಕೆಲವರಿಗೆ ಬಾಹ್ಯ ಜಗತ್ತಿನಲ್ಲಿ ಮೂರ್ತಿ-ಚಿಹ್ನೆ-ಸಂಕೇತಗಳು ಇದ್ದಾಗ ಅವರ ಮನದ ಭಾವನೆ ಸರಿಯಾಗಿ ಗಟ್ಟಿಗೊಳ್ಳುತ್ತದೆ, ಹೊರಗೆ ಬರುತ್ತದೆ. ನಾನು ಸಣ್ಣವನಿದ್ದಾಗ ಮೂರ್ತಿಗಳನ್ನು ಪೂಜಿಸುತ್ತಿದ್ದೆ. ಈಗ ನನ್ನ ದೇವರು ನನ್ನ ಮನಸ್ಸಿನಲ್ಲಿ ಇದ್ದಾನೆ” ಅಂದರಂತೆ.

ಅಮೂರ್ತ ಕಲ್ಪನೆಗಳು ಕೆಲವರಿಗೆ, ಅದರಲ್ಲೂ ಚಿಕ್ಕ ಮಕ್ಕಳಿಗೆ ಸಾಧ್ಯ ಆಗಲಿಕ್ಕಿಲ್ಲ. ಹೀಗಾಗಿ ಪ್ರತಿಮೆಗಳು ನಮಗೆ ಮುಖ್ಯ ಎನ್ನುವುದು ಕೆಲವರ ವಾದ. ಭರತಭೂಮಿಯ ಸ್ವತಂತ್ರ ಚಿಂತಕರಲ್ಲಿ ಒಬ್ಬರಾದ ಯು.ಜಿ ಕೃಷ್ಣಮೂರ್ತಿ ಅವರ ಪ್ರಕಾರ ಜ್ಞಾನ ಎನ್ನುವುದರ ವ್ಯಾಖ್ಯೆ ತುಂಬ ಸರಳ. “ನಾವು ಎಲ್ಲದಕ್ಕೂ ಒಂದು ಹೆಸರು ಕೊಡಬೇಕು. ಆವಾಗ ನಮಗೆ ಅದೆಲ್ಲ ಅರ್ಥವಾಗುತ್ತದೆ. ನಮ್ಮ ಜೀವನದ ಪ್ರತಿ ಘಟ್ಟ, ಬದಲಾವಣೆ, ವ್ಯಕ್ತಿಗಳನ್ನು ಗುರುತಿಸಿ ಅವೆಲ್ಲವಕ್ಕೂ ಹೆಸರು ಕೊಟ್ಟರೆ ಅವುಗಳ ಅರಿವು ನಮಗೆ ತಾನಾಗಿಯೇ ಆಗುತ್ತದೆ. ಜ್ಞಾನ ಎಂದರೆ ಇಷ್ಟೇ”. ಇದು ತನ್ನ ಜಾಗದಲ್ಲಿ ತಾನಿರಲಿ. ಆದರೆ ‘ಅರಿಯಲೆಂದು ಕುರುಹು ಕೊಟ್ಟರೆ ಅರಿವ ಬಿಟ್ಟು ಕುರುಹ ಹಿಡಿದರು’ ಎಂದು ಇಂದಿಗೆ 900 ವರ್ಷಗಳ ಹಿಂದೆ ಸಂಕೇತಗಳ ವಿಪರೀತಾರ್ಥದ ಬಗ್ಗೆ ನಮ್ಮನ್ನು ಎಚ್ಚರಿಸಿದ್ದ ಅಲ್ಲಮ ಪ್ರಭುವಿನ ಮಾತನ್ನು ನಾವು ಮರೆಯದಿರೋಣ.


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಲಾಂಛನಗಳು ಕೇವಲ ಸಾಂಕೇತಿಕವಾಗದೆ ನಡೆನುಡಿಯನ್ನೂ ಪ್ರಭಾವಿಸಲಿ

ಇದನ್ನೂ ಓದಿ: ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ?: ನೆಹರೂ ಫೋಟೊ ಕೈಬಿಟ್ಟ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...