Homeಮುಖಪುಟವಂಶಾಡಳಿತ ಭಾರತದ ಮುಂದಿರುವ ಸವಾಲು ಎಂದು ಪ್ರಧಾನಿ ಮೋದಿ: ಬಿಜೆಪಿ ವಂಶಾಡಳಿತದ ಪಟ್ಟಿ ದೊಡ್ಡದಿದೆ!

ವಂಶಾಡಳಿತ ಭಾರತದ ಮುಂದಿರುವ ಸವಾಲು ಎಂದು ಪ್ರಧಾನಿ ಮೋದಿ: ಬಿಜೆಪಿ ವಂಶಾಡಳಿತದ ಪಟ್ಟಿ ದೊಡ್ಡದಿದೆ!

1999 ರಿಂದ ಕಾಂಗ್ರೆಸ್ 36 ವಂಶಾಡಳಿತದ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದ್ದರೆ ಬಿಜೆಪಿಯು ಸಹ 31 ಸದಸ್ಯರನ್ನು ಆಯ್ಕೆ ಮಾಡಿದೆ!

- Advertisement -
- Advertisement -

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ವಂಶಾಡಳಿತ ಮತ್ತು ಭ್ರಷ್ಟಾಚಾರವು ಭಾರತಕ್ಕೆ ಅಂಟಿರುವ ಎರಡು ದೊಡ್ಡ ಸವಾಲುಗಳು ಎಂದಿದ್ದಾರೆ. “ಭ್ರಷ್ಟಾಚಾರವು ನಮ್ಮ ದೇಶವನ್ನು ಗೆದ್ದಲುಗಳಂತೆ ತಿನ್ನುತ್ತಿದೆ. ಮತ್ತು ವಂಶಾಡಳಿತವು ಎಲ್ಲರಿಂದ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ. ಇವರೆಡನ್ನು ಮುಕ್ತಗೊಳಿಸಲು ಪ್ರತಿಜ್ಞೆ ಮಾಡೋಣ” ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾರವರು ಮೋದಿಯವರು ಬಿಜೆಪಿಯ ವಂಶಾಡಳಿತ ಉಲ್ಲೇಖಿಸಿ ಮಾತನಾಡಿರಬೇಕು ಎಂದಿದ್ದಾರೆ. ಎಲ್ಲಾ ಪಕ್ಷಗಳಲ್ಲಿ ಮನೆ ಮಾಡಿರುವ ಈ ವಂಶಾಡಳಿತವು ಬಿಜೆಪಿಯಲ್ಲಿ ಡಾಳಾಗಿ ಎದ್ದು ಕಾಣುತ್ತಿದೆ. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

2009 ರಲ್ಲಿ ಶೇ. 30 ರಷ್ಟು ವಂಶಪಾರಂಪರ್ಯದ ಸದಸ್ಯರು ಲೋಕಸಭೆಗೆ ಆಯ್ಕೆಯಾದರೆ 2014 ರಲ್ಲಿ ಶೇ. 22ಕ್ಕೆ ಇಳಿದಿತ್ತು. ಈ ಕುಟುಂಬ ರಾಜಕಾರಣ ಎಂಬುದು ನಿಜಕ್ಕೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮಾರಕ ಅಂಶವಾಗಿದೆ. ಆದರೆ ಕೇವಲ ಕಾಂಗ್ರೆಸ್‌ನಲ್ಲಿ, ಅಥವಾ ಪ್ರಾದೇಶಿಕ ಪಕ್ಷಗಳಲ್ಲಿ ಮಾತ್ರ ವಂಶಾಡಳಿತ ಇದೆ ಎಂದರೆ ತಪ್ಪಾಗುತ್ತದೆ. ಏಕೆಂದರೆ 2014ರಲ್ಲಿ ಬಿಜೆಪಿಯಿಂದ ಶೇ. 44 ರಷ್ಟು ಕುಟುಂಬ ರಾಜಕಾರಣದ ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರು ಎಂದು ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ವಿದ್ವಾಂಶ ರೋಮೈನ್ ಕಾರ್ಲೆವಾನ್ ಎಂಬುವವರ ಅಧ್ಯಯನ ತೆರೆದಿಟ್ಟಿದೆ.

ಮಾರ್ಚ್ 2019 ರಲ್ಲಿ ಬ್ಲೂಮ್‌ಬರ್ಗ್ ಕ್ವಿಂಟ್ ಪ್ರಕಟಿಸಿದ ಇಂಡಿಯಾ ಸ್ಪೆಂಡ್ ಅಧ್ಯಯನದಂತೆ 1999 ರಿಂದ ಕಾಂಗ್ರೆಸ್ 36 ವಂಶಾಡಳಿತದ ಸಂಸತ್ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದರೆ ಬಿಜೆಪಿಯು ಸಹ 31 ಸದಸ್ಯರನ್ನು ಆಯ್ಕೆ ಮಾಡಿತ್ತು!. ಹಾಗಾಗಿ ಎಲ್ಲಾ ಪಕ್ಷದ ಮತ್ತು ಎಲ್ಲಾ ರೀತಿಯ ಕುಟುಂಬ ರಾಜಕಾರಣವೂ ಸಹ ಖಂಡಿಸಬೇಕು.

ಒಂದೆಡೆ ಮೋದಿಯವರು ಮತ್ತು ಬಿಜೆಪಿ ವಂಶಾಡಳಿತ ರಾಜಕಾರಣವನ್ನು ವಿರೋಧಿಸುತ್ತಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುತ್ತಾರೆ. ಆದರೆ ಅವರ ಪಕ್ಷದಲ್ಲಿಯೇ ವಂಶವಾಹಿನಿ ರಾಜಕಾರಣ ಡಾಳಾಗಿ ಎದ್ದು ಕಾಣುತ್ತದೆ. ಅದರ ಬಗ್ಗೆ ಮಾತ್ರ ಅವರು ಮೌನ ವಹಿಸುತ್ತಾರೆ. ಇದು ಅವರ ಇಬ್ಬಂದಿತನವನ್ನು ತೋರಿಸುತ್ತದೆ.

2019ರಲ್ಲಿ ಬಿಜೆಪಿಯು ಲೋಕಸಭೆಯಲ್ಲಿ 303 ಸಂಸದರು ಮತ್ತು ರಾಜ್ಯಸಭೆಯಲ್ಲಿ 85 ಸದಸ್ಯರನ್ನು ಹೊಂದಿತ್ತು. ಎರಡೂ ಸೇರಿ ಒಟ್ಟು 388 ಸಂಸದರಲ್ಲಿ 45 ಸಂಸದರು ವಂಶಾಡಳಿತ ರಾಜಕಾರಣದಿಂದಲೇ ಬಂದಿದ್ದರು. ಅಂದರೆ ಸುಮಾರು ಶೇ. 11 ರಷ್ಟು ಎಂದು ದಿ ಪ್ರಿಂಟ್ ವರದಿ ಮಾಡಿತ್ತು.

ಬಿಜೆಪಿಯ ವಂಶಾಡಳಿತ ರಾಜಕಾರಣದ ಪಟ್ಟಿ ಇಲ್ಲಿದೆ

ಜೆ.ಪಿ ನಡ್ಡಾ

ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಇವರು ಜಬಲ್‌ ಪುರದ ಮಾಜಿ ಸಂಸದೆ ಜಯಶ್ರೀ ಬ್ಯಾನರ್ಜಿಯವರ ಅಳಿಯರಾಗಿದ್ದಾರೆ.

ಬಸವರಾಜ ಬೊಮ್ಮಾಯಿ

ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾರೆ. ಅವರ ತಂದೆ ಸಹ ಹಿಂದೆ ಕರ್ನಾಟಕದಲ್ಲಿ ಸಿಎಂ ಹುದ್ದೆ ಅಲಂಕರಿಸಿದ್ದರು.

ಪೆಮಾ ಖಂಡು

ಹಾಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿರುವ ಇವರ ರಾಜ್ಯದ ಮಾಜಿ ಸಿಎಂ ದೋರ್ಜಿ ಖಂಡುರವರ ಪುತ್ರರಾಗಿದ್ದಾರೆ.

ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿರುವ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರವರ ತಂದೆ ಗಂಗಾಧರ ಪಂತ್ ಫಡ್ನವೀಸ್‌ರವರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ದೇವೇಂದ್ರ ಫಡ್ನವೀಸ್‌ರವರ ಚಿಕ್ಕಮ್ಮ ಶೋಭಾ ಫಡ್ನವಿಸ್ ರಾಜ್ಯ ಸಚಿವರಾಗಿದ್ದರು.

ಸುವೇಂಧು ಅಧಿಕಾರಿ

ಪಶ್ಚಿಮ ಬಂಗಾಳದ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿಯವರ ಆಪ್ತನಾಗಿದ್ದ ಸುವೇಂಧು ಅಧಿಕಾರಿಯನ್ನು ಬಿಜೆಪಿ ಸೆಳೆದುಕೊಂಡಿತು. ಅವರ ತಂದೆ ಶಿಶಿರ್ ಅಧಿಕಾರಿ ಕೇಂದ್ರ ಸಚಿವರಾಗಿದ್ದವರು. ಈಗ ಸುವೇಂಧು ಬಂಗಾಳದ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ಮೋದಿ ಕ್ಯಾಬಿನೆಟ್‌ನಲ್ಲಿರುವ ವಂಶಾಡಳಿತದಿಂದ ಬಂದ ಮಂತ್ರಿಗಳು

ಜ್ಯೋತಿರಾಧಿತ್ಯ ಸಿಂಧಿಯಾ

ಈಗ ವಿಮಾನಯಾನ ಸಚಿವರಾಗಿದ್ದಾರೆ. ಅವರ ತಂದೆ ಮಾಧವರಾವ್‌ ಸಿಂಧಿಯಾ ಹಿಂದೆ ಕೇಂದ್ರ ಸಚಿವರಾಗಿದ್ದರು.

ಅನುರಾಗ್ ಠಾಕೂರ್

ಈಗ ಕ್ರೀಡೆ ಮತ್ತು ಯುವಜನರ ಸಬಲೀಕರಣ ಸಚಿವರಾಗಿದ್ದಾರೆ. ಅವರ ತಂದೆ ಪ್ರೇಮ್ ಕುಮಾರ್ ಧುಮಾಲ್ ಹಿಂದೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ಪಿಯೂಷ್ ಗೋಯಲ್

ಈಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರು. ಅವರು ಮಾಜಿ ಬಿಜೆಪಿ ರಾಷ್ಟ್ರೀಯ ಖಜಾಂಚಿ ಮತ್ತು ಕೇಂದ್ರ ಸಚಿವ ದಿವಂಗತ ವೇದ್ ಪ್ರಕಾಶ್ ಗೋಯಲ್ ಅವರ ಪುತ್ರ.

ಧರ್ಮೇಂದ್ರ ಪ್ರಧಾನ್

ಸದ್ಯ ಕೇಂದ್ರ ಶಿಕ್ಷಣ ಸಚಿವ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿರುವ ಪ್ರಧಾನ್ ಅವರು ಬಿಜೆಪಿ ನಾಯಕ ದೇಬೇಂದ್ರ ಪ್ರಧಾನ್ ಅವರ ಪುತ್ರರಾಗಿದ್ದಾರೆ. ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಕಿರಣ್ ರಿಜಿಜು

ಇತ್ತೀಚೆಗೆ ಕಾನೂನು ಮತ್ತು ನ್ಯಾಯ ಸಚಿವರಾಗಿರುವ ಇವರು ಅರುಣಾಚಲ ಪ್ರದೇಶದ ಮೊದಲ ಹಂಗಾಮಿ ಸ್ಪೀಕರ್ ಆಗಿದ್ದ ರಿಂಚಿನ್ ಖರು ಅವರ ಪುತ್ರರಾಗಿದ್ದಾರೆ.

ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಮಂತ್ರಿಯಾಗಿರುವ ಇವರ ತಂದೆ ಆಂಧ್ರಪ್ರದೇಶದಲ್ಲಿ ಸಚಿವರಾಗಿದ್ದರು. ಇವರ ಅತ್ತೆ ಶಾಸಕಿಯಾಗಿದ್ದರು. ಪತಿ ಪರಕಾಲ ಪ್ರಭಾಕರ್ ಅವರು ಕಾಂಗ್ರೆಸ್‌ನಲ್ಲಿದ್ದರು ಮತ್ತು ಆಂಧ್ರಪ್ರದೇಶದ ನರಸಾಪುರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಫಲರಾದರು.

ಸುಷ್ಮಾ ಸ್ವರಾಜ್

ದೆಹಲಿಯ ಮಾಜಿ ಸಿಎಂ ಆಗಿರುವ ಸುಷ್ಮಾ ಸ್ವರಾಜ್‌ರವರ ಪತಿ ಮಿಜೋರಾಂನ ರಾಜ್ಯಪಾಲರಾಗಿದ್ದರು.

ಜಯ್ ಶಾ

ಗೃಹ ಸಚಿವ ಅಮಿತ್ ಶಾರವರ ಮಗ ಜಯ್‌ ಶಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ.

ಬಿಜೆಪಿಯ ವಂಶಾಡಳಿತ ಮುಂದುವರೆಸಿರುವ ಸಂಸತ್ ಸದಸ್ಯರು

ರವಿಶಂಕರ್ ಪ್ರಸಾದ್: ಮಾಜಿ ಸಚಿವರಾಗಿರುವ ಇವರು, ಕಾಂಗ್ರೆಸ್ ಸಂಸದರಾಗಿದ್ದ ರಾಜೀವ್ ಶುಕ್ಲಾರವರ ಭಾಮೈದ.

ದುಷ್ಯಂತ್ ಸಿಂಗ್: ಸಂಸದರಾಗಿರುವ ಇವರು ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇರವರ ಪುತ್ರ.

ಬಿ.ವೈ. ರಾಘವೇಂದ್ರ: ಸಂಸದರಾಗಿರುವ ಇವರು ಕರ್ನಾಟಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಮಗ.

ಮಂಗಳಾ ಅಂಗಡಿ: ಇವರ ಪತಿ ಸುರೇಶ್ ಅಂಗಡಿ ಬೆಳಗಾವಿ ಸಂಸದರಾಗಿದ್ದರು. ಅವರು ಮೃತಪಟ್ಟ ನಂತರ ಸಂಸದರಾಗಿದ್ದಾರೆ.

ರಾಜ್‌ಬೀರ್ ಸಿಂಗ್: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್‌ರವರ ಪುತ್ರ.

ಪ್ರವೇಶ್ ವರ್ಮಾ: ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ.

ಪೂನಂ ಮಹಾಜನ್: ಮಾಜಿ ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರಿ.

ಪ್ರೀತಮ್ ಮುಂಡೆ: ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪುತ್ರಿ.

ರಕ್ಷಾ ಖಡ್ಸೆ: ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಏಕ್‌ನಾಥ್‌ ಖಡ್ಸೆಯವರ ಸೊಸೆ.

ಸುಜೈ ವಿಖೆ ಪಾಟೀಲ್: ಮಹಾರಾಷ್ಟ್ರದ ಮಾಜಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ರವರ ಪುತ್ರ.

ವರುಣ್ ಗಾಂಧಿ: ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಪುತ್ರ.

ಸನ್ನಿ ಡಿಯೋಲ್: ಅವರ ತಂದೆ ಧರ್ಮೇಂದ್ರ ರಾಜಸ್ಥಾನದ ಬಿಜೆಪಿ ಸಂಸದರಾಗಿದ್ದರು.

ರೀಟಾ ಬಹುಗುಣ ಜೋಶಿ: ಇವರು ಉತ್ತರ ಪ್ರದೇಶದ ಮಾಜಿ ಸಿಎಂ ಹೇಮಾವತಿ ನಂದನ್ ಬಹುಗುಣ ಅವರ ಪುತ್ರಿ.

ದಿಯಾ ಕುಮಾರಿ: ಅವರ ಅಜ್ಜಿ ಮಹಾರಾಣಿ ಗಾಯತ್ರಿ ದೇವಿ ಸಂಸದರಾಗಿದ್ದರು.

ಸಂಗೀತಾ ಸಿಂಗ್ ದೇವು: ಅವರ ಪತಿ ಕನಕ್ ವರ್ಧನ್ ಸಿಂಗ್ ದೇವ್ ಅವರು ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

ಜಯಂತ್ ಸಿನ್ಹಾ: ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ. (ಈಗ ಇವರು ಟಿಎಂಸಿಯಲ್ಲಿದ್ದಾರೆ)

ಸಂಘಮಿತ್ರ ಮೌರ್ಯ: ಮಾಜಿ ಯುಪಿ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ. (ಈಗ ಇವರು ಸಮಾಜವಾದಿ ಪಕ್ಷದಲ್ಲಿದ್ದಾರೆ)

ತೇಜಸ್ವಿ ಸೂರ್ಯ: ಬೆಂಗಳೂರು ದಕ್ಷಿಣ ಸಂಸದರಾಗಿದ್ದಾರೆ. ಇವರ ದೊಡ್ಡಪ್ಪ ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕರು

ರಾಜ್ಯಸಭಾ ಸದಸ್ಯರಾಗಿರುವ ವಂಶವಾಹಿನಿ ರಾಜಕಾರಣದಲ್ಲಿರುವವರು

ಉದಯರಾಜೇ ಭೋಸಲೆಯವರ ಸಹೋದರ ಸಂಬಂಧಿ ಶಿವೇಂದ್ರ ರಾಜೆಯವರು ಮಹಾರಾಷ್ಟ್ರದ ಶಾಸಕರಾಗಿದ್ದಾರೆ.

ವಿವೇಕ್ ಠಾಕೂರ್ ರವರ ತಂದೆ ಐದು ಬಾರಿ ಸಂಸದರು ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ಸಚಿವರಾಗಿದ್ದರು.

ನಬಮ್ ರೆಬಿಯಾ ಕಾಂಗ್ರೆಸ್‌ನಿಂದ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದರು. ಅವರ ಸಹೋದರ ನಬಮ್ ತುಕಿ ಸಿಎಂ ಆಗಿ ಸೇವೆ ಸಲ್ಲಿಸಿದರು. ರೆಬಿಯಾ ಜೂನ್ 2020 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ರಾಜ್ಯಸಭೆ ಪ್ರವೇಶಿಸಿದರು.

ನೀರಜ್ ಶೇಖರ್ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರರಾದ ಇವರು ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸಂಸದರಾಗಿದ್ದರು ಆದರೆ 2019 ರಲ್ಲಿ ಬಿಜೆಪಿಗೆ ಹಾರಿ ಮತ್ತೆ ಮೇಲ್ಮನೆ ಸದಸ್ಯರಾದರು.

ಇದಲ್ಲದೆ ಉತ್ತರ ಪ್ರದೇಶದ ಚುನಾವಣೆಗೆ ಮುನ್ನವೆ ಕಾಂಗ್ರೆಸ್ ನಾಯಕ ಜಿತೇಂದ್ರ ಪ್ರಸಾದ್‌ರವರ ಪುತ್ರ ಜಿತಿನ್ ಪ್ರಸಾದ್‌ರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿತು.

ಇದಿಷ್ಟು ರಾಷ್ಟ್ರಮಟ್ಟದಲ್ಲಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಚಿವರು ಮತ್ತು ಲೋಕಸಭೆ – ರಾಜ್ಯ ಸಭೆಯ ಸಂಸದರಾಗಿರುವ ಕುಟುಂಬ ರಾಜಕಾರಣದ ಹಿನ್ನೆಲೆ ಇರುವ ಬಿಜೆಪಿ ರಾಜಕಾರಣಿಗಳ ಪಟ್ಟಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿಯೂ ಇದೇ ಮುಂದುವರೆದಿದೆ. ನಾವು ರಾಜ್ಯಗಳ ವಿಶ್ಲೇಷಣೆ ಮಾಡಿದರೆ ಇನ್ನಷ್ಟು ಸಿಗಬಹುದು. ಏನೇ ಆದರೂ ಇದನ್ನು ಕಡಿಮೆ ಮಾಡುತ್ತಾ, ಜನಸಾಮಾನ್ಯರು ಶಾಸನ ರೂಪಿಸುವ ಸ್ಥಾನಗಳಿಗೆ ಹೋಗಬೇಕಿದೆ.

ಇದನ್ನೂ ಓದಿ: ವಂಶಾಡಳಿತ ರಾಜಕಾರಣವೇ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು: ನರೇಂದ್ರ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...