ಕೆಲವು ದಿನಗಳ ಹಿಂದೆ ಮಹಿಳೆಯನ್ನು ನಿಂದಿಸಿ, ಅಸಭ್ಯವಾಗಿ ವರ್ತಿಸಿ, ಪೊಲೀಸ್ ವಿಚಾರಣೆಗೆ ಒಳಪಟ್ಟಿರುವ ಹಾಗೂ ಬಿಜೆಪಿ ನಾಯಕ ಎಂದೇ ಗುರುತಿಸಿಕೊಂಡಿರುವ ಶ್ರೀಕಾಂತ್ ತ್ಯಾಗಿಯನ್ನು ಬೆಂಬಲಿಸಿ ಬೃಹತ್ ಪ್ರತಿಭಟನೆ ನಡೆದಿದೆ.
ದೆಹಲಿ ಸಮೀಪದ ನೋಯ್ಡಾದಲ್ಲಿ ಬೃಹತ್ ರ್ಯಾಲಿಯನ್ನು ತ್ಯಾಗಿ ಸಮುದಾಯ ಆಯೋಜಿಸಿತ್ತು. ಪ್ರತಿಭಟನೆಯಲ್ಲಿ ಸ್ಥಳೀಯ ಬಿಜೆಪಿ ಸಂಸದ ಮಹೇಶ್ ಶರ್ಮಾ ಅವರನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಗಿದೆ.
ಶ್ರೀಕಾಂತ್ ತ್ಯಾಗಿ ಆಡಳಿತರೂಢ ಬಿಜೆಪಿಯ ಸದಸ್ಯನಲ್ಲ ಎಂದು ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಮುದಾಯದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಗೌತಮ್ ಬುದ್ಧ ನಗರ ಸಂಸದರ ವಿರುದ್ಧ ತ್ಯಾಗಿ ಸಮುದಾಯವು ಅಸಮಾಧಾನ ಹೊರಹಾಕಿದೆ. ಆದರೆ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಮಹೇಶ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಗಸ್ಟ್ ತಿಂಗಳ ಮೊದಲ ವಾರ ಗ್ರಾಂಡ್ ಓಮ್ಯಾಕ್ಸ್ ಸೊಸೈಟಿಯ ನಿವಾಸಿಗಳು ಮೌನ ಪ್ರತಿಭಟನೆ ನಡೆಸಿದಾಗ ಬಳಸಲಾದ ಪೋಸ್ಟರ್‌ಗಳು ವಿವಾದಕ್ಕೆ ಕಾರಣವಾಗಿವೆ. ಆ ಪೋಸ್ಟರ್‌ಗಳಲ್ಲಿ ತ್ಯಾಗ ಸಮುದಾಯಕ್ಕೆ ಚ್ಯುತಿ ತರಲಾಗಿದೆ ಎಂದು ಆರೋಪಿಸಲಾಗಿದೆ.
ಶ್ರೀಕಾಂತ್ ತ್ಯಾಗಿ ಅವರನ್ನು ಬೆಂಬಲಿಸಿ ಸಂಯುಕ್ತ ತ್ಯಾಗಿ ಸ್ವಾಭಿಮಾನ್ ಮೋರ್ಚಾ ಆಯೋಜಿಸಿದ್ದ ಪ್ರತಿಭಟನಾ ಸಭೆಯು ಗೆಜ್ಜಾ ಗ್ರಾಮದ ರಾಮಲೀಲಾ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. ಪಶ್ಚಿಮ ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ತ್ಯಾಗಿ ಸಮುದಾಯದ ನೂರಾರು ಮಂದಿ ಇಲ್ಲಿಗೆ ಆಗಮಿಸಿದ್ದರು.
ಶ್ರೀಕಾಂತ್ ತ್ಯಾಗಿ ಅವರು ಮಾಡಿರುವ ಹಿಂಸೆ ಹಾಗೂ ನಿಂದನೆಗಳಿಗೆ ಸಂಬಂಧಿಸಿದಂತೆ ಶಿಕ್ಷೆಯಾಗಲಿ. ಆದರೆ ಅವರ ಪತ್ನಿ ಮತ್ತು ಚಿಕ್ಕಮ್ಮನನ್ನು ಪೊಲೀಸ್ ಠಾಣೆಗೆ ಕರೆಸಿರುವುದು ತಪ್ಪು ಎಂದು ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
“ಪೊಲೀಸರು ಶ್ರೀಕಾಂತ್ ಅವರ ಚಿಕ್ಕಮ್ಮನನ್ನು ಜೀಪ್‌ನಲ್ಲಿ ಕರೆದೊಯ್ದು ನಾಲ್ಕು ದಿನಗಳ ಕಾಲ ಪಶ್ಚಿಮ ಯುಪಿಯಲ್ಲಿ ಸುತ್ತಾಡಿದರು. ಇದು ಅಮಾನವೀಯ ನಡೆ” ಎಂದು ರಾಷ್ಟ್ರೀಯ ಲೋಕದಳದ ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ತ್ಯಾಗಿ ಹೇಳಿದ್ದಾರೆ.
ತ್ಯಾಗಿ ಅವರು ಸಮಾಜದ ನಿಯಮಗಳಿಗೆ ಬದ್ಧರಾಗಿದ್ದರೆ ಮತ್ತು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸದಿದ್ದರೆ ಸಮಸ್ಯೆ ದೊಡ್ಡದಾಗುತ್ತಿರಲಿಲ್ಲ ಎಂದು ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯ ನಿವಾಸಿಗಳು ಹೇಳಿದ್ದಾರೆ.
“ಸಮಾಜದ ನಿಯಮಗಳನ್ನು ಉಲ್ಲಂಘಿಸಿದ್ದು ಅವರ ಮೊದಲ ತಪ್ಪು. ಎರಡನೆಯದಾಗಿ, ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬಳಸಿದ ಭಾಷೆ ಸಮಸ್ಯೆಯನ್ನು ದೊಡ್ಡದಾಗಿಸಿತು” ಎಂದು ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯ ನಿವಾಸಿ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಪ್ರಧಾನ ಕಾರ್ಯದರ್ಶಿ ಮಹಿಮಾ ಜೋಶಿ ಹೇಳಿದ್ದಾರೆ.
ತಮ್ಮ ಪ್ರತಿಭಟನೆ ಕೇವಲ ಶ್ರೀಕಾಂತ್ ತ್ಯಾಗಿ ಅವರ ವಿರುದ್ಧವೇ ಹೊರತು ಯಾವುದೇ ಸಮುದಾಯದ ವಿರುದ್ಧ ಅಲ್ಲ ಎಂದು ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲವಾಗಿ ನಿಂದಿಸಿ ಹಲ್ಲೆ ನಡೆಸಿದ್ದ ಶ್ರೀಕಾಂತ್ ತ್ಯಾಗಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ದಾಖಲಾದ ಬಳಿಕ ಆತ ಪರಾರಿಯಾಗಿದ್ದನು.
ಇದನ್ನೂ ಓದಿರಿ: 100ಕ್ಕೂ ಹೆಚ್ಚು ಅಪ್ಲಿಕೇಷನ್ ಬಳಸಿ ಸುಲಿಗೆ; ₹ 500 ಕೋಟಿ ಚೀನಾಕ್ಕೆ ಕಳುಹಿಸಿದ ಯುಪಿ ಗ್ಯಾಂಗ್ ಅರೆಸ್ಟ್!
ತ್ಯಾಗಿ ಪರ ವಕೀಲರು ಗ್ರೇಟರ್ ನೋಯ್ಡಾ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ ನಂತರ, ತ್ಯಾಗಿಯನ್ನು ಹಿಡಿದುಕೊಟ್ಟವರಿಗೆ ₹ 25,000 ಬಹುಮಾನವನ್ನು ಯುಪಿ ಪೊಲೀಸರು ಘೋಷಿಸಿದ್ದರು. ಬಳಿಕ ತ್ಯಾಗಿ ಸಿಕ್ಕಿಬಿದ್ದಿದ್ದನು.
ಮೀರತ್‌ನ ಹೊರವಲಯದಲ್ಲಿರುವ ಶ್ರದ್ಧಾಪುರಿಯಲ್ಲಿ ತನ್ನ ಸಹಾಯಕರ ಮನೆಯಲ್ಲಿ ತ್ಯಾಗಿ ಅವಿತುಕುಳಿತ್ತಿದ್ದನು. ಡೆಹ್ರಾಡೂನ್, ಹರಿದ್ವಾರ ಮತ್ತು ರಿಷಿಕೇಶ ಮೂಲಕ ಸಹರಾನ್‌ಪುರಕ್ಕೆ ಹೋಗಲು ಪ್ಲಾನ್ ಮಾಡಿದ್ದನು. ಜೊತೆಗೆ ತನ್ನ ಪತ್ನಿ ಮತ್ತು ವಕೀಲನ ಸಂಪರ್ಕದಲ್ಲಿದ್ದನು.
ಬಿಜೆಪಿ ಕಿಸಾನ್ ಮೋರ್ಚಾದ ಸದಸ್ಯನೆಂದು ತ್ಯಾಗಿ ಹೇಳಿಕೊಂಡಿದ್ದಾನೆ. ಆತ ಸೋಷಿಯಲ್ ಮೀಡಿಯಾಗಳಲ್ಲಿ ಪೊಸ್ಟ್ ಮಾಡಲಾದ ಹಲವಾರು ಪೋಟೊಗಳಲ್ಲಿ ಬಿಜೆಪಿ ನಾಯಕರೊಂದಿಗೆ ಇರುವುದನ್ನು ಕಾಣಬಹುದು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರೊಂದಿಗೆ ತ್ಯಾಗಿ ಫೋಟೋ ತೆಗೆಸಿಕೊಂಡಿರುವುದು, ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಆದರೆ ತ್ಯಾಗಿ ಬಿಜೆಪಿ ಮುಖಂಡನಲ್ಲ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.


