ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ ಕನ್ನಡದ ಓದು-ಬರಹದ ತಿಳಿವಳಿಕೆ ಕಡ್ಡಾಯವೆಂಬ ನಿಬಂಧನೆಯನ್ನು ತಿದ್ದುಪಡಿಗೊಳಿಸಲಾಗಿದೆ ಹಾಗೂ ಸರ್ಕಾರ ಇದನ್ನು ಅಂಗೀಕರಿಸಿದೆ. ಕಸಾಪ ಚುನಾವಣೆಯಲ್ಲಿ ಅನಕ್ಷರಸ್ಥ ಸದಸ್ಯರ ಮತಗಳ ದುರುಪಯೋಗವನ್ನು ತಪ್ಪಿಸುವುದು ಇದರ ಉದ್ದೇಶ ಎಂದುಕೊಂಡರೂ, ಸದಸ್ಯರು ಓದು-ಬರಹ ಬಲ್ಲವರು ಎಂದ ಮಾತ್ರಕ್ಕೆ ಆ ಉದ್ದೇಶ ಈಡೇರಿದಂತಾಗುವುದಿಲ್ಲ. ಮೇಲಾಗಿ,
ದುರುಪಯೋಗಪಡಿಸಿಕೊಳ್ಳುವವರು ಪದಾಧಿಕಾರಿಗಳ ಹುದ್ದೆಗೆ ಸ್ಪರ್ಧಿಸುವ ಅಕ್ಷರಸ್ಥರೇ ಆಗಿರುತ್ತಾರೆ. ಹಾಗಾಗಿ ಈ ವಾದದಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟ. ಆದರೆ ಕಸಾಪದ ಈ ನಡೆಯಿಂದ ಸಾಹಿತ್ಯದ ಪರಿಕಲ್ಪನೆಯ ಬಗ್ಗೆಯೇ ಹುಟ್ಟುವ ತಾತ್ವಿಕ ತೊಡಕುಗಳು ಮತ್ತು ಇದರ ದೂರಗಾಮಿ ಪರಿಣಾಮಗಳ ಚರ್ಚೆ ಇಲ್ಲಿ ಅಗತ್ಯವಾಗುತ್ತದೆ.
ಬರಹದ ರೂಪದಲ್ಲಿರದ ಕನ್ನಡದ ಮೌಖಿಕ ಕಥನ ಕಾವ್ಯಗಳು ಸಾಹಿತ್ಯವಲ್ಲವೇ ಎಂಬ ಪ್ರಶ್ನೆ ಹುಟ್ಟುತ್ತದೆ. ದಟ್ಟವಾದ ಬದುಕಿನ ಅನುಭವ, ಬತ್ತದ ಅರಿವಿನ ಒರತೆ, ಜೀವಪರ ಮೌಲ್ಯಗಳು ಇವೆಲ್ಲವುಗಳಿದ್ದರೂ ಲಿಖಿತ ರೂಪದಲ್ಲಿರದ ಕಾರಣಕ್ಕಾಗಿಯೇ ಸಾವಿರಾರು ವರ್ಷಗಳಿಂದ ಸಾಹಿತ್ಯದ ಸ್ಥಾನಮಾನದಿಂದ ವಂಚಿತವಾದ ಕೃತಿಗಳು ಕನ್ನಡದಲ್ಲಿವೆ. ಮಂಟೇಸ್ವಾಮಿ ಕಾವ್ಯ, ಮಲೆಮಹದೇಶ್ವರನ ಕಾವ್ಯ, ಜುಂಜಪ್ಪನ ಕಾವ್ಯ ಇವೆಲ್ಲಾ ಇಂತಹ ವರ್ಗಕ್ಕೆ ಸೇರುತ್ತವೆ. ಈಗಲಾದರೂ ಅವು ಮಾನ್ಯತೆಯನ್ನು ಪಡೆದಿರುವುದು ಲಿಖಿತ ರೂಪವನ್ನು ಪಡೆದುಕೊಂಡ ನಂತರವೇ. ಸೋಬಾನೆ ಪದಗಳು, ಚೌಡಕಿ ಪದಗಳು, ಜೋಗೇರ ಪದಗಳು, ಗೊಂದಲಿಗರ ಪದಗಳು, ಕೋಲಾಟದ ಪದಗಳು, ಡೊಳ್ಳಿನ ಪದಗಳು, ಭಜನೆ ಪದಗಳು, ಜೋಗತಿಯರ ಹಾಡು ಇವೆಲ್ಲಾ ಬಹುಮಟ್ಟಿಗೆ ಮೌಖಿಕ ರೂಪದಲ್ಲಿದ್ದದ್ದರಿಂದಲೇ ಸಾಹಿತ್ಯದ ವ್ಯಾಪ್ತಿಯಲ್ಲಿ ಗಂಭೀರವಾಗಿ ಪರಿಗಣಿಸಲ್ಪಡಲಿಲ್ಲ. ಲಿಖಿತ ರೂಪದಲ್ಲಿರುವುದೆಲ್ಲ ತನ್ನಷ್ಟಕ್ಕೆ ಹೆಚ್ಚು ಗುಣಾತ್ಮಕ ಕಲಾತ್ಮಕ ಮತ್ತು ಸಾಹಿತ್ಯಕ ಎಂದು ಪರಿಗಣಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ವಿಶೇಷವಾಗಿ, ಲಿಖಿತ ಸಾಹಿತ್ಯಕ್ಕೆ ಮಾತ್ರ ಒತ್ತು ನೀಡಿದ ವಸಾಹತುಶಾಹಿಯ ತಪ್ಪು ನಡೆ ಬಹುಸಂಖ್ಯಾತ ತಳ ಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ವಿಸ್ಮೃತಿಗೆ ತಳ್ಳಿ, ಕೆಲಕಾಲ ಮುಂದಿನ ಆ ವಿದ್ಯಾವಂತ ಜನಾಂಗ ಕೀಳರಿಮೆಗೀಡಾಗುವಂತೆ ಮಾಡಿ, ಸಂಸ್ಕೃತೀಕರಣದ ದಾಸ್ಯಕ್ಕೆ ದೂಡಿದ್ದನ್ನ ಮರೆಯಬಾರದು.
ಭಾರತದ ಹಲವಾರು ಅಲೆಮಾರಿ ಬುಡಕಟ್ಟು ಸಮುದಾಯಗಳು ದೂರದೂರದ ಪ್ರದೇಶಗಳಲ್ಲಿ ಹರಿದುಹಂಚಿ ಹೋಗಲ್ಪಟ್ಟಿದ್ದರೂ ಕೂಡ, ಇಂದಿಗೂ ತಮ್ಮ ಸಾಮುದಾಯಿಕ ಪ್ರಜ್ಞೆಯನ್ನು ಕಾಪಾಡಿಕೊಂಡಿರುವುದು ತಮ್ಮ ಸ್ಮೃತಿಯಲ್ಲಿರುವ ಮೌಖಿಕ ಮಹಾಕಾವ್ಯಗಳಿಂದಲೇ. ಇಂತಹ ಮೌಖಿಕ ಕೃತಿಗಳ ಸಮೃದ್ಧಿ ಮತ್ತು ವೈವಿಧ್ಯತೆ ಎಷ್ಟಿದೆಯೆಂದರೆ ಇದರ ಬಗ್ಗೆ ನಾವು ತೋರಿರುವ ಇದುವರೆಗಿನ ಅಸಡ್ಡೆ ನಮಗೆ ನಾಚಿಕೆ ಹುಟ್ಟಿಸುತ್ತದೆ ಎಂದು ಭಾಷಾತಜ್ಞ ಮತ್ತು ಚಿಂತಕ ಗಣೇಶ್ ದೇವಿ ಹೇಳುತ್ತಾರೆ. ಸಾಹಿತ್ಯವೆಂದರೆ ಲಿಖಿತ ರೂಪದಲ್ಲಿರುವಂಥದ್ದು ಎಂಬ ನಮ್ಮ ತಿಳಿವಳಿಕೆಯನ್ನು ಮಾರ್ಪಡಿಸಿಕೊಳ್ಳದಿದ್ದರೆ ಹಲವಾರು ಭಾರತೀಯ ಮೌಖಿಕ ಪರಂಪರೆಗಳ ಅವನತಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ ಎಂಬ ಎಚ್ಚರವನ್ನೂ ಅವರು ನೀಡುತ್ತಾರೆ. ಇದರಿಂದ, ನೆಮ್ಮದಿಯ ಬದುಕಿಗೆ ಅವಶ್ಯವಿರುವ ನೆಲಮೂಲದ ಮೌಲ್ಯಗಳ ಸಾಹಿತ್ಯವನ್ನು ಕಳೆದುಕೊಂಡಂತಾಗುತ್ತದೆ. ಅಕ್ಷರಜ್ಞಾನವೆಂಬ ಬೃಹತ್ ಸಂಕಥನದ ಹುಚ್ಚು ಪ್ರವಾಹಕ್ಕೆ ಸಿಕ್ಕು, ಜನಪರ ಮತ್ತು ಜೀವಪರ ಮೌಲ್ಯಗಳನ್ನು ಪೋಷಿಸುವ ಮೌಖಿಕ ವಾಗ್ಮಯದ ಸಾಹಿತ್ಯಕತೆಯನ್ನು ಗುರುತಿಸದೆ, ಅನಕ್ಷರಸ್ಥರಿಗೆ ಸಾಹಿತ್ಯ ತಿಳಿದಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ಅನಕ್ಷರತೆಯನ್ನು ಇಲ್ಲಿ ರೊಮ್ಯಾಂಟಿಸೈಸ್ ಮಾಡುತ್ತಿಲ್ಲ.
ಜನಪದ ಸಾಹಿತ್ಯದಲ್ಲಿ ಹುದುಗಿರುವ ಮೌಢ್ಯ ಮತ್ತು ಶೋಷಕ ಸಂಗತಿಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕೆಂದೂ ಅಲ್ಲ. ಜನರ ಸಾಕ್ಷರತೆಯನ್ನು ಹೆಚ್ಚಿಸಲು ಅಗತ್ಯವಾದ ಕಾರ್ಯಗಳನ್ನು ಸರ್ಕಾರ ಮಾಡಲಿ. ಅದಕ್ಕೆ ಬೇರೆ ದಾರಿಗಳು ಸಾಕಷ್ಟಿವೆ. ಆದರೆ, ಸಾಹಿತ್ಯವನ್ನು ಆನಂದಿಸಲು ಬೇಕಾದ ಸಹೃದಯತೆ ಮತ್ತು ಸಂವೇದನೆಗಳು ಅಕ್ಷರಸ್ಥರಲ್ಲಿ ಮಾತ್ರ ಇರುತ್ತವೆ ಎನ್ನುವುದು ಒಂದು ಮೌಢ್ಯವೇ ಸರಿ. ಅಥವಾ ಇದು ಅಧಿಕಾರದ ಸಂಬಂಧಗಳನ್ನು ಸದಾ ಕಟ್ಟಿಕೊಳ್ಳಲು ಬಯಸುವ ಮನುಷ್ಯರ ಕೆಟ್ಟ ಚಾಳಿಯ ಫಲವೂ ಆಗಿರಬಹುದು. ಅನಕ್ಷರಸ್ಥರಾಗಿದ್ದ ಕೆಲವು ವಚನಕಾರರ ಅನುಭವಗಳನ್ನು ಬೇರೆಯವರು ಬರಹರೂಪಕ್ಕೆ ತರುತ್ತಿದ್ದರು. ಅಷ್ಟುಮಾತ್ರಕ್ಕೆ ಅವರ ಅನುಭವ ಮತ್ತು ಅನುಭಾವದಲ್ಲಿರುವ ಸತ್ವ ಕಡಿಮೆಯಾಗುವುದಿಲ್ಲ. ಶೀಘ್ರ ಕಂಪ್ಯೂಟರೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ ಆನ್ ಸ್ಕ್ರೀನ್ ಓದು-ಬರಹ ಮಾಡಲಾಗದ ತಾಂತ್ರಿಕ ಕೌಶಲ್ಯವಿಲ್ಲದವರನ್ನು ದಡ್ಡರು ಸಂವೇದನಾರಹಿತರು ನೀತಿಹೀನರು ಸೃಜನಶೀಲರಲ್ಲದವರು ಎಂದು ಕರೆಯಲಾದೀತೆ? ಇಂಥದ್ದೇ ಅರ್ಥಹೀನತೆ ಮೌಖಿಕ ಮತ್ತು ಲಿಖಿತ ಸಾಹಿತ್ಯವನ್ನು ಶ್ರೇಣಿಕರಿಸುವುದರಲ್ಲಿದೆ.
ಸಾಹಿತ್ಯವೆಂಬುದು ಮಾನವನ ಬದುಕು ಮತ್ತು ಅನುಭವಗಳ ಕಲಾತ್ಮಕ ಅಭಿವ್ಯಕ್ತಿ ಎಂದು ಒಪ್ಪುವುದಾದರೆ, ಅಂಥ ಅನುಭವಗಳ ಅಭಿವ್ಯಕ್ತಿ ಮೌಖಿಕವೇ ಅಥವಾ ಲಿಖಿತವೇ ಎಂಬುದು ಹೆಚ್ಚಿನ ವ್ಯತ್ಯಾಸವನ್ನೇನೂ ಉಂಟುಮಾಡುವುದಿಲ್ಲ. ಈ ಚರ್ಚೆಯ ಉದ್ದೇಶ ಕಾಲ ಮತ್ತು ದೇಶದ ಸವಾಲನ್ನು ಸ್ವೀಕರಿಸಿ ಜೀವಂತವಾಗಿ ಉಳಿಯಬಹುದಾದ ಲಿಖಿತ ಸಾಹಿತ್ಯದ ಮಹತ್ವವನ್ನು ಗೌಣಗೊಳಿಸುವುದಲ್ಲ. ಬದಲಾಗಿ, ಮಾನವೀಯ ಸಂವೇದನೆಗಳನ್ನು ಸೂಕ್ಷ್ಮಗೊಳಿಸಬೇಕಾದ ಸಾಹಿತ್ಯ ಕೂಡ, ಲಿಖಿತ ಮತ್ತು ಮೌಖಿಕವೆಂಬ ವರ್ಗೀಕರಣದಿಂದಾಗಿ ಶ್ರೇಷ್ಠ ಮತ್ತು ಕನಿಷ್ಠವೆಂಬ ತಾರತಮ್ಯಕ್ಕೊಳಗಾಗಿರುವುದರ ಕುರಿತ ಅತಂಕ ಇಲ್ಲಿದೆ.
ಓದು ಮತ್ತು ಬರಹ ಲಿಪಿಸಂಬಂಧಿತ ಕೌಶಲಗಳಷ್ಟೇ. ಆಳವಾದ ಓದು ವ್ಯಕ್ತಿಯೊಬ್ಬನಿಗೆ ಜಾಗತಿಕ ಜ್ಞಾನವಲಯಗಳೊಂದಿಗಿನ ಸಂವಾದದಲ್ಲಿ ಗಳಿಸಿಕೊಡುವ ಬೌದ್ಧಿಕ ಬೆಳವಣಿಗೆಯನ್ನು ಅಲ್ಲಗಳೆಯುತ್ತಿಲ್ಲ. ಆದರೆ, ಭಾಷೆ ಎಂಬುದು ಮೂಲತಃ ಮೌಖಿಕದ್ದು. ವ್ಯಕ್ತಿಯ ಭಾಷೆಯ ಹುಟ್ಟು ಮತ್ತು ವಿಕಸನದಲ್ಲಿ ಅಂತರ್ಗತವಾಗಿ ಬರುವ ಸಹಜ ಸೃಜನಶೀಲತೆ ಕೇವಲ ಲಿಪಿ ಅಥವಾ ಬರಹದ ಪರಿಣಾಮವಲ್ಲ. ಅನಕ್ಷರಸ್ಥನೆಂಬ ಒಂದೇ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಅಭಿವ್ಯಕ್ತಿಯಲ್ಲಿನ ಕಲಾತ್ಮಕತೆಯನ್ನ, ಆತನ ವಿಚಾರಗಳ ಘನತೆಯನ್ನ ಅಥವಾ ಅದನ್ನು ಆಸ್ವಾದಿಸುವ ಸಹೃದಯತೆಯನ್ನ ನಿರಾಕರಿಸುವಂತಾಗಬಾರದು. ಅಕ್ಷರ ಲೋಕ ಪ್ರವೇಶಿಸಿದ ಕಾರಣದಿಂದಾಗಿಯೇ ಪಡೆದುಕೊಂಡ ಅತಿಯಾದ ಸ್ವ-ಜಾಗೃತ ಸ್ಥಿತಿ (self-concious condition) ವ್ಯಕ್ತಿಗಳಲ್ಲಿ ಉಂಟುಮಾಡುವ ಬೂಟಾಟಿಕೆ ಡಾಂಭಿಕತನವನ್ನು ಕಂಡಾಗ, ಗ್ರಾಮೀಣ ಅನಕ್ಷರಸ್ಥ ಸಮುದಾಯಗಳ ಎದೆಯಾಳದಲ್ಲಿ ಇಣುಕಿ ನಾವು ಕಲಿತದ್ದರಲ್ಲಿ ಒಂಚೂರು ಮರೆಯಬೇಕಾದ ಅಗತ್ಯವೂ ಇದೆ ಎನಿಸುತ್ತದೆ. ಜನಪದರಲ್ಲಿರುವ ಮೌಖಿಕ ಸಾಹಿತ್ಯವನ್ನು ನಾವು ಕೇಳಿಸಿಕೊಂಡಿಲ್ಲ ಎಂದ ಮಾತ್ರಕ್ಕೆ ಅದು ಸಾಹಿತ್ಯವೇ ಅಲ್ಲ ಎಂದು ಹೇಳುವುದು ಸೂಕ್ತವಲ್ಲ. ಹಾಗೆಂದು ಅವರಲ್ಲಿರುವುದೆಲ್ಲಾ ಪ್ರಗತಿಪರವೆಂದು ಉತ್ಪ್ರೇಕ್ಷಿಸುತ್ತಿಲ್ಲ. ಆದರೆ, ಇಲ್ಲಿಯ ವಾದವೇನೆಂದರೆ ಉತ್ತಮ ಸಾಹಿತ್ಯ ಹುಟ್ಟುವುದು ಬರೀ ಅಕ್ಷರ ಜ್ಞಾನದ ಕಾರಣದಿಂದಲ್ಲ.
ಎ.ಕೆ.ರಾಮಾನುಜನ್ ಕಥೆಗಳ ಹುಟ್ಟು ಮತ್ತು ಉದ್ದೇಶವನ್ನು ವಿವರಿಸುತ್ತಾ ತಮಿಳುನಾಡಿನ ಸ್ಥಳೀಯ ಮಹಿಳಾ ಜನಪದದಲ್ಲಿ ಮೌಖಿಕವಾಗಿ ಪ್ರಚಲಿತವಿದ್ದ ಕಥೆಯೊಂದನ್ನು ಹೇಳುತ್ತಾರೆ. ಹಳ್ಳಿಯ ವಿಧವೆ ಮುದುಕಿಯೊಬ್ಬಳು ಒಬ್ಬಂಟಿಯಾಗಿ ಕಷ್ಟಪಟ್ಟು ಬೆಳೆಸಿದ ತನ್ನ ಗಂಡು ಮಕ್ಕಳಿಬ್ಬರಿಗೂ ಮದುವೆ ಮಾಡುತ್ತಾಳೆ. ನಂತರ, ಮಕ್ಕಳು ಮತ್ತು ಸೊಸೆಯರು ನೀಡುವ ಕಾಟವನ್ನು ಮನೆಮರ್ಯಾದೆಯ ಪ್ರಶ್ನೆಯಾದ್ದರಿಂದ ಹೇಳಿಕೊಳ್ಳಲಾಗದೆ ಮನದೊಳಗೆ ಇಟ್ಟುಕೊಳ್ಳಲೂ ಆಗದೆ ನರಳುತ್ತಾಳೆ. ಎಂಥದ್ದೋ ರೋಗಬಾಧೆ. ಹೊಟ್ಟೆಯುಬ್ಬಿ ದಪ್ಪವಾಗುತ್ತಾಳೆ. ಸೊಸೆಯರು ಹೆಚ್ಚು ತಿನ್ನುತ್ತಾಳೆ ಎಂದು ಸುಳ್ಳೇ ಹಂಗಿಸುತ್ತಾರೆ. ಕೊನೆಗೊಂದು ದಿನ ಊರಹೊರಗಿನ ಹಾಳುಬಿದ್ದ ಛಾವಣಿಯಿರದ ಮನೆಯೊಳಗೆ ಒಬ್ಬಳೇ ನಿಂತು ಮೊದಲ ಮಗನಿಂದಾದ ನೋವು ಸಂಕಟವನ್ನು ಹೇಳಿಕೊಳ್ಳುತ್ತಾಳೆ. ಒಂದು ಗೋಡೆ ಬಿದ್ದುಹೋಗುತ್ತದೆ. ನಾಲ್ವರ ಕುರಿತ ಕಥೆಗಳಿಗೆ ನಾಲ್ಕು ಗೋಡೆಗಳೂ ಬಿದ್ದು ನೆಲಸಮವಾಗುತ್ತವೆ. ಉಬ್ಬಿದ ಹೊಟ್ಟೆ ಇಳಿದು ಮುದುಕಿಯ ಮನಸು ಮತ್ತು ದೇಹದ ಆರೋಗ್ಯ ಚೇತರಿಸಿಕೊಳ್ಳುತ್ತದೆ.
ಸಾಹಿತ್ಯದ ಹುಟ್ಟು ಮತ್ತು ಅನಿವಾರ್ಯತೆಯ ಅಮೂರ್ತ ತಾತ್ವಿಕ ಮರ್ಮವನ್ನು ಕೂಡ ಕತೆಯಾಗಿಸಬಲ್ಲ, ಓದುಬರಹವಿಲ್ಲದ ಆದರೆ ಸೃಜನಶೀಲವಾದ ಇಂತಹ ಮನಸುಗಳನ್ನ ಸಾಹಿತ್ಯ ವಲಯದ ವ್ಯಾಪ್ತಿಯಿಂದ ಹೊರಗಿಡುವುದು ಸಾಹಿತ್ಯದ ಘನತೆಯನ್ನು ಹೆಚ್ಚಿಸಿದಂತೇನೂ ಆಗುವುದಿಲ್ಲ. ಮನುಷ್ಯರಿಗೆ ಕಥೆ/ಕಾವ್ಯ ಹೇಳುವುದು ಮತ್ತು ಕೇಳುವುದು ಜೀವಿಸುವಷ್ಟೇ ಅನಿವಾರ್ಯವಾದ ಕ್ರಿಯೆ. ಎಲ್ಲರೂ ಒಂದು ರೀತಿಯ ಕಥೆಗಾರರೇ (ಒಳ್ಳೆಯ ಅಥವಾ ಕೆಟ್ಟ). ಅಷ್ಟೇ ಅಲ್ಲ, ಎಲ್ಲರೂ ಒಂದಲ್ಲಾ ಒಂದು ಕಥೆ/ಕಾವ್ಯದ ವಸ್ತುವೇ. ಹಾಗಾಗಿ ಸಾಹಿತ್ಯಕ್ಕಾಗಿ ಪರಿಷತ್ತು ರೂಪುಗೊಳ್ಳಬೇಕೇ ವಿನಹ ಪರಿಷತ್ತಿಗಾಗಿ ಸಾಹಿತ್ಯದ ವ್ಯಾಖ್ಯಾನವನ್ನೇ ನಿಯಂತ್ರಿಸುವುದಲ್ಲ. ಅಕ್ಷರಜ್ಞಾನ ಎಂಬ ಬೃಹತ್ ಸಂಕಥನವು ಸೃಷ್ಟಿಸಿರುವ ಭ್ರಮಾತ್ಮಕ ವಾಸ್ತವದಿಂದ ಬಿಡಿಸಿಕೊಂಡು ಬದುಕನ್ನ ನೋಡಬೇಕಿದೆ. ಮೇಲಾಗಿ, ಅನಕ್ಷರತೆಯು ಜಾತಿ ವರ್ಗ ಲಿಂಗ ಕಸುಬುಗಳೊಂದಿಗೆ ಹೇಗೆ ಬೆಸೆದುಕೊಂಡಿದೆ ಮತ್ತು ಅನಕ್ಷರಸ್ಥರನ್ನು ಹೊರಗಿಡುವುದಾದರೆ ಯಾರೆಲ್ಲಾ ಮುಖ್ಯವಾಗಿ ಹೊರಗಿಡಲ್ಪಡುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಜೀವನಮೀಮಾಂಸೆ ಮತ್ತು ಕಲಾ/ಕಾವ್ಯಮೀಮಾಂಸೆಗೂ ಸಂಬಂಧವಿದೆ. ಇವೆರಡನ್ನೂ ರೂಪಿಸಿ ನಮ್ಮ ಮೇಲೆ ಹೇರಿರುವ ವ್ಯವಸ್ಥೆ ಒಂದೇ ಆಗಿರುವುದರಿಂದ, ವಸಾಹತುಶಾಹಿಯನ್ನು ವಿರೋಧಿಸುವ ಸಾಂಸ್ಕೃತಿಕ ರಾಷ್ಟ್ರೀಯತೆಯ ನೆಪದಲ್ಲಿ ಈ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಂಡದ್ದರಿಂದ, ಸಮಾಜದ ಅಂಚಿನಲ್ಲಿರುವ ಜನರ ಕಲೆ ಸಾಹಿತ್ಯ ಸಂಗೀತ ಮಾನ್ಯಗೊಳ್ಳಲಿಲ್ಲ.
ಜಾನಪದ ಸಂಗೀತ ಮತ್ತು ಸಿನಿಮಾ ಸಂಗೀತಕ್ಕಿಂತ ಕರ್ನಾಟಕ ಸಂಗೀತ ಶ್ರೇಷ್ಠ ಎನ್ನುವ ಗ್ರಹಿಕೆಯಿದೆ. ಇದನ್ನು ನಿರಾಕರಿಸುವ ಕರ್ನಾಟಕ ಸಂಗೀತದ ಕಲಾವಿದ ಟಿ.ಎಂ. ಕೃಷ್ಣ ’ಬೇರೆ ಸಂಗೀತವನ್ನು ಅದರ ಧ್ವನಿಯನ್ನು ಇಷ್ಟಪಡುತ್ತಿಲ್ಲ ಎಂದರೆ ನಾವು ಅದನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದರ್ಥ. ಬೇರೆ ಧ್ವನಿಗಳನ್ನು ಕೇಳಿಸಿಕೊಳ್ಳಬೇಕು; ಇದರಿಂದ ನಾವು ಇನ್ನಷ್ಟು ಸೂಕ್ಷ್ಮಸಂವೇದಿಗಳಾಗುತ್ತೇವೆ’ ಎನ್ನುತ್ತಾರೆ. ಕೂತ್ತು ಸಂಗೀತ (ದಲಿತರ ಕಲೆ), ಕೊಡಿಯಾಟ್ಟಂ, ಜೋಗತಿಯರ ಪದಗಳು ಮತ್ತು ಚೌಡಕಿಯಂಥ ವಾದ್ಯಗಳ ಜೊತೆ ಕರ್ನಾಟಕ ಸಂಗೀತವನ್ನು ಮೇಳೈಸುವ ಟಿ.ಎಂ.ಕೃಷ್ಣರ ಕಾರ್ಯಕ್ರಮಗಳು ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತವೆ. ಕಲಾಮೀಮಾಂಸೆಯು ದೇಶಕಾಲ ಮತ್ತು ಸಂಸ್ಕೃತಿ ನಿರ್ದಿಷ್ಟ ಆಗಿರುತ್ತದೆ. ಬಹು ಸಂಸ್ಕೃತಿಗಳ ನಾಡೊಂದರಲ್ಲಿ ಯಾವುದೋ ಒಂದು ಸಂಸ್ಕೃತಿ ನಿರ್ದಿಷ್ಟವಾದ ಸಾಹಿತ್ಯ ಅಥವಾ ಕಲಾ ಪ್ರಕಾರ ಉಳಿದವಕ್ಕಿಂತ ಹೆಚ್ಚು ಶ್ರೇಷ್ಠವೆಂದು ಕಾಣುತ್ತಿದ್ದರೆ, ಅದಕ್ಕೆ ಕಾರಣ ಆಳುವ ವರ್ಗಗಳಿಂದ ಸಿಕ್ಕ ಅತಿಯಾದ ಪ್ರಾತಿನಿಧ್ಯವೋ ಅಥವಾ ಅದರಲ್ಲಿರುವ ಗುಣಾತ್ಮಕತೆಯೋ ಎಂಬುದನ್ನು ಸರಿಯಾಗಿ ವಿಶ್ಲೇಷಿಸಬೇಕಾಗುತ್ತದೆ. ತೃತೀಯ ಜಗತ್ತಿನ ದೇಶಗಳ ಲೇಖಕರಿಗೆ (ಕಲಾವಿದರಿಗೂ) ಕಲಾಮೀಮಾಂಸೆಗಿಂತ ಹೆಚ್ಚಾಗಿ ಆಯಾ ದೇಶಗಳ ಸಾಮಾಜಿಕ ಮತ್ತು ರಾಜಕೀಯ ಮೀಮಾಂಸೆಯ ತಿಳಿವಳಿಕೆ ಇರಬೇಕಾಗುತ್ತದೆ ಎನ್ನುವ ನೈಜೀರಿಯನ್ ಲೇಖಕ ವೋಲೆ ಸೋಯಿಂಕಾನ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ.

ಡಾ. ಸಿ.ಬಿ. ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು
ಇದನ್ನೂ ಓದಿ: ಕೋಮು ಧ್ರುವೀಕರಣ ತಡೆಗೆ ಮಾಡಬೇಕಿರುವುದೇನು? ದಕ್ಷಿಣ ಕನ್ನಡದ ಮುಸ್ಲಿಂ ದನಿಗಳ ಕಾಳಜಿಯ ನುಡಿಗಳು



ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿಗೆ ಸಾಹಿತ್ಯದ ಗಂಧ ಗಾಳಿ ಇಲ್ಲ. ಒಂದು ಕೋಟಿ ಸದಸ್ಯತ್ವ ×250 ಲೆಕ್ಕ ಹಾಕ್ರಿ. ಇಷ್ಟೂ ದುಡ್ಡು ಬಂದ್ ಕಸಾಪಕ್ಕೆ ಬಿದ್ರ ಸಾಕು. ಐದು ವರ್ಷದಾಗ ಎಲ್ಲ ಬಳಕೊಂಡ್ ದಿವಾಳಿ ಮಾಡೇ ಹೋಕ್ಕಾರ. ಬೇಕಾದ್ರ ಕಾದ್ ನೋಡ್ರಿ.
ಕನ್ನಡದ ನಿಜವಾದ ಅಭಿಮಾನಿಗಳು ಒಂದು ಅರ್ಥದಲ್ಲಿ ಓದು ಬರಹ ಬಾರದ ಆದರೆ ಭಾಷೆಯ ಬಗ್ಗೆ ನಿಜವಾದ ಕಳಕಳಿ ಹೊಂದಿರುವಂತಹವರು, ಭಾಷೆಯ ಬಗ್ಗೆ ಹೋರಾಟವಾದಾಗ ಮುಂಚೂಣಿ ಯಲ್ಲಿದ್ದು, ಹೊಡೆತ ತಿಂದು ಕನ್ನಡ ಕಟ್ಟುವವರು, ಅಂತಹವರನ್ನು ಸಾಹಿತ್ಯ ಪರಿಷತ್ತು ಸದಸ್ಯತ್ವಕ್ಕೆ ಅರ್ಹತೆ ಇಲ್ಲದವರೆಂದು ನಿರ್ಧರಿಸುವ ಪರಿಷತ್ತಿನ ಅಧಿಕಾರಿ ವರ್ಗ, ಅವರ ಶಿಫರಾಸ್ ಅನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವ ಸರ್ಕಾರ , ಭೇಷ್.