Homeಕರ್ನಾಟಕಕೋಮು ಧ್ರುವೀಕರಣ ತಡೆಗೆ ಮಾಡಬೇಕಿರುವುದೇನು? ದಕ್ಷಿಣ ಕನ್ನಡದ ಮುಸ್ಲಿಂ ದನಿಗಳ ಕಾಳಜಿಯ ನುಡಿಗಳು

ಕೋಮು ಧ್ರುವೀಕರಣ ತಡೆಗೆ ಮಾಡಬೇಕಿರುವುದೇನು? ದಕ್ಷಿಣ ಕನ್ನಡದ ಮುಸ್ಲಿಂ ದನಿಗಳ ಕಾಳಜಿಯ ನುಡಿಗಳು

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೆತ್ತರು ಹರಿದಿದೆ. ಒಂದೇ ವಾರದಲ್ಲಿ ಮೂವರು ಯುವಕರನ್ನು ಕೊಲೆಗೈಯಲಾಗಿದೆ. ಧಾರ್ಮಿಕ ದ್ವೇಷ ಉತ್ತುಂಗಕ್ಕೇರಿದ್ದರಿಂದ ಜನಸಾಮಾನ್ಯರು ಆತಂಕಿತರಾಗಿದ್ದಾರೆ. ಜಿಲ್ಲೆಗೆ ಮಾರಕವಾಗಿರುವ ಕೋಮುವಾದ ಮತ್ತೆಮತ್ತೆ ಹೆಡೆಎತ್ತುತ್ತಿದೆ. ಇಂತಹ ಸಂದರ್ಭದಲ್ಲಿ ಇದರ ಪ್ರಧಾನ ಬಲಿಪಶುಗಳಾದ ಯುವಜನರನ್ನು ಕೋಮು ದ್ವೇಷದ ದಳ್ಳುರಿಯಿಂದ ಹೊರತರಬೇಕಿದೆ. ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಶಾಂತಿ-ನೆಮ್ಮದಿಯೆಂಬುದು ಶಾಶ್ವತವಾಗಿ ದೂರವಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಸೌಹಾರ್ದಕ್ಕಾಗಿ, ಯುವಜನರ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಯುವ ನಾಯಕರು ಸದ್ಯದ ಮತೀಯ ದ್ವೇಷಕ್ಕೆ ಮದ್ದೇನು? ಎಂತಹ ನಡೆಗಳು ಪರಿಹಾರವಾಗಲಿವೆ ಎಂಬುದರ ಕುರಿತು ನ್ಯಾಯಪಥದೊಂದಿಗೆ ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಒಂದು ದಶಕದಿಂದ ಪರಿಸ್ಥಿತಿ ಬದಲಾಗಿದೆ – ರಿಜ್ವಾನ್ ಪಾಂಡೇಶ್ವರ್

“ಕೋಮು ಸೂಕ್ಷ್ಮ ಪ್ರದೇಶವಾದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಒಂದು ದಶಕದ ಹಿಂದಿನ ಪರಿಸ್ಥಿತಿಗೂ ಸದ್ಯದ ಪರಿಸ್ಥಿತಿಗೂ ಸಾಕಷ್ಟು ಬದಲಾವಣೆ ಬಂದಿದೆ. ಈ ಹಿಂದೆ ಮಸೀದಿಗೆ ಕಲ್ಲು ಹೊಡೆಯುವುದು, ಗಾಜು ಎಸೆಯುವಂತಹ ಒಂದು ಸಣ್ಣ ಘಟನೆ ನಡೆದರೂ ಸಹ ಎರಡೂ ಕೋಮಿನ ಜನರು ಉಗ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಕೋಮು ಧ್ರುವೀಕರಣದಿಂದಾಗಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿ ಗಲಭೆಯಾಗುತ್ತಿತ್ತು. ಈಗ ಇಂತಹ ಸಮಯಗಳಲ್ಲೆಲ್ಲಾ ಪ್ರತಿ ಶುಕ್ರವಾರ ಮಸೀದಿಯಲ್ಲಿ ಈ ಕುರಿತು ಚರ್ಚೆಗಳು ನಡೆದು ಕಾನೂನುಪ್ರಕಾರವೇ ಶಾಂತಿಯುತವಾಗಿ ಅದನ್ನು ಎದುರಿಸಬೇಕು ಎಂಬ ನಿಲುವಿಗೆ ಬಂದಿದ್ದೇವೆ. ಹಾಗಾಗಿ ಅಷ್ಟು ಸುಲಭವಾಗಿ ಗಲಭೆಗಳು ನಡೆಯುತ್ತಿಲ್ಲ. ಇದು ಒಂದು ಸಕಾರಾತ್ಮಕ ಬದಲಾವಣೆಯಾಗಿದೆ” ಎನ್ನುತ್ತಾರೆ ಎಚ್‌ಐಎಫ್ ಇಂಡಿಯಾ ಹಾಗೂ ಇಸ್ಲಾಮಿಕ್ ಫೋರಂನ ಮುಖಂಡರಾದ ರಿಜ್ವಾನ್ ಪಾಂಡೇಶ್ವರ್.

“ಮೂಲತಃ ಎರಡೂ ಕೋಮಿನ ಬಹುಸಂಖ್ಯಾತರು ಶಾಂತಿಯನ್ನೇ ಬಯಸುತ್ತಾರೆ. ಆದರೆ ಎರಡೂ ಕೋಮಿನ 2-3% ಮತಾಂಧರು ಎಸಗುವ ದುಷ್ಕೃತ್ಯದಿಂದ ಇಡೀ ಸಮುದಾಯಗಳು ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಇದೆ. ಉದಾಹರಣೆಗೆ ಕಳೆದ ಒಂದು ವಾರದಿಂದ ಸಂಜೆ 6 ಗಂಟೆಗೆ ವ್ಯಾಪಾರ ವಹಿವಾಟು ಬಂದ್ ಮಾಡಬೇಕೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರಿಂದ ನಷ್ಟಕ್ಕೆ ಒಳಗಾಗುವವರೆ ಜನಸಾಮಾನ್ಯರು, ಬಡವರೇ ಆಗಿದ್ದಾರೆ. ಏಕೆಂದರೆ ಮಂಗಳೂರಿನಲ್ಲಿ ವ್ಯಾಪಾರ ಅತಿ ಹೆಚ್ಚು ನಡೆಯುವುದೇ ಸಂಜೆ 6 ಗಂಟೆಯ ನಂತರ. ಇದನ್ನು ಜನಕ್ಕೆ ಅರ್ಥಮಾಡಿಸಬೇಕಿದೆ” ಎಂದರು.

“ಸದ್ಯದ ಮತೀಯವಾದಕ್ಕೆ ಪರಿಹಾರವೆಂದರೆ ಜಾತಿ-ಮತಗಳ ಭೇದ ತೊರೆದು ಒಟ್ಟಾಗಿ ಬದುಕುವುದಾಗಿದೆ. ನಾವು ಎಲ್ಲವನ್ನು ಮತೀಯ ನೆಲೆಯಲ್ಲಿ ನೋಡುವುದನ್ನು ಬಿಡಬೇಕು. ನಾವು ಮೊದಲು ಮನುಷ್ಯರು ಎಂಬುದನ್ನು ಮಕ್ಕಳಿಗೆ-ಯುವಜನರಿಗೆ ಹೇಳಿಕೊಡಬೇಕಿದೆ. ಅವರಲ್ಲಿ ಸೇವೆ, ಪರೋಪಕಾರ ಮನೋಭಾವಗಳು ಬೆಳೆಯುವಂತೆ ಮಾಡಬೇಕಿದೆ. ಮತೀಯ ಗಲಭೆಗಳು ನಮ್ಮ ಜಿಲ್ಲೆಯ ಆರ್ಥಿಕತೆಯನ್ನು ಹಿಂದಕ್ಕೆ ತಳ್ಳುತ್ತವೆ, ಅದರಿಂದಾಗಿ ನಮಗೆ ಉದ್ಯೋಗ ಸಿಗುವುದಿಲ್ಲ ಎಂದು ಅರ್ಥಪಡಿಸುವ ಕೆಲಸಗಳು ನಡೆಯಬೇಕು. ಉದ್ಯೋಗ ಮಾಡುವ ಯುವಜನರು ಇಂತ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಹಾಗಾಗಿ ಎಲ್ಲರಿಗೂ ಉದ್ಯೋಗ ಸಿಕ್ಕರೆ, ಜೊತೆಗೆ ಜಿಲ್ಲೆಯ ಡ್ರಗ್ಸ್, ಗಾಂಜಾ ಜಾಲದ ವಿರುದ್ಧ ಕ್ರಮ ಕೈಗೊಂಡರೆ ಒಂದಷ್ಟು ಉತ್ತಮ ಭವಿಷ್ಯ ಕಾಣಬಹುದು” ಎನ್ನುತ್ತಾರೆ ರಿಜ್ವಾನ್.

ಮೊಗವೀರರ ರೀತಿ ಉಳಿದ ಸಮುದಾಯಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು – ಮುನೀರ್ ಕಾಟಿಪಳ್ಳ

ದಕ್ಷಿಣ ಕನ್ನಡದ ಸಾಮಾಜಿಕ ಸಂರಚನೆಯನ್ನು ನೋಡಿದರೆ ಕೋಮುವಾದದ ಕಾಲಾಳುಗಳೆಲ್ಲ ತಳಸಮುದಾಯವರು ಎಂಬುದು ಎದ್ದು ಕಾಣುತ್ತದೆ. ಬಿಲ್ಲವರು, ಗಾಣಿಗರು, ದೇವಾಡಿಗರು, ಕುಳಾಲರು, ಕೊಠ್ಠಾರಿಗಳು ಹೆಚ್ಚು ಇದ್ದು, ಇತ್ತೀಚೆಗೆ ಬಂಟರು ಸಹ ಸೇರಿಕೊಂಡಿದ್ದಾರೆ.

“ಮೊದಲು ಮುಂಚೂಣಿಯಲ್ಲಿದ್ದ ಮೊಗವೀರರು ಈಗ ಕೋಮು ಗಲಭೆಗಳಿಂದ, ಹೊಡಿ-ಬಡಿ ಗಲಾಟೆಗಳಿಂದ ಹಿಂದೆಸರಿದಿದ್ದಾರೆ. ಹಾಗಾಗಿ ಜೈಲುಗಳಲ್ಲಿ ಮೊಗವೀರರ ಸಂಖ್ಯೆ ಅಪರೂಪವಾಗಿದೆ. 1992-2000ರ ಅವಧಿಯಲ್ಲಿ ಕೋಮು ಸಂಘರ್ಷದ ಮುಂಚೂಣಿಯಲ್ಲಿದ್ದ ಅವರು ಹಿಂದೆ ಹೋಗಲು ಅವರ ಸಮುದಾಯದಲ್ಲಿ ನಡೆದ ಆತ್ಮಾವಲೋಕನ ಮತ್ತು ಉತ್ತಮ ನಾಯಕತ್ವವೇ ಕಾರಣ. ಅವರಂತೆಯೇ ಉಳಿದೆಲ್ಲ ಸಮುದಾಯಗಳು ಸಹ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಿಲ್ಲವರ ಮಧ್ಯೆ ಆ ಕೆಲಸ ಆರಂಭವಾಗಿದೆ. ನಮಗೆ ಉತ್ತಮ ಶಿಕ್ಷಣ, ಅಭಿವೃದ್ದಿ ಬೇಕೆ ಹೊರತು ಗಲಭೆ-ಜೈಲುಗಳಲ್ಲ ಎಂಬ ಚರ್ಚೆ ಶುರುವಾಗಿದೆ. ಇದು ಎಲ್ಲಾ ಸಮುದಾಯಗಳಲ್ಲಿ ಆರಂಭವಾದರೆ ರಕ್ತ ಹರಿಯುವಿಕೆ ಸ್ವಲ್ಪ ನಿಲ್ಲಬಹುದು” ಎನ್ನುತ್ತಾರೆ ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ.

“ಅವಿಭಜಿತ ದಕ್ಷಿಣ ಕನ್ನಡದ ಬ್ಯಾರಿ ಮುಸ್ಲಿಮರು ಮತ್ತು ಇತರ ಹಿಂದುಳಿದ ಸಮುದಾಯಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಜನರು ತಮ್ಮ ಮಕ್ಕಳಿಗೆ ಉತ್ತಮ ಅನ್ನಿಸುವ ಶಿಕ್ಷಣವನ್ನು ಕೊಡಿಸಲಾಗುತ್ತಿಲ್ಲ. ಉತ್ತಮ ಆರೋಗ್ಯ ಸೇವೆಗಳು ಕೈಗೆಟುಕುತ್ತಿಲ್ಲ. ಯುವಜನರಿಗೆ ಸಮರ್ಪಕ ಉದ್ಯೋಗಗಳು ಸಿಗುತ್ತಿಲ್ಲ. ಹಿಂದಿನಂತೆ ಸೌದಿ, ಮುಂಬೈ, ಬೆಂಗಳೂರಿಗೆ ಹೋಗಿ ಉದ್ಯೋಗ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ ವಹಿವಾಟುಗಳಿಗೆ ನೂರೆಂಟು ವಿಘ್ನಗಳು ಎದುರಾಗುತ್ತಿವೆ. ಇಂತಹ ನೈಜ ಸಮಸ್ಯೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಹೋರಾಟ ಕಟ್ಟವುದು ಸಹ ಕೋಮುವಾದದಿಂದ ಹಿಂದೆ ಸರಿಯಲು ಸಹಾಯಕವಾಗುತ್ತದೆ ಮತ್ತು ಇದರಿಂದ ಜನಜೀವನ ಹಸನಾಗಬಲ್ಲದು.”

ಮುನೀರ್ ಕಾಟಿಪಳ್ಳ

“2000 ಇಸವಿಯ ನಂತರ ಮುಸ್ಲಿಂ ಸಮುದಾಯದೊಳಗೂ ಸಹ ಸಂಘಟಿತವಾಗಿ ಮತೀಯ ಸಂಘಟನೆಗಳು ತಲೆಎತ್ತಿದ್ದವು. ಪ್ರತಿರೋಧ ಅಪರಾಧವಲ್ಲ ಎಂಬ ಹೆಸರಿನಲ್ಲಿ ನಡೆದ ಕೋಮುವಾದಿ ಕೃತ್ಯಗಳ ಪರಿಣಾಮವನ್ನು ಮುಸ್ಲಿಂ ಸಮುದಾಯ ಎದುರಿಸಬೇಕಾಯಿತು. ಅದರಿಂದ ಸಮುದಾಯ ಮತ್ತುಷ್ಟು ಪೆಟ್ಟು ತಿನ್ನುವುದು ಬಿಟ್ಟರೆ ಪರಿಹಾರ ಸಾಧ್ಯವಿಲ್ಲ ಎಂಬುದನ್ನು ಬಹುಸಂಖ್ಯಾತ ಹಿಂದುತ್ವ ಕೋಮುವಾದ ತೋರಿಸಿಕೊಟ್ಟಿದೆ. ಹಾಗಾಗಿ ಮುಸ್ಲಿಂ ಯುವ ಸಮುದಾಯ ಜಾತ್ಯತೀತ ಚಳವಳಿ ಕಟ್ಟುವುದು ಇಂದಿನ ಅಗತ್ಯವಾಗಿದೆ. ಜಾತ್ಯತೀತ ತತ್ವವನ್ನು ಬೆಳೆಸುವ ಮೂಲಕ ಒಂದು ಸಮುದಾಯದ ನಾಯಕರಾಗಿ ಬೆಳೆಯುವ ಬದಲು ಸಮೂಹ ನಾಯಕರಾಗಿ (ಮಾಸ್ ಲೀಡರ್) ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿ ಬೆಳೆಯಬೇಕಾಗಿದೆ.”

“ದ.ಕದಲ್ಲಿ ಬ್ಯಾರಿ ಮುಸ್ಲಿಮರು ಮತ್ತು ಇತರ ತಳಸಮುದಾಯಗಳ ಸಂಸ್ಕೃತಿ-ಸಂಪ್ರದಾಯ ಒಂದೇ ರೀತಿ ಇದೆ. ಅದನ್ನು ತುಳುನಾಡಿನ ಸಂಸ್ಕೃತಿ ಎನ್ನಬಹುದು. ಕೋಟಿ ಚನ್ನಯ್ಯರ ಕಾಲದಿಂದಲೂ ಬ್ಯಾರಿಗಳು-ತುಳುವರ ಸಂಸ್ಕೃತಿ ಒಂದೇ ರೀತಿ ಇರುವುದನ್ನು ಗಮನಿಸಬಹುದು. ಭೂತಗಳಲ್ಲಿ ಪಾಡ್ದನಗಳಲ್ಲಿ ಬ್ಯಾರಿಗಳ ಪಾತ್ರ ಎದ್ದುಕಾಣುತ್ತದೆ. ಉರುಸ್‌ಗಳು, ಜಾತ್ರೆಗಳ ಅದೇ ರೀತಿ ನಡೆಯುತ್ತವೆ. ಇದನ್ನು ಜನರಿಗೆ ಅರ್ಥ ಮಾಡಿಸಬೇಕಾಗಿದೆ. ಅದೇ ರೀತಿಯಲ್ಲಿ ನಮ್ಮ ಹೋರಾಟ ನಮ್ಮ ಬದುಕನ್ನು ಹಸನು ಮಾಡುವುದಕ್ಕಾಗಿ ನಡೆಯಬೇಕೆ ಹೊರತು ಬದಕನ್ನು ಹಾಳು ಮಾಡಿಕೊಳ್ಳುವುದಕ್ಕಲ್ಲ ಎಂದು ಜನರು ಅರ್ಥಮಾಡಿಕೊಂಡಲ್ಲಿ ಕೋಮುವಾದಿ ಸಮಸ್ಯೆಯಿಂದ ಹೊರಬರಬಹುದು” ಎನ್ನುತ್ತಾರೆ ಮುನೀರ್.

ಮಕ್ಕಳಿಗೆ ಸೌಹಾರ್ದತೆಯ ಪಠ್ಯ ಇಡಬೇಕು – ಅಶ್ರಫ್ ಕಿನಾರ

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ರಾಜಕೀಯ ವ್ಯಕ್ತಿಗಳು ಪ್ರವೇಶಿಸದಂತೆ ತಡೆಯಬೇಕು. ಅವರು ತಮ್ಮ ಪ್ರಭಾವ ಬಳಸಿ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಕೆಲ ಹತ್ಯೆಗಳಲ್ಲಿ ಬಂಧಿತರಾಗಿರುವವರು ಈ ಹಿಂದೆ ಹಲವು ಕೊಲೆ ಪ್ರಕರಣಗಳಲ್ಲಿ ಜೈಲುಪಾಲಾಗಿದ್ದವರೆ ಆಗಿದ್ದಾರೆ. ಪೊಲೀಸ್ ಅಧಿಕಾರಿಗಳು ಸಹ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವುದು ಬಿಟ್ಟು ನ್ಯಾಯಸಮ್ಮತವಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಬೇಕಿದೆ” ಎನ್ನುತ್ತಾರೆ ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಸಂಯೋಜಕರಾದ ಅಶ್ರಫ್ ಕಿನಾರ.

ಅಶ್ರಫ್ ಕಿನಾರ

“ಎರಡನೆಯದಾಗಿ ಮಾಧ್ಯಮಗಳು ಪಕ್ಷಪಾತವಾಗಿ ವರದಿ ಮಾಡದಂತೆ ತಡೆಯುವ ಕೆಲಸ ಸಹ ಆಗಬೇಕಿದೆ. ಕೋಮು ಗಲಭೆಗಳ ವರದಿಯಲ್ಲಿ ಅವರು ಮೇಲೆ ಸಂಹಿತೆಯನ್ನು ಹೇರಬೇಕಿದೆ. ಸದ್ಯ ಮಾಧ್ಯಮಗಳು ವಿಷಯಗಳನ್ನು ತಿರುಚಿ, ಪ್ರಚೋದಿತ ರೀತಿಯಲ್ಲಿ ವರದಿ ಮಾಡುತ್ತಿರುವುದು ಸಹ ವಾತಾವರಣ ಉದ್ರಿಕ್ತವಾಗಲು ಕಾರಣವಾಗುತ್ತಿದೆ” ಎಂದರು.

“ಜಿಲ್ಲೆಯ ಸಂಘ ಸಂಸ್ಥೆಗಳು ಜಾತಿ-ಧರ್ಮದ ನಡುವೆ ಎತ್ತಿಕಟ್ಟುವುದು ಬಿಟ್ಟು ಬಡಜನರಿಗೆ ಸಹಾಯ ಮಾಡುವ, ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕಿದೆ. ಜಾತಿ-ಮತ ಭೇದವಿಲ್ಲ ಸೌಹಾರ್ದತೆಯಿಂದ ಬದುಕಬೇಕು ಎಂಬುದು ಮಕ್ಕಳಿಗೆ ಪಠ್ಯವಾಗಿ ಕಲಿಸಬೇಕಿದೆ” ಎನ್ನುತ್ತಾರೆ.

ತಾರತಮ್ಯ ಧೋರಣೆ ಮತ್ತು ನ್ಯಾಯ ನಿರಾಕರಣೆ ಆಗಬಾರದು – ಅನೀಸ್ ಕೌಸರಿ

“ನಮ್ಮ ಜಿಲ್ಲೆಯ 90% ಜನರು ಈಗ ನಡೆಯುತ್ತಿರುವುದನ್ನು ಇಷ್ಟಪಡುವುದಿಲ್ಲ. ಆದರೆ ರಾಜಕೀಯದವರಿಗೆ ಇದು ಬೇಕಾಗಿದೆ. ಎರಡು ಸಮುದಾಯದ ರಾಜಕೀಯದವರು ಇದನ್ನು ಬೆಳೆಸುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸಬೇಕಾದ ಕರ್ತವ್ಯ ಧರ್ಮಗುರುಗಳಾದ್ದಾಗಿದೆ. ಅವರು ಮನಸ್ಸು ಮಾಡಿದ್ದರೆ ಈ ಮತೀಯವಾದದಿಂದ ಯುವಜನರನ್ನು ಹೊರಗೆ ತರಲು ಸಾಧ್ಯ. ಯಾವಾಗಲೂ ಇನ್ನೊಂದು ಧರ್ಮವನ್ನು ದೂಷಿಸುವ ಬದಲು ನಮ್ಮೊಳಗಡೆಯೂ ಇರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ” ಎನ್ನುತ್ತಾರೆ ಎಸ್‌ಕೆಎಸ್‌ಎಸ್‌ಎಫ್‌ನ ಮುಖಂಡರಾದ ಅನೀಶ್ ಕೌಸರಿ.

“ಹಾಗೆಯೇ ತಾರತಮ್ಯ ಧೋರಣೆ ಮತ್ತು ನ್ಯಾಯ ನಿರಾಕರಣೆ ಆದಾಗ ಯಾವ ಸಮುದಾಯವಾದರೂ ಸಂತ್ರಸ್ತ ಭಾವನೆಯಿಂದ ಚಿಂತಿಸುವುದು ಸಾಮಾನ್ಯ. ನಮ್ಮ ಜಿಲ್ಲೆಯಲ್ಲಿ ಅದು ಮತ್ತೆಮತ್ತೆ ಸಾಬೀತಾಗಿ ಜನರ ಮನಸ್ಸಿನಲ್ಲಿ ಬೇರೂರಿದೆ. ಇದು ಆಗಬಾರದಿತ್ತು. ನ್ಯಾಯ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ ನಾವು ಚಳವಳಿ ನಡೆಸಬೇಕಿದೆ.”

ಅನೀಶ್ ಕೌಸರಿ

“ಇನ್ನು ಇಲ್ಲಿಯ ಬಹುತೇಕ ಮಾಧ್ಯಮಗಳು ಒಂದು ವರ್ಗಕ್ಕೆ ಮಾತ್ರ ನಾವಿದ್ದೇವೆ ಎನ್ನುವ ರೀತಿಯಲ್ಲಿ, ಮತ್ತೊಂದು ಸಮುದಾಯವನ್ನು ಅಪರಾಧಿಗಳ ರೀತಿ ಚಿತ್ರಿಸುವ ಕೆಲಸ ಮಾಡುತ್ತಿದ್ದು, ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಿವೆ. ಇಲ್ಲಿನ ಸೌಹಾರ್ದವನ್ನು ಒಡೆಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಅಷ್ಟು ಸುಲಭಕ್ಕೆ ಅದು ಸಾಧ್ಯವಿಲ್ಲ. ಈಗ ಆ ಮಾಧ್ಯಮಗಳ ವಿರುದ್ಧವೂ ನಾವು ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ” ಎನ್ನುತ್ತಾರೆ ಅನೀಶ್.

ಇವು ಜಿಲ್ಲೆಯ ಮುಸ್ಲಿಂ ದನಿಗಳು ಹೇಳುವ ಮಾತುಗಳು. ಈ ಎಲ್ಲರೂ ಹೇಳುವುದು ಮತಾಂಧತೆ ಎಂಬುದು ಎರಡೂ ಧರ್ಮಗಳಲ್ಲಿದೆ. ಆದರೆ ಪೊಲೀಸ್ ವ್ಯವಸ್ಥೆ, ಮಾಧ್ಯಮಗಳು ಕೊನೆಗೆ ಸರ್ಕಾರ ಕೂಡ ಬಹುಸಂಖ್ಯಾತ ಸಮುದಾಯದ ಪಕ್ಷಪಾತವಾಗಿ ಕೆಲಸ ಮಾಡುತ್ತಿರುವುದು ಸಮಸ್ಯೆಯ ಮೂಲವಾಗಿದೆ. ಇದನ್ನು ತೊಡೆದುಹಾಕಿದ್ದಲ್ಲಿ ದಕ್ಷಿಣ ಕನ್ನಡದಲ್ಲಿರುವ ಸೌಹಾರ್ದವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಸಾಮರಸ್ಯದ ತಾಣವಾಗಿ ಉಳಿಯಲಿದೆ.


ಇದನ್ನೂ ಓದಿ: ಕೋಮು ಗಲಭೆಗಳಿಂದ ಭಾರತದಲ್ಲಿ ಸ್ಥಳಾಂತರಗೊಂಡವರ ಕೆಲವು ಫೈಲ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...