ಮೃತದೇಹವೊಂದರ ಮುಂದೆ ಕುಟುಂಬಸ್ಥರು ನಗುತ್ತಾ ಗ್ರೂಪ್ ಫೋಟೊ ಕ್ಲಿಕ್ಕಿಸಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗಿದೆ. ಮರಣ ಹೊಂದಿರುವ ಮನೆಯಲ್ಲಿ ಯಾವುದೆ ದುಃಖವಿಲ್ಲದೆ ಹೀಗೆ ನಗುತ್ತಾ ಫೋಟೊ ಕ್ಲಿಕ್ಕಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಟೀಕಿಸಿದರೆ, ಇನ್ನು ಕೆಲವರು ಮೃತಪಟ್ಟವರನ್ನು ನಗುನಗುತ್ತಲೇ ಕಳುಹಿಸಿಕೊಡುವುದು ಕೂಡಾ ಸರಿಯಾದ ನಡೆ ಎಂದು ಕುಟುಂಬವನ್ನು ಬೆಂಬಲಿಸಿದ್ದಾರೆ.
ಕುಟುಂಬವೊಂದರ ಖಾಸಗಿ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ನಿರೂಪಣೆಯೊಂದಿಗೆ ಹರಿದಾಡಿದ್ದಕ್ಕೆ, ಕುಟುಂಬದ ಸದಸ್ಯರು ಬೇಸರ ವ್ಯಕ್ತಪಡಿಸಿ ಸಮಜಾಯಿಷಿ ನೀಡಿದ್ದಾರೆ. ನಮ್ಮ ‘ಅಮ್ಮಚ್ಚಿ(ಅಮ್ಮ)’ಯನ್ನು ಸಂತೋಷದಿಂದ ಕಳುಹಿಸಿಕೊಟ್ಟಿದ್ದೇವೆ, ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಘಟನೆ ಏನು?
ಕೇರಳದ ಕೊಟ್ಟಾಯಂ ಜಿಲ್ಲೆಯ ಮಲ್ಲಪಲ್ಲಿ ಮೂಲದ ದಿವಂಗತ ರೆವರೆಂಡ್ ಪಿ.ಒ. ವರ್ಗೀಸ್ ಅವರ ಪತ್ನಿ, 95 ವರ್ಷದ ಮರಿಯಮ್ಮ ಅವರು ಇತ್ತೀಚೆಗೆ ಮೃತಪಟ್ಟಿದ್ದರು. ವೈರಲ್ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಗಳು ಅವರ ಕುಟುಂಬದ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಹಳೆಯ ಚಿತ್ರಗಳು ವೈರಲ್!
“ಮರಿಯಮ್ಮ ನನ್ನ ತಂದೆಯ ಅಣ್ಣನ ಹೆಂಡತಿ. ವ್ಯಕ್ತಿಯೊಬ್ಬರು ಸತ್ತರೆ ಸ್ವರ್ಗಕ್ಕೆ ಹೋಗುತ್ತಾರೆ ಎಂಬುವುದಾಗಿದೆ ಕ್ರಿಶ್ಚಿಯನ್ನರ ನಂಬಿಕೆ. ಮರಿಯಮ್ಮ ಎಂಬ ನಮ್ಮ ‘ಅಮ್ಮಚ್ಚಿ’ ಬದುಕಿದ್ದಾಗ ಉತ್ತಮ ರೀತಿಯ ಜೀವನ ನಡೆಸಿದ್ದಾರೆ. ಅಮ್ಮಚ್ಚಿ ಸ್ವರ್ಗಕ್ಕೆ ಹೋದ ಖುಷಿಯಾಗಿದೆ ಅಲ್ಲಿ ಎದ್ದು ಕಾಣುತ್ತಿದ್ದದ್ದು” ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯ, ವೈದ್ಯರಾದ ಉಮ್ಮನ್ ಪಿ. ನೈನಾನ್ ಹೇಳಿದ್ದಾರೆ.
“ಹಿಂದಿನ ದಿನ ನಾಲ್ಕು ಗಂಟೆಗೆ ಶವವನ್ನು ಮನೆಗೆ ತರಲಾಯಿತು. ಮರುದಿನ ಮುಂಜಾನೆ 3 ಗಂಟೆ ಸುಮಾರಿಗೆ ಈ ಫೋಟೋ ತೆಗೆಯಲಾಗಿದೆ” ಎಂದು ಅವರು ಹೇಳಿದ್ದಾರೆ.
“ಅಲ್ಲಿಯವರೆಗೂ ಅಮ್ಮಚ್ಚಿಯ ಜೊತೆ ಮನೆಯವರೆಲ್ಲ ಒಂದೆಡೆ ಸೇರಿ, ಅವರಿಗಾಗಿ ಪ್ರಾರ್ಥಿಸಿದರು. ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬದ ಇತರ ಸದಸ್ಯರು ಅಮ್ಮಚ್ಚಿ ಬದುಕಿದ್ದಾಗಿನ ಅನುಭವಗಳನ್ನು ಹಂಚಿಕೊಂಡರು. ಎಲ್ಲರೂ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಹೊರಟಾಗ ತೆಗೆದ ಫೋಟೋ ಇದಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದು: ಸಂಸದ ತೇಜಸ್ವಿ ಸೂರ್ಯ ಆಡಿಯೋ ವೈರಲ್
“ನಮ್ಮ ಕುಟುಂಬದ ಒಳಗೆ ಸೀಮಿತವಾಗಬೇಕಿದ್ದ ಈ ಖಾಸಗಿ ಚಿತ್ರ ಹೇಗೋ ಹೊರಬಿದ್ದಿದೆ. ನಂತರ ಅದು ವೈರಲ್ ಆಗಿದೆ. ಕೆಲವರು ಅದನ್ನು ಕೆಟ್ಟದಾಗಿ ನಿರೂಪಿಸಿ ಹರಡುತ್ತಿದ್ದಾರೆ. ಅಮ್ಮಚ್ಚಿಯ ಮರಣಾ ನಂತರದ ಜೀವನ ಆಶಾದಾಯಕವಾಗಿ ಇರುತ್ತದೆ ಎಂದು ನಾವು ನಂಬುತ್ತೇವೆ. ಈ ಕಾರಣಕ್ಕಾಗಿಯೆ ನಾವು ಅವರನ್ನು ಖುಷಿಯಿಂದ ಕಳುಹಿಸಿಕೊಟ್ಟಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಅಮ್ಮಚ್ಚಿ ಕಳೆದ ಒಂದು ವರ್ಷದಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. ಅವರಿಗೆ 9 ಮಕ್ಕಳು. ಅವರಲ್ಲಿ ಒಬ್ಬರು ಈ ಹಿಂದೆಯೆ ತೀರಿಕೊಂಡಿದ್ದಾರೆ. ಉಳಿದ ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರನ್ನು ಉತ್ತಮ ರೀತಿಯಲ್ಲಿ ಸೇವೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಇದರಲ್ಲಿ ಅಪಹಾಸ್ಯ ಮಾಡಲು ಏನಿದೆ? ಚಿತ್ರವನ್ನು ಬಳಸಿ ಕೆಟ್ಟದಾಗಿ ಪ್ರಚಾರ ಮಾಡುವವರ ಮನಸ್ಥಿತಿ ಇದರಲ್ಲಿ ಬಯಲಾಗಿದೆ. ಸತ್ತಾಗ ಮಾತ್ರ ಅಳಬೇಕು ಎನ್ನುವವರಿಗೆ ಏನು ಹೇಳಬೇಕು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿ ಡಾನ್ಸ್ ಮಾಡುತ್ತಿರುವ ಮಗು ಶಿಕ್ಷಕನಿಂದ ಕೊಲೆಯಾದ ಇಂದ್ರ ಮೇಘ್ವಾಲ್ ಅಲ್ಲ
“ಕುಟುಂಬದ ಸದಸ್ಯನಾಗಿ ಒಂದು ಅಪೇಕ್ಷೆಯೇನೆಂದರೆ, ದಯವಿಟ್ಟು ಈ ಚಿತ್ರವನ್ನು ಮತ್ತಷ್ಟು ಹರಡಬೇಡಿ. ಇನ್ನೊಬ್ಬರನ್ನು ಗೇಲಿ ಮಾಡುವುದರಿಂದ ಅವರಿಗೆ ಸಿಗುವ ಖುಷಿಯಾದರೂ ಏನು? ನಮ್ಮನ್ನು ಅನೇಕರು ಬೆಂಬಲಿಸಿದ್ದಾರೆ ಎಂದು ತಿಳಿದು ತುಸು ನಿರಾಳವಾಗಿದ್ದೇವೆ” ಎಂದು ಹೇಳಿದ್ದಾರೆ.
ಕುಟುಂಬಸ್ಥರನ್ನು ಗೇಲಿ ಮಾಡುವವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪಾಠವನ್ನು ಮಾಡಿದ್ದಾರೆ. ಮೃತಪಟ್ಟವರನ್ನು ಖುಷಿಯಿಂದ ಡ್ಯಾನ್ಸ್ ಮಾಡುತ್ತಾ ಕಳುಹಿಸಿಕೊಡುವ ಸಂಸ್ಕೃತಿ ತಮಿಳುನಾಡು, ಸೇರಿದಂತೆ ಕರ್ನಾಟಕದಲ್ಲಿ ಈ ಹಿಂದಿನಿಂದಲೂ ಇವೆ ಎಂದು ನೆನಪಿಸಿದ್ದಾರೆ.


