Homeದಿಟನಾಗರಫ್ಯಾಕ್ಟ್‌ಚೆಕ್‌: ವೈರಲ್‌ ವಿಡಿಯೊದಲ್ಲಿ ಡಾನ್ಸ್‌ ಮಾಡುತ್ತಿರುವ ಮಗು ಶಿಕ್ಷಕನಿಂದ ಕೊಲೆಯಾದ ಇಂದ್ರ ಮೇಘ್ವಾಲ್‌ ಅಲ್ಲ

ಫ್ಯಾಕ್ಟ್‌ಚೆಕ್‌: ವೈರಲ್‌ ವಿಡಿಯೊದಲ್ಲಿ ಡಾನ್ಸ್‌ ಮಾಡುತ್ತಿರುವ ಮಗು ಶಿಕ್ಷಕನಿಂದ ಕೊಲೆಯಾದ ಇಂದ್ರ ಮೇಘ್ವಾಲ್‌ ಅಲ್ಲ

- Advertisement -
- Advertisement -

ಬಾಲಕನೊಬ್ಬ ರಾಜಸ್ಥಾನಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ರಾಜಸ್ಥಾನದ ಜಲೋರ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ತನ್ನ ಶಾಲಾ ಶಿಕ್ಷಕನಿಂದಲೇ ಹಲ್ಲೆಗೊಳದ 9 ವರ್ಷದ ದಲಿತ ವಿದ್ಯಾರ್ಥಿ ಇಂದ್ರ ಕುಮಾರ್ ಮೇಘ್ವಾಲ್ ವಿಡಿಯೊ ಇದೆಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

ಸರಸ್ವತಿ ವಿದ್ಯಾ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಚೈಲ್ ಸಿಂಗ್ (40 ವರ್ಷ), ಶಾಲೆಯಲ್ಲಿ ಸವರ್ಣಿಯರಿಗೆ ಕುಡಿಯಲು ಮೀಸಲಿಟ್ಟಿದ್ದ ನೀರನ್ನು ದಲಿತ ಬಾಲಕ ಇಂದ್ರ ಕುಮಾರ್ ಕುಡಿದನೆಂದು ಕೋಪಗೊಂಡು ಬಾಲಕನಿಗೆ ಮನಬಂದಂತೆ ಥಳಿಸಿದ್ದನು. ಇದರಿಂದ ಅಸ್ವಸ್ಥಗೊಂಡ ಬಾಲಕ ಮೃತಪಟ್ಟಿದ್ದಾನೆ. ನಂತರ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದು, ಕೊಲೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ದೇಶದ ಆತ್ಮಸಾಕ್ಷಿಯನ್ನು ಕದಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆದಿರುವ ಈ ಘಟನೆಯು ಅಮೃತ ಮಹೋತ್ಸವದ ವೈಭವವನ್ನು ಅಣಿಸಿದಂತಿದೆ. ಇದೆಲ್ಲದರ ನಡುವೆ ಬಾಲಕನ ಹತ್ಯೆಗೆ ಥಳುಕು ಹಾಕಿ ಕೆಲವು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇಲ್ಲಿ ಚರ್ಚಿಸಲಾಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಬಳಕೆದಾರರು ಬಾಲಕನ ಸಾವಿನ ಕುರಿತು ಹೀಗೆ ಬರೆದಿದ್ದಾರೆ: “ಇಂದ್ರನ  ನೆನಪು, ಎಂತಹ ಮುಗ್ಧತೆ, ಕೇವಲ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತೇನೆ ಎಂದು ಈ ಬಡ ಮಗುವಿಗೆ ಹೇಗೆ ತಿಳಿಯಬೇಕು? ಈ ಬಡ ಮಗುವಿಗೆ ಇಂತಹ ಕ್ರೂರ ಶಿಕ್ಷೆಯೇ? ಅವನಿಗೆ ಕೋಟಿ ನಮನಗಳು…”

ಹೀಗೆ ಕೆಲವು ಟಿಪ್ಪಣಿಗಳೊಂದಿಗೆ ವಿಡಿಯೊ ಹಂಚಿಕೆಯಾಗುತ್ತಿದೆ. ಹಾಗಿದರೆ ವೈರಲ್ ವಿಡಿಯೊದಲ್ಲಿ ಹಾಡಿಗೆ ನೃತ್ಯ ಮಾಡಿರುವ ಬಾಲಕ ಇಂದ್ರ ಮೇಘ್ವಾಲ್ ಎಂಬುದು ನಿಜವೇ?

ವೈರಲ್ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಬಾಲಕ ಇಂದ್ರ ಕುಮಾರ್ ಮೇಘ್ವಾಲ್‌ ಅಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವೈರಲ್ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ಬಾಲಕನ ಚಿತ್ರ, ಥಳಿತಕ್ಕೊಳಗಾಗಿ ಸಾವನಪ್ಪಿದ ದಲಿತ ವಿದ್ಯಾರ್ಥಿ ಇಂದ್ರ ಮೇಘ್ವಾಲ್‌ ಚಿತ್ರವನ್ನು ಹೋಲಿಕೆ ಮಾಡಿದಾಗ ಎರಡು ಬೇರೆ ಬೇರೆ ಎಂಬುದು ಸ್ಪಷ್ಟವಾಗುತ್ತದೆ. ಈ ಫೋಟೋಗಳ ನಡುವೆ ವ್ಯತ್ಯಾಸಗಳಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ಹಾಡಿಗೆ ನೃತ್ಯ ಮಾಡುತ್ತಿರುವ ಬಾಲಕನ ಹೆಸರು ಹರೀಶ್ ಎಂದಾಗಿದೆ. ಈ ಮಗು ರಾಜಸ್ಥಾನದ ಬಾರ್ಮರ್‌ನಲ್ಲಿರುವ ಗೋಮ್ರಖ್ ಧಾಮ್ ಶಾಲೆಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ನೃತ್ಯ ಮಾಡುತ್ತಿರುವ ವಿಡಿಯೊವನ್ನು ವಿದ್ಯಾರ್ಥಿ ಹರೀಶನ ಶಾಲೆಯ ಶಿಕ್ಷಕರಾದ ಟಿ.ಆರ್‌. ಚೇಲಾ ರಾಮ್ ರೈಕಾ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  “ಜುಲೈ 30ರಂದು 2ನೇ ತರಗತಿ ವಿದ್ಯಾರ್ಥಿ ಹರೀಶ್, ನೋ ಬ್ಯಾಗ್ ಡೇ ಸಂದರ್ಭದಲ್ಲಿ ಆತ್ಮವಿಶ್ವಾಸದ ಪ್ರದರ್ಶನ ತೋರಿದನು” ಎಂಬ ಟಿಪ್ಪಣಿಯೊಂದಿಗೆ ಶಿಕ್ಷಕ ಚೇಲಾ ರಾಮ್‌ ಅವರು ಹಂಚಿಕೊಂಡಿರುವ ದೀರ್ಘ ವಿಡಿಯೊವನ್ನು ಇಲ್ಲಿ ಗಮನಿಸಬಹುದು. ಗೋಮ್ರಖ್ ಧಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧಿಕೃತ ಫೇಸ್‌ಬುಕ್ ಪೇಜ್‌  ಪರಿಶೀಲಿಸಿದಾಗ ಅಲ್ಲಿಯೂ ಇದೇ ವಿಡಿಯೊವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ಗೋಮ್ರಖ್ ಧಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗುಣೇಶ ರಾಮ್ ಚೌಧರಿ ಅವರನ್ನು ಇಂಡಿಯಾ ಟುಡೆ ಸಂಪರ್ಕಿಸಿದ್ದು, “ವೀಡಿಯೊದಲ್ಲಿರುವ ಮಗು ನಮ್ಮ ಶಾಲೆಯ ವಿದ್ಯಾರ್ಥಿ ಹರೀಶ್ ಭೀಲ್”’ ಎಂದು ಸ್ಪಷ್ಟಪಡಿಸಿದ್ದಾರೆ. “ಆರು ವರ್ಷದ ಹರೀಶ್ 2 ನೇ ತರಗತಿಯಲ್ಲಿ ಓದುತ್ತಿದ್ದು, ನೃತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾನೆ. ಇದೇ ಆಗಸ್ಟ್ 15 ರಂದು ರಾಕಿಂಗ್ ಪ್ರದರ್ಶನ ನೀಡಿದ್ದಾನೆ” ಎಂದು ಚೌಧರಿ ಹೇಳಿದ್ದಾರೆ.

“ಜುಲೈ 30ರಂದು ಭೀಲ್ ಅವರ ವೈರಲ್ ನೃತ್ಯ ವೀಡಿಯೊವನ್ನು ಶಾಲೆಯ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಜಲೋರ್ ಘಟನೆಯ ಹಿನ್ನೆಲೆಯಲ್ಲಿ ಕೆಲವರು ಹರೀಶನ ವಿಡಿಯೋವನ್ನು ಪ್ರಸಾರ ಮಾಡಲು ಪ್ರಾರಂಭಿಸಿದಾಗ ಶಾಲಾ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು” ಎಂದು ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ.

“ಭೀಲ್‌ನ ಮತ್ತೊಂದು ವಿಡಿಯೊವನ್ನು ನಮಗೆ ಕಳುಹಿಸಿದ್ದಾರೆ. ಈ ವಿಡಿಯೋದಲ್ಲಿ ಪುಟಾಣಿ ಹರೀಶ್‌ ಭೀಲ್‌ ಮುಖ ಸ್ಪಷ್ಟವಾಗಿ ಕಾಣಬಹುದು. ಈ ವೀಡಿಯೊವನ್ನು ನೋಡಿದರೆ, ವೈರಲ್ ವೀಡಿಯೊದ ಹುಡುಗ ಹರೀಶ್‌ ಎಂಬುದು ಸ್ಪಷ್ಟವಾಗುತ್ತದೆ” ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇಂಡಿಯಾ ಟುಡೇ ಜಾಲೋರ್ ವರದಿಗಾರ ನರೇಶ್ ಸರ್ನೌ ವಿಷ್ಣೋಯ್ ಅವರು ಇಂದ್ರ ಕುಮಾರ್ ಮೇಘವಾಲ್ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ವೈರಲ್ ವೀಡಿಯೊದಲ್ಲಿರುವ ಬಾಲಕನ ಬಗ್ಗೆ ವಿಚಾರಿಸಿದಾಗ, “ವೈರಲ್ ಆಗಿರುವ ವಿಡಿಯೋದಲ್ಲಿರುವ ಬಾಲಕ ತನ್ನ ಮಗ ಇಂದ್ರ ಕುಮಾರ್ ಅಲ್ಲ” ಎಂದು ಮೃತ ವಿದ್ಯಾರ್ಥಿಯ ತಂದೆ ದೇವರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬಾಲಕನೊಬ್ಬ ನೃತ್ಯ ಮಾಡಿರುವ ವಿಡಿಯೋವು ರಾಜಸ್ಥಾನದಲ್ಲಿ ಹತ್ಯೆಯಾದ ಇಂದ್ರ ಮೇಘ್ವಾಲ್‌ದ್ದಲ್ಲ. ಈ ವಿಡಿಯೊದಲ್ಲಿರುವ ಮಗು ರಾಜಸ್ಥಾನದ ಬಾರ್ಮರ್‌ನಲ್ಲಿರುವ ಗೋಮ್ರಖ್ ಧಾಮ್ ಶಾಲೆಯ ವಿದ್ಯಾರ್ಥಿ ಹರೀಶ್‌ ಎಂದು ಸ್ಪಷ್ಟವಾಗಿದೆ.

ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಬದುಕಿರುವ ವ್ಯಕ್ತಿ ಮತ್ತು ಮನೆಯವರ ಭಾವನೆಗಳಿಗೆ ನೋವುಂಟಾಗುತ್ತದೆ.

ವರದಿ ಕೃಪೆ: ಏನ್‌ಸುದ್ದಿ.ಕಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...