ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿಲ್ಲ, ಆದರೆ ಕ್ಷಮಾದಾನ ನೀಡಬಹುದೇ ಎಂದು ಪರಿಶೀಲಿಸಿ ಎಂದಷ್ಟೆ ಹೇಳಿತ್ತು ಎಂದು ಸಿಜೆಐ ಎನ್.ವಿ ರಮಣ ಹೇಳಿದ್ದಾರೆ.
11 ಅಪರಾಧಿಗಳು ಕ್ಷಮಾದಾನ ಪಡೆದು ಬಿಡುಗಡೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸುಪ್ರೀಂ, ಕ್ಷಮಾದಾನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಗುಜರಾತ್ ಸರ್ಕಾರ ಉತ್ತರಿಸುವಂತೆ ಸೂಚಿಸಿದೆ. 11 ಅಪರಾಧಿಗಳನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆಯೂ ನ್ಯಾಯಾಲಯ ಸೂಚಿಸಿದೆ. ಎರಡು ವಾರದ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿದೆ.
ಸಿಪಿಎಂ(ಎಂ) ನಾಯಕಿ ಸುಭಾಷಿಣಿ ಅಲಿ ಮತ್ತು ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್ ಸೇರಿದಂತೆ ಮೂವರು ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಕೂಡ ಎರಡನೇ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ
ಗುಜರಾತ್ ಗಲಭೆಯ ಸಮಯದಲ್ಲಿ ಬಿಲ್ಕಿಸ್‌ರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಯಿತು ಮತ್ತು ಅವರ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ 14 ಜನರನ್ನು ಮಾರ್ಚ್ 3, 2002 ರಂದು ದಾಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಜನಸಮೂಹವೊಂದು ಕೊಂದು ಹಾಕಿತ್ತು. ಆ ಸಮಯದಲ್ಲಿ ಬಿಲ್ಕಿಸ್ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು.
ಜನವರಿ 21, 2008ರಂದು ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಹಾಗೂ ಅವರ ಕುಟುಂಬದ ಏಳು ಸದಸ್ಯರ ಹತ್ಯೆಯ ಆರೋಪದ ಮೇಲೆ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.
ಈ ಅಪರಾಧಿಗಳು 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು. ನಂತರ ಅವರಲ್ಲಿ ಒಬ್ಬಾತ ತನ್ನ ಅವಧಿಪೂರ್ವ ಬಿಡುಗಡೆಗಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದನು. ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ವಿಷಯವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಪಂಚಮಹಲ್ ಜಿಲ್ಲಾಧಿಕಾರಿ ಸುಜಲ್ ಮಾಯಾತ್ರಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಕೆಲವು ತಿಂಗಳ ಹಿಂದೆ ರಚಿಸಲಾದ ಸಮಿತಿಯು ಪ್ರಕರಣದಲ್ಲಿ ಎಲ್ಲಾ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಸರ್ವಾನುಮತದ ನಿರ್ಧಾರ ತೆಗೆದುಕೊಂಡಿದೆ. ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ನಿನ್ನೆ ನಾವು ಅವರ ಬಿಡುಗಡೆಯ ಆದೇಶವನ್ನು ಸ್ವೀಕರಿಸಿದ್ದೇವೆ” ಎಂದು ಮಾಯಾತ್ರಾ ಹೇಳಿದ್ದರು ಮತ್ತು ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ; ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳ ಕ್ಷಮಾಪಣೆ ವಿರೋಧಿಸಿ ಸಲ್ಲಿಸಲಾದ ಅರ್ಜಿ ಪರಿಶೀಲನೆ ನಡೆಸುತ್ತೇವೆಂದ ಸುಪ್ರೀಂ


