Homeಪುಸ್ತಕ ವಿಮರ್ಶೆ’ದ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್' ಪುಸ್ತಕದಿಂದ ಆಯ್ದ ಭಾಗ

’ದ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್’ ಪುಸ್ತಕದಿಂದ ಆಯ್ದ ಭಾಗ

- Advertisement -
- Advertisement -

1950ರ ಮಳೆಯಿಂದ ತೊಯ್ದುಹೋಗಿದ್ದ ದಿನದಂದು ಇಪ್ಪತ್ತು ವರ್ಷ ವಯಸ್ಸಿನ ಜಾರ್ಜ್ ಬಾಂಬೆಯಲ್ಲಿ ಬಂದಿಳಿದರು. ತಮ್ಮ ಬೇರನ್ನ ಮಂಗಳೂರಿನಲ್ಲಿ ಕಂಡುಕೊಳ್ಳುತ್ತಿರುವ ಸಮಯದಲ್ಲೇ ಮಂಗಳೂರನ್ನು ಬಿಡಬೇಕಾದ ಪರಿಸ್ಥಿತಿ ಜಾರ್ಜ್ ಫರ್ನಾಂಡಿಸ್‌ಗೆ ಬಂದೊದಗಿತು. ತಮ್ಮ ಪಿತ್ರಾರ್ಜಿತ ಭಾದ್ಯತೆಯ ಸತ್ವವಾದ ಒಂದು ಸೂಟ್ ಕೇಸಿನ ಜೊತೆಯಲ್ಲಿ ಒಬ್ಬರೇ ತನ್ನ ಎಲ್ಲಾ ಸಂಬಂಧಗಳನ್ನೂ ತೊರೆದು ಹೊರಟುಬಿಟ್ಟಿದ್ದರು. ಮಂಗಳೂರಿನ ಹೊಟೇಲ್ ಕಾರ್ಮಿಕರ ಸಂಘದ ಮಿತ್ರರು ಔಪಚಾರಿಕವಾಗಿ ಅವರಿಗೆ ಬೀಳ್ಕೊಡುಗೆಯನ್ನ ಏರ್ಪಡಿಸಿದ್ದರು. ಅವರು ಮೈದಾನವೊಂದರಲ್ಲಿ ಸಭೆಯೊಂದನ್ನು ಏರ್ಪಡಿಸಿ ಇಪ್ಪತ್ತು ರೂಪಾಯಿಗಳನ್ನ ಕೈಗಿತ್ತು ಮತ್ತು ಕಡೂರಿನವರೆಗೂ ಬಸ್ ಟಿಕೇಟನ್ನ ತೆಗೆದುಕೊಟ್ಟರು. ಅಲ್ಲಿಂದ ಬೊಂಬಾಯಿಗೆ ರೈಲನ್ನ ಹಿಡಿಯಬೇಕಿತ್ತು. ಚೆನ್ನಾಗಿ ಓದಿ ವಕೀಲರಾಗಿ ಮರಳಿಬಂದು ತಮ್ಮ ಸೇವೆಗೆ ನಿಲ್ಲಬೇಕೆಂದು ಅವರು ಜಾರ್ಜ್‌ಗೆ ಉಪದೇಶಿಸಿದರು. ಜಾರ್ಜ್ ಹಿಮ್ಮತ್ ಪತ್ರಿಕೆಯ ಸಂದರ್ಶನವೊಂದರಲ್ಲಿ “ನಾನು ಅವರಿಗೆ ಕೊಟ್ಟ ಆಶ್ವಾಸನೆಯನ್ನು ಈಡೇರಿಸಲಾಗಲೇ ಇಲ್ಲ” ಎಂದು ಪೇಚಾಡಿಕೊಂಡಿದ್ದರು.

****

ಮುಂಬೈಯ್ಯಲ್ಲಿ ಡಿ.ಮೆಲೊ, ಎಸ್.ಆರ್. ಕುಲಕರ್ಣಿಯವರಂತಹವರ ಪರಿಚಯದ ನಂತರ ಬೃಹತ್ತಾದ ಕಾರ್ಮಿಕ ಮುಷ್ಕರ ಮತ್ತು ಹೋರಾಟಗಳಲ್ಲಿ ಪಾಲ್ಗೊಂಡು ಅನೇಕ ಕಾರ್ಮಿಕ ಹೋರಾಟಗಳ ಮುಂಚೂಣಿಯಲ್ಲಿದ್ದ ವ್ಯಕ್ತಿ ಜಾರ್ಜ್ ಫನಾಂಡಿಸ್. ಇದೇ ಕಾರಣಕ್ಕೆ ಅವರಿಗೆ STRIKE MAN ಎಂಬ ಅನ್ವರ್ಥನಾಮ ಬಂದಿತು.

****

ದ ಸ್ಟ್ರೈಕ್ ಮ್ಯಾನ್

’ನಾಗರೀಕತೆಯ ಚರಿತ್ರೆಯಲ್ಲಿ ಹಿಂದೆಂದೂ’ ಜೂನ್ 1974ರಲ್ಲಿ ಸಂಪಾದಕರಿಗೆ ಬರೆದ ಪತ್ರವೊಂದರಲ್ಲಿ ಹೀಗೆ ಮುಂದುವರಿದಿತ್ತು, ’ಒಬ್ಬ ಹೆಂಗಸು ಮತ್ತು ಜಾರ್ಜ್ ಫರ್ನಾಂಡಿಸ್‌ರ ನಡುವೆ ನಡೆದ ಜಗಳವೊಂದರ ಕಾರಣದಿಂದ ಯಾರೂ ಈ ರೀತಿಯ ಅತ್ಯಂತ ದುಬಾರಿ ಬೆಲೆಯನ್ನ ತೆತ್ತಲಿಲ್ಲ ಮತ್ತು ಆ ಹೆಂಗಸಿನ ಹೆಸರನ್ನು ನಾನು DIR ಕಾರಣದಿಂದ ಇಲ್ಲಿ ಹೇಳುವ ಹಾಗಿಲ್ಲ. ಆಗತಾನೆ ಮೇ ತಿಂಗಳು ಕಳೆದಿತ್ತು, ಈ ಜಗಳವೆಂದು ಕರೆಯಲ್ಪಟ್ಟ ಈ ಘಟನೆ, ದೇಶದಾದ್ಯಂತ ನಡೆದ ಬೃಹತ್ ಮುಷ್ಕರಕ್ಕೆ ನಾಂದಿ ಹಾಡಿತು. ಒಂದು ವರ್ಷದ ನಂತರ ಆ ಹೆಂಗಸು – ಇಂದಿರಾ ಗಾಂಧಿ – ಪ್ರಜಾಪ್ರಭುತ್ವವನ್ನ ಅಮಾನತುಗೊಳಿಸಿ, ನಿರಂಕುಶಾಧಿಕಾರವನ್ನ ಜಾರಿಗೊಳಿಸಿದರು. ದೇಶ ಭರಿಸಲಾರದಷ್ಟು ನಷ್ಟವನ್ನ ತಂದ ಈ ರೈಲ್ವೇ ಕಾರ್ಮಿಕರ ಮುಷ್ಕರವನ್ನು ಹಣ ನೀಡಿ ನಡೆಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಅವರು ಅಲ್ಲಿಗೇ ನಿಲ್ಲಿಸದೆ, ’ನಮ್ಮ ಕಾರ್ಮಿಕ ಸಂಘಟನೆಗಳು ಬಡ ಸಂಘಟನೆಗಳು’, ಅವರಿಗೆ ಈ ಮುಷ್ಕರವನ್ನ ಕೈಗೊಳ್ಳಲು ಹಣ ವಿದೇಶದಿಂದ ಬಂದಿತೆಂದರು. ಮೇ ತಿಂಗಳ ಆ ಇಪ್ಪತ್ತು ದಿನಗಳ ಕಾಲ ನಡೆದ ಮುಷ್ಕರದಲ್ಲಿ, ತಲ್ಲಣಗೊಳಿಸುವ ಆ ಸ್ತಬ್ಧತೆಗಿಂತಲೂ, ಸರ್ಕಾರದ ವಿರುದ್ಧ ಹೂಡಲಾಗಿದ್ದ ಆ ಯುದ್ಧದ ಬಗೆಗಿದ್ದ ದಿಟ್ಟತನ ದೇಶದಾದ್ಯಂತ ಎಲ್ಲರ ಗಮನ ಸೆಳೆದಿತ್ತು. ಆದರೂ ಮೇನ ಆ ಮುಷ್ಕರ, ಒಂದು ವರ್ಗದ ಕಾರ್ಮಿಕರ ತೀವ್ರವಾದದಿಂದ ಇದ್ದಕ್ಕಿದ್ದಂತೆ ಸ್ಪೋಟವಾಗಿರಲಿಲ್ಲ. ಅಥವ ಅದು ಅಕ್ಟೋಬರ್ 1973ರಲ್ಲಿ ಜಾರ್ಜ್ ಫನಾಂಡಿಸ್‌ರನ್ನು ಭಾರತದ ರೈಲ್ವೆಮೆನ್ ಒಕ್ಕೂಟದ ಮುಂದಾಳತ್ವವನ್ನ (All India railwyman’s federation) ವಹಿಸಿಕೊಳ್ಳಲು ಆಯ್ಕೆ ಮಾಡಿದಾಗ ಪುಟಿದದ್ದೂ ಆಗಿರಲಿಲ್ಲ. ಆದರೆ ಯಾವುದೇ ಒಂದು ಸಂಕಟದ ಪರಿಸ್ಥಿತಿಯಲ್ಲಿ ಬರೀ ಗಾಳಿಯ ವೇಗಕ್ಕೆ ಒಂದು ಕಟ್ಟಡವನ್ನ ಕೆಳಗುರುಳಿಸುವಷ್ಟು ಸಾಧ್ಯವಾಗುವ ರೀತಿಯಲ್ಲಿಯೇ ಈ ಮೇ ತಿಂಗಳ ಮುಷ್ಕರ ಉಂಟಾಗಿದ್ದರೆ, ಅದರ ಬೀಜಾಂಕುರವಾಗಿದ್ದು ಬೊಂಬಾಯಿಯಿಂದ ಥಾನೆಯವರೆಗಿನ 1853ರ ಮೂವತ್ತು ಕಿಲೊಮಿಟರ್ ರೈಲ್ವೇ ಪ್ರಯಾಣದಿಂದ.

ರೈಲ್ವೆಯು ಅತ್ಯಂತ ಕಡಿಮೆ ಪ್ರಮಾಣದ ಕೂಲಿಯನ್ನ ಪಡೆಯುತ್ತಿದ್ದ ಕಾರ್ಮಿಕರನ್ನೊಳಗೊಂಡ ಒಂದು ಸಂಸ್ಥೆಯಾಗಿತ್ತು. ಅದು ಕಾರ್ಮಿಕರ ಬಗ್ಗೆ ಅತೀವವಾದ ತಾರತಮ್ಯವನ್ನ ತೋರಿಸುತ್ತಿದ್ದ ಸಂಸ್ಥೆಯಾಗಿತ್ತು. ಅಲ್ಲಿನ ವಾತಾವರಣ ಕಾರ್ಮಿಕರನ್ನ ಘಾಸಿಗೊಳಿಸಿದ್ದಕ್ಕೆ ಕಾರಣ: ಇತಿಮಿತಿ ಇಲ್ಲದ ಕೆಲಸದ ವೇಳೆ, ಪದೇಪದೆ ಅವರಿಗೆ ನಿರಾಕರಿಸಲಾಗುತ್ತಿದ್ದ ಬೋನಸ್, ಕಾರ್ಮಿಕರು ಭವಿಷ್ಯದಲ್ಲಿ ಮುಂಭಡ್ತಿ ಪಡೆಯಲಾರದಂತೆ ನೀಡುತ್ತಿದ್ದ ಕೆಲಸ. ಅವರಿಗೆ ಸಿಗುತ್ತಿದ್ದ ಕನಿಷ್ಟ ವೇತನ ಅವರ ಅಗತ್ಯಗಳಿಗೆ ಅನುಗುಣವಾಗಿರಲಿಲ್ಲ, ಮತ್ತು ಹೊಸದಾಗಿ ಸೃಷ್ಟಿಯಾಗುತ್ತಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕನಿಷ್ಟ ವೇತನಕ್ಕಿಂತ ರೈಲ್ವೆ ನೌಕರರ ವೇತನ ಬಹಳ ಕಡಿಮೆಯಿತ್ತು. ಅವರ AIRF ಒಕ್ಕೂಟದ ಮೂಲಕ ಹೊರಡುತ್ತಿದ್ದ ಧ್ವನಿ ಬಹಳ ಕ್ಷೀಣವಾಗಿರುತ್ತಿತ್ತು. ಕಾರ್ಮಿಕರ ಹಿತಕ್ಕೋಸ್ಕರ ಹೋರಾಡಬಲ್ಲ ಒಬ್ಬ ಜಾರ್ಜ್‌ನ ಅವಶ್ಯಕತೆ ಅವರಿಗಿತ್ತು. ಮೇ ಮುಷ್ಕರ ನಡೆದ ಒಂದು ವರ್ಷದ ನಂತರ, ತುರ್ತು ಪರಿಸ್ಥಿತಿಯನ್ನ ವಿರೋಧಿಸಲು ಜಾರ್ಜ್ ಭೂಗತವಾದಾಗಲೂ, ತಬ್ಬಲಿಯಾಗಿಬಿಟ್ಟ AIRF ಅರಸುತ್ತಿದ್ದುದು, ಸರಿಯಾದ ಸಮಯಕ್ಕೆ ರಭಸದಿಂದ ಬೀಸುವ ಸುಂಟರಗಾಳಿ ಜಾರ್ಜ್‌ರನ್ನೇ.

ಜಾರ್ಜ್‌ರ ರೈಲ್ವೆ ಕಾರ್ಮಿಕರ ಜೊತೆಯ ನಂಟು ಪ್ರಾರಂಭವಾಗಿದ್ದು 1960ರಲ್ಲಿಯೇ. ಅದೇ ವರ್ಷದ ಜುಲೈನಲ್ಲಿ, ರೈಲ್ವೆ ಕಾರ್ಮಿಕರು, ಕೇಂದ್ರ ಸರ್ಕಾರದ ಉದ್ಯೋಗಿಗಳ ಜೊತೆಗೂಡಿ ಇಳಿಮುಖವಾಗಿದ್ದ ಅವರ ವೇತನದ ವಿರುದ್ಧ ರಾಷ್ಟ್ರವ್ಯಾಪಿ ಅನಿರ್ದಿಷ್ಟ ಕಾಲದ ಮುಷ್ಕರವನ್ನ ಹೂಡಿದ್ದರು. ಅದು ನೆಹರೂ ಆಡಳಿತದ ಪ್ರಾರಂಭದ ವರ್ಷಗಳು. ಮುಷ್ಕರ ಪ್ರಾರಂಭವಾಗಿದ್ದು ಜುಲೈ 12ರಂದು, ಆದರೆ ಐದು ದಿನಗಳ ನಂತರ ಅಂದರೆ ಜುಲೈ 17ರಂದು, ಈ ಮುಷ್ಕರವನ್ನ ಯಾವುದೇ ಷರತ್ತುಗಳಿಲ್ಲದೇ ಹಿಂತೆಗೆದುಕೊಳ್ಳಲಾಯಿತು. ಕೈಗಾರಿಕಾ ಪ್ರಜಾಪ್ರಭುತ್ವದ ವಕ್ತಾರರಾಗಿದ್ದರೂ ಕೂಡ ನೆಹರು ಕಾರ್ಮಿಕರ ಪ್ರತಿನಿಧಿಗಳನ್ನು ಭೇಟಿ ಮಾಡಲು ತಿರಸ್ಕರಿಸಿದರು. ಈ ಮುಷ್ಕರವನ್ನು ಒಂದು ನಾಗರಿಕ ದಂಗೆ ಎಂದು ಕರೆಯುತ್ತಾ. ಅವರ ಪ್ರಭುತ್ವ ಅನೇಕ ಉದ್ಯೋಗಿಗಳು ಮತ್ತು ಕಾರ್ಮಿಕರನ್ನ ದಸ್ತಗಿರಿ ಮಾಡಿತು, ಅನೇಕರನ್ನ ಕೆಲಸದಿಂದ ಅಮಾನತು ಮಾಡಲಾಯಿತು ಮತ್ತು ಅನೇಕರನ್ನ ವಜಾ ಮಾಡಲಾಯಿತು. ಜುಲೈ 13ನೇ ತಾರೀಖು, ಬೊಂಬಾಯಿಯ ದಾದರ್ ರೈಲ್ವೆ ನಿಲ್ದಾಣದಲ್ಲಿ, ಒಂದು ಮೆರವಣಿಗೆಯ ಮುಂದಾಳತ್ವವನ್ನ ವಹಿಸಿಕೊಂಡಿದ್ದ ಜಾರ್ಜ್ ರೈಲ್ವೇ ಹಳಿಯ ಮೇಲೆ ಮಲಗಿ ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಿದರು. ಮತ್ತು ಅದೇ ಸಮಯದಲ್ಲಿ ಅವರನ್ನ ದಸ್ತಗಿರಿ ಮಾಡಲಾಯಿತು. ಅವರ ಈ ರಹಸ್ಯವಾದ ತುರ್ತು ಆಗಮನದಿಂದ ಕೆರಳಿದ ಪೊಲೀಸರು ಅವರ ಮೇಲೆ ಎರಗಿ ಇನ್ನಿಲ್ಲದಂತೆ ಥಳಿಸಿದರು. ರೈಲಿನ ಹಳಿಯ ಮೇಲಿಂದ ಅವರನ್ನ ದೈಹಿಕವಾಗಿ ಎತ್ತಿಕೊಂಡು ಬರಲಾಯಿತು. ಅವರು ರಕ್ತಸಿಕ್ತರಾಗಿದ್ದರು ಮತ್ತು ಅವರ ಕೈ ಮೂಳೆ ಮುರಿದಿತ್ತು ಎಂದು ವರದಿಗಳು ಹೇಳಿದವು. ಹಳಿಯ ಮೇಲೆ ಕೊಳೆಯಾಗಿದ್ದ ನಿಲುವಂಗಿಯಲ್ಲಿ ಮಲಗಿದ್ದ ಭಾವಚಿತ್ರ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಸುತ್ತ ಮುತ್ತಿಕೊಂಡಿದ್ದ ಪೊಲೀಸ್ ಪೇದೆಗಳೂ ಆ ಚಿತ್ರದಲ್ಲಿ ಕಾಣಿಸುತ್ತಿದ್ದರು. ಆದರೆ ಅವರಿಗೆ ಥಳಿಸಿದ್ದನ್ನು ಪೊಲೀಸ್ ಮೂಲ ನಿರಾಕರಿಸಿತು. ಆದರೆ, ಅದೇ ಸಮಯದಲ್ಲಿ ಅವರು ಒಪ್ಪಿಕೊಂಡಿದ್ದು, ಹಳಿಗಳನ್ನ ಪ್ರತಿಭಟನಕಾರರಿಂದ ವಿಮುಕ್ತಿಗೊಳಿಸಲೋಸುಗ ಲಾಠಿ ಚಾರ್ಜ್ ಮಾಡಲಾಯಿತು ಎಂದು. ಆ ಸಮಯದಲ್ಲಿ ಜಾರ್ಜ್‌ಗೆ ಕೂಡ ಏಟು ಬಿದ್ದಿತು ಎಂದು ಹೇಳಿದರು. ಇನ್ನೂ ಮುಂದುವರಿದು ರೈಲ್ವೇ ಸಂಚಾರಕ್ಕೆ ಅಡ್ಡಿಗೊಳಿಸಿದರೆಂದು ಜಾರ್ಜ್ ಮೇಲೆ ಮೊಕದ್ದಮೆ ಹೂಡಲಾಯಿತು. ಒಂದು ವರ್ಷದ ಕೋರ್ಟಿನಲ್ಲಿನ ವಿಚಾರಣೆಯ ನಂತರ, ಅವರಿಗೆ ಎರಡು ತಿಂಗಳ ಕಠಿಣ ಶಿಕ್ಷೆಯನ್ನ ವಿಧಿಸಲಾಯಿತು.

ಆ ದಿನಗಳಲ್ಲೆಲ್ಲಾ ಜಾರ್ಜ್ ಮಹಾರಾಷ್ಟ್ರದ ವಿಸಾಪುರ ಜೈಲಿನಲ್ಲಿ ಒಂಟಿಯಾಗಿ ತಮ್ಮ ಸಮಯವನ್ನ ಕಳೆದರು. ಅವರ ಕೈಗೆ ಬೇಡಿ ಹಾಕಿ ಕರೆದುಕೊಂಡು ಹೋಗಲಾಯಿತು. ’ನಾನದನ್ನ ವಿರೋಧಿಸಿದ್ದೆ’ ಎಂದು ತಾವು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದಾಗ, ಅವರ ಜ್ಞಾಪಕ ಶಕ್ತಿಯುಲ್ಲಾ ನಶಿಸಿಹೊಗುತ್ತಿದ್ದಾಗ ಹೇಳಿದ್ದರಂತೆ.

***

1968, ಸೆಪ್ಟಂಬರ್ ಹತ್ತೊಂಬತ್ತರಂದು ಪುನಃ ಒಂದು ದಿನದ ಸಾಂಕೇತಿಕ ಮುಷ್ಕರವನ್ನ ರೈಲ್ವೆ ಕಾರ್ಮಿಕರು ಕೈಗೊಂಡರು. 1600 ರೈಲ್ವೆ ಕಾರ್ಮಿಕರನ್ನ ಕೆಲಸದಿಂದ ವಜಾ ಮಾಡಲಾಯಿತು. ಇದಾದ ಒಂದು ವರ್ಷದ ನಂತರ, ಅವರನ್ನೆಲ್ಲಾ ಕರುಣೆಯ ಆಧಾರದ ಮೇಲೆ ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳಬೇಕೆಂದು ಲೋಕಸಭೆಯಲ್ಲಿ ಅನೇಕ ಸದಸ್ಯರು ಆಗ್ರಹಪಡಿಸಿದರು. ಆದರೆ ಜಾರ್ಜ್ ಫನಾಂಡಿಸ್, ತಮ್ಮ ಸ್ಫೂರ್ತಿದಾಯಕವಾದ ಭಾಷಣವನ್ನ ಮಾಡಿದರು. ಎಲ್ಲರನ್ನೂ ಯಾವುದೇ ಷರತ್ತುಗಳಿಲ್ಲದೇ ಪುನಃಸ್ಥಾಪಿಸಬೇಕೆಂದು ಅವರು ಆಗ್ರಹಪಡಿಸಿದರು. “ನಮ್ಮಲ್ಲಿ ಶಕ್ತಿ ಕುಂದಿರಬಹುದು, ಆದರೆ ನಮ್ಮಲ್ಲಿರುವಷ್ಟೇ ಶಕ್ತಿಯನ್ನ ಉಪಯೊಗಿಸಿಕೊಂಡು ನಾನು ನಿಮಗೆ ಎಚ್ಚರಿಕೆ ನೀಡಬಯಸುತ್ತೇನೆ; ಈ ಲೋಕಸಭೆಯ ಹೊರಗಿರುವ ಶಕ್ತಿಯನ್ನೂ ಬಳಸಿಕೊಂಡು ಎಲ್ಲಾ ವಜ ಮಾಡಿದ ನೌಕರರನ್ನು ಪುನಃಸ್ಥಾಪಿಸಬೇಕೆಂದು ಹೋರಾಡುತ್ತೇವೆ. ಈಗಿನ ಕಾರ್ಮಿಕ ಆಂದೋಲನ ಕೈಯೊಡ್ಡುವ ಕಾಲವನ್ನಾಗಲೇ ದಾಟಿ ಮುಂದೆ ಸಾಗಿದೆ. ಈ ಸರ್ಕಾರ ಕಾರ್ಮಿಕರ ಸಂಕಷ್ಟವನ್ನ ಪರಿಗಣಿಸುವಲ್ಲಿ ಒಂದು ರೀತಿಯ ವರ್ಗ ತಾರತಮ್ಯವನ್ನ ತೋರುತ್ತಿದೆ. ವೈದ್ಯರು ಮುಷ್ಕರ ಹೂಡಿದಾಗ, ಹೊರ ರೋಗಿ ಚಿಕಿತ್ಸಾ ಕೇಂದ್ರಗಳಲ್ಲಿ ರೋಗಿಗಳನ್ನ ಕೇಳುವವರೇ ಇಲ್ಲದಾಗ, ಸರ್ಕಾರ ಮುಷ್ಕರ ಹೂಡಿದವರನ್ನ ಪುಸಲಾಯಿಸಿತು, ಅವರಿಗೆ ಬೇಕಾದ ಸವಲತ್ತುಗಳನ್ನ ನೀಡಿತು, ಆದರೆ ಮುಷ್ಕರ ಹೂಡಿದ ರೈಲ್ವೆ ಕಾರ್ಮಿಕರ ಮೇಲೆ ಯಾವುದೇ ರೀತಿಯ ಕರುಣೆ ತೋರದೆ ಮತ್ತು ಯಾವುದೇ ಸಂಕೋಚವಿಲ್ಲದೇ ಹಿಂಸೆಯ ಮಾರ್ಗದಿಂದ ಹತ್ತಿಕ್ಕಲು ನೋಡಿತು, ಅನೇಕರನ್ನ ಅಮಾನತಿನಲ್ಲಿಟ್ಟಿತು ಮತ್ತು ವಜಾಗೊಳಿಸಿತು. ಈಗ ವ್ಯಗ್ರಗೊಳ್ಳದೇ, ಜಿಗುಪ್ಸೆ ಹೊಂದದೇ ಇರುವ ಒಬ್ಬ ನೌಕರನೂ ಕೂಡ ಉಳಿದಿಲ್ಲ.”

ಇಡೀ 1960ರಲ್ಲಿ ಜಾರ್ಜ್‌ರ ಕಾರ್ಮಿಕ ಹೋರಾಟದ ಖ್ಯಾತಿ ಪ್ರತಿಧ್ವನಿಸುತ್ತಲೇ ಇತ್ತು. ಅವರು ಅದರ ಬಗ್ಗೆ ಉತ್ಸುಕರಾಗಿ ಇದ್ದರೂ ಅಥವ ಇಲ್ಲದಿದ್ದರೂ ಕೂಡ, ಅದು ಪ್ರಶ್ನೆಯಾಗುತ್ತಿರಲಿಲ್ಲ, ಕಾರಣ ಆಯಸ್ಕಾಂತ ಕಬ್ಬಿಣದ ಚೂರುಗಳನ್ನ ಆಕರ್ಷಿಸುವ ರೀತಿಯಲ್ಲಿ ರೈಲ್ವೆ ಸಂಸ್ಥೆ ಅವರನ್ನ ಆಕರ್ಷಿಸಿತ್ತು. ಬಹಳಷ್ಟು ಕಾಲ ಅನಿವಾರ್ಯವಾಗಿ ರೈಲ್ವೆ ಕಾರ್ಮಿಕರ ಮುಂದಾಳತ್ವವನ್ನ ವಹಿಸಿಕೊಂಡಿದ್ದರು. ಮಾರ್ಚ್ 1971ರ ಚುನಾವಣೆಯಲ್ಲಿನ ಅವರ ಸೋಲು ಅವರ ನೈತಿಕ ಶಕ್ತಿಯನ್ನ ಅಡಗಿಸಲು ಸಫಲವಾಗಲಿಲ್ಲ. ಅದರ ಬದಲು ಆ ಗುರಿಯನ್ನ ತಲುಪಲು ಅವಿರತವಾಗಿ ತಮ್ಮನ್ನೇ ತಾವು ಸಿದ್ಧಪಡಿಸಿಕೊಂಡರು. ತನ್ನ ಅಸಂಬದ್ಧತೆ ಮತ್ತು ಪ್ರಲಾಪಗಳ ಜೊತೆಗೇ, ಕೆಲವು ಬಾರಿ ಬೆದರಿಕೆ ಹಾಕುತ್ತಾ, ಕೆಲವು ಬಾರಿ ಬೆದರಿಕೆಗಳನ್ನ ಎದುರಿಸುತ್ತಾ, ರೈಲ್ವೆ ಕಾರ್ಮಿಕ ಒಕ್ಕೂಟ ಮತ್ತು AIRF ಕೂಡ ಯಾವಾಗಲೂ ಇದ್ದೇ ಇತ್ತು. ಇತ್ತೀಚೆಗೆ ಅದು ತನ್ನದೇ ಹಿತರಕ್ಷಣೆಗೋಸ್ಕರ ಅಧಿಕಾರಶಾಹಿಯಾಗಿಬಿಟ್ಟಿತ್ತು, ಮತ್ತು ಈಗ ಅದನ್ನ ಅಧಿಕಾರಿಗಳು ನಿರ್ಲಕ್ಷಿಸಿಬಿಟ್ಟಿದ್ದರು. ಅದರ ಆದ್ಯತೆ ಈಗ ಅಧಿಕಾರಶಾಹಿಗಳಿಂದ ಪೋಷಣೆಯನ್ನ ಪಡೆಯುವುದಾಗಿತ್ತು. 1924ರಲ್ಲಿ ಸ್ಥಾಪಿತವಾದ AIRF ಬಹಳಷ್ಟು ಕಾಲ ರೈಲ್ವೆ ಕಾರ್ಮಿಕರ ಬೇಡಿಕೆಗಳನ್ನ ಮುಂದಿಡುವುದಕ್ಕೆ ಇದ್ದ ಒಂದೇ ಒಕ್ಕೂಟವಾಗಿತ್ತು. ನಿಧಾನವಾಗಿ ಸಮಾಜವಾದಿಗಳು ಅದರ ಮೇಲೆ ತಮ್ಮ ಪ್ರಾಬಲ್ಯವನ್ನ ಸ್ಥಾಪಿಸಿದರು. ಆದರೆ ಸ್ವಾತಂತ್ರ್ಯ ಬಂದ ತಕ್ಷಣವೇ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನ ಸ್ಥಾಪಿಸಲು ಇಷ್ಟಪಟ್ಟಿತು. ಅದು ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ರೈಲ್ವೆಮೆನ್ (NFIR) ಎಂಬ ಕಾರ್ಮಿಕ ಒಕ್ಕೂಟವನ್ನ ಹುಟ್ಟು ಹಾಕಿತು. AIRF ಬೇಡಿಕೆಗಳು ಕಾರ್ಮಿಕರ ಹಿತದೃಷ್ಟಿಯಿಂದ ಇದ್ದರೆ NFIR ಎಲ್ಲಾ ಸಂದರ್ಭಗಳಲ್ಲಿ ರೈಲ್ವೇ ಅಧಿಕಾರಿಗಳ ಪರ ಇದ್ದು, ಕಾರ್ಮಿಕರ ಬೇಡಿಕೆಗಳನ್ನ ನಿಸ್ತೇಜಗೊಳಿಸುತ್ತಿತ್ತು.

***

ಮೇ 2ರ ಮುಂಜಾವೆಯೇ ಜಾರ್ಜ್‌ರನ್ನು ಲಕ್ನೊ ರೈಲ್ವೆ ನಿಲ್ದಾಣದ ನಿರೀಕ್ಷಣಾ ಕೋಣೆಯಲ್ಲಿ ಎಬ್ಬಿಸಲಾಯಿತು. ಅವರು ನವದೆಹಲಿಯಿಂದ ರೈಲ್ವೆ ಕಾರ್ಮಿಕರನ್ನು ಉದ್ದೇಶಿಸಿ ಮೇ ಡೇ ಭಾಷಣ ಮಾಡಲು ಬಂದಿದ್ದರು. ಈಗ ಡೆಲ್ಲಿಯಿಂದ ಬಂದ ಪೊಲೀಸ್ ಟೀಮ್ ಅವರ ರೂಮಿನ ಬಾಗಿಲನ್ನ ತಟ್ಟಿದರು ಮತ್ತು ಜಾರ್ಜ್‌ರನ್ನು ಹೊರಡಲು ತಯಾರಾಗುವಂತೆ ಹೇಳಿದರು. ಅವರನ್ನ ಮೇಲಿನ ಮಹಡಿಯಿಂದ ಪ್ಲಾಟ್ಫಾರಮ್‌ಗೆ ಕರೆತರಲಾಯಿತು ಮತ್ತು ಪ್ಲಾಟ್‌ಫಾರಮ್‌ನಲ್ಲಿ ಸಮವಸ್ತ್ರ ಧರಿಸಿದ್ದ ಪೋಲಿಸರು ಮಾತ್ರ ಇದ್ದರು.

ಅವರನ್ನು ದಸ್ತಗಿರಿ ಮಾಡಿ ಸರ್ಕಾರಿ ವಿಮಾನವೊಂದರಲ್ಲಿ ಡೆಲ್ಲಿಗೆ ಕರೆತರಲಾಯಿತು. ಅದೇ ಸಮಯಕ್ಕೆ ರೈಲ್ವೇ ಮಂತ್ರಿಯ ವಾಹನ ಚಾಲಕ ಲೈಲ ಫರ್ನಾಂಡಿಸ್ ಅವರ ಡೆಲ್ಲಿಯ ನಿವಾಸದಲ್ಲಿನ ಬಾಗಿಲನ್ನ ತಟ್ಟಿದ. ಅಂದು ತನ್ನ ಶಿಶುವಿನ ಕಾರಣದಿಂದ ನಿದ್ದೆಗೆಟ್ಟಿದ್ದ ಲೈಲ ಅಸ್ವಸ್ಥರಾಗಿಯೇ ಬಾಗಿಲ ತೆಗೆದರು. ಆಗಿನ ರೈಲ್ವೆ ಮಂತ್ರಿ ಲಲಿತ್ ನಾರಾಯಣ ಮಿಶ್ರ ಅವರ ಪತ್ರವನ್ನು ಲೈಲ ಅವರಿಗೆ ಡ್ರೈವರ್ ಕೊಟ್ಟ. ಆ ಪತ್ರದಲ್ಲಿ ಜಾರ್ಜ್‌ನ ಕಾರಣದಿಂದ ಮಾತುಕತೆಗಳು ವಿಫಲಗೊಂಡವು ಎಂದು ದೂಷಿಸಲಾಗಿತ್ತು ಮತ್ತು ಅದೇ ಕಾರಣಕ್ಕೆ ಜಾರ್ಜ್‌ರನ್ನು ದಸ್ತಗಿರಿ ಮಾಡುತ್ತಿದ್ದೇವೆ ಅಂತಲೂ ಬರೆದಿತ್ತು. ಜಾರ್ಜ್ ಇದನ್ನ ಒಂದು ದ್ರೋಹದ ಕಾರ್ಯ ಎಂದು ಕರೆದರು ಮತ್ತು ಪರಸ್ಪರ ಆರೋಪಗಳು ಪ್ರಾರಂಭಗೊಂಡವು.

ಇದೇ ಕಾರಣಕ್ಕೆ ವಿರೋಧ ಪಕ್ಷದ ಧುರೀಣರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಇಂದ್ರಜಿತ್ ಗುಪ್ತ ಮುಂತಾದ ನಾಯಕರುಗಳು ಲೋಕಸಭೆಯಲ್ಲಿ ಈ ದಸ್ತಗಿರಿಯನ್ನ ಖಂಡಿಸಿದರು. ಇದು ಮೊದಲನೆಯ ಬಾರಿ ವಿರೋಧ ಪಕ್ಷಗಳ ಸಮ್ಮಿಲನಕ್ಕೆ ನಾಂದಿ ಹಾಡಿತು.

(ರಾಹುಲ್ ರಾಮಗುಂಡಂ ಅವರು ಬರೆದಿರುವ ಈ ಪುಸ್ತಕವನ್ನು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಸಂಸ್ಥೆ ಪ್ರಕಟಿಸಿದೆ. ಈ ಭಾಗವನ್ನು ಪ್ರಕಟಿಸಲು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಸಂಸ್ಥೆ ಅನುಮತಿಸಿದೆ)

(excerpted with permission from Penguin Random House India)

ಕನ್ನಡಕ್ಕೆ: ಕೆ ಶ್ರೀನಾಥ್


ಇದನ್ನೂ ಓದಿ: ’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...