HomeUncategorized’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

- Advertisement -
- Advertisement -

ಪಾರಬತಾಬಾಯಿ ಮೇಶ್ರ್ರಾಮ್
ನಾವು ಪಾರಬತಾಬಾಯಿಯವರನ್ನು ಕಾಣಲು ಹೋದಾಗ ರಾತ್ರಿ ಒಂಬತ್ತು ಗಂಟೆಯಾಗಿತ್ತು. ಅಲ್ಲಿ ಸುಮಾರು 60 ವಯಸ್ಸಿನ, ಕೆದರಿದ ಬಿಳಿಗೂದಲಿನ ಮಾಸಲು ಸೀರೆಯುಟ್ಟ ಮಹಿಳೆಯನ್ನು ಕಂಡೆವು. ಎತ್ತರವಿದ್ದ ಅವರದು ಸಾಧಾರಣ ಮೈಕಟ್ಟು. ಮಂಚದ ಮೇಲೆ ಕುಳಿತಿದ್ದರು. ಅವರ ಪಕ್ಕ ಕುಳಿತು ನಾವು ಬಂದ ಕಾರಣವನ್ನು ಹೇಳಿದೆವು. ಟೇಪ್ ರೆಕಾರ್ಡರ್ ಚಾಲು ಮಾಡಿದೆವು. ಅವರು ಮಾತನಾಡತೊಡಗಿದರು.

“ನನಗೆ ಬಾಬಾಸಾಹೇಬರೆಂದರೆ ಬಹಳ ಹೆಮ್ಮೆ. ಸಣ್ಣ ಮಗುವಿರುವಾಗಲೇ ನಾನು ಬೀಡಿ ಕಟ್ಟುವುದನ್ನು ಕಲಿತೆ. ಅದು ಶಾಲೆಗೆ ಹೋಗುವ ವಯಸ್ಸು, ಆದರೆ ಹೊಟ್ಟೆಪಾಡೇ ದೊಡ್ಡದಾಗಿದ್ದ ಕಷ್ಟದ ಕಾಲವದು. ಒಳ್ಳೆಯ ಬಟ್ಟೆಗಳಾಗಲಿ, ಹೊಟ್ಟೆ ತುಂಬುವಷ್ಟು ಊಟವಾಗಲಿ, ಅನ್ನ ಬೇಯಿಸುವ ಮಡಿಕೆಯಾಗಲಿ ತಕ್ಕಷ್ಟು ಇಲ್ಲದ ಕಡುಬಡತನ. ನನ್ನ ತಾಯಿ ಬೀಡಿ ಕಟ್ಟುವುದನ್ನು ನೋಡುತ್ತಿದ್ದ ನಾನು ಅವರಿಗೆ ಸಹಾಯವಾಗಲೆಂದು ಅವರೊಡನೆ ಕೂತು ಅದನ್ನೆ ಮಾಡುವುದನ್ನು ಕಲಿತೆ. ಅದೇ ನಿತ್ಯ ಕರ್ಮವಾಯಿತು. ಬೆಳಗ್ಗೆ ಎದ್ದು ಇದ್ದ ಒಂದೇ ಮಡಿಕೆ ತೊಳೆದು, ಅಮ್ಮನಿಗೆ ಅಡುಗೆಗೆ ಸಹಾಯ ಮಾಡಿ ನಂತರ ಕೂತು ಬೀಡಿ ಕಟ್ಟುತ್ತಿದ್ದೆ. ನನ್ನ ಮೂಲದ ಹೆಸರು ಸುಭದ್ರಬಾಯಿ ಲೋನರೆ. ನಾನು ಹತ್ತು ವರ್ಷದವಳಾದಾಗಿನಿಂದಲೂ ಬಾಬಾಸಾಹೇಬರ ಬಗ್ಗೆ ಮತ್ತು ಅವರು ನಮ್ಮ ಸಮಾಜಕ್ಕಾಗಿ ಮಾಡುತ್ತಿದ್ದ ಕೆಲಸದ ಬಗ್ಗೆ ಕೇಳಿದ್ದೆ. ಮದುವೆಯಾಗುವ ಮುಂಚಿನಿಂದಲೂ ಬಾಬಾಸಾಹೇಬರು ಮಾಡುತ್ತಿದ್ದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೆ. ಮದುವೆಯ ನಂತರ ನಾನು ರಾಧಾಬಾಯಿ ಕಾಂಬ್ಳೆ ಮತ್ತು ಸೀತಾ ಪೈಲ್ವಾನ್ (ಧರ್ಮಪೇಟೆಯ ಸೀತಾಬಾಯಿ ಕೃಷ್ಣರಾವ್ ಪಾಟೀಲ್) ಅವರೊಂದಿಗೆ ಸಭೆಗಳು ಮತ್ತು ಮೆರವಣಿಗೆಗೆ ಹೋಗುತ್ತಿದ್ದೆ. ಬಾಬಾಸಾಹೇಬರ ಕೆಲಸದ ವ್ಯಾಪಕತೆಯನ್ನು ಕಂಡು ನನ್ನ ಹೃದಯವು ಧನ್ಯತೆಯಿಂದ ತುಂಬಿ ಬರುತ್ತಿತ್ತು. ಬಾಬಾಸಾಹೇಬರ ಚಳವಳಿಗಾಗಿ ನನ್ನಿಂದಾಗುವ ಅತ್ಯುತ್ತಮ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದೆ. ಅಂಥ ಅವಕಾಶ ನನಗೆ ಬೇಗನೇ ಸಿಕ್ಕಿತು.

ಆ ಸಮಯದಲ್ಲಿ ರಾಧಾಬಾಯಿಯವರು ನಾಗಪುರದ ಜಿನ್ನಿಂಗ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಹೊರಗೆ ಬರುವ ಮಹಿಳೆ ಮತ್ತು ಪುರುಷ ಕಾರ್ಮಿಕರನ್ನು ಸೇರಿಸಿ ಗೇಟಿನ ಬಳಿಯಲ್ಲಿ ಸಭೆಯನ್ನು ಮಾಡುತ್ತಿದ್ದರು. ಅಬ್ಬಾ ಅವರು ಅದೆಷ್ಟು ಚೆನ್ನಾಗಿ ಮಾತನಾಡುತ್ತಿದ್ದರೆಂದರೆ ಎಲ್ಲರೂ ನಿಂತು ಕೇಳುತ್ತಿದ್ದರು. ಅವರ ಆವೇಶದ ಭಾಷಣಕ್ಕೆ ಜನರು ಆಕರ್ಷಿತರಾಗುತ್ತಿದ್ದರು. ನಾಲ್ಕನೇ ತರಗತಿಯವರೆಗೆ ಮಾತ್ರ ಓದಿದ್ದ ರಾಧಾಭಾಯಿಯವರು ಬಾಬಾಸಾಹೇಬರ ಚಳವಳಿಯಲ್ಲಿ ಬೇರೆ ಮಹಾನ್ ನಾಯಕರುಗಳಿಗಿಂತಲೂ ಹೆಚ್ಚು ಉತ್ಕಟವಾಗಿ ತೊಡಗಿಕೊಂಡಿದ್ದರು. ನನಗೂ ಸಹ ಅವರೊಂದಿಗೆ ಕೆಲಸ ಮಾಡಬೇಕೆನಿಸಿತು. ಆದರೆ ನಾನು ಮನೆಯಲ್ಲಿ ಅವರು ಮಿಲ್ಲಿನಲ್ಲಿ ಇದ್ದುದರಿಂದಾಗಿ ಸಾಧ್ಯವಾಗಲಿಲ್ಲ.

ಮುಂದೆ ಬಾಬಾಸಾಹೇಬರು ಚುನಾವಣೆಯಲ್ಲಿ ಸ್ಪರ್ಧಿಸಿದರು. ಹಳ್ಳಿಯ ಬಸ್ತಿ ಮತ್ತು ಮೊಹಲ್ಲಗಳಲ್ಲಿ ಬಿರುಸಿನ ಪ್ರಚಾರಾಂದೋಲನ ಸಭೆಗಳು ನಡೆದವು. ಆಗ ನಾನು ಮತ್ತು ಸೀತಾಬಾಯಿ ಪೈಲ್ವಾನ್ ಹಾಗೂ ರಾಧಾಬಾಯಿ ಕಾಂಬ್ಳೆಯವರೊಂದಿಗೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದೆ. ಹರ್‌ದಾಸ್ ಬಾಬು ಆವಳೆಯವರು ಕಾಮಠಿಯಲ್ಲಿ ಸ್ಪರ್ಧಿಸಿದ್ದರು. ಭಂಡಾರ್ರಾ, ಗೊಂದಿಯಾ, ಇಂದೋರ ಮತ್ತು ಕಾಮಠಿಗೆ ಪ್ರಚಾರಕ್ಕೆಂದು ನಾವು ಹೋದೆವು. ನಮ್ಮ ಜೊತೆಯಲ್ಲಿ ಬಿ.ಪಿ.ಮೌರ್ಯ, ಆರ್.ಡಿ. ಭಂಡಾರೆ, ಖೊಬ್ರಾಗಡೆ, ಕಾಂಬ್ಳೆ, ಆವಳೆ ಮತ್ತಿತರರು ಇದ್ದರು.

ಆ ದಿನಗಳಲ್ಲಿ ಸೀತಾ ಪೈಲ್ವಾನ್ ಅವರು ಲೆಂಧ್ರಾ ಪಾರ್ಕಿನ ಹತ್ತಿರ ವಾಸಿಸುತ್ತಿದ್ದರು. ಸಭೆಗಳು ನಡೆದಾಗ ನನ್ನನ್ನು, ರಾಧಾಬಾಯಿ ಮತ್ತು ಸೀತಾಬಾಯಿಯವರನ್ನು ಭಾಗವಹಿಸಲು ಕರೆಯುತ್ತಿದ್ದರು. ನಾವೆಲ್ಲ ಒಟ್ಟಿಗೆ ಹೋಗುತ್ತಿದ್ದೆವು. ನನ್ನ ಚಿಕ್ಕಪ್ಪ ಚಂದ್ರಭಾನ್ ಜೋಶಿ ಮಾಸ್ತರ್ ಖ್ಯಾತ ಪೈಲ್ವಾನರಾಗಿದ್ದರಲ್ಲದೆ ಮುಖಂಡರೂ ಆಗಿದ್ದರು. ತುಲಶಿರಾಮ್ ಪೈಲ್ವಾನ್ ಅವರ ಮಗ ಭುಜಂಗ್ ಪೈಲ್ವಾನ್, ಚಂದ್ರಿಕಾಪುರೆಬಾಯಿ, ಕಾಂಬ್ಲೆಬಾಯಿಯವರುಗಳೂ ಸಭೆಗೆ ಹೋಗಲು ಜೊತೆಯಾಗುತ್ತಿದ್ದರು.

ಜೈಬಾಯಿ ಚೌಧರಿಯವರು ಸದರ್ ಕ್ಯಾಂಪ್‌ನಲ್ಲಿ ವಾಸವಾಗಿದ್ದರು. ಹರ್‌ದಾಸ್‌ಬಾಬು ಆವಳೆಯವರು ಲಷ್ಕರಿಬಾಗ್‌ನಲ್ಲಿ ವಾಸವಾಗಿದ್ದರು. ಬಾಬಾಸಾಹೇಬರ ಆಂದೋಲನಕ್ಕಾಗಿ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ನಮ್ಮ ಮೇಲೆ ಅನ್ಯಾಯವಾದಾಗ ಅಥವಾ ಹಲ್ಲೆಗಳಾದಾಗ ನಾವುಗಳು ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದೆವು. ಕಾಮಠಿ, ಕನ್ಹಾನ್, ಇಂದೋರಾ, ಟೇಕಾ, ಇಮಾಮ್‌ವಾಡಾ, ಘಾರ್ಟುರ್ಲಿ, ಭಾನ್‌ಖೇಡಾ ಮತ್ತು ಶಾಂತಿನಗರ ಹೀಗೆ ಎಲ್ಲೆಡೆಯಿಂದ ಜನರು ಬರುತ್ತಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಹೇಳಿದರೆ ಸಾಕು, ಅದನ್ನು ಜನರು ತಮ್ಮ ಜೀವದಂತೆ ಭಾವಿಸುತ್ತಿದ್ದರಲ್ಲದೆ ಒಗ್ಗಟ್ಟಾಗಿರುತ್ತಿದ್ದರು. ಈ ನಾಯಕರುಗಳೆಲ್ಲ ತಮ್ಮ ಜೀವನವನ್ನೇ ಚಳವಳಿಗಾಗಿ ಮುಡಿಪಾಗಿಟ್ಟಿದ್ದರೆಂಬ ಕಾರಣಕ್ಕಾಗಿಯೇ ಜನರು ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಬಾಬಾಸಾಹೇಬರ ಆಂದೋಲನಕ್ಕಾಗಿ ನಾವು 1946ರಲ್ಲಿ ಮೆರವಣಿಗೆಯನ್ನು ಹಮ್ಮಿಕೊಂಡೆವು. ಆ ಮೆರವಣಿಗೆ ಐದು ಮೈಲಿ ಉದ್ದವಿತ್ತು. ಮೆರವಣಿಗೆಯಲ್ಲಿ ನಡೆಯುತ್ತ ನಾವು ಕೂಗುತ್ತಿದ್ದ ಘೋಷಣೆಗಳೆಂದರೆ

ದಲಿತರ ನೀಲಿಬಣ್ಣದ ಬಾವುಟವು ನಮ್ಮ ಜೀವಕ್ಕಿಂತಲೂ ಮಿಗಿಲು
ನಾವಾಗಬೇಕು ಆಳುವ ಸಮುದಾಯ
ಇದು ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಷನ್‌ನ ಘೋಷಣೆ
ಯಾರು ಅಂಬೇಡ್ಕರ್, ಆತ ದಮನಿತರ ರಾಜಾ
ಕ್ರಾಂತಿ ಚಿರಾಯುವಾಗಲಿ, ಬರಲಿದೆ ಭೀಮರಾಜ್ಯ
ಪೂನಾ ಒಪ್ಪಂದವನ್ನು ವಿರೋಧಿಸಿ ನಡೆಸಿದ
ಮೆರವಣಿಗೆಯಲ್ಲಿ ಕೂಗುತ್ತಿದ್ದ ಘೋಷಣೆಗಳೆಂದರೆ:
ಗಾಂಧಿಯವರ ನಾಲ್ಕಾಣೆ ಕಾಸು ಮುರಿದಿದೆ
ಕೂಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲೆಂದು!
ಲೆಫ್ಟ್ ರೈಟ್ ಲೆಫ್ಟ್ ರೈಟ್ ಹೊರಡುತ್ತೇವೆ ಮೆರವಣಿಗೆ
ಅಂಬೇಡ್ಕರ್ ಸೇನೆ ಬಂತು, ಓಡಿಹೋದರು ಗಾಂಧಿ

ಬಾಬಾಸಾಹೇಬರು 1941ರಲ್ಲಿ ನಾಗಪುರಕ್ಕೆ ಬಂದಿದ್ದರು. ಆಗಷ್ಟೆ ಅವರನ್ನು ಕಾರ್ಮಿಕ ಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ನಾವೆಲ್ಲರೂ ರೈಲ್ವೆ ನಿಲ್ದಾಣಕ್ಕೆ ಹೋಗಿ ಭವ್ಯವಾದ ಸ್ವಾಗತವನ್ನು ಕೋರಿದ್ದೆವು. ಜನರ ಉತ್ಸಾಹಕ್ಕಂತು ಎಣೆಯೇ ಇರಲಿಲ್ಲ. ಐದು ಸಾವಿರಕ್ಕಿಂತಲೂ ಮಿಗಿಲಾಗಿ ಜನರು ಸೇರಿದ್ದರು. ರಾಧಾಬಾಯಿ ಕಾಂಬ್ಳೆ, ಜೈಬಾಯಿ ಚೌಧರಿ, ಸೀತಾ ಪೈಲ್ವಾನ್ ಹಾಗೂ ಇನ್ನೂ ಸಾವಿರಾರು ಮಹಿಳೆಯರು ಸೇರಿದ್ದರು. ಬ್ಯಾರಿಸ್ಟರ್ ಖೊಬ್ರಾಗಡೆ, ಅಡ್ವೊಕೇಟ್ ಮೇಶ್ರಾಮ್, ಭಂಡಾರೆ, ತಿರ್‌ಪುಡೆ ಮತ್ತಿತರ ನಾಯಕರುಗಳೂ ಬಂದಿದ್ದರು. ಊರಿನ ತುಂಬಾ ಬಾಬಾಸಾಹೇಬರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋದೆವು. ಬೀದಿಯಲ್ಲೆಲ್ಲಾ ಬಾಬಾಸಾಹೇಬರನ್ನು ಕುರಿತು ಘೋಷಣೆಗಳನ್ನು ಕೂಗುತ್ತಿದ್ದೆವು. ಇಡೀ ನಗರವೇ ಘೋಷಣೆಗಳಿಂದ ಮೊಳಗುತ್ತಿತ್ತು.

ಯಾರು ನಮ್ಮ ನಾಯಕರು?
ಡಾ.ಬಾಬಾಸಾಹೇಬ್ ಅಂಬೇಡ್ಕರ್!
ನಮ್ಮ ನಡುವಿನಿಂದ ಅಂಬೇಡ್ಕರ್ ಎದ್ದು ಬಂದಿದ್ದಾರೆ
ದೀಪ ಹಚ್ಚಿದ್ದೇವೆ ನಾವೆಲ್ಲರೂ ಎಲ್ಲ ಮರಗಳಲ್ಲಿ…

ಎಂದು ಮಹಿಳೆಯರು ಹಾಡುತ್ತಿದ್ದರು. ಕೆಲ ದಿನಗಳ ನಂತರ ಚುನಾವಣೆ ನಡೆಯಿತು. ಆದರೆ ನಮ್ಮ ಜನರನ್ನು ಮತ ಹಾಕದಂತೆ ತಡೆಯಲಾಯಿತು. ಆಗಿನ್ನು ನಾವು ಹಿಂದೂಗಳಾಗಿಯೇ ಇದ್ದೆವು. ಆದರೆ ಜಾತಿಯಿಂದ ಮಹಾರರಾಗಿದ್ದೆವು. ಹಾಗಾಗಿ ಹಿಂದೂ ಜನರು ನಮ್ಮ ಮೇಲೆ ಸಿಟ್ಟನ್ನು ಕಾರಿಕೊಳ್ಳುತ್ತಿದ್ದರು. ನಾವು ಅವರನ್ನು ಅಪವಿತ್ರಗೊಳಿಸುತ್ತೇವೆಂದು ಭಾವಿಸಿದ್ದರು. ನಾವು ಸುಧಾರಣೆಗೊಂಡಿರುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.

ಒಮ್ಮೆ ಬಹಳ ದೊಡ್ಡ ಗಲಭೆಯಾಯಿತು. ವಕೀಲರಾದ ಸಖಾರಾಮ್ ಮೇಶ್ರಾಮ್ ಅವರನ್ನು ಪೊಲೀಸರು ಸುತ್ತುವರಿದಿದ್ದಾರೆಂಬ ಸುದ್ದಿಯನ್ನು ನಾವು ಕೇಳಿದೆವು. ನಮ್ಮ ಕಾಲೋನಿಯ ರೂಪ್‌ಚಂದ್, ಗಜ್‌ಭಿಯೆ, ಹುಸೇನ್ ಮತ್ತು ಇತರರು ಅವರನ್ನು ಬಿಡುಗಡೆಗೊಳಿಸಲು ಧಾವಿಸಿದರು. ಬುಧವಾರದಂದು ಘರ್ಷಣೆಯಾಗಿ ಮೂರು ಜನ ದಲಿತರು ಪೊಲೀಸರ ಫೈರಿಂಗ್‌ನಲ್ಲಿ ತೀರಿಕೊಂಡರು. ರಾಮ್‌ದಾಸ್ ಡೊಂಗ್ರೆ, ಸಂಪತ್ ಹುಸೇನ್ ಮತ್ತು ಗಜ್‌ಭಿಯೆಯವರೇ ಹುತಾತ್ಮರಾದ ಮೂವರು. ಶವವನ್ನು ನೀಡಿರೆಂದು ಪೊಲೀಸರನ್ನು ಕೇಳಿದಾಗ ನಿರಾಕರಿಸಿದರು. ನಂತರ ದೆಹಲಿಯಲ್ಲಿದ್ದ ಬಾಬಾರವರನ್ನು ಸಂಪರ್ಕಿಸಲಾಯಿತು. ಅವರು ಪೊಲೀಸರಿಗೆ ಫೋನು ಮಾಡಿದ ನಂತರವೇ ಶವವನ್ನು ನಮಗೆ ನೀಡಿದರು.

ಆ ಸಂದರ್ಭದಲ್ಲಿ ಇಡೀ ನಾಗಪುರವೇ ಪ್ರಕ್ಷುಬ್ಧಗೊಂಡಿತ್ತು. ಗೌರವಾರ್ಥವಾಗಿ ನಡೆಸಿದ ಶವಯಾತ್ರೆಯಲ್ಲಿ ಬೃಹತ್ ಜನಸ್ತೋಮವೇ ನೆರೆದಿತ್ತು. ಮೂವರು ಯುವಕರು ಪೊಲೀಸರ ಗುಂಡಿಗೆ ಬಲಿಯಾದ ಸ್ಥಳವನ್ನು ಘಟನೆಯ ನಂತರ ಗೋಲಿಬಾರ್ ಚೌಕ್ ಎಂದು ಕರೆಯಲಾರಂಭಿಸಿದರು. ಹುತಾತ್ಮರ ನೆನಪಿಗೆ ಜನರು ಹಾಡು ಬರೆದರು.

ಗುಂಡುಗಳು ಸಿಡಿದಾಗ ರಾಮದಾಸ್ ಮುಂದೆ ಹೋದ
ನಗುತ್ತ ಹೇಳಿದ, ನಮಗೆ ಭೀಮನ ಆಶೀರ್ವಾದವಿದೆ.
ಧೀರ ರಾಮದಾಸ್ ಕದನದಲ್ಲಿ ಸೋಲಲಿಲ್ಲ
ಗುಂಡು ಗುಂಡಿಗೆಯ ಸೀಳಿದಾಗ ಚೀರಿದ “ಜೈ ಭೀಮ್”

ಒಮ್ಮೆ ನಾವು ಭಂಡಾರದ ಬಳಿ ಇರುವ ಏಕ್‌ಲಾರಿ ಹಳ್ಳಿಗೆ ಹೋದೆವು. ಮಧ್ಯಾಹ್ನವಾಗಿತ್ತು. ಬಸ್ತಿ ಇನ್ನೂ ದೂರವಿತ್ತು. ನಮಗೆಲ್ಲ ಬಹಳ ಹಸಿವೆಯಾಗಿತ್ತು. ಕುಣುಬಿ ಜಾತಿಯ ಮಹಿಳೆಯೊಬ್ಬಳು ಕುಡಿಯಲು ನಮಗೆ ಹುಳಿಗಂಜಿಯನ್ನು ಮೈಲಿಗೆಯಾಗುವುದೆಂದು ಧಾನ್ಯ ಅಳೆಯುವ ಸೇರಿನಲ್ಲಿ ಕೊಟ್ಟಳು. ಮುಟ್ಟಿಸಿಕೊಳ್ಳದೆ ದೂರ ನಿಂತು ಕೊಟ್ಟ ಗಂಜಿಯನ್ನು ಕುಡಿಯಲಾಗಲಿಲ್ಲ. ಕೋಪದಿಂದ ನಾನು ಗಂಜಿಯನ್ನು ಚೆಲ್ಲಿಬಿಟ್ಟೆ.

ಬಾಬಾಸಾಹೇಬರ ದೆಸೆಯಿಂದಾಗಿ ನಮ್ಮ ಮನದೊಳಗೆ ಆತ್ಮಗೌರವ ಜಾಗೃತವಾಗಿತ್ತು. ಬಾಬಾ ಅವರು “ಮಾನವರೆಂಬ ಹೆಮ್ಮೆ ಎಲ್ಲರೊಳಗೂ ಇರುತ್ತದೆ. ಶಾಲೆಗೆ ಹೋಗಿ ಲಾಠಿ, ಕತ್ತಿ ಝಳಪಿಸುವುದನ್ನು ಕಲಿಯಿರಿ, ಕಸರತ್ತು ಮಾಡಿ. “ಜೈ ಭೀಮ್” ಎಂದು ಹೇಳಿದರಷ್ಟೇ ಸಾಲದು, ಕಾರ್ಯದಲ್ಲಿ ಮಾಡಿ ತೋರಿಸಬೇಕು. ನಿಮ್ಮ ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಕಲಿಸಿ. ದಲಿತರಿಗೊಂದಷ್ಟು ಕಾಳನ್ನು ಎಸೆದು ಅವರ ತಾಳಕ್ಕೆ ತಕ್ಕಂತೆ ಕುಣಿಸಿ ಹರಾಜು ಹಾಕುವುದು ಹಿಂದೂಗಳ ನೈತಿಕತೆಯಾಗಿದೆ (ಆಗ ಬಾಬಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು). ಈ ಚುನಾವಣೆಯಲ್ಲಿ ನಾನು ಸೋತೆನೆಂದು ಅಳಬೇಡಿ. ಅದರಿಂದ ನನಗೇನೂ ಆಗದು. ನನ್ನ ಜೇಬಿನಲ್ಲಿ ಕಾನೂನಿದೆ” ಎಂದು ಹೇಳುತ್ತಿದ್ದರು.

ನಾವೆಲ್ಲರೂ ಅನಕ್ಷರಸ್ಥ, ಅಜ್ಞಾನಿ ಮಹಿಳೆಯರಾಗಿದ್ದೆವು. ಶಾಲೆಯ ಒಳಗೇನಿದೆ ಎಂದು ನಮಗೆ ತಿಳಿದಿರಲಿಲ್ಲ. ಬಾಬಾರವರ ಭಾಷಣ ಕೇಳಿದ ಮೇಲೆ ಸಭೆಗಳಿಗೆ ಹೋಗಬೇಕು, ಪ್ರಯತ್ನ ಪಟ್ಟು ಏನಾದರೂ ಮಾಡಬೇಕೆಂಬ ಸ್ಪೂರ್ತಿಯುಂಟಾಯಿತು. ಸಭೆಗಳಿಗೆ ಹೋಗಲು ಶುರು ಮಾಡಿದೆವು. ಹೀಗೆ ಮನೆಯಿಂದ ಹೊರಗೆ ಬರತೊಡಗಿದೆವು. ನಾವೂ ಏನಾದರು ಮಾಡಬಹುದೆಂಬ ಆತ್ಮವಿಶ್ವಾಸ ನಮ್ಮಲ್ಲಿ ಜಾಗೃತವಾಯಿತು. ಹಾಗಾಗಿ ನಮಗೆ ಹಲವಾರು ವಿಷಯಗಳು ತಿಳಿಯತೊಡಗಿದವು. ಹೊರಜಗತ್ತಿನ ಜ್ಞಾನವನ್ನು ಪಡೆದುಕೊಂಡೆವು. ನಮ್ಮೊಳಗೆ ಆದ ಬದಲಾವಣೆಯನ್ನು ಅರಿಯತೊಡಗಿದೆವು. ಅನ್ಯಾಯ, ಶೋಷಣೆ ಮತ್ತು ಅವಮಾನಗಳು ಅರಿವಾಗತೊಡಗಿದವು ಮತ್ತು ನಮ್ಮೊಳಗೆ ಅಸ್ಮಿತೆಯ ಭಾವ ಜಾಗೃತವಾಯಿತು. ಸುಮ್ಮನೆ ಕೂತು ಹರಟುವ ಬದಲು ಸಮಾಜಕ್ಕಾಗಿ ಕೆಲಸ ಮಾಡಬೇಕೆನಿಸಿತು. ಹಾಗಾಗಿ ನಮ್ಮನ್ನು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡೆವು.

ಸಮತಾ ಸೈನಿಕ ದಳದಲ್ಲಿ ಹುಡುಗರಿಗೆ ಕೆಂಪು ಅಂಗಿ ಮತ್ತು ಖಾಕಿ ಶರಾಯಿ ಮತ್ತು ಮಹಿಳೆಯರಿಗೆ ಕೆಂಪು ರವಿಕೆ ಮತ್ತು ಬಿಳಿಯ ಸೀರೆಯು ಸಮವಸ್ತ್ರವಾಗಿತ್ತು. ಆಗಿನಿಂದಲೂ ನಾನು ಬಿಳಿಯ ಸೀರೆಯನ್ನೆ ಉಡುತ್ತಿದ್ದೇನೆ. ಉರ್‍ಕುದಜಿ ರಹಟೆಯವರು ಪಾಂಚ್‌ಪಾವಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರೊಬ್ಬ ಹಿರಿಯ ಕಾರ್ಯಕರ್ತರಾಗಿದ್ದರು. ಬೌದ್ಧತತ್ವಗಳ ಉಪದೇಶ ಮಾಡುತ್ತಿದ್ದರು. ಅವರೊಂದಿಗೆ ಬಸ್ತಿಗಳಿಗೆ ಭೇಟಿ ನೀಡುತ್ತಿದ್ದೆವು. ಆ ಕೆಲಸ ಇನ್ನೂ ಮುಂದುವರಿದಿದೆ.

ನಾವು ಅಕ್ಟೋಬರ್ 14, 1956ರಿಂದ ಬೌದ್ಧಧರ್ಮವನ್ನು ಒಪ್ಪಿಕೊಂಡೆವು. ನಮ್ಮ ಮನೆಗಳಲ್ಲಿ ಇದ್ದ ದೇವ, ದೇವತೆಗಳನ್ನು ತೆಗೆದುಹಾಕಿದೆವು. ಈಗ ಬೌದ್ಧ ಧರ್ಮ ಪ್ರಸಾರಕ್ಕಾಗಿ ನನ್ನ ಜೀವನವನ್ನು ಮೀಸಲಿಟ್ಟಿದ್ದೇನೆ. ಈ ಕೆಲಸಕ್ಕಾಗಿ ಹಳ್ಳಿಯಿಂದ ಹಳ್ಳಿಗೆ ತಿರುಗುತ್ತೇವೆ. ಮನ್‌ಗಾಂವ್, ಕಾಟೋಲ್, ಹಿಂಗಣಘಾಟ್ ಬಳಿಯ ಉಮ್‌ರೇಡ್ ಸ್ಥಳಗಳಿಗೆ ನಾವು ಭೇಟಿಕೊಟ್ಟಿದ್ದೇವೆ. ಭಗವಾನ್ ಬುದ್ಧ ಮತ್ತು ಬಾಬಾಸಾಹೇಬರ ಬಗ್ಗೆ ನನಗೆ ಅಚಲವಾದ ನಂಬಿಕೆ ಇದೆ. ಶೀಲ, ಸಮಾಧಿ, ಪ್ರಜ್ಞಾ ತತ್ವಗಳನ್ನು ನಾನು ನಂಬುತ್ತೇನೆ.

ನಾಲ್ಕು ಸತ್ಯಗಳು ಮತ್ತು ಅಷ್ಟಾಂಗ ಮಾರ್ಗಕ್ಕೆ ಅನುಗುಣವಾಗಿ ನಾವು ಬದುಕಬೇಕು. ಬೌದ್ಧಮತವು ಪ್ರಗತಿಯ ಮಾರ್ಗವನ್ನು ತೋರಿಸುತ್ತದೆ. ನಾನು ಇಗತ್‌ಪುರಿಗೆ ಮೂರು ಬಾರಿ ವಿಪಶ್ಯನ ಧ್ಯಾನಶಿಬಿರಕ್ಕೆ ಹೋಗಿದ್ದೇನೆ. ನಮ್ಮದೇ ಮಹಿಳಾ ಮಂಡಲವಿದೆ. ಜನ್ಮದಿನಾಚರಣೆ, ಪೂರ್ಣಿಮೆ, ಶವಸಂಸ್ಕಾರ ಮತ್ತು ಶ್ರದ್ಧಾಂಜಲಿ ಸಭಗಳಿಗೆ ನಮ್ಮನ್ನು ಕರೆದಾಗ ನಾವು ಹೋಗುತ್ತೇವೆ. ಪೂರ್ಣಿಮೆಯಂದು ಉಪವಾಸವಿದ್ದು ಖೀರನ್ನು ಮಾಡುತ್ತೇವೆ. ಪ್ರತಿ ಹುಣ್ಣಿಮೆಯಂದು ಬೌದ್ಧವಿಹಾರದಲ್ಲಿ ಪ್ರಾರ್ಥನೆ ಮತ್ತು ಭಾಷಣಗಳನ್ನು ಮಾಡಲಾಗುತ್ತದೆ. ನಾವು ಬಾಬಾರವರ ಬೌದ್ಧಧರ್ಮ ಕುರಿತ ಹಾಡುಗಳನ್ನು ಹಾಡುತ್ತೇವೆ. ನಾನೇ ಕೆಲವು ಹಾಡುಗಳನ್ನು ರಚಿಸಿ ಹಾಡಿದ್ದೇನೆ.

ಹಾಡು 1

ಜನರ ಒಳಿತಿಗಾಗಿ ಆತ ಜೀವ ತೆತ್ತ
ಅದಕೆ ಬಾಯಿ ನನಗೆ ಬುದ್ಧನೆಂದರೆ ಹುಚ್ಚು
ಕೆಲವರೆನ್ನುತ್ತಾರೆ ಬುದ್ಧ ವಿಷ್ಣುವಿನ ಅವತಾರವೆಂದು
ಆದರೆ ನಾ ನಿಮ್ಮ ಕೇಳುತ್ತೇನೆ ಬಾಯಿ ವಿಷ್ಣು ಬುದ್ಧನಂತಿದ್ದನೆ?
ಬ್ರಹ್ಮ, ವಿಷ್ಣು, ಮಹೇಶ ಅಂತೆ ನಡೆದುಕೊಂಡಿದ್ದರೆ?
ಅದಕ್ಕೆ ಬಾಯಿ ನನಗೆ ಬುದ್ಧನೆಂದರೆ ಹುಚ್ಚು

ಹಾಡು 2

ಸೋದರ, ಸೋದರಿಯರೆ ಬುದ್ಧನ ತಾವಿಗೆ ಬನ್ನಿ
ಪ್ರಾರ್ಥನೆ ಮಾಡುವ ಸಮಯವಿದು
ಕೈಜೋಡಿಸಿ ತಲೆಯ ಬಾಗಿಸಿ
ಪ್ರಾರ್ಥನೆ ಮಾಡುವ ಸಮಯವಿದು
ಪ್ರತಿ ಪದವ ಗಮನವಿಟ್ಟು ಕೇಳಿ
ನಿಮ್ಮ ಲೋಕ ಬಿಡುಗಡೆಯಾಗುವುದು
ಅದನ್ನು ಅವ ನಿಮಗೆ ವಹಿಸಿದ್ದಾನೆ
ಪ್ರಾರ್ಥನೆ ಮಾಡುವ ಸಮಯವಿದು
ನಿಮ್ಮೊಳಗೆ ಆತ್ಮಗೌರವ ಜಾಗೃತವಾಗಲಿ
ಭಿಕ್ಷೆ ಬೇಡಬೇಡಿ
ಎಂದು ಹೇಳಿ ಭೀಮಾನಂದ ಹೋದ
ಜನರ ಸೇವೆಗೆ ಸಿದ್ಧರಾಗಿ ಎಂದು
ನಮ್ಮ ಬದುಕಿನ ಶಿಲ್ಪಿ ನಮಗೆ ಹೇಳಿಹೋದ
ಕೈ ಜೋಡಿಸಿ, ತಲೆಬಾಗಿಸಿ
ಪ್ರಾರ್ಥನೆ ಮಾಡುವ ಸಮಯವಿದು

ಮೊದಲು ನಾನು ಬಣ್ಣ ಬಳಿವ ಕೆಲಸವನ್ನು ಗುತ್ತಿಗೆ ತೆಗೆದುಕೊಳ್ಳುತ್ತಿದ್ದೆ. ರೈಲ್ವೆ ಬಿಲ್ಡಿಂಗ್‌ಗಳಿಗೆ ಸುಣ್ಣ ಹೊಡೆಯುವ ಕೆಲಸವನ್ನು ನಾನು ಮಾಡಿದ್ದೇನೆ. ಈಗ ನನ್ನ ಮಕ್ಕಳು ಕೆಲಸ ಮಾಡಲು ನನ್ನನ್ನು ಬಿಡುವುದಿಲ್ಲ. ಈಗ ನನ್ನ ಬದುಕನ್ನು ಬುದ್ಧನ ಕೆಲಸಗಳಿಗೆ ಮೀಸಲಿಟ್ಟಿದ್ದೇನೆ.”

*****

ಒಂದು ಶತಮಾನ ಕೆಳಗೆ ಮಹಿಳಾ ಹಕ್ಕುಜಾಗೃತಿಯ ಹೋರಾಟಗಳು ಭಾರತದಲ್ಲಿನ್ನೂ ಶೈಶವಾವಸ್ಥೆಯಲ್ಲಿದ್ದ ಕಾಲದಲ್ಲಿ ಮಹಿಳೆಯರು ಗಮನಾರ್ಹ ಸಂಖ್ಯೆಯಲ್ಲಿ ಸಾರ್ವಜನಿಕ ಹೋರಾಟಗಳಲ್ಲಿ ಭಾಗವಹಿಸಿದರು. ಸಮಾಜದ ಅಂಚಿಗೆ ದೂಡಲ್ಪಟ್ಟ ನಿಮ್ನವರ್ಗಗಳ ಮಹಾವಿಮೋಚನಾ ಚಳವಳಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಜೊತೆಗೆ ಸಾವಿರಾರು ಹೆಣ್ಣುಮಕ್ಕಳು ಪಾಲ್ಗೊಂಡರು. ಬಾಬಾಸಾಹೇಬರು ಸಂಘಟನೆ ಕಟ್ಟುವಾಗ, ಹಾಸ್ಟೆಲು-ಶಾಲೆಕಾಲೇಜು-ಪತ್ರಿಕೆ ನಡೆಸುವಾಗ, ಚುನಾವಣೆಗೆ ನಿಂತಾಗ, ಪುಸ್ತಕಗಳನ್ನು ಪ್ರಕಟಿಸಿದಾಗ, ಹೋರಾಟ ಮಾಡುವಾಗ, ಬೌದ್ಧರಾಗಿ ಮತಾಂತರವಾದಾಗ ವಿಪುಲ ಸಂಖ್ಯೆಯ ದಲಿತ ಮಹಿಳೆಯರು ಅವರೊಡನೆ ಇದ್ದರು. ಬಾಬಾಸಾಹೇಬರೇ ತಮ್ಮ ದೇವರು, ತಾಯ್ತಂದೆ ಎಲ್ಲವೂ ಎಂದು ನಂಬಿದ್ದ ಮಹಿಳೆಯರು ಚಳವಳಿ ಮುನ್ನಡೆಸಲು ರಕ್ತ, ಬೆವರು ಹರಿಸಿದರು. ಸಲಹೆ, ಅಭಿಪ್ರಾಯಗಳನ್ನು ದಾಖಲಿಸಿದರು. ಭಾರತವು ರಾಜಕೀಯ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಿನಲ್ಲಿದ್ದ ದಿನಗಳಲ್ಲಿ ಬಾಬಾಸಾಹೇಬರ ಕನಸುಗಳನ್ನು ಸಾಕಾರಗೊಳಿಸಲು ಪುರುಷ ಬಂಧುಗಳ ಹೆಗಲಿಗೆ ಹೆಗಲಾಗಿ ದುಡಿದರು.

ಆದರೆ ಸ್ವಾತಂತ್ರ್ಯಾನಂತರ ಬಹುಕಾಲದವರೆಗೆ ನಿಮ್ನವರ್ಗಗಳ ಚಳವಳಿಯೂ, ಅದರಲ್ಲಿದ್ದ ಮಹಿಳೆಯರೂ ಮುಂಚೂಣಿ ಸುದ್ದಿಗೆ ಬರದೇ ಅದೃಶ್ಯರಾಗುಳಿದರು. ಸ್ವಾತಂತ್ರ್ಯಾನಂತರ ದಲಿತ ಹೋರಾಟದ ಇತಿಹಾಸ ದಾಖಲಾದರೂ ಅದರಲ್ಲಿದ್ದ ಮಹಿಳೆಯರು ಕಾಣದೇ ಹೋದರು. ಈ ಲೋಪ ನಿವಾರಿಸುವಂತೆ ಮಹಾರಾಷ್ಟ್ರದ ಲೇಖಕಿ, ಹೋರಾಟಗಾರ್ತಿ ಊರ್ಮಿಳಾ ಪವಾರ್ ಹಾಗೂ ಮೀನಾಕ್ಷಿ ಮೂನ್ ಅವರು ಬಾಬಾಸಾಹೇಬರೊಡನೆ ಕೈ ಜೋಡಿಸಿದ ಕೆಲವು ಮಹಿಳೆಯರನ್ನು ಕಂಡು, ಮಾಹಿತಿ ಪಡೆದು, ಪತ್ರಿಕಾ ವರದಿ-ಹೊತ್ತಗೆ-ಪತ್ರಗಳನ್ನು ಪರಿಶೀಲಿಸಿ ’ಆಮ್ಹಿಹಿ ಇತಿಹಾಸ್ ಘಡವಲಾ’ ಎಂಬ ಹೊತ್ತಗೆ ಪ್ರಕಟಿಸಿದರು. ಅದು ವಂದನಾ ಸೋನಾಲ್ಕರರಿಂದ ’ವಿ ಆಲ್ಸೋ ಮೇಡ್ ಹಿಸ್ಟರಿ’ ಎಂದು ಇಂಗ್ಲಿಷ್‌ಗೆ ಅನುವಾದವಾಯಿತು. ಈಗ ದು. ಸರಸ್ವತಿ ಅದನ್ನು ಕನ್ನಡಕ್ಕೆ ಅನುವಾದಿಸಿರುವ ’ನಾವೂ ಇತಿಹಾಸ ಕಟ್ಟಿದೆವು’ ಹೊತ್ತಗೆಯನ್ನು ಕವಿ ಪ್ರಕಾಶನ, ಕವಲಕ್ಕಿ ಪ್ರಕಟಿಸುತ್ತಿದೆ.

***


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಭಗ್ನ ಭರವಸೆಗಳು ಮತ್ತು ಛಲದ ಹೋರಾಟಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...