Homeಮುಖಪುಟಹಳತು ವಿವೇಕ; ನೆಹರೂ ಆತ್ಮಕತೆಯಿಂದ ಆಯ್ದ ಭಾಗ

ಹಳತು ವಿವೇಕ; ನೆಹರೂ ಆತ್ಮಕತೆಯಿಂದ ಆಯ್ದ ಭಾಗ

ನೆಹರೂರವರು ಆಲಿಪುರ್‌ನಲ್ಲಿ ಸೆರೆವಾಸದಲ್ಲಿದ್ದಾಗ ಪೂರ್ವ ಮತ್ತು ಪಶ್ಚಿಮ ದೇಶಗಳಲ್ಲಿ ಪ್ರಜಾಸತ್ತೆ ವಿಷಯದ ಕುರಿತು ಬರೆದಿದ್ದಾರೆ.

- Advertisement -
- Advertisement -

ಪೂರ್ವ ಮತ್ತು ಪಶ್ಚಿಮ ದೇಶಗಳಲ್ಲಿ ಪ್ರಜಾಸತ್ತೆ

ಆಲಿಪುರ್‌ನಲ್ಲಿ, ನನಗೆ ಶಿಕ್ಷೆಯಾದ ಮೇಲೆ ಒಂದು ದೈನಿಕ ಪತ್ರಿಕೆಯನ್ನಾದರೂ ನನಗೆ ಒದಗಿಸದೆ ಇದ್ದುದನ್ನು ಕಂಡು ಆಶ್ಚರ್ಯವಾಯಿತು. ವಿಚಾರಣಾ ಕಾಲದ ಬಂದಿಯಾಗಿದ್ದಾಗ ನನಗೆ ಕಲ್ಕತ್ತೆಯ ‘ಸ್ಟೇಟ್ಸ್ ಮನ್ ‘ ದೈನಿಕ ಪತ್ರಿಕೆಯು ಕೊಡಲ್ಪಡುತ್ತಿದ್ದಿತು; ಆದರೆ ನನ್ನ ವಿಚಾರಣೆ ಮುಗಿದ ಮೇಲೆ ಇದು ನಿಲ್ಲಿಸಲ್ಪಟ್ಟಿತು. ಸ. ಪ್ರಾ. ಗಳಲ್ಲಿ ೧೯೩೨ ರಿಂದ, ಎ. ತರಗತಿಯ ಅಥವಾ ಮೊದಲನೆ ಡಿವಿಜನ್ ಬಂದಿಗಳಿಗೆ (ಸರಕಾರವೇ ಆರಿಸಿದ) ಒಂದು ದೈನಿಕ ಪತ್ರಿಕೆಯನ್ನು ಕೊಡುತ್ತಿದ್ದರು. ಇನ್ನೂ ಇತರ ಅನೇಕ ಪ್ರಾಂತಗಳಲ್ಲಿಯೂ ಹೀಗೆಯೇ ಇದ್ದಿತು. ಇದೇ ನಿಯಮವು ಬಂಗಾಳದಲ್ಲಿಯೂ ಅನ್ವಯಿಸಲ್ಪಡುವುದೆಂದು ನಾನು ನಂಬಿದ್ದೆ. ಆದರೂ ದೈನಿಕ ಪತ್ರಿಕೆಯ ಬದಲು ನನಗೆ 4 ಸ್ಟೇಟ್ಸ್ ಮನ್’ ವಾರಪತ್ರಿಕೆಯು ಬರುತ್ತಿದ್ದಿತು. ಇದು ಇಂಗ್ಲೆಂಡಿಗೆ ಹಿಂತಿರುಗಿ ನೆಲೆಸಿದ್ದ ನಿವೃತ್ತ ಇಂಗ್ಲಿಷ್ ಅಧಿಕಾರಿಗಳಿಗೋ ವ್ಯಾಪಾರಿಗಳಿಗೋ ಉದ್ದೇಶಿಸಲ್ಪಟ್ಟ ಪತ್ರಿಕೆಯೆಂಬುದು ಸ್ಪಷ್ಟವಾಗಿದ್ದಿತು. ಅವರಿಗೆ ಸ್ವಾರಸ್ಯವಾಗಿರಬಹುದಾದ ಸಂಕ್ಷಿಪ್ತ ಭಾರತೀಯ ಸಮಾಚಾರಗಳನ್ನು ಅದು ಒಳಗೊಂಡಿತ್ತು. ವಿದೇಶೀ ಬಾತ್ಮಿ ಯಾವುದೂ ಅದರಲ್ಲಿ ಇರುತ್ತಿರಲಿಲ್ಲ ; ನಾನು ಅದರ ಎಳೆಯನ್ನು ನಿಕಟವಾಗಿ ಹಿಂಬಾಲಿಸುತ್ತಿದ್ದುದರಿಂದ ಅದನ್ನು ಬಹಳವಾಗಿ ಕಳೆದುಕೊಂಡಂತಾಯಿತು. ಅದೃಷ್ಟವಶದಿಂದ ನನಗೆ, ‘ಮ್ಯಾಂಚೆಸ್ಟರ್ ಗಾರ್ಡಿ ಯನ್’ ವಾರಪತ್ರಿಕೆಯನ್ನು ಓದಲು ಅವಕಾಶ ಕೊಟ್ಟಿದ್ದರು ; ಮತ್ತು ಇದು ಯೂರೋಪ್ ಮತ್ತು ಅಂತರರಾಷ್ಟ್ರೀಯ ವಿಷಯಗಳನ್ನು ಕುರಿತ ನನ್ನ ಸಂಪರ್ಕವನ್ನು ಉಳಿಸಿತು.

ಫೆಬ್ರವರಿಯಲ್ಲಿ, ನನ್ನ ಬಂಧನವೂ ವಿಚಾರಣೆಯೂ ಮತ್ತು ಯೂರೋಪಿನ ಭಯಂಕರವಾದ ಸಂಘರ್ಷಣೆಗಳೂ ಮೇಲುಬ್ಬರಗಳೂ ಸಂಧಿಸಿದುವು. ಫ್ರಾನ್ಸಿನಲ್ಲಿ ಅಂತಸ್ತಾಪವಿದ್ದಿತು. ತತ್ಫಲವಾಗಿ ಫ್ಯಾಸಿಸ್ಟ್ ದೊ೦ಬಿಯೂ ‘ರಾಷ್ಟ್ರೀಯ ಸರಕಾರದ ರಚನೆಯೂ ಆದುವು; ಅದಕ್ಕಿಂತ ಕೆಟ್ಟದ್ದೆ೦ದರೆ, ಛಾನ್ಸೆಲರ್ ಡಾಲ್ಫಸರು ಆಸ್ಟ್ರಿಯದಲ್ಲಿ ಕೆಲಸಗಾರರನ್ನು ಗುಂಡಿನಿಂದ ಕೊಂದು ಕೆಡವುತ್ತ, ಅಲ್ಲಿ ಸಾಮಾಜಿಕ ಪ್ರಜಾಸತ್ತೆಯ ದೊಡ್ಡ ಕಟ್ಟಡವನ್ನೇ ಉರುಳಿಸುತ್ತಿದ್ದರು. ಆಸ್ಟ್ರಿಯನ್ ರಕ್ತಪಾತದ ವಾರ್ತೆಯು ನನ್ನನ್ನು ಬಹಳವಾಗಿ ಕುಗ್ಗಿಸಿತು. ಈ ಪ್ರಪಂಚವು ಅದೆಷ್ಟು ಘೋರವಾದುದು, ಕ್ರೂರವಾದುದು ; ಹಾಗೂ ಮಾನವನು ತನ್ನ ಸ್ವಾರ್ಥಗಳನ್ನು ಸಂರಕ್ಷಿಸಿಕೊಳ್ಳುವಾಗ ಅದೆಷ್ಟು ಅನಾಗರಿಕನು! ಇಡೀ ಯೂರೋಪಿನಲ್ಲೂ ಅಮೆರಿಕದಲ್ಲೂ ಫ್ಯಾಸಿಸಂ ಪ್ರಬಲವಾಗುತ್ತಿದ್ದಂತೆ ತೋರಿತು. ಹಿಟ್ಲರರು ಜರ್ಮನಿಯಲ್ಲಿ ಸರ್ವಾಧಿಕಾರಕ್ಕೇರಿದಾಗ, ಅವರು ಜರ್ಮನಿಯ ಆರ್ಥಿಕ ಜಂಜಡಗಳಿಗೆ ಯಾವ ಪರಿಹಾರವನ್ನೂ ನೀಡುತ್ತಿರಲಿಲ್ಲವಾದ್ದರಿ೦ದ ಅವರ ಆಳ್ವಿಕೆಯು ನಿಡುಗಾಲ ಉಳಿಯದೆಂದು ನಾನು ಭಾವಿಸಿದ್ದೆ. ಹಾಗೆಯೇ ಫ್ಯಾಸಿಸಂ ಎಲ್ಲೆಲ್ಲೂ ಹರಡುತ್ತಿದ್ದಾಗ ಪ್ರತೀಕಾರದ ಕೊನೆಗಾಣ್ಕೆಯನ್ನದು ಪ್ರತಿನಿಧಿಸಿತೆಂದು ಸಮಾಧಾನಪಟ್ಟುಕೊಂಡೆ. ಅದಾದಮೇಲೆ ಬಂಧವಿನೋಚನೆಯಾಗಲೇಬೇಕು. ಆದರೆ ನನ್ನ ಆಶೆಯಿಂದಲೇ ನನ್ನ ಆಲೋಚನೆಯು ಆವಿರ್ಭವಿಸಲಿಲ್ಲವೇ ಎಂದು ನಾನು ಶಂಕಿಸಿದೆ. ಈ ಫ್ಯಾಸಿಸ್ಟ್ ಅಲೆಯು ಅಷ್ಟು ಸುಲಭವಾಗಿ ಅಥವಾ ಶೀಘ್ರವಾಗಿ ಮೈದೆಗೆಯುವುದು ಅಷ್ಟು ಸ್ವತಸ್ಸಿದ್ಧವೇ? ಒಂದು ವೇಳೆ, ಸನ್ನಿವೇಶಗಳು ಫ್ಯಾಸಿಸ್ಟ್ ಸರ್ವಾಧಿಕಾರಗಳಿಗೆ ಅಸಹನೀಯವಾಗುವಂತಾದರೂ, ಅವು ಸೋಲಿಗೊಳಗಾಗುವುದಕ್ಕೆ ಪ್ರತಿಯಾಗಿ ತಮ್ಮ ದೇಶಗಳನ್ನು ವಿನಾಶಕ ಯುದ್ಧಭೂಮಿಗೆ ದೂಡುವುದಿಲ್ಲವೇ ? ಅಂಥ ಸಂಗ್ರಾಮವೊಂದರ ಪರಿಣಾಮವೇನು?

ಏತನ್ಮಧ್ಯೆ, ನಾನಾ ವಿಧಗಳ ಮತ್ತು ರೂಪಗಳ ಫ್ಯಾಸಿಸಂ ಹರಡಿತು. ನೂತನ ‘ಪ್ರಾಮಾಣಿಕ ಜನರ ಪ್ರಜಾಧಿಪತ್ಯ’ ವಾದ ಮತ್ತು ಯಾವುದನ್ನು ಯಾರೋ ಒಬ್ಬರು ಸರಕಾರಗಳ ಪ್ರತ್ಯಕ್ಷ ‘ಮ್ಯಾಂಚೆಸ್ಟರ್ ಗಾರ್ಡಿಯನ್ನು’ ಎಂದು ಕರೆದರೋ ಆ ಸೈಯಿನು ಬಹಳ ಹಿಂದಕ್ಕೆ ಸರಿದು ಪ್ರತೀಕಾರದ ಆಳಕ್ಕೆ ಬಿದ್ದಿತ್ತು. ಅದರ ಪ್ರಾಮಾಣಿಕರಾದ ಉದಾರವಾದಿ ಮುಂದಾಳುಗಳ ನವುರು ಮಾತುಗಳೆಲ್ಲವೂ ಅದು ಕೆಳಕ್ಕೆ ಜಾರುವುದನ್ನು ನಿಲ್ಲಿಸಿರಲಿಲ್ಲ. ಎಲ್ಲೆಲ್ಲೂ ಉದಾರವಾದವು ಆಧುನಿಕ ಪರಿಸ್ಥಿತಿಗಳನ್ನು ಎದುರಿಸುವುದರಲ್ಲಿ ಸಂಪೂರ್ಣ ಅದಕ್ಷತೆಯನ್ನು ತೋರಿಸಿತು. ಅದು ಪದಗಳಿಗೂ ವಾಕ್ಯಗಳಿಗೂ ಅಂಟಿಕೊಂಡು, ಅವು ಕರ್ಮದ ಸ್ಥಾನದಲ್ಲಿ ಮಂಡಿಸಬಹುದು ಎಂದುಕೊಂಡಿತು. ಸಂದುಕಟ್ಟೊಂದು ಬಂದಾಗ, ಮುಗಿದುಹೋದ ಫಿಲ್ಮಿನ ಕೊನೆಯ ತುದಿಯಂತೆ ಅದು ಸುಮ್ಮನೆ ಮಾಯವಾಯಿತು.

ಆಸ್ಟ್ರಿಯನ್ ರುದ್ರ ಪ್ರಕರಣವನ್ನು ಕುರಿತ ‘ ಮ್ಯಾಂಚೆಸ್ಟರ್ ಗಾರ್ಡಿಯನ್’ ನ ಪ್ರಧಾನ ಲೇಖನಗಳನ್ನು ನಾನು ಕುತೂಹಲದಿಂದಲೂ ಮೆಚ್ಚಿಗೆಯಿಂದಲೂ ಓದಿದೆ. “ಈ ರಕ್ತಮಯ ಸಂಗ್ರಾಮದಿಂದ ಎಂತಹ ಆಸ್ಟ್ರಿಯವು ಹೊರಬೀಳುವುದು? ರೈಫಲ್‌ ಮತ್ತು ಮೆಷಿನ್‌ಗನ್ ಸಮೇತವಾದ ಯೂರೋಪಿನ ತೀವ್ರ ಪ್ರತೀಕಾರಕ ಪಕ್ಷವೊಂದರಿಂದ ಆಳಲ್ಪಡುವ ಆಸ್ಟ್ರಿಯ.” “ಆದರೆ ಇಂಗ್ಲೆಂಡು ಸ್ವಾತಂತ್ರ ಧೈಯಕ್ಕಾಗಿ ನಿಲ್ಲುವುದಾದರೆ, ಅದರ ಮುಖ್ಯ ಮಹಾ ಮಂತ್ರಿಗಳು ಏಕೆ ಬಾಯಿ ಮುಚ್ಚಿ ಕೊಂಡಿದ್ದಾರೆ ? ಸರ್ವಾಧಿಕಾರಗಳನ್ನು ಕುರಿತ ಅವರ ಕೈವಾರಗಳನ್ನು ನಾವು ಕೇಳಿದ್ದೇವೆ ; ಅವು ಹೇಗೆ ‘ರಾಷ್ಟ್ರವೊಂದರ ಆತ್ಮವನ್ನು ಬದುಕುವಂತೆ ಮಾಡುವುವು, ಮತ್ತು ಹೊಸ ಕನಸನ್ನು ಮತ್ತು ನವಚೈತನ್ಯವನ್ನು ಅನುಗ್ರಹಿಸುವುವು ಎಂಬುದಾಗಿ ಅವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇಂಗ್ಲೆಂಡಿನ ಮುಖ್ಯ ಮಹಾ ಮಂತ್ರಿಗಳೊಬ್ಬರು, ಯಾವ ರಾಷ್ಟ್ರದಲ್ಲೇ ಆಗಲಿ, ಅನೇಕ ವೇಳೆ ದೇಹವನ್ನು ಕೊಲ್ಲುವ ಆದರೆ ಇನ್ನೂ ಬಹಳ ಹೆಚ್ಚು ವೇಳೆ ಆತ್ಮವನ್ನು ಭೀಕರವಾಗಿ ಕೊಲ್ಲುವ ಅಪರಾಜತ್ವಗಳನ್ನು ಕುರಿತು ಏನನ್ನಾದರೂ ಹೇಳುವುದು ಅವಶ್ಯಕ.

ಹಾಗಾದರೆ ‘ಮ್ಯಾಂಚೆಸ್ಟರ್ ಗಾರ್ಡಿಯನ್ ‘ ಪತ್ರಿಕೆಯು ಸ್ವಾತಂತ್ರ್ಯ ಧೈಯಕ್ಕಾಗಿ ನಿಲ್ಲುವುದಾದರೆ, ಭಾರತದಲ್ಲಿ ಸ್ವಾತಂತ್ರ್ಯವು ನಿಗ್ರಹಿಸಲ್ಪಟ್ಟಿರುವಾಗ ಅದು ಏಕೆ ಬಾಯಿ ಮುಚ್ಚಿಕೊಂಡಿದೆ ? ನಾವು ಕೂಡ ದೈಹಿಕ ಯಾತನೆಯನ್ನು ಮಾತ್ರವಲ್ಲದೆ ಆತ್ಮದ ಇನ್ನೂ ಹೆಚ್ಚು ತೀವ್ರವಾದ ಅಗ್ನಿ ಪರೀಕ್ಷೆಯನ್ನೂ ಅನುಭವಿಸಿದ್ದೇವೆ.

“ಆಸ್ಟ್ರಿಯನ್ ಪ್ರಜಾಸತ್ತೆಯು ಹೋರಾಡುತ್ತಲೇ ತನ್ನ ಅಮರವಾದ ವೈಭವಕ್ಕೆ ಸಾಗಿದ್ದರೂ, ಅದು ನಾಶವಾಗಿದೆ ; ಮತ್ತು ಭಾವೀ ವರ್ಷಗಳಲ್ಲಿ ಒಂದು ದಿನ ಐರೋಪ್ಯ ಸ್ವಾತಂತ್ರ್ಯ ಧೈಯವನ್ನು ಪುನಃ ಪ್ರಚೋದಿಸಬಹುದಾದ ಇತಿ ಕಥೆಯೊಂದನ್ನು ಹೀಗೆ ಸೃಷ್ಟಿಸಿದೆ.”

“ಅಸ್ವತಂತ್ರವಾದ ಯೂರೋಪು ಉಸಿರಾಡದೆ ಇದೆ; ಆರೋಗ್ಯಕರ ಶಕ್ತಿಗಳ ಪ್ರವಾಹವಾಗಲಿ, ಪ್ರತಿ ಪ್ರವಾಹವಾಗಲಿ ಇಲ್ಲ ; ಕ್ರಮಕ್ರಮವಾದ ಶ್ವಾಸಬಂಧನಕ್ಕೆ ಪ್ರಾರಂಭವಾಗಿದೆ, ಮತ್ತು ಪ್ರಚಂಡವಾದ ವಿಲಿವಿಲಿಯಾಗಲಿ ಅಥವಾ ಅ೦ತರಿಕ ರೋಗವಿಕಾರ ಮತ್ತು ಗುದ್ದಾಟವಾಗಲಿ ಬಳಿಸಾರುತ್ತಿರುವ ಮಾನಸಿಕ ಮೂರ್ಛಾ ವಿಶೇಷವನ್ನು ನಿವಾರಿಸಬಲ್ಲದು…… ರ್ಹೈನ್‌ನಿಂದ ಯೂರಲ್‌ಗಳವರೆಗೆ ಯೂರೋಪು ಒಂದು ಮಹಾ ಕಾರಾಗೃಹವಾಗಿದೆ.”

ಬಗೆಯನ್ನು ಕದಡುವ ಈ ವಚನಗಳು ನನ್ನ ಹೃದಯದಲ್ಲಿ ಪ್ರತಿಧ್ವನಿತವಾದುವು. ಆದರೆ ಭಾರತದ ವಿಷಯವೇನು ಎಂದು ಅರಿಯದಾದೆ. ‘ಮ್ಯಾಂಚೆಸ್ಟರ್ ಗಾರ್ಡಿಯನ್ ‘ ಆಗಲಿ ಅಥವಾ ಇಂಗ್ಲೆಂಡಿನಲ್ಲಿ ನಿಸ್ಸಂದೇಹವಾಗಿಯೂ ಇರತಕ್ಕ ಇತರ ಅನೇಕ ಸ್ವಾತಂತ್ರ ಪ್ರೇಮಿಗಳಾಗಲಿ ನಮ್ಮ ಹಣೆಬರಹದ ವಿಚಾರದಲ್ಲಿ ಅಷ್ಟು ಉಪೇಕ್ಷೆಯಿಂದ ಇರಲು ಹೇಗೆ ತಾನೆ ಸಾಧ್ಯ? ಇತರ ಕಡೆಯಲ್ಲಿ ಅಷ್ಟು ಉತ್ಸಾಹದಿಂದ ಅವರು ಯಾವುದನ್ನು ಖಂಡಿಸುತ್ತಾರೋ ಅದನ್ನು ಇಲ್ಲಿ ಅವರು ಹೇಗೆ ಕಾಣದೆ ಇರಬಲ್ಲರು? ಹತ್ತೊಂಬತ್ತನೆಯ ಶತಮಾನದ ಪರಂಪರೆಯಲ್ಲಿ ಶಿಕ್ಷಿತರಾದ, ಸಾವಧಾನ ಪ್ರವೃತ್ತಿಯುಳ್ಳ, ಮಾತಿನಲ್ಲಿ ಬಹಳ ಹಿಡತವುಳ್ಳ ಮಹಾ ಆಂಗೈಯ ಉದಾರವಾದಿ ನಾಯಕರು ಇಪ್ಪತ್ತು ವರುಷಗಳನ್ನು ಹಿಂದೆ, ಮಹಾ ಯುದ್ಧಕ್ಕೆ ಸ್ವಲ್ಪವೇ ಮುಂಚೆ ಈ ರೀತಿ ಹೇಳಿದರು : ” ಶಾಸನವನ್ನು ನಿಗ್ರಹಿಸುವ ಪಾಶವೀ ಬಲದ ರುದ್ರ ವಿಜಯವನ್ನು ನೋಡುವ ಮೂಕ ಸಾಕ್ಷಿಗಳಾಗಿರುವುದಕ್ಕಿ೦ತ ಬಹಳ ಮುಂಚೆಯೇ ಈ ನಮ್ಮ ರಾಷ್ಟ್ರವನ್ನು ಇತಿಹಾಸದ ಪುಟದಿಂದ ತೊಡೆದೇಬಿಡುವುದನ್ನು ನಾನು ನೋಡಬಯಸುತೇನೆ.” ವಾಗ್ವೈಭವದಿಂದ ಚಿತ್ರಿತವಾದ ಧೀರವಾದ ಆಲೋಚನೆ ಮತ್ತು ಇಂಗ್ಲೆಂಡಿನ ಯುವಕರು ಲಕ್ಷಾಂತರ ಸಂಖ್ಯೆಗಳಲ್ಲಿ ಅದನ್ನು ಪ್ರತಿಪಾದಿಸಲು ಹೊರಟರು ಆದರೆ ಮಿ|| ಆಸ್ಕ್ವಿತ್‌ರವರ ಹೇಳಿಕೆಗೆ ಸಮಾನವಾದುದನ್ನು ಭಾರತೀಯನೊಬ್ಬನು ಕೊಡುವ ಸಾಹಸ ಮಾಡಿದರೆ ಅವನ ಗತಿಯೇನು?

ರಾಷ್ಟ್ರೀಯ ಮನಶ್ಯಾಸ್ತ್ರವು ಒಂದು ತೊಡಕುತೊಡಕಾದ ವಿಷಯ. ನಾವು ಎಷ್ಟು ನ್ಯಾಯಪರರೆಂದೂ ನಿಷ್ಪಕ್ಷಪಾತಿಗಳೆಂದೂ ನಮ್ಮಲ್ಲನೇಕರು ಭಾವಿಸಿಕೊಳ್ಳುತೇವೆ. ಯಾವಾಗಲೂ ತಪ್ಪು ಬೇರೊಬ್ಬನದು, ಬೇರೊಂದು ರಾಷ್ಟ್ರದ್ದು, ನಮ್ಮ ಮನಸ್ಸಿನ ಹಿಂದೆ, ಎಲ್ಲೋ ಒಂದು ಕಡೆ, ನಾವು ಇತರರಂತೆ ಅಲ್ಲವೆಂದು ನಮಗೆ ನಂಬಿಕೆಯಾಗಿ ಹೋಗಿದೆ; ನಮಗೂ ಅವರಿಗೂ ಇರುವ ವ್ಯತ್ಯಾಸವೊಂದನ್ನು ನಾವು ಅವಧಾರಣೆ ಮಾಡದಂತೆ ನಮ್ಮನ್ನು ನಮ್ಮ ಕಲಿತ ಒಳ್ನಡತೆಯು ಸಾಮಾನ್ಯವಾಗಿ ತಡೆಯುವುದು. ಮತ್ತು ನಾವು ಇತರ ರಾಷ್ಟ್ರಗಳನ್ನು ಅಂಕೆಯಲ್ಲಿಡುವ ಸಾಮಾಜಿಕ ಜನಾಂಗವಾಗುವಷ್ಟು ಅದೃಷ್ಟಶಾಲಿಗಳಾಗಿದ್ದರೆ, ಸಾಧ್ಯವಾದ ಎಲ್ಲ ಪ್ರಪಂಚಗಳಲ್ಲಿಯೂ ಅತ್ಯುತ್ತಮವಾದ ಈ ಪ್ರಪಂಚದಲ್ಲಿ ಎಲ್ಲವೂ ಶ್ರೇಯಸ್ಸಿಗಾಗಿ ಎಂದೂ ಮತ್ತು ವ್ಯತ್ಯಾಸಕ್ಕಾಗಿ ಯಾರು ಚಳವಳಿ ನಡೆಸುವರೋ ಅವರು ಸ್ವಾರ್ಥ ಸಾಧಕರು, ಅಥವಾ ಮರುಳ್ಗೊಂಡ  ಹುಚ್ಚರು, ನಮ್ಮಿಂದ ಪಡೆದ ಲಾಭಗಳನ್ನು ಸ್ಮರಿಸದ ಕೃತಜ್ಞರು ಎಂದೂ ನಂಬಿಕೊಳ್ಳುವುದು ಕಷ್ಟವಲ್ಲ.

ಬ್ರಿಟಿಷರು ಸಂಕುಚಿತ ದೃಷ್ಟಿಯನ್ನುಳ್ಳ ಜನಾಂಗ, ಗೆಲುವಿನ ಮತ್ತು ಏಳಿಗೆಯ ನಿಡುಗಾಲದ ಕ್ರಮಾಗತಿಯು, ಅವರನ್ನು ಇತರರು ತಮಗಿಂತ ಕೀಳಾದವರೆಂದು ಕಾಣುವಂತೆ ಮಾಡಿವೆ. ಏಕೆಂದರೆ ಅವರಿಗೆ ಯಾರೋ ಒಬ್ಬರು ಹೇಳಿರುವಂತೆ, “ನೀಗ್ರೋ ಜನಾಂಗವು ಕ್ಯೆಲೈ ಪಟ್ಟಣದಿಂದ ಆರಂಭವಾಗುತ್ತದೆ.” ಆದರೆ ಅದು ತೀರ ಸಾಮಾನ್ಯವಾದ ಸೂತ್ರ. ಬ್ರಿಟಿಷ್ ಮೇಲ್ತರಗತಿಯ ಅಭಿಪ್ರಾಯದಲ್ಲಿ ಜಗತ್ತನ್ನು ಪ್ರಾಯಃ ಹೀಗೆ ವಿಭಾಗಿಸಬಹುದು : (೧) ಬ್ರಿಟನ್‌-ದೀರ್ಘವಾದ ಶೂನ್ಯತೆ, ಆಮೇಲೆ (೨) ಬ್ರಿಟಿಷ್ ಡೊಮಿನಿಯನ್‌ಗಳು (ಬಿಳಿಯ ಜನಸಂಖ್ಯೆ ಮಾತ್ರ), ಮತ್ತು ಅಮೆರಿಕಾ (ಆ೦ಗ್ಲೋ-ಸಾಗ್ಸನರು ಮಾತ್ರ-ಡ್ಯಾಗೋಗಳು, ವಾಪ್‌ಗಳು ಇತ್ಯಾದಿ ಮಿಶ್ರಜನಾಂಗ ಸಂಭೂತರಲ್ಲ), (೩) ಪಶ್ಚಿಮ ಯೂರೋಪು, (೪) ಯೂರೋಪಿನ ಉಳಿದ ಭಾಗಗಳು, (೫) ದಕ್ಷಿಣ ಅಮೆರಿಕಾ (ಲಾಟಿನ್ ಜನಾಂಗಗಳು), ದೀರ್ಘವಾದ ಶೂನ್ಯತೆ, ಆಮೇಲೆ (೬) ಏಷ್ಯ ಮತ್ತು ಆಫ್ರಿಕಗಳ ಕಂದು ಬಣ್ಣದ, ಹಳದಿಯ ಮತ್ತು ಕರಿಯ ಜನಾಂಗಗಳು-ಹೆಚ್ಚು ಕಡಿಮೆ ಎಲ್ಲರನ್ನೂ ಒಟ್ಟಾಗಿ ಸೇರಿಸಿ.

ಈ ಕೊನೆಯ ತರಗತಿಗಳಲ್ಲಿರುವ ನಾವು, ನಮ್ಮ ಆಡಳಿತಗಾರರು ವಾಸಿಸುತ್ತಿರುವ ಔನ್ನತ್ಯಗಳಿಂದ ಎಷ್ಟು ದೂರದಲ್ಲಿದ್ದೇವೆ! ನಮ್ಮ ಕಡೆ ಅವರು ನೋಡಿದಾಗ ಅವರ ದೃಷ್ಟಿಯು ಮಂಕಾಗುವುದರಲ್ಲೂ ನಾವು ಪ್ರಜಾಸತ್ತೆ ಮತ್ತು ಸ್ವಾತಂತ್ರ್ಯಗಳ ವಿಷಯವಾಗಿ ಮಾತನಾಡಿ ಅವರನ್ನು ಸಿಡಿಮಿಡಿಗುಟ್ಟಿಸುವುದರಲ್ಲೂ ಏನು ಆಶ್ಚರ? ಆ ಪದಗಳು ನಮ್ಮ ಉಪಯೋಗಕ್ಕಾಗಿ ರಚಿತವಾಗಿರಲಿಲ್ಲ. ಭಾರತದಲ್ಲಿ ದೂರದ ಮಬ್ಬಾದ ಭವಿಷ್ಯದಲ್ಲಿ ಕೂಡ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಇರ್ಮೆಯನ್ನು ತಾವು ಕಲ್ಪಿಸಿಕೊಳ್ಳುವುದು ಅಸಾಧ್ಯವೆಂದು ಉಗ್ಗಡಿಸಿದವರು ದೊಡ್ಡ ಉದಾರವಾದಿ ರಾಜಕಾರಣಪಟುವಾದ ಜಾನ್ ಮಾರ್ಲೆಯವರೇ ಅಲ್ಲವೇ ? ಕೆನಡದ ಪಶುರೋಮಕವಚದಂತೆ ಭಾರತದ ವಾತಾವರಣಕ್ಕೆ ಪ್ರಜಾಸತ್ತೆಯು ಹಾಳತವಾಗಿರಲಿಲ್ಲ. ಅನಂತರ ಬ್ರಿಟನ್ನಿನ ಕೂಲಿಗಾರರ ಪಕ್ಷ ದವರು, ಸಮತಾವಾದ ಪತಾಕಧಾರಿ ನಾಯಕರು, ಬ್ರಿಟನ್ನಿನ ತುಳಿಯಲ್ಪಟ್ಟವರ ಪ್ರತಿನಿಧಿಗಳು, ತಮ್ಮ ಗೆಲುವಿನ ಸುಗ್ಗಿಯ ಹಿಗ್ಗಿನಲ್ಲಿ ನಮಗೆ ೧೯೨೪ ರಲ್ಲಿ ಬಂಗಾಳದ ಆರ್ಡಿನೆನ್ಸುಗಳ ಪುನರುಜ್ಜಿವನದ ಪ್ರಸಾದವನ್ನು ಕೊಟ್ಟರು. ಅವರು ಎರಡನೆಯ ಸಲ ಆಳಿದಾಗ ನಮ್ಮ ಗತಿಯು ಇನ್ನೂ ಹಾಳಾಯಿತು. ನಮಗೆ ಕೆಟ್ಟದನ್ನು ಮಾಡ ಬೇಕೆಂಬ ದುರುದ್ದೇಶವು ಅವರಾರಿಗೂ ಮನಸ್ಸಿನಲ್ಲಿರಲಿಲ್ಲವೆಂದು ನನಗೆ ನಂಬಿಕೆಯಿದೆ. ಅವರು ಅತ್ಯುತ್ತಮ ವೇದಿಕೆಯ ವಿಧಾನದಲ್ಲಿ ನನ್ನನ್ನು ಕುರಿತು ಭಾಷಣ ಮಾಡುವಾಗ- ನಮ್ಮ ಕಟ್ಟೆಯ ಸೋದರರೇ -ತಮ್ಮ ಸದ್ಗುಣವನ್ನು ಅರಿತುಕೊಂಡ ಉಬ್ಬನ್ನು ಅವರು ಅನುಭವಿಸುತ್ತಾರೆ. ಆದರೆ, ಅವರ ಅಭಿಪ್ರಾಯದಲ್ಲಿ ನಾವು ಅವರಂತೆ ಇಲ್ಲ. ನಾವು ಬೇರೆ ಅಳತೆಗೋಲುಗಳಿಂದಲೇ ಅಳೆಯಲ್ಪಡಬೇಕು. ಭಾಷಾ ಸಂಸ್ಕೃತಿಗಳ ಭಿನ್ನತೆಗಳ ಕಾರಣದಿಂದ ಫ್ರೆಂಚನೂ ಆಂಗ್ಲೇಯನೂ ಇಬ್ಬರೂ ಒಂದೇ ತೆರನಾಗಿ ಯೋಚಿಸುವುದು ಕಷ್ಟ, ಹೀಗಿರುವಾಗ ಅಂಗ್ಲೇಯನಿಗೂ ಏಷ್ಯದವನಿಗೂ ಇರತಕ್ಕ ವ್ಯತ್ಯಾಸವು ಎಷ್ಟು ಹೆಚ್ಚು ವಿಶಾಲವಾಗಿರಬೇಕು?

ಮೊನ್ನೆ ಮೊನ್ನೆ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಭಾರತೀಯ ರಾಜ್ಯಾಂಗ ಸುಧಾರಣಾ ಸಮಸ್ಯೆಯನ್ನು ಕುರಿತ ಚರ್ಚೆಯು ನಡೆಯಿತು. ಘನವಂತರಾದ ಲಾರ್ಡುಗಳು ಅನೇಕ ಜ್ಞಾನಪ್ರದ ಭಾಷಣಗಳನ್ನು ಮಾಡಿದರು. ಆ ಭಾಷಣಗಳ ಪೈಕಿ, ಹಿಂದೆ ಭಾರತದಲ್ಲಿ ಪ್ರಾಂತೀಯ ಗವರ್ನರ್‌ರೂ ಕೆಲವು ಕಾಲ ಹಂಗಾಮಿ ವೈಸ್ ರಾಯ್‌ ಆಗಿದ್ದ ಲಾಡ್ಜ್‌ ಲಿಟ್ಟನರು ಮಾಡಿದ ಭಾಷಣವೊಂದು. ಅವರು ಉದಾರವಾದಿ ಮತ್ತು ಸಹಾನುಭೂತಿಯುಕ್ತ ಗವರ್ನರ್‌ ಎಂದು ಅನೇಕವೇಳೆ ಹೇಳಲಾಗಿದೆ. ಅವರು “ಇಂಡಿಯಾ ಸರಕಾರವು ಒಟ್ಟಿನಲ್ಲಿ ಕಾಂಗ್ರೆಸ್ಸಿನ ರಾಜಕರಣ ಪಟುಗಳಿಗಿಂತ ಬಹಳ ಹೆಚ್ಚಾಗಿಯೇ ಭಾರತದ ಪ್ರತಿನಿಧಿ. ಇಂಡಿಯಾ ಸರಕಾರವು ಅಧಿಕಾರಿಗಳು, ಸೈನ್ಯ, ಪೊಲೀಸು, ದೇಶೀಯ ಸಂಸ್ಥಾನಾಧೀಶರು, ಸೈನ್ಯಾ೦ಗಗಳು ಮತ್ತು ಹಿಂದೂ ಮತ್ತು ಮುಸಲ್ಮಾನರು ಇವರೆಲ್ಲರ ಪರವಾಗಿಯೂ ಮಾತನಾಡಲು ಸಮರ್ಥವಾಗಿದ್ದಿತು. ಕಾಂಗ್ರೆಸ್‌ ರಾಜಕಾರಣ ಪಟುಗಳಿಗಾದರೋ ಭಾರತದ ಒಂದು ದೊಡ್ಡ ಪಕ್ಷದ ಪರವಾಗಿ ಕೂಡ ಮಾತನಾಡುವ ಯೋಗ್ಯತೆಯಿರಲಿಲ್ಲ” ಎಂದು ಹೇಳಿರುವುದಾಗಿ ವರದಿಯಿದೆ. ಅವರ ಅಭಿಪ್ರಾಯವನ್ನು ಚೆನ್ನಾಗಿ ಸ್ಪಷ್ಟಪಡಿಸುವುದಕ್ಕಾಗಿ ಅವರು ಹೀಗೆ ವಿವರಿಸಿದರು. “ಭಾರತೀಯರ ಅಭಿಪ್ರಾಯವೆಂದು ಹೇಳುವಾಗ ನಾನು, ಯಾರ ಸಹಕಾರವನ್ನು ಆಶ್ರಯಿಸಬೇಕಾಗಿತ್ತೊ ಮತ್ತು ಭಾವಿ ಗವರ್ನರ್‌‌ಗಳೂ ಮತ್ತು ವೈಸ್‌ರಾಯ್‌ಗಳೂ ಯಾರ ಸಹಕಾರವನ್ನು ಆಶ್ರಯಿಸಬೇಕಾಗುವುದೋ ಅವರನ್ನು ಮನಸ್ಸಿನಲ್ಲಿಟ್ಟು ಕೊಂಡು ಮಾತನಾಡುತ್ತಿದ್ದೇನೆ.”

ಈ ಭಾಷಣದಿಂದ ಎರಡು ಸ್ವಾರಸ್ಯವಾದ ಅಂಶಗಳು ಹೊರಬೀಳುತ್ತವೆ: ಲೆಕ್ಕಕ್ಕೆ ಬರುವ ಭಾರತವೆಂದರೆ, ಬ್ರಿಟಿಷರಿಗೆ ಸಹಾಯ ಮಾಡುವವರು ; ಮತ್ತು ಇಂಡಿಯಾದ ಬ್ರಿಟಿಷ್ ಸರಕಾರವು ಅತ್ಯಂತ ಪ್ರಾತಿನಿಧಿಕವಾದ ಸಂಸ್ಥೆ, ಆದುದರಿಂದ ದೇಶದಲ್ಲಿನ ಅತ್ಯಂತ ಪ್ರಜಾಸತ್ತಾತ್ಮಕವಾದ ಸಂಸ್ಥೆ. ಈ ವಾದವನ್ನು ಘನಗಂಭೀರವಾಗಿ ಮಂಡಿಸುವುದೆಂದರೆ ಸುಯೆಸ್ ಕಾಲುವೆಯನ್ನು ದಾಟಿದ ಮೇಲೆ ಇಂಗ್ಲಿಷ್ ಪದಗಳ ಅರ್ಥಗಳು ವ್ಯತ್ಯಸ್ತವಾಗುವುದೆಂದು. ಈ ವಾದ ಸರಣಿಯಲ್ಲಿ ಮುಂದಿನ ಸ್ಪಷ್ಟವಾದ ಹೆಜ್ಜೆಯಿದು : ನಿರಂಕುಶ ಆಡಳಿತವೇ ಅತ್ಯಂತ ಪ್ರಾತಿನಿಧಿಕವೂ ಪ್ರಜಾಸತ್ತಾತ್ಮಕವೂ ಆದ ರೂಪ ; ಏಕೆಂದರೆ ಪ್ರಭುವು ಪ್ರತಿಯೊಬ್ಬ ಪ್ರಜೆಯನ್ನೂ ಪ್ರತಿನಿಧಿಸುತ್ತಾನೆ. ಎಂದರೆ ನಾವು “ಪೃಥ್ವಿಪತಿಯು ದೇವಾಂಶ ಸಂಭೂತನು, ಅವನ ಬಾಧ್ಯತೆಗಳನ್ನು ಕುರಿತು ಆಕರಿಸುವವರಿಲ್ಲ,” ಎಂಬ ತತ್ವಕ್ಕೆ ಹಿಂತಿರುಗುತ್ತೇವೆ.

ವಾಸ್ತವವಾಗಿಯೂ ಶುದ್ಧ ನಿರಂಕುಶ ಪ್ರಭುತ್ವವು ಕೂಡ ಈಚೆಗೆ ಪ್ರಸಿದ್ಧ ಸಮರ್ಥಕರೊಬ್ಬರನ್ನು ಹೊಂದಿದೆ. ಇಂಡಿಯನ್ ಸಿವಿಲ್ ಸರ್ವಿಸ್ಸಿನ ಭೂಷಣಪ್ರಾಯರಾದ ಸರ್ ಮ್ಯಾಲ್ ಕಂ ಹೈಲಿಯುಯವರು ಸಂಯುಕ್ತ ಪ್ರಾಂತಗಳ ಗವರ್ನರ್‌ ವಾಣಿಯಿಂದ ೧೯೩೪ ನೆಯ ನವಂಬರ್ ೫ ನೆಯ ತೇದಿ ಕಾಶಿಯಲ್ಲಿ ಭಾಷಣ ಮಾಡುತ್ತ ದೇಶೀಯ ಸಂಸ್ಥಾನಗಳಲ್ಲಿ ನಿರಂಕುಶ ಪ್ರಭುತ್ವವಿರಬೇಕೆಂದು ವಾದಿಸಿದರು. ಈ ಬುದ್ದಿವಾದವನ್ನು ಕೊಡಬೇಕಾಗಿಯೇ ಇಲ್ಲ : ಏಕೆಂದರೆ ಯಾವ ದೇಶೀಯ ಸಂಸ್ಥಾನವೂ ತನ್ನ ಸ್ವಂತ ಇಚ್ಛೆಯಿಂದ ನಿರಂಕುಶ ಪ್ರಭುತ್ವವನ್ನು ಬಿಟ್ಟುಬಿಡುವ ಸಂಭವವಿಲ್ಲ. ಯೂರೋಪಿನಲ್ಲಿ ಪ್ರಜಾಸತ್ತೆಯು ವಿಫಲವಾಗುತ್ತಿರುವುದೆಂಬ ನೆಪದಿಂದ ಈ ನಿರಂಕುಶ ಪ್ರಭುತ್ವವನ್ನು ಕಾಪಾಡುವ ಪ್ರಯತ್ನವು ಸ್ವಾರಸ್ಯಕರವಾದ ಬೆಳವಣಿಗೆಯೊಂದು. ಮೈಸೂರು ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲರು, “ಎಲ್ಲೆಲ್ಲ ಪಾರ್ಲಿಮೆಂಟರಿ ಪ್ರಜಾಸತ್ತೆಯು ಅಪಚಯ ಹೊಂದುತ್ತಿರುವಾಗ ಆಮೂಲಾಗ್ರ ಸುಧಾರಣೆಗಳನ್ನು ಕುರಿತ ವಾದ ನಡೆಯುತ್ತಿರುವುದಕ್ಕಾಗಿ ಆಶ್ಚರ್ಯವನ್ನು” ವ್ಯಕ್ತಪಡಿಸಿದ್ದಾರೆ. ‘ನಮ್ಮ ಪ್ರಚಲಿತ ರಾಜ್ಯಾಂಗ ರಚನೆಯು ಸರ್ವವ್ಯಾವಹಾರಿಕೋದ್ದೇಶಗಳ ಮಟ್ಟಿಗೆ ಸಾಕಷ್ಟು ಪ್ರಜಾಸತ್ತಾತ್ಮಕವಾಗಿದೆಯೆಂದು ಸಂಸ್ಥಾನದ ಅಂತರಾತ್ಮವು ತಿಳಿದಿದೆಯೆಂದು ನನ್ನ ದೃಢವಾದ ನಂಬಿಕೆ. ಮೈಸೂರಿನ ‘ಅಂತರಾತ್ಮವು’ ಊಹೆಗೆ ಸಿಕ್ಕುವಂತೆ, ಅಲ್ಲಿಯ ಪ್ರಭುಗಳ ಮತ್ತು ಅವರ ದಿವಾನರ ತತ್ವಶಾಸ್ತ್ರೀಯವಾದ ಅಮೂರ್ತಭಾವನೆಯೊಂದಾಗಿದೆ. ಸದ್ಯದಲ್ಲಿ ಮೈಸೂರಿನಲ್ಲಿ ಪ್ರಾಬಲ್ಯದಲ್ಲಿರುವ ಪ್ರಜಾಸತ್ತೆಯನ್ನು ನಿರಂಕುಶ ಪ್ರಭುತ್ವದಿಂದ ವ್ಯಕ್ತೀಕರಿಸಿ ಭೇದ ಕಾಣಲಸಾಧ್ಯ.

ನೆಹರು

ಪ್ರಜಾಸತ್ತೆಯು ಭಾರತಕ್ಕೆ ಹಾಳತವಾಗಿರದಿದ್ದರೆ ಹಾಗೆಯೇ ಈಜಿಪ್ಟಿಗೂ ಹಾಳತವಾಗುವುದಿಲ್ಲ. ಕೈರೋವಿನಿಂದ ಬಂದ ಒಂದು ದೀರ್ಘವಾದ ವರದಿಯನ್ನು ‘ಸ್ಟೇಟ್ಸ್ ಮನ್’ ಪತ್ರಿಕೆಯಲ್ಲಿ ನಾನು ಈಗತಾನೆ ಓದಿದೆ. (ಈಗ ಇಲ್ಲಿ ನನಗೆ ಆ ಪತ್ರಿಕೆಯನ್ನು ಕೊಡುತ್ತಿದ್ದಾರೆ.) ಅದರಲ್ಲಿ ಮುಖ್ಯ ಮಹಾ ಮಂತ್ರಿ ನೆಸ್ಸಿಂ ಪಾಷಾರವರು “ಹೊಸದೊಂದು ರಾಜ್ಯಾಂಗ ರಚನೆಯ ಪರಿಷ್ಕರಣಕ್ಕಾಗಿ ಒಂದು ರಾಷ್ಟ್ರೀಯ ಸಮ್ಮೇಳನವನ್ನು ಕೂಡಿಸುವುದಕ್ಕಾಗಿಯೋ ಅಥವಾ ಕಾನ್ಸ್ ಟಿಟ್ಯುಯೆಂಟ್ ಅಸೆಂಬ್ಲಿಯೊಂದಕ್ಕಾಗಿ ಚುನಾವಣೆಗಳನ್ನು ನಡೆಸುವುದಕ್ಕಾಗಿಯೋ ತಾನು ರಾಜಕೀಯ ಪಂಗಡಗಳು ಅದರಲ್ಲಿಯೂ ವಿಶೇಷವಾಗಿ ವ್ಯಾಫ್ಡ್ ಪಕ್ಷವು ಸಹಕರಿಸುವಂತೆ ಮಾಡುವ ಆಶೆ ತನಗಿದೆ ಎಂಬುದಾಗಿ ಹೊರಗೆಡಹಿದ ಪ್ರಕಟಣೆಯು ಉತ್ತರವಾದಿತ್ಯ ಮನಃ ಪ್ರವೃತ್ತಿಯುಳ್ಳ ಪಕ್ಷಗಳಲ್ಲಿ ಬೇಕಾದಷ್ಟು ಭೀತಿಯನ್ನುಂಟುಮಾಡಿದೆ. ಕೊನೆಗೆ ಹೀಗೆಂದರೆ…. ಜನಪ್ರಿಯವಾದ ಪ್ರಜಾಸತ್ತಾತ್ಮಕ ಸರಕಾರದ ಆಡಳಿತಕ್ಕೆ ಹಿಂತಿರುಗಿ ಸ್ಥಾಪಿಸಿದಂತೆ. ಗತ ಚರಿತ್ರೆಯು ತೋರಿಸುವಂತೆ ಇದು ಈಜಿಪ್ಪಿಗೆ ಯಾವಾಗಲೂ ವಿನಾಶಕಾರಿಯಾದುದಾಗಿದೆ. ಏಕೆಂದರೆ ಹಿಂದೆ ಯಾವಾಗಲೂ ಅದು ಜನಬೊಂಬುಳಿಯ ಅತಿ ನೀಚ ರಾಗಾವೇಶಗಳನ್ನು ತುಚ್ಛ ರೀತಿಯಲ್ಲಿ ಪೋಷಿಸಿದೆ…. ಈಜಿಪ್ಟಿನ ರಾಜಕಾರಣದ ಮತ್ತು ಜನಗಳ ಅಂತಃಪ್ರವೃತ್ತಿಯ ಸ್ವಲ್ಪವನ್ನಾದರೂ ತಿಳಿದಿರುವ ಯಾರೂ ಚುನಾವಣೆಗಳು ವ್ಯಾಫ್ಡ್ ಪಕ್ಷದವರನ್ನು ಬಹು ಸಂಖ್ಯೆಗಳಲ್ಲಿ ಅಸೆಂಬ್ಲಿಗೆ ಪುನಃ ಆರಿಸಿ ಕಳುಹಿಸುವುದರಲ್ಲಿ ಫಲಗೊಳ್ಳುವುದು ಎಂಬುದನ್ನು ಕುರಿತು ಕ್ಷಣ ಮಾತ್ರವೂ ಸಂದೇಹಪಡುವುದಿಲ್ಲ. ಈ ಕಾರ್ಯಕ್ರಮವನ್ನು ತಡೆಗಟ್ಟಲು ಏನಾದರೂ ಒಂದನ್ನು ಮಾಡದಿದ್ದರೆ, ಸ್ವಲ್ಪ ಕಾಲದಲ್ಲಿಯೇ ಪುನಃ ಒಂದು ಅತಿ-ಪ್ರಜಾಸತ್ತಾತ್ಮಕ `ವಿದೇಶಿ ವಿರೋಧಿ ಕ್ರಾಂತಿಕಾರಕ ಪ್ರಭುತ್ವವು ನಮ್ಮ ಮೇಲೆ ಕುಳಿತುಕೊಳ್ಳುತ್ತದೆ.”

“ವ್ಯಾಫ್ಡ್ ಪಕ್ಷಕ್ಕೆ ಸರಿತೂಗುವುದಕ್ಕೋಸ್ಕರ” ಚುನಾವಣೆಗಳು ಆಡಳಿತದ ಒತ್ತಡದಿಂದ “ನಡೆಸಲ್ಪಡಬೇಕು” ಎಂದು ಸೂಚನೆಯಿದೆ. ಆದರೆ ದುರದೃಷ್ಟವಶಾತ್ ಮುಖ್ಯ ಮಹಾ ಮಂತ್ರಿಗಳಿಗೆ “ಅತಿಯಾದ ನ್ಯಾಯಬದ್ಧ ಪ್ರವೃತ್ತಿ” ಯಿರುವುದರಿಂದ ಅವರು ಇಂಥದಾವುದನ್ನೂ ಮಾಡಲಾರರು. ಇನ್ನು ಉಳಿದಿರುವ ಒಂದೆ ದಾರಿಯೆಂದರೆ, ಶ್ವೇತ ಭವನವು ತಲೆಹಾಕಿ, ಈ ವಿಧವಾದ “ ಆಡಳಿತದ ಪುನರಾಗಮನವನ್ನು ಅದು ಸೈರಿಸುವುದಿಲ್ಲವೆಂದು ತಿಳಿಸುವುದು.”

ಇದನ್ನೂ ಓದಿ; ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

ಶ್ವೇತ ಭವನವು ಯಾವ ಕಾರ್ಯಕ್ರಮವನ್ನು ಕೈಕೊಳ್ಳುವುದೋ ಯಾವ ಕಾರಕ್ರಮವನ್ನು ಕೈಗೊಳ್ಳದಿರುವುದೋ ಅಥವಾ ಈಜಿಪ್ಟ್ ನಲ್ಲಿ ಏನಾಗುವುದೋ ನಾನು ಹೇಳಲಾರೆ. ಆದರೆ ಸ್ವಾತಂತ್ರ್ಯ ಪ್ರೇಮಿಯಂತೆ ತೋರುವ ಅಂಗ್ಲೇಯನೊಬ್ಬನು ಮಂಡಿಸಿರುವ ಈ ವಾದವು ಈಜಿಪ್ಟಿನ ಮತ್ತು ಭಾರತದ ಪರಿಸ್ಥಿತಿಯ ತೊಡಕುಗಳಲ್ಲಿ ಕೆಲವನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ಸ್ಟೇಟ್ಸ್ ಮನ್ ಪತ್ರಿಕೆಯು ತನ್ನ ಪ್ರಧಾನ ಲೇಖನದಲ್ಲಿ ಹೇಳುವಂತೆ ; “ಯಾವ ವಿಧವಾದ ಜೀವನಕ್ರಮ ಮತ್ತು ನಿಷ್ಕೃಷ್ಟ ಮನೋಭಾವಗಳಿಂದ ಪ್ರಜಾಸತ್ತೆಯು ಬೆಳವಣಿಗೆ ಹೊಂದವುದೋ ಅವೂ ಸಾಮಾನ್ಯ ಈಜಿಪ್ಟಿಯನ್ ಮತದಾರನ ಜೀವನಕ್ರಮ ಮತ್ತು ನಿಷ್ಕೃಷ್ಟ ಮನೋಭಾವಗಳೂ ಸಮಶ್ರುತಿಗಳಲ್ಲ. ಇದೇ ಮೂಲ ಅರಿಷ್ಟ. ಸಂಸ್ಕೃತಿಯ ಅಭಾವಕ್ಕೆ ಮುಂದೆ ನಿದರ್ಶನ ಕೊಡಲಾಗಿದೆ; ” ಈ ಯೂರೋಪಿನಲ್ಲಿ, ಆತ್ಯನೇಕ ಪಕ್ಷಗಳ ಇರ್ಮೆಯಿಂದ ಪ್ರಜಾಸತ್ತೆಗಳು ಅನೇಕ ವೇಳೆ ಮುರಿದುಬಿದ್ದಿವೆ : ಈಜಿಪ್ಟಿನಲ್ಲಿ ಏಕಮಾತ್ರ ಪಕ್ಷವಾದ ವ್ಯಾಫ್ಡಿನ ಇರ್ಮೆಯೇ ತೊಂದರೆಗೆ ಕಾರಣವಾಗಿದೆ.”

ಭಾರತದಲ್ಲಿ ನಮ್ಮ ಕೋಮುವಾರು ವರ್ಗಗಳು ನಮ್ಮ ಪ್ರಜಾಸತ್ತಾತ್ಮಕ ಪ್ರಗತಿಗೆ ಪ್ರತಿಬಂಧಕವಾಗಿರುವುವು, ಎಂದು ನಮಗೆ ಹೇಳುತ್ತಾರೆ. ಆದುದರಿಂದ ಪ್ರತಿವಾದಿಸಲಸಾಧ್ಯವಾದ ತರ್ಕದ ಪ್ರಕಾರ ಆ ವರ್ಗಗಳ ಇರವು ಶಾಶ್ವತಗೊಳಿಸಲ್ಪಡುತ್ತದೆ. ನಾವು ಸಾಕಷ್ಟು ಐಕ್ಯತೆಯನ್ನು ಪಡೆದಿಲ್ಲವೆಂದೂ ಹೇಳುತ್ತಾರೆ. ಈಜಿಪ್ಟಿನಲ್ಲಿ ಕೊಮುವಾರು ಪಂಗಡಗಳಿಲ್ಲ ; ಮತ್ತು ಅತಿಸಮಗ್ರ ರಾಜಕೀಯ ಐಕ್ಯತೆಯು ನೆಲೆಸಿದೆಯಂತೆ. ಇಷ್ಟಾದರೂ ಈ ಐಕ್ಯತೆಯೇ ಪ್ರಜಾಸತ್ತೆಗೂ ಸ್ವಾತಂತ್ರ್ಯಕ್ಕೂ ಪ್ರತಿಬಂಧಕವಾಗಿಬಿಡುತ್ತದೆ! ಸತ್ಯವಾಗಿಯೂ ಪ್ರಜಾಸತ್ತೆಯ ಹಾದಿಯು ನೇರವಾಗಿಯೂ ಇಕ್ಕಟ್ಟಾಗಿಯೂ ಇದೆ. ಪೌರ್ವಾತ್ಯ ರಾಜ್ಯವೊಂದಕ್ಕೆ ಪ್ರಜಾಸತ್ತೆಯೆಂದರೆ ಒಂದೇ ಒಂದು ಮಾತ್ರವೆಂದು ತೋರುತ್ತದೆ. ಸಾಮಾಜಿಕ ಪ್ರಭುಶಕ್ತಿಯ ಆಜ್ಞೆಗಳನ್ನು ನಡೆಸುವುದು ಮತ್ತು ಅದರ ಸ್ವಾರ್ಥಗಳಾವುದರ ಸುದ್ದಿಗೂ ಹೋಗದಿರುವುದು. ಈ ನಿಯಮವನ್ನು ಅಂಕೆಯಾಗಿಟ್ಟುಕೊಂಡರೆ ಪ್ರಜಾಸತ್ತಾತ್ಮಕ ಸ್ವಾತಂತ್ರವು ನಿರ್ಬಾಧಿತವಾಗಿ ಬೆಳೆಯುತ್ತಾ ಹೋಗಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...