ಅಂಬೇಡ್ಕರ್ ವಾದಿ ದೃಷ್ಟಿಕೋನದಲ್ಲಿ ವಿ.ಡಿ.ಸಾವರ್ಕರ್ ಅವರನ್ನು ನೋಡಲು ಶುರುಮಾಡಿದ್ದೇನೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿರುವುದಾಗಿ ‘ಆಂದೋಲನ’ ವರದಿ ಮಾಡಿದೆ.
ಬಹುಜನ ಚಳವಳಿಯಿಂದ ಬಂದು, ನಂತರದಲ್ಲಿ ಬಿಜೆಪಿ ಸೇರಿದ ಎನ್.ಮಹೇಶ್ ಅವರ ನಿಲುವುಗಳಿಗೆ ದಲಿತ ಸಮುದಾಯದಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಅವರು ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಸಾವರ್ಕರ್ ಕುರಿತು ಬರೆದ ಲೇಖನಕ್ಕೂ ತೀವ್ರ ವಿರೋಧ ವ್ಯಕ್ತವಾಗಿದ್ದವು.
ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ನಡೆದ ಸಾವರ್ಕರ್ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸಾವರ್ಕರ್ ರಥಯಾತ್ರೆಯ ಮೂಲ ಉದ್ದೇಶವೆಂದರೆ ಅವರ ಜೀವನ, ಸಾಧನೆ ಮತ್ತು ಹೋರಾಟವನ್ನು ಜನಮಾನಸಕ್ಕೆ ತಿಳಿಸುವುದೇ ಆಗಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುಂದುವರಿದು, “ಈ ದೇಶದಲ್ಲಿ ಸಮಾನತೆಗಾಗಿ ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಸಾಗಿದ ಸಾವರ್ಕರ್ ಅವರ ನೈಜ ಜೀವನವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನಾನು ಅಂಬೇಡ್ಕರ್ ವಾದಿಯಾಗಿದ್ದು ಆ ದೃಷ್ಟಿಕೋನದಲ್ಲಿ ಸಾವರ್ಕರ್ ನೋಡಲು ಶುರುಮಾಡಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.
“82 ವರ್ಷ ಬದುಕಿದ್ದ ಸಾವರ್ಕರ್ ಅವರು 50 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದರು. ಬ್ರಿಟೀಷರಿಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದ ಕಾರಣಕ್ಕೆ ಅವರಿಗೆ ಅಷ್ಟೊಂದು ಶಿಕ್ಷೆ ವಿಧಿಸಲಾಯಿತು” ಎಂದು ಹೇಳಿಕೆ ನೀಡಿದ್ದಾರೆ.
ಅಂಬೇಡ್ಕರ್ ಅವರ ಹೋರಾಟದ ಘಟನೆಗಳು ಸಾವರ್ಕರ್ ಅವರಲ್ಲಿ ದೊಡ್ಡ ಪರಿವರ್ತನೆ ತಂದಿತು ಎಂಬುದು ನನ್ನ ಗ್ರಹಿಕೆಯಾಗಿದೆ. ವೇದೋಕ್ತ ನಿಷೇಧ, ಉದ್ಯೋಗ ನಿಷೇಧ, ಅಸ್ಪೃಶ್ಯತೆ, ಸಮುದ್ರ ಪರ್ಯಟನೆ ನಿಷೇಧ, ಶುದ್ಧಿ ನಿಷೇಧ, ಸಹಭೋಜನ ನಿಷೇಧ, ಅಂತರ್ಜಾತಿ ಮದುವೆ ನಿಷೇಧ ಎಂಬ 7 ಸಂಕೋಲೆಗಳ ವಿರುದ್ಧ ಸಾವರ್ಕರ್ ಹೋರಾಟ ನಡೆಸಿದರು ಎಂದು ಅವರು ತಿಳಿಸಿದ್ದಾರೆ.
ಈ ಏಳು ಸಂಕೋಲೆಗಳಿಂದ ಮುಕ್ತಿ ಹೊಂದದ ಹೊರತು ನಮಗೆ ಸ್ವಾತಂತ್ರ್ಯ ದಕ್ಕಿದರೂ ಪ್ರಯೋಜನವಿಲ್ಲ ಎಂದಿದ್ದರು. ಇದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ನಿಲುವು ಕೂಡ ಆಗಿತ್ತು. ಈ 7 ಸಂಕೋಲೆಗಳಿಂದ ನಾವು ಬಿಡುಗಡೆಯಾಗಬೇಕಿದೆ. ಹಿಂದೂ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.
ಇದೆಲ್ಲವನ್ನೂ ಓರ್ವ ಅಂಬೇಡ್ಕರ್ ವಾದಿಯಾಗಿಯೇ ಹೇಳುತ್ತಿದ್ದೇನೆ, ಪ್ರತಿಯೊಂದು ಹೋರಾಟದ ಮಾರ್ಗದಲ್ಲೂ ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳು ಇದೆ. ನಾನು ಧನಾತ್ಮಕ ಚಿಂತನೆಗಳನ್ನೇ ಮಾತನಾಡಲು ಶುರು ಮಾಡಿದ್ದೇನೆ. ಈ ನಿಟ್ಟಿನಲ್ಲಿ ನೋಡಿದ್ದೆ ಆದರೆ ಮೊದ ಮೊದಲು ಕ್ರಾಂತಿಕಾರಿಯಾಗಿದ್ದ ಸಾವರ್ಕರ್ ಬರಬರುತ್ತಾ ಸಮಾಜ ಸುಧಾರಕರಾದರು ಎಂದು ಹೇಳಿದ್ದಾರೆ.
ಆಧಾರವಿಲ್ಲದೆ ಬರೆದರೆ ಎನ್.ಮಹೇಶ್?
ಶಾಸಕ ಎನ್. ಮಹೇಶ್ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಅಂಕಣ ಬರಹದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೇಳಿಕೆಯನ್ನು ತಿರುಚಿ ಬರೆದಿದ್ದಾರೆ ಎಂಬ ಆರೋಪಗಳು ಬಂದಿವೆ. ಈ ಆರೋಪಕ್ಕೆ ಉತ್ತರಿಸಿರುವ ಅವರು, “ಈ ಬಗ್ಗೆ ಬೇರೆ ಯಾರೊ ಬರೆದಿದ್ದನ್ನು ತೆಗೆದುಕೊಂಡಿದ್ದೇನೆ. ಅವರಲ್ಲಿ ಉಲ್ಲೇಖ ಕೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಶಾಸಕ ಎನ್.ಮಹೇಶ್ ಸೂಚನೆ ಮೇರೆಗೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಆರೋಪ
ಈ ಬರಹದ ಮೊದಲ ಪ್ಯಾರಾದಲ್ಲಿ, “ಸಮಾಜ ಸುಧಾರಣೆಯ ದಿವ್ಯಚೈತನ್ಯದ ಸೊಡರು ಸ್ವಾತಂತ್ಯ್ರವೀರ ಸಾವರ್ಕರ್. ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆಯ ಆಚರಣೆಯು ಒಂದು ಕಳಂಕವಾಗಿದ್ದ, ಇಂಥ ಅಮಾನವೀಯ ಆಚರಣೆಯಿಂದ ನನ್ನಂಥವರಿಗೆ ಆಗುವ ಅವಮಾನ ಅಷ್ಟಿಷ್ಟಲ್ಲ. ಆದರೆ, ಸಾವರ್ಕರ್ ಅವರು ಇದರ ನಿವಾರಣೆಗೆ ಕೈಗೊಂಡಿರುವ ಕ್ರಮಗಳು ಕ್ರಾಂತಿಕಾರಿಯಾಗಿವೆ. ಇಂಥ ಐದೋ ಹತ್ತೋ ಮಂದಿ ಇದ್ದರೆ ಅಸ್ಪೃಶ್ಯತೆಯು ಮುಂದಿನ ಕೆಲವೇ ವರ್ಷಗಳಲ್ಲಿ ಇತಿಹಾಸದ ಸಂಗತಿಯಾಗುತ್ತದೆ ಎನ್ನುವ ವಿಶ್ವಾಸ ನನಗಿದೆ” ಎಂದು ಅಂಬೇಡ್ಕರ್ ಅವರ ಹೇಳಿದ್ದಾರೆ ಎಂದು ಎನ್. ಮಹೇಶ್ ಅವರು ಬರೆದಿದ್ದಾರೆ.
ಆದರೆ ಈ ಬಗ್ಗೆ ಅನೇಕ ಅಂಬೇಡ್ಕರ್‌ವಾದಿಗಳು ಆಕ್ಷೇಪವೆತ್ತಿದ್ದು, ಅಂಬೇಡ್ಕರ್ ಅವರು ಈ ರೀತಿ ಅಥವಾ ಇದೇ ರೀತಿ ಅರ್ಥ ಬರುವ ಮಾತು ಹಾಗೂ ಬರಹವನ್ನಾಗಲಿ ಹೇಳಿಯೆ ಇಲ್ಲ ಎಂದು ಹೇಳಿದ್ದಾರೆ.



ಎನ್ ಮಹೇಶ ಅವರು ಅವಕಾಶ ವಾದಿ ರಾಜಕೀಯ ಮಾಡುತ್ತಿದ್ದಾರೆ ಅವರು ಸಿದ್ಧಾಂತಗಳು ಮರೆತಿರುವರು ಅವರಿಗೆ ಬೇಕು ರಾಜಕೀಯ ಮುಂದೆ ಅವರಿಗೆ ರಾಜಕೀಯ ಭವಿಷ್ಯ ಇಲ್ಲ