ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ್ ಉತ್ಸವ ಆಚರಿಸುವ ಸಂಬಂಧ ಕರ್ನಾಟಕ ಹೈಕೋರ್ಟ್ ಇಂದು ರಾತ್ರಿ ಹತ್ತು ಗಂಟೆಯಲ್ಲಿ ವಿಚಾರಣೆ ನಡೆಸಿತು. ಹುಬ್ಬಳ್ಳಿ ಪಾಲಿಕೆ ಅಧಿಕಾರಿಗಳ ನಿಲುವಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ವಕ್ಫ್ ಆಸ್ತಿಯಲ್ಲಿ ಗಣೇಶ ಚತುರ್ಥಿ ಆಚರಣೆಗಳನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ರಾತ್ರಿ 10 ಗಂಟೆಗೆ ವಿಚಾರಣೆ ಆರಂಭಿಸಿತು.
ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣಪತಿ ಉತ್ಸವ ಆಚರಿಸದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಗಣೇಶ್ ಉತ್ಸವದ ತಡೆ ಅರ್ಜಿ ಸಲ್ಲಿಕೆಯಾಗಿತ್ತು. ಈ ವಿಚಾರವಾಗಿ ತುರ್ತು ವಿಚಾರಣೆ ನಡೆಸಿ, ಅರ್ಜಿದಾರರು ಹಾಗೂ ಪ್ರತಿವಾದಿಯ ವಾದಗಳನ್ನು ಆಲಿಸಿತು.
ಈ ಆಸ್ತಿಯು ಸರ್ಕಾರಕ್ಕೆ ಸೇರಿದ್ದು, ಪಾಲಿಕೆ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರು ವಿಚಾರಣೆ ನಡೆಸಿದರು.
ವಿಚಾರಣೆ ಹೀಗಿತ್ತು:
ರಾತ್ರಿ 10: 06
ಅರ್ಜಿದಾರರು: (ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ) ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ದೃಷ್ಟಿಯಿಂದ, ಈ ಅರ್ಜಿಯಲ್ಲೂ ಅದೇ ಆದೇಶವನ್ನು ನೀಡಬಹುದು.
ರಾತ್ರಿ 10: 08
ಪ್ರತಿವಾದಿಗಳು: ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಪ್ರಶ್ನೆಗಳು ಆಸ್ತಿಯ ಒಡೆತನಕ್ಕೆ ಸಂಬಂಧಿಸಿದೆ. ಇದು ಸರ್ಕಾರಿ ಭೂಮಿಯಾಗಿದೆ. ಅಲ್ಲಿನ ಪ್ರಶ್ನೆ ಇಲ್ಲಿ ಬರುವುದಿಲ್ಲ.
ಪ್ರತಿವಾದಿಗಳು: ಈ ಪ್ರಕರಣದಲ್ಲಿ ಖಾಸಗಿ ಕಕ್ಷಿದಾರರು ಮೊಕದ್ದಮೆ ಹೂಡಿದರು, ಅದು ಅಂತಿಮವಾಗಿ ಮೇಲ್ಮನವಿಯಲ್ಲಿ ದೃಢೀಕರಿಸಲ್ಪಟ್ಟಿದೆ.
ಪ್ರತಿವಾದಿಗಳು: ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. 1991ರ ವಹಿವಾಟು ಪರವಾನಗಿಯಾಗಿದೆ, ಗುತ್ತಿಗೆ ಅಲ್ಲ ಎಂದು ಹೇಳಿದೆ. ಇಲ್ಲಿನ ಭೂಮಿಯನ್ನು ಬಳಸುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಘೋಷಿಸಲಾಗಿದೆ.
ರಾತ್ರಿ 10: 12
ಪ್ರತಿವಾದಿಗಳು: ಈ ಜಾಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ಇಡಬೇಕಿತ್ತು. ವಕ್ಫ್ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ವಿಶ್ಲೇಷಿಸಬೇಕಾಗುತ್ತದೆ.
ಕೋರ್ಟ್: ಯಾವುದೇ ವಿವಾದವಿಲ್ಲವೇ? ಆದರೆ ಸತ್ಯಗಳು ವಿಭಿನ್ನವಾಗಿವೆ.
ಪ್ರತಿವಾದಿ: ಯಾವುದೇ ವಿವಾದವಿಲ್ಲ. ಇದು ಕಾರ್ಪೋರೇಷನ್ ಆಸ್ತಿಯಾಗಿದೆ. ಆಸ್ತಿಯನ್ನು ತನಗೆ ಬೇಕಾದಂತೆ ಬಳಸುವ ಸಂಪೂರ್ಣ ಹಕ್ಕು ಪಾಲಿಕೆಗೆ ಇದೆ. ಮಧ್ಯಂತರ ಆದೇಶದ ಬಳಿಕ ಆಯುಕ್ತರು ಈ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.
ಪ್ರತಿವಾದಿ: ಇದು ಕೇವಲ ಮೂರು ದಿನಗಳ ಆಚರಣೆ. ಸೂಚಿಸಿದಂತೆ ನಿರ್ಬಂಧಗಳನ್ನು ಹೇರಲಾಗಿದೆ. ಕೇವಲ 30×30 ಪ್ಯಾಂಡಲ್ ಹಾಕಲಾಗಿದೆ. ನಾವು ಅದನ್ನು ನ್ಯಾಯಯುತ ಮತ್ತು ಸರಿಯಾದ ಉದ್ದೇಶಕ್ಕಾಗಿ ಬಳಸುತ್ತೇವೆ.
ರಾತ್ರಿ 10: 23
ಪ್ರತಿವಾದಿ: ಅರ್ಜಿಯಲ್ಲಿ ಪರಿಗಣಿಸಲು ನಿಜವಾಗಿಯೂ ಏನೂ ಉಳಿದಿಲ್ಲ.
ರಾತ್ರಿ 10: 25
ಅರ್ಜಿದಾರರು: ಆಕ್ಷೇಪಣೆಗಳನ್ನು ಪರಿಗಣಿಸದೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದು ಅವರ ಆಸ್ತಿ, ಅವರು ಏನು ಬೇಕಾದರೂ ಮಾಡಬಹುದು. ಆದರೆ ಈ ಸಮಯದಲ್ಲಿ ಅಲ್ಲ. ಅವರು ವಾಸ್ತವಿಕ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸಬೇಕು. ಇದೇ ಮೊದಲ ಬಾರಿಗೆ ಪಾಲಿಕೆ ಇಂಥ ನಿರ್ಧಾರ ಕೈಗೊಂಡಿದೆ. ಇದು ಪಾಲಿಕೆ ಆಸ್ತಿಯಾಗಿದ್ದರೂ ಇಂದಿನ ವಾಸ್ತವ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಾಲಯ ನಿರ್ಧರಿಸಬೇಕು.
ಕೋರ್ಟ್: ರಾತ್ರಿ 10:45ಕ್ಕೆ ಆದೇಶ ನೀಡಲಾಗುವುದು.
ರಾತ್ರಿ 11: 18
ಆದೇಶ ಮಾಡಲು ಮುಂದಾದ ಪೀಠ
ರಾತ್ರಿ 11: 23
ನ್ಯಾಯಾಲಯ: ಆಸ್ತಿಯು ಪ್ರತಿವಾದಿಯವರಿಗೆ ಸೇರಿದೆ ಎಂಬುದರಲ್ಲಿ ವಿವಾದವಿಲ್ಲ. ತೀರ್ಪಿನ ಪರಿಶೀಲನೆಯಿಂದ ಪ್ರತಿವಾದಿಯು ಆಸ್ತಿಯ ಮಾಲೀಕರೆಂದು ಸ್ಪಷ್ಟವಾಗುತ್ತದೆ. ಅರ್ಜಿದಾರರು ಎರಡು ಸಂದರ್ಭಗಳಲ್ಲಿ ಮಾತ್ರ ಜಾಗವನ್ನು ಬಳಸಲು ಅನುಮತಿ ಪಡೆದಿದ್ದಾರೆ.
ರಾತ್ರಿ 11:30
ನ್ಯಾಯಾಲಯ: ಸದರಿ ಆಸ್ತಿಯು ಪ್ರತಿವಾದಿಯದ್ದಾಗಿದೆ. ನಿಯಮಿತ ಚಟುವಟಿಕೆಗಳನ್ನು ಕೈಗೊಳ್ಳಲು ಈ ಆಸ್ತಿಯನ್ನು ಬಳಸಲಾಗುತ್ತಿದೆ. ಇದನ್ನು ಪೂಜಾಸ್ಥಳ ಎಂದು ಘೋಷಿಸಿಲ್ಲ. ಪ್ರತಿವಾದಿಯು 1991ರ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದರೆ, ಅರ್ಜಿದಾರರಿಗೆ ಪರಿಹಾರವಿರುತ್ತದೆ.
ಕೋರ್ಟ್ ನಿಲುವು
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡುವ ಅಧಿಕಾರಿಗಳ ನಿರ್ಧಾರಕ್ಕೆ ಮಧ್ಯಪ್ರವೇಶಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. (ಇಲ್ಲಿ ಗಣೇಶ್ ಚತುರ್ಥಿ ಆಚರಿಸಲು ತಡೆಯುವುದಕ್ಕೆ ಸಾಧ್ಯವಿಲ್ಲವೆಂದು ಕೋರ್ಟ್ ತಿಳಿಸಿದೆ.)


