Homeಸಾಹಿತ್ಯ-ಸಂಸ್ಕೃತಿಕಥೆಅನುಪಮಾ ಪ್ರಸಾದ್ ಅವರ ಕಥೆ; ಮುಖವಿಲ್ಲದವರು

ಅನುಪಮಾ ಪ್ರಸಾದ್ ಅವರ ಕಥೆ; ಮುಖವಿಲ್ಲದವರು

- Advertisement -
- Advertisement -

ನೆಹರು ಯುಗದಿಂದ ಇಂದಿರಾ ಯುಗದವರೆಗಿನ ಭಾರತದ ಆರ್ಥಿಕತೆ, ನರಸಿಂಹರಾಯರ ಕಾಲದಲ್ಲಿ ಬದಲಾದ ಆಯಾಮ, ಸೋವಿಯತ್ ಒಕ್ಕೂಟದಿಂದ ಪಡೆದುಕೊಂಡ ಸಾಲಕ್ಕೂ ನರಸಿಂಹರಾಯರ ಕಾಲದಲ್ಲಿ ಐ.ಎಮ್.ಎಫ್.ನಿಂದ ತೆಗೆದುಕೊಂಡ ಸಾಲಕ್ಕೂ ಇರುವ ವ್ಯತ್ಯಾಸ, ನರಸಿಂಹರಾವ್ ಈ ತೀರ್ಮಾನ ತೆಗೆದುಕೊಳ್ಳಲು ಜಗತ್ತಿನ ಯಜಮಾನ ಅಂದುಕೊಂಡಿರುವ ಅಮೆರಿಕಾದ ಒತ್ತಡ ತಂತ್ರವೂ ಒಂದು ಮಟ್ಟಿಗೆ ಕಾರಣವಾಗಿದ್ದನ್ನೂ, ಇದೇ ಪರಿಸ್ಥಿತಿಯನ್ನು ಚೀನಾ ಎದುರಿಸಿ ನಿಂತ ಬಗೆಯನ್ನ ಹೇಳುತ್ತ, ಅಮೆರಿಕಾ, ಯುರೋಪ್ ದೇಶಗಳ ಕ್ಯಾಪಿಟಲಿಸಂ ಪ್ರೊಪಗಾಂಡ ಹೇಗೆ ಕೆಲಸ ಮಾಡುತ್ತಿದೆ.. ಅದೆಲ್ಲ ತಿಳಿಯಬೇಕಾದರೆ ಯಾವ ಯಾವ ಪುಸ್ತಕ ಓದಬೇಕು ಎಂಬುದನ್ನೆಲ್ಲ ಒಂದಾದಮೇಲೊಂದರಂತೆ ನಿರರ್ಗಳವಾಗಿ ಮಗಳು ಹೇಳ್ತಾ ಇದ್ದರೆ ನಾನು ನಾಲಿಗೆ ಹೊರಳಿಸಲೂ ತಿಳಿಯದವಳಂತೆ ಕೇಳುತ್ತಿದ್ದೆ. ನಾವಿಬ್ಬರೂ ವಾಟ್ಸ್ಸಾಪ್ ವಿಡಿಯೊ ಕಾಲ್ ಮಾಡಿ ಮಾತಾಡ್ತಿದ್ದೀವಿ. ಒಬ್ಬರಿಂದೊಬ್ಬರು ಸಾವಿರಾರು ಮೈಲು ದೂರದಲ್ಲಿದ್ದೀವಿ ಎಂಬುದೇ ಆ ಕ್ಷಣ ಮರೆತಂತಾಗುತ್ತಿತ್ತು. ಮೊಬೈಲ್ ಸ್ಪೀಕರ್ ಹಾಕಿದ್ದರಿಂದ ಎದುರೆದುರು ಒಂದೇ ಕೋಣೆಯಲ್ಲಿ ಕುಳಿತು ಚರ್ಚಿಸುತ್ತಿದ್ದೇವೆ ಎಂದೇ ಅನಿಸುತ್ತಿತ್ತು. ವಾರದಲ್ಲಿ ಕಮ್ಮಿ ಅಂದರೂ ಮೂರರಿಂದ ನಾಲ್ಕು ಬಾರಿ ನಮ್ಮ ನಡುವೆ ಇಂತಹ ಮಾತುಕತೆ ನಡೆಯುತ್ತಿತ್ತು. ಚರ್ಚೆ ನಡುವೆ ಕೆಲವು ಸಂದರ್ಭದಲ್ಲಿ ವಯೋಸಹಜ ಏರುತ್ತಿದ್ದ ಅವಳ ಬಿಸಿರಕ್ತದ ಆವೇಗ ತಗ್ಗಿಸಲು ನಾನೇನಾದರೂ ಅಪರಾ ತಪರ ಪ್ರಶ್ನೆ ಕೇಳಿ ಬೈಸಿಕೊಳ್ಳುವುದಂತು ಇದ್ದೇ ಇರುತ್ತಿತ್ತು. ಅಥವಾ ತುಸು ವಿಷಯಾಂತರ ಮಾಡಲು ಕುಟುಂಬ ವರ್ಗದಲ್ಲಾದ ಯಾವುದಾದರೂ ಸುದ್ದಿ ಹೇಳಲು ಹವಣಿಸುತ್ತಿದ್ದೆ. ಇವತ್ತೂ ಒಂದು ಘಳಿಗೆ ಅವಳ ಮನಸನ್ನು ಬೇರೆ ಕಡೆ ಸೆಳೆಯಲೆಂದು, “ವಿಕ್ಕಿ ಮಾವನ ಮಗಳಿಗೆ ಮಗು ಆಗಿದೆ. ಫೇಸ್ಬುಕ್ಕಲ್ಲಿ ಫೊಟೊ ಹಾಕಿದಾಳೆ” ಅಂದೆ.

“ನಿಂಗೆ ಇವತ್ತು ಗೊತ್ತಾಗಿದ್ದಾ. ಮಗು ಆಗಿ ಮೂರು ತಿಂಗಳಾಯಿತು. ಮಗು ಫೊಟೊ ಇನ್ಸ್ಟಾದಲ್ಲಿ ಹಾಕಿದ್ಲು. ಆವಾಗ ಅವಳ ಜೊತೆ ಚಾಟ್ ಮಾಡಿದ್ದೆ.”
“ಅರೆ! ಮತ್ತೆ ನಂಗ್ಯಾಕೆ ಹೇಳಲಿಲ್ಲ
“ಹೇಳಿದ್ರೆ ಏನು ಮಾಡ್ತಿದ್ದೆ? ಈಗ ಗೊತ್ತಾದ ಮೇಲೆ ಏನಾದ್ರು ಮಾಡಿದ್ಯಾ?” ಅವಳ ವ್ಯಂಗ್ಯಕ್ಕೆ ಸಿಟ್ಟು ಬಂದರೂ ಸತ್ಯ ತಾನೆ ಅನಿಸಿತು.
“ಅವಳು ಹೋಗಿ ಐದು ವರ್ಷ ಆಯ್ತಲ್ವ? ಮತ್ತೊಂದು ಪ್ರಶ್ನೆ.
“ಹ್ಹಂ.. ಕಾಲ ಸರಿದಿದ್ದು ಗೊತ್ತಾಗುವುದಿಲ್ಲ. ನೀನು ಜರ್ಮನಿಗೆ ಹೋಗಿಯೇ ಎರಡು ವರ್ಷ ಆಯ್ತು ನೋಡು.” ಅಂದೆ.
“ಈಗ ಗೊತ್ತಾಯ್ತಲ್ಲ. ವಿಕ್ಕಿ ಮಾವ ಅಜ್ಜ ಆದ. ನಿನ್ನ ಅಣ್ಣನ ಮಗಳು ನಿಂಗೂ ಮೊಮ್ಮಗಳಲ್ವಾ. ನೀನು ಈಗ ಅಜ್ಜಿ ಆದಿ. ಈಗ್ಲಾದ್ರೂ ಅವಳನ್ನ ಮಾತಾಡಿಸ್ಬಾರ್ದಾ.”

“ನನಗೂ ಆಸೆ ಆಗ್ತಿದೆ. ಆದರೆ, ಅವಳನ್ನು ಮಾತಾಡಿಸ್ಲಿಕ್ಕೆ ಹೋದ್ರೆ ಇವರನ್ನು ಕಳ್ಕೊಳ್ಬೇಕಲ್ಲ. ನಾನು ವಿಕ್ಕಿ ಮಾವನತ್ರ, ಶಾಲು ಅತ್ತೆ ಹತ್ತಿರ ಈ ವಿಚಾರ ಮಾತಾಡಲು ತುಂಬ ಪ್ರಯತ್ನ ಪಟ್ಟೆ. ಆದ್ರೆ, ಅವಳ ಹೆಸರು ತೆಗೆದ್ರೇ ಉರಿದು ಬೀಳ್ತಾರೆ. ಅಂತವಳು ನಮ್ಮ ಹೊಟ್ಟೇಲಿ ಹುಟ್ಲೇ ಇಲ್ಲ. ನಮ್ಮ ಮರ್ಯಾದೆ ತೆಗಿಲಿಕ್ಕೆ ಅಂತ್ಲೇ ಬಂದ ಮಾರಿ ಅಂತ ಅವರು ಬೈದಾಗ ನೀನೂ ಇದ್ದೆ ಅಲ್ವಾ. ಈಗಲೂ ಅದೇ ಮಾತು”

“ಹ್ಹಂ.. ನಮ್ಮ ದೇಶಕ್ಕೆ ಶತ್ರುಗಳು ಹೊರಗಿನವರಲ್ಲ ಅಮ್ಮ. ಆ ಜಾತಿ ಈ ಜಾತಿ ಅಂತ ಇನ್ನೂ ಹಾರಾಡ್ತಿದ್ದೇವಲ್ಲ. ಅದೊಂದೇ ದೊಡ್ಡ ಶತ್ರು. ಇಂಡಿಯಾಕ್ಕೆ ಬಂದಾಗ ನಾನಂತು ಅತ್ತಿಗೆಯ ಮನೆಗೆ ಹೋಗುವವಳೆ. ನೀನು ಬರುವುದಾದರೆ ಬಾ.”

“ನೀನು ಹೇಳ್ತಾ ಇರುವುದು ನಿಜ. ನಾನೂ ವಿಕ್ಕಿ ಮಾವನ ಜೊತೆ ಅತ್ತೆ ಜೊತೆ ಮಾತಾಡಲು ಬಹಳ ಸರ್ತಿ ಪ್ರಯತ್ನ ಪಟ್ಟೆ. ಆದ್ರೆ ವಿಕ್ಕಿ ಮಾವ ಹೇಳುವುದೇ ಬೇರೆ. ಆ ಹುಡುಗನ ಜಾತಿಗಾಗಿ ನಾವು ಇಷ್ಟು ಹಠ ಹಿಡಿಯುವುದಲ್ಲ. ಅವನ ವ್ಯವಹಾರ, ಗುಣ ಸರಿ ಇಲ್ಲ. ಒಂದಲ್ಲ ಒಂದಿನ ಇವಳಿಗೆ ಮೋಸ ಮಾಡ್ತಾನೆ. ನಮ್ಮ ಆಸ್ತಿ ಮೇಲೆ ಕಣ್ಣಿದೆ ಅವರಿಗೆ. ಹತ್ತಿರ ಸೇರಿಸಿದ್ರೆ ನಮಗೇ ವಿಷ ಹಾಕಿ ಎಲ್ಲ ಹೊಡ್ಕೊಂಡು ಹೋದಾರು ಅಂತ ಒಂದೇ ಮಾತು ಅವರದ್ದು.”

“ಯಾವ ಮುಖದಲ್ಲಿ ಹಾಗೆ ಹೇಳ್ತಾರೆ ವಿಕ್ಕಿ ಮಾವ. ಆಸ್ತಿ ಮೇಲೆ ಕಣ್ಣಿಟ್ಟಿದ್ದರೆ ಅವಳು ಹಾಗೆ ಉಟ್ಟ ಬಟ್ಟೆಯಲ್ಲಿ ಹೋದಾಗ ಸೇರಿಸಿಕೊಳ್ತಿದ್ರಾ ಅಮ್ಮ. ಪಿಳ್ಳೆ ನೆವ ಅಂತ ನೀನೇ ಆವಾಗವಾಗ ಹೇಳ್ತೀಯಲ್ಲ. ಇದು ಕೂಡ ಅಂತದ್ದೇ. ಶಾರು ಅತ್ತಿಗೆ ಹೋಗಿ ಒಂದೆರಡು ವರ್ಷದವರೆಗೂ ಆ ಹುಡುಗನನ್ನು ಬಿಟ್ಟು ಬರ್ಬೇಕು ಅಥವಾ ಆ ಹುಡುಗ ಸತ್ತೋಗ್ಲಿ ಅಂತ ಅದೇನೇನೊ ಪೂಜೆ ಹೋಮ ಅಂತೆಲ್ಲ ಮಾಡಿಸಿದ್ರಲ್ವ ಮಾವ, ಅತ್ತೆ. ಒಂದು ವೇಳೆ ಜಾತಿ ಒಳಗೇ ಮದುವೆ ಆಗಿದ್ದಾಗಿದ್ರೆ ಅವ್ರು ಈಗ ಹೋಗ್ತಿರ್ಲಿಲ್ವ. ಒಂದು ಸತ್ಯ ನಿಂಗೆ ಗೊತ್ತಾ ಅಮ್ಮ, ಈಗ ಜಗತ್ತನ್ನು ಆಳ್ತಾ ಇರುವುದು ಅಮೆರಿಕಾ, ಯುರೋಪ್ ದೇಶಗಳಂತಹ ಕ್ಯಾಪಿಟಲಿಸ್ಟ್ ಅನ್ನೊ ಜಾತಿ. ಆಳಿಸಿಕೊಳ್ತಾ ಇರೋದು ವರ್ಕಿಂಗ್ ಕ್ಲಾಸ್ ಅನ್ನೊ ಜಾತಿ. ನಾವೆಲ್ಲರೂ ವರ್ಕಿಂಗ್ ಕ್ಲಾಸ್ ಜಾತಿಯವರು. ಇದು ಯಾರಿಗೂ ಅರ್ಥ ಆಗ್ತಾ ಇಲ್ಲ. ದೇಶದೊಳಗೆ ಜಾತಿ, ಮತ ಅಂತ ಗಲಾಟೆ, ಹೊರಗೆ ಭಾರತ, ಪಾಕಿಸ್ತಾನ, ಚೀನಾ ಅಂತ ಗಡಿ ಗಲಾಟೆ. ಉದ್ಧಾರ ಆಗುವುದಾದರೂ ಹೇಗೆ?

“ಇಂತಹ ಗಲಾಟೆ ನಡೆಯುತ್ತಿದ್ದರೇ ಎಲ್ಲಾ ಕಡೆಯೂ ಕ್ಯಾಪಿಟಲಿಸ್ಟರ ಬೇಳೆ ಬೇಯುವುದು”, ಅವಳು ಮಾತಾಡುತ್ತಿದ್ದರೆ ನಾನು ದಂಗಾದೆ. ಇವಳ ಈ ಆಲೋಚನೆಗಳನ್ನೆಲ್ಲ ಒಂದೆಡೆ ದಾಖಲು ಮಾಡಿದರೆ ಒಳ್ಳೆಯ ಒಂದು ವೈಚಾರಿಕ ಚರ್ಚೆಯ ಸಂಗ್ರಹ ಆದೀತು ಅನಿಸುತ್ತಿತ್ತು. ಅದನ್ನ ಹೇಳಿದರೆ ಅದೆಲ್ಲ ಬೇಡ ಎಂಬ ಅವಳ ಹಠದ ಮುಂದೆ ಮತ್ತೆ ಮಾತಿಲ್ಲದವಳಾಗುತ್ತಿದ್ದೆ. ಅವಳಿಗೆ ಪುಸ್ತಕಗಳ ಹುಚ್ಚು ಹಿಡಿಸಿ ಹಾಳು ಮಾಡ್ತಿದ್ದಿ ಅಂತ ಹಿತೈಷಿಗಳು ಉಪದೇಶ ಮಾಡುತ್ತಿದ್ದುದು ನೆನಪಾಯ್ತು. ಇದ್ದಕ್ಕಿದ್ದಂತೆ ಹೊರಗೆ ವಿಪರೀತ ಗಲಾಟೆಯಾಗುತ್ತಿರುವುದು ಕೇಳಿಸಿತು.

ಅಗ್ನಿಶಾಮಕದಳದ ಸೈರನ್. ಈ ಸಣ್ಣ ಊರಿನೊಳಗೆ ಅಗ್ನಿ ಶಾಮಕ ಬರುವಂತದ್ದೇನಾಯ್ತಪ್ಪ ಎಂಬ ಆತಂಕದಿಂದ ಕುಳಿತಲ್ಲಿಂದ ಎದ್ದೆ. ಮಗಳಿಗೂ ಕೇಳಿದ್ದರಿಂದ ಏನದು ನೋಡು ಎಂದಂದು ಕರೆ ಕಟ್ ಮಾಡಿದಳು. ನಾನು ಹೊರಗೋಡಿದೆ.

ನೆರೆ ಮನೆಯಲ್ಲೆ ಏನೊ ಅಪಘಾತವಾದಂತಿತ್ತು. ಜನ ಸೇರಿದ್ದರು. ನಮ್ಮ ಕಾಂಪೌಂಡ್ ಹತ್ತಿ, ಪಕ್ಕದ ಕಾಂಪೌಂಡಿಗೆ ಎರಡು ಮೂರು ಜನ ಹುಡುಗರು ಹಾರುತ್ತಿದ್ದರು. ಏನಾಯ್ತೆಂದು ಕೇಳಿದೆ. “ನಿಮ್ಗೆ ಗೊತ್ತಾಗ್ಲಿಲ್ವಾ? ಮಾಷ್ಟ್ರ ಮಗಳು ಲಾವಣ್ಯ ಬಾವಿಗೆ ಹಾರಿದಾಳೆ.” ಅನ್ನುತ್ತ ಓಡಿದರು. ಬಾಗಿಲಿಗೆ ಬೀಗ ಹಾಕಿ ಗೇಟಿನವರೆಗೆ ಹೋದವಳಿಗೆ ಮುಂದೆ ಹೆಜ್ಜೆ ಇಡಲಾಗಲಿಲ್ಲ. ಈಗ ನಾನು ಹೋಗಿ ಮಾಡುವುದಾದರೂ ಏನು ಅನಿಸಿತು. ನಿನ್ನೆ ಸಾಯಂಕಾಲ ಇದೇ ಹೊತ್ತಿಗೆ ಲಾವಣ್ಯ ಬಂದಿದಾಳೆ ಅಂತ ಗೊತ್ತಾಗಿ ಕಳೆದ ಬಾರಿ ಬಂದಾಗ ಹೀಚು ಕಾಯಿಯನ್ನೆ ಕೊಯ್ಕೊಂಡಿದ್ದಳಲ್ಲ. ಈಗ ಹಣ್ಣಾಗಿದೆ ನಾಲ್ಕು ಹಣ್ಣು ಕೊಟ್ಟು ಬರೋಣ ಎಂದುಕೊಂಡು ಅವರ ಗೇಟಿನವರೆಗೆ ಹೋಗಿದ್ದೆ. ಗೇಟು ತೆರೆಯುತ್ತಿದ್ದಾಗ, ಒಳಗಿಂದ ಜೋರುಜೋರು ಮಾತು ಕೇಳಿದ್ದರಿಂದ ಹೋಗುವುದೊ ಬೇಡವೊ ಅನುಮಾನಿಸುತ್ತ ನಿಂತಿದ್ದೆ, “..ನಾನಿನ್ನು ಅಲ್ಲಿಗೆ ಹೋಗಲು ಸಾಧ್ಯವೇ ಇಲ್ಲ ಅಮ್ಮ. ಮರ್ಯದೆ ಕೊಡದವರ ಜೊತೆ ಇರ್ಲಿಕ್ಕೆ ನನ್ನಿಂದ ಸಾಧ್ಯವೇ ಇಲ್ಲ

“ಅದು ನಿನ್ನ ಮನೆ. ನೀನು ಇರಬೇಕಾದ್ದೆ ಅಲ್ಲಿ. ಹೋಗುವುದಿಲ್ಲ ಅಂದ್ರೆ ಹೇಗೆ? ಅಪ್ಪ ಬಂದ ಕೂಡ್ಲೆ ಕರ್ಕೊಂಡು ಹೋಗ್ತಾರೆ. ಹೊರಡು.”
“ನಾನೆಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರ್ತೇನೆ ಅವ್ನಿಗೆ ಡೈವೋರ್ಸ್ ಕೊಡ್ತೇನೆ.”
“ಊರಿಗೆಲ್ಲ ಕೇಳುವ ಹಾಗೆ ಡೈವೋರ್ಸ್ ಅಂತ ಬೊಬ್ಬೆ ಹಾಕ್ಬೇಡ. ನಿಂಗೆ ಒಬ್ಬ ಮಗ ಇದ್ದಾನೆ ಅಂತ ನೆನಪಿದೆಯಾ? ಕೊಟ್ಟ ಮಗಳು ಮನೆಯಲ್ಲಿ ಬಂದು ಕೂತ್ರೆ ಇಲ್ಲಿ ನಾವು ಊರಲ್ಲಿ ತಲೆ ಎತ್ತಿ ನಡೆಯೋದು ಹೇಗೆ?

“ನೀನು ತಲೆ ಎತ್ತಿ ನಡೆದಿದ್ದು ಸಾಕು. ನೀನು ಕೆಲಸಕ್ಕೆ ಹೋದಿ. ನಂಗ್ಯಾಕೆ ಬೇಗ ಮದುವೆ ಮಾಡಿದ್ರಿ? ನಾನಂತು ಹೋಗುವುದಿಲ್ಲ.” ಎರಡೂ ಧ್ವನಿಗಳೂ ಪರಿಚಿತ. ಆದರೆ, ಈ ಪರಿ ಅಪರಿಚಿತ. ಪರಚಿಕೊಳ್ಳುವಂತ ಉದ್ವಿಗ್ನ ಧ್ವನಿಯಲ್ಲಿ, ಇಬ್ಬರ ಸ್ವರಗಳೂ ಮರ ಕೊಯ್ಯುವ ಯಂತ್ರ ಚಾಲೂ ಆಗಿ ಮರದ ದಪ್ಪ ಕಾಂಡದೊಂದಿಗೆ ಘರ್ಷಣೆಗೆ ತೊಡಗಿದಾಗ ಬರುವ ಸದ್ದಿನಂತೆ ಕೇಳಿಸುತ್ತಿತ್ತು. ಒಳ ಹೋಗುವ ಸಮಯ ಅಲ್ಲವೆಂದುಕೊಂಡು ಗೇಟಿನ ಚಿಲಕದಿಂದ ಕೈ ಹಿಂತೆಗೆದುಕೊಳ್ಳುತ್ತಿದ್ದಾಗ ತಾಯಿಯ ಮಾತು.

“ಎಂತ ಅಂದೆ ನೀನು? ನಾಲಿಗೆ ಕೊಯ್ದುಬಿಡ್ತೇನೆ ನೋಡು. ನನ್ನ ಹಾಗೆ ಕಷ್ಟ ಪಡುದು ಬೇಡ ಅಂತ ಜಮೀನಿರುವ ಹುಡುಗನನ್ನೇ ನೋಡಿದ್ದು. ಈಗ ನನಗೇ ಎದುರು ಮಾತಾಡ್ತೀಯ. ಕೆಲಸಕ್ಕೆ ಹೋಗದೆಯೇ ನೀನು ಬೇಕಷ್ಟು ಆಟ ಆಡಿದವಳಲ್ವ? ನಮ್ಮ ಮರ್ಯಾದಿ ಕಳಿಬೇಕು ಅಂತಾನೇ ಹೀಗೆಲ್ಲ ಮಾಡ್ತಿದ್ದಿ ಅಲ್ವಾ?” ತಾಯಿಯಾದವಳು ಹೀಗೂ ಮಾತಾಡ್ತಾಳಾ ಅನಿಸಿತ್ತು ಒಂದು ಕ್ಷಣ. ಸರಸರನೆ ಬಂದಿದ್ದೆ. ಲಾವಣ್ಯಳನ್ನು ಮಾತಾಡಿಸಲೆಂದು ನಾನು ಹೋಗಲು ಕಾರಣವಿತ್ತು. ಎರಡು ತಿಂಗಳ ಹಿಂದೆ ಗಂಡನ ಜೊತೆ ತಾಯಿ ಮನೆಗೆ ಬಂದವಳು ಕಾಂಪೌಂಡ್ ಸಮೀಪ ಬಂದು ಆಂಟಿ, ಇವತ್ತು ಸಂಜೆ ಒಮ್ಮೆ ನಿಮ್ಮನೆಗೆ ಬರ್ತೇವೆ ಆದೀತಾ? ನಾವು ಮನೆ ಕಟ್ಟಿಸುವ ಪ್ಲಾನ್ ಮಾಡ್ತಿದ್ದೇವೆ. ಅದಕ್ಕೇ ಒಮ್ಮೆ ಇವರಿಗೆ ನಿಮ್ಮ ಮನೆ ತೋರಿಸುವಾ ಅಂತ” ಅಂದಿದ್ದಳು. ನಾವು ಮನೆ ಕಟ್ಟಿ ವಕ್ಕಲಾಗಿ ಆರೇಳು ತಿಂಗಳಾಗಿತ್ತಷ್ಟೆ. ನೋಡುವಂತಹ ವಿಶೇಷಗಳು ನಮ್ಮ ಮನೆಯಲ್ಲಿ ಇರದಿದ್ದರೂ ಹೊಸ ಮನೆ ಅಂದಾಗ ಮನೆ ಕಟ್ಟಿಸುತ್ತಿರುವವರು ನೋಡಿ ಹೋಗುವುದೊಂದು ಅಭ್ಯಾಸ. ಸಂಜೆ ಗಂಡ ಹಾಗು ನಾಲ್ಕು ವರ್ಷದ ಮಗನ ಜೊತೆ ಬಂದವಳು ಹತ್ತು ನಿಮಿಷ ಅಷ್ಟೆ ಆಂಟಿ ಅನ್ನುತ್ತ ನನ್ನ ನಿರ್ದೇಶನಕ್ಕೆ ಕಾಯದೆ ಮನೆ ಪೂರ್ತಿ ಸುತ್ತಿದಳು. ಗಂಡನಿಗೆ ತಾವು ಕಟ್ಟುವ ಮನೆಯಲ್ಲಿ ಯಾವುದು ಎಲ್ಲೆಲ್ಲಿ ಇರಬೇಕೆಂದು ವಿವರಿಸಿದಳು. ಮಾಡಿದ ಚಹ ಹೊಗೆಯಾಡುವುದು ನಿಂತರೂ ಅವಳಿಗೆ ಮನೆ ನೋಡಿ ಮುಗಿದಿರಲಿಲ್ಲ. ಮಗುವಿಗೆ ಬೇಸರ ಹಿಡಿದಿರಬೇಕು. ಹೋಗುವ ಅಮ್ಮ ಅನ್ನಲಾರಂಭಿಸಿದ್ದ. ನಾವು ಮನೆ ಕಟ್ಟುವಾಗ ಇದೆಲ್ಲ ಗೊತ್ತಿರಬೇಕಲ್ಲ ಮಗಾ ಎಂದು ಪುಸಲಾಯಿಸಿ ಸುಮ್ಮನಾಗಿಸಿದ್ದಳು. ಎಷ್ಟು ಉಮೇದಲ್ಲಿ ಮಾತಾಡ್ತಿದ್ದಾಳೆ ಈ ಹುಡುಗಿ. ಗಂಡನ ಮನೆಯಲ್ಲಿ ಅವಳಿಗೆ ಅಷ್ಟು ಸರಿ ಇಲ್ಲ ಅನ್ನುವ ಮಾತು ಅವರಿವರಿಂದ ಕಿವಿಗೆ ಬಿದ್ದಿದ್ದೆಲ್ಲ ಸುಳ್ಳಿರಬಹುದು ಅನಿಸಿತ್ತು. ಆದರೂ, ಅವರನ್ನು ಕಳಿಸಿ ನನಗೆ ಹೊರಗಡೆ ಹೋಗುವ ಕೆಲಸ ಇದ್ದಿದ್ದರಿಂದ ತುಸು ಚಡಪಡಿಕೆ ಸುರುವಾಗಿತ್ತು. ಚಹ ಕುಡಿಯುತ್ತಿರುವಾಗ ನಿಮ್ಮ ಮನೆ ಕೆಲಸ ಎಲ್ಲಿವರೆಗೆ ಬಂತು ಕೇಳಿದ್ದೆ. ಈ ಮಳೆಗಾಲ ಮುಗಿದ ಕೂಡ್ಲೆ ಕೆಲಸ ಸುರು ಮಾಡುವ ಅಂದಿದಾರೆ. ಅದಕ್ಕೇ ಪ್ಲಾನ್ ಮಾಡಿಕೊಳ್ತಿದ್ದೆ ಅಂದಿದ್ದಳು. ಹೋಗುವಾಗ ಗೇಟಿನ ಬಳಿ ಇದ್ದ ಚಿಕ್ಕು ಮರದಲ್ಲಿದ್ದ ಕಾಯಿ ನೋಡಿ ಎರಡು ಕಾಯಿ ಕೊಯ್ದು ನನ್ನತ್ತ ನೋಡಿ ನಕ್ಕಿದ್ದಳು. ಅದು ಬಲಿತಿರಲಿಲ್ಲ. ಏನು ಹೇಳಬೇಕೊ ತೋರದೆ ಸುಮ್ಮನಿದ್ದೆ. ಈಗ ಬಂದಿದಾಳಲ್ಲ. ಚಿಕ್ಕು ಹಣ್ಣು ಕೊಡಬೇಕೆಂದೇ ಹೋಗಿದ್ದೆ. ಈಗ ನೋಡಿದರೆ ಹೀಗಾಗಿದೆಯೆಂದು ನಂಬಲೂ ಆಗುತ್ತಿಲ್ಲ. ಅಕ್ಕಪಕ್ಕದ ಹೆಂಗಸರೆಲ್ಲ ಅತ್ತ ಓಡುತ್ತಿದ್ದಾರೆ. ಹೋಗಬೇಕೊ ಬೇಡವೊ ಗೊತ್ತಾಗಲಿಲ್ಲ. ಅನುಮಾನಿಸುತ್ತಿದ್ದಾಗಲೇ ಪದ್ದಕ್ಕ ಅತ್ತಕಡೆಯಿಂದ ಬಂದಳು. ಮೆಟ್ಟಿಲ ಬಳಿ ಚಪ್ಪಲಿ ಕಳಚಿಡುತ್ತ ಸಶಬ್ದ ನಿಟ್ಟುಸಿರು ಹೊರಹಾಕಿದಳು. ಅದು ಅವಳು ಏನೋ ಹೇಳಲಿದ್ದಾಳೆ ಎಂಬುದರ ಸಂಕೇತ.

“ದೊಡ್ಡವರಿಗೆ ಅವರ ದೊಡ್ಡಸ್ಥಿಕೆ ಎದುರು ಮಕ್ಕಳೂ ಲೆಕ್ಕಕ್ಕಿಲ್ಲ ಅಲ್ವ ಅಕ್ಕ” ಎಂದು ವ್ಯಗ್ರವಾಗಿ ಹೇಳಿದಳು.

“ನೀವು ನೋಡಿದ್ರಾ. ನಂಗೆ ನೋಡ್ಲಿಕ್ಕೇ ಆಗ್ಲಿಲ್ಲ. ಸೀದಾ ಬಂದೆ” ಅನ್ನುತ್ತ ಜಗಲಿ ಮೇಲೆ ಕಾಲು ನೀಡಿ ಕುಳಿತು, ತಲೆಯಿಂದ ಮುಟ್ಟಾಳೆ ತೆಗೆದು ಬದಿಯಲ್ಲಿಟ್ಟು ಕವಳದ ಸಂಚಿ ಬಿಚ್ಚಿದಳು. ಅವಳು ಮುಟ್ಟಾಳೆ ತೆಗೆದಿಟ್ಟು ಕವಳಕ್ಕೆ ಕೂತರೆ ಕೊಕ್ಕರೆಯಂತೆ ಹಾಜರಾಗುವುದು ನನ್ನ ರೂಢಿ. ಮುಟ್ಟಾಳೆ ಒತ್ತಿ ಹಿಡಿದಿರುತ್ತಿದ್ದ ಅವಳ ಹಣೆ ಬದಿಯ ಕೂದಲುಗಳು ಬೆವರ ಪಸೆಯಿಂದ ಅಂಟಿಕೊಂಡಿದ್ದಾಗ ಹೇಳಲಾಗದ ಕಳೆಯೊಂದು ತುಂಬಿಕೊಂಡು ಬಹಳ ಚಂದ ಕಾಣುತ್ತಿದ್ದಳು. ಇವಳ ಚೈತನ್ಯದ ಸೆಲೆ ಇಲ್ಲೆ ಎಲ್ಲೊ ಅಡಗಿದೆಯೆಂಬಂತೆ ದಿಟ್ಟಿಸುತ್ತಿದ್ದೆ. ಅವಳು ಹಾಗೆ ಕುಳಿತಾಗಲೇ ಅವಳ ಬದುಕಿನ ದಂದುಗ ನಾಣ್ಣುಡಿಯಾಗಿ ಉದುರುತ್ತಿತ್ತು. ಹಿಂದೊಮ್ಮೆ ಹೀಗೆ ಕುಳಿತಿದ್ದಾಗ ಗಂಡ ತನ್ನನ್ನು ಬಿಟ್ಟು ಹೋಗಿ ಬೇರೆ ಹೆಣ್ಣಿನ ಜೊತೆ ಒಂದಷ್ಟು ದಿನ ಬದುಕಿದ್ದನ್ನು ನಂತರ ಆ ಹೆಣ್ಣು ಅವನನ್ನು ಬಿಟ್ಟು ಹೋಗಿದ್ದನ್ನು ಹೇಳಿ ಕಿಸಕ್ಕನೆ ನಗುತ್ತ, “ಒಂದರಲ್ಲಿ ಸರಿ ಆಗದಿದ್ದರೆ ಮತ್ತೆ ಯಾವುದೂ ಸರಿ ಆಗ್ಲಿಕ್ಕಿಲ್ಲ ಅಕ್ಕ” ಅಂದಿದ್ದಳು. ಹಠಮಾರಿಯಂತೆ ಹಾಗೆಯೇ ಬದುಕಿದ್ದಳು. ಮಗಳ ಮದುವೆಯನ್ನೂ ಮಾಡಿದ್ದಳು. ಪದ್ದಕ್ಕಳಿಗೆ ಹೀಗೆಲ್ಲ ಗಟ್ಟಿಸಿ ಹೇಳುವ ಬಿರ್ಸಾತಿಕೆ ಸುಮ್ಮನೆ ಬಂದಿದ್ದಲ್ಲ. ಬದುಕಿನ ಆಯಕಟ್ಟಿನ ಜಾಗಗಳಲ್ಲಿ ಅವಳು ತೆಗೆದುಕೊಂಡ ತೀರ್ಮಾನಗಳೇ ಹಾಗಿತ್ತು. ಹದಿನೈದು ದಿನಗಳ ಹಿಂದೆ ಹಿತ್ತಲಿನ ಹುಲ್ಲು ಹೆರೆಸಲೆಂದು ಬಂದವಳು ಒಂದು ವಾರದಲ್ಲೆ ಹಿತ್ತಿಲು ಸ್ವಚ್ಛ ಮಾಡಿಕೊಡುತ್ತೇನೆ ಅಂದಿದ್ದಳು. ಆದರೆ, ಮೂರು ದಿನ ಬಂದವಳು ನಂತರದ ನಾಲ್ಕೈದು ದಿನ ಪತ್ತೆ ಇರಲಿಲ್ಲ. ಅವಳೆಲ್ಲಿ ಮಾಯವಾದಳೆಂದು ತಿಳಿಯೋಣವೆಂದರೆ ಫೋನ್ ಬಳಕೆ ಅವಳಿಗೆ ಅಭ್ಯಾಸವೇ ಇಲ್ಲ. ಸುಮ್ಮಸುಮ್ಮನೆ ಹಾಗೆ ಕೆಲಸ ಬಿಟ್ಟು ಕೂರುವವಳಲ್ಲ. ಮಗಳ ಮನೆಗೇನಾದರೂ ಹೋದಳೊ.. ಆರೋಗ್ಯ ಕೆಟ್ಟಿತೊ.. ಒಟ್ಟಾರೆ ಏನೊ ತೊಂದರೆಯಾಗಿದೆ ಎಂಬ ಕರಕರೆಯಲ್ಲಿದ್ದೆ. ಐದನೆಯ ದಿನ ಬೆಳಗ್ಗೆ ಪದ್ದಕ್ಕ ಹಾಜರಾಗುತ್ತಿದ್ದಂತೆ ಎಲ್ಲಿ ಮಾಯವಾಗಿದ್ದೆ ನಾಲ್ಕು ದಿನ ಎಂದು ಕೇಳುತ್ತಿದ್ದಂತೆ ಅಷ್ಟು ದಿನ ಕಟ್ಟಿಟ್ಟುಕೊಂಡ ರೋಷವನ್ನೆಲ್ಲ ಉಗಿಯುವಂತೆ, “ನಾನು ಪಾಪದವಳಾದರೇನಂತೆ. ಮನುಷ್ಯತ್ವ ಇಲ್ಲದವರ ಜೊತೆ ನನ್ನ ಮಗಳು ದಿನಾ ಸಾಯುವುದು ಬೇಡ. ಮಗಳಿಗೆ ಮೊಮ್ಮಗುವಿಗೆ ಹೊಟ್ಟೆ ತುಂಬಿಸುವಷ್ಟು ದುಡಿಯುವ ಶಕ್ತಿ ನನ್ನ ಜೀವದಲ್ಲುಂಟು ಅಕ್ಕ, ಅವರ ಮನೆಯೂ ಬೇಡ. ಅವರ ಮಗನೂ ಬೇಡ. ಹೆಂಡತಿ ಬೇಕಾದರೆ ನೀನೇ ಬಾ ನನ್ನ ಮನೆಗೆ” ಅಂತ ಉಗಿದು ಮಗಳನ್ನು ಮೊಮ್ಮಗುವನ್ನು ಕರ್ಕೊಂಡು ಬಂದೆ ಅಂದಿದ್ದಳು.

ಪದ್ದಕ್ಕಳ ಅಳಿಯನಿಗೆ ಇಬ್ಬರು ಅಣ್ಣಂದಿರು. ಒಬ್ಬ ಟ್ಯಾಕ್ಸಿ ಡ್ರೈವರ್. ಮತ್ತೊಬ್ಬ ಜವಳಿ ಅಂಗಡಿಯೊಂದರಲ್ಲಿ ಟೇಲರ್ ಆಗಿದ್ದ. ಪದ್ದಕ್ಕಳ ಪ್ರಕಾರ ಅವಳ ಅಳಿಯ ಅಣ್ಣಂದಿರಿಗಿಂತ ಸ್ವಲ್ಪ ಬಡ್ಡು ಮಂಡೆಯವ. ಹೇಳಿದಷ್ಟು ಮಾಡುವುದು ಮಾತ್ರ ಅವನಿಗೆ ಗೊತ್ತಿರುವುದು. ಮೈ ಬಗ್ಗಿಸಿ ದುಡಿಯುವುದಂತು ಅವನ ಜಾಯಮಾನವೇ ಅಲ್ಲ. ಮನೆಯಲ್ಲಿ ಅವನಿಗೆ ಬೆಲೆ ಇರುವುದು ಅಷ್ಟಕಷ್ಟೆ. ಅವನ ಹೆಂಡತಿಯಾದ ಪದುಮಕ್ಕಳ ಮಗಳು ಆ ಮನೆಯವರ ಚಾಕರಿಯವಳಾದಳು. ಮನೆ ಮಂದಿಯ ಬಟ್ಟೆ ತೊಳೆಯುವುದು, ಎಲ್ಲರ ಸ್ನಾನಕ್ಕೆ ಬಾವಿ ನೀರು ಸೇದಿ ಹಾಕುವುದು ಇತ್ಯಾದಿಗಳ ಜೊತೆಗೆ ಅತ್ತೆ ಕೂಲಿಗೆ ಹೋಗುತ್ತಿದ್ದ ಮನೆಗೆ ಆಕೆಯ ಬದಲಿಗೆ ವಾರದ ಹೆಚ್ಚಿನ ದಿನಗಳಲ್ಲೂ ಇವಳೇ ಹೋಗಬೇಕಾಗಿ ಬರುತ್ತಿತ್ತು. ಕೂಲಿ ಮಾತ್ರ ಅತ್ತೆ ಕೈಗೆ. “ನನ್ನ ಮಗಳೆಂತ ಹೆಕ್ಲಿಕ್ಕೆ ಸಿಕ್ಕಿದವಳಲ್ಲ ಅನ್ನುತ್ತ ಎಂದಿನಂತೆ ನೆಲದ ಮೇಲೆ ಕುಕ್ಕರುಗಾಲಲ್ಲಿ ಕುಳಿತು ಕಣ್ಣೊರೆಸಿಕೊಳ್ಳುತ್ತ, “ಮನುಷ್ಯ ಜನ್ಮದಲ್ಲಿ ಬಡವರ ಮನೆಯಲ್ಲಿ ಹೆಣ್ಣಾಗಿ ಹುಟ್ಟಬಾರದು ಅಕ್ಕ. ಅದರಲ್ಲು ನನ್ನ ಹಾಗೆ ಗಂಡ ಬಿಟ್ಟು ಹೋದವಳ ಮಗಳಾಗಿ ಹುಟ್ಟಿದರೆ ಸಂಬಂಧಿಕರು ಮಾತಿನಲ್ಲೆ ಕೊಲ್ತಾರೆ. ಇವಳಿಗೆ ಗಂಡನ ಜೊತೆ ಬಾಳಿ ಗೊತ್ತಿದ್ದರಲ್ವಾ ಮಗಳನ್ನು ಬಾಳಲು ಬಿಡುವುದು ಅಂತ ಹಂಗಿಸ್ತಾರೆ” ಅಂತ ಮೂಗು ಸೀಟಿಕೊಂಡವಳಿಗೆ ಸಾಂತ್ವನಕ್ಕೆಂದು ನಾನು ಏನು ಹೇಳಿದರೂ ಮಾತು ಸೋಲುತ್ತದನಿಸಿತ್ತು. ಸುಮ್ಮನಿದ್ದರೆ ತಪ್ಪು ತಿಳಿದುಕೊಂಡಾಳೆಂದು “ಜಗತ್ತು ಇರುವುದೇ ಹಾಗಲ್ವಾ ಪದ್ದಕ್ಕ” ಅಂದಿದ್ದೆ. ತಟ್ಟನೆ ಸೆಡವಿನಿಂದ “ಜಗತ್ತು ಹಾಗೇ ಇರ್ಲಿ ಅಕ್ಕ. ನಾನು ಹೀಗೇ ಇರುವುದು. ನಿಮ್ಮತ್ರ ಮಾತ್ರ ನಾನು ಹೀಗೆ ಕಷ್ಟ ಸುಖ ಹೇಳಿಕೊಳ್ಳುವುದಕ್ಕ” ಅಂದಿದ್ದಳು. ಪದ್ದಕ್ಕ ಬಂದ ದಿನ ಅವಳು ಕೆಲಸ ಮುಗಿಯುವುದನ್ನೆ ಕಾಯುವ ನಾನು ಅವಳು ಕತ್ತಿ ತೊಳೆದು ಕೈಕಾಲು ತೊಳೆಯುತ್ತಿರುವಾಗ ಚಾ ಮಾಡುತ್ತಿದ್ದೆ. ಇಬ್ಬರೂ ಜಗಲಿ ಕಟ್ಟೆಯ ಮೇಲೆ ಎದುರೆದುರು ಕುಳಿತು ಏನಾದರೂ ಬಾಯಿಗೆ ಹಾಕಿಕೊಳ್ಳುತ್ತ, ಒಂದಿಷ್ಟು ಕಷ್ಟ ಸುಖ ಮಾತಾಡುತ್ತ, ಬಿಸಿ ಚಾ ಕುಡಿಯುತ್ತಿದ್ದೆವು. ಮಗಳು, ಮೊಮ್ಮಗು ಮನೆಗೆ ಬಂದ ಮೇಲೆ ಏನೇ ತಿಂಡಿ ಕೊಟ್ಟರೂ ಪದ್ದಕ್ಕ ಸೆರಗಿನಲ್ಲಿ ಕಟ್ಟಿಕೊಳ್ಳುತ್ತಿದ್ದಳು. ಒಂದು ದಿನ ಮೊಮ್ಮಗಳನ್ನು ಕರೆ ತಂದಿದ್ದಳು. ಅಂದು ಮೊಮ್ಮಗಳು ಚಪ್ಪರಿಸಿ ಚಾ ಕುಡಿದದ್ದು ನೋಡಿ, “ದಗಣೆ, ಮನೆಯಲ್ಲಿ ನಾನು ಮಾಡಿಕೊಟ್ಟದ್ದನ್ನು ಪುರ್ರ್‍ ಅಂತ ಚೆಲ್ಲಿಕೊಂಡು ಕುಡಿತಾಳೆ. ಈಗ ಚಪ್ಪರಿಸಿ ಉರ್ಪುತ್ತಿದಾಳೆ” ಅಂತ ಪ್ರೀತಿಯಿಂದ ಬೈದಿದ್ದಳು. ನಂತರ ಕೆಲವೊಮ್ಮೆ ಚಾ ಕೊಂಡೊಯ್ಯಲು ಸಣ್ಣ ಬಾಟಲಿ ತರುತ್ತಿದ್ದಳು. ತನಗೆ ಕೊಟ್ಟಿದ್ದನ್ನೆ ಅರ್ಧದಷ್ಟು ಉಳಿಸಿ ಬಾಟ್ಲಿಗೆ ಹಾಕಿಕೊಳ್ಳುವುದನ್ನು ನೋಡಿ ನಾನೂ ತುಸು ಜಾಸ್ತಿ ಚಾ ಮಾಡುತ್ತಿದ್ದೆ. ಆದರೆ, ಸ್ವಾಭಿಮಾನದ ಸುಪನಾತಿ ಪದ್ದಕ್ಕ ನಸಕಸೆ ಮಾಡುತ್ತಿದ್ದಳು. ಅಂಬುಲೆನ್ಸ್ ಸೈರನ್ ಎದೆ ನಡುಗಿಸಿತು. ಪದ್ದಕ್ಕ ನನ್ನ ಮುಖ ನೋಡಿದಳು. ಅಷ್ಟರಲ್ಲಿ ಫೋನ್ ರಿಂಗಾಯಿತು. ಮಗಳೇ ಮಾಡಿದ್ದಳು. ಪದ್ದಕ್ಕ ಕವಳದ ಸಂಚಿಯನ್ನು ಸುತ್ತಿ ಸೊಂಟಕ್ಕೆ ಸಿಕ್ಕಿಸುತ್ತ, “ಚಂದದ ಪೊಣ್ಬಾಲೆ. ಎಂತಾ ಅನ್ಯಾಯ ಆಯ್ತು” ಎಂದು ಲೊಚಗುಟ್ಟಿ “ದನಕ್ಕೆ ಹುಲ್ಲು ಮುಗಿದಿದೆ ಅಕ್ಕ. ಒಂದು ಕಟ್ಟ ಹುಲ್ಲು ಹೆರೆಸಿಕೊಳ್ತೇನೆ” ಅನ್ನುತ್ತ ಕತ್ತಿ ಹಿಡಿದು ಮನೆ ಹಿಂದುಗಡೆ ಹೊರಟವಳು ನಿಂತು ಸೆರಗಿನೆಡೆಯಿಂದ ಪುಟ್ಟ ಬಾಟಲಿ ತೆಗೆದಳು.

“ಚಾಯ ತಣಿಸಿ ಈ ಕುಪ್ಪಿಗೆ ಹಾಕಿಡಿ ಅಕ್ಕ. ನಾನು ಇಲ್ಲಿಗೆ ಬರ್ತೇನೆ ಅಂತ ಪುಳ್ಳಿಗೆ ಹೇಗೆ ಗೊತ್ತಾಯ್ತೊ. ನನ್ನ ನೀರಿನ ಕುಪ್ಪಿ ತಂದುಕೊಟ್ಟು ಚಾಯ ತಾ ಅಂದಿದಾಳೆ. ಇನ್ನು ನಾನು ಹೋಗುವವರೆಗೆ ಅವಳ ಬಿಡಾರ ಬಾಗಿಲ ಬುಡದಲ್ಲೆ ಇರ್ತದೆ” ನಗುತ್ತ ಬಾಟ್ಲಿ ನೀಡಿದಳು. ಫೋನ್ ಮತ್ತೆ ರಿಂಗಣಿಸಿತು. ಗದ್ದಲ ಏನೆಂದು ಕೇಳಲು ಮಾಡಿರುತ್ತಾಳೆ. ಏನೆಂದು ಹೇಳುವುದು..

 

ಅನುಪಮಾ ಪ್ರಸಾದ್
ಕಥೆಗಾರ್ತಿ. ‘ಪಕ್ಕಿಹಳ್ಳದ ಹಾದಿಗುಂಟ’ ಇವರ ಕಾದಂಬರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...