ಖ್ಯಾತ ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರಿಂ ಕೋರ್ಟ್ ಮಧ್ಯಂತರ ಜಾಮೀನು ಶುಕ್ರವಾರ ನೀಡಿದೆ. “ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಬೇಕಾಗಿತ್ತು” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠವು ಗುಜರಾತ್ ಹೈಕೋರ್ಟ್ ಅನ್ನು ಟೀಕಿಸಿದೆ.
ಗುರುವಾರದಂದು ಗುಜರಾತ್‌ನಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಇರಿಸಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ಆರು ವಾರಗಳ ನಂತರ ಉತ್ತರ ನೀಡುವಂತೆ ಗುಜರಾತ್ ಹೈಕೋರ್ಟ್ ನೋಟಿಸ್ ನೀಡಿದ್ದು ಹೇಗೆ ಎಂದು ಪ್ರಶ್ನಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತೀಸ್ತಾ ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠವು, ಹೈಕೋರ್ಟ್ ತನ್ನ ಜಾಮೀನು ಅರ್ಜಿಯನ್ನು ನಿರ್ಧರಿಸುವವರೆಗೆ ತೀಸ್ತಾ ಅವರು ತನ್ನ ಪಾಸ್‌ಪೋರ್ಟ್ ಅನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಮಧ್ಯಂತರ ಜಾಮೀನು ನೀಡುವ ವೇಳೆ ತಿಳಿಸಿದೆ.
ಇದನ್ನೂ ಓದಿ: ‘ಜಾಮೀನು ನಿರಾಕರಿಸಲು ಕಾರಣವೇ ಇಲ್ಲ’: ತೀಸ್ತಾ ಸೆಟಲ್ವಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್
“ಅರ್ಜಿದಾರರು 2 ತಿಂಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದಾರೆ. ಈ ಹಂತದಲ್ಲಿ ಗುಜರಾತ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅವರ ವಸ್ತುನಿಷ್ಠ ಅರ್ಜಿಯ ಪರಿಗಣನೆಯ ಬಾಕಿ ಇರುವಾಗ ಮಧ್ಯಂತರ ಜಾಮೀನಿನ ಪರಿಹಾರಕ್ಕೆ ಖಂಡಿತವಾಗಿಯೂ ಅರ್ಹರಾಗಿರುತ್ತಾರೆ” ಎಂದು ಸಿಜೆಐ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಪ್ರಕರಣದಲ್ಲಿ ತೀಸ್ತಾ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಸೂಕ್ತವೆಂದು ಪರಿಗಣಿಸುವ ಷರತ್ತುಗಳಿಗೆ ಒಳಪಟ್ಟು ಅವರನ್ನು ಆದಷ್ಟು ಬೇಗ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಎಂದು ಸುಪ್ರೀಂಕೋರ್ಟ್ ಗುಜರಾತ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ನ್ಯಾಯಾಲಯವು ಪರಿಗಣಿಸುವವರೆಗೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ಮತ್ತು ಬಾಕಿ ಉಳಿದಿರುವ ಪ್ರಕರಣದಲ್ಲಿ ಸಂಪೂರ್ಣ ಸಹಕಾರವನ್ನು ನೀಡುವಂತೆ ತೀಸ್ತಾ ಅವರಿಗೆ ಸುಪ್ರೀಂ ಸೂಚಿಸಿದೆ. ಹೀಗಾಗಿ ತೀಸ್ತಾ ಅವರು ಪಾಸ್‌ಪೋರ್ಟ್ ಅನ್ನು ಸಲ್ಲಿಸಿ, ಇತರ ಜಾಮೀನು ಔಪಚಾರಿಕತೆಗಳ ನಂತರ ಬಿಡುಗಡೆಯಾಗುತ್ತಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?
2002 ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ ‘ಅಮಾಯಕರನ್ನು’ ಬಂಧಿಸಲು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಗುಜರಾತ್ ಪೋಲೀಸರ ಭಯೋತ್ಪಾದನಾ ನಿಗ್ರಹ ದಳವು ಜೂನ್ 26 ರಂದು ಮುಂಬೈನಲ್ಲಿ ತೀಸ್ತಾ ಅವರನ್ನು ಬಂಧಿಸಿತ್ತು. ಅಂದಿನಿಂದ ಅವರು ಗಜರಾತಿನ ಜೈಲುಗಳಲ್ಲಿದ್ದಾರೆ.



ಜಾಮೀನು ದೊರಕುವುದು ತಡವಾಯಿತು, ಆದರೂ ಸದ್ಯಕ್ಕೆ ಇದು ಸಮಾದಾನಕರ ಸಂಗತಿ.