ವಾಮಾಚಾರ ನಡೆಸುತ್ತಿದ್ದ ಶಂಕೆಯ ಮೇಲೆ ಮೂವರು ಮಹಿಳೆಯರನ್ನು ಹತ್ಯೆಗೈದಿರುವ ಘಟನೆ ಜಾರ್ಖಂಡ್‌ನ ಬುಂಡು ಉಪವಿಭಾಗದ ಸೋನಾಹಟು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಮೃತ ಮಹಿಳೆಯರನ್ನು ರಾಯಲು ದೇವಿ (45) ಮತ್ತು ಧೋಲೋ ದೇವಿ (60) ಮತ್ತು ಅಲೂಮಣಿ ದೇವಿ (55) ಎಂದು ಗುರುತಿಸಲಾಗಿದೆ. ರಾಯಲು ದೇವಿ ಮತ್ತು ಧೋಲೋ ದೇವಿ ಅವರ ಶವಗಳನ್ನು ರಣದಿಹ್ ಅರಣ್ಯದಿಂದ ಭಾನುವಾರ ರಾತ್ರಿ ಪೊಲೀಸರು ಪತ್ತೆ ಹಚ್ಚಿದ್ದರು. ಅಲೂಮಣಿ ದೇವಿ ಅವರ ಕೊಳೆತ ಶವ ಅದೇ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಭಾನುವಾರ ಮಧ್ಯಾಹ್ನ ಸ್ಥಳೀಯ ಪತ್ರಕರ್ತರಿಂದ ಮೂವರು ಮಹಿಳೆಯರ ಹತ್ಯೆಯ ಬಗ್ಗೆ ಮಾಹಿತಿ ಪಡೆದೆವು. ಗ್ರಾಮಸ್ಥರ ತೀವ್ರ ಪ್ರತಿರೋಧದ ನಡುವೆ ಸೋನಾಹಟು ಪೊಲೀಸ್ ಠಾಣೆಯಿಂದ 25 ಕಿಮೀ ದೂರದಲ್ಲಿರುವ ಅರಣ್ಯದಲ್ಲಿ ರಾಹೆ ಮತ್ತು ಸೋನಾಹಟು ಪೊಲೀಸ್ ಠಾಣೆಗಳು ಜಂಟಿಯಾಗಿ ಶೋಧ ನಡೆಸಿದ್ದವು. ಭಾನುವಾರದಿಂದ ಬಹುತೇಕ ಎಲ್ಲ ಪುರುಷರು ಗ್ರಾಮದಿಂದ ತಲೆಮರೆಸಿಕೊಂಡಿದ್ದರು” ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ದಿ ಟೆಲಿಗ್ರಾಫ್ ಆನ್‌ಲೈನ್ ವರದಿ ಹೇಳಿದೆ.
ಇದನ್ನೂ ಓದಿ: ಗುಂಪು ಹಿಂಸಾಚಾರ ವಿರೋಧಿ ಮಸೂದೆ ಅಂಗೀಕರಿಸಿದ ಜಾರ್ಖಂಡ್
“ಸೆಪ್ಟೆಂಬರ್ 1 ರ ರಾತ್ರಿ ತಾಮಾರ್‌ನ ಏಕಲವ್ಯ ವಿದ್ಯಾಲಯದ ವಿದ್ಯಾರ್ಥಿ ರಾಜ್ ಕಿಶೋರ್ ಮುಂಡಾ (18) ಹಾವು ಕಡಿತದಿಂದ ಸಾವನ್ನಪ್ಪಿದ್ದರು. ಅವರು ರಣದಿಹ್ ನಿವಾಸಿ ರಾಮ್ಸಾಕಲ್ ಸಿಂಗ್ ಮುಂಡಾ ಅವರ ಮಗನಾಗಿದ್ದು, ಅವರ ಸಾವು ವಾಮಾಚಾರದಿಂದ ನಡೆದಿದೆ ಎಂದು ಹಾವು ಹಿಡಿಯುವವರು ಹೇಳಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕನ ಸಾವಿನ ನಂತರ, ಗ್ರಾಮಸ್ಥರು ರಣದಿಹ್ ಗ್ರಾಮದ ಮಂತ್ರವಾದಿ ಮತ್ತು ಹಾವು ಹಿಡಿಯುವ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಈ ವ್ಯಕ್ತಿಯು ಗ್ರಾಮದಲ್ಲಿ ಕೆಲವು ಮಹಿಳೆಯರು ಮಾಡುವ ವಾಮಾಚಾರದಿಂದ ಈ ಸಾವು ಸಂಭವಿಸಿದೆ ಎಂದು ಹೇಳಿದ್ದಾನೆ. ಅಷ್ಟೆ ಅಲ್ಲದೆ ಅವರನ್ನು ತೊಡೆದುಹಾಕದಿದ್ದರೆ ಅವರು ಗ್ರಾಮವನ್ನೆ ನಾಶಪಡಿಸುತ್ತಾರೆ ಎಂದು ಕೂಡಾ ನಂಬಿಸಿದ್ದಾನೆ.
ಅಷ್ಟೆ ಅಲ್ಲದೆ ಮಹಿಳೆಯರು ತಮ್ಮ ಕುಟುಂಬದ ಇನ್ನೊಬ್ಬ ಯುವಕನನ್ನು ಶೀಘ್ರದಲ್ಲೇ ಕೊಲ್ಲುತ್ತಾರೆ ಎಂದು ಕೂಡಾ ಮಂತ್ರವಾದಿ ಗ್ರಾಮಸ್ಥರಿಗೆ ನಂಬಿಸಿದ್ದಾನೆ.
ಇದನ್ನೂ ಓದಿ: ಜಾರ್ಖಂಡ್: ವಾಮಾಚಾರದ ಆರೋಪ, ಮಹಿಳೆಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ ಗ್ರಾಮಸ್ಥರು
ಶುಕ್ರವಾರದಂದು ರಾಯಲು ದೇವಿಯ ಮಗ 19 ವರ್ಷದ ಲಲಿತ್ ಸಿಂಗ್ ಮುಂಡಾಗೆ ಕೂಡ ಹಾವು ಕಚ್ಚಿತ್ತು. ಚಿಕಿತ್ಸೆ ಬಳಿಕ ಆತನನ್ನು ರಕ್ಷಿಸಲಾಗಿತ್ತು. ನಂತರ ರಾಯಲು ದೇವಿಯನ್ನು ಕರೆತಂದು ಗ್ರಾಮಸ್ಥರು ಶನಿವಾರ ಸಭೆ ಕರೆದಿದ್ದರು. ಅಲ್ಲಿ ಅವರಿಗೆ ವಾಮಾಚಾರ ಮಾಡಿದ್ದಿ ಎಂದು ಥಳಿಸಿದ್ದರಿಂದ ಆಕೆ ಭಯದಿಂದ ವಾಮಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಗ್ರಾಮದಲ್ಲಿ ವಾಮಾಚಾರ ಮಾಡಿರುವ ಇತರೆ ಮಹಿಳೆಯರ ಹೆಸರು ಹೇಳುವಂತೆ ಒತ್ತಡ ಹೇರಿದಾಗ ಅವರು ಧೋಲೋ ದೇವಿ ಮತ್ತು ಅಲೂಮಣಿ ದೇವಿಯರ ಹೆಸರನ್ನು ಹೇಳಿಕೊಂಡಿದ್ದಾರೆ. ಇದರ ನಂತರ, ಗ್ರಾಮಸ್ಥರು ಮೂವರು ಮಹಿಳೆಯರನ್ನು ಹಿಡಿದು ರಣದಿಹ್ ಬಳಿಯ ಪರ್ವತಕ್ಕೆ ಕರೆದೊಯ್ದು ಕೊಂದಿದ್ದಾರೆ.
ಗ್ರಾಮದ ಸುರೇಂದರ್ ಮುಂಡಾ ಎಂಬುವರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಎಂಟು ಮಂದಿಯನ್ನು ಬಂಧಿಸಿರುವುದನ್ನು ರಾಂಚಿ ಎಸ್‌ಎಸ್‌ಪಿ ಕಿಶೋರ್ ಕೌಶಲ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ವಾಮಾಚಾರದ ಶಂಕೆಯಿಂದ ವೃದ್ಧೆಗೆ ಬೆಂಕಿ ಹಚ್ಚಿದ್ದ ಐವರ ಬಂಧನ
“ಘೋರ ಘಟನೆಯ ಕುರಿತು ತನಿಖೆ ನಡೆಸಲು ನಾವು ಎಸ್‌ಐಟಿಯನ್ನು ರಚಿಸಿದ್ದೇವೆ. ಇದುವರೆಗೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ 16 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗ್ರಾಮಸ್ಥರಿಗೆ ಪ್ರಚೋದನೆ ನೀಡಿದ ಮಂತ್ರವಾದಿಯನ್ನೂ ನಾವು ಬಂಧಿಸುತ್ತೇವೆ” ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.


