ಒಂದು ರಾಜ್ಯದಲ್ಲಿ ಅತ್ಯಾಚಾರದ ಆರೋಪಿ ಸರ್ಕಾರದ ಪ್ರಭಾವಿ ಸಚಿವನಾಗಿರುತ್ತಾನೆ, ಅತ್ಯಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದರೂ ಸರ್ಕಾರ ಅಥವಾ ಆತನ ಪಕ್ಷ ಆತನ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ; ಮತ್ತೊಂದು ಪ್ರಕರಣದಲ್ಲಿ ಅದೇ ರಾಜ್ಯದಲ್ಲಿ ದಲಿತ ಬಾಲಕಿಯ ಮೇಲೆ ಭೀಕರ ಸಾಮೂಹಿಕ ಅತ್ಯಾಚಾರ ನಡೆದು ಆಕೆ ಸಾವಿಗೀಡಾದರೂ, ಸರ್ಕಾರದ ಇಡೀ ಯಂತ್ರಾಂಗ ಮೇಲ್ಜಾತಿಯ ಅಪರಾಧಿಗಳ ರಕ್ಷಣೆಗೆ ನಿಲ್ಲುತ್ತದೆ. ಮತ್ತೂ ಒಂದು ರಾಜ್ಯದಲ್ಲಿ ಕೋಮುಗಲಭೆಗಳ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಸಮೂಹಕೊಲೆಗಳನ್ನು ನಡೆಸಿ ಅಪರಾಧ ಸಾಬೀತಾಗಿ ಜೀವಾವಧಿ ಜೈಲಾಗಿದ್ದ ಅಪರಾಧಿಗಳನ್ನು ಅವಧಿಗೆ ಮುನ್ನವೇ ’ಸನ್ನಡತೆ’ಯ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಗದೊಂದು ರಾಜ್ಯದಲ್ಲಿ ಪ್ರಭಾವಿ ಸ್ವಾಮೀಜಿಯೊಬ್ಬರ ಮೇಲೆ ಬಾಲಕಿಯರಿಗೆ ಲೈಂಗಿಕ ಕಿರುಕುಳದ ಆರೋಪದ ಅಡಿಯಲ್ಲಿ ಪೋಕ್ಸೋ ಕಾಯ್ದೆಯ ಪ್ರಕಾರ ಕೇಸು ದಾಖಲಾಗಿ ದಿನಗಳೇ ಕಳೆದರೂ ಬಂಧನ ಹಾಗಿರಲಿ ಆರೋಪಿಯನ್ನು ವಿಚಾರಣೆಗೂ ಒಳಪಡಿಸಲಾಗುವುದಿಲ್ಲ. ಅವರು ಸಾಕ್ಷ್ಯನಾಶ ಮಾಡಲು ಎಲ್ಲ ಅವಕಾಶವಾಗುವಂತೆ ಅವರನ್ನು ಸ್ವತಂತ್ರವಾಗಿ ಬಿಡಲಾಗುತ್ತದೆ. ಈ ಎಲ್ಲದರಲ್ಲೂ ಎರಡು ಸಂಗತಿಗಳು ಸಾಮಾನ್ಯವಾದದ್ದಾಗಿವೆ; ಬಲಾಢ್ಯರು ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಯ ಆರೋಪಿಗಳಾಗಿದ್ದವರು ಮತ್ತು ಎಲ್ಲ ಕಡೆಯೂ ಆಳುತ್ತಿದ್ದ ಸರ್ಕಾರಗಳು ಬಿಜೆಪಿಯೇ ಆಗಿದ್ದವು! ಇದು ಅವರ ಶ್ರೇಣೀಕರಣವನ್ನು ಸಮರ್ಥಿಸುವ ಸಿದ್ಧಾಂತಕ್ಕೂ ಹೆಣ್ಣುಮಕ್ಕಳನ್ನೂ ಒಳಗೊಂಡಂತೆ ದಮನಿತರ ಮೇಲೆ ಇಲ್ಲೆಲ್ಲ ಹೆಚ್ಚುತ್ತಿರುವ ದೌರ್ಜನ್ಯಗಳಿಗೂ ಇರುವ ಆಳವಾದ ಸಂಬಂಧವನ್ನು ಸೂಚಿಸುತ್ತದೆ.
ಉತ್ತರ ಪ್ರದೇಶದ ಉನ್ನಾವೋ ಪ್ರಕರಣ
ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದ ಉನ್ನಾವೋನಲ್ಲಿ, ಬಿಜೆಪಿಯ ಪ್ರಭಾವಿ ರಾಜಕಾರಣಿ ಮತ್ತು ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್, 18 ವರ್ಷದ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪ ಬಂತು. ಒಮ್ಮೆಯಲ್ಲ, ಹಲವು ಬಾರಿ ಆಕೆಯನ್ನು ತನ್ನ ಅಧಿಕಾರದ ಬಲದಿಂದ ಬಳಸಿಕೊಂಡ. ಈ ವಿಚಾರ ತಿಳಿದಾಗ ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದರು. ಆದರೆ, ರಾಜಕಾರಣಿಯ ಹಣ ಮತ್ತು ಅಧಿಕಾರದ ದರ್ಪದ ಮುಂದೆ ಬಡವರ ಗೋಳು ಪೊಲೀಸರ ಕಿವಿಗೆ ಹೇಗಾದರೂ ಬೀಳಲು ಸಾಧ್ಯ? ಕೆಲವು ತಿಂಗಳುಗಳ ಕಾಲ ಪ್ರಕರಣ ಕತ್ತಲಲ್ಲೇ ಇತ್ತು. ಸಂತ್ರಸ್ತೆ, ಆಕೆಯ ತಂದೆ ಮತ್ತು ಕುಟುಂಬದ ಹೋರಾಟದ ಫಲವಾಗಿ ಹೀಗೊಂದು ಪ್ರಕರಣ ನಡೆದಿದೆಯೆಂಬುದು ಜಗಜ್ಜಾಹೀರಾದಾಗ, ಆರೋಪಿಯ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ದೇಶಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಆಗ, ಪೊಲೀಸರು ಪ್ರಕರಣ ದಾಖಲಿಸಿಕೊಂಡರು, ಆದರೆ ಬಂಧಿಸಲಿಲ್ಲ. ಇದನ್ನು ಪ್ರಶ್ನಿಸಿ ಯುವತಿ ಕೋರ್ಟಿನ ಮೊರೆಹೋದಾಗ ನ್ಯಾಯಾಲಯದ ಆದೇಶದಂತೆ ಆತನನ್ನು ಕೊನೆಗೂ ಬಂಧಿಸಲಾಯಿತು. ಇಷ್ಟಕ್ಕೆ, ಆಕೆಯ ಹೋರಾಟ ಯಶಸ್ವಿಯಾಯಿತೆಂದು ಭಾವಿಸಲಾಗದು. ನಿಜವಾದ ಸಂಘರ್ಷಮಯ ದಿನಗಳು ಇದರ ನಂತರ ಆರಂಭವಾದವು. ಸೆಂಗರ್‌ನ ಬಂಧನದ ಕೆಲವು ವಾರಗಳಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದ ಯುವತಿಯ ತಂದೆ ಅನುಮಾನಾಸ್ಪದವಾಗಿ ಸಾವಿಗೀಡಾದರು. ಆಕೆಗೆ ನಿರಂತರ ಜೀವಬೆದರಿಕೆಗಳು ಬರಲಾರಂಭಿಸಿದವು. ಉತ್ತರ ಪ್ರದೇಶದ ಬಿಜೆಪಿಯ ಬೇರೆಬೇರೆ ಸ್ತರಗಳ ನಾಯಕರು ಆಕೆಯನ್ನು ಬೆದರಿಸುವಂತಹ ಬಹಿರಂಗ ಹೇಳಿಕೆಗಳನ್ನು ನೀಡಲಾರಂಭಿಸಿದರು.

ಇದೆಲ್ಲದರಾಚೆಗೂ, ಉನ್ನಾವೋ ಯುವತಿಯ ಹೋರಾಟ ಗಟ್ಟಿಯಾಗಿಯೇ ಮುಂದುವರಿದಾಗ, ಕೋರ್ಟಿಗೆ ಹೋಗಿ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಆಕೆಯ ಕಾರು ಭೀಕರ ಅಪಘಾತಕ್ಕೆ ಗುರಿಯಾಯಿತು. ಅದಕ್ಕೆ ಕೆಲವು ದಿನಗಳ ಹಿಂದಷ್ಟೇ ಆರೋಪಿ ಶಾಸಕ ಸೆಂಗರ್ ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಕೆಗೆ ಸರಿಯಾದ ಶಾಸ್ತಿಯಾಗಲಿದೆ ಎಂಬರ್ಥ ಬರುವಂತೆ ಮಾತನಾಡಿದ್ದ. ಕಾರಿನಲ್ಲಿ ಸಂತ್ರಸ್ತೆ, ಆಕೆಯ ವಕೀಲರು ಮತ್ತು ಬಂಧುಗಳಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವೋ ಸಂತ್ರಸ್ತೆ ನಂತರ ಚೇತರಿಸಿಕೊಂಡಳಾದರೂ, ಈ ನಡುವೆ ಆಕೆಯ ಕಾರಿಗೆ ಆದ ಅಪಘಾತ ಆಕಸ್ಮಿಕವಲ್ಲ ಎಂಬ ಖಚಿತ ಅಭಿಪ್ರಾಯ ದೇಶಾದ್ಯಂತ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯದಿಂದ ಹೊರಗಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು.
ಹಾತ್ರಸ್‌ನಲ್ಲಿ ಆರೋಪಿಗಳಿಗೆ ರಕ್ಷಣೆ, ಸಂತ್ರಸ್ತೆಯ ಕುಟುಂಬಕ್ಕೆ ಜೈಲಿನಂತಹ ಗೃಹಬಂಧನ
2020ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹಾತ್ರ್ರಸ್‌ನಲ್ಲಿ 19 ವರ್ಷದ ದಲಿತ ಯುವತಿಯನ್ನು ಮೇಲ್ಜಾತಿಗೆ ಸೇರಿದ್ದ ನಾಲ್ವರು ಪುರುಷರು ಕ್ರೂರವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಪಡಿಸಿದರು. ಆಕೆ ಅವರ ಬಲಾತ್ಕಾರಕ್ಕೆ ಸುಲಭಕ್ಕೆ ತುತ್ತಾಗದೆ ಪ್ರತಿಭಟಿಸಿದ್ದಕ್ಕೆ ಕತ್ತು ಹಿಸುಕಿ, ನಾಲಿಗೆ ಕತ್ತರಿಸಿ ದೌರ್ಜನ್ಯವೆಸಗಿದ್ದರು. ಆಕೆ ಅದೆಷ್ಟು ನಲುಗಿ ಹೋಗಿದ್ದಳೆಂದರೆ ದೆಹಲಿಯ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳ ಕಾಲ ಸಾವುಬದುಕಿನ ನಡುವೆ ಒದ್ದಾಡಿ ಕೊನೆಯುಸಿರೆಳೆದಳು. ದುರಂತದ ಸಂಗತಿಯೆಂದರೆ, ಇಂತಹ ಭೀಕರ ಅತ್ಯಾಚಾರ ಮತ್ತು ಸಾವಿನ ಪ್ರಕರಣದಲ್ಲೂ ಪ್ರಕರಣ ದಾಖಲಿಸುವುದು ಸುಲಭದ ವಿಚಾರವಾಗಿರಲಿಲ್ಲ. ಬಹಳಷ್ಟು ಪ್ರಯತ್ನದ ನಂತರ ಪ್ರಕರಣ ದಾಖಲಾಗಿ ಆರೋಪಿಗಳ ಬಂಧನವಾದದ್ದು ಒಂದೆಡೆಯಾದರೆ, ಮತ್ತೊಂದೆಡೆ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಗದ್ದಲ ಆರಂಭವಾಯಿತು. ಮಾಜಿ ಎಂಎಲ್‌ಎ ರಾಜವೀರ್ ಸಿಂಗ್ ಥಾಕೂರ್ ತನ್ನ ಹಿಂಬಾಲಕರನ್ನು ಸೇರಿಸಿ ಸಂತ್ರಸ್ತೆಯ ಊರಿನಲ್ಲಿ ದೊಡ್ಡ ಸಭೆ ನಡೆಸಿದ್ದೂ ಅಲ್ಲದೆ ಸಂತ್ರಸ್ತೆಯ ಕುಟುಂಬದ ಮೇಲೆ ದೂರು ದಾಖಲಿಸಬೇಕೆಂದು ಪೊಲೀಸರ ಮೇಲೆ ಒತ್ತಡ ಹಾಕಿದರು. ಆರೋಪಿಗಳ ರಕ್ಷಣೆಗೆ ಆಡಳಿತಾರೂಢ ಸರ್ಕಾರದ ಇಡೀ ಯಂತ್ರಾಂಗವೇ ನಿಂತಿತ್ತು. ಮೊದಲನೆಯದಾಗಿ, ಸಂತ್ರಸ್ತೆಯ ಸಾವಿನ ನಂತರ ಕುಟುಂಬ ಸದಸ್ಯರ ಒಪ್ಪಿಗೆಯಿಲ್ಲದೆ ಪೊಲೀಸರು ಮಧ್ಯರಾತ್ರಿಯಲ್ಲಿ ಆಕೆಯ ಶವವನ್ನು ಸುಟ್ಟುಹಾಕಿದರು. ಆಕೆಯನ್ನು ತಮ್ಮ ಗ್ರಾಮದಲ್ಲಿ ತಮ್ಮ ಸಂಪ್ರದಾಯದ ಪ್ರಕಾರ ಹೂಳುತ್ತೇವೆಂದು ಕುಟುಂಬದವರು ಎಷ್ಟೇ ಗೋಗರೆದರೂ ಕೇಳದ ಪೊಲೀಸರಿಗೆ ಶವಸಂಸ್ಕಾರ ಮಾಡುವುದು ಏಕೆ ತುರ್ತಿನ ವಿಚಾರವಾಗಿತ್ತೆಂಬ ಪ್ರಶ್ನೆ ಎದ್ದಿತು. ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮೊದಲೇ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಅತ್ಯಾಚಾರವೇ ನಡೆದಿಲ್ಲ ಎಂದು ಪೊಲೀಸ್ ಅತ್ಯುನ್ನತ ಅಧಿಕಾರಿಗಳು ಸರಣಿ ಹೇಳಿಕೆ ನೀಡಲಾರಂಭಿಸಿದರು. ಈಗ ದೌರ್ಜನ್ಯ ಮತ್ತು ಆಕೆಯ ಸಾವು ಸಂಭವಿಸಿ ಎರಡು ವರ್ಷಗಳ ನಂತರವೂ, ಆಕೆಯ ಕುಟುಂಬ ಭಯಭೀತರಾಗಿ, ಪೊಲೀಸ್ ರಕ್ಷಣೆಯಲ್ಲಿ ಗೃಹಬಂಧನದಂತಹ ಪರಿಸ್ಥಿತಿಯಲ್ಲಿ ಬದುಕಬೇಕಾದ ದುರಂತ ಸ್ಥಿತಿಯಿದೆ!
ಬಿಲ್ಕಿಸ್ ಪ್ರಕರಣ ಮತ್ತು ಅಪರಾಧಿಗಳ ’ಸನ್ನಡತೆ’!
ಬಿಲ್ಕಿಸ್ ಬಾನು ಮತ್ತು ಆಕೆಯ ಜೊತೆಗಿದ್ದವರ ಮೇಲೆ 2002ರಲ್ಲಿ ಶಸ್ತ್ರಸಜ್ಜಿತ 20ಕ್ಕೂ ಹೆಚ್ಚು ಜನರ ಉದ್ರಿಕ್ತ ಗುಂಪೊಂದು ದಾಳಿ ನಡೆಸಿತ್ತು. ಆ ವೇಳೆ ಬಿಲ್ಕಿಸ್ ಬಾನು ಹಾಗೂ ಇತರ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಜೊತೆಗಿದ್ದ ಹಲವು ಪುರುಷರು ಮತ್ತು ಮಕ್ಕಳ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗುಜರಾತ್‌ನ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಗಂಭೀರವಾಗಿ ದಾಖಲಿಸಿಕೊಂಡು ತನಿಖೆ ನಡೆಸದಿದ್ದಾಗ ಬಿಲ್ಕಿಸ್ ಬಾನು ಹಲವು ನ್ಯಾಯಪರ ವಕೀಲರು ಮತ್ತು ಸಂಘಸಂಸ್ಥೆಗಳ ನೆರವಿನಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮೆಟ್ಟಿಲೇರಿದರು. ಘಟನೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸುಪ್ರೀಂ ಕೋರ್ಟ್‌ಗೆ ಒಯ್ದಿತ್ತು. ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಪ್ರಕರಣದ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು. ಅಹಮದಾಬಾದ್‌ನಲ್ಲಿ ವಿಚಾರಣೆ ಆರಂಭವಾಯಿತು. ಆದರೆ, ಬಿಲ್ಕಿಸ್ ಬಾನುಗೆ ಜೀವಬೆದರಿಕೆ ಕರೆಗಳು ಬರಲಾರಂಭಿಸಿದ ನಂತರ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 2008ರ ಜನವರಿ 21ರಂದು 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2017ರಲ್ಲಿ ಎತ್ತಿ ಹಿಡಿದಿತ್ತು. ಅವರಲ್ಲಿ ಒಬ್ಬ ಆರೋಪಿಯ ಕ್ಷಮಾದಾನದ ಅರ್ಜಿಯ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಕ್ಷಮಾದಾನದ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದಕೂಡಲೇ ಗುಜರಾತ್ ಸರ್ಕಾರವು ಆಗಸ್ಟ್ 15ರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆಪದಲ್ಲಿ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸಿತು.
ಇಡೀ ದೇಶದ ಮಹಿಳಾ ಸಮುದಾಯ ಹೀಗೆ ಆತಂಕದ ಸ್ಥಿತಿಯಲ್ಲಿದ್ದರೆ, ದಮನಿತ ಸಮುದಾಯಗಳ ಮಹಿಳೆಯರ ಸಮಸ್ಯೆಗಳ ಭಾರ ಇನ್ನೂ ಹೆಚ್ಚು. ಒಂದೆಡೆ ಹೆಚ್ಚುತ್ತಿರುವ ಸಾಮಾಜಿಕ ಕ್ಷೆಭೆಯಿಂದ ದಲಿತ, ಆದಿವಾಸಿ, ಮುಸ್ಲಿಂ, ದಲಿತ ಕ್ರಿಶ್ಚಿಯನ್ ಸಮುದಾಯಗಳ ಹೆಣ್ಣುಮಕ್ಕಳು ಹೆಚ್ಚೆಚ್ಚು ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಮಾತ್ರವಲ್ಲ, ಆ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಆ ಸಮುದಾಯಗಳಿಗೆ ’ಪಾಠ’ ಕಲಿಸಿ, ’ದೇಶಭಕ್ತಿ’ ಕಲಿಸಿ, ಹದ್ದುಬಸ್ತಿನಲ್ಲಿಡಲು ಸರಿಯಾದ ಮಾರ್ಗ ಎಂಬಂತಹ ಅಮಾನವೀಯವಾದ ಸಮರ್ಥನೆಗಳು ಜನಸಾಮಾನ್ಯರ ಮನಸ್ಸುಗಳನ್ನೂ ತಲುಪಿರುವುದನ್ನು ಕಾಣುತ್ತೇವೆ. ಕಾಶ್ಮೀರದ 8 ವರ್ಷದ ಅಲೆಮಾರಿ ಸಮುದಾಯದ ಮುದ್ದುಮಗುವನ್ನು ದೇವಸ್ಥಾನದಲ್ಲಿ ಕೂಡಿಹಾಕಿ ದಿನಗಟ್ಟಲೆ ಕ್ರೂರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲು ಬಿಡದೆ, ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಸಂಘಟನೆಗಳು ಗಲಾಟೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಕಿವಿಗಪ್ಪಳಿಸಿದ್ದು ಇದೇ ವಾದ!
ನಾವೀಗ ಚಿಂತಿಸಬೇಕಾದದ್ದು ಆರೋಪಿಗಳ ಬಗ್ಗೆಯಲ್ಲ, ಸಂತ್ರಸ್ತರ ಸುರಕ್ಷತೆಯ ಬಗ್ಗೆ
ನಮ್ಮದೇ ರಾಜ್ಯದಲ್ಲಿ ಮುರುಘಾ ಮಠಾಧೀಶ ಶಿವಮೂರ್ತಿ ಮುರುಘರ ಮೇಲೆ ಗಂಭೀರ ಲೈಂಗಿಕ ಕಿರುಕುಳದ ಪ್ರಕರಣ ವರದಿಯಾಗಿರುವ ಆತಂಕದ ಸಮಯದಲ್ಲಿ ಅದಕ್ಕಿಂತಲೂ ಆತಂಕದ ವಿಚಾರವೇನೆಂದರೆ ಈ ಪ್ರಕರಣದಲ್ಲಿನ್ನೂ ತನಿಖೆ ಆರಂಭವಾಗುವ ಮೊದಲೇ ಕೆಲವು ಟಿವಿ ವಾಹಿನಿಗಳು ಅಭಿಪ್ರಾಯ ರೂಪಿಸುವಂತಹ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು! ಹಾಗೆಯೇ, ಈ ಪ್ರಕರಣದ ಸುತ್ತಲಿನ ಇಡೀ ಚರ್ಚೆಯನ್ನು ’ಈ ಆರೋಪದ ಹಿಂದೆ ಯಾರಿದ್ದಾರೆ?’ ಎಂಬಂತೆ ತಿರುಚಿ ಪ್ರಕರಣಕ್ಕೆ ನೇರವಾಗಿ ಸಂಬಂಧಿಸದ ಮತ್ತು ಏಕಪಕ್ಷೀಯವಾದ ಹೇಳಿಕೆಗಳ ಮೂಲಕ ಮಠದ ಒಳಗಿನ ರಾಜಕಾರಣ ಮತ್ತು ಕೆಲವು ಪ್ರಭಾವಿಗಳ ನಡುವಿದ್ದ ಪರಸ್ಪರ ದ್ವೇಷಾಸೂಯೆಗಳ ದಿಕ್ಕಿಗೆ ಹೊರಳಿಸಲಾಗುತ್ತಿದೆ.
ಈಗ ಚರ್ಚೆಯ ಕೇಂದ್ರವಾಗಬೇಕಿದ್ದ ಸಂಗತಿಯಾದರೂ ಏನು? ಅದು ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಯ ವಿಚಾರ.
ಯಾಕೆಂದರೆ, ಈ ದೇಶಕ್ಕೆ ಲೈಂಗಿಕ ಹಿಂಸಾಚಾರ, ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಹಲವು ಬಗೆಯ ಒತ್ತಡಗಳ ಮರೆಗೆ ನಿಲುಕಿಸಿ ನ್ಯಾಯವನ್ನು ಉಸಿರುಕಟ್ಟಿಸುವ ಸುದೀರ್ಘ ಇತಿಹಾಸವಿದೆ. ಜಾತಿ, ಧರ್ಮ ಮತ್ತು ಜನಾಂಗಗಳ ಆಧಿಪತ್ಯವನ್ನು ಸಾರುವುದಕ್ಕಾಗಿ, ಹೆಣ್ಣುಮಕ್ಕಳ ಘನತೆ-ಗೌರವಗಳನ್ನು ಮಣ್ಣುಪಾಲು ಮಾಡುವ ಅಧಿಕಾರೂಢ ಮನಸ್ಥಿತಿಯ ಆಳವಾದ ಹಿನ್ನೆಲೆಯಿದೆ. ವಿಶೇಷವಾಗಿ ತಳಸಮುದಾಯಗಳ, ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಯಾವುದೇ ಅಧಿಕಾರವಿಲ್ಲದ ಶೋಷಿತ ಮಹಿಳೆಯರು, ಅಸಹಾಯಕರಾದ ಮಕ್ಕಳು, ವಿಕೃತ ಮನಸ್ಥಿತಿಯ ತೆವಲಿಗೋ ಅಥವಾ ಜಾತಿ-ಜನಾಂಗಗಳ-ಪುರುಷತ್ವದ ಮೇಲರಿಮೆಯನ್ನು ಹೆಚ್ಚಿಸಿಕೊಳ್ಳುವ ದುಷ್ಟತನಕ್ಕೋ ಅತ್ಯಂತ ಬರ್ಬರವಾದಂತಹ ಲೈಂಗಿಕ ಹಿಂಸಾಚಾರಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ.

ಭಾರತದಲ್ಲಿ ಈಗಲೂ ಪ್ರತಿ ಗಂಟೆಗೆ 3 ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ ಗಂಟೆಗೆ 5 ಮಕ್ಕಳ ಮೇಲೆ ಲೈಂಗಿಕ ದಾಳಿ ಮತ್ತು ಹಿಂಸಾಚಾರ ನಡೆದ ಪ್ರಕರಣಗಳು ದಾಖಲಾಗುತ್ತಿವೆ (ಎನ್‌ಸಿಆರ್‌ಬಿ 2019 ಅಂಕಿಅಂಶ). ಕೋವಿಡ್ ಸಾಂಕ್ರಾಮಿಕ ತೀವ್ರ ರೂಪದಲ್ಲಿದ್ದ ಕೇವಲ 7 ತಿಂಗಳಗಳಲ್ಲೇ 13,244 ಮಕ್ಕಳ ಮೇಲಿನ ಅತ್ಯಾಚಾರ, ಸಾಮೂಹಿಕ ಅತ್ಯಾಚಾರಗಳು ದಾಖಲಾಗಿವೆ. (ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ ವರದಿ2020). 2018ರಲ್ಲಿ 1,54,526 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದವು (ಆನಂತರದಲ್ಲಿ ಈ ಅಂಕಿಅಂಶ ಸರ್ಕಾರಿ ಇಲಾಖೆಗಳಲ್ಲಿ ಅಪ್‌ಡೇಟ್ ಆಗಿಲ್ಲ). 2012ರ ನಿರ್ಭಯಾ ಪ್ರಕರಣದ ನಂತರ ನಡೆದ ಪ್ರತಿಭಟನೆಗಳ ಪ್ರವಾಹದ ಕಾರಣದಿಂದ ರೂಪುತಳೆದ ’ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ- ಪೋಕ್ಸೋ’ದಂತಹ ಗಟ್ಟಿಯಾದ ಕಾಯ್ದೆಯ ನಂತರವೂ ಇಂದಿಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕೇವಲ 34.9%. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶದಂತೆಯೇ 2019ರ ವೇಳೆಗೆ ವೇಶ್ಯಾವಾಟಿಕೆಯಲ್ಲಿ ಒತ್ತಾಯಪೂರ್ವಕವಾಗಿ ತಳ್ಳಲ್ಪಟ್ಟ ಅಪ್ರಾಪ್ತ ಮಕ್ಕಳ ಸಂಖ್ಯೆ ಭಾರತದಲ್ಲಿ 12 ಲಕ್ಷದಷ್ಟಿತ್ತು, ಆದರೆ ಈ ಕುರಿತು ದಾಖಲಾದ ಪ್ರಕರಣಗಳು ಕೇವಲ 529.
ನಮ್ಮ ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಮತ್ತು ಅವುಗಳಲ್ಲಿ ನ್ಯಾಯ ದೊರೆಯುವಿಕೆಯ ಪರಿಸ್ಥಿತಿ ಇಷ್ಟು ಘೋರ ಸ್ವರೂಪದಲ್ಲಿರುವಾಗ, ಸಮಾಜದಲ್ಲಿ ಅತಿಹೆಚ್ಚು ಚರ್ಚೆ ಮತ್ತು ಕಾಳಜಿ ಹುಟ್ಟಬೇಕಿರುವುದು ಆರೋಪಿಗಳ ಕುರಿತಾಗಿ ಅಲ್ಲ, ಬದಲಿಗೆ ಸಂತ್ರಸ್ತೆಯರ ಕುರಿತಾಗಿ. ಇನ್ನೆಲ್ಲ ರಾಜಕಾರಣ ಮತ್ತು ಜಿದ್ದಾಜಿದ್ದಿಗಳ ವಿಷಯಗಳನ್ನು ಪಕ್ಕಕ್ಕಿಟ್ಟು ನಾವು ಚಿಂತಿಸಬೇಕಿರುವುದು ನಮ್ಮ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ.
ಇಂದಿನವರೆಗೆ ಮಹಿಳೆಯ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ಥಾನಮಾನ, ಹೆಚ್ಚೂ ಕಡಿಮೆ ನಗಣ್ಯವೆನಿಸುವಂತಿದೆ. ಮಹಿಳೆಯರು ಬೆರಳೆಣಿಕೆಯ ಸಂಖ್ಯೆಯಲ್ಲಿ ರಾಜಕಾರಣದ ಮುಖ್ಯಧಾರೆಯಲ್ಲಿ ಕಾಣುವುದು ಮಾತ್ರವಷ್ಟೇ ಅಲ್ಲ, ಅವರ ಸಮಸ್ಯೆಗಳನ್ನು ಈ ರಾಜಕೀಯ ವ್ಯವಸ್ಥೆ ಕೈಗೆತ್ತಿಕೊಳ್ಳುವ ರೀತಿಯಲ್ಲೀ ಸಮಸ್ಯೆ ಎದ್ದುಕಾಣುತ್ತದೆ. ಈ ಎಲ್ಲ ಬೃಹತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇರುವುದು, ಎಲ್ಲ ಭಿನ್ನತೆಗಳ ನಡುವೆ ಸೇರುವ ಬಿಂದುಗಳನ್ನು ಮಹಿಳಾ ಸಮುದಾಯ ಗುರುತಿಸಿಕೊಳ್ಳುತ್ತಾ, ಒಗ್ಗೂಡುತ್ತಾ ಹೋಗುವುದರಲ್ಲಿ ಮಾತ್ರ. ಬೇರೆಬೇರೆ ಗುರುತುಗಳಿಂದ ಈ ಸಮಾಜದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಮಹಿಳೆಯರು, ತಮ್ಮ ನೆಲೆಯಿಂದ ಮಾತ್ರವಲ್ಲದೆ, ಎದುರಿರುವ ಮತ್ತೊಬ್ಬ ಮಹಿಳೆಯ ನೆಲೆಯಿಂದ ಸಮಾಜವನ್ನು ಕಾಣಲು ಸಾಧ್ಯವಾಗಬೇಕು. ಇದಕ್ಕೆ ಬೇಕಾದ ವೈಚಾರಿಕ ಎಚ್ಚರಕ್ಕೆ ಅಡಿಪಾಯ ಹಾಕುವ ಕೆಲಸ ಅತ್ಯಗತ್ಯವಾಗಿ ಈಗ ಆಗಬೇಕಾಗಿದೆ.
ಇಂತಹ ಬೃಹತ್ ಸಾಮುದಾಯಿಕ ಜಾಗೃತಿ ಅಷ್ಟು ವೇಗವಾಗಿ ಮತ್ತು ಸುಲಭವಾಗಿ ಆಗುವಂತಹ ಕೆಲಸ ಖಂಡಿತ ಅಲ್ಲ. ಆದರೆ, ಅದಕ್ಕೆ ಬೇಕಾದ ಪೂರ್ವತಯಾರಿ ಮತ್ತು ಅಡಿಪಾಯ ಹಾಕುವ ಕೆಲಸ ಈಗಿನಿಂದ ನಡೆಯಬೇಕಾಗುತ್ತದೆ. ಆದ್ದರಿಂದಲೇ, ಬೇರೆಬೇರೆ ದಿಕ್ಕಿನಿಂದ ಮಹಿಳೆಯರ ಅನೇಕ ರೀತಿಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವ ಎಲ್ಲ ಸಾಮಾಜಿಕ ಸಂಘಟನೆಗಳ ನಡುವಿನ ಸಮನ್ವಯ ಇಂದು ಬಹುಮುಖ್ಯವಾದ ಆಗಬೇಕಿದೆ.

ಮಲ್ಲಿಗೆ ಸಿರಿಮನೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಎದೆ ನೋವು ನೆಪದಲ್ಲಿ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ ಮುರುಘಾ ಶರಣರು