Homeಅಂಕಣಗಳುಸಂದರ್ಶನ; 'ಒಂದು ಕತೆ, ಒಂದು ಕವನದಿಂದ ಎಲ್ಲೋ, ಏನೋ ಬದಲಾಗಬಹುದೆಂಬ ನಂಬಿಕೆಯಿಂದ ಬರೆಯಬೇಕು'

ಸಂದರ್ಶನ; ‘ಒಂದು ಕತೆ, ಒಂದು ಕವನದಿಂದ ಎಲ್ಲೋ, ಏನೋ ಬದಲಾಗಬಹುದೆಂಬ ನಂಬಿಕೆಯಿಂದ ಬರೆಯಬೇಕು’

- Advertisement -
- Advertisement -

ದಾದಾಪೀರ್ ಜೈಮನ್ ಅವರು ಒಂದರ ಹಿಂದೊಂದರಂತೆ ಎರಡು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಕ್ಬಾಲುನ್ನೀಸಾ ಹುಸೇನ್ ಅವರ ’ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಕ್ಕಾಗಿ 2021ನೇ ಸಾಲಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಮತ್ತು ತಮ್ಮ ಚೊಚ್ಚಲ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2022ನೇ ಸಾಲಿನ ‘ಯುವ ಸಾಹಿತ್ಯ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಘೋಷಣೆ ಯಾದ ನಂತರ ಹಲವು ಮಾಧ್ಯಮಗಳು ಅವರನ್ನು ನಿರಂತರವಾಗಿ ಸಂಪರ್ಕಿಸುತ್ತಿರುವ ನಡುವೆಯೂ, naanugauri.com ಮತ್ತು ನ್ಯಾಯಪಥದ ಲೇಖಕರೂ ಆಗಿರುವ ದಾದಾಪೀರ್ ತಡರಾತ್ರಿಯವರೆಗೂ ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು.

ದಾದಾಪೀರ ಅವರ ಸಾಹಿತ್ಯದ ಕುರಿತಾಗಿ ನ್ಯಾಯಪಥ ಪತ್ರಿಕೆಗಾಗಿ ಶಶಾಂಕ್ ಎಸ್.ಆರ್ ನಡೆಸಿದ ಸಂದರ್ಶನದ ಬರಹ ರೂಪ ಇಲ್ಲಿದೆ.

ಶಶಾಂಕ್ ಎಸ್.ಆರ್: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿಗಳಿಗೆ ಭಾಜನರಾಗಿದ್ದೀರಿ. ಮೊದಲಿಗೆ ಅಭಿನಂದನೆಗಳು. ಸ್ವತಃ ಯುವ ಲೇಖಕರಾಗಿರುವ ನೀವು ಕನ್ನಡ ಸಾಹಿತ್ಯ ಲೋಕದ ಇಂದಿನ ಯುವ ಲೇಖಕರ ಬರವಣಿಗಳನ್ನು ಮತ್ತು ಅದಕ್ಕಿರುವ ಅವಕಾಶಗಳ ಬಗ್ಗೆ ಏನು ಹೇಳಲು ಬಯಸುತ್ತೀರಿ?

ದಾದಾಪೀರ್ ಜೈಮನ್: ಸಿನಿಮಾ, ನಾಟಕಗಳು ಸೇರಿದಂತೆ ಇತರ ಕಲಾಪ್ರಕಾರಗಳಿಗೆ ಹೋಲಿಸಿದಲ್ಲಿ ಬರವಣಿಗೆಗೆ ಬೇಕಿರುವ ಇನ್ವೆಸ್ಟ್‌ಮೆಂಟ್ ಕಡಿಮೆ ಇರುವ ಕಾರಣ ಬರವಣಿಗೆ ಹೆಚ್ಚು ಡೆಮಾಕ್ರಟಿಕ್ ಅನ್ನಿಸುತ್ತೆ. ಹಿಂದಿನ ಕಾಲದಲ್ಲಿ ಒಂದು ಪುಸ್ತಕ ಮತ್ತು ಪೆನ್ನಿದ್ದರೆ ಸಾಕಿತ್ತು. ಈಗ ಒಂದು ಲ್ಯಾಪ್‌ಟಾಪ್ ಅಥವಾ ಮೊಬೈಲಿದ್ದರೂ ಸಾಕು. ಎಲ್ಲರೂ ಬರೆಯಬಹುದು. ಬರೆದು ಕಳುಹಿಸಿದ್ದನ್ನು ಸಂಪಾದಕರು ಅಥವಾ ಅವರ ತಂಡ ಸೂಕ್ತವೆನಿಸಿದರೆ ಪ್ರಕಟಿಸುತ್ತಾರೆ. ವ್ಯವಸ್ಥೆಯು ಹಾಗಿರುವ ಕಾರಣಕ್ಕೆ, ಮೊದಲಿನಿಂದಲೂ ಯುವಕರು ಬರೆಯುತ್ತಾ ಬಂದಿದ್ದಾರೆ. ಬರವಣಿಗೆಯ ಮೇಲೆ ನಂಬಿಕೆಯಿರಿಸಿ ಬಹಳಷ್ಟು ಯುವಕರು ಬರೆಯುತ್ತಿದ್ದಾರೆ ಮತ್ತು ಅವರ ಕೃತಿಗಳು ಪ್ರಕಟವಾಗುತ್ತಿವೆ ಕೂಡ.

ಪ್ರ: ನೀವು ಗಮನಿಸುತ್ತಿರುವ ಸಮಕಾಲೀನ ಕನ್ನಡದ ಮತ್ತು ಇತರೆ ಭಾಷೆಗಳ ಬರಹಗಾರರು ಯಾರು?

: ಸಮಕಾಲೀನ ಎಂದರೆ ನನ್ನ ವಯಸ್ಸಿನ ಆಸುಪಾಸಿನಲ್ಲಿರುವವರು ಎಂದು ತಿಳಿಯುತ್ತೇನೆ. ಬೇರೆ ಭಾಷೆಗಳ ಸಮಕಾಲೀನ ಬರಹಗಾರರನ್ನ ಓದಿದರೂ ನಾನು ಅವರನ್ನು ಅಷ್ಟಾಗಿ ಗಮಿನಿಸಿಲ್ಲ. ವಿಚಾರ ಮತ್ತು ಕಲಾತ್ಮಕತೆ ಎರಡನ್ನೂ ಬೆರೆಸಿ, ಅದರ ಸಾಧ್ಯತೆಗಳನ್ನು ಯೋಚಿಸಿ ಬರೆಯಲಾದ ಬರಹಗಳು ನನಗೆ ಹೆಚ್ಚು ಇಷ್ಟ. ಆದ್ದರಿಂದ, ಆ ರೀತಿಯ ಬರಹಗಳನ್ನು ಹೆಚ್ಚಾಗಿ ಗಮನಿಸುತ್ತೇನೆ. ಕನ್ನಡದಲ್ಲಿ ಹೇಳುವುದಾದರೆ ಮುಸ್ತಫ ಕೆ. ಹೆಚ್, ಅಮರೇಶ್ ಗಿಣಿವಾರ್, ಇಸ್ಮಾಯಿಲ್ ತಳಕಲ್, ಮುದಿರಾಜ್ ಬಾಣದ್, ಫಾತಿಮ ರಲಿಯಾ ಮುಂತಾದವರ ಬರಹಗಳನ್ನು ಗಮನಿಸುತ್ತಿರುತ್ತೇನೆ.

ಪ್ರ: ಸಾಹಿತ್ಯವನ್ನು ಬೇರೆಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತದೆ. ನಿಮ್ಮ ಪ್ರಕಾರ ಸಾಹಿತ್ಯವೆಂದರೇನು?

: ಇದು ಬಹಳ ಜನರಲ್ ಆದ ಪ್ರಶ್ನೆ. ನನ್ನ ಮಟ್ಟಿಗೆ ಸಾಹಿತ್ಯವೆಂದರೆ ಅದು ಮನುಷ್ಯನನ್ನು ಕುರಿತಾದದ್ದು. ಅದು ಮನುಷ್ಯನ ಯಾತನೆಗಳನ್ನೂ ಮತ್ತು ಅದರ ಹಿಂದಿರುವ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನು ಶೋಧಿಸುವಂತಹದ್ದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ಮನುಷ್ಯರು ನಿರ್ದಿಷ್ಟ ಸಂದರ್ಭದಲ್ಲಿ ಏಕೆ ಹಾಗೆ ನಡೆದುಕೊಂಡರು ಎಂಬುದನ್ನು ಶೋಧಿಸುವುದು ಸಾಹಿತ್ಯದಲ್ಲಿ ಮುಖ್ಯವೆನಿಸುತ್ತದೆ. ನಾನ್-ಫಿಕ್ಷನ್‌ಗೆ ಜನಪ್ರಿಯ ಒತ್ತಡಗಳು ಹೆಚ್ಚಿರುತ್ತದೆ. ಆ ಕಟ್ಟಳೆಗಳನ್ನು ನಾವು ಫಿಕ್ಷನ್ನಿನಲ್ಲಿ ಒಡೆಯಬಹುದಾದ್ದರಿಂದ ನಾನ್-ಫಿಕ್ಷನ್ ಸಾಧ್ಯವಾಗದ್ದನ್ನು ಫಿಕ್ಷನ್ ಮಾಡುತ್ತದೆ ಅನಿಸುತ್ತದೆ. ಆದಕಾರಣ, ನನಗೆ ನಾನ್‌ಫಿಕ್ಷನ್‌ಗಿಂತಲೂ ಫಿಕ್ಷನ್ ಹೆಚ್ಚು ಆಪ್ತವೆನಿಸುತ್ತದೆ.

ಯಾರು ಅಂತ ಮರೆತಿರುವೆ. ಆದರೆ, ಇದು ಚಳವಳಿಗಳಿಲ್ಲದ ಕಾಲ ಎಂದು ವಿವರಿಸುತ್ತಾ ಸ್ವಯಂ ಕ್ರಾಂತಿ ಎನ್ನುವ ಪದವನ್ನು ಅವರು ಬಳಸಿದರು. ಅದು ಬಹಳ ಚೆಂದದ ಪದ ಅನ್ನಿಸಿತು. ಅಂದರೆ, ನಾವು ಪ್ರತಿಯೊಬ್ಬರೂ ಒಂದೊಂದು ಕ್ರಾಂತಿ ಎಂದೋ ಅಥವಾ ನಾವೇ ಕ್ರಾಂತಿ ಅನ್ನುವ ರೀತಿಯಲ್ಲಿ ನೋಡಬಹುದು. ನಾವು ದೇವನೂರ ಮಹಾದೇವರ ’ಸಂಬಂಜ ಅನ್ನೋದು ದೊಡ್ಡದು ಕನಾ’ ಸಾಲನ್ನ ಮತ್ತೆಮತ್ತೆ ಯಾಕೆ ಹೇಳುತ್ತೇವೆ? ಏಕೆಂದರೆ, ಅದು ಆ ಸಾಲಿಗಿರುವ ಶಕ್ತಿ. ಅದು ಒಳಗನ್ನು ಬೆಳಗುತ್ತದೆ. ಅದೇ ಕ್ರಾಂತಿ ಅಂತ ಹೇಳಬಹುದೆನ್ನಿಸುತ್ತೆ. ಅಲ್ಲವೇ? ಇನ್ನೊಂದು ಘಟನೆಯೆಂದರೆ ಗಾಂಧೀಜಿಯವರು ಶ್ರವಣಕುಮಾರನ ಕತೆಯನ್ನು ಕೇಳಿ ಬದಲಾದರು ಎನ್ನಲಾಗುತ್ತದೆ. ಹಾಗೆಯೇ, ನಮ್ಮ ಒಂದು ಕತೆ, ಒಂದು ಸಾಲು, ಒಂದು ಕವನದಿಂದ ಎಲ್ಲೋ, ಏನೋ ಬದಲಾಗಬಹುದು ಎಂಬ ನಂಬಿಕೆಯಿರಿಸಿ ಬರೆಯಬೇಕು.

ಪ್ರ: ನಿಮ್ಮ ನೀಲಕುರಿಂಜಿ ಪುಸ್ತಕಕ್ಕೆ ಮುನ್ನುಡಿಯಲ್ಲಿ ಕೇಶವ ಮಳಗಿಯವರು ಇಂದಿನ ಯುವ ಬರಹಗಾರರು ಸೈದ್ಧಾಂತಿಕ ಭಾರಗಳಿಲ್ಲದಿದ್ದರೂ ಜನರ ಮಿಡಿತಕ್ಕೆ ಮಿಡಿಯುತ್ತಾ ಬರೆಯುತ್ತಿದ್ದಾರೆ. ಅದರಲ್ಲಿ ದಾದಾಪೀರ್ ಕೂಡ ಒಬ್ಬರು ಎನ್ನುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?

: ನನಗೆ ಸಂಬಂಧಿಸಿದಂತೆ, ಒಂದು ವಿಚಾರವನ್ನು ಮುಂದಿಟ್ಟುಕೊಂಡು ಕಥೆ ಬರೆಯುವುದಕ್ಕಿಂತಲೂ ಆ ಕಥೆಯಲ್ಲಿ ಏನೇ ಬಂದರೂ ಅದು ಆನುಷಂಗಿಕವಾಗಿ ಬಂದರೆ ಹೆಚ್ಚು ಚೆಂದ ಎಂದು ನಂಬಿದ್ದೇನೆ. ಅಂದರೆ, ಪಾತ್ರವೊಂದನ್ನು ಅದರ ಸುತ್ತಲಿನ ಆರ್ಥಿಕ-ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶವು ಹೇಗೆ ಪ್ರಭಾವಿಸುತ್ತದೆ ಎಂಬ ರೀತಿಯ ಶೋಧಗಳು ಮುಖ್ಯವಾಗಿರುತ್ತದೆ. ಇದು ಭಾಷೆ, ತಂತ್ರ, ಪಾತ್ರಗಳ ಶೋಧ, ರೂಪಕ ಹೀಗೆ ಎಲ್ಲವನ್ನೂ ಒಳಗೊಂಡಂತೆ ಒಂದು ಕಲಾಕೃತಿಯಾಗಿ ಮಾರ್ಪಾಡಾಗಬೇಕು. ಇದೆಲ್ಲವೂ ಸೇರಿ ಅದು ಬದುಕೊಂದರ ದರ್ಶನವಾಗಬೇಕು ಎಂದು ನಾನು ಬಲವಾಗಿ ನಂಬುತ್ತೇನೆ.

ಮನುಷ್ಯರ ಯಾತನೆಗಳನ್ನು ಸೆರೆಹಿಡಿಯಲೆತ್ನಿಸುವಾಗ ನನಗೆ ಎಲ್ಲಾ ಮನುಷ್ಯರು ಮುಖ್ಯವಾಗುತ್ತಾರೆ. ಅದರೆ, ಅದರೊಟ್ಟಿಗೆಯೇ ಬರಹಗಾರರು ಯಾರಾದರು ರಾಜಕೀಯವನ್ನೋ ಅಥವಾ ಸಿದ್ಧಾಂತವೊಂದನ್ನೋ ಕೇಂದ್ರವಾಗಿಟ್ಟು ಬರೆಯಹೊರಟರೆ ಅದಕ್ಕೂ ಇನ್ಯಾವುದೇ ಬರಹಗಳಷ್ಟೇ ಅವಕಾಶವಿರಬೇಕು. ಬರಹಗಾರರು ಎಲ್ಲಿಂದಲೇ ಹೊರಡಲಿ, ಅವರು ಬರೆಯುವುದು ಬಹಳ ಮುಖ್ಯ. ಹಾಗಾಗಿ, ಯಾವುದೇ ರೀತಿಯ ಸಾಧ್ಯತೆಗಳನ್ನು ನಾವು ತಳ್ಳಿಹಾಕಬಾರದು. ಅಂತಿಮವಾಗಿ ನಮಗೇನು ಮುಖ್ಯ? ಜಗತ್ತನ್ನು ಕಾಣಲು ನಮಗೆ ಕಥೆಗಳೆಂಬ ಕಿಟಕಿಗಳು ಮುಖ್ಯ. ಉದಾಹರಣೆಗೆ, ಜಪಾನಿನ ಲೇಖಕರ ಕಥೆಗಳು ನಮಗೆ ಅಲ್ಲಿಯ ಸಮಾಜವನ್ನು ಕಟ್ಟಿಕೊಡುತ್ತವೆ. ಅದೇ ರೀತಿಯಲ್ಲಿ ಮಂಟೋ ಅವರ ಕಥೆಗಳು ನಮ್ಮ ದೇಶ ವಿಭಜನೆಯ ಸಮಯವನ್ನು ನಮಗೆ ಕಟ್ಟಿಕೊಡುತ್ತವೆ. ಅವು ಕೂಡ ಪೊಲಿಟಿಕಲ್ ಆಗಿರುವ ಕತೆಗಳೇ ಅಗಿವೆ.

ಆದರೆ, ಕೃತಿಕಾರ ಮತ್ತು ಆಕ್ಟಿಸ್ಟ್‌ನ ನಡುವೆಯೊಂದು ಬಹಳ ತೆಳುವಾದ ಗೆರೆಯಿದೆ. ಒಬ್ಬ ಕೃತಿಕಾರ ಪೂರ್ಣಾರ್ಥದಲ್ಲಿ ಆಕ್ಟಿವಿಸ್ಟ್ ಆಗದಿರಬಹುದು. ಆಕ್ಟಿವಿಸ್ಟ್ ಒಬ್ಬ ಪರಿಪೂರ್ಣವಾಗಿ ಕೃತಿಕಾರನಾಗದಿರಬಹುದು. ಕೆಲವರು ಎರಡೂ ಆಗಿರಬಹುದು. ಹಾಗಾಗಿ ಇದು ಹೀಗೆಯೇ ಇರಬೇಕು ಎಂದು ಹೇಳಲಾಗುವುದಿಲ್ಲ. ಅಲ್ಲವೇ? ನಾವು ಯಾವುದೇ ಸಂಭಾವ್ಯತೆಯನ್ನು ನಿರಾಕರಿಸುವಂತಿಲ್ಲ. ಆದರೆ, ಯಾರೂ ಕೂಡ ಬರಹಗಾರರು ಹೀಗೇ ಬರೆಯಬೇಕು, ಹೀಗೆ ಬರೆಯಬಾರದು ಎಂದು ಹೇಳಬಾರದು ಅನ್ನಿಸುತ್ತದೆ. ಬಹುಶಃ ಕೇಶವ ಮಳಗಿ ಸರ್ ಯುವ ಲೇಖಕರು ಸೈದ್ಧಾಂತಿಕ ಭಾರವನ್ನು ಹೊತ್ತು ಬರೆಯುತ್ತಿಲ್ಲ ಎಂದು ಹೇಳುವಾಗ ಈ ಅರ್ಥದಲ್ಲಿ ಹೇಳಿದ್ದಾರೆ ಎಂದು ಭಾವಿಸಿರುವೆ.

ಪ್ರ: ಹಾಗೆಯೇ, ದಾದಾ ಅವರು ಅವಸರದ ಬೆನ್ನು ಏರಿ ಬರೆದಿರುವುದನ್ನು ಕಾಣಬಹುದು ಎಂದೂ ಮಳಗಿ ಅವರು ಹೇಳುತ್ತಾರೆ. ಅದು ನಿಮಗೂ ನಿಜ ಎನ್ನಿಸುತ್ತದೆಯೇ?

: ಅವರು ಹೇಳಿರುವುದು ಸರಿಯಿದೆ ಅನ್ನಿಸುತ್ತೆ. ಇದಕ್ಕೆ ಎರಡು ಆಯಾಮಗಳಿವೆ. ಒಂದು, ನಾನು ಪಾತ್ರದ ಶೋಧವನ್ನು ಬಹಳವಾಗಿ ನಂಬುತ್ತೇನೆ. ಅಂದರೆ, ಯಾವುದೇ ಪರಿಮಿತಿಯನ್ನು ಹೊಂದದೆ ಪಾತ್ರಗಳನ್ನು ಕಟ್ಟುತ್ತಾ ಸಾಗಿದಾಗ ಪಾತ್ರಗಳು ಆಳವಾಗಿ ಬೇರೂರುತ್ತವೆ. ಆದರೆ ಇವತ್ತಿನ ಫಾಸ್ಟ್ ಫಾರ್ವಡ್ ಯುಗದಲ್ಲಿ ಅಥವಾ ಸ್ಪರ್ಧೆಗಳು ನೀಡುವ ಪದಮಿತಿಯೊಳಗೆ ಬರೆಯಬೇಕಾದಾಗ ಸ್ವಲ್ಪ ಅವಸರ ಅನಿಸುವುದುಂಟು. ಪಾತ್ರಗಳನ್ನು ಕಟ್ಟುತ್ತಿರುವಾಗಲೇ ಅದನ್ನು ಮೊಟಕುಗೊಳಿಸಬೇಕಾಗುತ್ತದೆ. ಹಾಗಾಗಿ, ಸ್ಪರ್ಧೆಗಳು ನೀಡುವ ಪದಮಿತಿ ಮತ್ತು ಡೆಡ್‌ಲೈನುಗಳ ಮಿತಿಯ ಒತ್ತಡವಿಲ್ಲದೆ ಬರೆದಾಗ ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ಕೆಲವರು ಹೇಳಿದ್ದಾರೆ.

ಪ್ರ: ನಿಮ್ಮ ಕತೆಗಳಲ್ಲಿ ನಾವು ಎಷ್ಟರಮಟ್ಟಿಗೆ ದಾದಾ ಅವರನ್ನು ಕಾಣಬಹುದು?

: ಬರಹಗಾರರ ಮೊದಲನೇ ಸಂಕಲನದಲ್ಲಿ ಬರಹಗಾರರ ಅನುಭವಗಳು ಅಥವಾ ಅವರನ್ನು ಕಾಡಿರುವ ವಿಷಯಗಳಿರುವುದು ಸಾಮಾನ್ಯ. ಅದೇ ರೀತಿಯಲ್ಲಿ ಓದುಗರು ಸಾಹಿತ್ಯದಲ್ಲಿ ಸಾಹಿತಿಯನ್ನು ಹುಡುಕುವುದೂ ಸಾಮಾನ್ಯ. ಆದರೆ, ಓದುಗರು ಕಥೆಯನ್ನು ಮತ್ತು ಪಾತ್ರಗಳನ್ನು ನೇರವಾಗಿ ಕಲ್ಪಿಸಿಕೊಳ್ಳುವ ಬದಲಿಗೆ ಬರಹಗಾರರ ಮೂಲಕ ಕಲ್ಪಿಸಿಕೊಳ್ಳುವ ಸಾಧ್ಯತೆಯಿರುತ್ತದೆ, ಆದ್ದರಿಂದ ನಾನು ಬರೆದಿರುವ ಪಾತ್ರಗಳು ನಾನೇನಾ ಎಂದು ತಿಳಿಸಲು ನಾನು ಬಯಸುವುದಿಲ್ಲ.

ಪ್ರ: ಹಾಗಿದ್ದರೆ, ದಾದಾ ಅವರಿಂದ ಇನ್ನಷ್ಟ್ಟು ವಿಭಿನ್ನ ಕಥೆಗಳನ್ನು ನಿರೀಕ್ಷಿಸಬಹುದಾ?

: ಹಾ, ನಿರೀಕ್ಷಿಸಬಹುದು. ತುಂಬಾ ಸರಳವಾಗಿ ಹೇಳಬೇಕಾದರೆ, ನುರಿತ ಕಥೆಗಾರರು ಅಥವಾ ಕಲಾವಿದರು ತಮ್ಮ ವಿಚಾರವನ್ನು ಅತ್ಯಂತ ಆಪ್ತವಾಗಿ, ಮನಮುಟ್ಟುವ ರೀತಿಯಲ್ಲಿ ಓದುಗರಿಗೆ ಅಥವಾ ನೋಡುಗರಿಗೆ ತಲುಪಿಸಬಲ್ಲವರಾಗಿರುತ್ತಾರೆ. ಅದು ಸಾಧ್ಯವಾಗುವುದು ಈ ನಿಟ್ಟಿನಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಂಡಾಗ. ಅಲ್ಲದೇ ಎಲ್ಲ ಪಾತ್ರಗಳನ್ನೂ ನಾವು ಅನುಭವಿಸಿಯೇ ಬರೆಯಲು ಸಾಧ್ಯವಿಲ್ಲ. ಆದ್ದರಿಂದ ನಾನೂ ಆ ದಿಕ್ಕಿನಲ್ಲಿ ಪ್ರಯತ್ನಿಸುವೆ.

ಪ್ರ: ನೀವು ಕತೆಗಳು, ಕವಿತೆ, ನಾಟಕ, ಅನುವಾದ, ಅಂಕಣ, ಬಿಡಿ ಬರಹಗಳು – ಹೀಗೆ ಸಾಹಿತ್ಯದ ಬೇರೆಬೇರೆ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಜೊತೆಯಲ್ಲಿ ಸಾಮಾಜಿಕ ಮಾಧ್ಯಮಗಳು, ವೆಬ್ ಪೋರ್ಟಲ್‌ಗಳು, ಕನ್ನಡದ ಪ್ರಮುಖ ದಿನ ಪತ್ರಿಕೆಗಳು, ನ್ಯಾಯಪಥದಂತಹ ವಾರಪತ್ರಿಕೆಗಳು – ಹೀಗೆ ವೈವಿಧ್ಯಮಯವಾದ ಮಾಧ್ಯಮಗಳಲ್ಲಿ ಬರೆಯುತಿದ್ದೀರ, ಅನ್ವೇಷಿಸುತ್ತಿದ್ದೀರ. ಜೊತೆಯಲ್ಲಿ ಓದು ಗುಂಪುಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ಕಾವ್ಯವಾಚನವನ್ನೂ ಮಾಡುತ್ತಿರುತ್ತೀರ. ಒಟ್ಟಿನಲ್ಲಿ, ಬೇರೆಬೇರೆ ಲೋಕಗಳಲ್ಲಿ ಸಂಚರಿಸುತ್ತಿರುತ್ತೀರ. ಇದಕ್ಕೇನು ಕಾರಣ? ಬರಹಗಾರನಾಗಿ ಬೆಳೆಯಲೋ ಅಥವಾ ವಿಶಾಲವಾದ ಓದುಗವಲಯವನ್ನು ತಲುಪಲೋ?

: ಮೊದಲು ನಾನು ಬರೆದದ್ದು ಕವಿತೆ. ಕಾಲೇಜಿನ ದಿನಗಳಲ್ಲಿ ಬೇರೆಬೇರೆ ರೀತಿಯ ಒತ್ತಡಗಳಿಂದಾಗಿ ಅದು ಮೂಡಿದ್ದು. ನಿಜ ಒಪ್ಪಿಕೊಳ್ಳಬೇಕಾದರೆ, ಮೊದಮೊದಲಲ್ಲಿ ಪತ್ರಿಕೆಗಳಿಗೆ ಕಳುಹಿಸುವುದು, ಉತ್ತರಕ್ಕಾಗಿ ಕಾಯುವುದು ನಡೆಯುತ್ತಿತ್ತು. ಅದು ಪ್ರಕಟವಾದಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕಾತುರವಿರುತ್ತಿತ್ತು. ಅದನ್ನು ಹೇಳಿಕೊಂಡು ಬೀಗುವುದೂ ಇತ್ತು.

ಆದರೆ ಇತ್ತೀಚಿಗೆ, ನಾನೂ ಮನುಷ್ಯನಾಗಿರುವ ಕಾರಣಕ್ಕೆ ನನಗೆ ಮುಖ್ಯವೆನಿಸುವ ಕೆಲವು ಕಾಳಜಿಗಳಿವೆ ಮತ್ತು ಅವಕ್ಕೆ ನಾನು ಸ್ಪಂದಿಸಬೇಕು ಮತ್ತು ಸ್ಪಂದಿಸುತ್ತಿದ್ದೇನೆ ಅನ್ನಿಸುತ್ತಿದೆ. ಬರಹಗಾರರು ಅವರ ಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳಿಗೆ ಸ್ಪಂದಿಸುವುದು ಮುಖ್ಯ. ಅದನ್ನು ನನ್ನ ಇತಿಮಿತಿಯೊಳಗೇ ಮಾಡುತ್ತಿರುವೆ. ಉದಾಹರಣೆಗೆ, ಕ್ವೀರ್ ಸಮುದಾಯದ ವಿಚಾರಕ್ಕೆ ನನಗೆ ಸ್ಪಂದಿಸಬೇಕು ಎನಿಸಿದೆ; ಮತ್ತದನ್ನು ಹಲವು ರೀತಿಯಲ್ಲಿ ಮಾಡುತ್ತಿದ್ದೇನೆ. ಅದು ಈವರೆಗೆ ಫಿಕ್ಷನ್ ಮತ್ತು ನಾನ್‌ಫಿಕ್ಷನ್‌ಗಳ ರೂಪ ಪಡೆದಿವೆ.

ರಾಜಕೀಯ ವಿಚಾರಗಳಲ್ಲಿ ನಾನು ಮಾಡಿರುವ ಕೆಲಸ ಕಡಿಮೆಯೇ ಅನ್ನಬಹುದು. ಆದರೂ, ವರ್ತಮಾನವು ಸಾಮಾನ್ಯ ಜನತೆಯನ್ನು ಹೇಗೆ ಪ್ರಭಾವಿಸುತ್ತಿದೆ; ಅವರು ಅದನ್ನು ಹೇಗೆ ಗ್ರಹಿಸುತ್ತಾರೆ? ಅಲ್ಲಿ ಅಡಗಿರುವ ಕೊಡುಕೊಳ್ಳುವಿಕೆ; ಇವೆಲ್ಲಾ ನನಗೆ ಕುತೂಹಲಕಾರಿ ವಿಚಾರಗಳು.

ಏಕೆಂದರೆ, ಮೇಲ್ಮಟ್ಟದ ರಾಜಕೀಯವನ್ನು ನಾವು ವಿಶ್ಲೇಷಿಸಬಹುದಾದರೂ ಅದರ ನಂತರವೇನು ಎಂಬ ಪ್ರಶ್ನೆಯೇಳುತ್ತದೆ. ಆದಕಾರಣ ನನಗೆ ಮೇಲ್ಮಟ್ಟದ ರಾಜಕೀಯಕ್ಕಿಂತಲೂ ಜನಸಾಮಾನ್ಯರು ಅದನ್ನು ಹೇಗೆ ಗ್ರಹಿಸುತ್ತಾರೆ ಎಂಬುದೇ ಹೆಚ್ಚು ಆಸಕ್ತಿದಾಯಕ.

ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಹೇಳಬಯಸುವ ವಿಚಾರಗಳನ್ನು ಯಾವ ಪ್ರಕಾರ ಮತ್ತು ಯಾವ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವುದು ಸೂಕ್ತ ಎಂಬುದನ್ನು ಗ್ರಹಿಸಲು ಪ್ರಯತ್ನಿಸುತ್ತಿರುತ್ತೇನೆ. ಇದನ್ನು ಬರೆಯುತ್ತಲೇ ಕಲಿಯುತ್ತಿರುವೆ. ಅದರ ಭಾಗವೇ ಈ ಅನ್ವೇಷಣೆಗಳು.

ಪ್ರ: ಬರವಣಿಗೆಯೊಂದು ಟ್ಯಾಲೆಂಟ್ ಎಂದು ಭಾವಿಸುವವರ ಮಧ್ಯೆ ನೀವು ನಿಮ್ಮನ್ನು ಕಲಾಭ್ಯಾಸಿ ಎಂದು ಕರೆದುಕೊಳ್ಳುತ್ತಿದ್ದೀರಿ. ಅದರ ಬಗ್ಗೆ ವಿವರಿಸುವಿರಾ?

: ಬಹುಶಃ ಬರವಣಿಗೆ ಕೂಡ ಇನ್ಯಾವುದೇ ಕಲೆಯಂತೆಯೇ. ಯಾವುದೋ ಒಂದು ಪ್ರೇರಣೆಯೊಂದಿಗೆ ನಾನೂ ಬರೆಯಬಹುದು ಎಂಬ ಆಸೆ ಮೂಡಿದಾಗ ಬರೆಯಲು ಮುಂದಾಗುತ್ತೇವೆ. ಅದರ ನಂತರದಲ್ಲಿ ಬರವಣಿಗೆಯೂ ಕೂಡ ಕಲಿಕೆ ಮತ್ತು ಅಭ್ಯಾಸವನ್ನು ಬೇಡುತ್ತದೆ. ಈ ಕಲಿಕೆಗಾಗಿಯೇ ವಿವಿಧ ರೀತಿಯ – ಕಾಲಮಾನಗಳ – ಪ್ರಕಾರಗಳ ಬರಹಗಳನ್ನು ಓದಬೇಕು. ಓದಿದಾಗ, ಹೀಗೂ ಬರೆಯಬಹುದಲ್ಲವಾ ಎನಿಸಿ ನಾವೂ ಶೋಧಿಸಲು ತೊಡಗಿಕೊಳ್ಳುತ್ತೇವೆ. ಹಾಗೆಯೇ, ಹಿರಿಯರು ಹೇಳುವ ಹಾಗೆ, ಬರಹಗಾರರಿಗೆ ಮುಖ್ಯವಾಗಿ ಜನರನ್ನ ನಂಬಬೇಕು; ಕೇಳಿಸಿಕೊಳ್ಳಬೇಕು. ಆ ಮೂಲಕ ನಾವು ಪಾತ್ರಗಳ ಅಂತರಂಗವನ್ನು ಅರಿಯಬಹುದು. ಇದನ್ನು ಮಾಡುತ್ತಾ, ಕಲಿಯುತ್ತಾ ಸಾಗಿದರೆ ಬರೆಯಬಹುದು ಅನ್ನಿಸುತ್ತೆ.

ಇದನ್ನೇ ಇನ್ನೊಂದು ರೀತಿಯಲ್ಲಿ ನೋಡಿದರೆ, ಬರಹಗಾರರೂ ಮನುಷ್ಯರೇ ಆಗಿರುವುದರಿಂದ ನಾವು ಎಲ್ಲವನ್ನೂ ತಿಳಿದುಕೊಂಡಿರಬೇಕಿಲ್ಲ ಅಥವಾ ನಾವು ಮಾಡುವುದು-ಬರೆಯುವುದೆಲ್ಲವೂ ಸರಿಯೂ ಆಗಿರಬೇಕಿಲ್ಲ. ನಾವು ಪೂರ್ವಗ್ರಹಗಳೇ ಇಲ್ಲದಿರುವ ಮುಕ್ತ ಮನಸಿಗರು ಎಂದೂ ಅಲ್ಲ. ಆದರೆ, ಬರೆಯುತ್ತಾ ಹೋದಂತೆ ನಾವು ಕೂಡ ಮೃದುವಾಗುತ್ತೇವೆ. ಹಾಗಾಗಿ ಅದೊಂದು ಪ್ರಕ್ರಿಯೆ. ಅದೊಂದು ಅಭ್ಯಾಸ.

ಪ್ರ: ಬರವಣಿಗೆಯಲ್ಲಿ ತೊಡಗಿರುವವರಿಗೆ ಏನಲ್ಲಾ ರೀತಿಯ ಬೆಂಬಲ ಬೇಕಾಗುತ್ತದೆ?

: ಬರಹಗಾರರು ಕೃತಿಯೊಂದನ್ನು ಸಿದ್ಧಪಡಿಸಿಕೊಂಡ ನಂತರ ಅದು ಜನರಿಗೆ ತಲುಪುವವರೆಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೆಸರಾಂತ ಪ್ರಕಾಶಕರು ಹೊಸ ಬರಹಗಾರರಿಗೆ ಅವಕಾಶ ನೀಡುತ್ತಿಲ್ಲ ಎನ್ನುವ ಮಾತುಗಳಿವೆ. ಅದರಲ್ಲೂ ಕವಿತೆಗಳನ್ನಂತೂ ಎಷ್ಟೊಂದು ಪ್ರಕಾಶಕರು ಪ್ರಕಟಿಸುತ್ತಲೇ ಇಲ್ಲ. ಇವತ್ತಿಗೂ ಮೊದಲನೇ ಮುದ್ರಣದ ಪ್ರತಿಗಳ ಸಂಖ್ಯೆ ಸಾವಿರವನ್ನೂ ದಾಟುವುದಿಲ್ಲ. ಇವುಗಳ ಮೂಲ ಇರುವುದು ಸಾಹಿತ್ಯಾಸಕ್ತರ ಸಂಖ್ಯೆಯಲ್ಲಿ ಆಗುತ್ತಿರುವ ಇಳಿಕೆಯಲ್ಲಿ ಅನಿಸುತ್ತದೆ. ಆದ್ದರಿಂದ, ಎಲ್ಲರಲ್ಲೂ, ಅದರಲ್ಲೂ ಮುಖ್ಯವಾಗಿ ಯುವ ತಲೆಮಾರಿನಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ಮತ್ತದಕ್ಕೆ ಸೂಕ್ತ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಇದನ್ನು ಯಾರು ಮತ್ತು ಹೇಗೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ನನಗೂ ಇದಕ್ಕೆ ಸೂಕ್ತ ಉತ್ತರಗಳಿಲ್ಲ.

ನಾನಿದನ್ನು ದುಡ್ಡಿನಿಂದ ಅಳೆಯುತ್ತಿದ್ದೇನೆ ಅಂತ ದಯವಿಟ್ಟು ಭಾವಿಸಬೇಡಿ. ಆದರೂ ದುಡ್ಡಿನ ಪ್ರಶ್ನೆ ಮುಖ್ಯವಾಗುತ್ತದೆ. ಏಕೆಂದರೆ, ಅನುಕೂಲಸ್ಥ ಹಿನ್ನೆಲೆಯಿಂದ ಬರುವ ಬರಹಗಾರರು ಮಾತ್ರವೇ ಸಾಹಿತ್ಯದಲ್ಲಿ ತೊಡಗಿಕೊಂಡರೆ, ತಮ್ಮೆಲ್ಲಾ ಕಷ್ಟಗಳ ನಡುವೆಯೂ ಬರೆಯುವವರು ಹತಾಶರಾಗಿ ನಿಲ್ಲಿಸಿಬಿಡುವ ಮತ್ತು ಸಾಹಿತ್ಯ ಕೇವಲ ಪುರುಸೊತ್ತಿನ ಕೆಲಸ ಮಾತ್ರ ಎಂದಾಗಿಬಿಡುವ ಸಾಧ್ಯತೆಗಳಿರುತ್ತದೆ. ಆಗ, ಸಾಹಿತ್ಯ ಜೀವಪರ, ಜೀವನಪರವಾಗಿರುವುದಕ್ಕೆ ಹೇಗೆ ಸಾಧ್ಯ? ಅದರಾಚೆಗೆ ಇದು ಕಲಾವಿದರಿಗೆ ಮತ್ತವರು ಹಾಕುವ ಶ್ರಮಕ್ಕೆ ನೀಡುವ ಕನಿಷ್ಟ ಗೌರವ ಕೂಡ ಹೌದು. ಆದಕಾರಣ, ಕನಿಷ್ಠ ಗೌರವ ಧನವನ್ನಾದರೂ ಬರಹಗಾರರಿಗೆ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಿದೆ.

‘ಬೆಂಬಲ’ ಅನ್ನುವುದನ್ನು ನಾವು ವಿಶಾಲಾರ್ಥದಲ್ಲಿ ಗ್ರಹಿಸುವುದಾದಾರೆ, ಪ್ರಭುತ್ವ ಮತ್ತು ಸಾಹಿತಿಗಳ ನಡುವಿನ ಸಂಬಂಧ ಹಿತಕರವಾಗಿರಬೇಕು ಮತ್ತು ಪ್ರಭುತ್ವದ ಹಸ್ತಕ್ಷೇಪಗಳಿಲ್ಲದೆ ಬರಹಗಾರರಿಗೆ ಅಭಿವ್ಯಕ್ತಿಸುವ ಸ್ವಾತಂತ್ರ್ಯವಿರಬೇಕು ಅನಿಸುತ್ತದೆ. ಆದರೆ, ಈ ರೀತಿಯ ವಾತಾವರಣ ಹಿಂದೆ ರಾಜರಾಳ್ವಿಕೆಯಲ್ಲೂ ಇರಲಿಲ್ಲ. ಇಂದೂ ಇಲ್ಲ. ಅದು ಮುಂದೆಯೂ ಇರುವುದಿಲ್ಲ ಎನಿಸಿದರೂ, ಒಂದು ಸಮಾಜವಾಗಿ ನಾವು ಮುಕ್ತ ವಾತಾವರಣವನ್ನು ನಿರ್ಮಿಸಿಕೊಂಡರೆ ಚೆನ್ನ. ಅದೇ ಬರಹಗಾರರಿಗೆ ಅಗತ್ಯವಿರುವ ಬಹು ದೊಡ್ಡ ಬೆಂಬಲ ಅನಿಸುತ್ತದೆ.

ಶಶಾಂಕ್ ಎಸ್ ಆರ್

ಸಂದರ್ಶಕ: ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.


ಇದನ್ನೂ ಓದಿ: 2015ರ ಸಮಯಕ್ಕೆ ಆತ್ಮೀಯರಾಗಿದ್ದವರ ದನಿ ಬದಲಾಗಿದ್ದನ್ನು ಗಮನಿಸಿದೆ; ಮೊಹಮ್ಮದ್ ಝುಬೇರ್ ಸಂದರ್ಶನ ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...