Homeಕರ್ನಾಟಕಕೇರಳ ಕೇಂದ್ರಿಯ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ತಮ್ಮ ಶಿಷ್ಯರನ್ನೇ ಆಯ್ಕೆ ಮಾಡಿದ ಸಂದರ್ಶಕರು:...

ಕೇರಳ ಕೇಂದ್ರಿಯ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ತಮ್ಮ ಶಿಷ್ಯರನ್ನೇ ಆಯ್ಕೆ ಮಾಡಿದ ಸಂದರ್ಶಕರು: ಆರೋಪ

ಸಂದರ್ಶಕರಲ್ಲಿ ಒಬ್ಬರಾದ ಡಾ.ನಿತ್ಯಾನಂದ ಬಿ.ಶೆಟ್ಟಿಯವರು ಆಕಾಂಕ್ಷಿಗಳ ಆರೋಪವನ್ನು ಅಲ್ಲಗಳೆದಿದ್ದಾರೆ.

- Advertisement -
- Advertisement -

ಕಾಸರಗೋಡಿನಲ್ಲಿರುವ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆದ ಸಂದರ್ಶನ ಪರಾದರ್ಶಕವಾಗಿರಲಿಲ್ಲ. ಸಂದರ್ಶನ ಮಾಡಿದ ಪ್ರಾಧ್ಯಾಪಕರು ತಮ್ಮ ಶಿಷ್ಯರನ್ನೇ ಹುದ್ದೆಗಳಿಗೆ ಆಯ್ಕೆ ಮಾಡಿದ್ದಾರೆ ಎಂಬ ಆರೋಪವನ್ನು ಹುದ್ದೆಯ ಆಕಾಂಕ್ಷಿಗಳು ಮಾಡಿದ್ದಾರೆ.

ಕಳೆದ ಸೆ. 5 ಮತ್ತು 6ರಂದು ನಾಲ್ಕು (ಮೂರು ಅನ್ ರಿಸರ್ವ್ಡ್, ಒಂದು ಒಬಿಸಿ) ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂದರ್ಶನ ಮಾಡಲಾಗಿದೆ. ಆದರೆ ಸಂದರ್ಶನ ಹಲವು ಸಂದೇಹಗಳಿಗೆ ಎಡೆಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಹುದ್ದೆಯ ಆಕಾಂಕ್ಷಿಯಾಗಿದ್ದ ಡಾ.ಬಿ.ಎಸ್‌.ಸುದೀಪ್, “ಆಯ್ಕೆ ಮಾಡಿದ್ದ ವಿಷಯ ತಜ್ಞರ ಸಮಿತಿಯಲ್ಲಿ ಡಾ.ವಿಜಯಕುಮಾರಿ ಎಸ್.‌ ಕರಿಕಲ್‌ (ಮೈಸೂರು ವಿಶ್ವವಿದ್ಯಾನಿಲಯ), ಡಾ. ನಿತ್ಯಾನಂದ ಶೆಟ್ಟಿ (ತುಮಕೂರು ವಿಶ್ವವಿದ್ಯಾಲಯ) ಮತ್ತು ಡಾ. ಗಂಗಾಧರ್‌ (ಬೆಂಗಳೂರು ವಿಶ್ವವಿದ್ಯಾಲಯ) ಅವರು ಇದ್ದರು. ಇವರೆಲ್ಲರೂ ಸಂದರ್ಶನ ಮಾಡಿದ ರೀತಿ ಸರಿ ಇತ್ತೇ ಎಂಬ ಸಂದೇಹ ಹಲವು ಅಭ್ಯರ್ಥಿಗಳಿಗೆ ಕಾಡಿದೆ” ಎಂದಿದ್ದಾರೆ.

“ಡಾ. ನಿತ್ಯಾನಂದ ಶೆಟ್ಟಿಯವರು ತಮ್ಮ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಮಾಡುತ್ತಿರುವ ಗೋವಿಂದರಾಜು ಕೆ.ಎಂ. ಇವರನ್ನು ಅನ್ ರಿಸರ್ವ್ಡ್ ಮೆರಿಟ್‌ನಲ್ಲಿ ಮೂರನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಆದರೆ ಈ ಅಭ್ಯರ್ಥಿಗಿಂತ ಹೆಚ್ಚಿನ ಅರ್ಹತೆ ಹೊಂದಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಇದ್ದರು. ಅಂಥವರನ್ನು ಸಂಪೂರ್ಣ ಕಡೆಗಣಿಸಲಾಗಿದೆ” ಎಂದು ದೂರಿದ್ದಾರೆ.

“ಈ ಹಿಂದೆ ಇದೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಂಚಾಲಕರಾಗಿದ್ದ ಡಾ.ಶಿವರಾಮ ಶೆಟ್ಟಿ (ಈಗ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ಇಲ್ಲಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದಾರೆ) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಗಿಸಿರುವ ಹೆಚ್.ಸೌಮ್ಯ (ಅನ್ ರಿಸರ್ವ್ಡ್ ಮೆರಿಟ್‌‌ನಲ್ಲಿ ಮೊದಲನೇ ಅಭ್ಯರ್ಥಿ), ಈ ಹಿಂದೆ ಇದೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಚೇತನ ಎಂ. (ಒಬಿಸಿ ಮೆರಿಟ್‌ನಲ್ಲಿ ಮೊದಲ ಅಭ್ಯರ್ಥಿ) ಆಯ್ಕೆಯಾಗಿದ್ದಾರೆ. ಇನ್ನು ಧರ್ಮಸ್ಥಳ ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಪ್ರವೀಣ ಪಿ. (ಅನ್ ರಿಸರ್ವ್ಡ್ ಮೆರಿಟ್ ನಲ್ಲಿ ಎರಡನೇ ಅಭ್ಯರ್ಥಿ) ಅವರ ಆಯ್ಕೆಯೂ ಅನುಮಾನ ಹುಟ್ಟಿಸುತ್ತಿದೆ” ಎಂದು ಆರೋಪಿಸಿದ್ದಾರೆ.

“ಈ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾನ್ಯ ಕುಲಪತಿಯವರು, ಸಂದರ್ಶನ ಸಮಿತಿಯಲ್ಲಿದ್ದ ವಿಷಯ ತಜ್ಞರು ಪಾರರ್ಶಕವಾದ ಸ್ಪಷ್ಟತೆಯನ್ನು ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ” ಎಂದು ಆಕಾಂಕ್ಷಿಗಳ ಪರವಾಗಿ ಸುದೀಪ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿರಿ: ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್‌!

‘ನಾನುಗೌರಿ.ಕಾಂ’ ಜೊತೆ ಆಕ್ಷೇಪಗಳನ್ನು ಹಂಚಿಕೊಂಡಿರುವ ಮತ್ತೊಬ್ಬ ಆಕಾಂಕ್ಷಿ ರವಿ ಸಿದ್ಲಿಪುರ, “ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪ್ಯಾನಲ್‌ನಲ್ಲಿದ್ದ ಮೂರು ಜನರ ಸಂದರ್ಶಕರ ವಿದ್ಯಾರ್ಥಿಗಳೇ ಆಯ್ಕೆ ಮತ್ತು ಕಾಯ್ದಿರಿಸಿದ ಪಟ್ಟಿಯಲ್ಲಿದ್ದಾರೆ. ಇದು ನಿಜಕ್ಕೂ ಅನುಮಾನಕ್ಕೆ ಎಡೆ ಮಾಡುವಂತಹದ್ದು” ಎಂದಿದ್ದಾರೆ.

“ಸಂದರ್ಶಕರ ಪ್ಯಾನಲ್ ಅಲ್ಲಿ ಇರುವ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಇದ್ದಾಗ, ಪ್ರಾಧ್ಯಾಪಕರು ಪ್ಯಾನಲ್‌ನಿಂದ ಹೊರಗಿಡಬೇಕು. ಪ್ಯಾನಲ್‌ನಲ್ಲಿ ಇರುವ ಪ್ರಾಧ್ಯಾಪಕರು ಸ್ವಹಿತಾಸಕ್ತಿ ಮತ್ತು ಸ್ವಜನಪಕ್ಷಪಾತ ಮಾಡಿದ್ದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಯುಜಿಸಿ ಕೈಗೊಳ್ಳಬೇಕು. ಸಂದರ್ಶನದ ಸಮಯದಲ್ಲಿ ಕನಿಷ್ಠ 15 ಜನ ಬೇರೆ ಬೇರೆ ವಿ.ವಿ.ಯ, ಭಿನ್ನ ವಿಷಯ ತಜ್ಞ ಪ್ರಾಧ್ಯಾಪಕರ ಎದುರು ಟ್ರಯಲ್ ಕೊಡುವ ವ್ಯವಸ್ಥೆ ಬೇಕಾಗಿದೆ. ಅವರು ಅಂಕ ಕೊಡುವ ಮೂಲಕ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡಬೇಕು. ವಿ.ವಿ.ಯ ನೇಮಕಾತಿಯಲ್ಲಿ ಪಿಎಚ್.ಡಿ., ಬರಹಗಳಿಗೆ ಆದ್ಯತೆ ಕೊಡಬೇಕು. ಬರಹಗಳ ಮಹತ್ವವನ್ನು ಗಂಭೀರವಾಗಿ ಅವಲೋಕಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ನೇಮಕಾತಿಯ ಸಂದರ್ಭದಲ್ಲಿ ನಡೆಯುವ ಸಂದರ್ಶನವನ್ನು ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಆಯ್ಕೆಯಾದ ಮೇಲೂ ಆದೇಶ ಪತ್ರ ಕೊಡುವ ಮುನ್ನ ಯುಜಿಸಿ, ರಾಜ್ಯಪಾಲರು ಮತ್ತು ಮತ್ತೊಂದು ವಿಶೇಷ ತಜ್ಞರು ಅದನ್ನು ಪರಿಶೀಲಿಸಿದ ತರುವಾಯ ಆದೇಶ ಕೊಡುವ ವ್ಯವಸ್ಥೆ ಜಾರಿಗೆ ತರಬೇಕು. ಯುಪಿಎಸ್ಸಿ ಮಾದರಿಯ ಪರೀಕ್ಷೆಯನ್ನಾದರೂ ಮಾಡಿ, ಮೇಲಿನ ಅಂಶಗಳ ಮೂಲಕ ನೇಮಕಾತಿ ಮಾಡಬಹುದು. ಪ್ಯಾನಲ್‌ನಲ್ಲಿ 3 ಜನಕ್ಕಿಂತ ಕನಿಷ್ಠ 5 ರಿಂದ 7 ಜನ ವಿಷಯ ತಜ್ಞರು ಇರಬೇಕು. ಅವರು ವಿವಿಧ ಸಾಮಾಜಿಕ ಹಿನ್ನೆಲೆಯವರಾಗಿರಬೇಕು. ತಂತಮ್ಮ ಕ್ಷೇತ್ರದಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿರಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

“ನೇಮಕಾತಿ ಪಾರದರ್ಶಕವಾಗಿರಲಿಲ್ಲ. ಹೀಗಾಗಿ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಪೂರ್ವಯೋಜಿತದಂತೆ ಸಂದರ್ಶನವನ್ನು ಮಾಡಿ ಇವರೆಲ್ಲರೂ ತಮ್ಮ ವಿದ್ಯಾರ್ಥಿಗಳು ಎಂಬುದನ್ನು ಗೌಪ್ಯವಾಗಿ ಇರಿಸಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಚೇತನ ಎಂ ಮತ್ತು ಗೋವಿಂದರಾಜು ಅವರಿಗೆ ಪಿಹೆಚ್‌ಡಿ ಪದವಿ ಇಲ್ಲ. ಆದರೂ ಅವರನ್ನು ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹರೆಂದು ಬಿಂಬಿಸಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ಆಯ್ಕೆ ಸಮಿತಿಯಲ್ಲಿ ಇದ್ದ ಮತ್ತೊಬ್ಬ ತಜ್ಞರಾದ ಡಾ.ಗಂಗಾಧರ್ ಅವರ ಪ್ರೀತಿಯ ವಿದ್ಯಾರ್ಥಿ ಮುನಿರಾಜ್ ಅವರು ಕಾಯ್ದಿರಿಸಿದ ಪಟ್ಟಿಯಲ್ಲಿ ಇರುವುದು ವಿಶೇಷವಾಗಿದೆ. ತಮ್ಮ ತಮ್ಮ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡುವ ಈ ಘನಕಾರ್ಯಕ್ಕೆ ಸಂದರ್ಶನದ ನಾಟಕವನ್ನು ಹೇಗೆ ಮಾಡಬೇಕಿತ್ತು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಕನ್ನಡದಲ್ಲಿ ಬರೆದಿದ್ದ ಚೆಕ್‌ ಅಮಾನ್ಯ: ಎಸ್‌ಬಿಐಗೆ 85 ಸಾವಿರ ರೂ. ದಂಡ

ವಾಟ್ಸ್‌ಅಪ್‌ ಗ್ರೂಪ್‌ವೊಂದರಲ್ಲಿ ಆಗಿರುವ ಚರ್ಚೆಯನ್ನು ಹಂಚಿಕೊಂಡಿರುವ ಅವರು, “ಸಾಮಾಜಿಕ ಜಾಲತಾಣದಲ್ಲಿ ತುಮಕೂರು ವಿವಿಯ, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಅಣ್ಣಮ್ಮ ಅವರು ಗೋವಿಂದ ರಾಜುವಿನ ಆಯ್ಕೆ ಕುರಿತು ಸಹಕರಿಸಿದ ಪ್ರೊ. ನಿತ್ಯಾನಂದ ಶೆಟ್ಟಿ ಮತ್ತು ನೇಮಕಾತಿ ಮಂಡಳಿಯ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದೂ ಅನುಮಾನಕ್ಕೆಡೆ ಮಾಡುತ್ತದೆ” ಎಂದಿದ್ದಾರೆ.

ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಅಭಿನಂದನೆ ಸಲ್ಲಿಸಿರುವ ರೀತಿಯ ಕುರಿತು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರೊ.ನಿತ್ಯಾನಂದ ಬಿ.ಶೆಟ್ಟಿಯವರ ಪ್ರತಿಕ್ರಿಯೆ

ನೇಮಕಾತಿ ಪರಾದರ್ಶಕವಾಗಿರಲಿಲ್ಲ ಎಂಬ ಆರೋಪ ಬಂದಿರುವ ಕುರಿತು, ಸಂದರ್ಶನದಲ್ಲಿದ್ದ ಡಾ.ನಿತ್ಯಾನಂದ ಬಿ.ಶೆಟ್ಟಿಯವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು.

ನಿತ್ಯಾನಂದ ಶೆಟ್ಟಿ ಕೃತಿ ಬಿಡುಗಡೆ | ಅವಧಿ । AVADHI
ಡಾ.ನಿತ್ಯಾನಂದ ಬಿ.ಶೆಟ್ಟಿ

ಆಕ್ಷೇಪಗಳಿಗೆ ನಿತ್ಯಾನಂದ ಬಿ.ಶೆಟ್ಟಿಯವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ:

ಕೇಂದ್ರೀಯ ವಿವಿ ಕೇರಳದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸಂದರ್ಶನ ಸಮಿತಿಯಲ್ಲಿ ಒಟ್ಟು 09 ಸದಸ್ಯರು ಇದ್ದರು. ಅಲ್ಲಿಯ ಕುಲಪತಿ ಪ್ರೊ.‌ಎಚ್ ವೆಂಕಟೇಶ್ವರಲು, ಘನತೆವೆತ್ತ ರಾಷ್ಟ್ರಪತಿಗಳ ನಾಮನಿರ್ದೇಶನ ಸದಸ್ಯರಾದ ಪ್ರೊ. ಸಂಪತ್ ಕುಮಾರ್ ( ಫಿಲಾಸಫಿ ಪ್ರೊಫೆಸರ್, ಚೆನ್ನೈ), ನಾನು, ( ನಿತ್ಯಾನಂದ ಬಿ ಶೆಟ್ಟಿ, ತುಮಕೂರು ವಿವಿ), ಪ್ರೊ. ಬಿ ಗಂಗಾಧರ ( ಬೆಂಗಳೂರು ವಿವಿ), ಪ್ರೊ. ವಿಜಯಕುಮಾರಿ ಎಸ್ ಕರಿಕಲ್ (ಮೈಸೂರು ವಿವಿ) ಇವರಷ್ಟೇ ಅಲ್ಲದೆ ಕೇಂದ್ರೀಯ ವಿವಿ,‌ ಕೇರಳದ ವಿವಿಧ ನಿಕಾಯಗಳ ಡೀನ್ ಗಳಾದ ನಾಲ್ವರು ಹಿರಿಯ ಪ್ರಾಧ್ಯಾಪಕರೂ ಈ ಸಮಿತಿಯಲ್ಲಿ ಇದ್ದರು. ಮಾನ್ಯ ಕುಲಪತಿಗಳು ಈ ಆಯ್ಕೆ ಸಮಿತಿಯ ಅಧ್ಯಕ್ಷರು. ಇವರೆಲ್ಲರ ಸಂಪೂರ್ಣ ಸಹಮತದಿಂದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಆಗಿದೆಯೇ ಹೊರತು ಆರೋಪಿಸುವವರು ಹೇಳುವಂತೆ ‘ಸ್ವ-ಜನ ಪಕ್ಷಪಾತ’ ಎಂಬುದು ಸಂಪೂರ್ಣ ಸುಳ್ಳು.

ಗೋವಿಂದರಾಜು ಕೆ.ಎಂ. ನನ್ನ ವಿದ್ಯಾರ್ಥಿ. ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ವ್ಯಾಸಂಗದ ಸಂದರ್ಭದಲ್ಲೂ ಆತ ನನ್ನ ವಿದ್ಯಾರ್ಥಿ ಮತ್ತು ” ನಾಡು-ನುಡಿಯ ರೂಪಕ : ಡಾ. ರಾಜ್ ಕುಮಾರ್ ಸಿನಿಮಾ” – ಎಂಬ ಆತನ ಪಿಎಚ್ ಡಿ ಸಂಶೋಧನೆಗೂ ನಾನೇ ಮಾರ್ಗದರ್ಶಕ. ಆತ ಓರ್ವ ಪ್ರತಿಭಾವಂತ ಕಥೆಗಾರ ಕೂಡ. ಆತನ ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲೂ ಪ್ರಕಟವಾಗಿವೆ. ಮಾತ್ರವಲ್ಲದೆ ಆತನ ಕಥೆಗಳಿಗೆ ಸಾಹಿತಿ ಪ್ರಹ್ಲಾದ ಅಗಸನಕಟ್ಟೆ ಅವರ ನೆನಪಿನ ಪ್ರಶಸ್ತಿಯೂ ಒಲಿದು ಬಂದಿದೆ. ಈ ನನ್ನ ವಿದ್ಯಾರ್ಥಿ ಅರ್ಹತೆ ಉಳ್ಳವನೂ, ಯೋಗ್ಯನೂ, ಸಮರ್ಥನೂ ಆಗಿದ್ದೂ, ಸಂದರ್ಶನದಲ್ಲಿ ಸಮಿತಿಯ ಎಲ್ಲರ ಮೆಚ್ಚುಗೆ ಗಳಿಸಿ ಆಯ್ಕೆ ಆಗಿದ್ದಾನೆ. ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ ಮತ್ತು ಸಂತೋಷ ಅನುಭವಿಸುತ್ತೇನೆಯೇ ಹೊರತು ಸಂಕೋಚ ಪಡುವ ಪ್ರಶ್ನೆಯೇ ಇಲ್ಲ. ಇದು ನನ್ನ ಅತ್ಯಂತ ಸ್ಪಷ್ಟ ಮತ್ತು ದಿಟ್ಟ ನುಡಿ.

ಇನ್ನು ಕೆಲವರು ಆತನ ಪಿಎಚ್ ಡಿ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದು ಇನ್ನೊಂದು ಕಪೋಲ ಕಲ್ಪಿತ ಸಂಗತಿ. ಗೋವಿಂದರಾಜುನ ಪ್ರಿ-ಪಿಎಚ್ ಡಿ ಕೊಲೋಕ್ವಿಯಮ್ ನಡೆಸಲು ವಿಶ್ವವಿದ್ಯಾಲಯ ಏಪ್ರಿಲ್ 04, 2022ರಂದೇ ಆದೇಶ ನೀಡಿದೆ. ನಿಯಮಾವಳಿಯಂತೆ ಸೆಪ್ಟೆಂಬರ್ 9, 2022ರಂದು ಆತನ ಕೊಲೋಕ್ವಿಯಮ್ ನಡೆಸಲಾಗಿದೆ.

ಇನ್ನು ಆಯ್ಕೆ ಆದವರಿಗೆ ಪಿಎಚ್ ಡಿ ಪದವಿ ಇಲ್ಲ ಎಂಬುದರ ಬಗ್ಗೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಪದವಿ ಕಡ್ಡಾಯ ಅಲ್ಲ. ರಾಷ್ಟ್ರೀಯ ಅರ್ಹತಾ ಪರೀಕ್ಷೆ ಕಡ್ಡಾಯ. ಗೋವಿಂದನಿಗೆ ಆ ಅರ್ಹತೆ ಇದೆ. ಮಾತ್ರವಲ್ಲದೆ ಆತ ಯುಜಿಸಿಯಿಂದ ಫೆಲೋಶಿಪ್ ಪಡೆಯುತ್ತಿರುವ ಸಂಶೋಧನಾರ್ಥಿ ಕೂಡ.

ನಾಲ್ಕು ಹುದ್ದೆಗಳಿಗೆ ಇಬ್ಬರು ಪಿಎಚ್‌ಡಿ ಪದವಿ ಇರುವವರು ಮತ್ತು ಇಬ್ಬರು ಪಿಎಚ್‌ಡಿ ಮಾಡುತ್ತಿರುವವರು ಆಯ್ಕೆ ಆಗಿದ್ದಾರೆ. ಇದರಲ್ಲಿ ಯಾವ ನೀತಿ-ನಿಯಮಗಳ ಉಲ್ಲಂಘನೆಯೂ ಆಗಿಲ್ಲ. ಆಯ್ಕೆ ಆದ ನಾಲ್ವರಲ್ಲಿ ಇಬ್ಬರು ಸಾಮಾನ್ಯ ವರ್ಗದವರು, (ಒಬ್ಬರು ಮಹಿಳೆ) ಚೇತನ್ ಎಂ ಎಂಬವರು ಬಿಲ್ಲವ ಜಾತಿಗೆ ಸೇರಿದ ಹಿಂದುಳಿದ ಸಮುದಾಯದವರು. ಗೋವಿಂದರಾಜು ಕೆ.ಎಂ. ಮಾದಿಗ ಸಮುದಾಯಕ್ಕೆ ಸೇರಿದವರು.

ಇದನ್ನೂ ಓದಿರಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ಆ ಅರ್ಥದಲ್ಲೂ ಇದು ಸಾಮಾಜಿಕ ನ್ಯಾಯವನ್ನು ಮತ್ತು ಲಿಂಗೀಯ ನ್ಯಾಯವನ್ನು ಎತ್ತಿ ಹಿಡಿದ ಆಯ್ಕೆಯೇ ಆಗಿದೆ. ಈ ನಾಲ್ವರೂ ಕೇಂದ್ರೀಯ ವಿವಿ ಕೇರಳದ ಕನ್ನಡ ವಿಭಾಗವನ್ನು ಅತ್ಯಂತ ಸಶಕ್ತವಾಗಿ ಕಟ್ಟಬಲ್ಲವರು ಎಂಬ ವಿಶ್ವಾಸ ನನಗೆ ಮಾತ್ರವಲ್ಲ ಇಡೀ ಆಯ್ಕೆ ಸಮಿತಿಗೆ ಇದೆ. ಇಂತಹ ಪ್ರತಿಭಾನ್ವಿತ ಮತ್ತು ಉತ್ಸಾಹೀ ಅಧ್ಯಾಪಕರ ತರುಣ ಬಳಗವನ್ನು ರಚಿಸಿದ್ದಕ್ಕೆ ಆಯ್ಕೆ ಸಮಿತಿಯ ಸದಸ್ಯನಾಗಿ ನನಗೆ ಅಪಾರ ಸಂತೋಷ ಮತ್ತು ಪೂರ್ಣ ಪ್ರಮಾಣದ ನೆಮ್ಮದಿ ಇದೆ.

ವಿಶ್ವವಿದ್ಯಾಲಯಗಳಲ್ಲಿ, ನಮ್ಮ ಸರಕಾರಿ ನೇಮಕಾತಿಗಳಲ್ಲಿ ಯಾವ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ಕಂಡ ಅನುಭವ ಇರುವ ನಮಗೆ ಕೇರಳದಲ್ಲಿ ಇಂತಹ ನಿಷ್ಕಳಂಕ ಆಯ್ಕೆ ನಡೆದಿದೆ ಎಂಬುದನ್ನು ನಂಬುವುದು ಕಷ್ಟ ಆಗಿರುವುದು ಸಹಜವೇ ಆಗಿದೆ.

ಎಂ.ಎ. ಮತ್ತು ಪಿಎಚ್ ಡಿ ಪದವೀಧರರಾಗಿ, ಪುಸ್ತಕಗಳನ್ನು ಬರೆದು ಪ್ರಕಟಿಸಿದವರಾಗಿ, ಉದ್ಯೋಗದ ನಿರೀಕ್ಷೆ ಇರುವವರಿಗೆ, ವಯೋಮಾನ ಮೀರುವ ಆತಂಕ ಇರುವವರಿಗೆ, ಅಪೇಕ್ಷಿತ ನೌಕರಿ ಸಿಗದೇ ಇದ್ದಾಗ ಬೇಸರ ಆಗುವುದೂ ಸಹಜ.‌ ಸಿಟ್ಟು ಬರುವುದೂ ಸಹಜ. ಇಂತಹುದೇ ಕಷ್ಟ-ನಷ್ಟ, ನೋವು-ನಿರಾಸೆಗಳನ್ನು ಒಂದು ಕಾಲಕ್ಕೆ ನಾನೂ ಅನುಭವಿಸಿದವನೇ. ಹತಾಶನಾದವನೇ. ಇರುವ ನಾಲ್ಕು ಹುದ್ದೆಗಳಿಗೆ 80ಕ್ಕೂ ಮಿಕ್ಕಿದ ಆಕಾಂಕ್ಷಿಗಳು ಇರುವಾಗ ಈ ಪರಿಯ ಉದ್ವಿಗ್ನ ಪ್ರತಿಕ್ರಿಯೆ ಸಹಜವೇ. ಆಯ್ಕೆ ಸಮಿತಿ ಸದಸ್ಯರ ವಿರುದ್ಧ ಆರೋಪ ಹೊರಿಸುವ ನನ್ನ ಎಲ್ಲ ಕಿರಿಯ ಗೆಳೆಯರ ಬಗ್ಗೆ ನನಗೆ ಸಹಾನುಭೂತಿ ಇದೆ. ನಮ್ಮ ವಿರುದ್ಧ ಆರೋಪ ಹೊರಿಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಅವರ ಅಸಹಾಯಕತೆಯ ವಿರುದ್ಧ ಬಿರುನುಡಿಗಳನ್ಮು ಆಡಲು, ಅವರ ಸಿಟ್ಟನ್ನು ವ್ಯಂಗ್ಯ ಮಾಡಲು ಸಾಹಿತ್ಯ ಓದಿದ ಓರ್ವ ಅಧ್ಯಾಪಕನಾಗಿ ನನಗೆ ಖಂಡಿತವಾಗಿಯೂ ಸಾಧ್ಯ ಇಲ್ಲ.

  • ಡಾ.ನಿತ್ಯಾನಂದ ಬಿ.ಶೆಟ್ಟಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...