Homeಕರ್ನಾಟಕಹಿಜಾಬ್‌ಗೆ ಅವಕಾಶವಿಲ್ಲದೆ ಮಂಗಳೂರು ವಿವಿಯ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಡ್ರಾಪ್‌ಔಟ್

ಹಿಜಾಬ್‌ಗೆ ಅವಕಾಶವಿಲ್ಲದೆ ಮಂಗಳೂರು ವಿವಿಯ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಡ್ರಾಪ್‌ಔಟ್

ಆರ್‌ಟಿಐ ವರದಿ ಆಧಾರಿಸಿ ‘ಡೆಕ್ಕನ್‌ ಹೆರಾಲ್ಡ್‌’ ವಿಶೇಷ ವರದಿ ಮಾಡಿದ್ದು, ಹಲವು ಆತಂಕಕಾರಿ ಸಂಗತಿಗಳನ್ನು ಹೊರಗೆಡವಿದೆ.

- Advertisement -
- Advertisement -

“ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ನಿರಾಕರಿಸುವ ವಿದ್ಯಾರ್ಥಿಗಳಿಗೆ ಟಿಸಿ (ವರ್ಗಾವಣೆ ಪ್ರಮಾಣಪತ್ರ) ನೀಡಲಾಗುವುದು” ಎಂದು ಕಳೆದ ಮೇ ತಿಂಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡ್ಪಾಡಿತ್ತಾಯ ಘೋಷಣೆ ಮಾಡಿದರ. ಆನಂತರದಲ್ಲಿ ಶೇ. 16ಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಮಂಗಳೂರು ವಿವಿಗೆ ಸೇರಿದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳನ್ನು ತೊರೆದಿದ್ದಾರೆ. ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಸೆಮಿಸ್ಟರ್‌ಗಳಲ್ಲಿರುವ ವಿದ್ಯಾರ್ಥಿನಿಯರು ಟಿಸಿಗಳನ್ನು ವಾಪಸ್ ಪಡೆದಿದ್ದಾರೆ.

‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆ ಆರ್‌ಐಐ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ವರದಿ ಮಾಡಿದೆ. “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗಳೂರು ವಿವಿಗೆ ಸೇರಿದ ಕಾಲೇಜುಗಳಿಗೆ 2020-21 ಮತ್ತು 2021-22ರಲ್ಲಿ ವಿವಿಧ ಕೋರ್ಸ್‌ಗಳಿಗೆ ದಾಖಲಾದ ಒಟ್ಟು 900 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 145 ವಿದ್ಯಾರ್ಥಿಗಳು ತಮ್ಮ ವರ್ಗಾವಣೆ ಪತ್ರಗಳನ್ನು ಪಡೆದುಕೊಂಡಿದ್ದಾರೆ” ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದುಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವರ್ಗಾವಣೆ ಪಡೆದ ಕೆಲವರು ಹಿಜಾಬ್‌ಗೆ ಅವಕಾಶವಿರುವ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರೆ, ಇನ್ನು ಕೆಲವರು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣದಿಂದ ಕಾಲೇಜು ಬಿಟ್ಟಿದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ 113 ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಕಾಲೇಜುಗಳಲ್ಲಿ ಓದುವುದನ್ನು ಮುಂದುವರೆಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಂಗಳೂರು ವಿವಿಗೆ ಸೇರಿದ 10 ಸರ್ಕಾರಿ, ಅನುದಾನಿತ ಅಂಗಸಂಸ್ಥೆಗಳಿವೆ.

ಅನುದಾನಿತ ಕಾಲೇಜುಗಳಿಗೆ (8%) ಹೋಲಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ (34%) ವರ್ಗಾವಣೆ ಪತ್ರ ಪಡೆಯುವ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39 ಸರಕಾರಿ, 36 ಅನುದಾನಿತ ಕಾಲೇಜುಗಳಿವೆ. ಉಡುಪಿ ಜಿಲ್ಲೆಯಲ್ಲಿ (14%) ವರ್ಗಾವಣೆ ಬಯಸಿದ ವಿದ್ಯಾರ್ಥಿಗಳ ಸಂಖ್ಯೆ, ದಕ್ಷಿಣ ಕನ್ನಡ ಜಿಲ್ಲೆಗಿಂತ (13%) ಹೆಚ್ಚಾಗಿದೆ.

ಇದನ್ನೂ ಓದಿರಿ: ವೇದಗಣಿತ ತರಬೇತಿಗೆ ತಲಾ ಒಂದು ಲಕ್ಷ ನೀಡುತ್ತಿರುವ ಗ್ರಾಮ ಪಂಚಾಯ್ತಿಗಳು: ದಲಿತರಿಗಾಗಿ ಮೀಸಲಾದ SCSP TSP ಹಣ ದುರ್ಬಳಕೆ

ದಕ್ಷಿಣ ಕನ್ನಡದ ಸರ್ಕಾರಿ ಕಾಲೇಜುಗಳ ಪೈಕಿ ಇಲ್ಲಿನ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಟಿ.ಸಿ. ಪಡೆದಿದ್ದಾರೆ. 51 ಮುಸ್ಲಿಂ ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ತಮ್ಮ ಟಿಸಿ ಪಡೆದುಕೊಂಡಿದ್ದಾರೆ.

ಹಳೇಅಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ, ತೃತೀಯ ಮತ್ತು ನಾಲ್ಕನೇ ಸೆಮಿಸ್ಟರ್‌ ತರಗತಿಗಳಿಗೆ ಹಾಜರಾಗಿದ್ದ 20 ವಿದ್ಯಾರ್ಥಿನಿಯರು ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್‌ನಲ್ಲಿದ್ದಾಗ ಟಿಸಿ ಪಡೆಯಲು ಬಯಸಿದ್ದಾರೆ. ಕಾಲೇಜು ಪ್ರಾಂಶುಪಾಲ ಶ್ರೀಧರ್ ಅವರು ಡೆಕ್ಕನ್‌ ಹೆರಾಲ್ಡ್‌ಗೆ ಪ್ರತಿಕ್ರಿಯೆ ನೀಡಿದ್ದು, “ತರಗತಿಗಳಿಗೆ ಹಾಜರಾಗುವಂತೆ ಮಾಡಿದ ಮನವಿಯನ್ನು ವಿದ್ಯಾರ್ಥಿಗಳು ನಿರ್ಲಕ್ಷಿಸಿದ್ದಾರೆ. ಅವರು ಟಿಸಿಗಳನ್ನು ಸಹ ಸಂಗ್ರಹಿಸಲಿಲ್ಲ” ಎಂದಿದ್ದಾರೆ.

ಹಿಜಾಬ್ ವಿವಾದದ ಕೇಂದ್ರಬಿಂದುವಾಗಿರುವ ಉಡುಪಿಯ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂಬತ್ತು ವಿದ್ಯಾರ್ಥಿಗಳು ಟಿಸಿ ಪಡೆದಿದ್ದಾರೆ. ಆ ಮೂಲಕ ಇಡೀ ಜಿಲ್ಲೆಯಲ್ಲಿ ಹೆಚ್ಚು ಟಿ.ಸಿ.ಪಡೆದ ಕಾಲೇಜಾಗಿ ಇದು ಗುರುತಿಸಿಕೊಂಡಿದೆ.

ಟಿಸಿ ನಂತರ ಮುಂದೇನು?

ಅನುದಾನಿತ ಕಾಲೇಜುಗಳ ಪೈಕಿ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ (11) ಮತ್ತು ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ (13) ಅತಿ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಸಂಗ್ರಹಿಸಿದ್ದಾರೆ. ಹಾಗಾದರೆ ಈ ವಿದ್ಯಾರ್ಥಿಗಳು ಟಿಸಿ ಸಂಗ್ರಹಿಸಿದ ನಂತರ ಏನು ಮಾಡುತ್ತಿದ್ದಾರೆ?

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬಾಲಕಿಯರ ಸಮಾವೇಶದಲ್ಲಿ ಹಿಬಾ ಶೇಖ್ ಎಂಬ ವಿದ್ಯಾರ್ಥಿನಿ ಮಾತನಾಡಿ, “ಬೇರೆ ಕಾಲೇಜಿನಲ್ಲಿ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದೇನೆ” ಎಂದಿದ್ದಾರೆ. ಕಾರ್‌ಸ್ಟ್ರೀಟ್‌ನಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ಹಿಬಾ, ಟಿಸಿ ವಾಪಸ್‌ ಪಡೆಯಲು ನಿರ್ಧರಿಸಿದ್ದರು.

ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ಮುಗಿಸಿದ್ದ ಗೌಸಿಯಾ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. “ಆದರೆ ಅವರ ಆರನೇ ಸೆಮಿಸ್ಟರ್ ಮಾರ್ಚ್ 2023 ರಲ್ಲಿ ಪ್ರಾರಂಭವಾಗಬಹುದು” ಎಂದು ಮಂಗಳೂರು ವಿವಿ ಮೂಲಗಳು ತಿಳಿಸಿವೆ.

ಮಂಗಳೂರು ವಿವಿ ಕುಲಪತಿ ಪ್ರೊ.ಯಡಪಡಿತ್ತಾಯ ಮಾತನಾಡಿ, “ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಕಾಂಬಿನೇಷನ್ ಇರುವ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಹಾಯ ಕೋರಿ ಭೇಟಿ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು (ಕೆಎಸ್‌ಒಯು) ಸಂಪರ್ಕಿಸಲು ನಾನು ಅವರಿಗೆ ಸೂಚಿಸಿದ್ದೇನೆ” ಎಂದಿದ್ದಾರೆ.

“ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದೆ” ಎಂದು ಹೇಳಿದ್ದಾರೆ.

ಬೆಂಗಳೂರು ಮೂಲದ ಮನಶ್ಶಾಸ್ತ್ರಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತೆ ರುಕ್ಸಾನಾ ಹಾಸನ್ ಮಾತನಾಡಿ, “ಮುಸ್ಲಿಂ ವಿದ್ಯಾರ್ಥಿನಿಯರು ಭಾವನಾತ್ಮಕವಾಗದೆ ತಮ್ಮ ಶಿಕ್ಷಣವನ್ನು ಮುಂದುವರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿರಿ: ಉಕ್ರೇನ್‌ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಸೀಟು ಕೊಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ಟಿಆರ್‌ಎಫ್) ಅಧ್ಯಕ್ಷ ರಿಯಾಜ್ ಅಹಮದ್ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯದ ಸಹಾಯದಿಂದ ಅನೇಕ ಹೆಣ್ಣುಮಕ್ಕಳು ಖಾಸಗಿ ಕಾಲೇಜುಗಳಿಗೆ ದಾಖಲಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

‘ಈ ಪ್ರಮಾಣ ಹೆಚ್ಚಿರಬಹುದು’

ಹಿಜಾಬ್ ವಿಷಯದಲ್ಲಿ ಘರ್ಷಣೆಗೆ ಸಾಕ್ಷಿಯಾದ ಉಪ್ಪಿನಂಗಡಿಯ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ಮಾಹಿತಿ ನೀಡುವಾಗ, “ಯಾವುದೇ ವಿದ್ಯಾರ್ಥಿಗಳು ಕಾಲೇಜು ಬಿಟ್ಟಿಲ್ಲ” ಎಂದು ತಿಳಿಸಿತ್ತು. ಆದರೆ ಮರುಪರಿಶೀಲನೆ ಮಾಡಿದಾಗ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಪ್ರೊ.ಶೇಖರ್ ಒಪ್ಪಿಕೊಂಡಿದ್ದಾರೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಜಿಲ್ಲಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಪ್ರತಿಕ್ರಿಯಿಸಿ, “ಸಂಗ್ರಹ ಅಂಕಿಅಂಶಗಳಿಗಿಂತ ಕಾಲೇಜು ತೊರೆದ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರಬಹುದು” ಎಂದಿದ್ದಾರೆ.

ವರದಿ ಕೃಪೆ: ಡೆಕ್ಕನ್‌ ಹೆರಾಲ್ಡ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...