ಉತ್ತರಖಂಡ ರಾಜ್ಯದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡ ವಿನೋದ್ ಆರ್ಯರವರ ಮಗ ಪುಲ್ಕಿತ್ ಆರ್ಯನನ್ನು 19 ವರ್ಷದ ಯುವತಿಯ ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಅಲ್ಲದೆ ಆತನ ಒಡೆತನದ ರೆಸಾರ್ಟ್ ಮೇಲೆ ಪೊಲೀಸರು ಬುಲ್ಡೋಜರ್ ದಾಳಿ ನಡೆಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಆದೇಶಿಸಿದ್ದಾರೆ.
ಪುಲ್ಕಿತ್ ಆರ್ಯನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಸೆಪ್ಟಂಬರ್ 18ರಂದು ಕಾಣೆಯಾಗಿದ್ದಳು. ಸ್ವತಃ ಪುಲ್ಕಿತ್ ಆರ್ಯನೇ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಆದರೆ 5 ದಿನದ ನಂತರ ಪುಲ್ಕಿತ್ ಆರ್ಯ ಇಬ್ಬರು ಸಿಬ್ಬಂದಿಯೊಡನೆ ಸೇರಿ ಆಕೆಯನ್ನು ಕೊಂದಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವತಿಯ ಕುಟುಂಬವು ಮೊದಲಿನಿಂದಲೂ ಪುಲ್ಕಿತ್ ಆರ್ಯನ ಮೇಲೆ ಸಂಶಯ ವ್ಯಕ್ತಪಡಿಸಿತ್ತು. ಏಕೆಂದರೆ ಆತ ಆರಂಭದಲ್ಲಿ ದೂರು ನೀಡಲು ನಿರಾಕರಿಸಿದ್ದ ಎಂದು ಹೇಳಲಾಗಿದೆ. ಮೃತ ದೇಹವನ್ನು ಪಕ್ಕದ ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದ್ದು, ಆಕೆಯ ಸಂಬಂಧಿಕರನ್ನು ಗುರುತು ಪತ್ತೆ ಹಚ್ಚಲು ಕರೆಯಲಾಗಿದೆ.
ಈ ನಡವೆ ಆರೋಪಿಯು ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಮುಖಂಡನ ಮಗನಾದ್ದರಿಂದ ಪೊಲೀಸರು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ವೈರಲ್ ಆದ ನಂತರ ಪೊಲೀಸರು ಮುಖ್ಯ ಆರೋಪಿ ಪುಲ್ಕಿತ್ ಮತ್ತು ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಆ ಯುವತಿಯ ಕೊಲೆಯ ಹಿಂದಿನ ಕಾರಣಗಳ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಆ ರೆಸಾರ್ಟ್‌ನಲ್ಲಿ ಹುಡುಗಿಯನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ. ಅದಕ್ಕೆ ಸಂತ್ರಸ್ತ ಯುವತಿಯನ್ನು ಬಲವಂತಪಡಿಸಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದ್ದು, ಪೊಲೀಸರು ಈ ಕುರಿತು ಮಾಹಿತಿ ನೀಡಿಲ್ಲ.
“ಪೊಲೀಸರು ತನಿಖೆಯಲ್ಲಿ ಲೋಪವೆಸಗುತ್ತಿದ್ದಾರೆ. ಸೆಪ್ಟಂಬರ್ 18ರಂದು ಯುವತಿ ಕಾಣೆಯಾಗಿದ್ದರು ಸಹ ಸೆಪ್ಟಂಬರ್ 21 ರಂದು ಎಫ್‌ಐಆರ್ ದಾಖಲಿಸಿದ್ದು ಏಕೆ? ಎಲ್ಲಿಯವರೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ?” ಎಂದು ಕಾಂಗ್ರೆಸ್ ವಕ್ತಾರ ಗರಿಮ ಮೆಹ್ರ ದುಸಾನಿ ಪ್ರಶ್ನಿಸಿದ್ದಾರೆ.
ರಾಜ್ಯ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಮಾತನಾಡಿ, “ರೆಸಾರ್ಟ್ ಇರುವ ಜಾಗ ರಿಷಿಕೇಶ್ ಪಟ್ಟಣದಿಂದ 10 ಕಿ.ಮೀ ದೂರವಿದ್ದು ಅಲ್ಲಿ ಸಾಮಾನ್ಯ ಪೊಲೀಸರನ್ನು ನಿಯೋಜಿಸಿರಲಿಲ್ಲ. ನಮ್ಮಲ್ಲಿ ಕಂದಾಯ ಅಧಿಕಾರಿಗಳು ಎಫ್‌ಐಆರ್ ದಾಖಲಿಸುವ ಪದ್ದತಿ ಇದೆ. ಅದರಂತೆ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯನ ದೂರಿನ ಅನ್ವಯ ಕಾಣೆಯಾಗಿದ್ದಾರೆ ಎಂಬ ದೂರು ದಾಖಲಿಸಿಕೊಂಡಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಪ್ರಕರಣವನ್ನು ನಮಗೆ ವರ್ಗಾಯಿಸಿದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ದೂರುದಾರನೇ ಆರೋಪಿಯಾಗಿ ಬದಲಾಗಿದ್ದಾನೆ” ಎಂದು ತಿಳಿಸಿದ್ದಾರೆ.
ಬಂಧನದ ವೇಳೆ ಪುಲ್ಕಿತ್ ಆರ್ಯನ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ ಜಖಂಗೊಳಿಸಿದ್ದಾರೆ ಎಂದು ವರದಿಯಾಗಿದೆ.
ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾ ಎಂಬುವವರನ್ನು ಸಹ ಬಂಧಿಸಿದ್ದೇವೆ. ಆರಂಭದಲ್ಲಿ ಅವರು ಪೊಲೀಸರನ್ನು ದಿಕ್ಕು ತಪ್ಪಿಸಲು ಯತ್ನಿಸಿದರು. ಆದರೆ ಧೀರ್ಘ ವಿಚಾರಣೆಯ ಸಂದರ್ಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ತಿಳಿಸಿದ್ದಾರೆ. “ಇದು ಬಹಳ ಹೀನ ಕೃತ್ಯವಾಗಿದ್ದು, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಿಎಂರವರ ಆದೇಶದ ಮೇರೆಗೆ ಸ್ಥಳೀಯ ಆಡಳಿತಾಧಿಕಾರಿಗಳು ರೆಸಾರ್ಟ್ ಅನ್ನು ಬುಲ್ಡೋಜರ್‌ನಿಂದ ನೆಲಸಮಗೊಳಿಸಲು ಮುಂದಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಅಲ್ಲದೆ ರಾಜ್ಯದ ಎಲ್ಲಾ ರೆಸಾರ್ಟ್‌ಗಳ ಮೇಲೆ ತನಿಖೆ ನಡೆಸಬೇಕೆಂದು ಆದೇಶಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅದಾನಿ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಶ್ರೀಮಂತ ಅನಿವಾಸಿ ಭಾರತೀಯ!


