ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಎ ವಿರೋಧಿ ಹೋರಾಟಗಾರ್ತಿ ‘ಅಮೂಲ್ಯ ಲಿಯೋನ್’ ಅವರನ್ನು ಭೇಟಿಯಾಗಿದ್ದಾರೆ ಎಂದು ಪ್ರತಿಪಾದಿಸಿ ಯಾತ್ರೆಯಲ್ಲಿ ಯುವತಿಯೊಬ್ಬರೊಂದಿಗೆ ಇರುವ ವಿಡಿಯೊ ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಡಲಾಗಿದೆ.
ಈ ವಿಡಿಯೊ ಮತ್ತು ಚಿತ್ರಗಳನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಗಮನವಿಟ್ಟು ನೋಡಿ, ಇದು ಭಾರತ ಜೋಡಿಸುವುದು ಅಲ್ಲ, ಭಾರತ ಒಡೆಯುವುದು” ಎಂದು ಬರೆದುಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರೀತಿ ಗಾಂಧಿ ಅವರು ಹಂಚಿಕೊಂಡಿರುವ ವಿಡಿಯೊದ ಅರ್ಧ ಭಾಗದಲ್ಲಿ ಬಾಬ್‌ಕಟ್ ಹೇರ್‌ಸ್ಟೈಲ್ ಮಾಡಿಕೊಂಡಿರುವ ಯುವತಿಯು ರಾಹುಲ್ ಗಾಂಧಿಯ ಜೊತೆಗೆ ನಡೆಯುತ್ತಿರುವ ದೃಶ್ಯವಿದ್ದರೆ, ಮತ್ತೊಂದು ಅರ್ಧದಲ್ಲಿ ಸಿಎಎ ವಿರೋಧಿ ಹೋರಾಟದ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯ ದೃಶ್ಯಗಳಿವೆ.

ಸಿಎಎ ವಿರೋಧಿ ಹೋರಾಟದ ಸಮಯ ಸಂಸದ ಅಸಾದುದ್ದೀನ್ ಒವೈಸಿ ಅವರು ಭಾಗವಹಿಸಿದ್ದ ವೇದಿಕೆಯೊಂದರಲ್ಲಿ ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನ್ ಅವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದರು. ಈ ಘೋಷಣೆ ಕೂಗುತ್ತಿದ್ದಂತೆ ಅವರ ಮೈಕ್ ಅನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆದಿತ್ತು. ಅದರ ನಂತರ ಅವರು ‘ಹಿಂದೂಸ್ತಾನ್ ಝಿಂದಾಬಾದ್’ ಹೇಳಿಕೆ ನೀಡಿ ‘ವ್ಯತ್ಯಾಸ ಗಮನಿಸಿ…’ ಎಂದು ಹೇಳುತ್ತಿದ್ದಂತೆ ಅವರಿಂದ ಮೈಕ್ ಕಿತ್ತು, ಅವರು ಮುಂದಕ್ಕೆ ಮಾತನಾಡದಂತೆ ತಡೆಯಲಾಗಿತ್ತು. ಇದರ ನಂತರ ಅವರ ಬಂಧನ ಕೂಡಾ ನಡೆದಿತ್ತು.
ಅಲ್ಲದೆ ಈ ವೇದಿಕೆ ಏರುವುದಕ್ಕಿಂತ ಮುಂಚೆ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಎಲ್ಲಾ ದೇಶಗಳಿಗೂ ‘ಜಿಂದಾಬಾದ್’ ಎಂದು ಬರೆದಿರುವ ಪೋಸ್ಟ್ ಒಂದನ್ನು ಕೂಡಾ ಹಂಚಿಕೊಂಡಿದ್ದರು.
#WATCH Ruckus erupts at the protest rally against CAA&NRC in Bengaluru where AIMIM Chief Asaddudin Owaisi is present. A woman named Amulya at the protest rally says "The difference between Pakistan zinadabad and Hindustan zindabad is…". pic.twitter.com/FPh5Ccu3HD
— ANI (@ANI) February 20, 2020
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇಂದ್ರ ಶಿಕ್ಷಣ ಸಚಿವಾಲಯ 5 ಲಕ್ಷ ಉಚಿತ ಲ್ಯಾಪ್‌ಟಾಪ್ ಹಂಚುತ್ತಿದೆ ಎಂಬ ವಾಟ್ಸಪ್ ಸಂದೇಶ ನಿಜವೆ?
ಸಿಎಎ ವಿರೋಧಿ ಹೋರಾಟದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದ ಅಮೂಲ್ಯ ಲಿಯೋನ್ ಅವರನ್ನೆ ರಾಹುಲ್ ಗಾಂಧಿ ಅವರು ಕೇರಳದಲ್ಲಿ ಇರುವ ‘ಭಾರತ್ ಜೋಡೋ’ ಯಾತ್ರೆಯ ವೇಳೆ ಭೇಟಿಯಾಗಿದ್ದರು ಎಂದು ಪ್ರತಿಪಾದಿಸುತ್ತಿದ್ದಾರೆ.

ಫ್ಯಾಕ್ಟ್‌ಚೆಕ್
ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ’ ಯಾತ್ರೆಯು ಪ್ರಸ್ತುತ ಕೇರಳದ ತ್ರಿಶೂರ್‌ನಲ್ಲಿ ಇದೆ. ಅಮೂಲ್ಯ ಲಿಯೋನ್ ಅವರು ಕರ್ನಾಟಕದ ಚಿಕ್ಕಮಗಳೂರಿನವರಾಗಿದ್ದಾರೆ. ಸಿಎಎ ವಿರೋಧಿ ಹೋರಾಟದ ನಂತರ ಅವರು ಸಾರ್ವಜನಿಕ ಹೋರಾಟಗಳಲ್ಲಿ ಕಾಣಿಸಿಕೊಂಡಿಲ್ಲ. ಈ ವರೆಗಿನ ವರದಿಯಂತೆ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಕೂಡಾ ಅಲ್ಲ.
ವಾಸ್ತವದಲ್ಲಿ, ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿರುವ ಚಿತ್ರದಲ್ಲಿ ಇರುವ ಯುವತಿಯು ಅಮೂಲ್ಯ ಲಿಯೋನ್ ಅಲ್ಲ. ರಾಹುಲ್ ಗಾಂಧಿ ಅವರ ಜೊತೆಗೆ ಇರುವ ಯುವತಿಯು ‘ಮಿವಾ ಆಂಡ್ರೆಲಿಯೊ’ ಎಂಬ ಹೆಸರಿನಲ್ಲಿ ಇನ್ಸ್‌ಟಾಗ್ರಾಂನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕೇರಳದವರಾಗಿದ್ದು, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ‘ಕೆಎಸ್‌ಯು’ ನಾಯಕಿಯಾಗಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್-ಇದು ತಮಿಳುನಾಡೂ ಅಲ್ಲ, ಧ್ವಜ ಬಿಜೆಪಿಯದ್ದೂ ಅಲ್ಲ; ಎಡಿಟ್ ಚಿತ್ರ ಹಂಚಿದ ಸಿಟಿ ರವಿ
ಮಿವಾ ಆಂಡ್ರೆಲಿಯೊ ಅವರು ತನ್ನ ಇನ್ಸ್‌ಟಾಗ್ರಾಮ್ ಅಕೌಂಟ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ಚಿತ್ರಗಳನ್ನು ಮೂರು ದಿನಗಳ ಹಿಂದೆಯೆ ಪೋಸ್ಟ್ ಮಾಡಿದ್ದು, ‘‘ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ನನ್ನ ಸ್ವಂತ ರಾಹುಲ್ ಗಾಂಧಿ’’ ಎಂದು ಬರೆದುಕೊಂಡಿದ್ದಾರೆ.
View this post on Instagram
ಇಷ್ಟೆ ಅಲ್ಲದೆ ಯೂತ್ ಕಾಂಗ್ರೆಸ್ ಕಾರ್ಯಕರ್ತ ಮೊಯಿದಿನ್ ಕುರೇಶಿ ಅವರು ಕೂಡಾ ರಾಹುಲ್ ಗಾಂಧಿ ಅವರು ‘ಮಿವಾ ಆಂಡ್ರೆಲಿಯೊ’ ಅವರೊಂದಿಗೆ ನಡೆಯುವ ವಿಡಿಯೊವನ್ನು ಅವರಿಗೆ ಟ್ಯಾಗ್ ಮಾಡಿ ಇನ್ಸ್‌ಟಾಗ್ರಾಮ್‌ನಲ್ಲ ಪೋಸ್ಟ್ ಮಾಡಿದ್ದಾರೆ.
View this post on Instagram
ಅಲ್ಲದೆ ಅವರ ಚಿತ್ರವನ್ನು ‘ಭಾರತ್ ಜೋಡೋ’ ಅಧೀಕೃತ ಟ್ವಿಟರ್ ಹ್ಯಾಂಡಲ್ ಕೂಡಾ ಒಂದು ದಿನದ ಹಿಂದೆ ಪೋಸ್ಟ್ ಮಾಡಿದೆ.
Kindness is powerful!#BharatJodoYatra pic.twitter.com/tiDh273dYD
— Bharat Jodo (@bharatjodo) September 23, 2022
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಶಿವಲಿಂಗ ಪತ್ತೆ ಸುದ್ದಿ ಕೇಳಿ ಕಾಶಿಯ ಸಂಭ್ರಮ’ ಎಂಬ ಪ್ರತಿಪಾದನೆಯ ಈ ವಿಡಿಯೊ ಕನಿಷ್ಠ ಮೂರು ವರ್ಷ ಹಳೆಯದು
ಒಟ್ಟಿನಲ್ಲಿ ಹೇಳಬಹುದಾದರೆ, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಹರಡುತ್ತಿರುವುದು ಸುಳ್ಳು ಸುದ್ದಿಯಾಗಿದೆ. ವೈರಲ್ ಚಿತ್ರ ಮತ್ತು ವಿಡಿಯೊದಲ್ಲಿ ಇರುವ ಯುವತಿಯು ಇನ್ಸ್‌ಟಾಗ್ರಾಮ್‌ನಲ್ಲಿ ‘ಮಿವಾ ಆಂಡ್ರೆಲಿಯೊ’ ಎಂದು ಗುರುತಿಸಿಕೊಂಡಿದ್ದು, ಕೇರಳದ ವಿದ್ಯಾರ್ಥಿ ಸಂಘಟನೆಯಾದ ಕೆಎಸ್‌ಯು ನಾಯಕಿಯಾಗಿದ್ದಾರೆ.


