ಬಿಹಾರದ ಹೊಸ ಸರ್ಕಾರವನ್ನು ‘ಜಂಗಲ್ ರಾಜ್’ ಎಂದು ಉಲ್ಲೇಖಿಸಿದ್ದ ಒಕ್ಕೂಟ ಸರ್ಕಾರದ ಗೃಹಸಚಿವ ಅಮಿತ್ ಶಾ ಅವರಿಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಿರುಗೇಟು ನೀಡಿದ್ದಾರೆ. “ಬಿಹಾರದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿದ ನಂತರ, ಅಮಿತ್ ಶಾ ಬಿಲ್ಕುಲ್ ಹುಚ್ಚರಾಗಿ ಹೋಗಿದ್ದಾರೆ” ಎಂದು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೊತೆಯಾಗಿ ಭಾನುವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಅದಕ್ಕೂ ಒಂದು ದಿನ ಮೊದಲು ಪ್ರತಿಪಕ್ಷಗಳ ಒಗ್ಗಟ್ಟಿನ ಅಗತ್ಯವನ್ನು ಲಾಲು ಯಾದವ್ ಒತ್ತಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬಿಹಾರದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿದ ನಂತರ ಅಮಿತ್ ಶಾಗೆ ಸಂಪೂರ್ಣವಾಗಿ ಹುಚ್ಚು ಹಿಡಿದಿದೆ. ಬಿಜೆಪಿ 2024 ರಲ್ಲೂ ಸೋಲನ್ನು ಎದುರಿಸಲಿದೆ. ಅದಕ್ಕಾಗಿಯೇ ಅವರು ಅಲ್ಲಿಗೆ ಓಡಿ ಹೋಗಿ, ಜಂಗಲ್ ರಾಜ್ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಗುಜರಾತ್‌ನಲ್ಲಿ ಇದ್ದಾಗ ಏನು ಮಾಡುತ್ತಿದ್ದರು” ಎಂದು ಲಾಲು ಯಾದವ್ ಕೇಳಿದ್ದಾರೆ.
ಇದನ್ನೂ ಓದಿ: ‘ಕಾಂಗ್ರೆಸ್ ಇನ್ನೂ ದೊಡ್ಡ ಪಕ್ಷ’: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
“ಜಂಗಲ್ ರಾಜ್ ಇದ್ದಿದ್ದು, ಅವರು ಗುಜರಾತ್‌ನಲ್ಲಿ ಇದ್ದಾಗ” ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. “ಅಮಿತ್ ಶಾ ಬಿಲ್ಕುಲ್ ಹುಚ್ಚರಾಗಿ ಹೋಗಿದ್ದಾರೆ (ಅಮಿತ್ ಶಾ ಬಿಲ್ಕುಲ್ ಪಗ್ಲಾಯೇ ಹುಯೇ ಹೈಂ)” ಎಂದು ಹೇಳಿದ್ದಾರೆ.
2024ರಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ ಮುಂದಿನ ವರ್ಷ ಬಿಹಾರದಲ್ಲಿ ಸರ್ಕಾರ ರಚಿಸಲಿದೆ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಲು ಯಾದವ್, “ನೋಡೋಣ ಅದನ್ನು” ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಭಾನುವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. “ನಾವು ಪ್ರತಿಪಕ್ಷಗಳ ಏಕತೆಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇದು ನಮ್ಮ ಸಭೆಯ ಕಾರ್ಯಸೂಚಿಯಾಗಿದೆ” ಎಂದು ಲಾಲು ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಎಲ್ಲಾ ಪ್ರಮುಖ ವಿಪಕ್ಷಗಳ ನಾಯಕರ ಭೇಟಿಯಾದ ಬಿಹಾರ ಸಿಎಂ ನಿತೀಶ್ ಕುಮಾರ್
ತಮ್ಮ ಮಾಜಿ ಮೈತ್ರಿಕೂಟವಾಗಿದ್ದ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ,“ಅವರು ಬಿಜೆಪಿಯ ಬೆನ್ನಹಿಂದೆ ಚೂರಿ ಹಾಕಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮಡಿಲಲ್ಲಿ ಕುಳಿತು ತಮ್ಮ ಪ್ರಧಾನಮಂತ್ರಿ ಆಗುವ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“2024ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್ ಅವರ ಜೋಡಿಯನ್ನು ನಿರ್ನಾಮ ಮಾಡಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಬಹುಮತ ಗಳಿಸಲಿದೆ. ಬಿಹಾರವು ಮಹಾಮೈತ್ರಿಕೂಟದ ‘ಜಂಗಲ್ ರಾಜ್’ಅನ್ನು ಬಯಸುವುದಿಲ್ಲ” ಎಂದು ಬಿಹಾರದ ಪೂರ್ಣೆಯಾದಲ್ಲಿ ನಡೆದ ರ್‍ಯಾಲಿಯಲ್ಲಿ ಅಮಿತ್ ಶಾ ಪ್ರತಿಪಾದಿಸಿದ್ದಾರೆ.


