Homeಮುಖಪುಟ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ...

‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

- Advertisement -
- Advertisement -

ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆಯಾದ ‘ಸೀತಾರಾಮನ್’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಲಯಾಳಂನ ದುಲ್ಕರ್‌ ಸಲ್ಮಾನ್‌, ಹಿಂದಿಯ ಮೃಣಾಲ್‌ ಠಾಕೂರ್‌, ಕನ್ನಡದ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಹಲವು ನಟರು ಅಭಿನಯಿಸಿರುವ ಈ ಸಿನಿಮಾದ ನವಿರು ಪ್ರೇಮಕಥೆಗೆ ಎಲ್ಲ ಜನವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈಗ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲೂ ಸ್ಟ್ರೀಮಿಂಗ್‌ ಆಗುತ್ತಿರುವ ‘ಸೀತಾರಾಮಂ’, ಈ ಕಾಲಘಟ್ಟದ ಅನೇಕ ರಾಜಕೀಯ ಸೂಕ್ಷ್ಮಗಳನ್ನು ನಿಭಾಯಿಸಿರುವ ರೀತಿ ಅಚ್ಚರಿಯೇ ಸರಿ. ಯಾವುದೇ ಸಾಂಸ್ಕೃತಿಕ ಚಟುವಟಿಕೆಯು ಹಿಂದುತ್ವ ರಾಜಕಾರಣದ ವಿರೋಧವನ್ನು ಎದುರಿಸಬೇಕಾದ ವಿಚಿತ್ರ ಪರಿಸರ ಈಗ ನಿರ್ಮಾಣವಾಗಿರುವುದನ್ನು ದೇಶದ್ಯಾಂತ ಕಾಣುತ್ತಿದ್ದೇವೆ. ಹೀಗಾಗಿ ಸ್ವಲ್ಪ ಏರುಪೇರಾದರೂ ‘ಬಾಯ್ಕಾಟ್‌’ ಎನ್ನುತ್ತಾರೆ. ಇದೆಲ್ಲವನ್ನೂ ನಿಭಾಯಿಸಿ, ಯಾವುದೇ ವಿರೋಧಕ್ಕೆ ಆಸ್ಪದ ನೀಡದಂತೆ ಹೇಳಬೇಕಾದ ಮನುಷ್ಯ ಸಹಜ ಸತ್ಯಗಳನ್ನು ಚಿತ್ರಿಸುವುದು ಸವಾಲಿನ ಸಂಗತಿ. ಹೀಗಾಗಿ ರಾಜಕಾರಣದೊಂದಿಗೆ ಬೆರೆತ ಧರ್ಮಸೂಕ್ಷ್ಮಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿರುವ ಕಾರಣಕ್ಕೆ ‘ಹನುಮಂತರಾವ್ ರಾಘವಪುಡಿ’ ನಿರ್ದೇಶನದ ‘ಸೀತಾರಾಮಂ’ ಮುಖ್ಯವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದುತ್ವ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎರಡು ಗುಂಪುಗಳು ನಿರ್ಮಾಣವಾಗಿವೆ. ಒಂದು: ರಾಯ್ತಾಸ್‌. ಎರಡು: ‘ಟ್ರ್ಯಾಡ್ಸ್’. ಈ ‘ಟ್ರ್ಯಾಡ್ಸ್’ ತೀವ್ರತರನಾದ ಬಲಪಂಥೀಯ ಬಣವಾಗಿದ್ದು, ಶರವೇಗದಲ್ಲಿ ಜನಮನ್ನಣೆ ಪಡೆಯುತ್ತಿದೆ. ಜಾತಿವಾದ, ಅಸ್ಪಶ್ಯತೆ ಆಚರಣೆ, ಮತೀಯ ತಾರತಮ್ಯವೇ ಟ್ರ್ಯಾಡ್ ಬಣದ ಗುರಿ. ಟ್ರ್ಯಾಡ್ಸ್ ಎಷ್ಟು ಪ್ರಬಲವಾಗುತ್ತಿದೆ ಎಂದರೆ- ರಾಯ್ತಾಸ್‌ಗಳು ಕೂಡ ಟ್ರ್ಯಾಡ್‌ಗಳನ್ನು ಒಪ್ಪಿಕೊಳ್ಳಬೇಕಾದ ಕಾಲ ಬಂದರೂ ಆಶ್ಚರ್ಯಪಡಬೇಕಿಲ್ಲ.

ತೀವ್ರ ಹಿಂದುತ್ವದತ್ತ ರಾಜಕಾರಣ ಹೆಜ್ಜೆ ಹಾಕುತ್ತಿರುವ ಹೊತ್ತಿನಲ್ಲಿ, ಅಧಿಕಾರ ಕೇಂದ್ರದಲ್ಲಿ ಬಹುಸಂಖ್ಯಾತವಾದವೇ ರಾರಾಜಿಸುತ್ತಿರುವಾಗ ರಂಗಕರ್ಮಿಗಳು, ಸಿನಿಮಾ ತಂತ್ರಜ್ಞರು, ಎಲ್ಲಾ ಜನವರ್ಗಗಳು- ಧರ್ಮಸೂಕ್ಷ್ಮಗಳನ್ನು ಅದರಲ್ಲೂ ಹಿಂದುತ್ವ ರಾಜಕಾರಣವನ್ನು ಹ್ಯಾಂಡಲ್‌ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಹಿಂದುತ್ವ’ವನ್ನು ಈ ‘ಸೀತಾರಾಮಂ’ ಹೇಗೆ ನಿಭಾಯಿಸಿದೆ, ಅದಕ್ಕೆ ಹೇಗೆ ಒಳೇಟು ನೀಡುವ ಪ್ರಯತ್ನ ಮಾಡಿದೆ ಎಂಬುದನ್ನು ಇಲ್ಲಿನ ಮುಂದಿನ ಭಾಗದಲ್ಲಿ ವಿಶ್ಲೇಷಿಸಲಾಗಿದೆ. (ವಿಮರ್ಶೆಗೆ ಕಥೆಯ ಕೆಲವು ಎಳೆಗಳನ್ನು ಪ್ರಸ್ತಾಪಿಸಿರುವುದರಿಂದ ಸಿನಿಮಾ ನೋಡದವರಿಗೆ ಇಲ್ಲಿ ಕಥೆ ಹೇಳಿದಂತೆ ಭಾಸವಾಗಬಹುದು. ಅಂಥವರು ಸಿನಿಮಾ ನೋಡಿದ ಮೇಲೆ ವಿಮರ್ಶೆ ಓದುವುದು ಸೂಕ್ತ).

1964ರಿಂದ 90ರ ದಶಕದವರೆಗೆ ಇಲ್ಲಿನ ಕಥೆ ಸಾಗುತ್ತದೆ. ಹಿಂದೂ- ಮುಸ್ಲಿಂ ಅನ್ಯೋನ್ಯವಾಗಿರುವ ಕಾಶ್ಮೀರದಲ್ಲಿ ಕಲಹವನ್ನು ಉಂಟು ಮಾಡಬೇಕೆಂದು ಪಾಕ್‌ ಭಯೋತ್ಪಾದಕರು ಬಯಸಿದ್ದಾರೆ. ಕಾಶ್ಮೀರಿಗಳಂತೆ ವೇಷಧರಿಸಿ ಬರುವ ಭಯೋತ್ಪಾದಕರ ಕೃತ್ಯವನ್ನು ಬೇಧಿಸುವ ಸಾಮಾನ್ಯ ಯೋಧ ‘ಲೆಫ್ಪಿನೆಂಟ್‌ ರಾಮ್‌’ನ ಸೇವೆಗೆ ಭಾರತ ದೇಶದ್ಯಾಂತ ಮೆಚ್ಚುಗೆ ವ್ಯಕ್ತವಾಗುತ್ತದೆ. ಹುಟ್ಟುತ್ತಲೇ ಅನಾಥನಾಗಿರುವ ರಾಮ್‌ಗೆ ಈ ದೇಶದ ಜನರೇ ಬಂಧುಗಳು. ಹೀಗಿರುವ ಆತನಿಗೆ ಬರುವ ಪತ್ರವೊಂದು, ‘ನಿನ್ನ ಪ್ರೀತಿಯ ಮಡದಿ ಸೀತಾಮಹಾಲಕ್ಷ್ಮಿ’ ಎಂದಿರುತ್ತದೆ. ಹೀಗೆ ಆರಂಭವಾಗುವ ಪ್ರೇಮಕಥೆಯ ಜೊತೆಗೆ ಅನೇಕ ಪದರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

“ಬರುವ ಕಿರು ಸಂಬಳದಲ್ಲೇ ನಿನ್ನನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತೇನೆ” ಎನ್ನುವ ರಾಮ್‌ಗೆ ಈ ಸೀತೆಯ ನಿಜ ಹಿನ್ನೆಲೆ ಗೊತ್ತಿರುವುದಿಲ್ಲ. ಆಕೆ ರಾಜಮನೆತನದ ರಾಣಿ ‘ನೂರ್‌ ಜಹಾನ್‌’. ಸಾಮಾನ್ಯ ಯೋಧನೊಬ್ಬನಿಗೆ ರಾಣಿಯೊಬ್ಬಳು ಒಲಿಯುತ್ತಾಳೆ. ತನ್ನ ಅರಮನೆ ತೊರೆದು ಅವನಿಗಾಗಿ ಬರುತ್ತಾಳೆ. ಪಾಕ್‌ ಗಡಿಯೊಳಗೆ ನುಗ್ಗಿ, ಭಯೋತ್ಪಾದಕರನ್ನು ಸಂಹರಿಸುವಾಗ ಪಾಕ್ ಸೇನೆಗೆ ಸಿಕ್ಕಿ ಬೀಳುವ, ನಂತರದ ಬೆಳವಣಿಗೆಗಳಲ್ಲಿ ದೇಶದ್ರೋಹಿ ಎಂಬ ಅಪಾದನೆಗೂ ಗುರಿಯಾಗುವ ರಾಮ್‌- ಅಂತಿಮವಾಗಿ ಸೀತಾಮಹಾಲಕ್ಷ್ಮಿಗೆ ಬರೆದ ಪತ್ರದಲ್ಲೇನಿತ್ತು? ಆತ ಪಾಕಿಸ್ತಾನದ ಕೈಗೆ ಸಿಲುಕಿದಾಗ ನಿಜಕ್ಕೂ ಏನಾಯಿತು? ನೂರ್‌ ಜಹಾನ್‌ ಅಲಿಯಾಸ್‌ ಸೀತಾಮಹಾಲಕ್ಷ್ಮಿ ಎಲ್ಲಿದ್ದಾಳೆ? ಇದೆಲ್ಲವನ್ನೂ ‘ಅಫ್ರಿನ್‌’ ಎಂಬ ಪಾತ್ರ ಶೋಧಿಸುತ್ತಾ ಹೋಗುತ್ತದೆ.

ಇಲ್ಲಿನ ನೂರ್‌, ಲೆಫ್ಟಿನೆಂಟ್ ರಾಮ್‌ನನ್ನು ಇಷ್ಟಪಟ್ಟು ಮಾನಸಿಕವಾಗಿ ತಾನು ಸೀತಾಳಾಗಿ ಬದಲಾಗಿರುವುದನ್ನು ಗಮನಿಸಬಹುದು. ಇಲ್ಲಿನ ರಾಮ್‌ ಒಂದು ವೇಳೆ ರಹೀಮ್‌ನಾಗಿದ್ದರೆ, ಸೀತೆ ಎಂಬವಳು ನೂರ್‌ಜಹಾನ್ ಆಗಿ ಬದಲಾಗುವಂತಿದ್ದರೆ ಬಹುಸಂಖ್ಯಾತವಾದ ಇಷ್ಟು ಹೊತ್ತಿಗೆ ಏನೆಲ್ಲ ಮಾಡುತ್ತಿತ್ತೆಂದು ನಮಗೆಲ್ಲ ಗೊತ್ತೇ ಇದೆ. ಅಂದರೆ ಇಲ್ಲಿನ ಧರ್ಮಸೂಕ್ಷ್ಮಗಳು ಪುರುಷ ಕೇಂದ್ರಿತವಾಗಿರುವುದನ್ನು ಗುರುತಿಸಬಹುದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಧರ್ಮ ಯಾವುದು ಎಂಬುದಕ್ಕಿಂತ ಗಂಡಿನ ಧರ್ಮ ಯಾವುದು ಎಂಬುದೇ ಮುಖ್ಯವಾಗುತ್ತದೆ. ಒಂದಿಷ್ಟು ಸ್ಥಾನಪಲ್ಲಟವಾಗಿದ್ದರೂ ‘ಸೀತಾರಾಮಂ’ ಎಂಬ ಅದ್ಭುತ ಪ್ರೇಮಕಥೆಗೆ ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ‘ಲವ್‌ ಜಿಹಾದ್‌’ ಆರೋಪವನ್ನು ಅಂಟಿಸಲಾಗುತ್ತಿತ್ತು. ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮತಾಂಧತೆಗೆ ಪೆಟ್ಟು ನೀಡುವ, ಶುದ್ಧ ಧಾರ್ಮಿಕತೆಯೇ ನಿಜವಾದ ಪ್ರೇಮ ಎಂದು ಸಾರುವ ಸನ್ನಿವೇಶಗಳನ್ನು ನಿರ್ದೇಶಕರು ಹೆಣೆದಿದ್ದಾರೆ. ಇದು ನಿಜಕ್ಕೂ ತೀವ್ರ ಹಿಂದುತ್ವವಾದಿಗಳಿಗೆ ಬಲವಾಗಿ ನೀಡಿದ ಪೆಟ್ಟೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಪೂರಕವಾಗಿ ಸಿನಿಮಾದಲ್ಲಿನ ಕೆಲವು ಸನ್ನಿವೇಶಗಳನ್ನು ಗಮನಿಸುವುದು ಸೂಕ್ತ.

ಇದನ್ನೂ ಓದಿರಿ: ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ಸನ್ನಿವೇಶ: 1

ಲಂಡನ್‌ನಲ್ಲಿ ಓದುತ್ತಿರುವ ಪಾಕಿಸ್ತಾನಿ ಅಫ್ರಿನ್‌ (ರಶ್ಮಿಕಾ ಮಂದಣ್ಣ) ಭಾರತೀಯರಾದ ಆನಂದ್ ಮೆಹ್ತಾ ಅವರ ಕಾರಿಗೆ ಬೆಂಕಿ ಹಚ್ಚುತ್ತಾಳೆ. ಆ ಕಾರಿನೊಳಗೆ ಭಾರತದ ಭಾವುಟದ ಕಲಾಕೃತಿಯೂ ಇರುತ್ತದೆ. ಅಫ್ರಿನ್‌ ಕ್ಷಮೆ ಕೋರಬೇಕೆಂದು ಬಯಸುವ ಆನಂದ್ ಮೆಹ್ತಾ ಆಕೆಗೆ ಬುದ್ಧಿ ಹೇಳುತ್ತಾ, “ಪ್ರೀತಿಯೊಂದೇ ಪರಿಹಾರ” ಎನ್ನುತ್ತಾರೆ. ಇದೇ ಅಫ್ರಿನ್‌ ಜೊತೆಯಲ್ಲಿ ಆಕೆಯ ಅಂಕಲ್‌ (ವಕೀಲ) ಮಾತನಾಡುವಾಗ, “ನಮ್ಮ ದೇಶವನ್ನು ಪ್ರೀತಿಸುವುದು ತಪ್ಪಾ?” ಎಂದು ಕೇಳುತ್ತಾಳೆ. ಅದಕ್ಕೆ ಅಂಕಲ್‌, “ನಿನ್ನ ದೇಶವನ್ನು ನೀನು ಪ್ರೀತಿಸುವುದು ಖಂಡಿತ ತಪ್ಪಲ್ಲ. ಆದರೆ ಪಕ್ಕದ ದೇಶವನ್ನು ದ್ವೇಷಿಸುವುದು ತಪ್ಪು” ಎನ್ನುತ್ತಾನೆ.

ಸನ್ನಿವೇಶ: 2

ಕಾಶ್ಮೀರಿ ಬುಡಕಟ್ಟು ಸಮುದಾಯದ ಮುಸ್ಲಿಮರನ್ನು ಭಯೋತ್ಪಾದಕರೆಂದು ಶಂಕಿಸಿ ಯೋಧರು ಫೈರಿಂಗ್ ಮಾಡುವ ದೃಶ್ಯವಿದೆ. ಯುನಿಟ್‌ನ ಲೀಡರ್‌ ವಿಷ್ಣು ಶರ್ಮಾ ಫೈರಿಂಗ್ ಮಾಡಲು ಸೂಚಿಸಿದಾಗ, ರಾಮ್‌ ಬೇಕಂತಲೇ ಮಿಸ್‌ಫೈರಿಂಗ್ ಮಾಡುತ್ತಾನೆ. ನಿರಪರಾಧಿ ಕಾಶ್ಮೀರಿ ಮುಸ್ಲಿಮರು ತಪ್ಪಿಸಿಕೊಳ್ಳಲು ಅವಕಾಶ ನೀಡುತ್ತಾನೆ.

ಸನ್ನಿವೇಶ: 3

ಅರಮನೆಯಲ್ಲಿ ಡಾನ್ಸ್‌ ಕಲಿಸುವ ಶಿಕ್ಷಕಿಯಾಗಿದ್ದಾಳೆಂದು ಭಾವಿಸಿ ಸೀತಾಳನ್ನು ಹುಡುಕಿ ಬರುವ ರಾಮ್‌, ಆಕೆಯ ಹಣೆಯಲ್ಲಿ ಬೊಟ್ಟು ಇಲ್ಲದಿರುವುದನ್ನು ನೋಡಿ, “ಹಣೆಯಲ್ಲಿ ಬಿಂದಿ ಇರದಿದ್ದರೂ ಎಷ್ಟೊಂದು ಚೆನ್ನಾಗಿ ಕಾಣಿಸುತ್ತೀಯ ಸೀತಾ” ಎನ್ನುತ್ತಾನೆ. ಇಲ್ಲಿನ ರಾಮ್‌ ಧಾರ್ಮಿಕ ಮೂಲಭೂತವಾದಿಯಲ್ಲ ಎಂಬುದನ್ನು ಇದೊಂದು ಸಂಭಾಷಣೆ ಸ್ಪಷ್ಟಪಡಿಸುತ್ತದೆ. ಬಿಂದಿ, ಬೊಟ್ಟು, ಸೆರಗು, ಮುಸುಕು- ಇವೆಲ್ಲ ಪ್ರೀತಿಗೆ ಮುಖ್ಯವಲ್ಲ ಎಂಬುದನ್ನು ದಾಟಿಸುವ ರೀತಿ ಇದು.

ಸನ್ನಿವೇಶ: 4

ಸೀತಾಳನ್ನು ಅರಮನೆಯಲ್ಲಿ ಭೇಟಿಯಾಗಿರುವ ರಾಮ್ ಒಂದೇ ಸಮನೆ ಮಾತನಾಡುತ್ತಿದ್ದಾನೆ. ಅದೇ ವೇಳೆ ಅಲ್ಲಿ ನೀಲಿ ಹಾಗೂ ಕೆಂಪು ಬಣ್ಣಗಳು ಚೆಲ್ಲಿರುತ್ತವೆ. ರಾಮ ಹಾಗೂ ಸೀತಾ ಆ ಬಣ್ಣವನ್ನು ತುಳಿಯುತ್ತಾರೆ. ನೂರ್‌ ನೀಲಿ ಬಣ್ಣವನ್ನು ತುಳಿದರೆ, ರಾಮ್‌ ಕೆಂಪು ಬಣ್ಣವನ್ನು ತುಳಿಯುತ್ತಾನೆ. ಇಬ್ಬರು ಬಿಳಿ ಬಣ್ಣದ ಕಾರ್ಪೆಟ್ ಮೇಲೆ ನಡೆಯುತ್ತಾರೆ. ಅಚ್ಚೊತ್ತಿದ ಆ ಹೆಜ್ಜೆಗಳನ್ನು ತೋರಿಸುತ್ತಾ ರಾಮ್, “ನಿನ್ನ ಜೊತೆ ಇಟ್ಟ ಈ ಹೆಜ್ಜೆಗಳನ್ನು ಜೀವನ ಪರ್ಯಂತ ಇಡಬೇಕು” ಎನ್ನತ್ತಾನೆ. (ನೀಲಿ ಹಾಗೂ ಕೆಂಪು ಬಣ್ಣಗಳು ಕ್ರಮವಾಗಿ ಅಂಬೇಡ್ಕರ್‌-ಮಾರ್ಕ್ಸ್ ವಾದಗಳನ್ನು ಪ್ರತಿಫಲಿಸಿದಂತೆ ಭಾಸವಾಗುತ್ತದೆ. ಈ ಎರಡು ವಾದಗಳು ಒಟ್ಟಿಗೆ ಸಾಗಿದರೆ ಕ್ರಾಂತಿ ಎಂಬ ಸಂದೇಶವನ್ನು ರೂಪಕಗಳ ಮೂಲಕ ಹೇಳಿದಂತೆ ಅನಿಸುತ್ತದೆ.)

ಸನ್ನಿವೇಶ: 5

ಪಾಕಿಸ್ತಾನದ ಸರಹದ್ದಿಗೆ ನುಗ್ಗಿ ಭಯೋತ್ಪಾದಕರ ಗುಂಪಿನ ಮೇಲೆ ಭಾರತೀಯ ಯೋಧರು ದಾಳಿ ನಡೆಸುತ್ತಾರೆ. ಭಯೋತ್ಪಾದಕ ಗುಂಪಿನ ಮುಖ್ಯಸ್ಥನನ್ನು ಸದೆಬಡೆಯುವ ದೃಶ್ಯವನ್ನು ಗಮನಿಸಬೇಕು. ಆ ಮುಖ್ಯಸ್ಥನ ಭಾಷಣ ಟೇಪ್ ರೆಕಾರ್ಡ್‌ ಮೂಲಕ ಧ್ವನಿಸುತ್ತಿದೆ. ಕೋಣೆಯೊಳಗೆ ಬರುವ ವಿಷ್ಣುಶರ್ಮಾನಿಗೆ ಆ ಮುಖ್ಯಸ್ಥ ಹಿಂದಿನಿಂದ ಬಂದು ಗನ್ ಹಿಡಿಯುತ್ತಾನೆ. ಆ ವೇಳೆಗೆ ಒಳಬರುವ ರಾಮ್‌, ಮುಖ್ಯಸ್ಥನಿಗೆ ಶೂಟ್ ಮಾಡುತ್ತಾನೆ. ಆತನ ಧ್ವನಿ ಹೊಮ್ಮಿಸುತ್ತಿರುವ ರೇಡಿಯೋ ಮುಂದಿನ ಕುರಾನ್‌ ಕೈಗೆತ್ತಿಕೊಂಡ ಬಳಿಕ, ರೇಡಿಯೊಕ್ಕೆ ಬೆಂಕಿ ಇಡುತ್ತಾನೆ. ಸತ್ತು ಬಿದ್ದಿರುವ ಭಯೋತ್ಪಾದಕ ಎದೆ ಮೇಲೆ ಕುರಾನ್ ಇಟ್ಟು, “ನೀನು ಮುಂದಿನ ಜನ್ಮದಲ್ಲಾದರೂ ಇದನ್ನು ಸರಿಯಾಗಿ ಅರ್ಥ ಮಾಡಿಕೋ” ಎಂದು ಹೇಳುತ್ತಾನೆ. ನಿಜಧರ್ಮವು ದ್ವೇಷವನ್ನು ಬಿತ್ತುವುದಿಲ್ಲ ಎಂಬ ಸಂದೇಶವನ್ನು ಧಾರ್ಮಿಕ ಮೂಲಭೂತವಾದಿಗಳಿಗೆ ಹೀಗೆ ರವಾನಿಸಲಾಗಿದೆ.

ಸನ್ನಿವೇಶ: 6

ಪಾಕಿಸ್ತಾನದ ಸೈನ್ಯಕ್ಕೆ ಸಿಕ್ಕಿ ಬೀಳುವ ರಾಮ್‌ ಮತ್ತು ವಿಷ್ಣುಶರ್ಮಾರಲ್ಲಿ ಒಬ್ಬರನ್ನು ಮಾತ್ರ ಬಿಡುಗಡೆ ಮಾಡಲು ಪಾಕ್‌ ಸೇನೆ ಒಪ್ಪಿಕೊಳ್ಳುತ್ತದೆ. ಭಾರತೀಯ ಸೇನೆಯ ನೆಲೆಗಳ ಕುರಿತು ಬಾಯಿಬಿಟ್ಟವನನ್ನು ಮಾತ್ರ ಬಿಡುಗಡೆ ಮಾಡುವುದಾಗಿ ಪಾಕ್ ಸೇನಾ ಮುಖ್ಯಸ್ಥ ಹೇಳುತ್ತಾನೆ. ಇದಕ್ಕೆ ಒಪ್ಪದ ರಾಮ್, ಸೇನಾ ಮುಖಸ್ಥನ ಮುಖಕ್ಕೆ ಉಗುಳುತ್ತಾನೆ. ‘ವಿಷ್ಣುಶರ್ಮಾ’ ಆಮಿಷಕ್ಕೆ ಒಳಗಾಗಿ ಎಲ್ಲವನ್ನೂ ಬಾಯಿಬಿಡುತ್ತಾನೆ. (ವಿಷ್ಣುಶರ್ಮಾ ನಿಜವಾದ ದೇಶದ್ರೋಹಿ ಎಂದು ಇಲ್ಲಿ ಚಿತ್ರಿತವಾಗಿದೆ.)

ಹೀಗೆ ಅನೇಕ ಸೂಕ್ಷ್ಮಗಳನ್ನು ಕಥೆಯೊಳಗೆ ತರಲಾಗಿದೆ. ಮತೀಯ ಮೂಲಭೂತವಾದ ಹಾಗೂ ಹಿಂದುತ್ವಕ್ಕೆ ಒಳೇಟು ನೀಡಲಾಗಿದೆ. ‘ಜೈಶ್ರೀರಾಮ್‌’ ಎನ್ನುತ್ತಿರುವ ಕಾಲಘಟ್ಟದಲ್ಲಿ ‘ಸೀತಾರಾಮಂ’ ಎಂಬ ಹೆಸರೇ ರೂಪಕದಂತೆ ಭಾಸವಾಗುತ್ತದೆ. ಇಲ್ಲಿನ ‘ರಾಮ’ನು ಗಾಂಧಿ ನಂಬಿದ ರಾಮನಾಗಿ ಹೊಮ್ಮುತ್ತಾನೆಯೇ ಹೊರತು, ಮತೀಯವಾದಿಗಳ ರಾಮನಾಗಿ ಚಿತ್ರಿತವಾಗಿಲ್ಲ.

ಇದನ್ನೂ ಓದಿರಿ: ಕೊತ್ತು: ರಾಜಕೀಯ ಕೊಲೆಗಳ ಸುತ್ತ ಒಂದು ಸುತ್ತು…

ಇದೆಲ್ಲದರ ಹೊರತಾಗಿ ಕೆಲವು ತಕರಾರು ತೆಗೆಯಲು ಸೀತಾರಾಮಂ ಅವಕಾಶ ಕಲ್ಪಿಸಿದೆ. ಪಾಕ್ ಸೇನೆಗೆ ಸಿಕ್ಕಿಬಿದ್ದ ‘ರಾಮ್‌’ನನ್ನು ಹೊರಗೆ ಕರೆತರಬೇಕೆಂದು ತನ್ನ ಅಣ್ಣನಾದ ಅಕ್ಬರ್‌ನಲ್ಲಿ ನೂರ್‌ ಜಹಾನ್‌ ಗೋಗರೆಯುತ್ತಾಳೆ. ಇದು ಎರಡು ವಿವಿಧ ಜಿಜ್ಞಾಸೆಗೆ ಅವಕಾಶ ನೀಡುತ್ತದೆ. ಅಕ್ಬರ್‌ ಗಡಿದಾಟಿ ಪಾಕ್‌ ಅಧಿಕಾರಿಗಳೊಂದಿಗೆ ಮಾತನಾಡಲು ಇರುವ ಮಾನದಂಡ ಯಾವುದು? ಆತ ರಾಜಮನೆತನದವನು ಎಂಬುದೋ? ಅಥವಾ ಮುಸ್ಲಿಂ ಎಂಬುದೋ ಎಂಬ ಪ್ರಶ್ನೆ ಉಳಿಯುತ್ತದೆ. ಭಾರತೀಯ ಮುಸ್ಲಿಮರು ಎಂದಿಗೂ ಪಾಕಿಸ್ತಾನಿಗಳ ಕೃತ್ಯಗಳಿಗೆ ಕೈ ಜೋಡಿಸುವುದಿಲ್ಲ ಎಂಬ ಸಂದೇಶವನ್ನು ಮೊದಲಿನಿಂದ ಕೊನೆಯವರೆಗೂ ನಿರೂಪಿಸಿದ ನಿರ್ದೇಶಕರು ಕೊನೆಯಲ್ಲಿ ಕೊಂಚ ಜಾರಿಬಿದ್ದರೇನೋ ಅನಿಸುತ್ತದೆ. “ಅಣ್ಣ ನಿಮಗೆ ಪಾಕಿಸ್ತಾನದಲ್ಲಿ ಅಧಿಕಾರಿಗಳ ಪರಿಚಯವಿದೆ. ಅವರೊಂದಿಗೆ ಮಾತನಾಡಿ, ರಾಮ್‌ನನ್ನು ಬಿಡುಗಡೆ ಮಾಡಿಸಿ. ನಾನು ಬೇರೆಯವರನ್ನು ಮದುವೆಯಾಗುತ್ತೇನೆ, ನಾನು ರಾಮ್‌ನನ್ನು ವರಿಸುವುದಿಲ್ಲ” ಎನ್ನುತ್ತಾಳೆ ನೂರ್‌ ಜಹಾನ್. ಸ್ವಾತಂತ್ರ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ರಾಜವಂಶಸ್ಥನಾದರೂ ಅಕ್ಬರ್‌ ಪಾಕಿಸ್ತಾನದ ಅಧಿಕಾರಿಗಳ ಜೊತೆ ಮಾತನಾಡಬೇಕು ಎಂಬುದು ಸರಿಯೇ? ಆತ ರಾಜವಂಶಸ್ಥನಾದ ಕಾರಣಕ್ಕೆ ಹೊರಗಿನ ಜಗತ್ತಿನಲ್ಲಿಯೂ ಪರಿಚಿತನಾಗಿರಬಹುದು, ಅಂದಮಾತ್ರಕ್ಕೆ ಉಭಯ ದೇಶಗಳ ಸೇನೆಯ ವಿಚಾರದಲ್ಲಿ ತಲೆತೂರಿಸಲು ಸಾಧ್ಯವೇ? ಅಕ್ಬರ್‌ ಇದಕ್ಕೆ ಒಪ್ಪುವುದಿಲ್ಲ ಎಂಬುದು ಬೇರೆ ಮಾತು. ಒಂದು ವೇಳೆ ಅಕ್ಬರ್‌ ಪಾಕ್‌ ಜೊತೆ ಮಾತನಾಡಿ, ಆತನ ಮಾತಿಗೆ ಬೆಲೆ ಕೊಟ್ಟು ರಾಮ್‌ನನ್ನು ಬಿಡುಗಡೆ ಮಾಡಲಾಗುತ್ತದೆ ಎಂದೇ ಭಾವಿಸೋಣ. ಆಗ ಯಾವ ಅರ್ಥಗಳು ಹೊಮ್ಮುತ್ತವೆ? ಸ್ಥಾಪಿತ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಮುಸ್ಲಿಮ್‌ ರಾಜವಂಶಸ್ಥನ ಮಾತನ್ನೇ ಪಾಕ್ ಪರಿಗಣಿಸಿದಂತೆ ಅಲ್ಲವೇ? ಭಾರತದ ಮುಸ್ಲಿಮರು ಪಾಕಿಸ್ತಾನದ ಜೊತೆ ನಂಟು ಹೊಂದಿರುತ್ತಾರೆ ಎಂಬ ಹಿಂದುತ್ವದ ಅಜೆಂಡಾ ಇಲ್ಲಿ ತಲೆದೋರಿದಂತೆ ಕಾಣುವುದಿಲ್ಲವೇ? ಹೀಗಾಗಿ ಈ ದೃಶ್ಯ ಬೇಡವಾಗಿತ್ತೇನೋ! ಭಾರತದ ಅಧಿಕಾರಿಗಳ ಜೊತೆ ಮಾತನಾಡಿ, ಆ ಮೂಲಕ ಪಾಕ್ ಮೇಲೆ ಪ್ರಭಾವ ಬೀರುವ ಮಾತನ್ನು ನೂರ್‌ ಮೂಲಕ ಹೇಳಿಸಬಹುದಿತ್ತೇನೋ!

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಸಂಪತ್ತು ಹಾಗೂ ಅಂತಸ್ತು ಒಂದು ಪ್ರೇಮಕಥೆಯಲ್ಲಿ ಪ್ರಧಾನವಾದಾಗ ಹೇಗೆ ಧರ್ಮರಾಜಕಾರಣ ಗೌಣವಾಗುತ್ತದೆ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಗುರುತಿಸಬಹುದು. ನೂರ್‌ ಜಹಾನ್‌ ಒಂದು ರಾಜಮನೆತನದ ಮುಸ್ಲಿಂ ಮಹಿಳೆಯಾಗಿದ್ದರಿಂದ ನಮ್ಮೊಳಗೆ ಸ್ಫುರಿಸುವ ಭಾವನೆಗಳೂ ಭಿನ್ನವಾಗುತ್ತವೆ. ಈ ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾಗುತ್ತಿರುವುದು ಆರ್ಥಿಕವಾಗಿ ದುರ್ಬಲವಾದ ಜನಸಮೂಹ ಎನಿಸತೊಡಗುತ್ತದೆ. ಮಂಗಳೂರಿನ ಎಸ್‌ಇಜೆಡ್ ವಿರುದ್ಧದ ಹೋರಾಟವನ್ನು ಇಲ್ಲಿ ಉಲ್ಲೇಖಿಸಬಹುದು. ಸದಾ ಹಿಂದುತ್ವ ಎನ್ನುತ್ತಿದ್ದ ಸಂಘಟನೆಗಳು, ಎಸ್‌ಇಜೆಡ್‌ನಿಂದಾಗಿ ನಾಗಬನಗಳು ಧ್ವಂಸವಾಗುತ್ತಿದ್ದಾಗ ಯಾವುದೇ ಪ್ರತಿರೋಧ ತೋರಲಿಲ್ಲ. ವಿಚಿತ್ರವೆಂದರೆ ಹಿಂದುತ್ವ ಮುಖಂಡರು ಬಹುರಾಷ್ಟ್ರೀಯ ಕಂಪನಿಗಳ ಪರ ನಿಂತಿದ್ದರು ಎಂಬುದು ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿದೆ. ಅಂದರೆ ಸಂಪತ್ತಿನ ಮುಂದೆ ಧಾರ್ಮಿಕ ಮೂಲಭೂತವಾದ ಗೌಣವಾಗುವುದನ್ನು ಜನಸಾಮಾನ್ಯರು ಕಂಡುಕೊಳ್ಳಬೇಕು.

Anyway, ಇದೊಂದು ನವಿರು ಪ್ರೇಮಕತೆ. ಪ್ರತಿಪಾತ್ರಕ್ಕೂ ಒಳ್ಳೆಯ ಸ್ಪೇಸ್‌ ಕೊಟ್ಟಿದ್ದಾರೆ. ಕಥೆಯಲ್ಲಿ ಸ್ವಲ್ಪ ಸ್ಥಾನ ಪಲ್ಲಟವಾಗಿದ್ದರೂ ದ್ವೇಷಭಕ್ತರು ಏನೇನೋ ವಿವಾದ ಸೃಷ್ಟಿಸಿಬಿಡುತ್ತಿದ್ದರು! ಸದ್ಯ, ನಿರ್ದೇಶಕರು ಬಹಳ ಎಚ್ಚರಿಕೆಯಿಂದ ಹಿಂದುತ್ವ ರಾಜಕಾರಣದೊಂದಿಗೆ ವ್ಯವಹರಿಸಿದ್ದಾರೆ. ಇಂದಿನ ವಿಕ್ಷಿಪ್ತ ರಾಜಕೀಯಕ್ಕೆ ಸರಕಾಗಬಲ್ಲ ಧರ್ಮ, ಗಡಿಗಳ ಸಂಗತಿಗಳಿದ್ದರೂ ಅವುಗಳೆಲ್ಲ ನೇಪಥ್ಯಕ್ಕೆ ಸರಿದು, ಪ್ರೀತಿಯಷ್ಟೇ ಸ್ಥಾಯಿಯಾಗಿ ಉಳಿದಿರುವುದು ‘ಸೀತಾ ರಾಮಂ’ ಹೆಚ್ಚುಗಾರಿಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...