ಒಂದು ವಾರದೊಳಗಡೆ ಎರಡು ಸುತ್ತಿನ ರಾಷ್ಟ್ರವ್ಯಾಪಿ ದಾಳಿಗಳು ನಡೆದು, 240 ಕ್ಕೂ ಹೆಚ್ಚು ಸದಸ್ಯರನ್ನು ಬಂಧಿಸಿದ ನಂತರ, ಒಕ್ಕೂಟ ಸರ್ಕಾರವು ಮಂಗಳವಾರ ಸಂಜೆ ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳನ್ನು “ಕಾನೂನುಬಾಹಿರ ಸಂಘ” ಎಂದು ಘೋಷಿಸಲಾಗಿದೆ ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ.
ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI), ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (JMB) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ನೊಂದಿಗೆ ಸಂಘಟನೆಯು ಸಂಪರ್ಕ ಇಟ್ಟುಕೊಂಡಿದೆ ಎಂದು ಸರ್ಕಾರ ಉಲ್ಲೇಖಿಸಿದ್ದು, ಹಲವಾರು ಕ್ರಿಮಿನಲ್ ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿವೆ, ಇದು ‘ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆ’ಗೆ ಧಕ್ಕೆ ತರುತ್ತದೆ. ಅಲ್ಲದೆ ಸಂಘಟನೆಯು ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದ ಕದಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ.
ಇದನ್ನೂ ಓದಿ: ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪಿಎಫ್‌ಐ ವಿರುದ್ಧ ಮತ್ತೆ ದಾಳಿ ನಡೆಸಿದ NIA; 50 ಜನರು ವಶಕ್ಕೆ
ಸಮಾಜದ ಒಂದು ನಿರ್ದಿಷ್ಟ ವರ್ಗವನ್ನು ತೀವ್ರಗಾಮಿಯನ್ನಾಗಿಸಲು PFI ರಹಸ್ಯ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ. ಅಲ್ಲದೆ ದೇಶದ ಸಾಂವಿಧಾನಿಕ ಅಧಿಕಾರದ ಕಡೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತದೆ ಎಂದು ಸರ್ಕಾರ ಹೇಳಿದೆ.
“ಹೊರಗಿನ ನಿಧಿ ಮತ್ತು ಸೈದ್ಧಾಂತಿಕ ಬೆಂಬಲದೊಂದಿಗೆ, ಇದು ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ” ಎಂದು ಅಧಿಸೂಚನೆಯಲ್ಲಿ ಸರ್ಕಾರ ಹೇಳಿದೆ.
ಸಾರ್ವಜನಿಕ ಮನಸ್ಸಿನಲ್ಲಿ ಭಯೋತ್ಪಾದನೆಯ ಆಳ್ವಿಕೆಯನ್ನು ಸೃಷ್ಟಿಸಲು ಪಿಎಫ್‌ಐ ಸದಸ್ಯರು ಈ ಹಿಂದೆ ಹಲವಾರು ಅಪರಾಧ ಚಟುವಟಿಕೆಗಳು ಮತ್ತು ಕ್ರೂರ ಕೊಲೆಗಳನ್ನು ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಸಂಘಟನೆಯನ್ನು ನಿಷೇಧಿಸಲು ಶಿಫಾರಸು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಭಾರತದ ರಾಷ್ಟ್ರಪತಿ ‘ಸೆರಗು’ ಧರಿಸುತ್ತಾರೆ, ಅದು ಪಿಎಫ್‌ಐನ ಪಿತೂರಿಯೇ?: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ
15 ರಾಜ್ಯಗಳಾದ್ಯಂತ ಪಿಎಫ್‌ಐ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಜ್ಯ ಪೊಲೀಸರ ಸಂಘಟಿತ ಕ್ರಮದಲ್ಲಿ ಸೆಪ್ಟೆಂಬರ್ 22 ರಂದು ಮೊದಲ ಬಾರಿಗೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಜನರನ್‌ಉ ಬಂಧಿಸಲಾಗಿತ್ತು.
ಇದರ ನಂತರ ಸಂಘಟನೆಯ ವಿರುದ್ಧ ರಾಷ್ಟ್ರವ್ಯಾಪಿ ಎರಡನೇ ಸುತ್ತಿನ ಕಾರ್ಯಾಚರಣೆಯನ್ನು ನಿನ್ನೆ ನಡೆಸಲಾಗಿತ್ತು. ಈವರೆಗೆ ಒಟ್ಟು 247 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಫ್‌ಐ ಜೊತೆಗೆ, ಅದರ ಸಹವರ್ತಿ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್(NWF), ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್-ಕೇರಳ ಸಂಘಟನೆಗಳನ್ನು ಕೂಡಾ ನಿಷೇಧಿಸಲಾಗಿದೆ.
ಇದನ್ನೂ ಓದಿ: ಪಿಎಫ್‌ಐ ರ‍್ಯಾಲಿಯಲ್ಲಿ ‘ದ್ವೇಷ ಘೋಷಣೆ’ ಕೂಗಿದ ಅಪ್ರಾಪ್ತ ಬಾಲಕನ ತಂದೆ ವಶಕ್ಕೆ
ಬಿಜೆಪಿ ಸರ್ಕಾರ ತಮ್ಮ ವಿರೋಧಿಗಳನ್ನು ಹಣಿಯುವುದಕ್ಕೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
“ಈ ಹಿಂದೆ ಇಂದಿರಾ ಗಾಂಧಿ ಕೂಡಾ ಹೀಗೆಯೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು. ಕಾಂಗ್ರೆಸ್ ಕೂಡಾ ಮಾಡಿತ್ತು, ಅದನ್ನೇ ಬಿಜೆಪಿ ಕೂಡಾ ಮಾಡುತ್ತಿದೆ. ನಿಷೇಧವನ್ನು ಖಂಡಿಸಿ ಪಕ್ಷದ ವತಿಯಿಂದ ನಡೆಸಿದ ಶಾಂತಿಯುತ ಪ್ರತಿಭಟನೆಗೂ ಸರ್ಕಾರ ಅವಕಾಶ ನೀಡದೆ ನಮ್ಮ ನಾಯಕರನ್ನು ಬಂಧಿಸುತ್ತಿದ್ದಾರೆ. ಇದು ಅಘೋಷಿತ ತುರ್ತ ಪರಿಸ್ಥಿತಿಯ ಮತ್ತೊಂದು ರೂಪ” ಎಂದು ಭಾಸ್ಕರ್ ಪ್ರಸಾದ್ ಅವರು ನಾನುಗೌರಿ.ಕಾಂ ಜೊತೆಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಮೊದಲು ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸಬೇಕಾಗಿತ್ತು