Homeದಿಟನಾಗರಭಾರತ್‌ ಜೋಡೋ ಯಾತ್ರೆ: ರಾಹುಲ್‌ ಕುರಿತು ಸಾಲುಸಾಲು ಸುಳ್ಳುಸುದ್ದಿ ಹರಿಬಿಟ್ಟ ಬಿಜೆಪಿ

ಭಾರತ್‌ ಜೋಡೋ ಯಾತ್ರೆ: ರಾಹುಲ್‌ ಕುರಿತು ಸಾಲುಸಾಲು ಸುಳ್ಳುಸುದ್ದಿ ಹರಿಬಿಟ್ಟ ಬಿಜೆಪಿ

- Advertisement -
- Advertisement -

ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಮರಳಿ ಪಡೆಯಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಐತಿಹಾಸಿಕ ‘ಭಾರತ್‌ ಜೋಡೋ ಯಾತ್ರೆ’ಗೆ ಜನಸ್ಪಂದನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಾಲುಸಾಲು ಸುಳ್ಳು ಸುದ್ದಿಗಳನ್ನು ಭಾರತ್‌ ಜೋಡೋ ಯಾತ್ರೆ ಹಾಗೂ ರಾಹುಲ್ ಗಾಂಧಿಯವರಿಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ.

ಈಗ ಹರಡಲಾಗಿರುವ ಅನೇಕ ಸುದ್ದಿಗಳು ಬಿಜೆಪಿ ನಾಯಕರು ಹಾಗೂ ಬಿಜೆಪಿ ಅನುಯಾಯಿಗಳ ಖಾತೆಗಳಿಂದ ಹಂಚಿಕೆಯಾಗುತ್ತಿರುವುದು ವಿಶೇಷ. ಈ ಸುಳ್ಳುಸುದ್ದಿಗಳನ್ನು ಕನ್ನಡದ ‘ಏನ್‌ಸುದ್ದಿ.ಕಾಂ’ ಸೇರಿದಂತೆ ಅನೇಕ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ನಿರಂತರವಾಗಿ ಬಯಲು ಮಾಡುತ್ತಲೇ ಇವೆ.

‘ಏನ್‌ಸುದ್ದಿ.ಕಾಂ’ ಮಾಡಿದ ಕೆಲವು ವರದಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ವರದಿ ಒಂದು: ರಾಹುಲ್ ಗಾಂಧಿ ತನ್ನ ಸೊಸೆಯೊಂದಿಗೆ ಕುಳಿತಿದ್ದ ಫೋಟೋವನ್ನು ಕೆಟ್ಟದಾಗಿ ಬಿಂಬಿಸಿದ BJP ನಾಯಕ

“ಪಪ್ಪು ಮೆಹೆಂದಿ ಹಾಕಿಕೊಂಡು ಮಕ್ಕಳೊಂದಿಗೆ ಆಟವಾಡುತ್ತಿದ್ದಾನೆ. ಯಾತ್ರೆಗೆ ಕರೆದೊಯ್ಯುತ್ತಿರುವ 10 ಸದಸ್ಯರ ಬಗ್ಗೆ ಬೇಸರವಾಗಿದೆ” ಎಂಬ ಹೇಳಿಕೆಯನ್ನು ಬಿಜೆಪಿ ತಮಿಳುನಾಡು ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಟ್ವೀಟ್ ಮಾಡಿದ್ದರು.

ತಮಿಳುನಾಡಿನ BJP ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಹಂಚಿಕೊಂಡಿದ್ದ ರಾಹುಲ್ ಗಾಂಧಿ ಯುವತಿಯೊಂದಿಗೆ ಕುಳಿತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ,  ಗೆಟ್ಟಿ ಇಮೇಜಸ್‌ನಲ್ಲಿ ಅಪ್‌ಲೋಡ್ ಮಾಡಲಾದ ಹಲವಾರು ಚಿತ್ರಗಳು ಲಭ್ಯವಾಗಿವೆ.

ಗೆಟ್ಟಿ ಇಮೇಜಸ್‌ನಲ್ಲಿ ಲಭ್ಯವಾದ ಫೋಟೋಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೋಗಳು ಒಂದೇ ಆಗಿದ್ದು, ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ಕೂತು ಮಾತನಾಡುತ್ತಿರುವ ಹೆಣ್ಣು ಮಗಳು ತನ್ನ ಸೋದರ ಸೊಸೆ ಮಿರಯಾ ವಾದ್ರಾ ಎಂದು ಉಲ್ಲೇಖಿಸಲಾಗಿದೆ. ಅಂದರೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಬರ್ಟ್ ವಾದ್ರಾ ಅವರ ಪುತ್ರಿ ಮಿರಯಾ ವಾದ್ರಾ ಎಂದು ತಿಳಿದು ಬಂದಿದೆ. ಅಂದರೆ ರಾಹುಲ್ ಗಾಂಧಿಯ ಅಕ್ಕನ ಮಗಳು ಸಂಬಂಧದಲ್ಲಿ ರಾಹುಲ್‌ಗೆ ಸೊಸೆ ಆಗುತ್ತಾರೆ.

“ಆಗಸ್ಟ್ 20, 2015ರಂದು ನವದೆಹಲಿಯ ವೀರ್ ಭೂಮಿಯಲ್ಲಿ ಮಾಜಿ ಭಾರತದ ಪ್ರಧಾನಿ ರಾಜೀವ್ ಗಾಂಧಿಯವರ 71 ನೇ ಜನ್ಮದಿನದ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರ ಸೊಸೆ ಮೀರಾಯಾ ವಾದ್ರಾ ಅವರೊಂದಿಗೆ ಮಾತನಾಡುತ್ತಿರುವ ದೃಶ್ಯಗಳು ಇದಾಗಿದೆ.”

ವರದಿ ಎರಡು: ರಾಹುಲ್‌ ಗಾಂಧಿ ಕೇರಳದಲ್ಲಿ ಬೀಫ್‌ ತಿಂದರು

ಭಾರತ್‌ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಬೀಫ್ ಸೇವಿಸುತ್ತಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ. ಬೀಫ್‌ ತಿನ್ನುವುದು ಮಹಾಪರಾಧ ಎಂಬಂತೆ ಬಿಂಬಿಸಲು ಯತ್ನಿಸಲಾಗಿದೆ.

“ರಾಹುಲ್ ಬೀಫ್ ತಿಂದರೆ ಏನು ಸಮಸ್ಯೆ?  ಕೇರಳದ ಕಾಂಗ್ರೆಸ್ಸಿಗರು ಕರುವನ್ನು ಕೊಂದು ಮಾದರಿಯಾಗಿದ್ದಾರೆ. ಇದು ಬೀಫ್ ಫೆಸ್ಟ್ ನಡೆಸಿದ ಕಮ್ಯುನಿಸ್ಟರ ಕೇರಳ. ಗೋಮಾಂಸ ಹೇಗಿದೆ?  ಅತ್ಯುತ್ತಮ, ಸೂಪರ್ ಆಗಿದೆಯೇ? ಇದನ್ನು ಸಹೋದರ ರಾಹುಲ್ (ಚೆಟ್ಟನ್) ಹೇಳಲಿ” ಎಂದು ಮಲೆಯಾಳಂನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿ ಗೋಮಾಂಸ ಸೇವಿಸಿದ್ದಾರೆ ಎನ್ನಲಾದ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 17, 2022 ರಂದು ಮನೋರಮಾ ಲೇಖನದಲ್ಲಿ ಪ್ರಕಟವಾದ ಮೂಲ ಫೋಟೋ ಲಭ್ಯವಾಗಿದೆ.

“ರಾಹುಲ್ ಗಾಂಧಿ ವಲ್ಲಿಕೆಝುನಲ್ಲಿ ಚಹಾ ಅಂಗಡಿಗೆ ಪ್ರವೇಶಿಸಿದಾಗ… ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಕೋಡಿಕುನ್ವಿಲ್ ಸುರೇಶ್ ಎಂಪಿ, ಸಂಸದ, ಕೆಸಿ ವೇಣುಗೋಪಾಲ್  ಮತ್ತು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಜೊತೆಯಾಗಿದ್ದಾರೆ” ಎಂದು ಮನೋರಮಾ ವರದಿ ಮಾಡಿದೆ.

ಮೂಲ ಫೋಟೋದಲ್ಲಿ ರಾಹುಲ್ ಗಾಂಧಿ ಮುಂದಿರುವ ಟೇಬಲಲ್‌ನಲ್ಲಿ ಗೋಮಾಂಸವಿರುವ ಪ್ಲೇಟ್ ಕಾಣುತ್ತಿಲ್ಲ. ವೈರಲ್ ಚಿತ್ರ ಮತ್ತು ಮೂಲ ಛಾಯಾಚಿತ್ರದ ನಡುವಿನ ಹೋಲಿಕೆಯನ್ನು ಇಲ್ಲಿ ನೋಡಬಹುದು.

ವರದಿ ಮೂರು: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಮದ್ಯ ಸೇವಿಸಿದ್ದಾರೆ ಎಂದು ಸುಳ್ಳು ಹಂಚಿಕೆ

“ಯಾತ್ರೆಯ ಸಂದರ್ಭದಲ್ಲಿ ಕೇರಳದ ಸ್ಥಳೀಯ ಬಾರ್‌ನಿಂದ ಸಂಪೂರ್ಣವಾಗಿ ಕುಡಿದು ಹೊರಬರುತ್ತಿರುವ ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರು”  ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಮದ್ಯಪಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ವೈರಲ್ ಮಾಡಲಾಗಿದೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಓಚಿರಾದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಾಹಾರ (ತಿಂಡಿ) ಮುಗಿಸಿ, ರೆಸ್ಟೋರೆಂಟ್‌ನಿಂದ ಹೊರ ಬರುವಾಗ ಕೇರಳದ ಹಿರಿಯ ಕಾಂಗ್ರೆಸ್ ನಾಯಕರು ತಡವರಿಸಿದಂತೆ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಆ ಮೂಲಕ ಭಾರತ್ ಜೋಡೋ ಯಾತ್ರೆಯಲ್ಲಿ ಕುಡಿದು ಕಾಂಗ್ರೆಸ್ ನಾಯಕರು ಬಾರ್ ಜೋಡೋ ಯಾತ್ರೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ದೃಶ್ಯಗಳಿಗಾಗಿ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಕಾಂಗ್ರೆಸ್ ನಾಯಕ ಡಾ. ಶಾಮಾ ಮೊಹಮ್ಮದ್ ಅವರು ಸೆಪ್ಟೆಂಬರ್ 17, 2022ರಲ್ಲಿ ಹಂಚಿಕೊಂಡಿರುವ ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ.

2022 ರ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 8.08 ಕ್ಕೆ ಫೇಸ್‌ಬುಕ್ ಲೈವ್ ವೀಡಿಯೊವನ್ನು ಮೊಹಮ್ಮದ್ ಪೋಸ್ಟ್ ಮಾಡಿದ್ದಾರೆ. ಅವರು ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಯಾತ್ರೆಯಿಂದ ವಿರಾಮ ತೆಗೆದುಕೊಂಡು ಚಹಾ ಕುಡಿಯಲು ನಿಂತಿದ್ದಾರೆ ಎಂದು ಹೇಳಿದ್ದಾರೆ. ಲೈವ್ ವೀಡಿಯೊದಲ್ಲಿ ರೆಸ್ಟೋರೆಂಟ್‌ನ ಹೆಸರನ್ನು ನೋಡಬಹುದು.

ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ನಂತರ ವೈರಲ್ ವೀಡಿಯೊದಲ್ಲಿ ಕಂಡುಬರುವ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಮಾಡಿದಾಗ ವೈರಲ್ ವಿಡಿಯೋದಲ್ಲಿರುವ ರೆಸ್ಟೋರೆಂಟ್‌ನ ಒಳಭಾಗದ ಫೋಟೋಗಳು ಲಭ್ಯವಾಗಿದ್ದು ಅದನ್ನು ಪರಿಶೀಲಿಸಿದಾಗ ಒಂದಕ್ಕೊಂದು ಹೋಲಿಕೆಯಾಗುತ್ತವೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಸ್ಪಷ್ಟನೆ ಪಡೆದುಕೊಳ್ಳಲು ‘ಬೂಮ್ ಫ್ಯಾಕ್ಟ್‌ಚೆಕ್’ ತಂಡ ಹೋಟೆಲ್ ಮಾಲೀಕರನ್ನು ಸಂಪರ್ಕಿಸಿದೆ. ಅನ್ಸಾರ್ ಎ ಮಲಬಾರ್ ಪ್ರತಿಕ್ರಿಯಿಸಿದ್ದು, “ಸೆಪ್ಟೆಂಬರ್ 17, 2022ರಂದು ಭಾರತ್ ಜೋಡೋ ಯಾತ್ರೆ ಪ್ರಾರಂಭವಾದ ನಂತರ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಬೆಳಿಗ್ಗೆ 8:00 ಗಂಟೆಗೆ ಉಪಹಾರ ಸೇವಿಸಲು ಇಲ್ಲಿಗೆ ಬಂದಿದ್ದರು. 8:30 ರ ವರೆಗೆ ಇಲ್ಲಿಯೇ ಉಪಹಾರ ಸೇವಿಸಿದರು. ಮದ್ಯಪಾನ ಮಾಡಿದ್ದರು ಎಂಬುದೆಲ್ಲ ಸುಳ್ಳು. ಹೋಟೆಲ್‌ನಲ್ಲಿ ಯಾವುದೇ ಮದ್ಯವನ್ನು ಮಾರುವುದಿಲ್ಲ ಮತ್ತು ನೀಡುವುದೂ ಇಲ್ಲ. ನಮ್ಮಲ್ಲಿ ಸಿಸಿಟಿವಿ ದೃಶ್ಯಾವಳಿ ಕೂಡ ಇವೆ. ವೈರಲ್ ವಿಡಿಯೋದಲ್ಲಿ ಮಾಡಿರುವ ಆಪಾದನೆ ಸುಳ್ಳಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಮೆಟ್ಟಿಲಂತೆ ಇರುವ ಜಾಗವನ್ನು ಗಮನಿಸದೆ ತಡವರಿಸುವ ಕಾಂಗ್ರೆಸ್ ನಾಯಕರು
ಮೆಟ್ಟಿಲಿರುವ ಜಾಗದಲ್ಲಿ ಗಮನಿಸದೆ ತಡವರಿಸುತ್ತಿರುವ ಕಾಂಗ್ರೆಸ್ಸಿಗರು

ವರದಿ ನಾಲ್ಕು: “ಹಿಂದೂಗಳು ಮತ್ತು ಹಿಂದುತ್ವವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು” ಎಂದು ರಾಹುಲ್ ಹೇಳಿಲ್ಲ

“ಹಿಂದೂಗಳು ಮತ್ತು ಹಿಂದುತ್ವವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು” ಎಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಹೇಳಿದ್ದಾರೆ ಎಂದು ಚಿಕ್ಕ ವಿಡಿಯೊ ತುಣುಕ್ಕೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್ ಮೂಲಕ ಸರ್ಚ್  ಮಾಡಿದಾಗ ವಾಸ್ತವಗಳು ತಿಳಿದುಬಂದಿವೆ. ಈ ದೃಶ್ಯಗಳು  ಡಿಸೆಂಬರ್ 2021 ರಂದು ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣಕ್ಕೆ ಸಂಬಂಧಿಸಿವೆ.

ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ “2014 ರಿಂದ ಇಲ್ಲಿರುವುದು ಹಿಂದುತ್ವವಾದಿಗಳ ಆಡಳಿತವೇ ಹೊರತು ಹಿಂದೂಗಳದಲ್ಲ. ನಾವು ಮತ್ತೊಮ್ಮೆ ಈ ಹಿಂದುತ್ವವಾದಿಗಳನ್ನು ಹೊರಹಾಕಬೇಕು ಮತ್ತು ಹಿಂದೂಗಳ ಆಡಳಿತವನ್ನು ಮರಳಿ ತರಬೇಕು” ಎಂದು ಹೇಳಿರುವುದನ್ನು ಕಾಣಬಹುದು.

ವರದಿ 5: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ್ದು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಅಲ್ಲ

ಭಾರತ್‌ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಎ ವಿರೋಧಿ ಹೋರಾಟಗಾರ್ತಿ ‘ಅಮೂಲ್ಯ ಲಿಯೋನ್‌‌’ ಅವರನ್ನು ಭೇಟಿಯಾಗಿದ್ದಾರೆ ಎಂದು ಒಂದು ಫೋಟೋವನ್ನು ಹರಿಬಿಡಲಾಗಿದೆ.

ಈ ವಿಡಿಯೊ ಮತ್ತು ಚಿತ್ರಗಳನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು ಈ ವಿಡಿಯೊವನ್ನು ಟ್ವಿಟರ್‌‌ನಲ್ಲಿ ಹಂಚಿಕೊಂಡಿದ್ದು, “ಗಮನವಿಟ್ಟು ನೋಡಿ, ಇದು ಭಾರತ ಜೋಡಿಸುವುದು ಅಲ್ಲ, ಭಾರತ ಒಡೆಯುವುದು” ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರ ‘ಭಾರತ್‌ ಜೋಡೋ’ ಯಾತ್ರೆಯು ಕೇರಳದಲ್ಲಿ ನಡೆಯುತ್ತಿದೆ. ಅಮೂಲ್ಯ ಲಿಯೋನ್‌‌ ಕರ್ನಾಟಕದ ಚಿಕ್ಕಮಗಳೂರಿನವರಾಗಿದ್ದು, ಸಿಎಎ ವಿರೋಧಿ ಹೋರಾಟದ ನಂತರ ಅವರು ಸಾರ್ವಜನಿಕ ಹೋರಾಟಗಳಲ್ಲಿ ಕಾಣಿಸಿಕೊಂಡಿಲ್ಲ. ಈವರೆಗಿನ ವರದಿಯಂತೆ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಕೂಡಾ ಅಲ್ಲ.

ವಾಸ್ತವದಲ್ಲಿ, ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿರುವ ಚಿತ್ರದಲ್ಲಿ ಇರುವ ಯುವತಿಯು ಅಮೂಲ್ಯ ಲಿಯೋನ್‌‌ ಅಲ್ಲ. ರಾಹುಲ್ ಗಾಂಧಿ ಅವರ ಜೊತೆಗೆ ಇರುವ ಯುವತಿಯು ‘ಮಿವಾ ಆಂಡ್ರೆಲಿಯೊ’ ಎಂಬ ಹೆಸರಿನಲ್ಲಿ ಇನ್ಸ್‌ಟಾಗ್ರಾಂನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕೇರಳದವರಾಗಿದ್ದು, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ‘ಕೆಎಸ್‌ಯು’ ನಾಯಕಿಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...