ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಭಾರತ ಐಕ್ಯತಾ ಯಾತ್ರೆ ದಸರಾ ಹಬ್ಬದ ಪ್ರಯುಕ್ತ ಎರಡು ದಿನಗಳ ವಿರಾಮದ ನಂತರ ಮತ್ತೆ ಆರಂಭಗೊಂಡಿದೆ. 5ನೇ ದಿನದ ಇಂದಿನ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದಾರೆ. ಅನಾರೋಗ್ಯದ ಕಾರಣದಿಂದ ಬಹಳ ದಿನ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಅವರು ಇಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೆಳ್ಳಾರೆ ಗ್ರಾಮದಿಂದ ಇಂದು ಬೆಳಿಗ್ಗೆ ಪಾದಯಾತ್ರೆ ಆರಂಭವಾಗಿದ್ದು ಬಿರುಸಿನಿಂದ ಸಾಗಿದೆ. ಇಂದು ಸಂಜೆ ವೇಳೆಗೆ ನಾಗಮಂಗಲ ಪಟ್ಟಣ ತಲುಪಲಿದ್ದು ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಕೂಡ ಯಾತ್ರೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಗುಂಡ್ಲುಪೇಟೆ ಮೂಲಕ ಕರ್ನಾಟಕ ತಲುಪಿರುವ ಭಾರತ ಐಕ್ಯತಾ ಯಾತ್ರೆಯು ಮೈಸೂರು ಜಿಲ್ಲೆಯ ಹಾದು ಮಂಡ್ಯ ಜಿಲ್ಲೆ ತಲುಪಿದೆ. ಇಂದು ನಾಗಮಂಗಲ ತಾಲ್ಲೂಕಿನ ಮಡಕೆ ಹೊಸರು ಗೇಟ್ ಬಳಿ ಪಾದಯಾತ್ರಿಗಳು ತಂಗಲಿದ್ದಾರೆ. ಯಾತ್ರೆಯುದ್ದಕ್ಕೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಹೆಜ್ಜೆ ಹಾಕುತ್ತಿದ್ದಾರೆ.
ದೇಶ ಒಂದುಗೂಡಿಸುವ ಮಹತ್ವಾಕಾಂಕ್ಷೆಯ ಭಾರತ ಐಕ್ಯತಾ ಯಾತ್ರೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪದ ಬೆಳ್ಳಾಲೆ ಗ್ರಾಮದಿಂದ @RahulGandhi ಅವರು ಹಾಗೂ ಎಐಸಿಸಿ ವರಿಷ್ಠರಾದ ಸೋನಿಯಾ ಗಾಂಧಿಯವರೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕಿದೆ.#BharatJodoYatra pic.twitter.com/WzudG9SgaN
— Siddaramaiah (@siddaramaiah) October 6, 2022
ಸೆಪ್ಟಂಬರ್ 07ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಯೂ 3,570 ಕಿ.ಮೀ ಕ್ರಮಿಸಿ ಕಾಶ್ಮೀರ ತಲುಪುವ ಗುರಿ ಹೊಂದಿದೆ. ಕರ್ನಾಟಕಕ್ಕೆ ಸೆಪ್ಟಂಬರ್ 30 ರಂದು ಆಗಮಿಸಿದ್ದು ಅಕ್ಟೋಬರ್ 23ರವರೆಗೆ ನಡೆಯಲಿದೆ.
ಇದನ್ನೂ ಓದಿ; ನಾವು ಪುಟಿದೆದ್ದು ಬರುತ್ತೇವೆ, ಭಾರತ್ ಜೋಡೋ ಯಾತ್ರೆ ಬಿಜೆಪಿಯನ್ನು ಅಲ್ಲಾಡಿಸಿದೆ: ಕಾಂಗ್ರೆಸ್


