ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಭಾರತ ಐಕ್ಯತಾ ಯಾತ್ರೆಯ 5ನೇ ದಿನವಾದ ಇಂದು ಪಾದಯಾತ್ರೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ನಿಂದಿಸುವ ಆಕ್ಷೇಪಾರ್ಹ ಸುದ್ದಿ ರೂಪದ ಜಾಹೀರಾತು ನೀಡಿರುವ ಬಿಜೆಪಿ ಪಕ್ಷದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮುಂಬೈ ಮೇಲೆ ಉಗ್ರರು ಎರಗಿದ್ದಾಗ ಮಜಾ ಮಾಡುತ್ತಿದ್ದ ರಾಹುಲ್ ಗಾಂಧಿ ಎಂಬ ತಲೆ ಬರಹ ಸೇರಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಟಿಪ್ಪು ಜಯಂತಿ ಮತ್ತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕುರಿತು ನಿಂದಿಸಿ ಸುದ್ದಿಯಂತೆ ಕಾಣುವ ಜಾಹೀರಾತನ್ನು ಬಿಜೆಪಿ ಪಕ್ಷವು ಹೊಸದಿಗಂತ, ವಿಶ್ವವಾಣಿ, ಕನ್ನಡ ಪ್ರಭ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ನೀಡಿದೆ.
ಇದು ಬಿಜೆಪಿ ಪಕ್ಷದ ಕೀಳು ಮಟ್ಟದ ರಾಜಕೀಯ, ಭಾರತ ಐಕ್ಯತಾ ಯಾತ್ರೆಯ ಯಶಸ್ಸು ಸಹಿಸಲಾಗದೆ ಹತಾಶೆಗೆ ಬಿದ್ದು ಇಂತಹ ಜಾಹೀರಾತು ನೀಡಿದೆ ಎಂದು ಹಲವರು ಕಿಡಿಕಾರಿದ್ದಾರೆ. ಅಲ್ಲದೆ ಇಂತಹ ಪತ್ರಿಕಾ ನೀತಿಗೆ ಹೊರತಾದ ಜಾಹೀರಾತು ಪ್ರಕಟಿಸಿದ ಆ ನಾಲ್ಕು ಪತ್ರಿಕೆಗಳ ವಿರುದ್ಧ ಹರಿಹಾಯ್ದಿದ್ದಾರೆ.
“ಇದು ಅತ್ಯಂತ ನೀಚ ಜಾಹೀರಾತು. ಪತ್ರಿಕೋದ್ಯಮ ಪಾತಾಳಕ್ಕೆ ತಲುಪಿರುವುದಕ್ಕೆ ಸಾಕ್ಷಿ. ಮೂರೂ ಪತ್ರಿಕೆಗಳಿಗೆ ಲೀಡ್ ಸುದ್ದಿ ಜಾಹೀರಾತನ್ನು ಡಿಜೈನ್, ಹೆಡಿಂಗ್ ಸಮೇತ ನೀಡಿದೆ ಬಿಜೆಪಿ. ಬಿಲ್ಲು ಸಹ ದುಬಾರಿಯೇ ಇರಬಹುದು. ಉಳಿದೆರಡು ಪತ್ರಿಕೆಗಳ ವಿಷಯ ಹಾಗಿರಲಿ, ಕನ್ನಡಪ್ರಭ ಹೀಗೆ ಬೀದಿಯಲ್ಲಿ ಬೆತ್ತಲಾಗಬಾರದಿತ್ತು” ಎಂದು ಪತ್ರಕರ್ತ, ಹೋರಾಟಗಾರ ದಿನೇಶ್ ಕುಮಾರ್ ಎಸ್.ಸಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ಬೆಳಗ್ಗೆ ನಾಲ್ಕು ಪತ್ರಿಕೆಗಳಲ್ಲಿ ಬಿಜೆಪಿಯ ಸುದ್ದಿ ಮುಖವಾಡದ ಪೂರ್ಣಪುಟ ಜಾಹೀರಾತುಗಳನ್ನು ನೋಡಿದ ಬಳಿಕ ಒಂದು ವಿಚಾರ ಸ್ಪಷ್ಟವಾಯಿತು. ರಾಹುಲ್ ಗಾಂಧಿ, ಪರಿವಾರವನ್ನು “ಬೆಳೆಸಿದ್ದಾರೆ!” ಅಂದರೆ, ರಾಹುಲ್ ಈಗ ಪಪ್ಪು ಅಲ್ಲ ಎಂಬುದನ್ನು ಸ್ವತಃ ಬಿಜೆಪಿ ಮತ್ತದರ ಪರಿವಾರ ಒಪ್ಪಿಕೊಂಡಿದೆ. ಅವರಿಗೀಗ ರಾಹುಲ್ ಅಧಿಕಾರಕ್ಕಾಗಿ ತಮಗೆ ಗಂಭೀರ ಪ್ರತಿಸ್ಪರ್ಧಿ ಅನ್ನಿಸತೊಡಗಿದೆ. ಹಾಗಾಗಿ ಮೊದಲ ಬಾರಿಗೆ, “ಪಪ್ಪು” ಪದ ಬಳಕೆ ಮಾಡದೆ, ರಾಹುಲ್ ಗಾಂಧಿ ಅವರ ವಿರುದ್ಧ ಗಂಭೀರವಾದ ರಾಜಕೀಯ ಆಪಾದನೆ ಮಾಡಿದೆ. ರಾಹುಲ್ ಅವರ ಭಾರತ್ ಜೋಡೋ ಯಾತ್ರೆ, ರಾಜಕೀಯವಾಗಿ ಯಶಸ್ಸು ಕಾಣುತ್ತಿದೆ ಎಂಬುದು ಬಿಜೆಪಿ ಮತ್ತದರ ಪರಿವಾರಕ್ಕೆ ಅನ್ನಿಸತೊಡಗಿರುವುದರ ಪರಿಣಾಮ ಇದು. ಇಷ್ಟರ ಮಟ್ಟಿಗೆ ಕಾಂಗ್ರೆಸ್ಸಿಗರು ಈ ಜಾಹೀರಾತುಗಳ ಬಗ್ಗೆ ಸಂತಸಪಡಬೇಕು ಎಂದು ಚಿಂತಕರಾದ ರಾಜರಾಂ ತಲ್ಲೂರುರವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಸಹ ಕರ್ನಾಟಕಕ್ಕೆ ಭಾರತ ಐಕ್ಯತಾ ಯಾತ್ರೆ ಆಗಮಿಸುವ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಕನ್ನಡಪ್ರಭ ಪತ್ರಿಕೆಯಲ್ಲಿ ಸುಳ್ಳುಗಳಿಂದ ಕೂಡಿದ ನಿಂದನಾತ್ಮಕ ಜಾಹೀರಾತು ನೀಡಿ ಟೀಕೆಗೆ ಗುರಿಯಾಗಿತ್ತು. ಅದನ್ನು ಇಂದು ಸಹ ಮುಂದುವರೆಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: 5ನೇ ದಿನದ ಭಾರತ ಐಕ್ಯತಾ ಯಾತ್ರೆ ಆರಂಭ: ಜೊತೆಗೂಡಿದ ಸೋನಿಯಾ ಗಾಂಧಿ
ಬಾರತ್ ಜೋಡೋ ಯಾತ್ರೆಯ ಯಶಸ್ಸು ಮನುವಾದಿಗಳನ್ನು ಕಂಗೆಡಿಸಿದೆ. ಅದ್ದರಿಂದ ಅವರು ಹೆಂಡ ಕುಡಿದ ಮಂಗನಂತೆ ಆಡುತ್ತಿದ್ದಾರೆ.