Homeಅಂಕಣಗಳುಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

- Advertisement -
- Advertisement -

ಮಿರ್ಚ್‌ಪುರ, ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಗ್ರಾಮ. ಸಿಂಧೂ ಬಯಲಿನ ನಾಗರಿಕತೆಗೆ ಸಂಬಂಧಿಸಿದ ರಾಖೀಗರಿ ಸ್ಥಳ ಇಲ್ಲಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಜಾಟ್ ಜನಾಂಗ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ದಲಿತರು ಸಹ ಶೇ.18ರಷ್ಟಿದ್ದಾರೆ. ದಲಿತರಲ್ಲಿ ವಾಲ್ಮೀಕಿ ಸಮುದಾಯದ (ಕರ್ನಾಟಕದ ವಾಲ್ಮೀಕಿ ಸಮುದಾಯ ಬೇರೆ) ಜನಸಂಖ್ಯೆಯೇ ಹೆಚ್ಚಿದ್ದು ಓಟ್ ಬ್ಯಾಂಕ್ ರಾಜಕಾರಣದಲ್ಲಿ ಗಮನಾರ್ಹವಾದ ಪಾತ್ರವನ್ನೇ ಹೊಂದಿದ್ದರು. ಆದರೆ ಇಂದು ಈ ವಾಲ್ಮೀಕಿ ಸಮುದಾಯದ ಒಂದು ಕುಟುಂಬವೂ ಸಹ ಮಿರ್ಚ್‌ಪುರದಲ್ಲಿ ವಾಸವಾಗಿಲ್ಲ. ಜಾಟರು ನಡೆಸಿದ ಅಮಾನವೀಯ ದೌರ್ಜನ್ಯಕ್ಕೆ ಬೇಸತ್ತು ಭಾರತದಾದ್ಯಂತ ಚದುರಿಹೋಗಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಬಾಳಿ ಬದುಕಿದ್ದ ಊರು ಬಿಟ್ಟುಹೋಗಲು ಕಾರಣವೇನು? ಮುಂದೆ ಮಿರ್ಚ್‌ಪುರ ಫೈಲ್ ಕತೆಯನ್ನು ನೋಡೋಣ.

ದಲಿತರಾದ ವಾಲ್ಮೀಕಿ ಸಮುದಾಯದ ಜಯಪ್ರಕಾಶ ಕುಟುಂಬ ನಾಯಿಯೊಂದನ್ನು ಸಾಕಿತ್ತು. ಏಪ್ರಿಲ್ 19, 2010ರ ರಾತ್ರಿ ಊರಿಗೆ ಬೈಕಿನಲ್ಲಿ ಮರಳಿದ ಹಿಂದೂ ಮೇಲ್ಜಾತಿ ಜಾಟ್ ಯುವಕರ ಗುಂಪನ್ನು ಕಂಡು ಆ ನಾಯಿ ಬೊಗಳಿತು. ತಮ್ಮನ್ನು ಕಂಡು ಬೊಗಳಿದ ನಾಯಿ ದಲಿತರು ಸಾಕಿರುವುದೆಂದು ತಿಳಿದಿದ್ದ ಜಾಟ್ ಯುವಕರಿಗೆ ಅದನ್ನು ಸಹಿಸಲಾಗಲಿಲ್ಲ. ಹಾಗಾಗಿ ಅ ಯುವಕರಲ್ಲೊಬ್ಬ ಆ ಸಾಕುನಾಯಿಯ ಮೇಲೆ ಇಟ್ಟಿಗೆಯನ್ನು ತೂರಿಯೋಬಿಟ್ಟ. ಇದನ್ನು ಕಂಡ ದಲಿತ ಕುಟುಂಬದ ಯೋಗೇಶ್ ಆ ಯುವಕರಿಗೆ ಬುದ್ಧಿವಾದ ಹೇಳಿದ. ’ನಾಯಿ ಬೊಗಳುವುದು ಸಹಜ; ಅದಕ್ಕೆಲ್ಲ ಇಟ್ಟಿಗೆಯಿಂದ ಹೊಡೆಯುವುದ’ ಎಂದು ಪ್ರಶ್ನಿಸಿದ. ಆಗ ಅಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಗಲಾಟೆಯೂ ನಡೆಯಿತು. ಆದರೆ ಊರಿನವರೆಲ್ಲರೂ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿ ಸಮಾಧಾನ ಪಡಿಸಿದ್ದರು.

ಇದಾದ ಮಾರನೇ ದಿನದಿಂದಲೇ ನಾಯಿ ಸಾಕಿದ್ದ ದಲಿತ ಸಮುದಾಯದವರು ತಮ್ಮ ಕ್ಷಮೆ ಕೇಳಬೇಕೆಂದು ಜಾಟ್ ಸಮುದಾಯದವರು ಒತ್ತಾಯಿಸಿದರು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದೂ ಧಮಕಿ ಹಾಕಿದರು. ಇದಕ್ಕೆ ದಲಿತ ಯುವಕರು ಒಪ್ಪಲಿಲ್ಲವಾದರೂ, ದಲಿತ ಮುಖಂಡರಾದ ವೀರ್ ಭನ್ ಮತ್ತು ಕರಣ್ ಸಿಂಗ್ ಅವರುಗಳು ಕ್ಷಮೆ ಕೇಳಲು ಜಾಟ್ ಕುಟುಂಬದ ಮನೆಗೆ ಹೋಗಿಯೇಬಿಟ್ಟರು. ಜಾಟ್ ಮುಖ್ಯಸ್ಥನ ಮನೆಯ ಮುಂದೆ ನಿಂತು ಕ್ಷಮೆ ಕೇಳಿದ ದಲಿತ ಹಿರೀಕರಿಬ್ಬರಿಗೂ ಜಾಟರು ಅಮಾನವೀಯವಾಗಿ ಥಳಿಸಿದರು. ಅವರಿಬ್ಬರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಪೊಲೀಸ್ ಸ್ಟೇಷನ್ನಿನಲ್ಲಿ ದೂರನ್ನು ದಾಖಲಿಸಲಾಯಿತು.

ಇದಾದ ಮಾರನೇ ದಿನ ಅಂದರೆ ಏಪ್ರಿಲ್ 20, 2010ರಂದು ದಾರಿಯಲ್ಲಿ ಹೋಗುತ್ತಿದ್ದ ದಲಿತ ಯುವಕರನ್ನುದ್ದೇಶಿಸಿ ಜಾಟ್ ಯುವಕನೊಬ್ಬ ’ನಿಮ್ಮ ಮನೆಗಳನ್ನ ಸುಟ್ಟುಹಾಕ್ತೀವಿ ನೋಡಿ’ ಎಂದಿದ್ದನು. ಆಗಲೂ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಈ ಜಗಳಕ್ಕೆ ಸಂಬಂಧಿಸಿದಂತೆ ಊರಿನ ಜಾಟ್ ಜನರೆಲ್ಲರೂ ಒಂದೆಡೆ ಸೇರಿದರು. ಅದರಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಈ ಜಗಳಕ್ಕೆ ಸಂಬಂಧಿಸಿದಂತೆ ’ದಲಿತರು ಜಾಟ್ ಯುವಕನೊಬ್ಬನನ್ನು ಸುಖಾಸುಮ್ಮನೆ ಥಳಿಸಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಜಾಟರು ಊರಲ್ಲೆಲ್ಲಾ ಹಬ್ಬಿಸಿದರು.

ಈ ಮೇಲಿನ ಮೂರೂ ಘಟನೆಗಳು ಮಿರ್ಚ್‌ಪುರದಲ್ಲಿ ದಲಿತರ ವಿರುದ್ಧ ಬಹುದೊಡ್ಡ ಸಂಚನ್ನು ರೂಪಿಸಿದವು. ಏಪ್ರಿಲ್ 21ರಂದು ಇದ್ದಕ್ಕಿದ್ದಂತೆ ಸುಮಾರು 100-150 ಜನಸಂಖ್ಯೆಯ ಜಾಟ್ ಯುವಕರ ತಂಡವೊಂದು ಲಾಠಿ, ಕಲ್ಲು, ಪೆಟ್ರೋಲ್ ಹಿಡಿದು ಗುಂಪುಗೂಡಿತು. ಅಲ್ಲೇನಾಗುತ್ತಿದೆ ಎಂಬುದನ್ನು ತಿಳಿಯುವಷ್ಟರಲ್ಲಿ ದಲಿತರ ಮನೆಗಳ ಮೇಲೆ ಕಲ್ಲುಗಳನ್ನು ತೂರಲಾಯಿತು. ಕೆಲವೇ ನಿಮಿಷಗಳಲ್ಲಿ ಜಾಟರ ಮತ್ತೊಂದು ಗುಂಪು ಸಹ ಜೊತೆಗೂಡಿಕೊಂಡಿದ್ದರಿಂದ ಅವರ ಸಂಖ್ಯೆ 400ಕ್ಕೆ ಏರಿತು. ಕೆಲವು ವರದಿಗಳ ಪ್ರಕಾರ ಅದು 1000 ಮುಟ್ಟಿತ್ತು. ಜಾಟರ ಮುಂದೆ ಜನಸಂಖ್ಯೆಯಲ್ಲಿ ಕಡಿಮೆ ಇದ್ದ ದಲಿತರ ಗುಂಪು ಸಹ ಸುಮ್ಮನೆ ಹೆದರಿ ಕುಳಿತುಕೊಳ್ಳದೆ ಅಥವಾ ಓಡಿಹೋಗದೇ ಕೈಗೆ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳನ್ನು ಜಾಟರತ್ತ ತೂರಿ ತಿರುಗೇಟು ನೀಡಿತು. ಪರಿಸ್ಥಿತಿ ತಾರಕಕ್ಕೇರುತ್ತಿರುವುದನ್ನು ಕಂಡ ಹಿರಿಯ ಮುಖಂಡರುಗಳು ಎರಡೂ ಗುಂಪಿನ ಯುವಕರಿಗೆ ಬುದ್ಧಿ ಹೇಳಿ ಈಗಲೇ ಸಭೆ ಸೇರಿ ವಿಷಯ ಬಗೆಹರಿಸಿಕೊಳ್ಳೋಣವೆಂದು ತಿಳಿಸಿದರು. ಈ ರಾಜಿ ಸಂಧಾನ ಸಭೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದರೆಂದೇ ಹೇಳಲಾಗುತ್ತದೆ. ಇದರ ಪರಿಣಾಮವಾಗಿ ದಲಿತ ಮತ್ತು ಜಾಟ್ ಸಮುದಾಯದ ಪುರುಷರು ಪಂಚಾಯ್ತಿ ಸೇರಿದರು. ಹೀಗೆ ಮಾತುಕತೆ ಆರಂಭಿಸುವಷ್ಟರಲ್ಲಿ ದಲಿತ ಕೇರಿಯ ಕಡೆಯಿಂದ ಮಹಿಳೆಯರ ಕೂಗು ಮುಗಿಲುಮುಟ್ಟಿತು. ಕ್ಷಣ ಮಾತ್ರದಲ್ಲಿ ದಲಿತ ಕೇರಿಯನ್ನು ಕಡುಗಪ್ಪಿನ ಹೊಗೆ ಆವರಿಸಿತ್ತು. ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ದಲಿತರು ತಮ್ಮ ಮನೆಗಳತ್ತ ಓಡಿ ವಯಸ್ಸಾದವರನ್ನು, ಮಕ್ಕಳನ್ನು ಹಾಗೂ ಕೈಗೆ ಸಿಕ್ಕಷ್ಟು ಸಾಮಾನುಗಳನ್ನು ರಕ್ಷಿಸಿಕೊಂಡರು. ಆದರೆ 70 ವರ್ಷದ ತಾರಾ ಚಂದ್ ಹಾಗೂ ಆತನ ಪೋಲಿಯೋ ಪೀಡಿತ ಕೊನೆಯ ಮಗಳಿಬ್ಬರೂ ಮನೆಯಿಂದ ಹೊರಬರಲಾರದೇ ಜಾಟರಿತ್ತ ಬೆಂಕಿಗೆ ಗುಡಿಸಲಿನಲ್ಲಿಯೇ ಆಹುತಿಯಾಗಿದ್ದರು. ಈ ಭೀಕರ ಮಾರಣಹೋಮದಲ್ಲಿ 51 ದಲಿತರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಸುಮಾರು 18 ಮನೆಗಳು ಸುಟ್ಟು ಕರಕಲಾಗಿದ್ದವು. ಹಿಂದೂ ಮೇಲ್ಜಾತಿಗಳೊಳಗೆ ತುಂಬಿರುವ ಸನಾತನ ಜಾತಿಪ್ರಜ್ಞೆಯಿಂದ, ಕ್ಷುಲ್ಲಕ ಕಾರಣಕ್ಕೆ ದಲಿತರಿಬ್ಬರನ್ನೂ ಹಾಗೂ ಮಿರ್ಚ್‌ಪುರದ ದಲಿತರು ಕಟ್ಟಿಕೊಂಡಿದ್ದ ಬದುಕನ್ನು ಸುಟ್ಟುಹಾಕಿತ್ತು.

ಈ ಘಟನೆಯಿಂದ ಭಯಭೀತರಾದ ದಲಿತರು ಊರುಬಿಟ್ಟು ವಾಸಕ್ಕಾಗಿ ಅಲೆದಾಡಿದರು. ಸುಮಾರು 150 ವಾಲ್ಮೀಕಿ ದಲಿತರು ಕೊನೆಗೆ ಕನ್ನಾಟ್ ನಗರದ ವಾಲ್ಮೀಕಿ ಮಂದಿರದಲ್ಲಿ ತಿಂಗಳಾನುಗಟ್ಟಲೆ ಕಾಲದೂಡಿ ಉಸಿರಾಡಿದರು. ಜಾಟರಿಂದ ಬೆದರಿಕೆಗಳು ಪದೇಪದೇ ಬರುತ್ತಿದ್ದ ಕಾರಣ 2011ರಷ್ಟೊತ್ತಿಗೆ 12 ಕುಟುಂಬಗಳು ಊರುಬಿಟ್ಟವು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 254 ವಾಲ್ಮೀಕಿ ದಲಿತ ಕುಟುಂಬಗಳು ಊರುಬಿಟ್ಟು ದೇಶದಾದ್ಯಂತ ಚದುರಿಹೋಗಿದ್ದಾರೆ. ನೂರಾರು ವರ್ಷಗಳ ಕಾಲ ಒಂದೆಡೆ ನೆಲೆಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದ ಈ ದಲಿತ ಕುಟುಂಬಗಳು ಜಾಟರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಜನ್ಮಸ್ಥಾನವನ್ನು ಬಿಟ್ಟು ಊರೂರು ಅಲೆಯುತ್ತಿದ್ದಾರೆ.

ಈ ನರಮೇಧಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು 103 ಜನ ಆರೋಪಿಗಳನ್ನು ಬಂಧಿಸಿದರು. ಅದೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಕಾರಣಕ್ಕೆ! ಜನವರಿ 2011ರಷ್ಟೊತ್ತಿಗೆ ಅವರಲ್ಲಿ 98 ಆರೋಪಿಗಳನ್ನು ತಿಹಾರ್ ಜೈಲಿಗೆ ಹಾಕಲಾಯಿತು. ಇದರ ವಿರುದ್ಧ ಜಾಟರು ಬೀದಿಗಿಳಿದು ಹೋರಾಡಿದ್ದರು. ಇದರ ಪರಿಣಾಮವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸೆಪ್ಟೆಂಬರ್ 24ರಂದು 82 ಜನರನ್ನು ಖುಲಾಸೆಗೊಳಿಸಿದ ಕೋರ್ಟ್ ಕೇವಲ 15 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿತು. ಆದರೆ ಅವರ್‍ಯಾರಿಗೂ ಕೊಲೆ ಮಾಡಿದ್ದಕ್ಕೆ ಶಿಕ್ಷೆ ಆಗಲಿಲ್ಲ. ಆದರೆ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2017ರಲ್ಲಿ ಮತ್ತೆ 40 ವಾಲ್ಮೀಕಿ ಕುಟುಂಬಗಳು ಇದೇ ಮಿರ್ಚ್‌ಪುರವನ್ನು ಬಿಟ್ಟು ಹೊರಹೋದವು. ಇದಕ್ಕೆ ಕಾರಣ ದಲಿತ ಯುವಕ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಟರು ಏಕಾಏಕಿ ಆತನನ್ನು ಥಳಿಸಿದ್ದಾಗಿತ್ತು. ಇಂದು ಮಿರ್ಚ್‌ಪುರದಲ್ಲಿ ವಾಸಿಸುತ್ತಿರುವ ಬೆರಳೆಣಿಕೆಯಷ್ಟು ದಲಿತ ಕುಟುಂಬಗಳೂ ಸಹ ಊರು ಬಿಡುವ ಸಿದ್ಧತೆಯಲ್ಲಿವೆ. ಕಾಶ್ಮೀರಿ ಪಂಡಿತರು ಕಾಣುವ ಕಣ್ಣುಗಳಿಗೆ ಮಿರ್ಚ್‌ಪುರದ ವಾಲ್ಮೀಕಿಗಳು ಕಾಣುವರೇ?

ಕೊನೆಯದಾಗಿ ಇನ್ನೊಂದು ವಿಚಾರವನ್ನು ನೆನಪಿಸುತ್ತೇನೆ. 2010ರಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 2017ರಲ್ಲಿ ಬಿಜೆಪಿ ಸರ್ಕಾರವಿತ್ತು.


ಇದನ್ನೂ ಓದಿ: ಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...