Homeಅಂಕಣಗಳು"ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು..." ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

“ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

- Advertisement -
- Advertisement -

ಜನಸಾಮಾನ್ಯರಿಗೆ ತಾವು ನೀಡಿದ ವಾಗ್ದಾನ ಮತ್ತು ಭರವಸೆಗಳನ್ನು ಬೇಗನೆ ಮರೆತುಹೋಗುವುದು ರಾಜಕೀಯ ವ್ಯಕ್ತಿಗಳಿಗೆ ಸರ್ವೇಸಾಮಾನ್ಯ ಸಂಗತಿ. ಆದರೆ ಸರ್ಕಾರದ ಹುದ್ದೆಗಳನ್ನು ಅದರಲ್ಲೂ ರಾಜ್ಯದ ಅತ್ಯುನ್ನತ ಅಧಿಕಾರವನ್ನು ಅಲಂಕರಿಸಿದಾಗ ತಾವು ತೆಗೆದುಕೊಂಡ ಪ್ರಮಾಣವಚನವನ್ನು ಮರೆಯುವ ಐಶಾರಾಮಿ ಆಯ್ಕೆ ಇರುವುದಿಲ್ಲ ಮತ್ತು ಇರಬಾರದು. ಈಗ ಕರ್ನಾಟಕದ ಮುಖ್ಯಮಂತ್ರಿಗಳು ತಾವು ಅಧಿಕಾರ ಸ್ವೀಕರಿಸಿದಾಗ ತೆಗೆದುಕೊಂಡ ಪ್ರಮಾಣವಚನವನ್ನು ಅಕ್ಷರಶಃ ಮತ್ತೆಮತ್ತೆ ಓದಿಕೊಳ್ಳುವಂತಹ ಸಂದರ್ಭ ಎದುರಾಗಿದೆ. ಅದನ್ನೊಮ್ಮೆ ನಾವೇ ನೆನಪಿಸಿಬಿಡೋಣ.

ಜುಲೈ 28, 2021ರಂದು ಅವರು ಸ್ವೀಕರಿಸಿದ ಪ್ರಮಾಣವಚನ ಹೀಗೆ ದಾಖಲಾಗಿದೆ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು ಕಾನೂನಿನ ಮೂಲಕ ಸ್ಥಾಪಿತ ಭಾರತ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನೆರವೇರಿಸುತ್ತೇನೆಂದು, ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ-ದ್ವೇಷವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸಿಕೊಡುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ.”

2022 ಜುಲೈ ತಿಂಗಳ 28ಕ್ಕೆ ನಡೆಯಬೇಕಿದ್ದ ಮುಖ್ಯಮಂತ್ರಿಗಳ ಒಂದು ವರ್ಷದ ಸಂಭ್ರಮಾಚರಣೆ ನಿಗದಿಯಾದಂತೆ ಜರುಗಿದ್ದಲ್ಲಿ, ತಾವಿನ್ನೂ ಇಡೀ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ’ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ-ದ್ವೇಷವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸಿಕೊಡುತ್ತೇನೆಂದು’ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದು ನೆನಪಾಗುತ್ತಿತ್ತೇನೋ! ಅಥವಾ ಯಾರಾದರೂ ನೆನಪಿಸಿರುತ್ತಿದ್ದರೇನೋ. ಆದರೆ ಜುಲೈ 26ರ ರಾತ್ರಿ ಬಿಜೆಪಿ ಪಕ್ಷದ ಯುವ ಮೋರ್ಚಾದ ಮುಖಂಡ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಹತ್ಯೆಯಿಂದ ನೊಂದ ಮುಖ್ಯಮಂತ್ರಿಗಳು ಸಂಭ್ರಮಾಚರಣೆಯನ್ನೇನೋ ರದ್ದುಪಡಿಸಿಕೊಂಡರು. ಆದರೆ ಮುಂದಿನ ಅವರ ಮಾತುಗಳಾಗಲೀ ಅಥವಾ ಅವರು ನಡೆಗಳಾಗಲೀ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದಂತೆ ಪಕ್ಷಪಾತ ಮತ್ತು ರಾಗ-ದ್ವೇಷಗಳನ್ನು ಮೀರಿದ್ದಾಗಿರಲಿಲ್ಲ.

ಪ್ರವೀಣ್ ನೆಟ್ಟಾರು

ಮೊದಲಿಗೆ, ಯಾವುದೇ ರಾಜಕೀಯ ಕೊಲೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಭರವಸೆ ನೀಡುವ ಬದಲು, ಯುಪಿ ಮಾಡೆಲ್ ತರುವ ಬೇಜವಾಬ್ದಾರಿ ಮತ್ತು ಅಸಂವಿಧಾನಿಕ ಹೇಳಿಕೆಯನ್ನು ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿಟ್ಟುಕೊಂಡು ನೀಡಿದ್ದು ಅಕ್ಷಮ್ಯ. ಇಂದು ಯುಪಿ ಮಾಡೆಲ್ ಎಂಬುದು ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ದಮನಿಸುವ ವ್ಯವಸ್ಥೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಇಂತಹ ದರಿದ್ರ ವ್ಯವಸ್ಥೆಯನ್ನು ಇಲ್ಲಿ ಅನುಷ್ಠಾನಗೊಳಿಸುತ್ತೇವೆಂದದ್ದು, ಇದ್ದುದರಲ್ಲಿ ಕೆಲವು ಚೆಕ್ಸ್ ಮತ್ತು ಬ್ಯಾಲೆನ್ಸ್ ಉಳಿಸಿಕೊಂಡಿರುವ ಕರ್ನಾಟಕ ಮಾದರಿಯನ್ನು ಮಣ್ಣುಪಾಲುಮಾಡಲು ಹೊರಟಿರುವ ಮನೆಮುರುಕತನವಲ್ಲದೇ ಬೇರೇನಿಲ್ಲ. (ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬುಲ್ಡೋಜರ್ ಹರಿಸುವ ಕೆಲಸಗಳ ಜೊತೆಗೆ, ಶಾಲೆಯೊಂದರಲ್ಲಿ ನಾಲ್ಕು ಧರ್ಮಗಳಿಗೆ ಸೇರಿದ ಪ್ರಾರ್ಥನೆ ಮಾಡಿಸುತ್ತಿದ್ದರು ಎಂಬ ಕಾರಣಕ್ಕೆ ಶಾಲೆಯ ವ್ಯವಸ್ಥಾಪಕರ ಮೇಲೆ ಮತಾಂತರದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿರುವುದು ಯುಪಿ ಮಾಡೆಲ್‌ನ ಇತ್ತೀಚಿನ ವರಸೆ!)

ಎರಡನೆಯದಾಗಿ, ಹತನಾದ ಬಿಜೆಪಿ ಪಕ್ಷದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ಪರಿಹಾರ ಮೊತ್ತವನ್ನೂ ಘೋಷಿಸಿದರು. ಆದರೆ ಅದೇ ಕೆಲವು ದಿನಗಳ ಹಿಂದೆ, ಜುಲೈ 19ರಂದು ಭಜರಂಗ ದಳದ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ ಎಂದು ಆರೋಪಿಸಲಾದ, ಬೆಳ್ಳಾರೆ ಊರಿನವರೇ ಆದ 19 ವರ್ಷದ ಮೊಹಮದ್ ಮಸೂದ್ ಮನೆಗಾಗಲೀ, ಅಥವಾ ಜುಲೈ 29ರಂದು ಹತ್ಯೆಯಾದ ಮೊಹಮದ್ ಫಾಝಿಲ್ ಮನೆಗಾಗಲೀ ಭೇಟಿ ನೀಡುವ ಔದಾರ್ಯ ತೋರಲಿಲ್ಲ. ಬೊಮ್ಮಾಯಿಯವರು ಈಗ ಕೇವಲ ಬಿಜೆಪಿ ಪಕ್ಷದ ಮುಖಂಡರಾಗಿರದೆ, ಇಡೀ ರಾಜ್ಯದ ಮುಖ್ಯಮಂತ್ರಿಯಾಗಿ, ಪಕ್ಷಪಾತವಿಲ್ಲದೆ ಸಂವಿಧಾನದ ಪ್ರಕಾರ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾದ ಪ್ರಮಾಣಕ್ಕೆ ಎಳ್ಳುನೀರು ಬಿಟ್ಟರು. ಒಂದು ಸಾವು ಮುಖ್ಯಮಂತ್ರಿಗಳ ಆತ್ಮಸಾಕ್ಷಿಯನ್ನು ಕದಡಿದ್ದಾದರೆ, ಮತ್ತೆರಡು ಸಾವುಗಳು ಅವರನ್ನೇಕೆ ತಾಕಲಿಲ್ಲ?

ಮೂರನೆಯದಾಗಿ, ಪ್ರವೀಣ್ ನೆಟ್ಟಾರು ಹತ್ಯೆಯಾದ ನಂತರ ಐಟಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಕೊಲೆಗಡುಕರನ್ನು ಎನ್‌ಕೌಂಟರ್ ಮಾಡಲೂ ರೆಡಿ ಎಂಬ ಹೇಳಿಕೆ ನೀಡಿದರು. ಇವರೂ ಕೂಡ ಮುಖ್ಯಮಂತ್ರಿಗಳಂತೆಯೇ ಸಂವಿಧಾನದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು ಪ್ರಮಾಣ ಮಾಡಿರುವವರೇ. ಸಂವಿಧಾನ ಅಥವಾ ಈ ನೆಲದ ಯಾವ ಕಾನೂನಿನಲ್ಲಿ ಎನ್‌ಕೌಂಟರ್‌ಗೆ ಅವಕಾಶ ಇದೆ? ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಅಶಾಂತಿಯನ್ನು ಸೃಷ್ಟಿಸಲು ಹವಣಿಸುತ್ತಿರುವ ಈ ಮಂತ್ರಿಗಳ ಮೇಲೆ ಸರ್ಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಒಂದು ಕಡೆ ಮುಖ್ಯಮಂತ್ರಿಗಳು ಯುಪಿ ಮಾಡೆಲ್ ತರುವುದಾಗಿ ’ಬೆದರಿಕೆ’ ಹಾಕುತ್ತಿದ್ದರೆ, ಅವರಿಗೆ ಸ್ಪರ್ಧೆ ನೀಡುವಂತೆ ಅಶ್ವಥ್ ನಾರಾಯಣರಿಗೆ ಹಿಂದಿನ ಗುಜರಾತ್ ಮಾಡೆಲ್ ನೆನಪಿಗೆ ಬಂದುಬಿಟ್ಟಿತೇ?

ಪ್ರವೀಣ್ ನೆಟ್ಟಾರು ಹತ್ಯೆಯಾದ ನಂತರದ ಕೆಲವು ಘಟನೆಗಳನ್ನು ಗಮನಿಸಿ; ಸಂಘ ಪರಿವಾರದ ಒಂದು ವರ್ಗ ಅಥವಾ ಬಹುತೇಕರು ಮತ್ತೊಂದು ಕೊಲೆಗೆ ಹಾತೊರೆಯುವಂತೆ ಪ್ರಚೋದನಕಾರಿಯಾಗಿ ಮಾತನಾಡಲು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನೊಂದು ತಲೆ ಉರುಳಲೇಬೇಕು ಎಂಬಂತೆ ಪೋಸ್ಟ್‌ಗಳು ಮತ್ತು ಕಮೆಂಟ್‌ಗಳನ್ನು ಧಾರಾಳವಾಗಿ ಬರೆದರು. ಆಗ ಸರ್ಕಾರ ಎಚ್ಚೆತ್ತುಕೊಂಡು ಉದ್ವಿಘನ್ನತೆಯನ್ನು ತಿಳಿಗೊಳಿಸುವ ಕೆಲಸ ಮಾಡಬೇಕಿತ್ತು. ಮತ್ತು ರಕ್ತಕ್ಕಾಗಿ ಹಾತೊರೆಯುವವರನ್ನು ನಿಗ್ರಹಿಸಬೇಕಿತ್ತು. ಆ ನಿಟ್ಟಿನಲ್ಲಿ ಪೊಲೀಸ್ ಇಂಟಲಿಜೆನ್ಸ್ ಮತ್ತು ಸೈಬರ್ ವಿಭಾಗ ಎಚ್ಚೆತ್ತುಕೊಂಡು ಕೆಲಸ ಮಾಡುವಂತೆ ಹಾಗೂ ಮುಂದೆ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಯುವಂತೆ ಕಾರ್ಯೋನ್ಮುಖರಾಗಲು ನಿರ್ದೇಶಿಸಬೇಕಿತ್ತು. ’ಕ್ರಿಯೆಗೆ ಪ್ರತಿಕ್ರಿಯೆ’ಯಲ್ಲಿ ನಂಬಿಕೆಯಿಟ್ಟ ಮುಖ್ಯಮಂತ್ರಿಗಳಿಗೆ ಇವ್ಯಾವುವೂ ಬೇಡವಾದವು!

ಮಹಮ್ಮದ್ ಮಸೂದ್ ಮಹಮ್ಮದ್ ಫಾಝಿಲ್

ಪ್ರವೀಣ್ ಕೊಲೆಯ ಬೆನ್ನಲ್ಲೇ ಸುರತ್ಕಲ್‌ನಲ್ಲಿ ಮೊಹಮದ್ ಫಾಝಿಲ್ ಎಂಬ ಯುವಕನ ಭೀಕರ ಹತ್ಯೆ ನಡೆಯಿತು. ಈ ಹತ್ಯೆಯ ಸುತ್ತ ಓಪಿಇಂಡಿಯಾ ತರಹದ ’ಮಾಧ್ಯಮ’ಗಳು ಸುಳ್ಳಿನ ಬಲೆಯನ್ನೇ ಹೆಣೆದವು. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಕಾರಣಗಳಿಗೆ ನಡೆದ ಕೊಲೆ ಎಂಬ ಅನಧಿಕೃತ ಮತ್ತು ಸುಳ್ಳು ಮಾಹಿತಿಗಳನ್ನು ಹಬ್ಬುತ್ತಾ ಹೋದವು. ಇದರ ವಿರುದ್ಧ ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಾಥಮಿಕ ತನಿಖೆ ಆಗುವವರೆಗೂ ಇಂತಹ ಸುಳ್ಳುಗಳು ಹಬ್ಬದಂತೆ ತಡೆಯಲು ಮುಂದಾಗಲಿಲ್ಲ. ಆಗಸ್ಟ್ 2, 2022ರಂದು ಫಾಝಿಲ್ ಹತ್ಯೆಯಲ್ಲಿ 6 ಅನ್ಯ ಕೋಮಿನ ಆರೋಪಿಗಳನ್ನು ಬಂಧಿಸಲಾಗಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಅವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ನೀಡಿದ ಮಾಹಿತಿ ಪ್ರಕಾರ, ಈ ಕೊಲೆ ವೈಯಕ್ತಿಕ ಕಾರಣಗಳಿಗೆ ಆಗದೆ, ಪರಸ್ಪರ ಸಂಬಂಧವಿರದ ಆರೋಪಿಗಳು ’ಯಾರನ್ನಾದರೂ ಕೊಲ್ಲಲು’ ಸಂಚುಹೂಡಿ ಫಾಝಿಲ್‌ನನ್ನು ಹತ್ಯೆಗೈದಿದ್ದಾರೆ. ಅಂದರೆ ಇದು ಮೇಲ್ನೋಟಕ್ಕೆ ಪ್ರತೀಕಾರದ ಕೊಲೆ ಎಂಬುದನ್ನು ಸೂಚಿಸುತ್ತದೆ. ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆಯನ್ನು ಮಾಡಿರುವುದು ತನಿಖೆಯಲ್ಲೇನಾದರೂ ಸಾಬೀತಾದರೆ ಇದಕ್ಕೆ ಸರ್ಕಾರದಲ್ಲಿರುವ ಮಂತ್ರಿಗಳ ಪ್ರಚೋದನೆ ಮತ್ತು ತಮ್ಮ ಕೆಲಸವನ್ನು ನಿರ್ವಹಿಸುವಲ್ಲಿ ಆಗಿರುವ ವೈಫಲ್ಯವೂ ಮುಖ್ಯ ಕಾರಣವಾಗಿದೆ.

ದಕ್ಷಿಣ ಕನ್ನಡವನ್ನು ಧರ್ಮಾಧಾರಿತವಾಗಿ ವಿಭಜಿಸುವ ಸಂಘಪರಿವಾರದ ಯೋಜನೆಯಲ್ಲಿ ಅತಿ ಹೆಚ್ಚು ಧ್ರುವೀಕರಣಗೊಂಡಿರುವುದು ಸುಳ್ಯ ಎಂಬುದು ಆ ಪ್ರದೇಶದ ಬೆಳವಣಿಗೆಗಳನ್ನು ಅಧ್ಯಯನ ಮಾಡುತ್ತಿರುವ ಹಲವರು ಹೇಳುವ ಮಾತು. 1992ರಿಂದೀಚೆಗೆ ಪ್ರಾರಂಭವಾದ ಈ ಪ್ರಯೋಗ ಜಿಲ್ಲೆಯ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಇನ್ನಿಲ್ಲದಂತೆ ಹಾಳುಗೆಡವಿದೆ. ಬಿಜೆಪಿ ಪಕ್ಷ ಇದರ ಫಲಾನುಭವಿಯಾಗಿರುವುದರಿಂದ ಅದರ ಮುಖಂಡರ ವರ್ತನೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ಒಂದು ಪಕ್ಷದ ಅಧಿಕಾರ ದಾಹಕ್ಕೆ ಸಾಮಾನ್ಯ ಜನರು ಹತ್ಯೆಯಾಗುತ್ತಿರುವ ಮತ್ತು ಅಲ್ಪಸಂಖ್ಯಾತರು ಭಯದಲ್ಲಿ ಬದುವಂತಹ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಹಾಗೂ ಈ ಕೆಡುಕು ರಾಜ್ಯದ ಇತರ ಭಾಗಗಳಿಗೂ ಪಸರಿಸುತ್ತಿರುವುದರಿಂದ, ಕೆಡುಕಿನ ನಿವಾರಣೆಗೆ ನಾಗರಿಕ ಸಮಾಜ ಇನ್ನಷ್ಟು ಗಂಭೀರ ಕ್ರಮಗಳನ್ನು ಚಿಂತಿಸಬೇಕಿದೆ.

ಬಹುಸಂಖ್ಯಾತ ಧಾರ್ಮಿಕ ಕೋಮಿನ ಹಲವು ವರ್ಗಗಳು ಅದರಲ್ಲಿಯೂ ಹಿಂದುಳಿದ ಸಮುದಾಯಗಳನ್ನು ಈ ದ್ವೇಷದ ಪ್ರಾಜೆಕ್ಟ್‌ನಲ್ಲಿ ದಾಳದಂತೆ ಬಳಸುತ್ತಿರುವ ಸಂಘ ಪರಿವಾರದ ಹುನ್ನಾರದ ಬಗ್ಗೆ ಹಲವು ಮಟ್ಟದ ಚರ್ಚೆಗಳು ನಡೆದಿವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಜನಪ್ರಿಯ ಕಾರ್ಯಕ್ರಮಗಳನ್ನ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಒಟ್ಟಾಗಿ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಹತ್ಯೆಯಾದ ಮೂರೂ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ, ಸಾಮರಸ್ಯದ ಮಾತುಗಳನ್ನಾಡಿದ ವಿರೋಧ ಪಕ್ಷಗಳ ಮುಖಂಡರಾದ ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್) ಮತ್ತು ಬಿಕೆ ಹರಿಪ್ರಸಾದ್ (ಕಾಂಗ್ರೆಸ್), ಇನ್ನಿತರ ಹಲವರು ಸಾರ್ವಜನಿಕ ವ್ಯಕ್ತಿಗಳು ಅಭಿನಂದನಾರ್ಹ. ಇದರ ಜೊತೆಗೆ ಈ ನಾಡಿನ ಕೂಡು ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಮತ್ತು ಸಂವಿಧಾನದ ಬೆಳಕಿನಲ್ಲಿ ಬಾಳಿ ಬದುಕಬೇಕಿರುವ ಅಗತ್ಯವನ್ನು ಮನಗಾಣಿಸುವ ನಿಟ್ಟಿನಲ್ಲಿಯೂ ಕಾರ್ಯಕ್ರಮಗಳನ್ನು ರೂಪಿಸಿ ಇನ್ನು ಬಹುದೂರ ಕ್ರಮಿಸಬೇಕಿದೆ. ಆಗಷ್ಟೇ ಇಂತಹ ಕೊಲೆಪಾತಕಿ ಮನಸ್ಥಿಯನ್ನು ಕೊನೆಗಾಣಿಸಬಹುದು.


ಇದನ್ನೂ ಓದಿ: ಯುಪಿ: ನಾಲ್ಕು ಧರ್ಮಗಳ ಪ್ರಾರ್ಥನೆ ಮಾಡಿಸುತ್ತಿದ್ದ ಶಾಲೆಯ ಮ್ಯಾನೇಜರ್‌ ಮೇಲೆ ಎಫ್‌ಐಆರ್‌; ಮತಾಂತರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...