Homeಕರ್ನಾಟಕಡಿ.ಕೆ.ಶಿವಕುಮಾರ್‌, ನನ್ನ ನಡುವೆ ಬಿರುಕಿಲ್ಲ, ಅದು ಮಾಧ್ಯಮ ಸೃಷ್ಟಿ: ಅಮೃತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಮನದ ಮಾತು

ಡಿ.ಕೆ.ಶಿವಕುಮಾರ್‌, ನನ್ನ ನಡುವೆ ಬಿರುಕಿಲ್ಲ, ಅದು ಮಾಧ್ಯಮ ಸೃಷ್ಟಿ: ಅಮೃತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಮನದ ಮಾತು

- Advertisement -
- Advertisement -

“ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ನನ್ನ ನಡುವೆ ಯಾವುದೇ ಬಿರುಕಿಲ್ಲ. ಅದು ಮಾಧ್ಯಮ ಹಾಗೂ ವಿರೋಧಿ ಪಕ್ಷಗಳು ಸೃಷ್ಟಿಸಿರುವ ಸುಳ್ಳು” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ (75ನೇ ಜನ್ಮದಿನದ ಸಂಭ್ರಮ) ಸಮಾರಂಭದಲ್ಲಿ ಅವರು ಮಾತನಾಡಿದರು.

“ಅನೇಕ ಸಲ ಮಾಧ್ಯಮಗಳು, ವಿರೋಧಿ ಪಕ್ಷಗಳು ಸುಳ್ಳುಗಳನ್ನು ಸೃಷ್ಟಿ ಮಾಡಿ ತಪ್ಪು ಮಾಹಿತಿ ನೀಡುತ್ತಿವೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಬಿರುಕಿದೆ ಎಂಬುದು ಭ್ರಮೆ. ನಾನು ಮತ್ತು ಶಿವಕುಮಾರ್‌ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಎಂಬ ಸಂದೇಶ ನೀಡಿದರು.

“ನಮ್ಮ ಮುಂದೆ ಇರುವ ಭ್ರಷ್ಟ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯುವುದೇ ಆಗಿದೆ. ಈ ಜನಪೀಡಕ ಸರ್ಕಾರವನ್ನು ಕಿತ್ತೊಗೆದು, ರಾಹುಲ್‌ ಗಾಂಧಿಯವರ ನಾಯಕತ್ವದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ತರುತ್ತೇವೆ. ಇದಕ್ಕೆ ನಿಮ್ಮೆಲ್ಲರ ಆರ್ಶೀವಾದ ಇರಬೇಕು” ಎಂದರು.

ತಾವು ನಡೆದು ಬಂದ ಜೀವನವನ್ನು ಮೆಲುಕು ಹಾಕಿದ ಸಿದ್ದರಾಮಯ್ಯನವರು, “ಅಂದಿನಿಂದ ಇಂದಿನವರೆಗೆ ನಿರಂತರವಾಗಿ ರಾಜ್ಯದ ಜನತೆಯ ಸಂಪರ್ಕದಲ್ಲಿದ್ದೇನೆ. ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ಬಹಳ ದೊಡ್ಡದು” ಎಂದು ತಿಳಿಸಿದರು.

“ಜನಶಕ್ತಿಯ ಆರ್ಶೀವಾದ ಇಲ್ಲವಾದರೆ ಯಾರೂ ಕೂಡ, ದೀರ್ಘಕಾಲ ರಾಜಕಾರಣ ಮಾಡಲು ಸಾಧ್ಯವಿಲ್ಲ. ಜನರ ನಿರಂತರವಾದ ಪ್ರೀತಿ, ವಿಶ್ವಾಸ ಆರ್ಶೀವಾದದಿಂದ ಶಾಸಕನಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು” ಎಂದು ಬಣ್ಣಿಸಿದ್ದಾರೆ.

“ಎಲ್ಲಿಯವರೆಗೆ ದೈಹಿಕವಾಗಿ ಮಾನಸಿಕವಾಗಿ ಸದೃಢನಾಗಿರುತ್ತೇನೋ ಅಲ್ಲಿಯವರೆಗೆ ಸಕ್ರಿಯ ರಾಜಕಾರಣ ಮಾಡಿ ನಾಡಿನ ಸೇವೆಯನ್ನು ಮಾಡುತ್ತೇನೆ. ನಾನು 44 ವರ್ಷ ಕಾಲ ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಈಗ ಇರುವ ಬಿಜೆಪಿ ಸರ್ಕಾರದಷ್ಟು ಭ್ರಷ್ಟವಾದ, ಕೋಮುವಾದಿಯಾದ ಮತ್ತೊಂದು ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಸಿದ್ದರಾಮಯ್ಯ ಅಮೃತ ಮಹೋತ್ಸವ: ದುರುದ್ದೇಶಪೂರಿತ ಪೋಸ್ಟ್‌ ಹಾಕಿದ ಬಿಜೆಪಿ

“ರಾಜ್ಯದ ಮೂಲೆ ಮೂಲೆಗಳಿಂದ ಶುಭ ಕೋರಲು ಬಂದಿದ್ದೀರಿ. ನನಗೆ ಶುಭ ಕೋರುವ ಮೂಲಕ- ಈ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತು ಹೊಗೆಯುವ, ಕಾಂಗ್ರೆಸ್ ಸರ್ಕಾರನ್ನು ಅಧಿಕಾರಕ್ಕೆ ತರುವ ಶಪಥ ಮಾಡಬೇಕು” ಎಂದು ಆಶಿಸಿದರು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಯುವಕರು, ಮಹಿಳೆಯರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶದಲ್ಲಿಯೇ ಈ ಪರಿಸ್ಥಿತಿ ಇದೆ. ಮೋದಿ ಪ್ರಧಾನಿಯಾದ ಮೇಲೆ ಈ ದೇಶ, ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಸಂವಿಧಾನಕ್ಕೆ ರಕ್ಷಣೆ ಇಲ್ಲವಾಗಿದೆ ಎಂದು ಎಚ್ಚರಿಸಿದರು.

ಹಿಂದೂ ರಾಷ್ಟ್ರ ಮಾಡಬೇಕು, ಲೂಟಿ ಮಾಡಬೇಕು, ಸರ್ವಾಧಿಕಾರ ತರಬೇಕು, ಸಂವಿಧಾನ ಬದಲಾಯಿಸಬೇಕು ಎಂಬುದು ಬಿಜೆಪಿಯವರ ಉದ್ದೇಶ. ಕಾಂಗ್ರೆಸ್‌ ಮುಗಿಸಲು ಯಾರಿಂದರೂ ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡಲು ಈ ದೇಶದ ಜನ ಬಿಡುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರಲಿದೆ. ಬಡವರ ಬಗ್ಗೆ, ದಲಿತರು, ಹಿಂದುಳಿದ ವರ್ಗದ ಬಗ್ಗೆ ಕಾಳಜಿ ಇರುವವರು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ರಾಹುಲ್ ಗಾಂಧಿಯವರಿಗೆ ಆ ಅರ್ಹತೆ ಇದೆ. ಮೋದಿ ನುಡಿದಂತೆ ನಡೆಯಲಿಲ್ಲ. ದೇಶದ ಆರ್ಥಿಕತೆ ನಾಶವಾಯಿತು ಎಂದು ಟೀಕಿಸಿದರು.

ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ

ದಲಿತರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದವರ ಬದುಕನ್ನು ಹಾಳು ಮಾಡಿದ್ದೀರಿ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಬೆಲೆ ಏರಿಕೆ ಗಗನಕ್ಕೇರಿದೆ. ಕರ್ನಾಟಕದಲ್ಲಿರುವ ಗುತ್ತಿಗೆದಾರರ ಸಂಘದವರು ನಲವತ್ತು ಪರ್ಸೆಂಟ್ ಕಮಿಷನ್‌ ಆರೋಪ ಮಾಡಿ ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ಉತ್ತರ ಸಿಕ್ಕಿಲ್ಲ ಎಂದರು.

ಮಾತ್ತೆತ್ತಿದರೆ ಸಬ್‌ ಕಾ ಸಾತ್ ಸಬ್‌ ಕಾ ವಿಕಾಸ್ ಎನ್ನುತ್ತಾರೆ. ಕರಾವಳಿಯಲ್ಲಿ ಮೂರು ಕೊಲೆಗಳಾಗಿವೆ. ಬಸವರಾಜ ಬೊಮ್ಮಾಯಿ ಕರಾವಳಿಗೆ ಹೋಗಿದ್ದರು. ಮಸೂದ್, ಪ್ರವೀಣ್, ಫಾಝಿಲ್ ಎನ್ನುವವರ ಕೊಲೆಯಾಗಿತ್ತು. ಬೊಮ್ಮಾಯಿಯವರೇ ನೀವು ಇಡೀ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೋ ಅಥವಾ ಒಂದು ಧರ್ಮದ ಮುಖ್ಯಮಂತ್ರಿಯೋ? ಮಸೂದ್ ಹಾಗೂ ಫಾಝಿಲ್ ಮನೆಗೆ ಹೋಗಲಿಲ್ಲ. ಪ್ರವೀಣ್‌ಗೆ ಮಾತ್ರ ಪರಿಹಾರ ನೀಡಿದ್ದೀರಿ. ಅದು ತಪ್ಪೆಂದು ಹೇಳುತ್ತಿಲ್ಲ. ಆದರೆ ಯಾಕೆ ನೀವು ಫಾಝಿಲ್‌ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ಮಸೂದ್‌ ಕುಟುಂಬಕ್ಕೆ ಕೊಡಲಿಲ್ಲ. ಸಬ್‌ಕಾ ಸಾತ್ ಸಬ್‌ ಕಾ ವಿಕಾಸ್‌ ಎನ್ನುವ ನೈತಿಕತೆ ನಿಮಗಿದೆಯಾ? ಈ ರಾಜ್ಯದ ಮುಖ್ಯಮಂತ್ರಿಯಾಗಿರಲು ನೀವು ಲಾಯಾಕ್ಕಾ? ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಎಲ್ಲ ಜನರನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುತ್ತೀರಿ. ಆದರೆ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ ಎಂದು ವಾಗ್ದಾಳಿ ನಡೆಸಿದರು.

ಸಂತೋಷ್ ಪಾಟೀಲ್ ಎನ್ನುವ ವ್ಯಕ್ತಿ ಲಂಚ ಕೊಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡರು. ಅದಕ್ಕಾಗಿ ನಿಮ್ಮ ಮಂತ್ರಿಯೊಬ್ಬರು ರಾಜೀನಾಮೆ ಕೊಟ್ಟರು. ಅದನ್ನು ಮುಚ್ಚಿ ಹಾಕಲು ಹೊರಟಿದ್ದೀರಿ. ಇಂದು ದ್ವೇಷದ ರಾಜಕಾರಣ ಪ್ರಾರಂಭ ಮಾಡಿದ್ದೀರಿ. ಮೋದಿಯವರೇ ಎಷ್ಟು ಕಾಲ ದ್ವೇಷದ ರಾಜಕಾರಣ ಮಾಡಲು ಸಾಧ್ಯವಾಗುತ್ತದೆ. ಜನಶಕ್ತಿಯ ಮುಂದೆ ರಾಜ್ಯ ಶಕ್ತಿ ಎಂದಿಗೂ ಅಂಕುಶವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಹುಲ್ ಗಾಂಧಿಯವರಿಗೆ, ಸೋನಿಯಾ ಗಾಂಧಿಯವರಿಗೆ ಅನಗತ್ಯವಾಗಿ ವಿಚಾರಣೆ ಮಾಡಿದ್ದೀರಿ. ಯಾವ ತಪ್ಪಿಗಾಗಿ, ಸೋನಿಯಾ ಗಾಂಧಿಯವರ ವಯಸ್ಸನ್ನೂ ಲೆಕ್ಕಿಸದೆ ‌ಇ.ಡಿ. ಕಚೇರಿಗೆ ಕರೆಸಿ ಗಂಟೆಗಟ್ಟಲೆ ವಿಚಾರಣೆ ಮಾಡಿದ್ದೀರಿ. ಕಾಂಗ್ರೆಸ್‌ನಲ್ಲಿ ಕೋಟ್ಯಾಂತರ ಕಾರ್ಯಕರ್ತರಿದ್ದಾರೆ. ಎಲ್ಲರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಜೊತೆಯಲ್ಲಿ ಇದ್ದಾರೆ ಎಂದು ತಿಳಿಸಿದರು.

ಹಿಟ್ಲರ್‌ನಂತೆ ಅಧಿಕಾರ ನಡೆಸುತ್ತಿದ್ದಾರೆ. ಸರ್ವಾಧಿಕಾರ ಜಾರಿಗೆ ತಂದು ಸಂವಿಧಾನವನ್ನು ನಾಶ ಮಾಡಲು ಹೊರಟಿದ್ದಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ದಲಿತರು, ಅಲ್ಪಸಂಖ್ಯಾತರು, ರೈತರು, ಹಿಂದುಳಿದವರು ಉಳಿಯಲು ಸಾಧ್ಯ ಎಂದು ತಿಳಿಸಿದರು.

ಇದನ್ನೂ ಓದಿರಿ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಲಾಯಿತು. ನರೇಂದ್ರ ಮೋದಿಯವರು ರೈತ ವಿರೋಧ ಮೂರು ಕಾಯ್ದೆಗಳನ್ನು ತಂದು ರೈತರು ಒಂದು ವರ್ಷ ಚಳವಳಿ ಮಾಡುವಂತಾಯಿತು. ವಿಧಿ ಇಲ್ಲದೆ ವಾಪಸ್‌ ಪಡೆದುಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಇನ್ನೂ ವಾಪಸ್ ತೆಗೆದುಕೊಂಡಿಲ್ಲ. ಎಪಿಎಂಸಿ ಹಾಳು ಮಾಡಿದ್ದಾರೆ ಎಂದು ದೂರಿದರು.

2013 ಕೊಟ್ಟ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಎಸ್‌ಸಿ, ಎಸ್‌ಟಿಗಳಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗಾಗಿ ವಿಶೇಷ ಕಾನೂನುಗಳನ್ನು ಮಾಡಿದ್ದೇವೆ. ಎಲ್ಲ ಬಡವರಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡಿದ್ದೇವೆ. ಅನ್ನಭಾಗ್ಯ, ಶೂ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್‌, ಮನಸ್ವಿನಿ, ವಿದ್ಯಾಸಿರಿ, ಕೃಷಿ ಭಾಗ್ಯ- ಈ ಎಲ್ಲ ಕಾರ್ಯಕ್ರಮ ಮಾಡಿದ್ದೇವೆ. ನೀವೇನು ಮಾಡಿದ್ದೀರಿ ಬೊಮ್ಮಾಯಿ? ಎಂದು ಪ್ರಶ್ನಿಸಿದರು.

ಭಾಷಣದ ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲ ಅಭಿಮಾನಿಗಳನ್ನು, ಕಾರ್ಯಕರ್ತರನ್ನು, ಪಕ್ಷದ ನಾಯಕರನ್ನು ಸಿದ್ದರಾಮಯ್ಯ ಸ್ಮರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...