Homeಅಂಕಣಗಳುಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

ಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

- Advertisement -
- Advertisement -

ಜನವರಿ 1, ಭಾರತದ ಜಾತಿವಾದಿಗಳು ಬೆಚ್ಚಿಬೀಳುವ ದಿನ. 1818ರಲ್ಲಿ ಇದೇ ದಿನ ಕೊರೆಗಾಂವ್‌ನಲ್ಲಿ ಕರ್ಮಠ ಮನುವಾದಿ ಬ್ರಾಹ್ಮಣ ಎರಡನೇ ಬಾಜಿರಾವ್ ಪೇಶ್ವೆ ಸೈನ್ಯದ ವಿರುದ್ಧ ದಲಿತ ಮಹಾರ್ ಸೈನಿಕರು ಯುದ್ಧ ಹೂಡಿ ದಿಗ್ವಿಜಯ ಸಾಧಿಸಿದ್ದರು. ಆ ಗೆಲುವು ಕೇವಲ ಬ್ರಾಹ್ಮಣ ರಾಜನ ಸೋಲಿಸಿದ ಗೆಲುವಾಗಿರದೇ ಶತಶತಮಾನಗಳ ಅಸ್ಪೃಶ್ಯತಾಚರಣೆಯ ವಿರುದ್ಧದ ಗೆಲುವಾಗಿತ್ತು. ಸನಾತನ ಚಾತುರ್ವರ್ಣ ಧರ್ಮದ ವಿರುದ್ಧದ ಗೆಲುವಾಗಿತ್ತು. ಮೇಲ್ಜಾತಿ ಮೇಲರಿಮೆ ದರ್ಪದ ವಿರುದ್ಧದ ಗೆಲುವಾಗಿತ್ತು. ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದ ಈ ಇತಿಹಾಸವನ್ನು ಬಾಬಾಸಾಹೇಬ್ ಅಂಬೇಡ್ಕರರು ಶೋಧಿಸಿ ಸ್ವತಃ ಸಂಭ್ರಮಿಸಿದ್ದರು. ಹಾಗಾಗಿ ಈ ಗೆಲುವನ್ನು ದಲಿತರು ಪ್ರತಿ ವರ್ಷವೂ ’ಭೀಮಾ ಕೊರೆಗಾಂವ್ ವಿಜಯೋತ್ಸವ ದಿನ’ ಎಂದು ಆಚರಿಸುತ್ತಾರೆ. ಯುದ್ಧ ನಡೆದ ಸ್ಥಳ, ಕೊರೆಗಾಂವ್ ಬಳಿ ಸ್ಥಾಪಿಸಲಾಗಿರುವ ಸ್ಮಾರಕ ಸ್ತಂಭಕ್ಕೆ ಗೌರವ ಸಲ್ಲಿಸುತ್ತಾರೆ.

2018ನೇ ಇಸವಿಗೆ ’ಭೀಮಾ ಕೊರೆಗಾಂವ್ ವಿಜಯೋತ್ಸವ’ಕ್ಕೆ 200 ವರ್ಷಗಳಾಗುತ್ತಿತ್ತು. ಆದ್ದರಿಂದ ವಿಜಯೋತ್ಸವದ ಹಿಂದಿನ ದಿನ ಅಂದರೆ ಡಿಸೆಂಬರ್ 31, 2017ರಂದು ಪುಣೆ ಬಳಿಯ ಬ್ರಾಹ್ಮಣ ಪೇಶ್ವೆಗಳ ಶಕ್ತಿಕೇಂದ್ರವಾಗಿದ್ದ ಶನಿವಾರವಾಡದಲ್ಲಿ ’ನವ ಪೇಶ್ವೆಗಳನ್ನು ಸೋಲಿಸೋಣ’ ಎಂಬ ಶೀರ್ಷಿಕೆಯಡಿ ’ಭೀಮಾ ಕೊರೆಗಾಂವ್ ಶೌರ್ಯದಿನ ಪ್ರೇರಣಾ ದಿನ ಸಮಿತಿ’ ಕಾರ್ಯಕ್ರಮ ಹಮ್ಮಿಕೊಂಡಿತು. ಇದೇ ಎಲ್ಗಾರ್ ಪರಿಷತ್ತು. ಈ ಸಮಿತಿಯ ಸಂಘಟಕರಲ್ಲಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಪಿ.ಬಿ. ಸಾವಂತ್, ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಕೋಲ್ಸೆ ಪಾಟೀಲ್ ಅವರುಗಳಿದ್ದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಭಾರತದಾದ್ಯಂತ ದಲಿತರು, ಆದಿವಾಸಿಗಳು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಯುವಜನತೆಯ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯಗಳನ್ನು ಖಂಡಿಸುವುದಾಗಿತ್ತು. ಭಾರತದ ಆರ್ಥಿಕತೆಯನ್ನು ಪಾತಾಳಕ್ಕೆ ತುಳಿಯುತ್ತಿರುವುದರ ವಿರುದ್ಧ ದನಿ ಎತ್ತುವುದಾಗಿತ್ತು. ಈ ಕಾರ್ಯಕ್ರಮವನ್ನು ರಾಧಿಕ ವೇಮುಲ ಉದ್ಘಾಟಿಸಿದರು. ಜಿಗ್ನೇಶ್ ಮೆವಾನಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್, ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಷಿಯನ್ ವಿದ್ಯಾರ್ಥಿ ಪ್ರಶಾಂತ್ ದೊಂತಾ, ಭೀಮ್ ಆರ್ಮಿಯ ವಿನಯ್ ರತನ್‌ಸಿಂಗ್, ಬಾಬಾಸಾಹೇಬರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಆದಿವಾಸಿ ಹೋರಾಟಗಾರ್ತಿ ಸೋನಿ ಸೂರಿ ಮುಂತಾದವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಚಾತುರ್ವರ್ಣ ಧರ್ಮವನ್ನು ಪ್ರತಿನಿಧಿಸುವ ಮಡಿಕೆಗಳನ್ನು ಒಡೆಯುವುದರ ಮೂಲಕ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾರವರು ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕೆ ಆರಂಭದಲ್ಲಿಯೇ ಅಲ್ಲಿನ ’ಪುಣೆ ನಗರ ಹಿಂದೂ ಸಭಾ’ ವಿರೋಧ ವ್ಯಕ್ತಪಡಿಸಿತಲ್ಲದೆ ಈ ಕಾರ್ಯಕ್ರಮವನ್ನು ರಾಷ್ಟ್ರದ್ರೋಹದ ಕಾರ್ಯಕ್ರಮ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಇದರ ಜೊತೆಗೆ ’ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ’ ಪುಣೆಯ ಪೊಲೀಸರಿಗೆ ಶನಿವಾರವಾಡದ ದಲಿತರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಬೇಡಿಕೆ ಸಲ್ಲಿಸಿತ್ತು. ಆದರೆ ಈ ಕಾರ್ಯಕ್ರಮವನ್ನು ನಿಲ್ಲಿಸಲು ಬಲಪಂಥೀಯ ಹಿಂದುತ್ವ ಸಂಘಟನೆಗಳಿಗೆ ಸಾಧ್ಯವಾಗಲಿಲ್ಲ. ’ನವ ಪೇಶ್ವೆಗಳನ್ನು ಸೋಲಿಸೋಣ’ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಂಡಿತು. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಹಿಂದುತ್ವ ಸಂಘಟನೆಗಳು ಕಾಯುತ್ತಿದ್ದವು.

ದಲಿತರ ಪ್ರತಿರೋಧದ ಕಾರ್ಯಕ್ರಮವನ್ನು ನಿಷೇಧಿಸಲು ಶತಾಯಗತಾಯ ಪ್ರಯತ್ನಿಸಿ ಸೋತ ಬಲಪಂಥೀಯ ಮನುವಾದಿ ಸಂಘಟನೆಗಳಿಗೆ ಇದು ನುಂಗಲಾರದ ತುತ್ತಾಯಿತು. ಈ ಕಾರಣಕ್ಕಾಗಿಯೇ ಮಾರನೇ ದಿನ ಅಂದರೆ ಜನವರಿ 1, 2018ರಂದು ಕೊರೆಗಾಂವ್‌ಗೆ ಭೇಟಿ ನೀಡಿದ್ದ ದಲಿತ, ದಮನಿತ ಯಾತ್ರಿಕರ ಮೇಲೆ ಕೇಸರಿ ದ್ವಜ ಹಿಡಿದಿದ್ದ ಬಲಪಂಥೀಯ ಗೂಂಡಾಗಳು ಕಲ್ಲೆಸೆದು, ಯಾತ್ರಿಕರ ಬೈಕು, ಕಾರುಗಳನ್ನು ಸುಟ್ಟುಹಾಕಿ, ಜಖಂಗೊಳಿಸಿ ದಾಂಧಲೆ ಎಬ್ಬಿಸಿದರು. ಒಬ್ಬ ಅಮಾಯಕ ಯುವಕನ ಪ್ರಾಣವನ್ನೂ ಬಲಿಪಡೆದರು. ಈ ಕಿಡಿಗೇಡಿಗಳ ದಾಂಧಲೆ ವಿರುದ್ಧ ಪ್ರಕಾಶ್ ಅಂಬೇಡ್ಕರ್ ಅವರು ಜನವರಿ 3ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ಕೊಟ್ಟರು. ಈ ಬಂದ್‌ಗೆ ಮಹಾರಾಷ್ಟ್ರದ ದಲಿತರು, ಮರಾಠರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿ ಯಶಸ್ವಿಗೊಳಿಸಿದರು. ಇಲ್ಲಿಂದ ಆರಂಭವಾಯಿತು ನೋಡಿ, ದಲಿತರನ್ನು, ಬರಹಗಾರರನ್ನು, ಚಳವಳಿಗಾರರನ್ನು, ಮಾನವ ಹಕ್ಕು ಹೋರಾಟಗಾರರನ್ನು ಬೇಟೆಯಾಡುವ ಮಹಾರಾಷ್ಟ್ರದ ಅಂದಿನ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಯಕ್ರಮ. ಅದು ಇಂದಿಗೂ ನಿಂತಿಲ್ಲ.

ಬಲಪಂಥೀಯ ಗೂಂಡಾಗಳು ನಡೆಸಿದ ಹಿಂಸಾಚಾರದ ವಿರುದ್ಧ ಜನವರಿ 2, 2018ರಂದೇ ದಲಿತ ಮಹಿಳಾ ಹೋರಾಟಗಾರ್ತಿ ಹಾಗೂ ಪ್ರತ್ಯಕ್ಷದರ್ಶಿಯಾಗಿದ್ದ ಅನಿತ ಸಾಳ್ವೆಯವರು ಪೊಲೀಸರಿಗೆ ದೂರು ಸಲ್ಲಿಸಿದರು. ’ಶಿವ ಪ್ರತಿಷ್ಠಾನ ಹಿಂದೂಸ್ತಾನ್’ ಸಂಘಟನೆಯ ನಾಯಕ ’ಸಾಂಭಾಜಿ ಭಿಡೆ’ ಹಾಗೂ ’ಹಿಂದೂ ಏಕತಾ ಅಘಾಡಿ’ ಸಂಘಟನೆಯ ನಾಯಕ ’ಮಿಲಿಂದ್ ಎಕ್‌ಬೋತೆ’ ವಿರುದ್ಧ ಪ್ರಕರಣ ದಾಖಲಾಯಿತು. ಇವರಿಬ್ಬರೇ ಆ ದಾಂಧಲೆಯ ಹಿಂದಿದ್ದ ಕಿಡಿಗೇಡಿಗಳಾಗಿದ್ದರು. ಪೊಲೀಸರು ಮಿಲಿಂದ್ ಎಕ್‌ಬೋತೆಯನ್ನು ಹಲವು ತಿಂಗಳುಗಳ ನಂತರ ಬಂಧಿಸಿದರು. ಕೆಲವೇ ದಿನಗಳಲ್ಲಿ ಆತನಿಗೆ ಜಾಮೀನು ಸಿಕ್ಕಿತು. ಆದರೆ ಸಾಂಭಾಜಿ ಭಿಡೆಯನ್ನು ಬಂಧಿಸುವ ಸಾಹಸಕ್ಕೆ ಪೊಲೀಸರು ಕೈ ಹಾಕಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಆತ ನರೇಂದ್ರ ಮೋದಿಯವರ ಆಪ್ತ ಎನ್ನುವುದಾಗಿತ್ತು.

ಜನವರಿ 8, 1818ರಂದು ’ರಾಷ್ಟ್ರೀಯ ಸ್ವಯಂಸೇವಕ ಸಂಘದ’ (ಆರ್‌ಎಸ್‌ಎಸ್) ಆಪ್ತನಾಗಿರುವ ಪುಣೆಯ ವ್ಯಾಪಾರಿ ತುಷಾರ್ ದಾಂಗುಡೆ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿದರು. ಆತ ತನ್ನ ದೂರಿನಲ್ಲಿ ಜನವರಿ 1ರಂದು ನಡೆದ ದಾಂಧಲೆಗೆ ಕಾರಣ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ತಿನಲ್ಲಿ ಭಾಗವಹಿಸಿ ಮಾತನಾಡಿದ ಹೋರಾಟಗಾರರು ಎಂದು ಆರೋಪಿಸಿದ್ದನು. ಈ ದೂರಿನನ್ವಯವೇ ಮುಂದೆ ಹಲವು ಮಾನವ ಹಕ್ಕು ಹೋರಾಟಗಾರ, ದಲಿತ ನಾಯಕರು, ಬರಹಗಾರ, ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರನ್ನು ಬಂಧಿಸಿ ದೇಶದ್ರೋಹಿ ಕಾಯ್ದೆಯಡಿಯಲ್ಲಿ ಜೈಲಿಗೆ ಹಾಕಲಾಯಿತು.

ಸುರೇಂದ್ರ ಗಾಡ್ಲಿಂಗ್

ಭೀಮಾ ಕೊರೆಗಾಂವ್‌ನಲ್ಲಿ ಹಿಂಸಾಚಾರ ನಡೆದ ಎರಡು ವಾರಗಳ ನಂತರ ಅಂದರೆ ಜನವರಿ 12, 2018ರಂದು ಅದಕ್ಕೆ ಸಂಬಂಧಿಸಿದಂತೆ ಹಲವರನ್ನು ಅಂದಿನ ಬಿಜೆಪಿ ಸರ್ಕಾರ ಬಂಧಿಸಿತು. ಮೊದಲಿಗೆ ’ರಿಲಯನ್ಸ್ ಇಂಡಸ್ಟ್ರಿ’ಯಲ್ಲಿ ಕೆಲಸ ಮಾಡುವ ನಾಲ್ವರು ಕಾರ್ಮಿಕರ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಒಬ್ಬ ಸಾಮಾಜಿಕ ಹೋರಾಟಗಾರನನ್ನು ಬಂಧಿಸಲಾಯಿತು. ಪ್ರಭಾಕರ ಮಚ್ಚ ಎಂಬ ನಿವೃತ್ತ ಶಾಲಾ ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಲಾಗಿತ್ತು. ದುರಂತವೆಂದರೆ ಈ ಶಾಲಾ ಶಿಕ್ಷಕ ಜನವರಿ 23ರಂದು ಆತ್ಮಹತ್ಯೆ ಮಾಡಿಕೊಂಡನು. ಇದುವರೆಗೂ ಈ ಆತ್ಮಹತ್ಯೆಗೆ ಕಾರಣವೇನೆಂದು ಪೊಲೀಸರು ತನಿಖೆ ನಡೆಸಲಿಲ್ಲ. ಇವರೆಲ್ಲರೂ ಆಂಧ್ರಪ್ರದೇಶದಿಂದ ಕೆಲಸ ಮಾಡಲು ಬಂದಿದ್ದ ವಲಸೆ ಕಾರ್ಮಿಕರಾಗಿದ್ದರು. ಪ್ರತ್ಯೇಕ ತೆಲಂಗಾಣ ಹೋರಾಟದಲ್ಲಿ ಭಾಗವಹಿಸಿದ್ದವರಾಗಿದ್ದರು. ಇವರೆಲ್ಲರನ್ನೂ ಕರಾಳ ‘UAPA’ (Unlawful Activities (prevention) Act) ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಇವರೆಲ್ಲರನ್ನೂ ಬಂಧಿಸಿದ್ದಕ್ಕಾಗಿ ಪೊಲೀಸರು ನೀಡಿದ ಕಾರಣ ’ಅವರು ಎಲ್ಗಾರ್ ಪರಿಷತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು’ ಎಂಬುದಾಗಿತ್ತು! ಅಂಬೇಡ್ಕರರು ಆರಂಭಿಸಿದ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆಯಲ್ಲಿ ಭಾಗಿಯಾಗುವುದು ತಪ್ಪೇ? ಇನ್ನೊಂದು ಪ್ರಮುಖ ವಿಷಯ, ಈ ಎಲ್ಲಾ ಕಾರ್ಮಿಕರು ’ರಿಲಯನ್ಸ್ ಎನರ್ಜಿ ಲಿಮಿಟೆಡ್’ ಕಂಪೆನಿಯನ್ನು ಖರೀದಿಸಿ ’ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್’ ಎಂದು ಹೆಸರು ಪಡೆದಿದ್ದ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ-ಬಹುಜನರಾಗಿದ್ದರು! ಈ ಬಂಧಿತರೆಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಪುಣೆ ಪೊಲೀಸರು ಮುಂದೆ ಬೇರೆಯದೇ ಕತೆ ಹೆಣೆಯಲು ಆರಂಭಿಸಿದರು.

ಈ ಹಿಂದೆ ತುಷಾರ್ ದಾಂಗುಡೆ ನೀಡಿದ್ದ ದೂರನ್ನು ಮುಂದಿಟ್ಟುಕೊಂಡು ಏಪ್ರಿಲ್ 17, 2018ರಂದು ಯಾವುದೇ ಸರ್ಚ್ ವಾರಂಟ್ ಇಲ್ಲದೆ ಪುಣೆ ಪೊಲೀಸರು ದಲಿತ ಹೋರಾಟಗಾರ, ’ವಿರೋಧಿ’ ಎಂಬ ಮರಾಠಿ ಪತ್ರಿಕೆಯ ಸಂಪಾದಕ ಸುಧೀರ್ ಧವಲೆ, ಯುವ ನಾಯಕ ಹರ್ಷಾಲಿ ಪೋಟ್ದಾರ್, ಸಾಮಾಜಿಕ ಹೋರಾಟಗಾರರಾದ ಸಾಗರ್ ಗೊರ್ಖೆ, ಧವಲ ಧೇಂಗ್ಲೆ, ರಮೇಶ್ ಗಾಯ್ಚೋರ್, ಜ್ಯೋತಿ ಜಗತಾಪ್ ಮತ್ತು ರುಪಾಲಿ ಜಾದವ್ ಇವರುಗಳ ಮನೆಗಳ ಮೇಲೆ ದಾಳಿ ಮಾಡಿದರು. ಇವರೆಲ್ಲರೂ ’ಭೀಮಾ ಕೊರೆಗಾಂವ್ ಶೌರ್ಯ ದಿನ ಪ್ರೇರಣ ಅಭಿಯಾನ ಸಮಿತಿ’ಯ ಸಂಘಟಕರಾಗಿದ್ದರು. ಇದರ ಜೊತೆಗೆ ನಾಗಪುರದ ವಕೀಲ ’ಸುರೇಂದ್ರ ಗಾಡ್ಲಿಂಗ್’ ಹಾಗೂ ದೆಹಲಿಯ ಮಾನವ ಹಕ್ಕು ಹೋರಾಟಗಾರ ’ರೋನ ವಿಲ್ಸನ್’ ಅವರ ಮನೆಯ ಮೇಲೂ ಪೊಲೀಸರು ದಾಳಿ ಮಾಡಿದರು. ಆಶ್ಚರ್ಯವೆಂದರೆ ಇವರಿಬ್ಬರ ಹೆಸರನ್ನು ತುಷಾರ್ ದೂರಿನಲ್ಲಿ ನಮೂದಿಸಿರಲಿಲ್ಲ! ಇವರಿಬ್ಬರ ಹೆಸರನ್ನು ಎಫ್.ಐ.ಆರ್‌ನಲ್ಲಿ ಮಾರ್ಚ್ 6ರಂದು ಸೇರಿಸಲಾಗಿತ್ತಷ್ಟೆ. ಈ ದಾಳಿಯಲ್ಲಿ ಎಲ್ಲರ ಕಂಪ್ಯೂಟರ್ ಹಾರ್ಡ್ ಡಿಸ್ಕ್, ಪೆನ್‌ಡ್ರೈವ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಆಶ್ಚರ್ಯವೆಂದರೆ ಯಾವುದೇ ವಾರಂಟ್ ಇಲ್ಲದೇ ಸುರೇಂದ್ರ ಗಾಡ್ಲಿಂಗ್ ಮಗ ಮತ್ತು ಸೊಸೆಯ ಮೊಬೈಲ್ ಫೋನುಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ಹೀಗೆ ವಶಪಡಿಸಿಕೊಳ್ಳುವಾಗ ಕಾನೂನುಬದ್ಧವಾಗಿ ತಾಂತ್ರಿಕ ಉಪಕರಣಗಳನ್ನು ಸೀಲ್ ಮಾಡದೇ ಪೊಲೀಸರು ಕೊಂಡೊಯ್ದಿದ್ದರು.

ಇಲ್ಲಿಂದ ಎರಡು ತಿಂಗಳ ನಂತರ ಅಂದರೆ ಜೂನ್ 6, 2018ರಂದು ’ಸುಧೀರ್ ಧವಲೆ’, ’ಸುರೇಂದ್ರ ಗಾಡ್ಲಿಂಗ್’ ಮತ್ತು ’ರೋನ ವಿಲ್ಸನ್’ ಈ ಮೂವರನ್ನು ಜೊತೆಗೆ ಈ ಹಿಂದೆ ಒಮ್ಮೆಯೂ ವಿಚಾರಣೆ ನಡೆಸದ ನಾಗಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ’ಡಾ. ಶೋಮಾ ಸೇನ್’ ಹಾಗೂ ಪ್ರಧಾನ ಮಂತ್ರಿ ಗ್ರಾಮೀಣ ಅಭಿವೃದ್ಧಿಯ ಮಾಜಿ ಸದಸ್ಯರಾಗಿದ್ದ ’ಮಹೇಶ್ ರಾವತ್’ ಅವರುಗಳನ್ನು ಪೊಲೀಸರು ಬಂಧಿಸಿದರು. ಬಂಧಿತರಿಗೆ ಕಿಂಚಿತ್ತು ಸುಳಿವೂ ನೀಡದೇ ಸೆಕ್ಷನ್ 153 (ಎ), 505 (1)(ಬಿ), 117 ಮತ್ತು ಐಪಿಸಿ 34 ಜೊತೆಗೆ ‘UAPA’ ಕಾಯ್ದೆಯ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ರೋನ ವಿಲ್ಸನ್

ಇದಾದ ಮೂರು ತಿಂಗಳ ನಂತರ ಅಂದರೆ ಆಗಸ್ಟ್ 28, 2018ರಂದು ಎರಡನೇ ಸುತ್ತಿನ ಬಂಧನ ಆರಂಭವಾಯಿತು. ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ವಕೀಲೆ ’ಸುಧಾ ಭಾರದ್ವಾಜ್’, ಹೋರಾಟಗಾರ ’ವರ್ನನ್ ಗೊನ್ಸಾಲ್ವಸ್’, ವಕೀಲ ’ಅರುಣ್ ಫೆರೇರ’ ಮತ್ತು ಹೈದರಾಬಾದಿನಲ್ಲಿ ತೆಲುಗು ಕವಿ ’ವರವರರಾವ್’ ಈ ನಾಲ್ವರನ್ನು ಬಂಧಿಸಲಾಯಿತು. ಜೊತೆಗೆ ಮುಂಬೈ, ದೆಹಲಿ, ಹೈದರಾಬಾದ್, ಗೋವಾ, ರಾಂಚಿಯ ಸಾಮಾಜಿಕ ಕಾರ್ಯಕರ್ತರು, ವಕೀಲರು ಹಾಗೂ ಬರಹಗಾರರ ಮನೆಗಳ ಮೇಲೆ ದಾಳಿ ಮಾಡಲಾಯಿತು. ಮತ್ತೆ ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ಡೈರಿ, ನೋಟ್ ಪುಸ್ತಕಗಳು, ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಮಯದಲ್ಲಿಯೇ ಗೋವಾದಲ್ಲಿದ್ದ ಚಿಂತಕ ’ಆನಂದ್ ತೇಲ್ತುಂಬ್ಡೆ’, ಜಾರ್ಖಂಡ್ ಆದಿವಾಸಿ ಹೋರಾಟಗಾರ ಕ್ರೈಸ್ತ ಪಾದ್ರಿ ’ಸ್ಟಾನ್ ಸ್ವಾಮಿ’ ಹಾಗೂ ’ಗೌತಮ್ ನವಲಖ’ ಇವರ ಮನೆಗಳನ್ನು ದಾಳಿ ಮಾಡಿದ್ದು.

ಈ ಎಲ್ಲಾ ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ಪ್ರಶ್ನಿಸಿ ಆಗಸ್ಟ್ 29ರಂದು ದೇಶದ ಗಣ್ಯರಾದ ಇತಿಹಾಸಜ್ಞೆ ರೋಮಿಲಾ ಥಾಪರ್, ಅರ್ಥಶಾಸ್ತ್ರಜ್ಞೆ ದೇವಕಿ ಜೈನ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಮತ್ತು ಮಾಜ ದಾರುವಾಲ ಇವರೈವರು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಪಿ.ಐ.ಎಲ್ (ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್) ದಾಖಲಿಸಿದರು. ಇದರಲ್ಲಿ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂಬುದರ ಜೊತೆಗೆ ಈ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕೆಂದು ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಬಂಧಿತ ಎಲ್ಲಾ ಹೋರಾಟಗಾರರಿಗೆ ನಾಲ್ಕು ವಾರಗಳ ಬಿಡುವು ನೀಡಿತು. ಆದರೆ ಎಸ್‌ಐಟಿ ರಚನೆಗೆ ನಿರಾಕರಿಸಿತು. ಇದಕ್ಕೆ ಮುಖ್ಯ ಕಾರಣ ಪುಣೆ ಪೊಲೀಸರು ಪ್ರಕರಣಕ್ಕೆ ಹೊಸ ತಿರುವೊಂದನ್ನು ಸೇರಿಸಿದ್ದರು. ಅದೇನೆಂದರೆ, ’ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಮಾವೋವಾದಿಗಳ ಪಿತೂರಿ ಇದೆ’ ಎಂಬುದಾಗಿತ್ತು. ಇಲ್ಲಿಯವರೆಗೆ ಎಲ್ಗಾರ್ ಪರಿಷತ್ತಿನಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣದ ಕಾರಣದಿಂದ ಭೀಮಾ ಕೊರೆಗಾಂವ್ ಹಿಂಸಾಚಾರವಾಯಿತು ಎಂದು ವಾದಿಸುತ್ತಿದ್ದ ಪುಣೆ ಪೊಲೀಸರು ಹೊಸ ಕತೆಯೊಂದನ್ನು ಹೇಳಲು ಆರಂಭಿಸಿದರು. ಇದರಿಂದಾಗಿ ಬಂಧಿತರೆಲ್ಲರೂ ’ಅರ್ಬನ್ ನಕ್ಸಲರು’ ಎಂದು ಮಾಧ್ಯಮಗಳು ಪ್ರಚಾರ ಮಾಡಲು ಆರಂಭಿಸಿದವು.

ನಾಲ್ಕು ವಾರಗಳ ನಂತರ ಎಲ್ಲರನ್ನು ಮತ್ತೆ ಬಂಧಿಸಲಾಯಿತು. ’ಆನಂದ್ ತೇಲ್ತುಂಬ್ಡೆ’ಯವರಿಗೆ ಬಾಂಬೆ ಹೈ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ’ನವಲಖ’ ಅವರ ಬಂಧನಕ್ಕೆ ಸುಪ್ರೀಂಕೋರ್ಟ್ ನಾಲ್ಕು ವಾರಗಳ ತಡೆ ವಿಧಿಸಿತು.

ಈ ಪ್ರಕರಣ ಇನ್ನೇನು ಇತ್ಯರ್ಥವಾಗಬಹುದು ಎಂದು ನಿರೀಕ್ಷಿಸಿದ್ದವರಿಗೆ ಮತ್ತೊಂದು ಆಘಾತವಾದ ಸುದ್ಧಿಯನ್ನು ’ದಿ ರಿಪಬ್ಲಿಕ್’ ಟಿ.ವಿ ಹಾಗೂ ಜೀ ಟಿ.ವಿಗಳು ಬಿತ್ತರಿಸಲು ಆರಂಭಿಸಿದವು. ನ್ಯೂಸ್ ರೂಮಿನಲ್ಲಿಯೇ ಪ್ರಕರಣದ ವಿಚಾರಣೆ ಹಾಗೂ ತೀರ್ಪು ನೀಡಲು ಆರಂಭಿಸಿದ್ದರು. ಈ ಟಿ.ವಿಗಳು ತಮಗೆ ’ವಿಶೇಷ ಪತ್ರಗಳು’ ದೊರಕಿದ್ದು ಇದರಿಂದ ಬಂಧಿತರಿಗೆ ಹಾಗೂ ಮಾವೋವಾದಿಗಳಿಗೆ ಸಂಪರ್ಕ ಇರುವುದು ಸಾಬೀತಾಗುತ್ತದೆ ಎಂದು ಜೋರಾದ ದನಿಯಲ್ಲಿ ಹೇಳಲಾರಂಭಿಸಿದರು. ಆಘಾತವೆಂದರೆ ಇದರ ಜೊತೆಗೆ ಆ ಪತ್ರಗಳಲ್ಲಿ ’ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಮೋದಿ ರಾಜ್ಯವನ್ನೂ ಕೊನೆಗಾಣಿಸಬೇಕು’ ಎಂದು ಬರೆಯಲಾಗಿದೆ ಎಂದು ಹೇಳಲಾರಂಭಿಸಿದರು. ಜೂನ್ 17, 2018ರಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದ ಪುಣೆಯ ಜಂಟಿ ಪೊಲೀಸ್ ಆಯುಕ್ತರಾದ ರವೀಂದ್ರ ಕದಮ್ ಅದೇ ’ಹತ್ಯೆ ಪಿತೂರಿ’ ಕತೆಯನ್ನು ಸಾರ್ವಜನಿಕಗೊಳಿಸಿದರು. ತನಿಖೆ ನಡೆಯುತ್ತಿರುವಾಗಲೇ ಈ ರೀತಿ ತನಿಖಾ ಮಾಹಿತಿಯನ್ನು ಬಹಿರಂಗಗೊಳಿಸುವುದು ಕಾನೂನಿಗೆ ವಿರುದ್ಧವೆಂಬ ಅಂಶ ಪೊಲೀಸ್ ಆಯುಕ್ತನಿಗೇ ತಿಳಿದಿಲ್ಲವೆಂಬುದು ದುರದೃಷ್ಟಕರ ಸಂಗತಿ. ಇರಲಿ, ಅವರ ಪ್ರಕಾರ ಈ ಪತ್ರಗಳು ಏಪ್ರಿಲ್ 17ರ ದಾಳಿಯಂದೇ ದೊರಕಿದವಂತೆ, ಇದಾದ ’ಒಂದು ತಿಂಗಳ’ ನಂತರ ‘UAPA’ ಅಡಿಯಲ್ಲಿ ಕೇಸು ದಾಖಲಿಸಿದರಂತೆ! ಈ ’ಹತ್ಯೆ ಪಿತೂರಿ’ ಎಂಬ ಆರೋಪ ಕೇವಲ ಕಟ್ಟು ಕತೆ ಎಂಬುದು ಒಂದು ಸಣ್ಣ ಮಾಹಿತಿಯಿಂದ ಬಯಲಾಗುತ್ತದೆ. ಅದೇನೆಂದರೆ, ಪ್ರಧಾನ ಮಂತ್ರಿಗಳ ಭದ್ರತೆಯನ್ನು ನವೀಕರಿಸುವ ಸಭೆಯು ಜೂನ್ 11ರಂದು ನಡೆಸಲಾಗಿದೆ ಎಂದು ವರದಿಯಾಗಿದೆ. ಇದರ ಪ್ರಕಾರ ಪ್ರಧಾನಮಂತ್ರಿಗಳನ್ನು ಹತ್ಯೆ ಮಾಡುವ ಪಿತೂರಿ ನಡೆದಿದೆ ಎಂಬ ಮಾಹಿತಿ ಏಪ್ರಿಲ್ 17ಕ್ಕೇ ಸಿಕ್ಕಿದ್ದರೂ ಜೂನ್ 11ರವರೆಗೆ ಹೆಚ್ಚುವರಿ ಭದ್ರತೆ ನೀಡದೆ ಕಾದು ಕುಳಿತದ್ದು ಏಕೆ? ಪ್ರಧಾನಿಗಳ ಜೀವವೆಂದರೆ ಅಷ್ಟು ಹುಡುಗಾಟವೇ ದೇಶದ ಭದ್ರತಾ ವ್ಯವಸ್ಥೆಗೆ? ಇದಾದನಂತರ ’ಹತ್ಯೆ ಪಿತೂರಿ’ ಗೆ ಸಂಬಂಧಿಸಿದ 13 ಪತ್ರಗಳನ್ನು ವಿಚಾರಣೆ ನಡೆಸಲು ಕೋರ್ಟ್‌ಗೆ ನೀಡುವ ಮೊದಲೇ ಸ್ವತಃ ಪೊಲೀಸರು ಮಾಧ್ಯಮಗಳಿಗೆ ನೀಡಿದರು. ಇದಕ್ಕಿಂತ ಬೇಜವಾಬ್ದಾರಿ ಹಾಗೂ ಹಾಸ್ಯಾಸ್ಪದ ನಡೆ ಬೇರೊಂದಿರಲಾರದು.

ಇಷ್ಟೆಲ್ಲಾ ಆದ ನಂತರ ಪುಣೆ ಪೊಲೀಸರು ಮೊದಲ ಆರೋಪ ಪಟ್ಟಿಯನ್ನು 2018ರ ಡಿಸೆಂಬರ್‌ನಲ್ಲಿ 6 ಬಂಧಿತರ ವಿರುದ್ಧ ಸಲ್ಲಿಸಿದರು. ಈ ಆರೋಪಪಟ್ಟಿಯೇ ಸುಮಾರು 5000 ಪುಟಗಳಿತ್ತು. ಈ ಆರೋಪ ಪಟ್ಟಿಯಲ್ಲಿ ಈ ಎಲ್ಲಾ ಬಂಧಿತರಿಗೆ ಸಂಬಂಧಿಸಿದಂತೆ ಭೀಮಾ ಕೊರೆಗಾಂವ್ ಹಿಂಸಾಚಾರದೊಂದಿಗಿನ ಸಂಬಂಧವನ್ನೇ ಕೈ ಬಿಡಲಾಗಿತ್ತು. ಬದಲಾಗಿ ಪ್ರಧಾನಮಂತ್ರಿಗಳನ್ನು ಹತ್ಯೆಗೈಯ್ಯಲು ಮಾವೋವಾದಿಗಳ ಪಿತೂರಿಯಲ್ಲಿ ಇವರೆಲ್ಲರ ಕೈವಾಡವಿದೆಯೆಂದು ಆರೋಪಿಸಲಾಗಿದೆ. ಅಲ್ಲಿಗೆ ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ’ರಿಲಯನ್ಸ್ ಇಂಡಸ್ಟ್ರೀಸ್’ ನೌಕರರನ್ನು ಬಂಧಿಸುವುದರಿಂದ ಆರಂಭವಾಗಿದ್ದ ಈ ತನಿಖೆಯು ನಂತರ ಎಲ್ಗಾರ್ ಪರಿಷತ್ತಿನಲ್ಲಿನ ಪ್ರಚೋದಿತ ಭಾಷಣದ ಕಡೆ ತಿರುಗಿ ತದನಂತರ ಹಿಂಸಾಚಾರಕ್ಕೆ ಮಾವೋವಾದಿಗಳ ಪಿತೂರಿ ಇದೆ ಎಂಬಲ್ಲಿಗೆ ಬಂದು ಈಗ ಪ್ರಧಾನಮಂತ್ರಿಗಳ ಹತ್ಯೆ ಪಿತೂರಿಯ ತನಕ ಬಂದು ನಿಂತಿದೆ.

2020ರಲ್ಲಿ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿತು. ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಜಂಟಿಯಾಗಿ ಸೇರಿಕೊಂಡು ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬಂದಿತು. ಈ ಸಮಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತನಿಖೆಯ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಮುಂದಾದಾಗ ರಾಜ್ಯ ಸರ್ಕಾರಕ್ಕೂ ವಿಷಯ ತಿಳಿಸದೆ ಕೇಂದ್ರ ಗೃಹ ಇಲಾಖೆಯು ದಿಢೀರನೇ ಈ ಇಡೀ ಪ್ರಕರಣವನ್ನು National Investigation Agency (NIA)ಗೆ ರವಾನಿಸಿತು. ಇದಾದನಂತರ ಮತ್ತಷ್ಟು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಯಿತು. ಏಪ್ರಿಲ್ 14, 2020ರಂದು ’ಅಂಬೇಡ್ಕರ್ ಜಯಂತಿ’ಯಂದೇ ’ಬಾಬಾಸಾಹೇಬ್ ಅಂಬೇಡ್ಕರ್’ ಅವರ ಮೊಮ್ಮಗಳು ’ರಮಾ ಅಂಬೇಡ್ಕರ್’ ಅವರ ಪತಿ, ದೇಶದ ಪ್ರಸಿದ್ಧ ಚಿಂತಕರಾದ ’ಡಾ. ಆನಂದ್ ತೇಲ್ತುಂಬ್ಡೆ’ಯವರನ್ನು ಬಂಧಿಸಲಾಯಿತು. ಹೀಗೆ ಇದುವರೆಗೂ 16 ಜನರನ್ನು ಈ ಮೇಲಿನ ಪ್ರಕರಣದಲ್ಲಿ ಬಂಧಿಸಲಾಗಿದ್ದು ಎಲ್ಲರ ಮೇಲೂ ‘UAPA’ ಕಾಯ್ದೆಯನ್ನು ಹಾಕಲಾಗಿದೆ. ಇವರೆಲ್ಲರೂ ದಲಿತ, ಆದಿವಾಸಿ, ಹಿಂದುಳಿದ ಜಾತಿಗಳು, ಮಹಿಳೆಯರು, ಅಲ್ಪಸಂಖ್ಯಾತರ ಪರವಾಗಿ ಹೋರಾಡುತ್ತಿದ್ದವರಾಗಿದ್ದಾರೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ನಡೆದಿರುವ ಎಲ್ಲಾ ಅಮಾನವೀಯ, ಸರ್ವಾಧಿಕಾರಿ ಧೋರಣೆಗಳನ್ನು ನಿರ್ಭಿಡೆಯಿಂದ ವಿಮರ್ಶಿಸಿದ್ದಾರೆ. ಸಂಘಪರಿವಾರದ ಹಿಂದೂರಾಷ್ಟ್ರ ಸಿದ್ಧಾಂತದ ಅಪಾಯಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಹೆಚ್ಚು ಶ್ರಮ ಹಾಕಿರುವವರಾಗಿದ್ದಾರೆ. ಹಾಗಾಗಿ ಇಂದು ಜೈಲಿನಲ್ಲಿದ್ದಾರೆ.

ಆನಂದ್ ತೇಲ್ತುಂಬ್ಡೆ

ಹೀಗಿರುವಾಗ ಈ ಪ್ರಕರಣಕ್ಕೆ ಹೊಸ ತಿರುವೊಂದು ಬಂದಿದೆ. ಈ ಎಲ್ಲಾ ಹೋರಾಟಗಾರರ ಮೇಲೆ ಪ್ರಭುತ್ವವೇ ಪಿತೂರಿ ಮಾಡಿದೆಯೇ ಎಂಬ ಅನುಮಾನ ಗಟ್ಟಿಯಾಗುತ್ತಿದೆ. ಅದಕ್ಕೆ ಸಾಕ್ಷಿಯೊಂದು ದೊರಕಿದೆ. ಮೊಟ್ಟಮೊದಲು ಬಂಧಿತರಾದ ’ರೋನ ವಿಲ್ಸನ್’ ಅವರ ಕಂಪ್ಯೂಟರ್ ಮತ್ತು ಫೋನ್‌ಗಳ ತದ್ರೂಪನ್ನು ಅಮೆರಿಕಾ ಮೂಲದ ’ಡಿಜಿಟಲ್ ಫೊರೆನ್ಸಿಕ್ ಸಂಸ್ಥೆ’ಯಾದ ’ಆರ್ಸೆನಲ್ ಸಂಸ್ಥೆ’ಗೆ ಪರಿಶೀಲನೆಗಾಗಿ ನೀಡಲಾಗಿತ್ತು. ಈ ಸಂಸ್ಥೆಯು ವಿಲ್ಸನ್ ಕಂಪ್ಯೂಟರ್ ಹಾಗೂ ಐಫೋನ್‌ಗಳಲ್ಲಿ ’ಪೆಗಸಸ್ ಸ್ಪೈವೇರ್’ (ಮೂರನೇ ವ್ಯಕ್ತಿಗಳು ಗೂಢಾಚಾರವಾಗಿ ದೂರದಿಂದಲೇ ಬೇರೊಬ್ಬರ ಕಂಪ್ಯೂಟರ್, ಮೊಬೈಲ್ ಫೋನುಗಳನ್ನು ಕದ್ದು ನೋಡಲು ಹಾಗೂ ನಿಯಂತ್ರಿಸಲು ಬಳಸುವ ಸಾಫ್ಟ್‌ವೇರ್. ಇದನ್ನು ಇಸ್ರೇಲ್ ಮೂಲದ ಕಂಪೆನಿ ಕಂಡುಹಿಡಿದಿದ್ದು ಕೇವಲ ಅಧಿಕೃತ ಸರ್ಕಾರಗಳಿಗೆ ಮಾತ್ರ ನೀಡುತ್ತದೆ) ಇರುವುದನ್ನು ದೃಢಪಡಿಸಿದೆ. ಅಷ್ಟೇ ಅಲ್ಲದೆ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅವರಿಗೇ ತಿಳಿಯದೆ ಕಡತಗಳನ್ನು ಸೇರಿಸಿರುವುದನ್ನೂ ಪತ್ತೆಹಚ್ಚಿದೆ.

ಒಟ್ಟಾರೆ ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಪ್ರತ್ಯಕ್ಷ ಪಾತ್ರ ಹೊಂದಿದ್ದ ಬಲಪಂಥೀಯ ಸಂಘಟನೆ ನಾಯಕರಾದ ಸಾಂಬಾಜಿ ಭಿಡೆ ಹಾಗೂ ಮಿಲಿಂದ್ ಏಕ್‌ಬೋತೆಯವರನ್ನು ಶಿಕ್ಷಿಸುವ ಬದಲು, ದಲಿತ ನಾಯಕರನ್ನೇ, ದಲಿತ ಪರ ಹೋರಾಟಗಾರರನ್ನೇ ಬಂಧಿಸಲಾಗಿದೆ. ಅವರ ಮೇಲೆ ಹೊರಿಸಿರುವ ಆರೋಪವನ್ನು ನ್ಯಾಯಾಲಯದಲ್ಲಿ ಮೂರು ವರ್ಷವಾದರೂ ವಿಚಾರಣೆಗೆ ತರದೇ ಕಾಯ್ದಿರಿಸಿದ್ದಾರೆ. ಅಮಾನವೀಯವಾಗಿ ನಡೆಸಿಕೊಂಡದ್ದರ ಪರಿಣಾಮವಾಗಿ ಸ್ಟಾನ್ ಸ್ವಾಮಿಯವರ ಜೀವವನ್ನು ಬಲಿಪಡೆಯಲಾಗಿದೆ. ಇನ್ನುಳಿದ 15 ಜನರಲ್ಲಿ ಆರು ಜನರು 70 ವರ್ಷ ಮೀರಿದವರಿದ್ದಾರೆ. ಅವರಿಗೂ ಜೈಲಿನಲ್ಲಿ ಕಿರುಕುಳ ನಿರಂತರವಾಗಿ ನೀಡಲಾಗುತ್ತಿದೆ. ಬಹಿರಂಗವಾಗಿಯೇ ದ್ವೇಷ ಭಾಷಣ ಮಾಡುತ್ತಿರುವ, ಒಂದು ಸಮುದಾಯದ ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಬೇಕು ಎಂದು ಕರೆ ನೀಡುವವರಿಗೆ ಜಾಮೀನು ನಿಡುತ್ತಿರುವ ನ್ಯಾಯಾಲಯಗಳು ಈ 16 ಹೋರಾಟಗಾರರಿಗೆ ಜಾಮೀನು ನೀಡದಿರುವುದು ವಿಪರ್ಯಾಸ.

ಪ್ರಧಾನ ಮಂತ್ರಿಯ ’ಹತ್ಯೆ ಪಿತೂರಿ’ ಆರೋಪದಲ್ಲಿ ಬಂಧಿಸಿರುವ ಈ 16 (ಸ್ಟಾನ್ ಸ್ವಾಮಿಯವರು ಕಸ್ಟಡಿಯಲ್ಲಿರುವಾಗಲೇ ಅಸು ನೀಗಿದ್ದಾರೆ) ಹೋರಾಟಗಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಗಿದ್ದರೂ ಇನ್ನೂ ಪ್ರಕರಣದ ವಿಚಾರಣೆಯನ್ನು NIA ಆರಂಭಿಸದಿರುವುದು ಹಲವಾರು ಅನುಮಾನಗಳನ್ನು ಗಟ್ಟಿಗೊಳಿಸುತ್ತಿದೆ. ಭೀಮಾ ಕೊರೆಗಾಂವ್ ಐತಿಹಾಸಿಕ ಸ್ಥಳಕ್ಕೆ ಹಾಗೂ ಐತಿಹಾಸಿಕ ಆಚರಣೆಗೆ ಕಪ್ಪು ಮಸಿ ಬಳಿಯುವ ಎಲ್ಲಾ ಕೆಲಸವನ್ನು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಈಗಾಗಲೇ ಮಾಡಿಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮನೆತನದ ಸದಸ್ಯರನ್ನೇ ಸುಳ್ಳು ಆರೋಪದಲ್ಲಿ ಬಂಧಿಸುವ ಧೈರ್ಯವನ್ನು ಬಿಜೆಪಿ ಸರ್ಕಾರ ಮಾಡಿಯಾಗಿದೆ. ಮೂರು ವರ್ಷವಾದರೂ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಳ್ಳದಿರುವುದು ’ಪ್ರಭುತ್ವದ ಪಿತೂರಿ’ಯನ್ನು ಜಗಜ್ಜಾಹೀರುಗೊಳಸಿದೆ. ಇದಕ್ಕೆ ತಕ್ಕಂತೆ ಪೆಗಸಸ್ ಸ್ಪೈವೇರ್ ಮಾಹಿತಿಯೂ ಬಯಲಾಗಿದೆ. ವಿಶ್ವಸಂಸ್ಥೆ ಸಮಿತಿಯೂ ಸಹ ಈ ಅಮಾನವೀಯ ಬಂಧನವನ್ನು ಖಂಡಿಸಿದೆ. ಹೀಗಿದ್ದು, ಭಾರತದ ಸಂವಿಧಾನವು ಭಾರತೀಯರೆಲ್ಲರಿಗೂ ನೀಡಿರುವ ಸ್ವಾತಂತ್ರ್ಯವನ್ನು ಈ 16 ಜನರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಸಿದುಕೊಂಡಿರುವುದೇಕೆ? ಇವರನ್ನು ಕಂಡರೆ ಸರ್ಕಾರಕ್ಕೆ ಅಷ್ಟೊಂದು ಭಯವೇಕೆ? ಇದಕ್ಕೆ ಕಾಲ ಅದಾಗಲೇ ಉತ್ತರಿಸಿ ಆಗಿದೆ. ಭಾರತೀಯರು ಉತ್ತರಿಸುವುದೊಂದೇ ಬಾಕಿಯಿದೆ.


ಇದನ್ನೂ ಓದಿ: ಮಾತು ಮರೆತ ಭಾರತ-21; ಹತ್ರಾಸ್ ಫೈಲ್: ಬಿಜೆಪಿ ಆಡಳಿತದ ’ಬೇಟಿ ಬಚಾವೋ’ಗೊಂದು ಉದಾಹರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...