Homeಮುಖಪುಟಭಾರತ್‌ ಜೋಡೋ - ಹೃದಯ ಬೆಸೆಯುವ ಯಾತ್ರೆ: ಜಿ.ಪಿ.ಬಸವರಾಜು

ಭಾರತ್‌ ಜೋಡೋ – ಹೃದಯ ಬೆಸೆಯುವ ಯಾತ್ರೆ: ಜಿ.ಪಿ.ಬಸವರಾಜು

ಈ ಯಾತ್ರೆಗೆ ಕೈಜೋಡಿಸುವುದೆಂದರೆ ನಾವು ಕಾಂಗ್ರೆಸ್‌ ಪಕ್ಷದ ಜೊತೆ, ಅದರ ಸಿದ್ಧಾಂತದ ಜೊತೆಗೆ ಕೈಜೋಡಿಸಿದಂತಲ್ಲ; ಇದೊಂದು ಸದಾಶಯದ, ಸದ್ಭಾವನೆಯ, ಜೀವಪರ ಯಾತ್ರೆ.

- Advertisement -
- Advertisement -

ರಾಹುಲ್‌ ಗಾಂಧಿ ಅವರು ಆರಂಭಿಸಿರುವ ಕಾಂಗ್ರೆಸ್ಸಿನ ಭಾರತ್‌ ಜೋಡೋ ಯಾತ್ರೆ ಮೂರು ವಾರಗಳನ್ನು ಪೂರೈಸಿದೆ. ಎರಡು ರಾಜ್ಯಗಳನ್ನು ಸುತ್ತಿದೆ. ಸದ್ಯದಲ್ಲಿಯೇ ಕರ್ನಾಟಕವನ್ನು ಪ್ರವೇಶಿಸಲಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಉಮೇದು, ಬಲಗಳನ್ನು ತುಂಬುವ ನೇರ ಉದ್ದೇಶದಿಂದ ಈ ಯಾತ್ರೆ ಸೆಪ್ಟೆಂಬರ್‌ ೭ ರಂದು ಆರಂಭವಾದರೂ, ಅದು ಹೊಸ ರೂಪಗಳನ್ನು, ಹೊಸ ಅರ್ಥ, ಆಯಾಮಗಳನ್ನು ಪಡೆದುಕೊಂಡಿತು. ಸಾವಿರಾರು, ಲಕ್ಷಾಂತರ ಜನ ಈ ಯಾತ್ರೆಗೆ ಕೈಜೋಡಿಸುತ್ತ ಅದರ ಅರ್ಥವಿಸ್ತಾರಕ್ಕೆ ಕಾರಣವಾಗಿದ್ದಾರೆ.

12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3500 ಕಿ.ಮೀ.ನಷ್ಟು ದೂರವನ್ನು ಕಾಲುನಡಿಗೆಯಲ್ಲಿ ಸುತ್ತುವುದರ ಮೂಲಕ ʼಒಡೆದ ಭಾರತವನ್ನುʼ ಜೋಡಿಸುವುದು ಈ ಯಾತ್ರೆಯ ಗುರಿಯಾಗಿದೆ.

ಇಂಥ ಯಾತ್ರೆಗಳು ಭಾರತಕ್ಕೆ ಹೊಸವಲ್ಲ. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ನೇರವಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಲಿಲ್ಲ. ಅವರು ಮೊದಲು ಭಾರತವನ್ನು ಸುತ್ತಿದರು.  ಆ ಹೊತ್ತಿನ ಜನತೆಯ ಸ್ಥಿತಿಗತಿಯನ್ನು ತಿಳಿಯಲು ಹವಣಿಸಿದರು. ಆ ಯಾತ್ರೆ ಅವರ ಒಳ-ಹೊರಗುಗಳನ್ನು ಸಂಪೂರ್ಣವಾಗಿ ಬದಲಿಸಿತು.

ನಂತರದ ಯಾತ್ರೆಗಳು ಭಾರತೀಯರ ನೆನಪಿನಲ್ಲಿ ಉಳಿದಿವೆ. ಅಡ್ವಾಣಿ ನಡೆಸಿದ ರಥಯಾತ್ರೆ ಮತ್ತು ಅದು ತಂದುಕೊಟ್ಟ ಪರಿಣಾಮಗಳನ್ನು ಈಗಲೂ ನಾವೆಲ್ಲ ಅನುಭವಿಸುತ್ತಲೇ ಇದ್ದೇವೆ. ರಾಹುಲ್‌ ಅವರ ಯಾತ್ರೆ ಒಂದರ್ಥದಲ್ಲಿ ಅಡ್ವಾಣಿ ಯಾತ್ರೆಗೆ ಮುಖಾಮುಖಿಯಾಗಿ ನಿಂತಿರುವ ಯಾತ್ರೆಯಂತೆಯೂ ಕಾಣಿಸುತ್ತಿದೆ. ಈ ಯಾತ್ರೆಯ ನಂತರ ಕಾಂಗ್ರೆಸ್‌ ಮಾತ್ರವಲ್ಲ, ಸ್ವತಃ ರಾಹುಲ್‌ ಗಾಂಧಿಯವರೇ ಬೇರೆಯ ರೂಪವನ್ನು, ವ್ಯಕ್ತಿತ್ವವನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

2014ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಭರ್ಜರಿ ಬಹುಮತದಿಂದ ಹಿಡಿಯಿತು. ಮೋದಿ ಪ್ರಧಾನಿಯಾದರು. ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದಲ್ಲಿ ಇಂಥ ಅವಕಾಶಗಳು ಇವೆ. ಯಾವ ಪಕ್ಷವೂ ಅಧಿಕಾರಕ್ಕೆ ಬರುವ, ಯಾರೂ ಪ್ರಧಾನಿಯಾಗುವ ಸಮಾನ ಅವಕಾಶಗಳನ್ನು ನಾವು ಒಪ್ಪಿಕೊಂಡಿರುವ, ಡಾ. ಬಿ.ಆರ್‌. ಅಂಬೇಡ್ಕರ್‌ ನೀಡಿರುವ ಸಂವಿಧಾನ  ಕಲ್ಪಿಸಿಕೊಟ್ಟಿದೆ. ಕೆಲವು ರಾಜ್ಯಗಳಲ್ಲೂ ಬಿಜೆಪಿ ಅಧಿಕಾರವನ್ನು ಹಿಡಿದು, ʼಡಬ್ಬಲ್‌ ಎಂಜಿನ್‌ʼ ಸರ್ಕಾರಗಳ ಹುಟ್ಟಿಗೆ ಕಾರಣವಾಗಿದೆ.

ಈ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಭಾರತ ಪಡೆದುಕೊಂಡ  ರೂಪಾಂತರಗಳನ್ನು ನಾವೆಲ್ಲ ನೋಡಿದ್ದೇವೆ; ಅದರ ಕರಾಳ ನರ್ತನವನ್ನೂ ಕಂಡಿದ್ದೇವೆ. ಅಧಿಕಾರ ವಿಕೇಂದ್ರೀಕರಣದ ಬದಲು ಮೂರ್ನಾಲ್ಕು ವ್ಯಕ್ತಿಗಳಲ್ಲೇ ಅಧಿಕಾರದ ಜುಟ್ಟು ಇರುವುದನ್ನೂ ಗಮನಿಸಿದ್ದೇವೆ. ಅದೇ ರೀತಿ ಈ ದೇಶದ ಸಾಮಾನ್ಯ ಜನರನ್ನು ಹಿಂಡುವ, ಬೆರಳೆಣಿಕೆಯ ಬಂಡವಾಳಗಾರರನ್ನು ಜಗತ್ತಿನ ಅತಿ ಶ್ರೀಮಂತರ ಪಟ್ಟಿಗೆ ಸೇರಿಸಿದ  ಅಂದರ್‌ ಬಾಹರ್‌ ಆಟವನ್ನು ಭಾರತೀಯರು ಕಾಣಬೇಕಾಯಿತು. ಇದು ಕೇವಲ ಆಟವಲ್ಲ; ಜನರ ಬದುಕನ್ನು ನುಂಗುವ ಅಟ್ಟಹಾಸದ ರಾಕ್ಷಸೀ ಕೃತ್ಯ ಎಂಬುದನ್ನೂ ನಾವೆಲ್ಲ ಅನುಭವಿಸಬೇಕಾಯಿತು. ಬೆಲೆಗಳ ಏರಿಕೆಯ ಬಿಸಿ, ನಿರುದ್ಯೋಗದ ಬಿಸಿ, ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿಯನ್ನು ಗಾಳಿಗೆ ತೂರಿದ ಬಿಸಿ, ಸಮುದಾಯಗಳನ್ನು ಒಡೆದು ದ್ವೇಷವನ್ನು ಬಿತ್ತಿದ ಬಿಸಿ, ಸ್ವಾತಂತ್ರವೆಂಬುದು ಕೆಲವರ ಸ್ವೇಚ್ಛಾಚಾರವಾದ ಬಿಸಿ, ಸರ್ಕಾರದ ಆಡಳಿತ ಯಂತ್ರವನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಬಳಸಿಕೊಂಡ ಬಿಸಿ-ಹೀಗೆ ಬಗೆಬಗೆಯ ಬಿಸಿಗಳಿಗೆ ಮೈಕೊಟ್ಟಿದ್ದೇವೆ. ಇದು ಕೇವಲ ಬಿಸಿಯಲ್ಲ;  ಇಡೀ ಭಾರತವೇ  ಕುದಿವ ಕಡಾಯಿಯಲ್ಲಿ ಬೇಯುವ ಸಹಿಸಲಸಾಧ್ಯವಾದ ನೋವಿನ ಅನುಭವ.

ಇದರ ಮುಖಗಳು ಇನ್ನು ಅಸಂಖ್ಯ. ಇ.ಡಿ, ಸಿಬಿಐ, ಎನ್‌ ಐ ಎ, ಇತ್ಯಾದಿ ಎಲ್ಲ ತನಿಖಾ  ಸಂಸ್ಥೆಗಳ ಸ್ವತಂತ್ರ ಅಸ್ತಿತ್ವವನ್ನೇ ನಾಶಮಾಡಲಾಯಿತು. ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆ, ಅಕ್ರಮ ಸಂಪತ್ತಿನ ವಿರುದ್ಧದ ತನಿಖೆ ಇತ್ಯಾದಿ ನೆಪಗಳನ್ನು ಹೇಳಿ ತನಗಾಗದವರನ್ನು ಹಿಂಸಿಸಲು, ಟೀಕಾಕಾರನ್ನು ಬಗ್ಗುಬಡಿಯಲು ನೋಡಲಾಯಿತು. ಇಂಥ ತನಿಖೆಗಳಿಗೆ ಒಳಗಾಗಿ ಹಿಂಸೆ ಅನುಭವಿಸಿದವರು ಯಾರು ಎಂಬುದನ್ನು ಗಮನಿಸಿದರೆ ತನಿಖೆಗಳ ಹಿಂದಿನ ಗುಟ್ಟು ಮತ್ತು ಉದ್ದೇಶ ಸುಲಭವಾಗಿ ತಿಳಿಯುತ್ತದೆ. ಜನ ಪ್ರತಿನಿಧಿಗಳನ್ನು ಗುಪ್ತವಾಗಿ ಕೊಳ್ಳುವ, ಅವರನ್ನು ಮಾರಾಟದ ಸರಕಿನಂತೆ ಬಳಸುವ, ಆ ಮೂಲಕ ಸರ್ಕಾರಗಳನ್ನು ಬೀಳಿಸು ಮತ್ತು ಏಳಿಸುವ ಆಟಗಳೂ ಹೆಚ್ಚಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿಮಾಡುವ ಇಂಥ ಆಟಗಳು ಯಾವಾಗಿನಿಂದ ಹೆಚ್ಚಾದವು ಮತ್ತು ಇದರ ಹಿಂದಿರುವ ಹಣದ ಮೊತ್ತ, ಸಂಪತ್ತಿನ ಅಗಾಧ ಪ್ರಮಾಣ ಎಂಥದು, ಯಾರ ಕೈವಾಡ ಇದೆಲ್ಲದರ ಹಿಂದಿದೆ, ಸಾಮಾನ್ಯ ಜನತೆಯ ಬದುಕು ಯಾಕೆ ದುರ್ಭರವಾಗುತ್ತಿದೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡರೆ ಸತ್ಯದ ಅನೇಕ ಮುಖಗಳು ಕಾಣಿಸುತ್ತವೆ.

ಒಂದೆಡೆ ಪ್ರಜಾತಂತ್ರ ವ್ಯವಸ್ಥೆಯೇ ಬುಡಮೇಲಾಗುತ್ತಿದ್ದರೆ, ಮತ್ತೊಂದು ಕಡೆ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ಕಾಳಜಿಗಳೇ  ಮಾಯವಾಗುತ್ತಿವೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿದ, ಟೀಕೆ ಮಾಡಿದ ಬುದ್ಧಿಜೀವಿಗಳು, ಕಲಾವಿದರು, ಬರಹಗಾರರು, ವಕೀಲರು, ಸಾಮಾಜಿಕ ಕಾರ್ಯಕರ್ತರು ವಿನಾಕಾರಣ ಜೈಲು ಸೇರಬೇಕಾದ ಘೋರ ಪರಿಸ್ಥಿತಿಯನ್ನು  ಹುಟ್ಟುಹಾಕಲಾಗಿದೆ. ಮಾಧ್ಯಮಗಳೂ ಮುಕ್ತವಾಗಿ ಮಾತನಾಡದಂಥ, ಕಾರ್ಯ ನಡೆಸದಂಥ ಸ್ಥಿತಿಯೂ ಉಂಟಾಗಿದೆ. ತೋಳ್ಬಲ ಮತ್ತು ಅಪಾರ ಪ್ರಮಾಣದ ಹಣ ಇಂಥ ಕೃತ್ಯಗಳ ಹಿಂದಿರುವುದು ಗುಟ್ಟಿನ ಸಂಗತಿಯಲ್ಲ. ಆಡಳಿತ ಯಂತ್ರವನ್ನು ರೂಪಾಂತರಿಸಿರುವುದು, ನ್ಯಾಯಾಂಗವನ್ನು ಕೈವಶ ಮಾಡಿಕೊಳ್ಳಲು ಬಲೆ ಬೀಸುತ್ತಿರುವುದು ಇತ್ಯಾದಿ ಪ್ರಜಾತಂತ್ರ ವಿರೋಧಿ ನಡೆಗಳನ್ನೂ ಇವತ್ತು ನೋಡಬಹುದಾಗಿದೆ.

ಇನ್ನೂ ಘೋರ ಅಪರಾಧವೆಂದರೆ, ಜನರನ್ನು ಒಡೆಯುತ್ತಿರುವ ಪ್ರಯತ್ನ. ಭಾರತವೇ ಕೂಡಿ ಬಾಳಲು ಹೆಸರಾದದ್ದು. ಬಹುಮುಖೀ ಸಂಸ್ಕೃತಿ ಇದರ ಜೀವಾಳ. ಭಾಷೆ, ಪ್ರದೇಶ, ಧರ್ಮ, ಸಂಸ್ಕೃತಿ ಇತ್ಯಾದಿ ಹತ್ತಾರು ಅಂಶಗಳು ಬೇರೆಬೇರೆಯಾಗಿದ್ದರೂ ನಾವೆಲ್ಲ ಭಾರತೀಯರಾಗಿ ಬಾಳುವ ಪ್ರಚಂಡ ಶಕ್ತಿಯೊಂದು ನಮ್ಮೊಳಗೇ ಸಾವಿರಾರು ವರ್ಷಗಳಿಂದ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಇದನ್ನೆಲ್ಲ ನಾಶಮಾಡಿದಂತೆ  ಇವತ್ತು ದ್ವೇಷವನ್ನು ಬಿತ್ತಿ ಜನರನ್ನು ಒಡೆಯಲಾಗುತ್ತಿದೆ. ಅಹಿಂಸೆಯನ್ನು ತುಂಡರಿಸಿ ಹಿಂಸೆಗೆ ದಾರಿ ಮಾಡಿಕೊಡಲಾಗುತ್ತಿದೆ. ಭಾಷೆ, ಧರ್ಮ, ಪ್ರದೇಶ, ಸಂಸ್ಕೃತಿ ಎಲ್ಲವೂ ಆಯುಧಗಳಾಗಿ ಬಳಕೆಯಾಗಿ ಸಹಬಾಳ್ವೆಯನ್ನು ಕಡಿದು, ಹಿಂಸೆಯೇ ತಾಂಡವವಾಡುವ ಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ.

ಇದು ದುರ್ಭರ ಭಾರತ; ವಿಷವುಂಡ ಭಾರತ; ಒಡೆದ ಭಾರತ. ಇದನ್ನು ಜೋಡಿಸುವ ಯಾತ್ರೆ ಯಾರೇ ಮಾಡಲಿ, ನಮಗೆಲ್ಲ ಕೈಜೋಡಿಸಲು ಒಂದು ಅಪರೂಪದ ಅವಕಾಶ. ಎಲ್ಲ ವಿರೋಧ ಪಕ್ಷಗಳೂ ಸೇರಿ ಈ ಜೋಡೊ ಯಾತ್ರೆಯನ್ನು ಮಾಡಿದ್ದರೆ, ಇನ್ನೂ ಅರ್ಥಪೂರ್ಣವಾಗಿತ್ತು. ಇದು ಸಾಧ್ಯವಾಗದ ಕನಸೇನಲ್ಲ. ಆದರೆ ಸದ್ಯ, ಎದುರಿಗಿರುವ ವಾಸ್ತವ ಕಾಂಗ್ರೆಸ್‌, ರಾಹುಲ್‌ ರೂಪಿಸಿರುವ ಯಾತ್ರೆ. ಈ ಯಾತ್ರೆಗೆ ಕೈಜೋಡಿಸುವುದೆಂದರೆ ನಾವು ಕಾಂಗ್ರೆಸ್‌ ಪಕ್ಷದ ಜೊತೆ ಕೈಜೋಡಿಸಿದಂತಲ್ಲ; ಅದರ ಸಿದ್ಧಾಂತದ ಜೊತೆಗೆ, ಕಾರ್ಯಕ್ರಮದ ಜೊತೆ ಕೈಜೋಡಿಸಿದಂತೆಯೂ ಅಲ್ಲ. ಇದೊಂದು ಸದಾಶಯದ, ಸದ್ಭಾವನೆಯ, ಜೀವಪರ ಯಾತ್ರೆ. ನಾಗರಿಕ ಜಗತ್ತಿನ ಅನೇಕ ಗಣ್ಯರು ಯಾತ್ರೆಯ ಜೊತೆಗೂಡಿ ಹೆಜ್ಜೆ ಹಾಕಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಮಹಿಳೆಯರು, ಯುವಕರು, ವಿಭಿನ್ನ ಧಾರ್ಮಿಕ ನಂಬಿಕೆಯವರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಸಾಥ್‌ ನೀಡಿ ಬೆಂಬಲ ನೀಡಿದ್ದಾರೆ. ಭಾರತವನ್ನು ಜೋಡಿಸುವ, ಜನರನ್ನು ಕೂಡಿಸುವ, ಬದುಕನ್ನು ಸಹನೀಯ ಮಾಡುವ ಕೆಲಸ ದೊಡ್ಡದು. ಅದನ್ನು ನಾವು ಬೆಂಬಲಿಸಬೇಕು. ಆ ಮೂಲಕ ದೇಶವನ್ನು ಮತ್ತು ಜನರನ್ನು ಒಡೆಯುವ ಶಕ್ತಿಗಳನ್ನು ಹತ್ತಿಕ್ಕಬೇಕು. ಅದು ನಮ್ಮೆಲ್ಲರ ಕರ್ತವ್ಯ ಕೂಡಾ.

  • ಜಿ.ಪಿ.ಬಸವರಾಜು

(ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿಗಳು ಮತ್ತು ಹಿರಿಯ ಪತ್ರಕರ್ತರು)


ಇದನ್ನೂ ಓದಿ: ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಜಿ.ಪಿ.ಬಸವರಾಜು ಅವರ ಈ ಲೇಖನ ಅತ್ಯಂತ ಸಕಾಲಿಕ.ಈ ಲೇಖನವನ್ನು ಉದ್ದರಿಸಿಯೇ ಹೇಳುವುದಾದರೆ,

    ನೆನ್ನೆ ದೇವನೂರ ಮಹಾದೇವ ಅವರು ಜೋಡೋ ಪರವಾಗಿ ನಿಂತಿದ್ದೂ ಸಕಾಲಿಕ! ಈ ಬಗ್ಗೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ಇರಲಿ, ಹಾಗೆ ಇದೇ ದೇಬಮವನೂರು ಈ ಹಿಂದೆ ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ದವೂ ನಿಂತಿದ್ದರು! ವಿರೋಧಿಸುವವರು ಇದನ್ನೆಲ್ಲ ಗಣಿಸಿ ಮಾತಾಡಬೇಕು! ಜೋಡೋ ವಿರೋಧಿಸುವುದೆಂದರೆ ಈಗಿರುವ ಜನ ವಿರೋಧಿ ಶಕ್ತಿಗಳನ್ನು/ವ್ಯವಸ್ಥೆಗಳನ್ನು ಬೆಂಬಲಿಸಿದಂತೆ ಎಂಬುದನ್ನೂ ಮರೆಯಬಾರದು. ಆಯಾ ಕಾಲದ ಸೂಕ್ಷ್ಮತೆಗಳನ್ನು ಗ್ರಹಿಸಿ ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ವಿಚಾರವಾದಿಗಳು, ಸಂಸ್ಕೃತಿ ಚಿಂತಕರು, ಪರಿವರ್ತನೆ ಬಯಸುವ ಎಲ್ಲ ರಾಜಕೀಯೇತರ ಮನಸ್ಸುಗಳು ನಿಲ್ಲುತ್ತವೆ; ನಿಂತಿವೆ; ನಿಲ್ಲಲೇಬೇಕಾದ ತುರ್ತಿದು! ಕೇಸರಿ ಕೆಂಪು ಹಳದಿ ಕಣ್ಣುಗಳ ದೃಷ್ಟಿಗಿಂತ ನೀಲಿ ಕಣ್ಣಿನ ದೃಷ್ಟಿಗಳು ಅತ್ಯಂತ ಅಪಾಯಕಾರಿ! ಇವು ಒಂದನ್ನೊಂದು ಹೆಗಲಿಗೆ ಹೆಗಲು ಕೊಟ್ಟು ಸರ್ವಾಧಿಕಾರದ ಹಂಗಿಗೆ ಜೋತು ಬಿದ್ದ ಮನಸ್ಸುಗಳು! ಹಾಗಾಗಿ ಇಂಥ ಕೆಟ್ಟ ಶಕ್ತಿಗಳ ವಿರುದ್ದ ಅಥವಾ ಅವರ ಪರಿವರ್ತನೆಗೆ ರಾಹುಲ್ ಗಾಂಧಿ ಅವರ ಭಾರತ ಐಕ್ಯತೆ ಯಾತ್ರೆಯನ್ನು ನೇರವಾಗಿಯೋ ಅನೇರವಾಗಿಯೋ ಒಟ್ಡಾರೆ ಎಲ್ಲರೂ ಒಗ್ಗೂಡಿ ಬೆಂಬಲಿಸಬೇಕಿದೆ! ಈ ಬಗ್ಗೆ ಪ್ರಸ್ತುತ ಜಿ.ಪಿ.ಬಸವರಾಜು ಅವರ ಈ ಲೇಖನ ವಿಸ್ತೃತವಾಗಿ ಚರ್ಚಿಸಿದೆ.
    *

    ಎಂ.ಜವರಾಜ್

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...