ಮಂಗಳೂರಿನ ಸುರತ್ಕಲ್‌ನ ಅನಧಿಕೃತ ಟೋಲ್ ತೆರವಿಗೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಪ್ರತಿಭಟನಾ ಸ್ಥಳದಿಂದ ಮಂಗಳವಾರ ಬಂಧಿಸಿದ್ದಾರೆ. ಬಂಧನವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದ್ದು ಬಿಜೆಪಿ ಸರಕಾರ ಕೂಡಲೇ ಟೋಲ್ ಗೇಟ್ ತೆರವುಗೊಳಿಸಿ, ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದೆ.
ಟೋಲ್ ವಿರೋಧಿ ಸಮಿತಿ ಸಂಚಾಲಕ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್‌ಐ ನಾಯಕ ಬಿಕೆ ಇಂತಿಯಾಝ್, ಕಾಂಗ್ರೆಸ್ ನಾಯಕ ಮಿಥುನ್ ರೈ, ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ 250ಕ್ಕೂ ಹೆಚ್ಚು ಜನ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸಲು ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವ’ದಲ್ಲಿ ಜನರು ಶಾಂತಿಯುತವಾಗಿ ಪ್ರತಿಭಟಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಬಂಧನ ನಡೆದಿದೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ತಡರಾತ್ರಿ ನೋಟಿಸ್: ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್ ಎಚ್ಚರಿಕೆ
“ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ಶಾಸಕ, ಸಂಸದ ಹಾಗೂ ಸಚಿವರು ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವ ಬದಲಿಗೆ ತುಳುನಾಡಿನ ಜನರ ಮೇಲೆ ದ್ವೇಷ ಸಾಧಿಸುತ್ತಿರುವುದು ಅಕ್ಷಮ್ಯ ಹಾಗೂ ಆಯ್ಕೆ ಮಾಡಿದ ಜನರಿಗೆ ಎಸಗುತ್ತಿರುವ ಮಹಾದ್ರೋಹವಾಗಿದೆ” ಎಂದು ಡಿವೈಎಫ್‌ಐ ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರದ ಸಾರಿಗೆ ಸಚಿವ ನಿತಿನ್ ಗಡ್ಕರಿಯೇ ಸ್ವತಃ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವುದಾಗಿ ಹೇಳಿ, ನಾಲ್ಕು ತಿಂಗಳು ಕಳೆದಿದೆ. ಟೋಲ್ ತೆರವುಗೊಳಿಸದೆ ಜನರನ್ನು ಲೂಟಿ ಮಾಡಲು ಮುಂದಾಗುತ್ತಿರುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ಹೋರಾಟ ಸಮಿತಿಯ ಮುಖಂಡರಿಗೆ ಸರಕಾರ ಮುಚ್ಚಳಿಕೆ ಬರೆದುಕೊಡುವುದು, ಬಾಂಡ್, ಶ್ಯೂರಿಟಿ ಕೊಡಬೇಕು ಎಂದು ಬೆದರಿಸುವ ಜೊತೆಗೆ ಪೂಡಾರಿಗಳ ರೀತಿ ಏಕವಚನ ಬಳಸಿ ಹೋರಾಟ ಹತ್ತಿಕ್ಕಲು ಹೊರಟು ವಿಫಲವಾಗಿದೆ ಎಂದು ಡಿವೈಎಫ್‌ಐ ತಿಳಿಸಿದೆ.
ಜನರ ಪ್ರತಿರೋಧವನ್ನು ಹತ್ತಿಕ್ಕಲು ಹೋಗಿ ಸ್ವತಃ ಬಿಜೆಪಿ ಸರಕಾರ ಜನರೆದುರು ಬೆತ್ತಲಾಗಿದೆ ಎಂದು ಹೇಳಿರುವ ಡಿವೈಎಫ್‌ಐ, “ಹೋರಾಟಗಾರರನ್ನು ಬಂಧಿಸಿದರೆ, ಬೆದರಿಕೆ ತಂತ್ರ ಅನುಸಿರಿದರೆ ಹೋರಾಟ ಹತ್ತಿಕ್ಕಬಹುದು ಎಂದು ಬಿಜೆಪಿ ಸರಕಾರ ಎಣಿಕೆಯಾದರೆ ಅದು ಅದರ ಭ್ರಮೆ ಮಾತ್ರ. ಈ ಟೋಲ್ ಗೇಟ್ ತೆರವುಗೊಳ್ಳುವವರೆಗೆ ತುಳುನಾಡ ಜನತೆ ಐಕ್ಯತೆಯಿಂದ ಹೋರಾಟ ಮುಂದುವರೆಸುತ್ತದೆ” ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸಂಗಾತಿಗಳೇ, ನಾವು ಆಸ್ತಿ ಸಂಬಂಧಗಳ ಕುರಿತು ಮಾತನಾಡೋಣ : ಬರ್ಟೋಲ್ಟ್ ಬ್ರೆಕ್ಟ್
ಕೂಡಲೇ ಈ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಜನತೆ ಮುಂದಾಗಬೇಕುತ್ತದೆ ಎಂದು ಡಿವೈಎಫ್ಐ ರಾಜ್ಯ ಸರಕಾರಕ್ಕೆ ಎಚ್ಚರಿಸಿದೆ.
ಈ ಹೋರಾಟವನ್ನು ಮುರಿಯಲು, ಜನರ ಹಿತಾಸಕ್ತಿಯ ಬದಲು ಖಾಸಗಿ ನವಯುಗ ಕಂಪೆನಿಯ ಹಿತಾಸಕ್ತಿ ಕಾಪಾಡುತ್ತಿರುವ ಬಿಜೆಪಿ ಸರಕಾರದ ನೀತಿಯನ್ನು ಖಂಡಿಸಿ, ಅನಧಿಕೃತ ಟೋಲ್ ತೆರವುಗೊಳಿಸಲು ಮತ್ತು ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಲು ರಾಜ್ಯದ ಜನತೆ ಪ್ರತಿರೋಧಕ್ಕೆ ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಕರೆ ನೀಡಿದೆ.


