“ಮೈಸೂರಿನ ಯುವರಾಜ ಕಾಲೇಜಿನ ವಿದ್ಯಾರ್ಥಿ ನಾನು. ಪರಿಶಿಷ್ಟ ಜಾತಿಗೆ ಸೇರಿದ್ದು ‘ಆಲ್ ಅದರ್ ಕಾಂಬಿನೇಷನ್’ನಲ್ಲಿ ‘ಬಿ’ ಸ್ಕೀಮ್ ಅಡಿಯಲ್ಲಿ ಪ್ರವೇಶಾತಿ ಪಡೆದಿದ್ದೆ. ನಮಗೆ ನೀಡಿದ್ದ ಶುಲ್ಕಪಟ್ಟಿಯಲ್ಲಿ ನಿಗದಿಪಡಿಸಿದಂತೆ ರೂ. 2,50,000ಕ್ಕಿಂತ ಕಡಿಮೆ ವಾರ್ಷಿಕ ಆದಾಯದ ಅನ್ವಯ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರವೇಶಾತಿ ವೇಳೆ ತಲಾ ರೂ. 9,030 ಶುಲ್ಕವನ್ನು ಕಟ್ಟಿದ್ದೆ. ಆದರೆ ಮೂರನೇ ವರ್ಷದ ಪ್ರವೇಶಾತಿಗೆ ಕಾಲೇಜಿಗೆ ಹೋದಾಗ ರೂ. 60 ಸಾವಿರಕ್ಕಿಂತ ಹೆಚ್ಚಿನ ಶುಲ್ಕವನ್ನು ಪಾವತಿಸುವಂತೆ ಹೇಳುತ್ತಿದ್ದಾರೆ. ನನಗೆ ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು ಪಾವತಿಸಲು ಆಗುತ್ತಿಲ್ಲ. ಹೀಗಾಗಿ ಕಾಲೇಜು ತೊರೆಯಲು ನಿರ್ಧರಿಸಿದ್ದೇನೆ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ದಲಿತ ವಿದ್ಯಾರ್ಥಿ.
“ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ಬಾಕಿ ಉಳಿದಿರುವ ಶುಲ್ಕವನ್ನು ಸೇರಿಸಿಕೊಡಬೇಕು. ನೀವು 9,000 ರೂ. ಕಟ್ಟಿದ್ದೀರಿ. ಒಟ್ಟು 26,000 ರೂ. ಶುಲ್ಕವನ್ನು ಕಾಲೇಜಿಗೆ ಪ್ರತಿವರ್ಷ ಪಾವತಿ ಮಾಡಬೇಕಿತ್ತು. ನಿಮ್ಮ ಖಾತೆಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ಸರ್ಕಾರ ಹಣ ಸಂದಾಯ ಮಾಡಿರುತ್ತದೆ. ಅದನ್ನು ನಮಗೆ ತಂದುಕೊಡಬೇಕು ಎಂದು ಕಾಲೇಜಿನಿಂದ ಸಮರ್ಥನೆ ಬರುತ್ತಿದೆ. ಆದರೆ ನಾನು ಹಾಸ್ಟೆಲ್‌ಗೆ ಸೇರ್ಪಡೆಯಾಗಿದ್ದೆ. ನನ್ನ ವಿದ್ಯಾರ್ಥಿವೇತನವು ಹಾಸ್ಟೆಲ್‌ಗೆ ಹೋಗಿರುತ್ತದೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸವಲತ್ತುಗಳಿರುತ್ತವೆ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಸರ್ಕಾರ ನಮ್ಮನ್ನು ನಯವಾಗಿ ವಂಚಿಸಿದೆ. ಕಾಲೇಜಿಗೆ ಪೂರ್ಣ ಶುಲ್ಕ ಕಟ್ಟಬೇಕೆಂದೂ, ಸರ್ಕಾರ ಉಳಿದ ಶುಲ್ಕವನ್ನು ಪಾವತಿಸುವುದಿಲ್ಲವೆಂದೂ ನಾನು ಕಾಲೇಜು ಸೇರುವಾಗಲೇ ಹೇಳಿದ್ದರೆ ನಾನು ಬೇರೆ ದಾರಿ ನೋಡಿಕೊಳ್ಳುತ್ತಿದ್ದೆ. ಆದರೆ ಎರಡು ವರ್ಷ ಓದಿದ ಬಳಿಕ ಈಗ ಏಕಾಏಕಿ ಈ ಸೂಚನೆ ನೀಡುತ್ತಿದ್ದಾರೆ. ಪ್ರಥಮ ವರ್ಷದ ಸೇರ್ಪಡೆಯ ವೇಳೆ ತೋರಿಸಿದ್ದ ಶುಲ್ಕ ಪಟ್ಟಿಯಲ್ಲಿ ಇದ್ಯಾವುದರ ಉಲ್ಲೇಖವಿಲ್ಲ. ಕಾಲೇಜಿನಿಂದ ಯಾವುದೇ ಸೂಚನೆಯನ್ನೂ ನೀಡಿರಲಿಲ್ಲ. ಈಗ ಶುಲ್ಕ ಪಾವತಿಸದಿದ್ದರೆ ಮೂರನೇ ವರ್ಷಕ್ಕೆ ಪ್ರವೇಶಾತಿ ನೀಡುವುದಿಲ್ಲ ಎನ್ನುತ್ತಿದ್ದಾರೆ. ಅನಿವಾರ್ಯವಾಗಿ ನಾನು ಕಾಲೇಜು ತೊರೆಯುತ್ತಿದ್ದೇನೆ. ನನ್ನ ಅಮೂಲ್ಯವಾದ ಎರಡು ವರ್ಷಗಳು ವ್ಯರ್ಥವಾಗುತ್ತಿದೆ” ಎನ್ನುತ್ತಾ ಆ ವಿದ್ಯಾರ್ಥಿ ಕಣ್ಣೀರು ಹಾಕಿದನು.
“ಯುವರಾಜ ಕಾಲೇಜಿಗೆ ‘ಎ’ ಸ್ಕೀಮ್‌ನಲ್ಲಿ ಪ್ರಥಮ ವರ್ಷದ ಬಿ.ಎಸ್‌ಸಿ, ಬಿಬಿಎ, ಬಿಸಿಎ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯುವ, 2,50,000 ರೂ.ಗಿಂತ ಕಡಿವೆ ವಾರ್ಷಿಕ ಆದಾಯವಿರುವ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗೆ ಕೇವಲ 270 ರೂ. ಶುಲ್ಕವಿತ್ತು. ಆದರೆ ಈ ಶುಲ್ಕವನ್ನು ಈಗ ಏಕಾಏಕಿ ಏಳು ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಸಾಮಾನ್ಯ ವಿದ್ಯಾರ್ಥಿಗಳ ಶುಲ್ಕಕ್ಕೂ ಇತರೆ ವಿದ್ಯಾರ್ಥಿಗಳ ಶುಲ್ಕಕ್ಕೂ ಯಾವುದೇ ವ್ಯತ್ಯಾಸವಿಲ್ಲದಂತೆ ಆಗಿದೆ. ದಲಿತರಿಗೆ ಸಾಕಷ್ಟು ಸೌಕರ್ಯಗಳಿರುತ್ತವೆ ಎಂಬುದು ಭ್ರಮೆಯಷ್ಟೇ” ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಇದು ಕೇವಲ ಯುವರಾಜ ಕಾಲೇಜಿನ ಸಮಸ್ಯೆಯಲ್ಲ. ಮೈಸೂರು ವಿವಿಯ ಎಲ್ಲ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲೂ ಬಡ ವಿದ್ಯಾರ್ಥಿಗಳು ಈ ಶೋಷಣೆಗೆ ಈಡಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು, “ಸರ್ಕಾರ ನಮಗೆ ಯಾವುದೇ ವಿದ್ಯಾರ್ಥಿ ವೇತನವನ್ನು ಪಾವತಿ ಮಾಡಿಲ್ಲ. ನಮಗೆ ಇನ್ನೂ ಸ್ಕಾಲರ್‌ಶಿಪ್ ಬಂದಿಲ್ಲ. ಹಣ ಕಟ್ಟದೆ ಕಾಲೇಜಿಗೂ ಸೇರಿಸಿಕೊಳ್ಳುತ್ತಿಲ್ಲ. ಖಾಸಗಿ ಕಾಲೇಜುಗಳಿಗೂ ಸರ್ಕಾರಿ ಕಾಲೇಜುಗಳಿಗೂ ಯಾವ ವ್ಯತ್ಯಾಸವೂ ಇಲ್ಲವಾಗಿದೆ” ಎನ್ನುತ್ತಿದ್ದಾರೆ.
“ಶುಲ್ಕ ಪಾವತಿ ಮಾಡಲು ಶಕ್ತರಾಗದ ಅನೇಕ ಬಡ ವಿದ್ಯಾರ್ಥಿಗಳು ಕಾಲೇಜು ತೊರೆಯಲು ನಿರ್ಧರಿಸಿದ್ದಾರೆ” ಎಂಬ ಆತಂಕವನ್ನು ಹೆಸರು ಹೇಳಲಿಚ್ಛಿಸದ ಮೈಸೂರು ವಿವಿ ಪ್ರಾಧ್ಯಾಪಕರೊಬ್ಬರು ‘ನಾನುಗೌರಿ.ಕಾಂ’ಗೆ ವಿವರಿಸಿದರು. “ಒಬ್ಬ ವಿದ್ಯಾರ್ಥಿ ಕಾಲೇಜು ತೊರೆದು ಹೋಗುತ್ತಿದ್ದ. ವಿಚಾರಿಸಿದಾಗ, ಇಷ್ಟು ಖರ್ಚು ಮಾಡಿ ಓದಿದರೂ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿ ಇಲ್ಲ. ಸ್ವಿಗ್ಗಿಯಲ್ಲೋ, ಜೊಮೊಟೊದಲ್ಲೋ ಬದುಕು ಕಂಡುಕೊಳ್ಳುತ್ತೇನೆ ಎಂದು ತಿಳಿಸಿದ” ಎಂದು ಆ ಪ್ರಾಧ್ಯಾಪಕರು ಆಘಾತ ವ್ಯಕ್ತಪಡಿಸಿದರು.
ಶುಲ್ಕ ಹೆಚ್ಚಳ ವಿರೋಧಿಸಿ ಇತ್ತೀಚೆಗೆ ಸಣ್ಣಮಟ್ಟದಲ್ಲಿ ಎಐಡಿಎಸ್‌ಒ (ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಟೆಂಡ್ ಆರ್ಗನೈಸೇಷನ್) ಮೈಸೂರಿನಲ್ಲಿ ಪ್ರತಿಭಟನೆ ನಡೆಸಿತ್ತು. “ಕಾಲೇಜುಗಳಲ್ಲಿ ಏಕಾಏಕಿ, ಎಲ್ಲಾ ವಿದ್ಯಾರ್ಥಿಗಳಿಗೂ ಮೊದಲನೇ ವರ್ಷದ, ಎರಡನೇ ವರ್ಷದ ಹಾಗೂ ಮೂರನೇ ವರ್ಷದ ಪ್ರವೇಶ ಶುಲ್ಕವನ್ನು ಒಟ್ಟಿಗೆ ಕಟ್ಟಬೇಕೆಂದು ಆದೇಶ ಹೊರಡಿಸಿದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಗೆ ರೂ.16,000, ಮಹಾರಾಜ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿಗೆ ರೂ. 30,000 ಹಾಗೂ ಯುವರಾಜ ಕಾಲೇಜಿನಲ್ಲಿ 30 ರಿಂದ 60 ಸಾವಿರದವರೆಗೆ ಶುಲ್ಕವನ್ನು ಕಟ್ಟಬೇಕೆಂದು ಆದೇಶ ಹೊರಡಿಸಲಾಗಿದೆ” ಎಂದು ಸಂಘಟನೆ ಆಕ್ಷೇಪ ವ್ಯಕ್ತಪಡಿಸಿತ್ತು.

“ಸರ್ಕಾರಿ ಶಾಲಾ ಕಾಲೇಜಿನಲ್ಲಿ ಓದುತ್ತಿರುವುದು ಬಹುತೇಕ ವಿದ್ಯಾರ್ಥಿಗಳು ಬಡವರು, ರೈತರು, ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಇವರಿಗೆ ಏಕಾಏಕಿ ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ಎಂದು ಹೇಳಿದರೆ ಹೇಗೆ ಕಟ್ಟುವುದು?” ಎಂದು ಸಂಘಟನೆ ಪ್ರಶ್ನಿಸಿತ್ತು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷರಾದ ಸುಭಾಷ್, “ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಉದ್ದೇಶವಿಲ್ಲಿದೆ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಶುಲ್ಕ ರೂಪದಲ್ಲಿ ಕಾಲೇಜಿಗೆ ಹಾಗೂ ಹಾಸ್ಟೆಲ್ ಸೇರುತ್ತಿತ್ತು. ಉಳಿಕೆ ಹಣವನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು. ಈಗ ನೇರ ವಿದ್ಯಾರ್ಥಿಗಳ ಖಾತೆಗೆ ಹಣ ಹಾಕಿರುತ್ತಾರೆ ಎನ್ನಲಾಗುತ್ತಿದೆ. ಸರ್ಕಾರ ಮತ್ತು ಕಾಲೇಜಿನ ನಡುವೆ ವ್ಯವಹಾರ ನಡೆದಾಗ ಸರ್ಕಾರ ಕಡ್ಡಾಯವಾಗಿ ಹಣವನ್ನು ಪಾವತಿಸಲೇಬೇಕಿರುತ್ತದೆ. ಆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವ ಸರ್ಕಾರ, ವಿದ್ಯಾರ್ಥಿಗಳ ಖಾತೆಗೆ ಹಣ ಹಾಕುವುದಾಗಿ ನಂಬಿಸಿರುವ ಸಾಧ್ಯತೆ ಇದೆ. ಕೆಲವು ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಬಂದಿದೆ ಎನ್ನುತ್ತಾರೆ, ಕೆಲವು ವಿದ್ಯಾರ್ಥಿಗಳು ಬಂದಿಲ್ಲ ಎನ್ನತ್ತಿದ್ದಾರೆ. ಇದರ ವಿರುದ್ಧ ವಿದ್ಯಾರ್ಥಿಗಳು ಒಂದಾಗಿ ಧ್ವನಿ ಎತ್ತಬೇಕಿದೆ” ಎಂದು ಆಶಿಸಿದರು.
‘ನಾನುಗೌರಿ.ಕಾಂ’ಗೆ ಯುವರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋಧಾ ಅವರು ಪ್ರತಿಕ್ರಿಯಿಸಿ, “ನಮ್ಮದು ಸ್ವಾಯತ್ತ ಕಾಲೇಜು. ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಬೇಕಾಗಿದೆ. ವಿದ್ಯಾರ್ಥಿ ವೇತನ ಬಂದಿದೆಯೋ ಇಲ್ಲವೋ ಎಂದು ವಿದ್ಯಾರ್ಥಿಗಳು ಗಮನ ಹರಿಸುತ್ತಿಲ್ಲ. ಸಮಾಜ ಇಲಾಖೆ ಇಲಾಖೆಯಲ್ಲಿ ಒತ್ತಡ ತರಬೇಕು. ನೇರವಾಗಿ ಕಾಲೇಜಿಗೆ ಹಣ ಪಾವತಿಸಿ ಎಂದು ತಿಳಿಸಬೇಕು. ಅಥವಾ ತಮ್ಮ ಖಾತೆಗೆ ಹಣ ಬಂದಿದ್ದರೆ ಸೂಚನೆಗಳನ್ನು ನೀಡುವಂತೆ ಆಗ್ರಹಿಸಬೇಕು” ಎಂದು ತಿಳಿಸಿದರು.
“ಎರಡು ಕಂತುಗಳಲ್ಲೇ ಶುಲ್ಕ ಪಾವತಿ ಮಾಡಲು ಅವಕಾಶ ನೀಡಿದ್ದೇವೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿಲ್ಲ” ಎಂದರು.
ಇದನ್ನೂ ಓದಿರಿ: ದಲಿತ ಶಾಸಕನಿಗೆ ಅಶ್ಲೀಲವಾಗಿ ನಿಂದಿಸಿ, ದಲಿತ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ ಬಿಜೆಪಿ ಶಾಸಕ
ಬಡ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕದ ಕುರಿತು ಮೈಸೂರು ವಿವಿ ಕುಲಪತಿ ಜಿ.ಹೇಮಂತ್‌ಕುಮಾರ್, ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲಾ ಬ್ರಾಗ್ಸ್ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಲು ಯತ್ನಿಸಿತು. ಆದರೆ ಕರೆಯನ್ನು ಸ್ವೀಕರಿಸಲಿಲ್ಲ.
ಒಂದೆಡೆ ಎಸ್.ಟಿ., ಎಸ್.ಟಿ.ಗಳ ಮೀಸಲಾತಿಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಅದೇ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಿಸಿ ಅಥವಾ ವಿದ್ಯಾರ್ಥಿ ವೇತನವನ್ನು ಸಮರ್ಪಕವಾಗಿ ಬಿಡುಗಡೆಯೂ ಮಾಡದೆ ವಂಚನೆಗೈಯುತ್ತಿದೆ. ಸಾರ್ವಜನಿಕವಾಗಿ ಬಿಡುಗಡೆಯಾಗದ, ಸದನದಲ್ಲಿ ಚರ್ಚೆಯೂ ಆಗದ ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ಸಮಿತಿಯ ವರದಿಯನ್ನು ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದೆ. ‘ಎಸ್‌ಸಿ, ಎಸ್‌ಟಿಗಳಿಗೆ ದೀಪಾವಳಿ ಗಿಫ್ಟ್’ ಎಂದೆಲ್ಲ ಕೆಲ ಮಾಧ್ಯಮಗಳು ಅತಿರಂಜಕವಾಗಿ ವರದಿ ಮಾಡುತ್ತಿವೆ. ವಾಸ್ತವದಲ್ಲಿ ದಲಿತ ವಿದ್ಯಾರ್ಥಿಗಳ ಬದುಕನ್ನು ಸರ್ಕಾರ ಕತ್ತಲೆಗೆ ತಳ್ಳುತ್ತಿದೆ!



ಅಹಿಂದ ವರ್ಗದವರು ವಿದ್ಯಾವಂತರಾಗಬಾರದು ಎಂಬ ಮನುವಾದಿಗಳ ಹಿಡನ್ ಅಜೆಂಡಾ, ಅತ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿದೆ.
ಬಡ ವಿದ್ಯಾರ್ಥಿಗಳ ವಿದ್ಯೇ ಗಗನ ಕುಸುಮ ಮಾಡುತಿರುವ ಸರ್ಕಾರ
ಕೇವಲ ಬಾಯಿಮಾತಿನಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ವಿದ್ಯಾರ್ಥಿ ಸಮೂಹದ ಬಗ್ಗೆ ಕಾಳಜಿ ತೋರುವುದಲ್ಲ, ಶೈಕ್ಷಣಿಕ ವಾಗಿ ಮುಂದೆ ಬರುವುದಕ್ಕೆ ಪ್ರೋತ್ಸಾಹ ನೀಡುವಂತ ಕ್ರಮ ಸರ್ಕಾರದ್ದಾಗಿರಬೇಕು, ಆದರೆ ಸನಾತನವಾದಿಗಳು, ಮನುವಾದಿಗಳಿಂದ ಇದನ್ನು ನೀರೀಕ್ಷಿಸಲಾಗದು, ಇದಕ್ಕೆ ಸಂಘಟಿತ ಹೋರಾಟದಿಂದ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಬಹುದು.