Homeಕರ್ನಾಟಕವಿವಿ ಅಧಿಕಾರ: ರಾಜ್ಯಪಾಲರ ಯಜಮಾನಿಕೆ ಮತ್ತು ರಾಜ್ಯ ಸರ್ಕಾರಗಳ ವಿರೋಧದ ಸುತ್ತ ಚರ್ಚೆ

ವಿವಿ ಅಧಿಕಾರ: ರಾಜ್ಯಪಾಲರ ಯಜಮಾನಿಕೆ ಮತ್ತು ರಾಜ್ಯ ಸರ್ಕಾರಗಳ ವಿರೋಧದ ಸುತ್ತ ಚರ್ಚೆ

- Advertisement -
- Advertisement -

ಭಾರತದ ಭವಿಷ್ಯ ಅದರ ಶಾಲಾ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎಂದಿತ್ತು ಕೊಠಾರಿ ಆಯೋಗ. ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಮತ್ತು ಅತ್ಯುತ್ತಮ ಸಂಶೋಧನೆಗಳನ್ನೊಳಗೊಂಡ ಉನ್ನತ ಶಿಕ್ಷಣ ಆಧುನಿಕ ಮತ್ತು ಬಹುತ್ವದ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯವಾಗಬಲ್ಲವು. ಈ ನಿಟ್ಟಿನಲ್ಲಿ ಭಾರತ ಒಂದು ಮಟ್ಟದ ಪ್ರಯತ್ನ ಮಾಡಿದ್ದರೂ ನಿರೀಕ್ಷಿತ ಸಾಧನೆ ಆಗಿಲ್ಲ. ಈಗಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು ಆಳುವವರ ಹೊಣೆಗಾರಿಕೆಯಾಗಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಹಲವು ಸಮಸ್ಯೆಗಳ ಸುಳಿಯಲ್ಲಿ ದೇಶದ ಉನ್ನತ ಶಿಕ್ಷಣ ಸಿಲುಕಿರುವುದು ದುರಂತ.

ಇತ್ತೀಚಿನ ದಿನಗಳಲ್ಲಿ ಹಲವಾರು ಬಿಜೆಪಿಯೇತರ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರ ಮತ್ತು ಆ ರಾಜ್ಯಗಳ ರಾಜ್ಯಪಾಲರ ನಡುವೆ ಭಿನ್ನಾಭಿಪ್ರಾಯಗಳು ತೀವ್ರವಾಗುತ್ತಿದೆ. ಅದರಲ್ಲಿಯೂ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯ ವಿಚಾರದಲ್ಲಿ ತಿಕ್ಕಾಟ ತೀವ್ರವಾಗಿದೆ. ಸರ್ಕಾರದ/ಮುಖ್ಯಮಂತ್ರಿಗಳ ಪ್ರಸ್ತಾಪವನ್ನು ರಾಜ್ಯಪಾಲರು ನಿರಾಕರಿಸುತ್ತಿರುವುದರಿಂದ ಕೆಲ ರಾಜ್ಯಗಳು ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿ ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಅದಕ್ಕೆ ವ್ಯತಿರಿಕ್ತವಾಗಿ ಕೇರಳ ರಾಜ್ಯಪಾಲರ ಸೂಚನೆಯಂತೆ ಉಪಕುಲಪತಿ ಆಯ್ಕೆ ಸಮಿತಿಗೆ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಸೆನೆಟ್ ಒಪ್ಪದ ಕಾರಣ, ಅಲ್ಲಿನ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್‌ರವರು ಸರ್ಕಾರದಿಂದ ನಾಮನಿರ್ದೇಶನಗೊಂಡ 15 ಸೆನೆಟ್ ಸದಸ್ಯರನ್ನು ವಜಾಗೊಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಯುಜಿಸಿ ನಿಯಮಾವಳಿಗಳನ್ನು ಉಲ್ಲೇಖಿಸಿ ವಿವಿಗೆ ವಿ.ಸಿಗಳನ್ನು ನೇಮಿಸುವ ಅಧಿಕಾರ ತನಗೆ ಮಾತ್ರ ಇದೆ ಎಂದು ಹೇಳಿ ಪಿಣರಾಯಿ ಸರ್ಕಾರ ನೇಮಿಸಿದ್ದ 9 ವಿ.ಸಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ತಾಕೀತು ಮಾಡಿದ್ದಾರೆ.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌

ಇನ್ನೊಂದೆಡೆ ಸುಪ್ರೀಂ ಕೋರ್ಟ್ ಕೂಡ ಕೇರಳದ ಎ.ಪಿ.ಜೆ ಅಬ್ದುಲ್ ಕಲಾಂ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯದ ನೇಮಕಾತಿಯನ್ನು ಅಸಿಂಧು ಎಂದು ಕರೆದಿದೆ. “ಸರ್ಕಾರವು ವಿ.ವಿಯ ಕುಲಪತಿಗಳ ಹುದ್ದೆಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ಹೆಸರುಗಳನ್ನೊಳಗೊಂಡ ಪ್ಯಾನಲ್ ಅನ್ನು ಕಳುಹಿಸದೆ ಕೇವಲ ಒಬ್ಬರ ಹೆಸರನ್ನು ಕಳಿಸಿದರೆ ಆ ನೇಮಕಾತಿಯು ಅಕ್ರಮವಾಗುತ್ತದೆ” ಎಂದು ತೀರ್ಪು ನೀಡಿದೆ.

ಇದೇ ಸಂದರ್ಭದಲ್ಲಿ ರಾಜ್ಯ ವಿಶ್ವವಿದ್ಯಾನಿಲಯಗಳ ಕುಲಪತಿಗಳನ್ನು (ವಿ.ಸಿ) ನೇಮಿಸುವ ಅಧಿಕಾರವನ್ನು ರಾಜ್ಯಪಾಲರಿಂದ ಹಿಂತೆಗೆದುಕೊಳ್ಳುವ ನಿರ್ಣಯ ಕೈಗೊಳ್ಳುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಮಹಾರಾಷ್ಟ್ರ ರಾಜ್ಯ ಶಾಸಕಾಂಗವು ಇತ್ತೀಚೆಗೆ ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಕಾಯಿದೆ 2021ಅನ್ನು ಅಂಗೀಕರಿಸಿದ್ದು ಆ ಮೂಲಕ ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿದೆ. ಗುಜರಾತ್‌ನಲ್ಲಿ ರಾಜ್ಯ ಸರ್ಕಾರವೇ ಕುಲಪತಿಗಳ ನೇಮಕಾತಿಯನ್ನು ಮಾಡುತ್ತಿದೆ. ಈ ಬೆನ್ನಲ್ಲೇ ಪಶ್ಚಿಮ ಬಂಗಾಳ, ಕೇರಳ, ದೆಹಲಿ ಮತ್ತು ಪಂಜಾಬ್ ರಾಜ್ಯಗಳು ರಾಜ್ಯಪಾಲರಿಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿಯ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವರ್ಗಾಯಿಸಲು ಮಸೂದೆಗಳನ್ನು ಮಂಡಿಸಲು ತಯಾರಾಗಿವೆ.

ಇದನ್ನೂ ಓದಿ : ‘ವಿಶ್ವವಿದ್ಯಾಲಯದ ವಿರುದ್ಧ ಯುದ್ಧ…”: ರಾಜ್ಯಪಾಲರ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಆದರೆ ಶಿಕ್ಷಣದ ಹೆಚ್ಚಿನ ಜವಾಬ್ದಾರಿಯನ್ನು ರಾಜ್ಯಗಳು ವಹಿಸಿಕೊಂಡಿವೆ. ಆಯಾ ರಾಜ್ಯಗಳ ವಿಶ್ವವಿದ್ಯಾಲಯಗಳ ಕಾಯ್ದೆಗಳು ರಾಜ್ಯಪಾಲರನ್ನು ಕುಲಾಧಿಪತಿಯನ್ನಾಗಿ ಆಯ್ದುಕೊಂಡಿವೆ. ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಬಂದ ಅರ್ಜಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ ಅರ್ಹವಾದವುಗಳನ್ನು ಶಿಕ್ಷಣ ಸಚಿವರ ಮೂಲಕ ಸರ್ಕಾರಕ್ಕೆ ಕಳಿಸುತ್ತದೆ. ಸರ್ಕಾರವು ಅವುಗಳಲ್ಲಿ ಮೂರು ಹೆಸರುಗಳನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತದೆ. ಅವರಲ್ಲಿ ಒಬ್ಬರನ್ನು ಕುಲಪತಿಯನ್ನಾಗಿ ರಾಜ್ಯಪಾಲರು ಆಯ್ಕೆ ಮಾಡುವ ವಿಧಾನ ಇದುವರೆಗೂ ನಡೆದುಕೊಂಡು ಬಂದಿದೆ. ಕೆಲ ಸಂದರ್ಭಗಳನ್ನು ಹೊರತುಪಡಿಸಿ ಬಹುತೇಕ ಸಮಯ ಇಲ್ಲಿ ದುಡ್ಡು, ಜಾತಿ ಮತ್ತು ಸಿದ್ಧಾಂತ ಕೆಲಸ ಮಾಡುತ್ತಿದೆ; ಸರ್ಕಾರ ಮತ್ತು ರಾಜ್ಯಪಾಲರಿಬ್ಬರಿಗೂ ಹಣದ ಪಾಲು ಹೋಗುತ್ತದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ.

ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್

ಪಂಜಾಬ್‌ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅಲ್ಲಿನ ಎಎಪಿ ಸರ್ಕಾರದ ಅನುಕೂಲಕ್ಕೆ ತಕ್ಕಂತೆ ವಿಧಾನಸಭಾ ವಿಶೇಷ ಅಧಿವೇಶನ ಕರೆಯಲು ನಿರಾಕರಿಸಿದ್ದರು. ಆ ನಂತರ ಬಾಬಾ ಫರೀದ್ ವಿವಿಗೆ ಡಾ.ಗುರುಪ್ರೀತ್ ವಾಂಡರ್‌ರವರನ್ನು ವಿ.ಸಿಯನ್ನಾಗಿ ನೇಮಿಸಬೇಕೆಂಬ ಸರ್ಕಾರದ ಪ್ರಸ್ತಾಪವನ್ನು ವಾಪಸ್ ಕಳಿಸಿ ಮೂರು ಜನರ ಪಟ್ಟಿ ಕಳಿಸುವಂತೆ ಷರಾ ಬರೆದಿದ್ದರು. ಆನಂತರ ಪಂಜಾಬ್ ಕೃಷಿ ವಿವಿಯ ಉಪಕುಲಪತಿ ಡಾ.ಎಸ್.ಎಸ್ ಗೋಪಾಲ್‌ರವರದು ಅಕ್ರಮ ನೇಮಕಾತಿಯಾಗಿದ್ದು ಅವರನ್ನು ವಜಾಗೊಳಿಸಬೇಕೆಂಬ ರಾಜ್ಯ ಸರ್ಕಾರದ ಒತ್ತಾಯಕ್ಕೆ ಅವರು ಸೊಪ್ಪು ಹಾಕಿರಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯದ ವಿವಿಗಳ ಕುಲಾಧಿಪತಿಗಳಾಗಿ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಕಸಿದು ಅದನ್ನು ರಾಜ್ಯದ ಮುಖ್ಯಮಂತ್ರಿಗೆ ನೀಡಲು ಪಂಜಾಬ್ ಸರ್ಕಾರ ಯೋಚಿಸುತ್ತಿದೆ. 2018ರಿಂದೀಚೆಗೆ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳ ನೇಮಕಾತಿ ಹೊರತುಪಡಿಸಿ ಇತರ ಸಿಬ್ಬಂದಿ ನೇಮಕಾತಿಗಳನ್ನು ಸರ್ಕಾರವೇ ಮಾಡಲು ನಿರ್ಧರಿಸಿದೆ. ಈ ಬದಲಾವಣೆಗಳ ಸಾಧಕ-ಬಾಧಕಗಳೇನು? ಈ ಬದಲಾವಣೆಗಳು ಉನ್ನತ ಶಿಕ್ಷಣದ ಮೇಲೆ ಬೀರುವ ಪರಿಣಾಮೆಗಳೇನು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.

ರಾಜ್ಯ ಸರ್ಕಾರಗಳ ವಾದ

ವಿವಿಗಳ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರು ಉತ್ತರದಾಯಿಯಾಗಿರುವುದಿಲ್ಲ. ಸ್ವತಃ ವಿದ್ವಾಂಸರಲ್ಲದ ಅವರು ನೇಮಿಸುವ ಕುಲಪತಿಗಳು ವಿವಿಯ ಅಭಿವೃದ್ದಿ ಕುರಿತ ಸಮಗ್ರತೆ, ಬದ್ಧತೆಯ ವಿಷಯದಲ್ಲಿ ವಿಫಲರಾಗುತ್ತಿದ್ದಾರೆ. ಜೊತೆಗೆ ಇಡೀ ವಿವಿಯ ಆಡಳಿತಾತ್ಮಕ ಕ್ರಮಗಳನ್ನು ರಾಜ್ಯ ತೆಗೆದುಕೊಳ್ಳುತ್ತದೆ ಮತ್ತು ವಿವಿಯ ಹಣಕಾಸಿನ ಅಗತ್ಯವನ್ನು ರಾಜ್ಯ ಸರ್ಕಾರ ಪೂರೈಸುತ್ತದೆ. ವಿವಿಯ ಆಗುಹೋಗುಗಳಿಗೆ ರಾಜ್ಯ ಸರ್ಕಾರ ಹೊಣೆಯಾಗಿರುವಾಗ ಅದರ ಕುಲಪತಿಗಳನ್ನು ನೇಮಿಸುವ ಅಧಿಕಾರ ರಾಜ್ಯಕ್ಕೆ ಇರಬೇಕು ಎಂಬುದು ಬಹುತೇಕ ಎಲ್ಲ ರಾಜ್ಯ ಸರ್ಕಾರಗಳ ವಾದವಾಗಿದೆ.

ರಾಜ್ಯಪಾಲರ ವಾದ

ವಿವಿಗಳು ರಾಜಕೀಯವಾಗಿ ತಟಸ್ಥ ಸ್ಥಳಗಳು. ಅಂತಹ ವಿವಿಗಳ ಕುಲಪತಿಗಳನ್ನು ಸರ್ಕಾರ ನೇಮಿಸಿದರೆ ಅಲ್ಲಿ ಭ್ರಷ್ಟಾಚಾರ ಕಂಡುಬರುತ್ತದೆ ಮತ್ತು ಸರ್ಕಾರದ ಅಜೆಂಡಾಗಳನ್ನು ಜಾರಿಗೊಳಿಸುವವರು ಬಂದು ಕೂರುತ್ತಾರೆ. ಆನಂತರವೂ ಸರ್ಕಾರ ಸದಾ ವಿವಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಕುಲಪತಿಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದಾಗಿದೆ.

ಕುಲಪತಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಬೇಕು – ಪ್ರೊ.ಸಬೀಹಾ ಭೂಮಿಗೌಡ

“ಕುಲಪತಿ ಹುದ್ದೆಯು ರಾಜಕೀಯದಿಂದ ಹೊರತಾದುದು. ಕುಲಪತಿಯಾಗಿ ಆಯ್ಕೆಯಾದ ವ್ಯಕ್ತಿಗೆ ವಿಶ್ವವಿದ್ಯಾನಿಲಯದ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆ ಕುರಿತು ತಾನು ಹೊಂದಿರುವ ಕನಸುಗಳನ್ನು ಯಾರ ಮತ್ತು ಯಾವುದೇ ಬಗೆಯ ಹಸ್ತಕ್ಷೇಪವಿಲ್ಲದೆ ಪೂರ್ಣಗೊಳಿಸುವ ಅವಕಾಶವಿರಬೇಕು. ಈಗ ಕುಲಪತಿಯ ಆಯ್ಕೆಯ ಅಂತಿಮ ತೀರ್ಮಾನವು ಕುಲಾಧಿಪತಿಗಳಾದ ರಾಜ್ಯಪಾಲರ ಕೈಯಲ್ಲಿ ಇದೆ. ಇದರಿಂದ ಕುಲಪತಿಗಳು ನಿರ್ಭಯವಾಗಿ ಮತ್ತು ನಿಗದಿತ ಸಮಯವನ್ನು ಪೂರ್ಣಗೊಳಿಸುವ ವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗಿದೆ. ಆಧಾರಸಹಿತ ಆರೋಪಗಳಿಲ್ಲದ ಹೊರತಾಗಿ, ಕುಲಪತಿಗಳ ಮೇಲೆ ಆರೋಪ ಹೊರಿಸಿದ ಮಾತ್ರಕ್ಕೆ ತನಿಖೆಯನ್ನು ನಡೆಸುವುದಾಗಲೀ ಅವರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಾಗಲೀ ರಾಜ್ಯಪಾಲರಿಗೆ ಸುಲಭಕ್ಕೆ ಸಾಧ್ಯವಿಲ್ಲ. ಇದು ಕುಲಪತಿಗಳಿಗೆ ಇರುವ ಬಹಳ ಮುಖ್ಯವಾದ ಭದ್ರತೆ.

ಸಬೀಹಾ ಭೂಮಿಗೌಡ

“ಒಂದು ವೇಳೆ ಸರಕಾರವೇ ಕುಲಪತಿಗಳ ನೇಮಕಾತಿಯ ಅಧಿಕಾರವನ್ನು ಹೊಂದಿದರೆ, ವಿವಿಧ ಅಕಾಡೆಮಿ, ಸಿಂಡಿಕೇಟ್, ಅಕೆಡೆಮಿಕ್ ಕೌನ್ಸಿಲ್‌ಗಳ ಸದಸ್ಯರು, ಅಧ್ಯಕ್ಷರನ್ನು ಹೊಸ ಸರಕಾರ ಬಂದೊಡನೆ, ಅವರ ಅವಧಿ ಮುಗಿಯುವ ಮೊದಲೇ ವಾಪಸ್ ಕರೆಸುವಂತೆ, ಕುಲಪತಿಗಳ ಪರಿಸ್ಥಿತಿಯೂ ಆದರೆ ಅಚ್ಚರಿಯಿಲ್ಲ. ಜೊತೆಗೆ ಸ್ಥಳೀಯ ರಾಜಕೀಯ ಮುಖಂಡರಿಂದ ತೊಡಗಿ, ಉನ್ನತ ಸ್ಥಾನದವರೆಗಿನ ಎಲ್ಲ ರಾಜಕೀಯ ಮುಖಂಡರೂ ವಿಶ್ವವಿದ್ಯಾನಿಲಯದ ವಿವಿಧ ಆಗುಹೋಗುಗಳಲ್ಲಿ ಪ್ರಸ್ತಾತಕ್ಕಿಂತಲೂ ಹೆಚ್ಚಾಗಿ ಮೂಗು ತೂರಿಸಬಹುದು, ತಮಗೆ ಇಲ್ಲದ ಅಧಿಕಾರ ಚಲಾಯಿಸಬಹುದು ಅಥವಾ ಕುಲಪತಿಯಾದವರು ಇವರೆಲ್ಲರ ಮರ್ಜಿಗೆ ಬಿದ್ದು ಕೆಲಸ ಮಾಡಬೇಕಾದ ದುಸ್ಥಿತಿಯೂ ನಿರ್ಮಾಣವಾಗಬಹುದು. ಇದರಿಂದ ವ್ಯವಸ್ಥೆಯು ಸರಿಯಾಗುವ ಬದಲು, ಕುಲಪತಿಗಳನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದಂತೆ ಆದರೂ ಅಚ್ಚರಿಯಿಲ್ಲ.

“ಇನ್ನು ’ಕುಲಪತಿಗ್ಯಾಕೆ ನೇಮಕಾತಿ ಮತ್ತು ಕಟ್ಟಡ ನಿರ್ಮಿತಿಯ ತಲೆನೋವು? ನೀವು ಶೈಕ್ಷಣಿಕ ಚಟುವಟಿಕೆಗಳನ್ನು ನೋಡಿಕೊಳ್ಳಿ ಸಾಕು. ಉಳಿದದ್ದು ಸರಕಾರದ ಅಧಿಕಾರಿಗಳಾದ ನಾವು ಮಾಡ್ತೀವಿ’ ಎಂಬ ಪ್ರಸ್ತಾವನೆ ಕಳೆದ ಮೂರು-ನಾಲ್ಕು ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ನಾಲ್ಕೈದು ವರ್ಷಗಳಿಂದ ಯಾವ ಒಂದು ವಿಶ್ವವಿದ್ಯಾನಿಲಯದ ಅಧ್ಯಾಪಕ ಹುದ್ದೆಯನ್ನೂ ಸರಕಾರದಿಂದ ತುಂಬಲಾಗಿಲ್ಲ (ಮಾಡಿದ ನೇಮಕಾತಿಯೂ ಭ್ರಷ್ಟತೆಯಿಂದ ಕೂಡಿ ನಗೆಪಾಟಲಿಗೆ ಈಡಾಗಿದೆ ಎಂಬುದು ಎಲ್ಲರಿಗೆ ತಿಳಿದಿದೆ). ಕೇವಲ ಕೆ.ಇ.ಎ. ಮೂಲಕ ನೇಮಕಾತಿ ಮಾಡುತ್ತೇವೆ ಎಂಬ ಪ್ರಚಾರ ಮಾತ್ರ ಕೇಳಿಬರುತ್ತಿದೆ. ಹೀಗಾದರೆ ಕುಲಪತಿಯಾದವರು ತಮಗಿರುವ ನಾಲ್ಕು ವರ್ಷಗಳ ಅವಧಿಯಲ್ಲಿ ರಚನಾತ್ಮಕ ಕಾರ್ಯ ಮಾಡಲು ಎಲ್ಲಿ ಸಾಧ್ಯ? ಅವರ ಸ್ಥಾನವನ್ನು ಶಾಲಾ ಮುಖ್ಯೋಪಾಧ್ಯಾಯರ ಮಟ್ಟಕ್ಕೆ ಇಳಿಸುವ ಹಾಗೂ ವ್ಯಾಪಕ ಭ್ರಷ್ಟಾಚಾರಕ್ಕೆ ಅನುವು ಮಾಡುವ ಹುನ್ನಾರ ಇದರಲ್ಲಿರುವುದು ಸುಸ್ಪಷ್ಟ.

ಇದನ್ನೂ ಓದಿ: ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕದಲ್ಲಿ ರಾಜ್ಯಪಾಲರ ಅಧಿಕಾರ ಕಡಿತಗೊಳಿಸುವ ಮಸೂದೆ ಅಂಗೀಕರಿಸಿದ ತಮಿಳುನಾಡು

“ಹಾಗೊಂದು ವೇಳೆ ಈ ಎರಡರ ಹೊರತಾಗಿ ಕುಲಾಧಿಪತಿ ಹುದ್ದೆಗೆ ದಕ್ಷ, ಯೋಗ್ಯ, ಶಿಕ್ಷಣತಜ್ಞರನ್ನು ಆಹ್ವಾನಿಸುವ, ಆಯ್ಕೆ ಮಾಡುವ ರಾಜಕೀಯೇತರ ಪದ್ಧತಿ ಜಾರಿಗೆ ಬಂದದ್ದೇ ಆದಲ್ಲಿ, ಅದು ಈಗಿನ ಎರಡೂ ಕ್ರಮಕ್ಕಿಂತ ತುಂಬ ಆರೋಗ್ಯಕರವಾದೀತು” ಎನ್ನುತ್ತಾರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಸಬಿಹಾ ಭೂಮೀಗೌಡ ಅವರು.

ಅಕಡಮಿಶಿಯನ್ ತಜ್ಞರು, ಸ್ಕಾಲರ್‌ಗಳು ಕುಲಾಧಿಪತಿಗಳಾಗೇಕು : ಪ್ರೊ.ಜಾಫೆಟ್

ರಾಜ್ಯಪಾಲರು ರಾಜಕೀಯವಾಗಿ ತಟಸ್ಥರು ಎಂದು ಹೇಳಲಾಗುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ನಿಷ್ಟರು ಅಥವಾ ಅದರ ಮುಖಂಡರನ್ನೆ ರಾಜ್ಯಪಾಲರನ್ನಾಗಿ ನೇಮಿಸುತ್ತಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಅವರೆಲ್ಲ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ಎಷ್ಟು ಸತ್ಯ? ಇನ್ನೊಂದು ಕಡೆ ರಾಜ್ಯ ಸರ್ಕಾರಗಳೂ ಸಹ (ಕೆಲವು ಮುಖ್ಯಮಂತ್ರಿಗಳನ್ನು ಹೊರತುಪಡಿಸಿ) ತಮಗೆ ಬೇಕಾದವರನ್ನು, ತಮ್ಮ ಪಕ್ಷದ ಅಜೆಂಡಾವನ್ನು ಜಾರಿಗೊಳಿಸುವವರನ್ನೇ ವಿ.ಸಿಗಳನ್ನಾಗಿ ನೇಮಿಸುವ ಸಂಭವವಿದೆ. ಹಾಗಾಗಿ ಎರಡೂ ಕಡೆ ಸಮಸ್ಯೆಗಳಿವೆ ಎನ್ನುತ್ತಾರೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಜಾಫೆಟ್‌ರವರು.

ಈಗ ರಾಜ್ಯದ ವಿಶ್ವವಿದ್ಯಾಲಯಗಳ ವಿ.ಸಿಗಳಿಗೆ ಆಡಳಿತ ಸ್ವಾತಂತ್ರ್ಯ ಮಾತ್ರವಲ್ಲ ಅಕಡೆಮಿಕ್ ಸ್ವತಂತ್ರವೂ ಇಲ್ಲದಂತ ಪರಿಸ್ಥಿತಿ ಇದೆ. ಯಾವ ಸಿಲೆಬಸ್ ಇರಬೇಕು, ಯಾವ ರೀತಿ ಬೋಧನೆಗಳು ನಡೆಯಬೇಕು ಎಂಬುದೆಲ್ಲ ಕೇಂದ್ರೀಕರಣಗೊಳ್ಳುತ್ತಿರುವ ಅಪಾಯದಲ್ಲಿದ್ದೇವೆ. ನೂತನ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರ್ಕಾರ ಇಡೀ ಶಿಕ್ಷಣದ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಇದರಿಂದ ಭಾರತದ ಒಕ್ಕೂಟ ತತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಹಾಗಾಗಿಯೇ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಅದಕ್ಕೆ ಆಕ್ಷೇಪ ಎತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಾವು ಕೊಥಾರಿ ಆಯೋಗದ ಶಿಫಾರಸ್ಸುಗಳತ್ತ ಮತ್ತೆ ಕಣ್ಣು ಹಾಯಿಸಬೇಕಿದೆ. ಅಲ್ಲಿ ಅಕಡಮಿಕ್ ತಜ್ಞರು, ನುರಿತ ಸ್ಕಾಲರ್‌ಗಳು ಕುಲಾಧಿಪತಿಯಂತಹ ಹುದ್ದೆಗೇರಬೇಕು ಎಂದಿದೆ. ಹಾಗಾಗಿ ನಾವು ಕೊಥಾರಿ ಕಮಿಷನ್ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಪ್ರೊ.ಜಾಫೆಟ್

ನಮ್ಮ ದೇಶದ ಐಐಟಿ ಮತ್ತು ಐಐಎಂಗಳಲ್ಲಿ ಗೌರ್ನಿಂಗ್ ಕೌನ್ಸಿಲ್ ಸದಸ್ಯರು ವಿ.ಸಿಗಳನ್ನು ನೇಮಿಸುತ್ತಾರೆ. ಖಾಸಗಿ ವಿವಿಗಳು, ಡೀಮ್ಡ್ ವಿವಿಗಳಲ್ಲಿ ಗೌರ್ನಿಂಗ್ ಬೋರ್ಡ್ ವಿ.ಸಿಗಳನ್ನು ನೇಮಿಸುತ್ತದೆ. ಈ ಖಾಸಗಿ ವಿಶ್ವವಿದ್ಯಾಲಯಗಳಿಗೆ ಇರುವ ಸ್ವಾತಂತ್ರ್ಯ ರಾಜ್ಯ ವಿವಿಗಳಗೆ ಇಲ್ಲ. ಯೂರೋಪಿಯನ್ ದೇಶಗಳಲ್ಲಿ ಅತ್ಯುತ್ತಮ ಶಿಕ್ಷಣ ತಜ್ಞರನ್ನು, ವಿದ್ವಾಂಸರನ್ನು ಹುಡುಕಿ ವಿವಿಗಳಿಗೆ ನೇಮಿಸುವ ಪರಿಪಾಠವಿದೆ. ಇದೆಲ್ಲವನ್ನು ನೋಡಿದರೆ ನಮ್ಮಲ್ಲಿಯೂ ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗಳನ್ನು ಕುಲಾಧಿಪತಿಗಳನ್ನಾಗಿ ಮಾಡುವ ಬದಲು ಅನುಭವಿ ಅಕಡಮಿಶಿಯನ್ ಹಿನ್ನೆಲೆಯವರನ್ನು ಕುಲಾಧಿಪತಿಗಳನ್ನಾಗಿ, ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಬೇಕು. ವಿಶ್ವ ವಿದ್ಯಾಲಯಗಳ ಸರ್ಚ್ ಕಮಿಟಿ ಆ ಕೆಲಸ ವಹಿಸಿಕೊಳ್ಳಬೇಕು. ಆ ಕುಲಾಧಿಪತಿಗಳು ಮತ್ತು ವಿವಿಯ ಸಿಂಡಿಕೇಟ್ ಸದಸ್ಯರು ಸಾಂವಿಧಾನಿಕ ಚೌಕಟ್ಟಿನಲ್ಲಿ ಸಮರ್ಥ ವಿ.ಸಿಗಳನ್ನು ನೇಮಿಸಬೇಕು. ಅಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಆ ರೀತಿ ಪಾರದರ್ಶಕವಾಗಿ ಕೆಲಸ ಮಾಡುವ ಹೊಸ ನೀತಿ ಜಾರಿಗೆ ಬರಬೇಕು ಎನ್ನುತ್ತಾರೆ ಪ್ರೊ.ಜಾಫೆಟ್‌ರವರು.

ಹೊಸ ಶಿಕ್ಷಣ ನೀತಿಯ ಅಪಾಯಗಳತ್ತ ಹೆಚ್ಚು ಗಮನಹರಿಸಬೇಕು – ಬಿ.ಶ್ರೀಪಾದ್ ಭಟ್

“ರಾಜ್ಯಪಾಲರದು ಸಾಂವಿಧಾನಿಕ ಹುದ್ದೆಯಾದರೂ ಅದನ್ನು ರಬ್ಬರ್ ಸ್ಟಾಂಪ್ ಎಂತಲೇ ಕರೆಯುತ್ತಾರೆ. ಕುಲಾಧಿಪತಿಗಳ ಅಧಿಕಾರವೂ ಸಹ ನಾಮಕಾವಸ್ಥೆಯಾಗಿದೆ. ರಾಜ್ಯ ಸರ್ಕಾರ/ಸಚಿವ ಸಂಪುಟದ ನೇಮಕಾತಿಯನ್ನು ಅವರು ಅನುಮೋದಿಸಬೇಕು ಅಷ್ಟೆ. ಹಾಗಾಗಿ ಇರುವ ವ್ಯವಸ್ಥೆ ಮುಂದುವರಿಸುವುದು ಒಳ್ಳೆಯದು. ಅದೇ ಸಂದರ್ಭದಲ್ಲಿ ನಾವು ಹೊಸ ಶಿಕ್ಷಣ ನೀತಿಯ ಅಪಾಯಗಳ ಕಡೆ ಹೆಚ್ಚಿನ ಗಮನಕೊಡಬೇಕು” ಎನ್ನುತ್ತಾರೆ ಶಿಕ್ಷಣ ತಜ್ಞರು ಮತ್ತು ಸಮಾನ ಶಿಕ್ಷಣಕ್ಕಾಗಿನ ಹೋರಾಟಗಾರ ಬಿ.ಶ್ರೀಪಾದ್ ಭಟ್‌ರವರು.

“ಎನ್‌ಇಪಿ ಎಂಬುದು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಸಂಪೂರ್ಣ ಖಾಸಗೀಕರಣಗೊಳಿಸುವ, ಬ್ರಾಹ್ಮಣೀಕರಣಗೊಳಿಸುವ ಹುನ್ನಾರವಾಗಿದೆ. ಇದರ ಬಗ್ಗೆ ಸಾಮಾನ್ಯ ಜನರಿಗೆ ಹೆಚ್ಚು ಮಾಹಿತಿಯಿಲ್ಲ. ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯಂತಹ ಕೆಲ ಸಂಘಟನೆಗಳಷ್ಟೆ ಈ ಕುರಿತು ಆಳವಾದ ಅಧ್ಯಯನ ನಡೆಸಿವೆ. ಅವು ಕೂಡ ಜನರ ಬಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಹೋರಾಟ ತುರ್ತಾಗಿದೆ” ಎಂದರು.

ಬಿ.ಶ್ರೀಪಾದ್ ಭಟ್

ಶಿಕ್ಷಣದ ಉದ್ದೇಶ ಮಾನವೀಯವಾದ, ಸಮಾನವಾದ, ಪ್ರಜಾತಾಂತ್ರಿಕವಾದ, ಬಹುವೈವಿಧ್ಯತೆಯನ್ನು ಗೌರವಿಸುವ ಸಮಾಜ ನಿರ್ಮಾಣ ಮಾಡುವುದಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣದ ಗುಣಮಟ್ಟದ ಸುಧಾರಣೆ ಮೇಲೆ ಗಮನ ಕೇಂದ್ರೀಕರಿಸಬೇಕಿದೆಯೇ ವಿನಃ ಅಧಿಕಾರಕ್ಕಾಗಿ ಪೈಪೋಟಿ ನಡೆಸುವುದಲ್ಲ. ವಿಶ್ವದ ಟಾಪ್ 250 ವಿವಿಗಳಲ್ಲಿ ಭಾರತದ ಯಾವುದೇ ವಿಶ್ವವಿದ್ಯಾಲಯ ಇಲ್ಲ ಎಂಬುದು ನಮ್ಮನ್ನು ಚಿಂತನೆಗೆ ಹಚ್ಚಬೇಕು. ರ್‍ಯಾಂಕಿಂಗ್ ದೃಷ್ಟಿಯಿಂದಷ್ಟೇ ಅಲ್ಲ, ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಸಂಶೋಧನೆಗೈಯ್ಯುವ, ಸ್ವತಂತ್ರ ಚಿಂತನೆಯನ್ನು ಉತ್ತೇಜಿಸುವ, ಉತ್ತಮ ಸಮಾಜಕ್ಕೆ ತುಡಿಯುವಂತಹ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಹೆಚ್ಚಬೇಕಿದೆ. ಅದಕ್ಕಾಗಿ ಶಿಕ್ಷಣ ಕ್ಷೇತ್ರದ ಮೇಲೆ ತಮ್ಮ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಹೆಚ್ಚಿನ ಅನುದಾನ, ಸಂಪೂರ್ಣ ಸ್ವಾಯತ್ತತೆ ನೀಡುವ ಮೂಲಕ ಭಾರತದ ಉನ್ನತ ಶಿಕ್ಷಣವು ಸದೃಢವಾಗಲು ಕೆಲಸ ಮಾಡಬೇಕಿದೆ. ಆಗ ಮಾತ್ರವೇ ದೇಶದ ಸಮಗ್ರ ಅಭಿವೃದ್ದಿ ಸಾಧ್ಯವಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...