ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಮಿಳು ಭಾಷೆಯ ಖ್ಯಾತ ಯೂಟ್ಯೂಬರ್, ಹೋರಾಟಗಾರ ಸವುಕ್ಕು ಶಂಕರ್‌ಗೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಜೈಲು ಶಿಕ್ಷೆಯನ್ನು ಶುಕ್ರವಾರ ಸುಪ್ರಿಂಕೋರ್ಟ್ ಅಮಾನತುಗೊಳಿದೆ. ಅದಾಗಿಯೂ, ಚೆನ್ನೈ ಕೇಂದ್ರ ಅಪರಾಧ ವಿಭಾಗದ ಸೈಬರ್ ಕ್ರೈಂ ವಿಭಾಗ 2020 ಮತ್ತು 2021 ರಲ್ಲಿ ದಾಖಲಾದ ಪ್ರಕರಣಗಳಿಗಾಗಿ ಅವರನ್ನು ಮತ್ತೆ ಬಂಧಿಸಿದೆ. ಗುರುವಾರ ಕಡಲೂರು ಕೇಂದ್ರ ಕಾರಾಗೃಹದಲ್ಲಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಶಂಕರ್ ಅವರಿಗೆ ಬಂಧನದ ಸೂಚನೆಯನ್ನು ನೀಡಿದ್ದರು.
ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್‌ನ ಸೈಬರ್ ಕ್ರೈಂ ವಿಭಾಗವು ಶಂಕರ್ ವಿರುದ್ಧ ನಾಲ್ಕು ಹೊಸ ಪ್ರಕರಣಗಳನ್ನು ದಾಖಲಿಸಿದೆ ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ. ನಾಲ್ಕರಲ್ಲಿ ಮೂರು ಪ್ರಕರಣಗಳು 2020 ರಲ್ಲಿ ದಾಖಲಾಗಿದ್ದು, ಒಂದು ಪ್ರಕರಣವು 2021 ರಲ್ಲಿ ದಾಖಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2020 ರಲ್ಲಿ ದಾಖಲಾದ ಒಂದು ಪ್ರಕರಣದಲ್ಲಿ, ಐಪಿಸಿ 504, 505 (1) (ಬಿ) ಮತ್ತು 505(2); ಮತ್ತು ಇತರ ಎರಡು ಪ್ರಕರಣಗಳನ್ನು IPC 153 ಮತ್ತು 505(1)(b) ಅಡಿಯಲ್ಲಿ ದಾಖಲಿಸಲಾಗಿದೆ. 2021 ರ ಪ್ರಕರಣವನ್ನು ಸರ್ಕಾರಿ ರಹಸ್ಯ ಕಾಯಿದೆಯ ಸೆಕ್ಷನ್ 5(1)(ಎ), 5(1)(ಡಿ) ಮತ್ತು 5(2) ಅಡಿಯಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ: ‘ನ್ಯಾಯಾಂಗ ನಿಂದನೆ’: ಹೋರಾಟಗಾರ ಸವುಕ್ಕು ಶಂಕರ್‌ಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್
ಈ ನಾಲ್ಕು ಪ್ರಕರಣಗಳ ಅಡಿಯಲ್ಲಿ ಶಂಕರ್ ಅವರನ್ನು 10 ನಿಮಿಷಗಳ ಅವಧಿಯಲ್ಲಿ ಬಂಧಿಸಲಾಗಿದೆ. ಆ ವೇಳೆ ಅವರು ಇನ್ನೂ ಕಡಲೂರು ಕೇಂದ್ರ ಕಾರಾಗೃಹದಲ್ಲಿದ್ದರು. ಗುರುವಾರ ಸಂಜೆ 4.25 ರಿಂದ 4.35 ರ ಸುಮಾರಿಗೆ ಈ ಎಲ್ಲಾ ಪ್ರಕರಣಗಳಲ್ಲಿ ಅವರ ಬಂಧನ ನಡೆದಿರುವ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.
ನ್ಯಾಯಂಗ ನಿಂದನೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಶಂಕರ್ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ನಿಗದಿಪಡಿಸುವ ಒಂದು ದಿನದ ಮುನ್ನ ಈ ಬೆಳವಣಿಗೆ ನಡೆದಿದೆ. ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ನ್ಯಾಯಾಂಗ ನಿಂದನೆಯ ಆರೋಪದಲ್ಲಿ ಶಂಕರ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಶಂಕರ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
“ಇಡೀ ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ” ಎಂದು ಶಂಕರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಕ್ಕಾಗಿ, ಅವರ ವಿರುದ್ಧ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ: ಹಿಜಾಬ್ ವಿವಾದ: ತಮಿಳುನಾಡು, ಕೇರಳ, ಆಂಧ್ರದ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರಕ್ಕೆ ಛೀಮಾರಿ
ಕಳೆದ 13 ವರ್ಷಗಳಿಂದ ರಾಜ್ಯದಿಂದ ಭತ್ಯೆ ಪಡೆಯುತ್ತಿದ್ದರೂ ಶಂಕರ್ ಅವರು “ರಾಜ್ಯದ ಎಲ್ಲಾ ಮೂರು ಅಂಗಗಳ ಮೇಲೆ ಕೆಟ್ಟದಾಗಿ ದಾಳಿ ಮಾಡುತ್ತಿದ್ದಾರೆ” ಎಂದು ಹೈಕೋರ್ಟ್ ಹೇಳಿತ್ತು. ಅವರ ಆಕ್ಷೇಪಾರ್ಹ ಸಂದರ್ಶನಗಳು ಮತ್ತು ಲೇಖನಗಳನ್ನು ತೆಗೆದುಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಶಂಕರ್ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದಲ್ಲಿ (ಡಿವಿಎಸಿ) ಕೆಳ ವಿಭಾಗದ ಗುಮಾಸ್ತರಾಗಿ ಸೇವೆಯಲ್ಲಿದ್ದರು. ಅದೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅವರ ತಂದೆ ನಿಧನರಾದ ನಂತರ ಮಾನವೀಯ ಆಧಾರದ ಮೇಲೆ ಅವರು ಅಲ್ಲಿ ಕೆಲಸ ಪಡೆದಿದ್ದರು.
2008 ರ ವೇಳೆಗೆ ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಪ್ರಕರಣವನ್ನು ಬಹಿರಂಗಪಡಿಸಿದ ನಂತರ ಶಂಕರ್ ಅವರನ್ನು ಬಂಧಿಸಲಾಗಿತ್ತು. ಇದರ ನಂತರ ಇಲಾಖೆಯಿಂದ ಅವರನ್ನು ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: ಕ್ರೈಸ್ತ- ಮುಸ್ಲಿಂ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗದು: ಒಕ್ಕೂಟ ಸರ್ಕಾರ
ಬಂಧನದಿಂದ ಬಿಡುಗಡೆಯಾದ ನಂತರ ಅವರು 2009 ರಲ್ಲಿ ಸವುಕ್ಕು ಎಂಬ ವೆಬ್‌ಸೈಟ್ ಅನ್ನು ಪ್ರಾರಂಭಿಸಿ, ಅಲ್ಲಿ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರು, ವಕೀಲರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಬರೆಯುತ್ತಿದ್ದಾರೆ.


