ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಯು ಮಹಾ ವಿಕಾಸ್ ಅಘಾಡಿ ಮೈತ್ರಿ ಬಿರುಕಿಗೆ ಕಾರಣವಾಗಬಹುದು. ಹಾಗಾಗಿ ಭಾರತ್ ಜೋಡೋ ಯಾತ್ರೆ ಮೂಲಕ ಉತ್ತಮ ಕೆಲಸ ಮಾಡುತ್ತಿರುವ ಅವರು ಸಾವರ್ಕರ್ ವಿಷಯ ತೆಗೆಯುವ ಅಗತ್ಯವಿಲ್ಲ ಉದ್ದವ್ ಬಾಳಾಸಾಹೇಬ್ ಠಾಕ್ರೆ ಶಿವಸೇನೆ ಬಣದ ಮುಖ್ಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿಕೆಯಿಂದ ಎಂವಿಎ ಮೈತ್ರಿ ಕುಸಿಯುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಎಂವಿಎ ಕುಸಿಯುವುದಿಲ್ಲ. ಆದರೆ ಇದು ನಿಸ್ಸಂಶಯವಾಗಿ ಕಹಿಯನ್ನು ಉಂಟುಮಾಡುತ್ತದೆ. ನಮ್ಮ ಮೈತ್ರಿಯಲ್ಲಿ ಬಿರುಕುಗಳು ಉಂಟಾಗುತ್ತವೆ. ಅದು ಒಳ್ಳೆಯ ಸಂಕೇತವಲ್ಲ” ಎಂದಿದ್ದಾರೆ.
“ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ ರಾಹುಲ್ ಅವರ ಭಾರತ್ ಜೋಡೋ ಯಾತ್ರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಯಾತ್ರೆಯು ದೇಶದಲ್ಲಿ ನಡೆಯುತ್ತಿರುವ ದ್ವೇಷವನ್ನು ಕೊನೆಗೊಳಿಸಲು ಮತ್ತು ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಧ್ವನಿ ಎತ್ತುವ ಗುರಿಯನ್ನು ಹೊಂದಿದೆ. ಅವರು ಈ ಸಮಸ್ಯೆಗಳನ್ನು ಸರಿಯಾಗಿ ಮುನ್ನಲೆಗೆ ತಂದಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುವ ಮೂಲಕ ರಾಷ್ಟ್ರದ ಆತ್ಮಸಾಕ್ಷಿಯನ್ನು ಕಲಕುತ್ತಿರುವಾಗ, ಸಾವರ್ಕರ್ ವಿಷಯವನ್ನು ಎತ್ತುವ ಅಗತ್ಯವೆಲ್ಲಿತ್ತು? ಅವರು ಅದನ್ನು ನಿರ್ಲಕ್ಷಿಸಿ ಅವರು ಮಾಡುತ್ತಿರುವ ಉತ್ತಮ ಕೆಲಸದತ್ತ ಗಮನ ಹರಿಸಬೇಕಿತ್ತು” ಎಂದು ರಾವತ್ ಹೇಳಿದ್ದಾರೆ.
ರಾಹುಲ್ ಗಾಂಧಿ ಸಾವರ್ಕರ್ ಕ್ಷಮೆ ಕೇಳಿದುದರ ಬಗ್ಗೆ ಮಾತನಾಡಿದ್ದಾರೆ. ಅದನ್ನು ಪುನಃ ಪುನಃ ಹೇಳುವ ಅಗತ್ಯವಿಲ್ಲ. ದ್ವೇಷ ಕೊನೆಗೊಳಿಸಬೇಕೆಂದು ಹೇಳುವ ಅವರು ಸಾವರ್ಕರ್ ಮೇಲೆಕೆ ಕೋಪ ಹೊಂದಿದ್ದಾರೆ? ನಮಗೆ ಸಾವರ್ಕರ್ ಆರಾಧ್ಯ ದೈವವಾಗಿದ್ದಾರೆ. ನಾವು ಸಾವರ್ಕರ್ ಅವರನ್ನು ಪ್ರೀತಿಸುತ್ತೇವೆ, ಮೆಚ್ಚುತ್ತೇವೆ ಮತ್ತು ಅಪಾರ ನಂಬಿಕೆ ಹೊಂದಿದ್ದೇವೆ. ಹಾಗಾಗಿ ನಾವು ರಾಹುಲ್ ಗಾಂಧಿಯವರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅದೇ ಸಮಯದಲ್ಲಿ ಅವರು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. “ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿದ್ದವರು ಏಕಾಏಕಿ ಸಾವರ್ಕರ್ ಬಗ್ಗೆ ಅಭಿಮಾನ ತೋರಿಸುತ್ತಿದ್ದಾರೆ. ಬಿಜೆಪಿಯು ಸಾವರ್ಕರ್ ಅವರ ಹೆಸರಿನಿಂದ ರಾಜಕೀಯ ಲಾಭಕ್ಕಾಗಿ ನೋಡುತ್ತಿರುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಬುಡಕಟ್ಟು ಹೋರಾಟಗಾರ ಬಿರ್ಸಾ ಮುಂಡಾ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಬ್ರಿಟಿಷರು ಬಿರ್ಸಾ ಮುಂಡಾರವರಿಗೆ ಭೂಮಿ ನೀಡುವುದಾಗಿ ಆಮಿಷವೊಡ್ಡಿದರು ಸಹ ಅವರು ತಲೆಬಾಗಲು ನಿರಾಕರಿಸಿದರು; ಬ್ರೀಟಿಷರ ವಿರುದ್ಧ ದಿಟ್ಟ ಹೋರಾಟ ನಡೆಸಿ ಸಾವನ್ನು ಆರಿಸಿಕೊಂಡರು. ನಾವು, ಕಾಂಗ್ರೆಸ್ ಪಕ್ಷ ಅವರನ್ನು ನಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತೇವೆ. ಆದರೆ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದು ಪಿಂಚಣಿ ಸ್ವೀಕರಿಸಿದ ಸಾವರ್ಕರ್ ಜೀ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಆರಾಧ್ಯ ದೈವವಾಗಿದ್ದಾರೆ” ಎಂದು ವ್ಯಂಗ್ಯವಾಡಿದ್ದರು.
ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಅಲ್ಲಿ ಮಾತನಾಡುತ್ತಾ ಸಾವರ್ಕರ್ ಬರೆದಿದ್ದ ಕ್ಷಮಾಪಣಾ ಪತ್ರಗಳನ್ನು ಪ್ರದರ್ಶಿಸಿದ್ದಾರೆ. ‘ಸರ್, ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಉಳಿಯಲು ನಾನು ಬೇಡಿಕೊಳ್ಳುತ್ತೇನೆ’ ಎಂದು ಬರೆದ ಸಾವರ್ಕರ್ ಅದಕ್ಕೆ ಸಹಿ ಹಾಕಿದ್ದಾರೆ. ಕಾರಣ ಅವರು ಪುಕ್ಕಲರಾಗಿದ್ದರು, ಅವರು ಬ್ರಿಟಿಷರಿಗೆ ಹೆದರುತ್ತಿದ್ದರು. ಮಹಾತ್ಮ ಗಾಂಧಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲ್‌ರವರು ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆದರೆ ಅವರೆಂದು ಸಾವರ್ಕರ್ ರೀತಿ ಕ್ಷಮಾಪಣ ಪತ್ರಗಳನ್ನು ಬರೆದಿರಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ ಈ ಕುರಿತು ಕಾಂಗ್ರೆಸ್ ಚರ್ಚೆಗೆ ಸಿದ್ದವಿದೆ ಎಂದಿದ್ದಾರೆ.
ಸಾವರ್ಕರ್ ಮೊಮ್ಮಗ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ಕ್ಷಮೆ ಬೇಡಿದ್ದರು: ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ಹೀಗಿತ್ತು..


