Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

- Advertisement -
- Advertisement -

“ನಸ್ಟಾಸಿಯ ಪಿಲಿಪೊವ್ನ?” ಗುಮಾಸ್ತ ಏನನ್ನೋ ಯೊಚಿಸುವವನಂತೆ ಬೇಕಂತಲೇ ಹೇಳಿದ.

“ಸುಮ್ಮನೆ ಇರು, ಅವಳ ಬಗ್ಗೆ ನಿನಗೇನೂ ತಿಳಿದಿಲ್ಲ” ರೊಗೊಜಿನ್ ಅಸಹನೆಯಿಂದಲೇ ಹೇಳಿದ.

“ಅಕಸ್ಮಾತ್ ನನಗೇನಾದರೂ ಅವಳ ಬಗ್ಗೆ ಸ್ವಲ್ಪ ತಿಳಿದಿದ್ದರೆ?” ಪಕ್ಕದವ ಗೆದ್ದವನ ರೀತಿಯಲ್ಲಿ ಪ್ರತಿಕ್ರಿಯಿಸಿದ.

“ಅಯ್ಯೊ, ನಸ್ಟಾಸಿಯ ಪಿಲಿಪೊವ್ನ ಅನ್ನೋರು ಬೇಕಾದಷ್ಟು ಜನ ಇರುತ್ತಾರೆ. ನೀನು ಅದೆಂತಹ ತಾಳ್ಮೆಯಿಲ್ಲದ ಕಾಡುಪ್ರಾಣಿ!” ಅವನು ಕೋಪದಿಂದ ನುಡಿದ. “ನನ್ನ ಹಣ ಸಿಕ್ಕ ತಕ್ಷಣ ನಿನ್ನಂತಹ ಒಂದು ಜೀವಿ ನನ್ನ ಜೊತೆ ಅಂಟಿಕೊಳ್ಳುತ್ತದೆ ಅಂತ ಮೊದಲೇ ಯೋಚಿಸಿದ್ದೆ” ಎಂದ.

“ಓ ನನಗೆ ತಿಳಿದಿದೆ, ಉಳಿದ ವಿಷಯಗಳೂ ತಿಳಿಯುವಂತೆಯೇ”, ಎಂದ ಗುಮಾಸ್ತ. “ಈ ಲೆಬಿಡೆಫ್‌ಗೆ ಅವಳ ಬಗ್ಗೆ ಎಲ್ಲವೂ ತಿಳಿದಿದೆ. ಗೌರವಾನ್ವಿತನೇ, ನಿನಗಿಷ್ಟವಾದರೆ ನನ್ನನ್ನು ಬೇಕಾದರೆ ನಿಂದಿಸಬಹುದು, ಆದರೆ ನಾನು ಸರಿಯಾಗಿಯೇ ಹೇಳುತ್ತಿದ್ದೇನೆ ಎಂದು ಸಾಬೀತುಪಡಿಸಿದರೆ ಏನೀಗ? ನಸ್ಟಾಸಿಯ ಪಿಲೊನೊವ್ನಳ ಕೌಟುಂಬಿಕ ಹೆಸರು ಬರಾಷ್ಕಾಫ್. ನನಗೆ ಗೊತ್ತು ನೋಡು, ಮತ್ತು ವಾಸ್ತವವಾಗಿ ಅವಳು ಎಲ್ಲರಿಗೂ ಚಿರಪರಿಚಿತಳಾದ ಹೆಂಗಸು, ಒಳ್ಳೆಯ ಕುಟುಂಬದಿಂದ ಬಂದವಳು ಕೂಡ. ಅವಳಿಗೆ ಒಬ್ಬ ಗಣನೀಯವಾದ ಸ್ಥಿತಿವಂತ ಟಾಟ್ಸ್ಕಿ- ಅಫಾನ್ಸಿ ಇವಾನೊವಿಚ್ ಅನ್ನುವವನ ಜೊತೆ ಸಂಪರ್ಕವಿದೆ; ಅವನು ಹಲವು ಕಂಪನಿಗಳ ಮತ್ತು ಸಂಘಗಳ ಸದಸ್ಯ ಮತ್ತು ಬಹಳ ಶ್ರೀಮಂತ. ಅವನು ಜನರಲ್ ಎಪಾಂಚಿನ್‌ನ ಆತ್ಮೀಯ ಸ್ನೇಹಿತ ಕೂಡ ಮತ್ತು ಅವನ ಅಭಿರುಚಿಗಳು ಎಪಾಂಚಿನ್‌ನ ರೀತಿಯಾದವೇ…”

ರೊಗೊಜಿನ್ ಕೊನೆಗೂ ಆಶ್ಚರರ್ಯಪಟ್ಟು “ಪ್ರೇತವೇ ಈತನನ್ನು ಕರೆದುಕೊಂಡು ಹೋಗು, ಇವನಿಗೆ ಹೇಗೆ ಎಲ್ಲವೂ ತಿಳಿದಿರುತ್ತದೆ?” ಎಂದ.

“ಅವನಿಗೆ ಎಲ್ಲವೂ ತಿಳಿದಿರುತ್ತದೆ. ಲೆಬೆಡೆಫ್‌ಗೆ ಎಲ್ಲವೂ ತಿಳಿದಿರುತ್ತದೆ! ನಾನು ಒಂದೊ ಎರಡೊ ತಿಂಗಳು ಯುವ ಲಿಹಾಚಾಫ್ ಜೊತೆ ಅವನ ತಂದೆ ಸತ್ತ ನಂತರ ಇದ್ದೆ. ನನಗೆ ಅವರು ಚೆನ್ನಾಗಿಯೇ ತಿಳಿದಿದೆ. ಈ ಲೆಬೆಡೆಫ್ ಇಲ್ಲದೆ ಅವನಿಗೆ ಒಂದು ಕೆಲಸವನ್ನೂ ಮಾಡಲು ಆಗುತ್ತಿರಲಿಲ್ಲ; ಗೌರವಾನ್ವಿತನೇ ಅವನು ಸಾಲಗಾರರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾನೆ. ಆ ಸಮಯದಲ್ಲೇ ನನಗೆ ಅರ್ಮಾಂಕ್ ಮತ್ತು ಕೋರಾಲಿ, ಮತ್ತು ಪ್ರಿಸ್ಸೆಸ್ ಪ್ಯಾಟ್ಸ್ಕಿ ಮತ್ತು ನಸ್ಟಾಸಿಯ ಪಿಲಿಪೊವ್ನಳ ಪರಿಚಯವಾಗಿದ್ದು”.

“ನಸ್ಟಾಸಿಯ ಪಿಲಿಪೊವ್ನ? ಅಂದರೆ ಅರ್ಥ ಅವಳು ಮತ್ತು ಲಿಹಾಚಾಫ್ ಇಬ್ಬರೂ….” ರೊಗೊಜಿನ್ ತೀವ್ರವಾಗಿ ಬಿಳಿಚಿಕೊಳ್ಳುತ್ತಾ ಕೂಗಿದ.

“ಇಲ್ಲ, ಇಲ್ಲ, ಇಲ್ಲ ಇಲ್ಲವೇ ಇಲ್ಲ! ಆ ರೀತಿಯದ್ದೇನೂ ಇರಲಿಲ್ಲ” ಗುಮಾಸ್ತ ಲಿಬೆಡೆಫ್ ಶಾಕ್ ಹೊಡೆದವನಂತೆ ತಕ್ಷಣ ಹೇಳಿದ. “ಖಂಡಿತ ಸಾಧ್ಯವಿಲ್ಲ, ಆಕೆಯ ಹತ್ತಿರ ದುಡ್ಡಿಗಾಗಿ ಲಿಹಾಚಾಫ್ ಸುಳಿಯಲು ಸಾಧ್ಯವಿರಲಿಲ್ಲ! ಇಲ್ಲ, ಆಕೆ ಅರ್ಮಾಂಕ್ ಅಲ್ಲ. ಟಾಟ್ಸ್ಕಿಯೊಬ್ಬನಿಗೇ ಅಲ್ಲಿ ಏನಾದರೂ ಅವಕಾಶ ಇರಬಹುದಾದ ಸಾಧ್ಯತೆ ಇರುವುದು. ಫ್ರೆಂಚ್ ಅಪೇರ ಥಿಯೇಟರ್‌ನಲ್ಲಿ ಅಥವಾ ಗ್ರ್ಯಾಂಡ್‌ನಲ್ಲಿ ಅವಳಿಗೆ ಮೀಸಲಿರಿಸಿದ ಬಾಕ್ಸ್‌ನಲ್ಲಿಯೇ ಸಂಜೆ ಹೊತ್ತು ಅವಳು ಕೂರೋದು; ಅಲ್ಲಿ ಅಧಿಕಾರಿಗಳು ಮತ್ತು ಜನಗಳು ಎಲ್ಲರೂ ಅವಳ ಕಡೆಗೆ ನೋಡುತ್ತಾ ’ಅಯ್ಯೊ ಅವಳು ಪ್ರಖ್ಯಾತ ನಸ್ಟಾಸಿಯ ಪಿಲಿಪೊವ್ನ!’ ಅಂತ ಹೇಳುತ್ತಾರೆ. ಆದರೆ ಯಾರೂ ಅದಕ್ಕಿಂತಲೂ ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ, ಕಾರಣ ಮುಂದೆ ಹೇಳಲು ಏನೂ ಹೊಳೆಯದೇ ಇರುವುದಕ್ಕೆ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

“ಹೌದು ಅದು ಖಂಡಿತವಾಗಿಯೂ ನಿಜ”, ರೊಗೊಜಿನ್ ಮಂಕು ಕವಿದವನಂತೆ ಮುಖವನ್ನ ಗಂಟಿಕ್ಕುತ್ತಾ ಹೇಳಿದ. “ಅಂದರೆ ಜೆಲೆಶೊಫ್ ಕೂಡ ಹಾಗೆಯೇ ಹೇಳಿದ್ದ. ನಾನು ನೆವ್‌ಸ್ಕಿ ಬಳಿ ಒಂದು ಸುಂದರವಾದ ದಿನದಂದು ಓಡುತ್ತಾ ಹೋಗುತ್ತಿದ್ದೆ ಪ್ರಿನ್ಸ್, ನನ್ನ ತಂದೆಯ ಓವರ್ ಕೋಟನ್ನು ಧರಿಸಿಕೊಂಡು; ಆಗಲೇ ಅವಳು ಇದ್ದಕ್ಕಿದ್ದಂತೆ ಒಂದು ಅಂಗಡಿಯಿಂದ ಆಚೆ ಬಂದು ಅವಳ ಕುದುರೆ ಗಾಡಿಯೊಳಗಡೆಗೆ ಹೋದಳು. ನಾನು ಪ್ರಮಾಣಮಾಡಿ ಹೇಳುತ್ತೇನೆ, ನನ್ನಲ್ಲಿ ಅಗ್ನಿಜ್ವಾಲೆ ಇದ್ದಕ್ಕಿದ್ದಂತೆ ಹತ್ತಿಕೊಂಡಂತಾಯಿತು. ನಂತರ ನಾನು ಜೆಲೆಶೊಫ್‌ನನ್ನು ಭೇಟಿ ಮಾಡಿದೆ; ಅವನು ಇನ್ನೊಂದು ತರಹ- ಕ್ಷೌರಿಕನ ಸಹಾಯಕನಂತೆ ಎದ್ದು ನಿಂತ- ಆತನ ಮೇಲೆ ಕನ್ನಡಕ ತೂಗಾಡುತ್ತಿತ್ತು. ’ನಿನ್ನ ಬಗ್ಗೆ ನೀನೇ ಜಂಭ ಪಡಬೇಡ ಹುಡುಗನೇ,’ ಅವನು ಹೇಳಿದ; ’ಅವಳು ನಿನ್ನಂತಹವರಿಗಲ್ಲ; ಅವಳೊಬ್ಬಳು ಪ್ರಿನ್ಸೆಸ್, ಅವಳ ಹೆಸರು ನಾಸ್ಟಾಸಿಯ ಪಿಲಿಪೊವ್ನ ಬಾರ್ಷ್ಕೊಫ್, ಅವಳು ಟಾಟ್ಸ್ಕಿಯ ಜೊತೆ ಬದುಕಿದ್ದಾಳೆ; ಅವನಿಗೆ ಐವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗುತ್ತಿರುವ ಕಾರಣದಿಂದ ಅವಳಿಂದ ದೂರವಾಗಲು ಇಷ್ಟಪಡುತ್ತಿದ್ದಾನೆ, ಮತ್ತು ಪೀಟರ್ಸ್ ಬರ್ಗಿನಲ್ಲೇ ಅತ್ಯಂತ ಸುಂದರವಾದ ಒಬ್ಬಳು ಹೆಣ್ಣನ್ನು ಮದುವೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದಾನೆ’. ಆಮೇಲೆ ಅವನು ನನಗೆ ಈ ರೀತಿ ಹೇಳಿದ; ನಾನು ಬೇಕಾದರೆ ನಸ್ಟಾಸಿಯ ಪಿಲಿಪೊವ್ನಳನ್ನು ಆ ದಿನದ ಸಂಜೆ ಗ್ರ್ಯಾಂಡ್ ಥಿಯೇಟರ್‌ನ ಬ್ಯಾಲೆಯಲ್ಲಿ ನೋಡಬಹುದು, ಮತ್ತು ಅವಳ ಬಾಕ್ಸ್ ಎಲ್ಲಿದೆ ಎನ್ನುವುದರ ಬಗ್ಗೆ ವಿವರಿಸಿದ. ನನ್ನ ತಂದೆ ನಮ್ಮ ಮನೆಯಲ್ಲಿ ಯಾರಿಗಾದರೂ ಒಂದು ದಿನ ಥಿಯೇಟರ್‌ಗೆ ಹೋಗಲು ಅನುಮತಿ ಕೊಡುವುದನ್ನ ನೋಡಲು ಇನ್ನೂ ಕಾಯುತ್ತಿದ್ದೇನೆ; ಅದು ಸಾಧ್ಯವಿಲ್ಲ ಅನ್ನುವುದೂ ನನಗೆ ಗೊತ್ತು, ಕಾರಣ ಅನುಮತಿ ಕೇಳಲು ಹೋದರೆ ನನ್ನ ತಂದೆ ಸಾಯಿಸಿಬಿದುವುದಂತೂ ನಿಶ್ಚಿತ. ಆದರೂ ಕೂಡ ನಾನು ಒಂದು ಗಂಟೆಯಷ್ಟು ಕಾಲ ಥಿಯೇಟರ್‌ಗೆ ಹೋಗಿ ನಸ್ಟಾಸಿಯ ಪಿಲಿಪೊವ್ನಳನ್ನು ನೋಡಿದೆ; ಆ ದಿನದ ರಾತ್ರಿ ನಿದ್ದೆ ಮಾಡುವುದಿರಲಿ ಕಣ್ಣು ರೆಪ್ಪೆಯನ್ನೂ ಮುಚ್ಚಲಿಲ್ಲ. ಆ ದಿನ ನನ್ನ ತಂದೆ ನನಗೆ ಎರಡು ಸರ್ಕಾರದ ಲೋನ್ ಬಾಂಡ್‌ಗಳನ್ನು ಮಾರಿಬಿಡಲು ಕೊಟ್ಟರು, ಮತ್ತು ಅವುಗಳ ಬೆಲೆ ಪ್ರತಿಯೊಂದಕ್ಕೂ ಐದು ಸಾವಿರ ರೂಬಲ್‌ನಷ್ಟು. ’ಮಾರಿಬಿಡು, ನಂತರ ಏಳುಸಾವಿರದ ಐನೂರು ರೂಬಲ್ಲನ್ನು ಆಂಡ್ರೇವ್ ಆಫೀಸಿಗೆ ತೆಗೆದುಕೊಂಡು ಹೋಗಿ ಕ್ಯಾಶಿಯರ್‌ಗೆ ಕೊಡು, ಮತ್ತು ಮಿಕ್ಕಿದ್ದನ್ನು ನನಗೆ ತಂದುಕೊಡು, ಹಾದಿಯಲ್ಲಿ ಯಾವಕಡೆಗೂ ನೋಡದೆ ನೇರವಾಗಿ, ಜೋಪಾನವಾಗಿ ತೆಗೆದುಕೊಂಡು ಬಾ, ನಾನು ನಿನಗಾಗಿ ಕಾಯುತ್ತಿರುತ್ತೇನೆ’ ಅಂತ ಆಜ್ಞಾಪಿಸಿದರು. ಸರಿ, ನಾನು ಬಾಂಡುಗಳನ್ನೇನೊ ಮಾರಿದೆ, ಆದರೆ ಏಳುಸಾವಿರದ ಐನೂರು ರೂಬಲ್ಲನ್ನ ಆಂಡ್ರೇವ್ ಆಫೀಸಿಗೆ ತೆಗೆದುಕೊಂಡು ಹೋಗಲೇ ಇಲ್ಲ; ನಾನು ಸೀದ ಇಂಗ್ಲಿಷ್ ಅಂಗಡಿಗೆ ಹೋಗಿ ದೊಡ್ಡ ಗಾತ್ರದ ವಜ್ರವಿದ್ದ ಕಿವಿಯ ಒಂದು ಜೊತೆ ಓಲೆಯನ್ನು ತೆಗೆದುಕೊಂಡೆ. ಪೂರ್ತಿ ಹತ್ತು ಸಾವಿರ ರೂಬೆಲ್ಸ್ ಅವರಿಗೆ ಕೊಟ್ಟೆ. ಅದರ ಬೆಲೆ ಅದಕ್ಕಿಂತ ನಾನೂರು ರೂಬಲ್ಲಿನಷ್ಟು ಹೆಚ್ಚಾಗಿತ್ತು, ಆದ್ದರಿಂದ ನನ್ನ ಹೆಸರನ್ನು ಬರೆದುಕೊಟ್ಟೆ ಮತ್ತು ಅವರು ನನ್ನನ್ನು ನಂಬಿದರು. ನಾನು ಸೀದ ಜೆಲೆಶೊಫ್‌ನ ಬಳಿಗೆ ಹೋದೆ; ’ನಸ್ಟಾಸಿಯ ಪಿಲಿಪೊವ್ನಳ ಬಳಿಗೆ ಹೋಗೋಣ ಬಾ’ ಎಂದೆ. ನಾವಿಬ್ಬರೂ ಹಿಂದೆಮುಂದೆ ನೋಡದೇ ಅಲ್ಲಿಗೆ ಹೋದೆವು. ನಾನು ನಿಜವಾಗಲೂ ಹೇಳುತ್ತೇನೆ, ದಾರಿಯುದ್ದಕ್ಕೂ ನನ್ನ ಬಗ್ಗೆ ಏನು, ಅಥವ ನನ್ನ ಮುಂದೆ ಏನಿದೆ, ಅಥವ ನನ್ನ ಕಾಲಿನ ಕೆಳಗೇನಿದೆ ಎನ್ನುವದರ ಬಗ್ಗೆ ಯಾವುದೇ ರೀತಿಯ ಪರಿಜ್ಞಾನವೂ ಇಲ್ಲದೇ ನಡೆದೆ; ನಾನು ಏನನ್ನೂ ನೋಡಲೇ ಇಲ್ಲ. ನಾವು ಸೀದ ಅವಳ ಡ್ರಾಯಿಂಗ್ ರೂಮಿನೊಳಗೆ ಹೋದೆವು, ನಂತರ ಅವಳು ಆಚೆ ಬಂದು, ನಮ್ಮ ಬಳಿಗೆ ಬಂದಳು. ನಾನು ಯಾರೆಂಬುದನ್ನು ತಕ್ಷಣ ಹೇಳಲಿಲ್ಲ. ಆದರೆ ಜೆಲೆಶೊಫ್ ಹೇಳಿದ್ ’ಪಾರ್ಫೆನ್ ರೊಗೊಜಿನ್‌ನಿಂದ ಇದು; ನಿನ್ನ ಜೊತೆಯ ಅವನ, ನಿನ್ನೆಯ ಮೊದಲನೇ ಭೇಟಿಯ ಜ್ಞಾಪಕಾರ್ಥಕ್ಕಾಗಿ, ಇದನ್ನು ದಯವಿಟ್ಟು ಒಪ್ಪಿಸಿಕೊಳ್ಳಬೇಕು!’ ಎಂದ. ಅವಳು ಆ ಸಣ್ಣ ಡಬ್ಬಿಯನ್ನ ತೆರೆದಳು, ಅಲ್ಲಿದ್ದ ಕಿವಿಯ ರಿಂಗ್ ಕಡೆಗೆ ನೋಡಿ ನಗುತ್ತಾ ಹೇಳಿದಳು, ’ನನ್ನ ಬಗ್ಗೆ ಕರುಣೆಯಿಂದ ಕೂಡಿದ ಈ ರೀತಿಯ ಗಮನ ಹರಿಸಿದ್ದಕ್ಕೆ ನಿನ್ನ ಸ್ನೇಹಿತ ರೊಗೊಜಿನ್‌ಗೆ ಧನ್ಯವಾದಗಳನ್ನು ಹೇಳು’ ಎಂದು ವಂದಿಸಿ ಹೊರಟುಹೋದಳು. ನಾನ್ಯಾಕೆ ಅಲ್ಲೇ ಆ ಜಾಗದಲ್ಲೇ ಸತ್ತು ಹೋಗಲಿಲ್ಲ? ಪರಿಸ್ಥಿತಿಯ ಲಾಭವನ್ನೆಲ್ಲಾ ಆ ಮೃಗ ಜೆಲೆಶೊಫ್‌ನೆ ಪಡೆದುಕೊಂಡುಬಿಟ್ಟ! ನಾನು ಬೇರೆ ಕುಳ್ಳಗಿದ್ದೆ ಮತ್ತು ದರಿದ್ರ ಉಡುಪನ್ನ ತೊಟ್ಟಿದ್ದೆ; ಅಲ್ಲೇ ನಿಂತುಕೊಂಡು ಅವಳ ಮುಖವನ್ನೇ ದಿಟ್ಟಿಸಿದೆ ಮತ್ತು ಒಂದು ಮಾತನ್ನೂ ಆಡಲಿಲ್ಲ, ಕಾರಣ ನಾನು ನಾಚಿಕೆ ಸ್ವಭಾವದವನು, ಕತ್ತೆಯ ಹಾಗೆ! ಆದರೆ ಸಂಪೂರ್ಣವಾಗಿ ಅಲಂಕರಿಸಿಕೊಂಡಿದ್ದವನು ಅವನು, ಪೌಡರ್ ಸ್ನೋ ಎಲ್ಲವನ್ನೂ ಬಳಿದುಕೊಂಡು, ಜೊತೆಗೆ ಆಕರ್ಷಣೀಯವಾದ ಟೈಯ್ಯನ್ನು ಬೇರೆ ಕಟ್ಟಿಕೊಂಡಿದ್ದ, ಬಗ್ಗಿ ವಂದಿಸುತ್ತಾ ಮತ್ತು ಹಲ್ಲುಗಿಂಜುತ್ತಾ ಇದ್ದ; ನಾನು ಬೇಕಾದರೆ ಪಣ ತೊಡುತ್ತೇನೆ, ಅವಳು ಇಡೀ ಸಮಯ ಅವನೇ ನಾನು ಅಂದುಕೊಂಡುಬಿಟ್ಟಳು ಅನ್ನಿಸುತ್ತದೆ! ’ಈಗ ಇಲ್ಲಿ ನೋಡು’, ’ಇದರ ನಂತರ ಇನ್ನುಮುಂದೆ ಈ ವಿಷಯಗಳಲ್ಲಿ ನಿನ್ನ ಯಾವುದೇ ರೀತಿಯ ಹಸ್ತಕ್ಷೇಪದ ಅವಶ್ಯಕತೆಯಿಲ್ಲ, ನಿನಗೆ ಅರ್ಥವಾಯಿತು ತಾನೆ?’ ಅಂದು ಅವನನ್ನುದ್ದೇಶಿಸಿ ಹೇಳಿದೆ. ಅವನು ನಕ್ಕುಬಿಟ್ಟ; ’ಈಗ ನಿನ್ನ ತಂದೆಯನ್ನು ಯಾವ ರೀತಿಯಲ್ಲಿ ಸಂಭಾಳಿಸ್ತೀಯ?’ ಅವನು ಕೇಳಿದ. ಮನೆಗೆ ಹೋಗುವುದಕ್ಕಿಂತ ಮುಂಚೆ ನೇವ ನದಿಗೆ ಹಾರಿಬಿಡಬೇಕು ಅನ್ನಿಸಿತು. ನಂತರ ನನಗನಿಸಿದ್ದು ಏನಾದರೂ ಆಗಲಿ ಹಾಗೆ ಮಾಡಬಾರದು ಮತ್ತು ಪರಿಸ್ಥಿತಿಯನ್ನು ಎದುರಿಸಬೇಕೆಂದು. ನಾನು ಮನೆಗೆ ಒಬ್ಬ ಶಾಪಗ್ರಸ್ತನಂತೆ ಹೋದೆ.”

“ಅಬ್ಬಬ್ಬ!” ಗುಮಾಸ್ತ ನಡುಗಿದ. “ಮತ್ತು ಅವನ ತಂದೆ…” ಅವನು ಪ್ರಿನ್ಸ್‌ನ ಅಭಿಪ್ರಾಯಕ್ಕೋಸ್ಕರ ಸೇರಿಸಿದ. “ಮತ್ತು ಅವನ ತಂದೆ ಬರೀ ಹತ್ತು ರೂಬಲ್ಲಿಗೇ ಯಾರನ್ನು ಬೇಕಾದರೂ ಪರಲೋಕಯಾತ್ರೆ ಮಾಡಿಸುವ ವ್ಯಕ್ತಿ, ಇನ್ನು ಹತ್ತುಸಾವಿರ ಅಂದರೆ ಮಾತನಾಡದಿರುವುದೇ ವಾಸಿ!”

ಪ್ರಿನ್ಸ್, ರೊಗೊಜಿನ್‌ನನ್ನು ಬಹಳ ಕುತೂಹಲದಿಂದ ಗಮನಿಸಿದ; ಈ ಕ್ಷಣದಲ್ಲಿ ಎಂದೂ ಬಿಳಿಚಿಕೊಂಡಿರದಷ್ಟು ಬಿಳಿಚಿಕೊಂಡಿದ್ದ.

“ಅದರ ಬಗ್ಗೆ ನಿನಗೇನು ಗೊತ್ತು?” ರೊಗೊಜಿನ್ ಕೂಗಿದ. “ಸರಿ, ನನ್ನ ತಂದೆ ನಡೆದ ಕತೆಯೆಲ್ಲವನ್ನೂ ಸಂಪೂರ್ಣವಾಗಿ ತಕ್ಷಣವೇ ತಿಳಿದುಕೊಂಡ, ಅದಲ್ಲದೇ ಜೆಲೆಶೊಫ್ ಎಲ್ಲ ಕತೆಯನ್ನೂ ಊರಿಗೆಲ್ಲಾ ಹರಡಿಬಿಟ್ಟಿದ್ದ” ಮೂಯಿಶ್ಕಿನ್ ಕಡೆಗೆ ನೋಡುತ್ತಾ ಮಾತನಾಡುತ್ತಿದ್ದ. “ನನ್ನ ತಂದೆ ನನ್ನನ್ನ ಮಹಡಿ ಮೇಲಕ್ಕೆ ಕರೆದುಕೊಂಡು ಹೋಗಿ ರೂಮಿನಲ್ಲಿ ಕೂಡಿಹಾಕಿದ; ಒಂದು ಗಂಟೆ ಕಾಲ ನನ್ನನ್ನು ಹಾಗೆ ಮಾಡುತ್ತೀನಿ ಹೀಗೆ ಮಾಡುತ್ತೀನಿ ಅಂತ ಕೂಗಾಡಿದ. ’ಇದು ಬರೀ ಆರಂಭ, ರಾತ್ರಿಯವರೆಗೂ ಕಾಯುತ್ತಿರು, ಆಗ ಬಂದು ನಿನಗೆ ಪುನಃ ಬುದ್ಧಿ ಕಲಿಸುತ್ತೇನೆ’, ಅಂತ ಹೇಳಿದ. ಈಗ ನೀನು ಏನನ್ನು ಯೋಚಿಸುತ್ತೀಯ? ಆ ಮುದುಕ ಸೀದ ನಸ್ಟಾಸಿಯಾ ಪಿಲಿಪೊವ್ನಳ ಮನೆಗೆ ಹೋದ, ಬಗ್ಗಿ, ಮಂಡಿ ಊರಿ, ನೆಲದ ಮೇಲೆ ಹಣೆಯಿಟ್ಟು, ಬಡಬಡಿಸುತ್ತಾ ಆ ಒಡವೆಗಳನ್ನು ಹಿಂತಿರುಗಿಸುವಂತೆ ಅವಳನ್ನು ಗದ್ಗದಿತನಾಗಿ ಬೇಡಿಕೊಂಡ. ಸ್ವಲ್ಪ ಸಮಯದ ನಂತರ ಅವಳು ಆ ಒಡವೆ ಇದ್ದ ಡಬ್ಬಿಯನ್ನು ತಂದು ಅವನ ಕಡೆಗೆ ಎಸೆದಳು. ’ಅಲ್ಲಿದೆ’ ಎಂದು, ’ನಿನ್ನ ಆ ಓಲೆಗಳನ್ನ ತೆಗೆದುಕೊಂಡು ಹೋಗು ದರಿದ್ರ ಜಿಪುಣ ಮುದುಕನೇ. ನನಗೆ ಈಗ ಅವು ಅದರ ನಿಜ ಬೆಲೆಗಿಂತ ಹತ್ತು ಪಟ್ಟು ಆತ್ಮೀಯ ಮತ್ತು ಬೆಲೆಬಾಳುವ ವಸ್ತುವಾಗಿವೆ. ನನಗೀಗ ತಿಳಿಯಿತು ನಿನ್ನ ಮಗ ಪಾಫೆನ್ ಸೆಮ್ಯೋನೋವಿಚ್ ಅವನ್ನು ಕೊಳ್ಳಲು ಎಂತಹ ಬಿರುಗಾಳಿಯನ್ನು ಎದುರಿಸಿರಬಹುದು ಎಂದು! ಅವನಿಗೆ ನನ್ನ ಶುಭಾಶಯಗಳನ್ನ ತಿಳಿಸು’. ಅಂತ ಹೇಳಿದಳು. ’ಅವನಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನೂ ತಿಳಿಸು’. ಸರಿ, ನಾನು ಏತನ್ಮಧ್ಯೆ ಇಪ್ಪತ್ತು ರೂಬಲ್ಲುಗಳನ್ನ ಸ್ನೇಹಿತ ಸೆರ್‍ಯೋಜಾ ಪ್ರೋಟುಶಿನ್‌ನಿಂದ ಸಾಲಮಾಡಿ ಸೀದ ಪಸ್ಕಾಫ್‌ನಲ್ಲಿದ್ದ ನನ್ನ ದೊಡ್ಡಮ್ಮಳ ಮನೆಗೆ ಹೋದೆ. ಆ ವಯಸ್ಸಾದ ಹೆಂಗಸು ನನಗೆ ಸಂತರ ಜೀವನದ ಬಗ್ಗೆ ಓದಲು ಶುರುಮಾಡಿದಳು. ಅವಳ ಕೊರೆತವನ್ನು ತಡೆದುಕೊಳ್ಳಲಾರದೇ ನಾನು ಅಲ್ಲಿದ್ದ ಹೆಂಡದಂಗಡಿಗಳನ್ನು ಪರ್ಯಟನ ಮಾಡಲು ಶುರುಮಾಡಿದೆ. ನಾನು ಪಸ್ಕಾಫ್‌ಗೆ ಬಂದಾಗ ಅತೀವವಾದ ಜ್ವರದಿಂದ ನರಳುತ್ತಿದ್ದೆ, ಮತ್ತು ರಾತ್ರಿಯಾಗುವ ವೇಳೆಗೆ ರಸ್ತೆಯಲ್ಲಿಯೇ ಚಿತ್ತಭ್ರಮೆಗೊಳಗಾಗಿ ಒಂದಲ್ಲಾ ಒಂದು ಕಡೆ ಬಿದ್ದಿರುತ್ತಿದ್ದೆ!”

“ಓಹೊ! ನಸ್ಟಾಸಿಯಾ ಪಿಲಿಪೊವ್ನ ಮತ್ತೊಂದು ರಾಗ ಹಾಡಲಿದ್ದಾಳೆ!” ಕಿಸಕಿಸನೆ ನಗುತ್ತಾ ತನ್ನ ಕೈಗಳನ್ನ ಉಜ್ಜಿಕೊಳ್ಳುತ್ತಾ ಹಿಗ್ಗಿದವನಂತೆ ಗುಮಾಸ್ತ ಹೇಳಿದ. “ಕಿವಿಯೋಲೆಗಳು ಏನು ಸಾರ್! ಅಂತಹ ಓಲೆಗಳಿಂದ ಈಗ ಅವಳಿಗಾದ ಅವಮಾನವನ್ನು ಸರಿಪಡಿಸಬಹುದೇ…”

“ಇಲ್ಲಿ ನೋಡು” ರೊಗೊಜಿನ್ ಕಿರುಚಿದ, ಗುಮಾಸ್ತ ಲೆಬೆಡೆಫ್‌ನ ಕೈಯ್ಯನ್ನು ಆವೇಶದಿಂದ ಬಿಗಿಯಾಗಿ ಹಿಡಿದುಕೊಂಡು, “ನೀನು ಪುನಃ ನಸ್ಟಾಸಿಯಳ ಬಗ್ಗೆ ಒಂದು ಮಾತು ಆಡಿದರೂ, ಚಾವಟಿಯಿಂದ ನಿನ್ನ ಚರ್ಮದ ಬಣ್ಣವನ್ನೇ ಬದಲಾಯಿಸುತ್ತೇನೆ! ಲಿಹಾಚಾಫ್ ನಿನಗೆ ಗೊತ್ತು ಅನ್ನುವುದನ್ನೂ ಲೆಕ್ಕಿಸದೆ”

“ಆಹಾ! ಹಾಗೇ ಮಾಡು-ಖಂಡಿತವಾಗಿಯೂ! ನೀನು ನನ್ನ ಚರ್ಮದ ಬಣ್ಣ ಬದಲಾಯಿಸಿದಾಕ್ಷಣ ನೀನು ನನ್ನನ್ನೇನು ದೂರ ಕಳುಹಿಸುವುದಿಲ್ಲ. ನಿನ್ನ ಚಾವಟಿಯಿಂದಲೇ ನನ್ನನ್ನು ಶಾಶ್ವತವಾಗಿ ಕಟ್ಟಿಹಾಕಿಕೊಳ್ಳುತ್ತೀಯ. ಹಹ! ಆದರೂ ನಮ್ಮ ನಿಲ್ದಾಣ ಬಂದೇಬಿಡ್ತು ಆಗಲೇ.”

ಅವನು ಹೇಳಿದ ಹಾಗೆಯೇ ರೈಲು ನಿಧಾನವಾಗಿ ಅವನ ನಿಲ್ದಾಣಕ್ಕೆ ಬಂದಿತು.

ರೊಗೊಜಿನ್ ತಾನು ಪೆಸ್ಕೊಫ್ ನಗರವನ್ನು ಗುಪ್ತವಾಗಿ ಬಿಟ್ಟು ಬಂದೆ ಎಂದು ಹೇಳಿದ್ದರೂ, ಅವನನ್ನು ಆಹ್ವಾನಿಸಲು ದೊಡ್ಡ ಗುಂಪೇ ನಿಲ್ದಾಣದಲ್ಲಿ ಸೇರಿತ್ತು; ತಮ್ಮ ಹ್ಯಾಟುಗಳನ್ನು ಯಥೇಚ್ಛವಾಗಿ ಬೀಸುತ್ತಾ ಮತ್ತು ಕೂಗುತ್ತಾ ಅವನನ್ನು ಬರಮಾಡಿಕೊಂಡರು.

“ಅದು ಯಾಕೆ ಜೆಲೆಶೊಫ್ ಇಲ್ಲೂ ಕೂಡ ಬಂದಿದ್ದಾನೆ!” ಅವನು ಗೊಣಗಿದ. ಇಡೀ ದೃಶ್ಯದ ಕಡೆಗೆ ವಿಜಯೋತ್ಸಾಹದಿಂದ ದಿಟ್ಟಿಸಿ ನೋಡುತ್ತಾ, ಜೊತೆಗೆ ಅಹಿತಕರವಾದ ನಗುವನ್ನ ಸೂಸುತ್ತಾ, ನಂತರ ಇದ್ದಕ್ಕಿದ್ದಂತೆ ಅವನು ಪ್ರಿನ್ಸ್ ಕಡೆಗೆ ತಿರುಗಿ, “ನಾನು ಅದ್ಯಾಕೊ ನಿನ್ನನ್ನು ಇಷ್ಟಪಡಲು ಶುರುಮಾಡಿದ್ದೇನೆ. ಬಹುಶಃ ನಿನ್ನನ್ನು ಭೇಟಿಮಾಡಿದ ಗಳಿಗೆಯ ಕಾರಣದಿಂದಿರಬೇಕು. ಇಲ್ಲ, ಅದಿರಲು ಸಾಧ್ಯವಿಲ್ಲ, ಕಾರಣ ಈ ವ್ಯಕ್ತಿಯನ್ನೂ ಭೇಟಿಮಾಡಿದ್ದೂ ಅದೇ ಗಳಿಗೆಯಲ್ಲೇ. (ಲೆಬೆಡೆಫ್ ಕಡೆಗೆ ನೋಡುತ್ತಾ). ಆದರೆ ನಾನು ಅವನನ್ನು ಯಾವುದೇ ಕಾರಣಕ್ಕೂ ಇಷ್ಟಪಡಲೇ ಇಲ್ಲ; ನನ್ನನ್ನು ಕಾಣಲು ನಾನಿರುವ ಸ್ಥಳಕ್ಕೆ ಬಾ ಪ್ರಿನ್ಸ್; ನಿನ್ನ ಆ ಕೊಳಕು ಬಟ್ಟೆಯನ್ನ ತೆಗೆದು ಬಿಸಾಕಿ ನಿನಗೊಂದು ಹೊಸಾ ಸುಂದರ ಉಣ್ಣೆಯ ಕೋಟನ್ನು ತೊಡಿಸೋಣ; ಇರುವುದರಲ್ಲೇ ಅತ್ಯಂತ ಸೊಗಸಾದ ಮಾಮೂಲಿ ಕೋಟೊಂದನ್ನು ಕೊಡಿಸುತ್ತೇನೆ, ಬಿಳಿ ಬಣ್ಣದ ವೇಯ್ಸ್ಟ್ ಕೋಟು, ನಿನಗೆ ಯಾವುದಿಷ್ಟವೊ ಅದನ್ನ, ಮತ್ತು ನಿನ್ನ ಜೇಬು ಹಣದಿಂದ ತುಂಬಿರುತ್ತದೆ. ಬಾ, ನೀನೂ ನನ್ನ ಜೊತೆ ನಸ್ಟಾಸಿಯ ಪಿಲಿಪೊವ್ನಳ ಬಳಿ ಹೋಗುವಾಗ ಬಾ. ಬರುತ್ತೀಯ ತಾನೆ?”

“ಒಪ್ಪಿಕೊ, ಒಪ್ಪಿಕೊ ಪ್ರಿನ್ಸ್ ಲೆಫ್ ನಿಕೊಲೈವಿಚ್” ಲೆಬೆಡೆಫ್ ಗಂಭೀರವಾಗಿ ಹೇಳಿದ. “ಈ ಅವಕಾಶವನ್ನ ಕೈಯಿಂದ ಜಾರಿಹೋಗಲು ಬಿಡಬೇಡ, ಬೇಗ!”

ಪ್ರಿನ್ಸ್ ಮೂಯಿಶ್ಕಿನ್ ಮೇಲೆದ್ದು ರೊಗೊಜಿನ್ ಕಡೆಗೆ ತನ್ನ ಕೈಗಳನ್ನು ಸೌಜನ್ಯದಿಂದ ಚಾಚಿ, ಸ್ವಲ್ಪ ಸೌಹಾರ್ದಯುತವಾಗಿಯೇ ಉತ್ತರಿಸಿದ:

“ನಾನು ಅತ್ಯಂತ ಸಂತೋಷದಿಂದ ಬರುತ್ತೇನೆ, ನನ್ನನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಕಾಲಾವಾಕಾಶ ಸಿಕ್ಕರೆ ನಾನು ಇಂದೇ ಬಂದುಬಿಡಬಹುದೆಂದು ಹೇಳಲು ಧೈರ್ಯ ಮಾಡುತ್ತೇನೆ; ನಾನು ನಿನಗೆ ಬಿಚ್ಚು ಮನಸ್ಸಿನಿಂದ ಹೇಳುವುದೇನೆಂದರೆ ನಾನೂ ಕೂಡ ನಿನ್ನನ್ನು ಬಹಳವಾಗಿ ಇಷ್ಟಪಡುತ್ತೇನೆ. ನಾನು ನಿನ್ನನ್ನು ಇಷ್ಟಪಡಲು ಶುರುಮಾಡಿದ್ದು ನಮಗೆ ಆ ವಜ್ರದ ರಿಂಗ್ ಬಗ್ಗೆ ಹೇಳಿದಾಗ; ಆದರೆ ಅದನ್ನ ಹೇಳುವುದಕ್ಕಿಂತ ಮುಂಚಿನಿಂದಲೂ ಕೂಡ ನಾನು ನಿನ್ನನ್ನು ಇಷ್ಟಪಡಲು ಶುರುಮಾಡಿದೆ, ನಿನ್ನ ಮುಖ ಒಂದು ರೀತಿಯ ಕಪ್ಪು ಮೋಡದ ರೀತಿಯಂತಿದ್ದರೂ ಕೂಡ. ನನಗೆ ಅಷ್ಟೆಲ್ಲಾ ನೀಡುವುದರ ಬಗ್ಗೆಯ ನಿನ್ನ ಪ್ರಸ್ತಾವನೆಗೆ ನಾನು ಚಿರಋಣಿ; ನನಗೀಗ ಖಂಡಿತವಾಗಿಯೂ ಬಟ್ಟೆ ಮತ್ತು ಬೆಚ್ಚಗಿನ ಕೋಟಿನ ಅವಶ್ಯಕತೆ ಇದೆ. ಹಣದ ವಿಷಯಕ್ಕೆ ಬಂದರೆ ಈ ಕ್ಷಣದಲ್ಲಿ ನನ್ನ ಬಳಿ ಒಂದು ಬಿಡಿಗಾಸೂ ಇಲ್ಲ.”

“ನೀನು ಬೇಕಾದಷ್ಟು ಹಣವನ್ನ ಪಡೆಯುತ್ತೀಯ; ಇಂದಿನ ಸಂಜೆಯ ಹೊತ್ತಿಗೆ ನನಗೆ ಸಾಕಷ್ಟು ಹಣ ಸಿಗತ್ತದೆ; ಆದ್ದರಿಂದ ಖಂಡಿತ ಬಾ!”

“ಅದು ಸತ್ಯವಾದ ಮಾತು. ಅವನಿಗೆ ಈ ಸಂಜೆಯ ವೇಳೆಗೆ ಬೇಕಾದಷ್ಟು ಹಣ ಸಿಗುತ್ತದೆ” ಲೆಬೆಡೆಫ್ ಮಧ್ಯೆ ಬಾಯಿಹಾಕಿ ಹೇಳಿದ.

“ಆದರೆ ನೀನು ಈ ವಿಷಯದ ಬಗ್ಗೆ ಹೇಳು, ನೀನು ಹೆಂಗಸರನ್ನು ಬೇಗ ಒಲಿಸಿಕೊಳ್ಳುತ್ತೀಯ? ಮೊದಲು ಅದನ್ನ ತಿಳಿದುಕೊಳ್ಳಬೇಕು”, ರೊಗೊಜಿನ್ ಪ್ರಿನ್ಸ್‌ನನ್ನು ಕೇಳಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ಅಯ್ಯೊ ಇಲ್ಲ ಇಲ್ಲ, ಖಂಡಿತ ಇಲ್ಲ!” ಪ್ರಿನ್ಸ್ ಹೇಳಿದ, “ನನಗೆ ಅದು ಸಾಧ್ಯವೇ ಇಲ್ಲ- ನನ್ನ ಕಾಯಿಲೆಯ ಸಲುವಾಗಿ ನನಗೆ ಹೆಂಗಸರ ಬಗ್ಗೆ ತಿಳಿದೇ ಇಲ್ಲ.”

“ಓಹೋ! ಹಾಗೋ, ಹಾಗಿದ್ದರೆ ಸರಿ” ಎಂದ ರೊಗೊಜಿನ್. “ನೀನು ಸಾಮಾನ್ಯ; ಮತ್ತು ಆಶೀರ್ವಾದ ಪಡೆದಿರುವ ಮುಗ್ಧ. ದೇವರು ನಿನ್ನಂತಹವರನ್ನು ಇಷ್ಟ ಪಡುತ್ತಾನೆ,”

“ಮತ್ತೆ ದೇವರು ನಿನ್ನಂತಹವರನ್ನು ಮೆಚ್ಚುತ್ತಾನೆ” ಗುಮಾಸ್ತ ಪುನರಾವರ್ತಿಸಿದ.

“ಸರಿ! ನಿನಗೆ ಇಷ್ಟವಿದ್ದರೆ, ನೀನೂ ಕೂಡ, ಬೇಕಾದರೆ ಈಗಲೇ ನನ್ನ ಜೊತೆ ಬರಬಹುದು!” ರೊಗೊಜಿನ್ ಜೋರಾಗಿ ಲೆಬೆಡೆಫ್‌ಗೆ ಹೇಳಿದ.

ಹಾಗಾಗಿ ಅವರೆಲ್ಲರೂ ಕುದುರೆಯ ಗಾಡಿಗಳಲ್ಲಿ ಹೊರಟರು. ಲೆಬೆಡೆಫ್‌ಗೆ ಅವನದೇ ಆದ ಇಂಗಿತವೊಂದಿತ್ತು. ಅವನು ಗದ್ದಲವೆಬ್ಬಿಸುತ್ತಿದ್ದ ರೊಗೊಜಿನ್‌ನ ಸ್ನೇಹಿತರ ಗುಂಪಿನ ಜೊತೆಯಲ್ಲಿ ವೊಜ್ನೆಸೆನ್ಸಕಿಯ ಕಡೆಗೆ ಹೋದ, ಮತ್ತು ಪ್ರಿನ್ಸ್‌ನ ದಾರಿ ಲಿಟಾಯ್ನ ಕಡೆಗಿತ್ತು. ಆಗ ಬಹಳ ಶೀತದಿಂದ ಕೂಡಿದ ತಂಡಿ ವಾತಾವರಣವಿತ್ತು. ಪ್ರಿನ್ಸ್ ದಾರಿಹೋಕರಿಂದ ವಿಳಾಸವನ್ನ ಕೇಳಿಕೊಳ್ಳುತ್ತಾ ಹೋದ; ಅವನು ತಾನು ತಲುಪಬೇಕಾದ ಸ್ಥಳ ಇನ್ನೂ ಎರಡು ಮೈಲಿಯಷ್ಟು ದೂರ ಇದೆ ಎಂಬುದನ್ನು ತಿಳಿದು ಡ್ರಾಷ್ಕಿ (ಸಣ್ಣ ನಾಲ್ಕುಚಕ್ರದ ಟ್ಯಾಕ್ಸಿ) ಎಂಬ ವಾಹನದಲ್ಲಿ ಹೋಗಲು ನಿರ್ಧರಿಸಿದ.

(ಮುಂದಿನ ವಾರ: ಅಧ್ಯಾಯ-2)
(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...