ಬೆಂಗಳೂರು ಮತದಾರರ ಮಾಹಿತಿ ಕಳ್ಳತನದಲ್ಲಿ ರಾಜ್ಯದ ಆಡಳಿತರೂಢ ಪಕ್ಷವಾದ ಬಿಜೆಪಿಗೆ ನೇರ ಕೈವಾಡವಿದೆ ಎಂದು ದಿ ನ್ಯೂಸ್ ಮಿನಿಟ್ ಹೊಸ ವರದಿ ಹೇಳಿದೆ. ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ತನ್ನ ಏಜೆಂಟರಿಗೆ ಬಿಜೆಪಿ ಕಚೇರಿಯಲ್ಲೆ ತರಬೇತಿ ನೀಡುತ್ತಿತ್ತು ಮತ್ತು ಬಿಬಿಎಂಪಿ ಅವರಿಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ 15 ದಿನಗಳ ನಂತರವೂ ಅದು ಮುಂದುವರೆದಿತ್ತು ಎಂದು ಆರೋಪಿಸಿದೆ.
ದಿ ನ್ಯೂಸ್ ಮಿನಿಟ್ ಮತ್ತು ಪ್ರತಿಧ್ವನಿ ಜಂಟಿಯಾಗಿ ನಡೆಸಿದ ತನಿಖಾ ವರದಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಮತದಾರರ ಮಾಹಿತಿ ಕಳ್ಳತನ ಹಗರಣ ಬಯಲಿಗೆಳೆದಿತ್ತು. ಈ ಹಗರಣದಲ್ಲಿ ಪೊಲೀಸರು ಈಗಾಗಲೆ ಒಟ್ಟು ಐವರನ್ನು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬೆಂಗಳೂರಿನ ಹೊಂಗಸಂದ್ರದ ಬಿಜೆಪಿ ವಾರ್ಡ್ ಕಚೇರಿಯಲ್ಲೆ ಏಜೆಂಟರಿಗೆ ತರಬೇತಿ ನೀಡಲಾಗಿತ್ತು ಎಂದು ನ್ಯೂಸ್ ಮಿನಿಟ್ ಹೇಳಿದೆ. ಚಿಲುಮೆ ಸಂಸ್ಥೆಯ ಉದ್ಯೋಗಾಕಾಂಕ್ಷಿಯಂತೆ ತೆರಳಿದ್ದ ನ್ಯೂಸ್ ಮಿನಿಟ್‌ನ ವ್ಯಕ್ತಿಯೊಬ್ಬರು ಮೂಲಕ ಈ ಮಾಹಿತಿ ಬಹಿರಂಗವಾಗಿದೆ. ಈ ಕಚೇರಿಯಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸುವ ಏರಿಯಾಗಳ ನಕ್ಷೆ ಮಾಡುವುದು ಮತ್ತು ಮತದಾರರ ಡೇಟಾವನ್ನು ಹೇಗೆ ಸಂಗ್ರಹಿಸುವುದು ಎಂಬುದರ ಕುರಿತು ಚಿಲುಮೆ ಎನ್‌ಜಿಒ ತನ್ನ ಕ್ಷೇತ್ರ ಕಾರ್ಯಕರ್ತರಿಗೆ ತರಬೇತಿ ನೀಡಿತ್ತು ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ.
ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಚಿಲುಮೆ ಎನ್‌ಜಿಒ ನಿರ್ದೇಶಕ ರವಿಕುಮಾರ್ ಬಂಧನ
ಬಿಜೆಪಿಯ ಈ ಕಚೇರಿಯನ್ನು ಕಾರ್ಪೊರೇಟರ್ ಹುದ್ದೆಯ ಆಕಾಂಕ್ಷಿಗಳು ಪ್ರಾಥಮಿಕವಾಗಿ ಬಳಸುತ್ತಾರೆ. ಸೆಪ್ಟೆಂಬರ್ 2020 ರವರೆಗೆ ವಾರ್ಡ್‌ನ ಕೌನ್ಸಿಲರ್ ಬಿಜೆಪಿಯ ಭಾರತಿ ರಾಮಚಂದ್ರ ಆಗಿದ್ದರು. ಈ ಕಚೇರಿಗೆ ಪ್ರಸ್ತುತ ಶಾಸಕರ ವಾರ್ಡ್ ಕಚೇರಿ ಎಂದು ಹೆಸರು ಹಾಕಲಾಗಿದೆ. ಹೊಂಗಸಂದ್ರವು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕ್ಷೇತ್ರಕ್ಕೆ ಸೇರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶಿಸಿದ ನಂತರವೂ ಚಿಲುಮೆಯ ಏಜೆಂಟರು ಅಕ್ರಮ ಮತದಾರರ ಮಾಹಿತಿ ಸಂಗ್ರಹಣೆಯನ್ನು ಮುಂದುವರೆಸುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಪರಿಶೀಲಿಸಲು ನ್ಯೂಸ್ ಮಿನಿಟ್ ರಹಸ್ಯವಾಗಿ ಅಲ್ಲಿಗೆ ತೆರಳಿತ್ತು.
ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಚಿಲುಮೆ ಸಂಸ್ಥೆಯ ಇಬ್ಬರ ಬಂಧನ, ನಿರ್ದೇಶಕ ಪರಾರಿ
ಈ ಹಿಂದೆ ವರದಿಯಾದಂತೆ, ನವೆಂಬರ್ 2 ರಂದು ಚುನಾವಣಾ ವಂಚನೆಯ ತನಿಖೆಯನ್ನು ನ್ಯೂಸ್ ಮಿನಿಟ್ ಪ್ರಾರಂಭಿಸಿದ ನಂತರ BBMP ತರಾತುರಿಯಲ್ಲಿ ಚಿಲುಮೆ ಎನ್‌ಜಿಒಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತು. ಆದರೂ ಕನಿಷ್ಠ ನವೆಂಬರ್ 17 ರವರೆಗೆ ಚಿಲುಮೆಯು ತನ್ನ ಕಾರ್ಯಾಚರಣೆಯನ್ನು ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಸಿತ್ತು ನ್ಯೂಸ್ ಮಿನಿಟ್ ವರದಿ ಹೇಳಿದೆ.
ಬಿಬಿಎಂಪಿಯ ರದ್ದತಿ ಆದೇಶವನ್ನು ಧಿಕ್ಕರಿಸಿ ಚಿಲುಮೆಯು ಹೊಸ ತಾಜಾ ಫೀಲ್ಡ್ ಏಜೆಂಟರನ್ನು ನೇಮಿಸಿಕೊಳ್ಳುತ್ತಿದೆ ಎಂಬ ಸುಳಿವು ಆಧರಿಸಿ, ನ್ಯೂಸ್ ಮಿನಿಟ್ ನವೆಂಬರ್ 12 ರಂದು ಕೆಲಸ ಹುಡುಕುವ ನೆಪದಲ್ಲಿ ಚಿಲುಮೆ ಎನ್‌ಜಿಒ ಮಲ್ಲೇಶ್ವರಂ ಕಚೇರಿಗೆ ಭೇಟಿ ನೀಡಿತ್ತು. ಕೆಲವು ಪ್ರಶ್ನೆಗಳ ನಂತರ ನ್ಯೂಸ್ ಮಿನಿಟ್‌ನ ವ್ಯಕ್ತಿಯನ್ನು ಅಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ನವೆಂಬರ್ 16 ರಂದು ದಕ್ಷಿಣ ಬೆಂಗಳೂರಿನ ಹೊಂಗಸಂದ್ರ ಪ್ರದೇಶದಲ್ಲಿ ತರಬೇತಿ ಕೇಂದ್ರದ ಸ್ಥಳದ ಲೊಕೇಷನ್ ಕಳುಹಿಸಿದ್ದರು. ಮರುದಿನ ಸ್ಥಳಕ್ಕೆ ತೆರಳಿದ್ದ ನ್ಯೂಸ್ ಮಿನಿಟ್‌ನ ವ್ಯಕ್ತಿ, ಬಿಜೆಪಿಯ ಬೊಮ್ಮಸಂದ್ರ ಶಾಸಕ ಸತೀಶ್ ರೆಡ್ಡಿ ಅವರ ಕಚೇರಿಯಲ್ಲಿ ತರಬೇತಿ ನಡೆಯುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅವರು ಕಚೇರಿಯ ಒಳಗಿನ ಮತ್ತು ಹೊರಗಿನ ಫೋಟೋಗಳನ್ನು ಕ್ಲಿಕ್ ಮಾಡಿದ್ದು, ಅದನ್ನು ನ್ಯೂಸ್ ಮಿನಿಟ್ ಪ್ರಕಟಿಸಿದೆ. ಕಚೇರಿಯ ಮುಖ್ಯ ಕಿಟಕಿಯ ಮೇಲೆ ಸತೀಶ್ ರೆಡ್ಡಿ ಅವರ ಚಿತ್ರವಿರುವ ದೊಡ್ಡ ಪೋಸ್ಟರ್ ಅನ್ನು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಇದನ್ನೂ ಓದಿ: ಬಿಬಿಎಂಪಿ ಬಳಸಿಕೊಂಡು ಮತದಾರರ ಡೇಟಾ ಕದ್ದ ಬೊಮ್ಮಾಯಿ ಸರ್ಕಾರ: ಕಾಂಗ್ರೆಸ್ ದೂರು
“ನವೆಂಬರ್ 17 ರಂದು ಹಗರಣ ಬಯಲಾಗುತ್ತಿದ್ದಂತೆ ಕನ್ನಡ ಮಾಧ್ಯಮಗಳು ಅದನ್ನು ವರದಿ ಮಾಡಿದ್ದವು. ಹೀಗಾಗಿ ಏಜೆಂಟರಿಗೆ ತರಬೇತಿ ನೀಡುತ್ತಿದ್ದ ಬಿಜೆಪಿ ಕಚೇರಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಂತರ ನಡೆದ ಸಂಕ್ಷಿಪ್ತ ಚರ್ಚೆಯ ನಂತರ ಎಲ್ಲರೂ ಅಲ್ಲಿಂದ ಹಿಂತಿರುಗಿದ್ದು, ಅಲ್ಲಿನ ಮೇಲ್ವಿಚಾರಕರು, ‘ತಾಂತ್ರಿಕ ಸಮಸ್ಯೆಯಿಂದ ಕೆಸಲ ನಡೆಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಪುನರಾರಂಭಿಸಿದಾಗ ತಿಳಿಸಲಾಗುವುದು’ ಎಂದು ಹೇಳಿದ್ದರು” ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ.
ನವೆಂಬರ್ 19 ರಂದು, ನ್ಯೂಸ್ ಮಿನಿಟ್‌ನ ವ್ಯಕ್ತಿಯು ಮೇಲ್ವಿಚಾರಕರಿಗೆ ಕರೆ ಮಾಡಿ ಚಿಲುಮೆ ಕಚೇರಿಗಳ ಮೇಲೆ ಪೋಲೀಸ್ ದಾಳಿಯ ಬಗ್ಗೆ ಕೇಳಿದ್ದು, ತಮ್ಮ ಕೆಲಸದ ಬಗ್ಗೆ ಪ್ರಶ್ನಿಸಿದ್ದಾರೆ. ಮೇಲ್ವಿಚಾರಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದು, ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
“ಸಣ್ಣಪುಟ್ಟ ಸಮಸ್ಯೆಗಳಿದ್ದು, ಶೀಘ್ರದಲ್ಲೇ ಕಾರ್ಯಾಚರಣೆ ಪುನರಾರಂಭಿಸಲಾಗುವುದು” ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ. ಆದರೆ, ಅಂದಿನಿಂದ ಒಂದನ್ನು ಹೊರತುಪಡಿಸಿ ಎಲ್ಲಾ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು ನಗರ ಉತ್ತರ: ಹಿಂದುತ್ವದ ಫ್ರಿಂಜ್ ಅಖಾಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?
ತಮ್ಮ ವಾರ್ಡ್ ಕಚೇರಿಯಲ್ಲಿ ನಡೆದ ತರಬೇತಿ ಕುರಿತು ಸತೀಶ್ ರೆಡ್ಡಿ ಅವರ ಪ್ರತಿಕ್ರಿಯೆ ಕೇಳಿದಾಗ, ಈ ಬಗ್ಗೆ ಯಾವುದೆ ಮಾಹಿತಿ ತನಗೆ ಇಲ್ಲ ಎಂದು ಶಾಸಕ ಹೇಳಿದ್ದಾಗಿ ನ್ಯೂಸ್ ಮಿನಿಟ್ ಹೇಳಿದೆ. ತರಬೇತಿಗಾಗಿ ತಮ್ಮ ಅನುಮತಿಯಿಲ್ಲದೆ ಕಚೇರಿಯನ್ನು ಬಳಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಅನೇಕ ಜನರು ಕಚೇರಿಗೆ ಭೇಟಿ ನೀಡುತ್ತಾರೆ ಮತ್ತು ತರಬೇತಿಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಉತ್ತರಿಸಿದ್ದಾರೆ.
ನ್ಯೂಸ್ ಮಿನಿಟ್‌ನ ಸಂಪೂರ್ಣ ವರದಿ ಇಲ್ಲಿ ಓದಿ


