ಆಡಳಿತಾರೂಢ ಬಿಜೆಪಿ ಸರ್ಕಾರವು ತಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ಗುಜರಾತ್ ಮಾಲ್ಧಾರಿ ಮಹಾಪಂಚಾಯತ್ (ಜಿಎಂಎಂ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಸಮುದಾಯಕ್ಕೆ ಕರೆ ನೀಡಿದೆ. ಜಿಎಂಎಂ ರಾಜ್ಯದ ಜಾನುವಾರು ಸಾಕಣೆದಾರರ ಒಕ್ಕೂಟ ಸಂಘಟನೆಯಾದ್ದು, ಗುಜರಾತ್‌ನಲ್ಲಿ ಮಾಲ್ಧಾರಿ ಜನಸಂಖ್ಯೆ ಸುಮಾರು 61 ಲಕ್ಷ ಇದೆ ಎಂದು ಸಂಘಟನೆ ಪ್ರತಿಪಾದಿಸಿದೆ.
ಮೆಹ್ಸಾನಾದಲ್ಲಿ ಸೋಮವಾರ ಸಭೆ ನಡೆಸಿದ ಗುಜರಾತ್ ಮಾಲ್ಧಾರಿ ಮಹಾಪಂಚಾಯತ್‌ನ ವಕ್ತಾರ ನಾಗಜಿಭಾಯ್ ದೇಸಾಯಿ ನೀಡಿದ ಹೇಳಿಕೆಯಲ್ಲಿ, ಕಳೆದ ಒಂದೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ಬಗ್ಗೆ ಸಮುದಾಯವು ತೀವ್ರ ಅಸಮಾಧಾನ ಹೊಂದಿರುವುದರಿಂದ ಅದನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಶಕ್ತಿಯನ್ನು ತೋರಿಸುತ್ತೇವೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಡಿಸೆಂಬರ್ 1 ಮತ್ತು 5 ರಂದು ನಡೆಯುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮಾಲ್ಧಾರಿ ಸಮುದಾಯದ ಎಲ್ಲಾ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮಾಲ್ಧಾರಿ ಮಹಾಪಂಚಾಯತ್ ಮನವಿ ಮಾಡಿದೆ. ಸಮುದಾಯಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಮತ್ತು ಕಾಂಗ್ರೆಸ್ ಶಾಸಕರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ
ಮಾಲಧಾರಿ ಸಮುದಾಯದ ಬಾಕಿ ಉಳಿದಿರುವ ಬೇಡಿಕೆಗಳನ್ನು ಪಟ್ಟಿ ಮಾಡಿರುವ ದೇಸಾಯಿ, “ಕಳೆದ ವಾರದಿಂದ ಮಹಾಪಂಚಾಯತ್ ಸಮುದಾಯದ ಕಡಯಿಂದ ಅಭಿಪ್ರಾಯಗಳನ್ನು ಕೇಳಿದೆ. ನಿನ್ನೆ (ಸೋಮವಾರ) ನಡೆದ ಪ್ರತಿನಿಧಿಗಳ ಸಭೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಲು ನಿರ್ಧರಿಸಲಾಯಿತು. ಮತ ಎಂಬ ಅಸ್ತ್ರ ಬಳಸಿ ಬಿಜೆಪಿಗೆ ತಕ್ಕ ಪಾಠ ಕಲಿಸುವಂತೆ ಸಮುದಾಯವು ಮನವಿ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.
ಮಾಲ್ಧಾರಿ ವಸಾಹತ್ (ವಸತಿ ಪ್ರದೇಶ) ಸ್ಥಾಪಿಸುವುದು, ಸಮುದಾಯದ ಸದಸ್ಯರ ವಿರುದ್ಧ ಸುಳ್ಳು ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು, ರೈತರಾಗಿರುವ ಹಕ್ಕು ಮತ್ತು ಗಿರ್, ಬರ್ದಾ ಮತ್ತು ಅಲೆಚ್ ಅರಣ್ಯ ಪ್ರದೇಶದಲ್ಲಿ ವಾಸಿಸುವ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ಸೇರಿದಂತೆ ಹಲವು ಬೇಡಿಕೆಗಳನ್ನು ಸಮುದಾಯ ಮುಂದಿಟ್ಟಿದೆ ಎಂದು ದೇಸಾಯಿ ಹೇಳಿದ್ದಾರೆ.
“ಗುಜರಾತ್ ನಗರ ಪ್ರದೇಶಗಳಲ್ಲಿ ಜಾನುವಾರು ನಿಯಂತ್ರಣ (ಕೀಪಿಂಗ್ ಮತ್ತು ಮೂವಿಂಗ್) ಮಸೂದೆ-2022” ಯನ್ನು ಅಂಗೀಕರಿಸಿದ್ದಕ್ಕಾಗಿ ಬಿಜೆಪಿ ಸರ್ಕಾರದ ವಿರುದ್ಧ ಸಮುದಾಯವು ಈಗಾಗಲೇ ಭಾರಿ ವಿರೋಧವನ್ನು ಹೊಂದಿದೆ. ಈ ವರ್ಷ ಸೆಪ್ಟೆಂಬರ್ 18 ರಂದು, ಮಸೂದೆಯನ್ನು ರದ್ದುಗೊಳಿಸುವಂತೆ ಕೋರಿ, ಮಾಲ್ಧಾರಿ ಸಮುದಾಯದ ಮುಖಂಡರು ಮಹಾಪಂಚಾಯತ್ ಅನ್ನು ಆಯೋಜಿಸಿದರು. ಗಾಂಧಿನಗರ ಜಿಲ್ಲೆಯ ಶೇರ್ತಾ ಗ್ರಾಮದಲ್ಲಿ ನಡೆದ ಈ ಮಹಾಪಂಚಾಯತ್‌ನಲ್ಲಿ ಸುಮಾರು 50,000 ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ಗುಜರಾತ್: ಬಂಡಾಯವೆದ್ದ 12 ನಾಯಕರಿಗೆ ಬಿಜೆಪಿಯಿಂದ ಗೇಟ್‌ಪಾಸ್
ಈ ಪ್ರತಿಭಟನೆ ನಡೆದು ಒಂದು ದಿನದ ನಂತರ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಮಸೂದೆಯನ್ನು ಮರುಪರಿಶೀಲನೆಗಾಗಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಹೀಗಾಗಿ ಸೆಪ್ಟೆಂಬರ್ 21 ರಂದು ವಿಧಾನಸಭೆಯು ಅವಿರೋಧವಾಗಿ ಮಸೂದೆಯನ್ನು ಹಿಂತೆಗೆದುಕೊಂಡಿತ್ತು.


