Homeಮುಖಪುಟಗಾಂಧಿ ಕೊಲ್ಲಲು ಗೋಡ್ಸೆಗೆ ಬಂದೂಕು ಕೊಟ್ಟಿದ್ದೇ ಸಾವರ್ಕರ್‌: ಬಾಪು ಮೊಮ್ಮಗ ಹೇಳಿಕೆ

ಗಾಂಧಿ ಕೊಲ್ಲಲು ಗೋಡ್ಸೆಗೆ ಬಂದೂಕು ಕೊಟ್ಟಿದ್ದೇ ಸಾವರ್ಕರ್‌: ಬಾಪು ಮೊಮ್ಮಗ ಹೇಳಿಕೆ

- Advertisement -
- Advertisement -

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ನಾಯಕ ವಿ.ಡಿ.ಸಾವರ್ಕರ್‌ ನೇರವಾಗಿ ಪಾತ್ರ ವಹಿಸಿದ್ದರು ಎಂಬ ಆರೋಪವನ್ನು ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಮಾಡಿದ್ದಾರೆ.

“ಗಾಂಧಿ ಹತ್ಯೆಯಲ್ಲಿ ಸಾವರ್ಕರ್‌ ಪಾತ್ರವಿಲ್ಲ” ಎಂಬ ವಾದವನ್ನು ಸಂಘಪರಿವಾರ ಮಾಡುತ್ತಾ ಬಂದಿದೆ. ಆದರೆ ಅನೇಕ ಚರಿತ್ರಾಕಾರರು ಈ ಕೃತ್ಯದಲ್ಲಿ ಸಾವರ್ಕರ್‌‌ ಪಾತ್ರವನ್ನು ಉಲ್ಲೇಖಿಸಿ ಬರೆದಿದ್ದಾರೆ. ಈಗ ತುಷಾರ್‌ ಗಾಂಧಿಯವರು ಸಾವರ್ಕರ್‌ ಪಾತ್ರದ ಕುರಿತು ಮಾತನಾಡಿದ್ದಾರೆ.

“ವಿ.ಡಿ.ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ, ಮಹಾತ್ಮ ಗಾಂಧೀಜಿ ಹತ್ಯೆಯಲ್ಲೂ ನಾಥೂರಾಮ್‌ ಗೋಡ್ಸೆಗೆ ಸಹಾಯ ಮಾಡಿದ್ದರು” ಎಂದು ಅವರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಾವರ್ಕರ್‌ ವಿಷಯ ಪ್ರಸ್ತಾಪಿಸಿದ್ದರು. “ಬ್ರಿಟಿಷರಿಗೆ ಸಾವರ್ಕರ್‌ ಪತ್ರ ಬರೆದಿದ್ದರು. ಗಾಂಧೀಜಿ, ನೆಹರೂ, ಪಟೇಲ್‌ ಮತ್ತಿತರ ನಾಯಕರು ಜೈಲು ವಾಸ ಅನುಭವಿಸಿದರು” ಎಂದು ರಾಹುಲ್ ಗಾಂಧಿಯವರು ಮಹಾರಾಷ್ಟ್ರದಲ್ಲಿ ಹೇಳಿದ್ದು ಮಹಾ ವಿಕಾಸ್ ಅಘಾಡಿ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಮೂಡಲೂ ಕಾರಣವಾಗಿತ್ತು. ಮೈತ್ರಿ ಪಕ್ಷವಾದ ಉದ್ಧವ್‌ ನೇತೃತ್ವದ ಶಿವಸೇನಾ ಬಣದ ನಾಯಕರು, ರಾಹುಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿತ್ತು.

ವಿವಾದದ ಬೆನ್ನಲ್ಲೇ ಮಹಾತ್ಮ ಗಾಂಧಿಜೀಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಸಾವರ್ಕರ್ ವಿಷಯ ಕೈಗೆತ್ತಿಕೊಂಡಿದ್ದಾರೆ.

ಬುಲ್ಧಾನಾ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿರುವ ತುಷಾರ್ ಗಾಂಧಿ, ಸಾವರ್ಕರ್ ವಿರುದ್ಧ ಮಾತನಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ತುಷಾರ್‌ ಗಾಂಧಿ, “ಸಾವರ್ಕರ್ ಬ್ರಿಟಿಷರಿಗೆ ಮಾತ್ರ ಸಹಾಯ ಮಾಡಿಲ್ಲ. ಬಾಪು ಕೊಲೆಗೆ ನಾಥೂರಾಮ್‌ ಗೋಡ್ಸೆಗೂ ಸಹಾಯ ಮಾಡಿದ್ದಾರೆ. ಗಾಂಧೀಜಿಯನ್ನು ಕೊಲೆ ಮಾಡಲು ಸಮರ್ಥ ಬಂದೂಕು ಒದಗಿಸುವಲ್ಲಿ ಸಾವರ್ಕರ್ ಸಹಾಯ ಮಾಡಿದ್ದಾರೆ. ಗಾಂಧೀಜಿ ಕೊಲೆಗೂ ಮುನ್ನ ಗೋಡ್ಸೆ ಸಮರ್ಥವಾದ ಆಯುಧ ಹೊಂದಿರಲಿಲ್ಲ” ಎಂದು ತಿಳಿಸಿದ್ದಾರೆ.

“1930ರ ದಶಕದಲ್ಲಿ ಬಾಪು ಅವರ ವಿರುದ್ಧ ಅನೇಕ ಪ್ರಯತ್ನಗಳು ನಡೆದವು. ವಿದರ್ಭದ ಅಕೋಲಾದಲ್ಲಿ ಬಾಪುವನ್ನು ಕೊಲ್ಲುವ ಸಂಚಿನ ಬಗ್ಗೆ ಪ್ರಬೋಧಂಕರ್ ಠಾಕ್ರೆ ಅವರು ಬಾಪು ಅವರ ಸಹಚರರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರು. ಆದ್ದರಿಂದ ಆ ಸಂದರ್ಭದಲ್ಲಿ ಬಾಪುವಿನ ಜೀವ ಉಳಿದಿತ್ತು. ಸನಾತನಿ ಹಿಂದೂ ಸಂಘಟನೆಗಳು ಮತ್ತು ಮಹಾರಾಷ್ಟ್ರದ ಅವರ ನಾಯಕತ್ವಕ್ಕೆ ಬಾಪು ಅವರ ಹತ್ಯೆಯ ದಾಳಿಯಿಂದ ದೂರವಿರುವಂತೆ ಸಾರ್ವಜನಿಕ ಎಚ್ಚರಿಕೆ ನೀಡಿದ್ದರು” ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಮನುಷ್ಯನಾದವನಿಗೆ ಮಾತ್ರ ದುಃಖಿಸಲು ಸಾಧ್ಯ: ಸಾವರ್ಕರ್‌ ವಿವಾದದ ಬಳಿಕ ರಾಹುಲ್‌ರನ್ನು ಹೊಗಳಿದ ಸಂಜಯ್‌ ರಾವುತ್‌

“ಎರಡನೆಯ ಮಹಾಯುದ್ಧದ ಸಮಯದಲ್ಲಿ ಸಾವರ್ಕರ್ ಬ್ರಿಟಿಷರಿಗೆ ಸಕ್ರಿಯವಾಗಿ ಸಹಾಯ ಮಾಡಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ ಐಎನ್‌ಎ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ತಿಳಿದ ನಂತರವೂ ಸಹಾಯ ಮುಂದುವರೆಸಿದ್ದರು. ಇದು ನಿರಾಕರಿಸಲಾಗದ ಐತಿಹಾಸಿಕ ಸತ್ಯ” ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರ ಸಾವರ್ಕರ್ ಹೇಳಿಕೆಗೆ ಉದ್ಧವ್ ಠಾಕ್ರೆ ಬಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಆ ಕುರಿತು ಮಾತನಾಡಿರುವ ತುಷಾರ್ ಗಾಂಧಿ, “ಸಾವರ್ಕರ್ ಮತ್ತು ಹೆಡ್ಗೇವಾರ್ ಅವರು ಸನಾತನ ಹಿಂದೂಗಳ ನಾಯಕರಾಗಿದ್ದರು. ಪ್ರಬೋಧನಕರ್ ಅವರ ನೀಡಿದ ಎಚ್ಚರಿಕೆಯು ಈ ನಾಯಕರನ್ನುದ್ದೇಶಿಸಿಯೇ ನೀಡಲಾಗಿತ್ತು. ಶಿವಸೇನೆಯ ಉದ್ಧವ್ ಠಾಕ್ರೆಯವರು, ಅವರ ಈ ಇತಿಹಾಸವನ್ನು ನೆನಪಿಸಿಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...