Homeಮುಖಪುಟ'ಪಾಲಾರ್' ಸಿನಿಮಾ ಟ್ರೇಲರ್‌ ಬಿಡುಗಡೆ ಮಾಡಿದ ಖ್ಯಾತ ನಿರ್ದೇಶಕ ಪ.ರಂಜಿತ್

‘ಪಾಲಾರ್’ ಸಿನಿಮಾ ಟ್ರೇಲರ್‌ ಬಿಡುಗಡೆ ಮಾಡಿದ ಖ್ಯಾತ ನಿರ್ದೇಶಕ ಪ.ರಂಜಿತ್

- Advertisement -
- Advertisement -

ದಲಿತ ದೌರ್ಜನ್ಯ ಮತ್ತು ಭೂಮಿ ಪ್ರಶ್ನೆಯ ಕಥೆಯನ್ನಾಧರಿಸಿದ ಕನ್ನಡದ ಬಹುನಿರೀಕ್ಷಿತ ‘ಪಾಲಾರ್‌’ ಸಿನಿಮಾದ ಟ್ರೇಲರ್‌ ಅನ್ನು ಖ್ಯಾತ ತಮಿಳು ನಿರ್ದೇಶಕ ಪ.ರಂಜಿತ್ ಬಿಡುಗಡೆ ಮಾಡಿದ್ದಾರೆ. ‘ಪಾಲಾರ್ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲು ಆಗಲಿ ಎಂದು ಶುಭ ಕೋರುತ್ತೇನೆ’ ಎಂದು ಅವರು ಟ್ವೀಟ್ ಸಹ ಮಾಡಿದ್ದಾರೆ.

ಯುವ ನಿರ್ದೇಶಕ ಜೀವಾ ನವೀನ್ ನಿರ್ದೇಶನದ ಕೋಲಾರ ಜಿಲ್ಲೆಯಲ್ಲಿ ನಡೆದ ಸತ್ಯ ಘಟನೆಗಳ ಆಧಾರಿತ ಪಾಲಾರ್ ಸಿನಿಮಾದಲ್ಲಿ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸೌನವಿ ಕ್ರಿಯೇಷನ್ಸ್‌ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ.

ಎಲ್ಲಾ ಕಮ್ಮಿ ಜಾತಿ ನನ್ ಮಕ್ಕಳಿಗೇನಾ ಪ್ರೈಸ್ ಕೊಡೋದು ನೀವು? ಇಲ್ಲ ನೀವು ಅವರೇನಾ? ಎನ್ನುವ ಡೈಲಾಗ್ ಮತ್ತು ‘ಜಮೀನ್‌ಗುಳಗಾ ಏನ್ ಬೆಳೆಯಕಾತದೆ ಅಂದ್ರೆ? ಏನ್ ಏರೋಪ್ಲೇನಾ ಬೆಳೆಯಕಾತದೆ? ರಾಗಿ, ಟಮಾಟ ಬೆಳೆಯಾದು, ಹೊಟ್ಗುಳ್‌ಗ ತಿನ್ನಕ!’ ಎನ್ನುವ ಉಮಾರವರ ಕೋಲಾರ ಕನ್ನಡ ಭಾಷೆಯ ಡೈಲಾರ್ ಟ್ರೇಲರ್‌ನಲ್ಲಿದ್ದು ಗಮನ ಸೆಳೆದಿದೆ.

“ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್‌ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿದು ಹೋಗುತ್ತದೆ. ಆ ನಂತರ ತಮಿಳುನಾಡು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ನದಿ ಒಳಗಡೆಯೇ ಇದ್ದಾಗ ಬಿಸಿಯಾಗಿರುತ್ತದೆ. ಆ ಬಿಸಿ ಒಂದು ರೀತಿಯಲ್ಲಿ ರಕ್ತಕ್ಕೆ ಸಮಾನ. ದಲಿತರಲ್ಲೂ ಇದೇ ರೀತಿಯ ಕುದಿತ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬರುತ್ತದೆ. ಒಮ್ಮೆ ಆ ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ಈ ಪಾಲಾರ್‌ ಕಥೆ. ನದಿಗೂ ಮತ್ತು ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಈ ಹೆಸರನ್ನು ಬಳಸಿದ್ದೇವೆ. ಪಾಲಾರ್‌ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಮ್ಮ ಕಥೆ ನಡೆಯುತ್ತದೆ” ಎನ್ನುತ್ತಾರೆ ನಿರ್ದೇಶಕ ಜೀವಾ ನವೀನ್.

ಮೂರು ತಿಂಗಳ ಹಿಂದೆಯೇ ಚಿತ್ರದ ಟ್ರೇಲರ್ ಬಿಡುಗಡೆಯಾಗಬೇಕಿತ್ತು. ಆದರೆ ದಲಿತರ ಕಥೆ ಎಂಬ ಕಾರಣಕ್ಕೆ ಆಡಿಯೋ ಕಂಪನಿಗಳು ಟ್ರೇಲರ್ ಬಿಡುಗಡೆಗೆ ಹಿಂಜರಿಯುತ್ತಿವೆ ಎಂದು ಜೀವಾ ನವೀನ್ ಆರೋಪಿಸಿದ್ದರು. ಧೀರ್ಘ ಫೇಸ್‌ಬುಕ್ ಪೋಸ್ಟ್ ಮೂಲಕ ಯಾವ ಯಾವ ಕಂಪನಿಗಳು ಯಾವ ರೀತಿ ಉತ್ತರ ನೀಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆಗೆ ಸೌನವಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿಯೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಎರಡು ನಿಮಿಷದ ಟ್ರೇಲ್‌ರ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಮ್ಮೆ ನೀವು ಟ್ರೇಲರ್‌ ನೋಡಿ.

ಇದನ್ನೂ ಓದಿ; ದಲಿತರ ಕಥೆಯುಳ್ಳ ‘ಪಾಲಾರ್‌‌’ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಒಪ್ಪದ ಆಡಿಯೊ ಕಂಪನಿಗಳು; ನಿರ್ದೇಶಕರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read