2010 ರ ಫಿಫಾ ವಿಶ್ವಕಪ್ ಚಾಂಪಿಯನ್ ಬಲಿಷ್ಟ ಜರ್ಮನಿ ತಂಡವು ಕತಾರ್ ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಇದಕ್ಕೆ ಕಾರಣ ಏಷ್ಯಾದ ಉದಯೋನ್ಮುಖ ತಂಡ ಜಪಾನ್. ತನ್ನ ಆರಂಭಿಕ ಪಂದ್ಯದಲ್ಲಿ ಜರ್ಮನಿ ತಂಡವನ್ನು ಬಗ್ಗು ಬಿಡಿದಿದ್ದ ಜಪಾನ್ ಇಂದು ಬಲಿಷ್ಟ ಸ್ಪೇನ್ ತಂಡವನ್ನು ಸಹ ಮಣಿಸಿ (2-1) 16ರ ಘಟ್ಟಕ್ಕೆ ಕಾಲಿಟ್ಟ ಏಷ್ಯಾ ಖಂಡದ ತಂಡವೆನಿಸಿಕೊಂಡಿತು.
ಲೀಗ್ ಹಂತದ ಇ ಗುಂಪಿನಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ 6 ಅಂಕ ಪಡೆದ ಜಪಾನ್ ಸುಲಭವಾಗಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು. ಜರ್ಮನಿ ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಕೋಸ್ಟರಿಕ ವಿರುದ್ದ 4-2 ಅಂತದಲ್ಲಿ ಜಯಗಳಿಸಿದರೂ ಟೂರ್ನಿಯಲ್ಲಿ ಉಳಿಯಲಾಗಲಿಲ್ಲ.
ಸದ್ಯ ಸ್ಪೇನ್ ಮತ್ತು ಜರ್ಮನಿ ತಲಾ ಒಂದು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾದೊಂದಿಗೆ 4 ಅಂಕ ಗಳಿಸಿವೆ. ಆದರೂ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಧಾರದಲ್ಲಿ ಸ್ಪೇನ್ 16ರ ಘಟ್ಟಕ್ಕೆ ಪ್ರವೇಶ ಪಡೆದರೆ ಜರ್ಮನಿ ತಂಡ ತವರಿಗೆ ಪ್ರಯಾಣ ಬೆಳೆಸಬೇಕಿದೆ. ಮೂರು ಪಂದ್ಯಗಳಲ್ಲಿ ಸ್ಪೇನ್ 9 ಗೋಲು ಗಳಿಸಿ ನಾಲ್ಕು ಅಂಕ ಪಡೆದಿದ್ದರೆ, ಜರ್ಮನಿ 6 ಗೋಲು ಗಳಿಸಿ 4 ಅಂಕ ಪಡೆದಿದೆ.

ಇಂದು ನಡೆದ ಪಂದ್ಯದಲ್ಲಿ ಜಪಾನ್ ತಂಡದ ರಿತ್ಸು ಡೋನ್ ಮತ್ತು ಅವೊ ತನಕಾ ತಲಾ ಒಂದೊಂದು ಗೋಲು ಗಳಿಸಿದರೆ, ಸ್ಪೆನ್ ಪರವಾಗಿ ಅಲ್ವಾರೊ ಮೊರಾಟಾ ಒಂದು ಗೋಲು ಗಳಿಸಿದರು.
ಎಫ್ ಗುಂಪಿನಿಂದ ಮೊರಾಕ್ಕೊ ಮತ್ತು ಕ್ರೊವೇಷಿಯಾ, ಡಿ ಗುಂಪಿನಿಂದ ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ನಾಕೌಟ್ ಹಂತ ಪ್ರವೇಶಿಸಿವೆ. ಸಿ ಗುಂಪಿನಿಂದ ಅರ್ಜೇಂಟೀನಾ ಮತ್ತು ಪೋಲಾಂಡ್, ಬಿ ಗುಂಪಿನಿಂದ ಇಂಗ್ಲೆಂಡ್ ಮತ್ತು ಅಮೆರಿಕ ಹಾಗೂ ಎ ಗುಂಪಿನಿಂದ ನೆದರ್ಲೆಂಡ್ಸ್ ಮತ್ತು ಸೆನಗಲ್ ನಾಕೌತ್ ಪ್ರವೇಶಿಸಿದ ಇತರ ತಂಡಗಳಾಗಿವೆ.
ಫಿಫಾ ವಿಶ್ವಕಪ್ ಟೂರ್ನಿಯ ಮಾದರೆಯೇನು?
ಲೀಗ್ ಹಂತ
ಅಧಿಕೃತ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಲೀಗ್ ಹಂತದಲ್ಲಿ 32 ತಂಡಗಳನ್ನು ತಲಾ ನಾಲ್ಕು ತಂಡಗಳಂತೆ 8 (ಎ ಯಿಂದ ಹೆಚ್ ವರೆಗೆ) ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ತಂಡಕ್ಕೂ ಮೂರು ಪಂದ್ಯಗಳನ್ನು ಆಡುವ ಅವಕಾಶವಿರುತ್ತದೆ. ಈ ಹಂತದಲ್ಲಿ ಪ್ರತಿ ಗೆಲುವಿಗೆ 3 ಅಂಕ, ಡ್ರಾ ಆದರೆ ಎರಡು ತಂಡಕ್ಕೆ ತಲಾ ಒಂದು ಅಂಕ ಮತ್ತು ಸೋಲಿಗೆ 0 ಅಂಕ ಇರುತ್ತದೆ. ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ಎರಡು ತಂಡಗಳನ್ನು ಮುಂದಿನ ನಾಕೌಟ್ ಹಂತಕ್ಕೆ (16ರ ಹಂತ) ಅರ್ಹತೆ ಪಡೆಯುತ್ತವೆ. ಪ್ರತಿ ಗುಂಪಿನಿಂದ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಲಾ ಎರಡು ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.
ಒಂದು ವೇಳೆ ಯಾವುದೇ ಗುಂಪಿನ ಅಂಕ ಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದ ತಂಡಗಳು ಸಮಾನ ಅಂಕ ಪಡೆದರೆ (ಡ್ರಾ ಸಂದರ್ಭಗಳಲ್ಲಿ ಇದರ ಸಾಧ್ಯತೆ ಹೆಚ್ಚು) ಗುಂಪು ಹಂತದಲ್ಲಿ ತಂಡಗಳ ಗೆಲುವಿನ ಗೋಲಿನ ಅಂತರ ಅಥವಾ ಅತಿ ಹೆಚ್ಚು ಗೋಲು ಗಳಿಸಿದ ತಂಡ ಅಥವಾ ಆ ಎರಡು ತಂಡಗಳ ನಡುವಿನ ಇದುವರೆಗಿನ ಪಂದ್ಯಗಳಲ್ಲಿ ಅತಿ ಹೆಚ್ಚು ಗೆದ್ದಿರುವ ತಂಡ 16ರ ಹಂತಕ್ಕೆ ಅರ್ಹತೆ ಗಿಟ್ಟಿಸುತ್ತದೆ.
ನಾಕೌಟ್ (16ರ ಹಂತ)
16ರ ಹಂತದಲ್ಲಿ ಸಿಂಗಲ್ ಎಲಿಮಿನೇಷನ್ ಪಂದ್ಯಗಳು ಇರುತ್ತವೆ. ಒಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಮತ್ತೊಂದು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಸ್ಪರ್ಧಿಸುತ್ತದೆ. ಗೆದ್ದವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ ಸೋತ ತಂಡ ಟೂರ್ನಿಯಿಂದ ಹೊರಬೀಳುತ್ತದೆ. ಪಂದ್ಯ ಡ್ರಾ ಆದರೆ ವಿಜೇತ ತಂಡವನ್ನು ಗುರುತಿಸಲು ಹೆಚ್ಚಿನ ಸಮಯ ನೀಡಲಾಗುತ್ತದೆ ಅಥವಾ ಪೆನಾಲ್ಟಿ ಶೂಟೌಟ್ ನಡೆಸಲಾಗುತ್ತದೆ. ಹೀಗೆ 4 ಗುಂಪಿನಿಂದ 8 ತಂಡಗಳು ಕ್ವಾರ್ಟರ್ ಫೈನಲ್ ತಲುಪುತ್ತವೆ.
ಕ್ವಾರ್ಟರ್ ಫೈನಲ್
ಇಲ್ಲಿಯೂ ಸಹ ಸಿಂಗಲ್ ಎಲಿಮಿನೇಷನ್ ಪಂದ್ಯಗಳು ಇರುತ್ತವೆ. 8 ತಂಡಗಳಿಗೆ ನಾಲ್ಕು ಪಂದ್ಯಗಳು ನಡೆದು ಗೆದ್ದವರು ಸೆಮಿಫೈನಲ್ ತಲುಪುತ್ತಾರೆ. ಸೋತ ತಂಡ ಹೊರನಡೆಯುತ್ತದೆ.
ಸೆಮಿಫೈನಲ್
ನಾಲ್ಕು ತಂಡಗಳ ಎರಡು ಸೆಮಿಫೈನಲ್ ಪಂದ್ಯಗಳು ನಡೆಯುತ್ತವೆ. ಗೆದ್ದ ಎರಡು ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯುತ್ತವೆ. ಸೋತ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ಒಂದು ಪಂದ್ಯ ನಡೆಯುತ್ತದೆ.
ಫೈನಲ್
ಅಂತಿಮವಾಗಿ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತದೆ. ಪ್ರಸ್ತುತ ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಡಿಸೆಂಬರ್ 18 ರಂದು ನಡೆಯಲಿದೆ.
ಇದುವರೆಗೂ ನಡೆದ 21 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಬ್ರೆಜಿಲ್ ದೇಶವು ಎಲ್ಲಾ ವಿಶ್ವಕಪ್‌ಗಳಲ್ಲಿಯೂ ಅರ್ಹತೆ ಪಡೆದು ಆಡಿದೆ. ಅಲ್ಲದೆ 5 ಬಾರಿ ಚಾಂಪಿಯನ್ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಉಳಿದಂತೆ ಜರ್ಮನಿ ಮತ್ತು ಇಟಲಿ ತಂಡಗಳು ತಲಾ ನಾಲ್ಕು ಬಾರಿ ಚಾಂಪಿಯನ್ ಆಗಿವೆ. ಹಾಲಿ ಚಾಂಪಿಯನ್ ಫ್ರಾನ್ಸ್, ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳು ತಲಾ ಎರಡು ಬಾರಿ ಚಾಂಪಿಯನ್ ಆಗಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ತಲಾ ಒಮ್ಮೆ ಟ್ರೋಫಿ ಎತ್ತಿ ಹಿಡಿದಿವೆ.
ಇದನ್ನೂ ಓದಿ: ಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ – ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?


