ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಶಾಲೆಯ ಮುಖ್ಯಶಿಕ್ಷಕಿಯೊಬ್ಬರು ಆರು ದಲಿತ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯವನ್ನು ಸ್ವಚ್ಛಗೊಳಿಸಲು ದೂಡುತ್ತಿದ್ದಾರೆಂಬ ಸಂಗತಿ ಹೊರಬಿದ್ದಿದೆ.
ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿಯ ಪೋಷಕರೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾದ ಬೆನ್ನಲ್ಲೇ ಶಿಕ್ಷಕಿ ತಲೆಮರೆಸಿಕೊಂಡಿದ್ದಾಳೆ. ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಶೌಚಾಲಯವನ್ನು ಸ್ವಚ್ಛಗೊಳಿಸಲು ಪರಿಶಿಷ್ಟ ಜಾತಿಯ ಮಕ್ಕಳನ್ನು ಮಾತ್ರ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ರಾಣಿ ದೂಡುತ್ತಿದ್ದರು” ಎಂದು 5ನೇ ತರಗತಿ ವಿದ್ಯಾರ್ಥಿಯ ತಾಯಿಯೊಬ್ಬರು ದೂರು ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
“ಇತ್ತೀಚೆಗಷ್ಟೇ ನನ್ನ ಮಗ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ನಂತರವಷ್ಟೇ ಶೌಚಾಲಯ ಶುಚಿಗೊಳಿಸುತ್ತಿದ್ದ ವಿಷಯ ನನಗೆ ತಿಳಿಯಿತು” ಎಂದು ಅವರು ಹೇಳಿದ್ದಾರೆ.
“ಡೆಂಗ್ಯೂ ಹೇಗೆ ಬಂತು ಎಂದು ನಾನು ನನ್ನ ಮಗನಲ್ಲಿ ವಿಚಾರಿಸಿದೆ. ಶೌಚಾಲಯಕ್ಕೆ ಬ್ಲೀಚಿಂಗ್ ಪೌಡರ್ ಹಾಕುವ ಕೆಲಸವನ್ನು ಆತ ಮಾಡುತ್ತಿದ್ದನೆಂದು ಆಗ ತಿಳಿಯಿತು. ಪ್ರತಿದಿನ ಶೌಚಾಲಯವನ್ನು ಸ್ವಚ್ಛಗೊಳಿಸುವಾಗ ಸೊಳ್ಳೆಗಳು ಕಚ್ಚುತ್ತವೆ ಎಂದು ನನ್ನ ಮಗ ಹೇಳಿದನು” ಎಂದು ನೊಂದ ತಾಯಿ ತಿಳಿಸಿದ್ದಾರೆ.
“ಕಳೆದ ವಾರ ದಲಿತ ವಿದ್ಯಾರ್ಥಿಗಳು ಕೋಲುಗಳು ಮತ್ತು ಮಗ್‌ಗಳೊಂದಿಗೆ ಶೌಚಾಲಯದಿಂದ ಹೊರಬರುವುದನ್ನು ಪೋಷಕರು ನೋಡಿದೆವು. ಇದನ್ನು ಕಂಡು ಪ್ರಶ್ನಿಸಿದಾಗ ಅವರು, ಶೌಚಾಲಯವನ್ನು ಸ್ವಚ್ಛಗೊಳಿಸಿರುವುದಾಗಿಯೂ, ಮುಖ್ಯಶಿಕ್ಷಕಿ ಈ ಕೆಲಸವನ್ನು ಮಾಡಲು ಹೇಳಿರುವುದಾಗಿಯೂ ತಿಳಿಸಿದರು. ಆ ತರಗತಿಯಲ್ಲಿ 40 ಮಕ್ಕಳು ಓದುತ್ತಿದ್ದು, ಅವರಲ್ಲಿ ಹೆಚ್ಚಿನವರು ನಮ್ಮ ಪರಿಶಿಷ್ಟ ಜಾತಿಯ ಮಕ್ಕಳು. ನಮ್ಮ ಮಕ್ಕಳಿಗೆ ಮಾತ್ರ ಈ ಕೆಲಸ ಮಾಡುವಂತೆ ಒತ್ತಾಯಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲ ನ್ಯಾಯ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. “ಪಾಲಕರೈಯಲ್ಲಿರುವ ಪಂಚಾಯತ್ ಯೂನಿಯನ್ ಶಾಲೆಯ ಮುಖ್ಯಶಿಕ್ಷಕಿ ತಲೆಮರೆಸಿಕೊಂಡಿದ್ದಾರೆ. ಆಕೆಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದೇವೆ. ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.


