Homeಮುಖಪುಟಪ್ರಧಾನಿ ಮೋದಿ ರೋಡ್‌ ಶೋಗಳಲ್ಲಿ ಪದೇ ಪದೇ ಆಂಬುಲೆನ್ಸ್‌ಗಳು ಬರುವುದೇಕೆ? ಇದು ಭದ್ರತಾ ವೈಫಲ್ಯವಲ್ಲವೇ?

ಪ್ರಧಾನಿ ಮೋದಿ ರೋಡ್‌ ಶೋಗಳಲ್ಲಿ ಪದೇ ಪದೇ ಆಂಬುಲೆನ್ಸ್‌ಗಳು ಬರುವುದೇಕೆ? ಇದು ಭದ್ರತಾ ವೈಫಲ್ಯವಲ್ಲವೇ?

- Advertisement -
- Advertisement -

ಸೆಪ್ಟಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುವ ಸಂದರ್ಭದಲ್ಲಿ ಆಂಬುಲೆನ್ಸ್ ಬಂದಾಗ ಅದಕ್ಕೆ ದಾರಿ ಮಾಡಿಕೊಟ್ಟಿದ್ದರು. ನವೆಂಬರ್ 09ರಂದು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮೂರು ದಿನ ಬಾಕಿ ಇರುವಾಗ ಕಾಂಗ್ರಾದಲ್ಲಿ ಮೋದಿಯವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗಲೂ ಆಂಬುಲೆನ್ಸ್ ಒಂದು ಎದುರಾಗಿತ್ತು. ಆಗಲೂ ಪ್ರಧಾನಿಗಳು ಕಾದು ದಾರಿ ಬಿಟ್ಟು ಕೊಟ್ಟಿದ್ದರು. ನಿನ್ನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿಯವರು ರೋಡ್ ಶೋ ನಡೆಸುವ ವೇಲೆ ಆಂಬುಲೆನ್ಸ್ ಒಂದೇ ಅದೇ ರಸ್ತೆಯಲ್ಲಿ ಬಂದಿದೆ. ಮತ್ತೆ ಮೋದಿಯವರು ಅದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿ ರೋಡ್‌ ಶೋಗಳಲ್ಲಿ ಪದೇ ಪದೇ ಆಂಬುಲೆನ್ಸ್‌ಗಳು ಬರುವುದೇಕೆ? ಇದು ಭದ್ರತಾ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುವ ರಸ್ತೆಯಲ್ಲಿ ಅವರ ಬೆಂಗಾವಲು ವಾಹನಗಳನ್ನು ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಪ್ರವೇಶ ನೀಡದೇ ಬದಲಿ ಮಾರ್ಗವನ್ನು ಸೂಚಿಸಲಾಗಿತ್ತು. ಆ ರಸ್ತೆಯಲ್ಲಿ ನೂರಾರು ಪೊಲೀಸರ ಕಣ್ತಪ್ಪಿಸಿ ಆಂಬುಲೆನ್ಸ್ ಬರಲು ಹೇಗೆ ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎದ್ದಿದೆ.

ಪ್ರಧಾನಿ ಮೋದಿಯವರ ರೋಡ್ ಶೋಗಳಲ್ಲಿ ಆಂಬುಲೆನ್ಸ್‌ಗಳು ಬರುವುದು, ಅದಕ್ಕೆ ಪ್ರಧಾನಿಗಳು ದಾರಿ ಬಿಟ್ಟುಕೊಡುವುದು ಪೂರ್ವನಿಯೋಜಿತ ನಾಟಕ ಎಂದು ಆರೋಪಿಸಿರುವ ಕಾಂಗ್ರೆಸ್, ಆಂಬುಲೆನ್ಸ್‌ ಅನ್ನು ಬಿಜೆಪಿಯ ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಬೇಕು ಎಂದು ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಎರಡು ಬೇಡಿಕೆಗಳನ್ನಿಟ್ಟಿದ್ದಾರೆ. ಮೊದಲನೇಯದಾಗಿ “ಪ್ರತಿಬಾರಿಯೂ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ಮಾಡುವಾಗ ಅಲ್ಲಿ ಆಂಬುಲೆನ್ಸ್ ಬರುತ್ತದೆ ಮತ್ತು ಅವರು ದಾರಿ ಬಿಟ್ಟುಕೊಡುವ ವರದಿಯಾಗುತ್ತಿದೆ. ಇದು ಕಾಕತಾಳೀಯವಲ್ಲ. ಬದಲಿಗೆ ಪ್ರಧಾನಿಯವರ ಗಂಭೀರ ಭದ್ರತಾ ಲೋಪವಾಗಿದೆ. ಈ ಕುರಿತು ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಎರಡನೇಯದಾಗಿ ಪದೇ ಪದೇ ಬರುವ ಆಂಬುಲೆನ್ಸ್‌ ಅನ್ನು ಬಿಜೆಪಿಯ ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಬೇಕು ಎಂದಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಕನಿಷ್ಟ 5 ಬಾರಿ ಪ್ರಧಾನಿಯವರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಂಬುಲೆನ್ಸ್ ಕಾಣಿಸಿಕೊಂಡಿದ್ದಾಗಿ ಮಾಧ್ಯಮಗಳು ವರದಿ ಮಾಡಿದ ಪತ್ರಿಕಾ ತುಣುಕುಗಳಲ್ಲಿನ ದಿನಾಂಕಗಳನ್ನು ಮಾರ್ಕ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ “ಪ್ರತಿ ಚುನಾವಣಾ ರ್ಯಾಲಿಯಲ್ಲಿ, ಯಾವುದೇ ಭದ್ರತಾ ತಪಾಸಣೆಯಿಲ್ಲದೆ ಆಂಬ್ಯುಲೆನ್ಸ್‌ ಪ್ರಧಾನಿಯವರ ಅತ್ಯಂತ ಸಮೀಪಕ್ಕೆ ಬರುವುದು, ಅವರ ವಾಹನವನ್ನು ಹಿಂದಿಕ್ಕುವುದು ಅವರ ಭದ್ರತೆಯಲ್ಲಿ ಆಳವಾದ ಲೋಪವಾಗಿದೆ. ನಿಮ್ಮ ಅಭಿಪ್ರಾಯ ಏನು?” ಎಂದು ಅವರು ಪ್ರಶ್ನಿಸಿದ್ದಾರೆ.

ನವೆಂಬರ್ 09ರಂದು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಪ್ರಧಾನಿಗಳು ಆಂಬುಲೆನ್ಸ್‌ಗೆ ದಾರಿ ಬಿಟ್ಟಿಕೊಟ್ಟಿದ್ದನ್ನು ದೊಡ್ಡ ನಾಟಕ ಎಂದು ಟಿಆರ್‌ಎಸ್ ಪಕ್ಷದ ಸಾಮಾಜಿಕ ಜಾಲತಾಣ ಜವಾಬ್ದಾರಿ ಹೊತ್ತಿರುವ ವೈ.ಸತೀಶ್ ರೆಡ್ಡಿ ಆರೋಪಿಸಿದ್ದರು.

“ಆಂಬ್ಯುಲೆನ್ಸ್‌ ಹಾದುಹೋಗುವಿಕೆಯನ್ನು ಸೆರೆಹಿಡಿಯಲು ಮತ್ತು ಅದೇ ದೃಶ್ಯವನ್ನು ವಿವಿಧ ಕೋನಗಳಲ್ಲಿ ಚಿತ್ರೀಕರಿಸಲು ಕ್ಯಾಮರ ಸಿಬ್ಬಂದಿಗೆ ತಕ್ಷಣವೇ ತಿಳಿಸಲಾಗುತ್ತದೆ. ಅಲ್ಲದೆ, ಬೆಂಗಾವಲು ಪಡೆಯನ್ನು ಅದಕ್ಕೆ ತಕ್ಕಂತೆ ಹೊಂದಿಸಲಾಗಿರುತ್ತದೆ. ಆದ್ದರಿಂದ ಆಂಬ್ಯುಲೆನ್ಸ್ ಮೋದಿಯವರ ಕಾರಿನಿಂದ ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದು ಟ್ವೀಟ್ ಮಾಡುವ ಮೂಲಕ ಇದೊಂದು ಪ್ರಹಸನ ಎಂದು ಕರೆದಿದ್ದರು.

ಇದನ್ನೂ ಓದಿ: ಬಿಜೆಪಿ ಕೈವಾಡದ ಆರೋಪ: ಕರ್ನಾಟಕದ 27 ಲಕ್ಷ ಮತದಾರರ ಹೆಸರು ಕೈಬಿಟ್ಟಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...