ಕೋಲಾರ ಜಿಲ್ಲೆಯ ಪೆತ್ತಾಂಡ್ಲಹಳ್ಳಿಯಲ್ಲಿ ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕ ಉದಯ್ ಕಿರಣ್ ಮೇಲಿನ ಸವರ್ಣೀಯರ ಹಲ್ಲೆ ಮತ್ತು ಆತ್ಮಹತ್ಯೆಗೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಇಂದು ಗ್ರಾಮಕ್ಕೆ ಭೇಟಿ ನೀಡಿ ದಲಿತ ಮತ್ತು ಪ್ರಗತಿಪರ ಸಂಘಟನೆಯ ಮುಖಂಡರು ಸಭೆ ಸೇರಿ ಪೆತ್ತಾಂಡ್ಲಹಳ್ಳಿ ಬೈಕ್ ಜಾಥಾ ನಡೆಸಲು ತೀರ್ಮಾನಿಸಿದ್ದಾರೆ.
ಯಾವ ಮರಕ್ಕೆ ದಲಿತ ಉದಯ್ ಕಿರಣ್ ಕಟ್ಟಿ ಹಲ್ಲೆ ನಡೆಸಲಾಯಿತೊ ಅಲ್ಲಿಯೇ ಜಮಾಯಿಸಿದ ಮುಖಂಡರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ಇದು ಆತ್ಮಹತ್ಯೆ ಎನ್ನುವುದಕ್ಕಿಂತ ಕೊಲೆ ಎಂದು ಕರೆಯಬೇಕಾಗಿದೆ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ಘಟನೆ ನಡೆದು ಎರಡು ದಿನಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಕೋಲಾರ ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು ಪ್ರಕರಣವನ್ನು ಖಂಡಿಸಿಲ್ಲ. ಮೂರು ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರು, ಜಿಲ್ಲೆಯ ದಲಿತ ಸಂಸದರು ಬಾಯಿ ಮುಚ್ಚಿ ಕುಳಿತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದಕ್ಕೂ ಮೊದಲು ಸಂತ್ರಸ್ತ ಯುವಕ ವಾಸವಿದ್ದ ಬೇವಹಳ್ಳಿಗೆ ಭೇಟಿ ನೀಡಿದ ಸಂಘಟನೆಗಳ ನಿಯೋಗವು ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಪೊಲೀಸರು 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು. ಈ ರೀತಿಯ ಘಟನೆಗಳು ನಡೆಯದಂತೆ ತಡೆಯಬೇಕು. ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ಪರಿಹಾರ, ಮನೆ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು. ಈ ಬೇಡಿಕೆಗಳ ಈಡೇರಿಕೆಗಾಗಿ ಮುಳಬಾಗಿಲಿನಿಂದ ಪೆತ್ತಾಂಡ್ಲಹಳ್ಳಿಗೆ ಬೈಕ್ ಜಾಥ ನಡೆಸಲಾಗುವುದು. ಆರೋಪಿಗಲ ಮನೆ ಎದುರೆ ಸ್ವಾಭಿಮಾನಿ ಸಮಾವೇಶ ನಡೆಸಲಾಗುವುದು. ಪೆತ್ತಾಂಡ್ಲಹಳ್ಳಿ ಜಾಥಾದ ದಿನಾಂಕವನ್ನು ಡಿಸೆಂಬರ್ 6 ರ ಅಂಬೇಡ್ಕರ್ ಪರಿನಿರ್ವಾಣ ದಿನದಂದು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಕಂಬಾಲಪಲ್ಲಿ ಘಟನೆಯಿಂದ ಹಿಡಿದು ಉಳ್ಳೇರಹಳ್ಳಿ ಜಾತಿದೌರ್ಜನ್ಯದವರೆಗೂ, ಇಂದಿನ ಪೆತ್ತಾಂಡ್ಲಹಳ್ಳಿ ಕೊಲೆವರೆಗೂ ದಲಿತರ ಮೇಲಿನ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ವರದಿಯಾಗುವ ಭೀಕರ ಘಟನೆಗಳು ನಮ್ಮಲ್ಲಿಯೂ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಭೆಯಲ್ಲಿ ಸಿಪಿಎಂ ಜಿಲ್ಲಾಧ್ಯಕ್ಷರಾದ ಗಾಂಧಿನಗರ ನಾರಾಯಣಸ್ವಾಮಿ, ಡಿಎಸ್‌ಎಸ್ ಸಂಯೋಜಕ ಬಣದ ಮೆಕಾನಿಕ್ ಶ್ರೀನಿವಾಸ್, ಬಹುಜನ ಚಳವಳಿಯ ಸಂಗಸಂದ್ರ ವಿಜಯ್ ಕುಮಾರ್, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಸುರೇಶ್ ಬಾಬು, ಶ್ರೀನಿವಾಸ್, ಮೃತ ಉದಯ್ ಕಿರಣ್ ಮಾವ ನಾಗರಾಜು ಭಾಗವಹಿಸಿದ್ದರು.
ಇನ್ನೊಂದೆಡೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೇವಹಳ್ಳಿಯ ಸಂತ್ರಸ್ತ ಯುವಕನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. 50 ಸಾವಿರ ರೂಗಳ ಪರಿಹಾರದ ಚೆಕ್ ವಿತರಿಸಲಾಗಿದೆ.
ಇದನ್ನೂ ಓದಿ: ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ


