Homeಮುಖಪುಟಎನ್‌ಡಿಟಿವಿ: ಬಂಡವಾಳಶಾಹಿ ಪಿತೂರಿಗೆ ಬಾಗಿದ ಬಿರುಗಾಳಿ

ಎನ್‌ಡಿಟಿವಿ: ಬಂಡವಾಳಶಾಹಿ ಪಿತೂರಿಗೆ ಬಾಗಿದ ಬಿರುಗಾಳಿ

- Advertisement -
- Advertisement -

’ನಗುವವರ ಮುಂದೆ ಎಡವಿ ಬೀಳಬಾರದು’ ಎಂಬ ಮಾತೊಂದಿದೆ. ನಮ್ಮ ಪತನವನ್ನು ಬಯಸುವವರು, ಏಳಿಗೆಯನ್ನು ಸಹಿಸದವರ ಮುಂದೆ ಸಣ್ಣ ತಪ್ಪು ಮಾಡಬಾರದು; ಸುಮ್ಮನೆ ನಗುವವರಿಗೆ, ಕಾರಣ ನೀಡಿದಂತಾಗುತ್ತದೆ ಎಂಬುದು ಈ ಮಾತಿನ ಹಿನ್ನೆಲೆ.

ಎನ್‌ಡಿಟಿವಿಯ ಕತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಡವಿ ಬೀಳುವಂತೆ ಮಾಡಿ ನಗುತ್ತಿರುವಂತೆ ಆಗಿದೆ. ಎನ್‌ಡಿಟಿವಿ ತನ್ನ ವಿಶಿಷ್ಟವಾದ ಪತ್ರಿಕೋದ್ಯೋಗದಿಂದ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾಗಿ ಬೆಳೆದು ನಿಂತಿತ್ತು. ರಾಜಿಯಾಗದ, ಸತ್ಯಪರವಾದ ಪತ್ರಿಕೋದ್ಯೋಗಕ್ಕೆ ಬದ್ಧವಾಗಿತ್ತು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿ ನಿರ್ಭೀತ ಪತ್ರಿಕೋದ್ಯೋಗಕ್ಕೆ ಮಾದರಿಯಾಗಿತ್ತು. ಆದರೆ ಈ ನಡೆಯನ್ನು ಪ್ರಸ್ತುತ ಇರುವ ಸರ್ಕಾರವಾಗಲಿ, ಸರ್ಕಾರದೊಂದಿಗೆ ಕೈ ಜೋಡಿಸಿರುವ ಬಂಡವಾಳಶಾಹಿಗಳು ಹೇಗೆ ಸಹಿಸಲು ಸಾಧ್ಯ? ಹೇಗಾದರೂ ಎನ್‌ಡಿಟಿವಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಲು ಈ ಶಕ್ತಿಗಳು ಪ್ರಯತ್ನಿಸಲಾರಂಭಿಸಿದವು.

2017ರ ಸಿಬಿಐ ದಾಳಿಯ ಪ್ರಕರಣವನ್ನೇ ನೆನಪಿಸಿಕೊಳ್ಳಿ. ಬಂಡವಾಳ ದುರುಪಯೋಗದ ಆರೋಪದ ಮೇಲೆ ಸಿಬಿಐ ಮತ್ತು ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಎನ್‌ಡಿಟಿವಿಯ ಮೇಲೆ ಇಂತಹದ್ದೊಂದು ಬಲಪ್ರಯೋಗದ ಮೂಲಕ ಬೆದರಿಸಬಹುದು ಎಂದು ಭಾವಿಸಿತ್ತು. ಆದರೆ ಎನ್‌ಡಿಟಿವಿಗೆ ದೇಶದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದವು. ದೇಶದೆಲ್ಲೆಡೆ ಬಹುತೇಕ ಮುಖ್ಯವಾಹಿನಿ ಮಾಧ್ಯಮವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವಾಗ, ಇದೊಂದು ಮಾಧ್ಯಮ ಸಂಸ್ಥೆಯನ್ನು ಸುಮ್ಮನೆ ಹೇಗೆ ಬಿಟ್ಟಾರು? ಸರಿಯಾದ ಸಮಯಕ್ಕೆ, ಅಂದರೆ ತಪ್ಪು ಮಾಡುವುದಕ್ಕಾಗಿ ಕಾಯುತ್ತಿದ್ದರು!

*****

ಎಂಬತ್ತರ ದಶಕದ ಮಧ್ಯ ಭಾಗ. ದೂರದರ್ಶನವೊಂದೇ ಇದ್ದ ಕಾಲ. ಆಗ ಈ ಸರ್ಕಾರಿ ವಾಹಿನಿ ದಿನಕ್ಕೊಂದು ಬಾರಿ ಬಿತ್ತರಿಸಿದ್ದೇ ಸುದ್ದಿ. ಇಪ್ಪತ್ತ ನಾಲ್ಕು ತಾಸು ಸುದ್ದಿ ಬಿತ್ತರಿಸಬಹುದು ಎಂದು ಈ ದೇಶದ ಯಾವ ಪತ್ರಕರ್ತನೂ ಕಲ್ಪಿಸಿಕೊಂಡಿರಲಿಲ್ಲ. ಅಂತಹ ಕಲ್ಪನೆಯನ್ನು ದೇಶಕ್ಕೆ ರುಚಿಕಟ್ಟಾಗಿ ಕೊಟ್ಟವರು ಪ್ರಣಯ್ ರಾಯ್. ದೆಹಲಿಯ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಾಠ ಮಾಡಿಕೊಂಡಿದ್ದ ಪ್ರಣಯ್‌ರಾಯ್ ಚುನಾವಣಾ ವಿಶ್ಲೇಷಣೆಯ ಸೆಳೆತಕ್ಕೆ ಬಿದ್ದಿದ್ದರು. ಸಹವರ್ತಿ ಅರ್ಥಶಾಸ್ತ್ರಜ್ಞ ಅಶೋಕ್ ಲಾಹಿರಿ, ಮಾರುಕಟ್ಟೆ ತಜ್ಞರಾದ ಅಹಲುವಾಲಿಯಾ ಮತ್ತು ದೊರಬ್ ಸೊಪಾರಿವಾಲಾ ಅವರ ಜೊತೆಗೆ ಕೂತು ಚುನಾವಣೆಗಳ ಆಳ ಅಗಲಗಳನ್ನು ಅಳೆದು, ಚುನಾವಣಾ ರಾಜಕೀಯ, ಪಕ್ಷಗಳ ಬಲಾಬಲಗಳನ್ನು ವಿಶ್ಲೇಷಿಸುವ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಆ ಸಾಹಸ ಅವರನ್ನು ಮಾಧ್ಯಮ ಲೋಕಕ್ಕೆ ಎಳೆದು ತಂದಿತ್ತು.

ಇದೇ ಹೊತ್ತಲ್ಲಿ ದೂರದರ್ಶನ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲು ಸಿದ್ಧವಾಗಿತ್ತು . ಅದಕ್ಕಾಗಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಹೊಸ ಪ್ರತಿಭೆಗಳನ್ನು ದೂರದರ್ಶನದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸೂಚಿಸಿದ್ದರು. ಆಗ ದೂರದರ್ಶನದ ಪ್ರಧಾನ ನಿರ್ದೇಶಕರಾಗಿ ನೇಮಕಗೊಂಡಿದ್ದ ಭಾಸ್ಕರ್ ಘೋಷ್ ಕೂಡ ಹೊಸ ಉತ್ಸಾಹಿಗಳನ್ನು ಹುಡುಕುತ್ತಿದ್ದರು. ಈ ಹೊಸ ಪ್ರತಿಭೆಗಳಿಗೆ ಇದ್ದ ಅವಕಾಶ ಒಲಿದು ಬಂದಿದ್ದು ಪ್ರಣಯ್‌ರಾಯ್ ಅವರಿಗೆ. ಪತ್ನಿ ರಾಧಿಕಾ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ ಟುಡೆಯಲ್ಲಿ ಪತ್ರಕರ್ತೆಯಾಗಿ ದುಡಿದ ಅನುಭವವಿತ್ತು. ಈ ಇಬ್ಬರು ಸೇರಿ ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ ಆರಂಭಿಸಿ, ಅದರ ಮೂಲಕ ದೂರದರ್ಶನಕ್ಕಾಗಿ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡಲಾರಂಭಿಸಿದರು.

ಗಂಭೀರ ಆಡಳಿತಾತ್ಮಕ ಭಾಷೆ, ಗತ್ತುಗಳಲ್ಲೇ ಮುಳುಗಿದ್ದ ದೂರದರ್ಶನಕ್ಕೆ ಸಹಜ, ಆಡುಭಾಷೆಯ ಸರಳವಾದ ಮಾದರಿಯನ್ನು ಪರಿಚಯಿಸಿದರು. ದೂರದರ್ಶನಕ್ಕೆ ’ವರ್ಲ್ಡ್ ದಿಸ್ ವೀಕ್’ ನಿರ್ಮಿಸಿಕೊಟ್ಟರು. ಆದರೆ ಮಾಧ್ಯಮ ಲೋಕದೊಳಗೆ ರಾಯ್ ಅವರಿಗೆ ಮಹಾ ಜಿಗಿತವೊಂದಕ್ಕೆ ಕಾರಣವಾಗಿದ್ದು, 1989ರ ನವೆಂಬರ್ 22ರಿಂದ 26ರವರೆಗೆ ಚುನಾವಣೆ ಫಲಿತಾಂಶ; ಫಲಿತಾಂಶಕ್ಕಾಗಿ ಜನರು ಎದುರು ನೋಡುತ್ತಿದ್ದಾಗ ಬಿತ್ತರವಾದ ಚುನಾವಣಾ ವಿಶ್ಲೇಷಣೆ. ಇಂದು ನಾವು ಎಲ್ಲ ಸುದ್ದಿವಾಹಿನಿಗಳಲ್ಲಿ ನೋಡುವ ಚುನಾವಣೆಯ ಕವರೇಜ್ ಕಲ್ಪನೆ, ಭಾರತದ ಮಾಧ್ಯಮ ಲೋಕಕ್ಕೆ ಪರಿಚಯವಾದ ದಿನವದು. ರಾಯ್ ಮತ್ತು ಅವರ ತಂಡ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹಿನ್ನಡೆಯಾಗುವುದನ್ನು ಗ್ರಹಿಸಿದ್ದರು. ಆದರೆ, ಅಂದು ಟಿವಿ ಪರದೆ ಮೇಲೆ ಬಿತ್ತರವಾದ ವಿಶ್ಲೇಷಣೆಯ ಹಿಂದೆ ಎಂತಹ ಸಾಹಸ ನಡೆದಿತ್ತು ಎಂಬುದನ್ನು ಇಂಡಿಯಾ ಟುಡೆ ತನ್ನ ವರದಿಯೊಂದರಲ್ಲಿ ಹೀಗೆ ದಾಖಲಿಸಿದೆ: “ದೂರದರ್ಶನದ ಸ್ಟುಡಿಯೋದಿಂದ ದೆಹಲಿ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ 97 ಹಾಟ್‌ಲೈನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಲೈನ್ ದೇಶದ ಬಹುಮುಖ್ಯವಾದ ಕ್ಷೇತ್ರದ ಫಲಿತಾಂಶದ ವಿವರಗಳನ್ನು ನೀಡುವುದಕ್ಕೆ ಮೀಸಲಿರಿಸಲಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ 15 ಒಬಿ ವ್ಯಾನ್‌ಗಳನ್ನು ನಿಲ್ಲಿಸಲಾಗಿತ್ತು.”

ಇದನ್ನೂ ಓದಿ: NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು ಚಂದಾದಾರರು!

ಕ್ಷಣಕ್ಷಣದ ಚುನಾವಣಾ ಮಾಹಿತಿಯನ್ನು ಬಿತ್ತರಿಸುವ ಈ ಹೊಸ ಸಾಹಸ ದೂರದರ್ಶನದ ಪಾಲಿಗಷ್ಟೇ ಅಲ್ಲ, ವೀಕ್ಷಕರು, ರಾಜಕಾರಣಿಗಳು- ಹೀಗೆ ಎಲ್ಲರಿಗೂ ಒಂದು ರೋಚಕ ಅನುಭವವೇ ಆಗಿತ್ತು. ಅವತ್ತಿನ ಮಟ್ಟಿಗೆ ಈ ಸಾಹಸಕ್ಕೆ ದೂರದರ್ಶನ 2.5 ಕೋಟಿ ರೂ.ಗಳನ್ನು ವೆಚ್ಚ ಮಾಡಿತ್ತಂತೆ. ಇದು ರಾಯ್, ಎನ್‌ಡಿಟಿವಿ ಮತ್ತು ದೇಶದ ಮಾಧ್ಯಮದ ಲೋಕದ ಮಹತ್ತರ ಮೈಲುಗಲ್ಲು. ರಾಯ್ ಇಲ್ಲಿಂದ ಮುಂದೆ ಮಾಧ್ಯಮದ ಲೋಕದ ಬೇಡಿಕೆಯ ವ್ಯಕ್ತಿಯಾಗಿ ಬೆಳೆದರು. ತೊಂಭತ್ತರ ದಶಕದ ಆರಂಭ, ಮಾಧ್ಯಮ ಮಾರುಕಟ್ಟೆ ನಿಧಾನವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತ್ತು. ಹೊಸ ಪ್ರಯೋಗಗಳ ಮೂಲಕ ಬಿರುಗಾಳಿ ಎಬ್ಬಿಸಿದ ರಾಯ್ ಅವರನ್ನು ಸ್ಟಾರ್ ಸಮೂಹವು ತನ್ನ ಸುದ್ದಿವಾಹಿನಿಗೆ ನಿರ್ಮಾಣ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಳ್ಳುವಂತೆ ಕೇಳಿಕೊಂಡಿತು. 1998ರಿಂದ 2003ರವರಗೆ, ಅಂದರೆ ಎನ್‌ಡಿಟಿವಿ ಸಂಸ್ಥೆ ಸ್ವತಂತ್ರವಾಗಿ ತನ್ನದೇ ಸುದ್ದಿವಾಹಿನಿ ಆರಂಭಿಸುವವರೆಗೂ ಸ್ಟಾರ್ ನ್ಯೂಸ್‌ಗೆ ಸುದ್ದಿ ನಿರ್ಮಾಣದ ಜವಾಬ್ದಾರಿಯನ್ನು ರಾಯ್ ಹೊತ್ತುಕೊಂಡಿತು.

ಸ್ಟಾರ್ ಜೊತೆಗೆ ಐದು ವರ್ಷದ ಒಪ್ಪಂದ ಮುಗಿಯುತ್ತಿದ್ದಂತೆ, ಎನ್‌ಡಿಟಿವಿ ತನ್ನದೇ ಇಂಗ್ಲಿಷ್ ಮತ್ತು ಹಿಂದಿ ಚಾನೆಲ್‌ಗಳನ್ನು ಆರಂಭಿಸಿತು. ಎನ್‌ಡಿಟಿವಿ ಹೊಸ ಸಾಹಸಕ್ಕೆ ಸ್ಟಾರ್ ಸಮೂಹದ್ದೇ ಹಣ ಹೂಡಿಕೆಯಾಗಿತ್ತು. ಇದು ಮಾಧ್ಯಮದ ಲೋಕದ ಹೊಸ ಅಧ್ಯಾಯ. ಎನ್‌ಡಿಟಿವಿ ಎಂತೆಂತಹ ಪತ್ರಕರ್ತರನ್ನು ಬೆಳೆಸಿತು ಎಂಬುದನ್ನು ಕಳೆದ 19 ವರ್ಷಗಳಲ್ಲಿ ಆ ವಾಹಿನಿಯನ್ನು ಗಮನಿಸಿದವರಿಗೆಲ್ಲಾ ಗೊತ್ತು. ’ರಾಯ್ ಬಾಯ್ಸ್’ ಎಂದು ಕರೆಸಿಕೊಂಡ ಬಹುತೇಕರು ಇಂದು ಬೇರೆಬೇರೆ ಚಾನೆಲ್‌ಗಳಲ್ಲಿ ಮುಖ್ಯ ಸ್ಥಾನದಲ್ಲಿದ್ದಾರೆ. ರಾಯ್ ಗರಡಿಯಲ್ಲಿ ಪಳಗಿದ ಪತ್ರಕರ್ತರು ಒಂದು ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದಾರೆ. ಸೋನಿಯಾ ಸಿಂಗ್, ವಿಕ್ರಮ್ ಚಂದ್ರ, ಬರ್ಕಾ ದತ್, ರಾಜ್‌ದೀಪ್ ಸರ್‌ದೇಸಾಯಿ, ಶ್ರೀನಿವಾಸನ್ ಜೈನ್, ವಿಷ್ಣು ಸೋಮ್, ಮಾಯಾ ಮಿರ್ಚಂದಾನಿ, ಅರ್ನಬ್ ಗೋಸ್ವಾಮಿ, ಸಾಗರಿಕಾ ಘೋಷ್, ನಿಧಿ ರಾಜ್‌ದಾನ್, ಸುನೇತ್ರ ಚೌಧರಿ, ರವೀಶ್ ಕುಮಾರ್ ಪತ್ರಕರ್ತರಾಗಿ ಮಿಂಚಿದವರು.

’ವೀ ದಿ ಪೀಪಲ್’, ’ಪ್ರೈಮ್ ಟೈಮ್’, ’ಲೆಫ್ಟ್ ರೈಟ್’ ಸೆಂಟರ್ನಂತಹ ಶೋಗಳ ಜೊತೆಗೆ ರಾಜಕೀಯ ಸುದ್ದಿ, ವಿಶ್ಲೇಷಣೆ, ಚುನಾವಣಾ ಪೋಲ್‌ಗಳ ಕಾರಣಕ್ಕೆ ಎನ್‌ಡಿಟಿವಿ ಗಳಿಸಿದ ವಿಶ್ವಾಸಾರ್ಹತೆ, ಜನಪ್ರಿಯತೆ ನಿಜಕ್ಕೂ ಬಿರುಗಾಳಿಯ ವೇಗದ್ದು. ಎನ್‌ಡಿಟಿವಿ ಜನಪ್ರಿಯತೆಯನ್ನು ನೋಡಿದ ಅನೇಕರು ಹೊಸಹೊಸ ಚಾನೆಲ್‌ಗಳನ್ನು ಆರಂಭಿಸಿದರು. ಸಿಎನ್‌ಎನ್‌ಐಬಿಎನ್ ಬಂತು. ಟೈಮ್ಸ್ ಸಂಸ್ಥೆಯ ಟೈಮ್ಸ್ ನೌ ಬಂತು. ರಾಜಕೀಯ ತುರುಸು, ಮಾಧ್ಯಮಗಳಲ್ಲಿ ಬಂಡವಾಳಶಾಹಿ-ರಾಜಕಾರಣಿ ಶಕ್ತಿಗಳ ಹಿತಾಸಕ್ತಿ-ಪ್ರಭಾವದ ಕಾರಣಕ್ಕೆ, ರಿಪಬ್ಲಿಕ್, ಆಜ್‌ತಕ್ ತರದ ಚಾನೆಲ್‌ಗಳ ಅಬ್ಬರವೂ ಜೋರಾಯ್ತು. ಎನ್‌ಡಿಟಿವಿಯಲ್ಲಿ ಪಳಗಿದವರೇ ಈ ಹೊಸ ಚಾನೆಲ್‌ಗಳ ಸಾರಥ್ಯ ವಹಿಸಿಕೊಂಡು ಎನ್‌ಡಿಟಿವಿಗೆ ಪ್ರತಿಸ್ಪರ್ಧೆ ಒಡ್ಡಲು ಶುರುಮಾಡಿದರು.

2015ರಲ್ಲಿ ಎರಡು ಪ್ರಮಾದಗಳಾದವು. ಅವು ಎನ್‌ಡಿಟಿವಿ ಮತ್ತು ರಾಯ್ ವೃತ್ತಿ ಇತಿಹಾಸದಲ್ಲಿ ಆದ ಪ್ರಮುಖ ಪ್ರಮಾದಗಳೆಂದು ಪತ್ರಕರ್ತರೂ ಚುನಾವಣಾ ತಜ್ಞರೂ ಗುರುತಿಸುತ್ತಾರೆ. ಅದು ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಪರಿಣಿತ ಎನಿಸಿಕೊಂಡ ಪ್ರಣಯ್ ರಾಯ್ ಬಿಜೆಪಿಯ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು. ಫಲಿತಾಂಶ ವ್ಯತಿರಿಕ್ತವಾಯಿತು. ಎರಡನೆಯದು, ಫಲಿತಾಂಶದ ದಿನ ಬೆಳಗಿನ ಟ್ರೆಂಡ್ ನೋಡಿದ ರಾಯ್ ಬಿಜೆಪಿಯ ಮೈತ್ರಿ ಗೆದ್ದಿದೆ ಎಂದರು. 140 ಸೀಟ್‌ಗಳೆಂದು ಸ್ಥಾನಗಳ ಸಹಿತ ಫಲಿತಾಂಶವನ್ನು ಘೋಷಿಸಿದ್ದರು. ಇದಾಗಿ ಒಂದು ತಾಸಿನಲ್ಲಿ ಚಿತ್ರಣವೇ ಬದಲಾಗಿತ್ತು. ಆರ್‌ಜೆಡಿ, ಜೆಡಿಯು, ಕಾಂಗ್ರೆಸ್‌ನ ಮಹಾ ಮೈತ್ರಿ ಗೆಲುವು ಸಾಧಿಸಿತ್ತು. ವಿಶ್ವಾಸಾರ್ಹತೆಯೆ ಎನ್‌ಡಿಟಿವಿಯ ಲಾಂಛನವಾಗಿಸಿಕೊಂಡಿದ್ದ ರಾಯ್ ಈ ತಪ್ಪಿನಿಂದ ಸಾವರಿಸಿಕೊಂಡರು. ಪರದೆಯ ಮೇಲಿನ ಈ ತಪ್ಪನ್ನು ಅರಗಿಸಿಕೊಂಡು, ತಮ್ಮ ಬದ್ಧತೆಯನ್ನು ಮತ್ತೆಮತ್ತೆ ಸಾಬೀತು ಮಾಡುವ ಪ್ರಯತ್ನ ಮಾಡಿದರು. ಆದರೆ ಪರದೆಯ ಹಿಂದೆ ಮಾಡಿದ್ದ ತಪ್ಪೊಂದು ಎನ್‌ಡಿಟಿವಿಯನ್ನೇ ಕಸಿದುಕೊಂಡುಬಿಟ್ಟಿತು.

ಮೊದಲಿಗೆ ಅಂಬಾನಿ, ನಂತರ ಅಂಬಾನಿಯಿಂದ ಅದಾನಿ ಕಸಿಯುವುದಕ್ಕೂ ಕಾರಣವಾಯ್ತು!

ಪ್ರತಿಸ್ಪರ್ಧೆ ಚಾನೆಲ್‌ಗಳ ಅಬ್ಬರದ ನಡುವೆ ಎನ್‌ಡಿಟಿವಿ ಯಾವುದೇ ರೀತಿ ಹಿಂದೆ ಉಳಿಯಬಾರದು ಎಂಬ ಒತ್ತಡ ಒಂದೆಡೆ ಇತ್ತು. ಇನ್ನೊಂದೆಡೆ ಸಾಲದ ಸುಳಿಯಲ್ಲಿತ್ತು. ಇಂಡಿಯಾ ಬುಲ್ಸ್‌ನಿಂದ 540 ಕೋಟಿ ರೂ.ಗಳ ಸಾಲ ತೆಗೆದುಕೊಂಡಿದ್ದ ಎನ್‌ಡಿಟಿವಿ ಅದನ್ನು ತೀರಿಸಲು ಐಸಿಐಸಿಐನಿಂದ 370 ಕೋಟಿ ರೂ.ಗಳ ಸಾಲ ಪಡೆದಿತ್ತು. ಅದೂ 19% ವಾರ್ಷಿಕ ಬಡ್ಡಿಗೆ. ಐಸಿಐಸಿಐನಿಂದ ಪಡೆದ ಸಾಲ ದೊಡ್ಡ ಗದ್ದಲಕ್ಕೆ ಕಾರಣವಾಗಿ, ಎನ್‌ಡಿಟಿವಿ ವಂಚನೆಯ ಆರೋಪವನ್ನು ಎದುರಿಸುವಂತಾಯಿತು. ಈ ಸಾಲ ತೀರಿಸುವುದಕ್ಕೆ ರಾಯ್ ದಂಪತಿಗಳು 2009ರಲ್ಲಿ ವಿಶ್ವಪ್ರಧಾನ್ ಕಮರ್ಷಿಲ್ ಪ್ರೈವೇಟ್ ಲಿಮಿಟೆಡ್‌ನಿಂದ 403.5 ಕೋಟಿ ರೂ. ಸಾಲ ಪಡೆದರು. ವಿಪರ್ಯಾಸವೆಂದರೆ ವಿಪಿಸಿಎಲ್‌ಗೆ ಹಣ ಹರಿದುಬರುತ್ತಿದ್ದು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರಿಯಿಂದ (ಈ ಕುರಿತು ದಿ ಕಾರಾವಾನ್ ಪತ್ರಿಕೆ ವಿಸ್ತೃತವಾಗಿ 2015ರಲ್ಲೇ ವರದಿ ಮಾಡಿದೆ). ಅಂಬಾನಿಯ ಸಹವರ್ತಿಗಳೇ ನಡೆಸುತ್ತಿದ್ದ ವಿಸಿಪಿಎಲ್‌ಗೆ ಪರೋಕ್ಷವಾಗಿ ರಿಲಯನ್ಸ್‌ನ ಹಣವೇ ಹರಿದುಬರುತ್ತಿತ್ತು. ಹಣಕ್ಕಾಗಿ ರಾಯ್ ದಂಪತಿಗಳು ಮಾಡಿಕೊಂಡ ಒಪ್ಪಂದದಲ್ಲಿ ಎನ್‌ಡಿಟಿವಿಯ 29.18%ರಷ್ಟು ಶೇರ್‌ಗಳನ್ನು ನೀಡುವುದಾಗಿ ಸಹಿ ಹಾಕಿದ್ದರು. ಬಡ್ಡಿಯನ್ನೇ ಕೇಳದೆ ನೀಡಿದ ಈ ಸಾಲದ ಒಪ್ಪಂದದ ಷರತ್ತುಗಳಲ್ಲಿ ಒಂದು ಸಾಲದ ಅವಧಿಯಲ್ಲಿ ಸೂಕ್ತ ಖರೀದಿದಾರರ ಬಂದರೆ ಮಾಲೀಕರ ಒಪ್ಪಿಗೆಯೇ ಇಲ್ಲದೆ ಶೇರುಗಳನ್ನು ಮಾರಾಟ ಮಾಡುವುದಾಗಿತ್ತು. ಈ ಮೂಲಕ ಎನ್‌ಡಿಟಿವಿಯಲ್ಲಿ ರಾಯ್ ದಂಪತಿಗಳ ಒಟ್ಟು ಶೇರ್ ಪ್ರಮಾಣ 32%ಗೆ ಇಳಿದಿತ್ತು. ಪರೋಕ್ಷವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಎನ್‌ಡಿಟಿವಿಯ ಮಹತ್ವದ ಪಾಲನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಆದರೆ ರಿಲಯನ್ಸ್ ಈ ಕುರಿತು ಎಲ್ಲೂ ಯಾವುದೇ ಹೇಳಿಕೆ ನೀಡಲಿಲ್ಲ.

ಇದನ್ನೂ ಓದಿ: ನಿರ್ದೇಶಕ ಸ್ಥಾನಕ್ಕೆ ರಾಧಿಕಾ ರಾಯ್, ಪ್ರಣಯ್ ರಾಯ್ ರಾಜೀನಾಮೆ: RIP, ಅನ್‌ಫಾಲೋ NDTV ಎಂದ ಪ್ರಮುಖರು

ತನ್ನದೇ ವರ್ತುಲದಲ್ಲಿರುವ ಉದ್ಯಮಿಗಳಿಂದ, ಬೇರೆಬೇರೆ ಉದ್ಯಮಿಗಳ ಉದ್ದೇಶಗಳಿಗೆ ವರ್ಗಾವಣೆಯಾಗುತ್ತಾ ಬಂದ ವಿಸಿಪಿಎಲ್‌ಅನ್ನು ಕಡೆಗೆ ಆಗಸ್ಟ್ 2022ರಲ್ಲಿ 113 ಕೋಟಿ ರೂ.ಗಳಿಗೆ ಅದಾನಿ ಗ್ರೂಪ್ ಖರೀದಿಸಿತು. ಈ ಮೂಲಕ ಅದಾನಿ ಗ್ರೂಪ್ ವಿಸಿಪಿಎಲ್ ಎಲ್ಲ ವಹಿವಾಟುಗಳ ಹಕ್ಕುದಾರ ಸಂಸ್ಥೆಯಾಯಿತು. ಈ ಯಾವ ಬೆಳವಣಿಗೆಯ ಸುಳಿವೂ ಇಲ್ಲದೆ ಇದ್ದ ರಾಯ್ ದಂಪತಿಗಳಿಗೆ ಇದೊಂದು ಆಘಾತವಾಗಿತ್ತು. ಸೆಬಿಯ ನಿಯಮಗಳು ಹಾಗೂ ತಾವೇ ಮಾಡಿಕೊಂಡ ಒಪ್ಪಂದದಂತೆ ಸಾಲದ ಅವಧಿಯಲ್ಲಿ ಸೂಕ್ತ ಖರೀದಿದಾರರರಿಗೆ ತಮ್ಮ ಶೇರನ್ನು ಮಾರುವ ಹಕ್ಕನ್ನು ವಿಸಿಪಿಎಲ್ ಉಳಿಸಿಕೊಂಡಿತ್ತು. ಅದಾನಿ ಈ ಅವಕಾಶ ಬಳಸಿಕೊಂಡು ವಿಸಿಪಿಎಲ್ ಖರೀದಿಸಿದ್ದೂ ಅಲ್ಲದೆ ಸೆಬಿಯ ನಿಯಮದಂತೆ 25%ಕ್ಕೂ ಹೆಚ್ಚು ಶೇರ್ ಹೊಂದಿದ್ದು, ಕಂಪನಿಯ ಹೆಚ್ಚುವರಿ 26% ಶೇರ್ ಖರೀದಿಸಲು ಮುಕ್ತ ಆಹ್ವಾನವನ್ನು ನೀಡಿದರು.

ಒಂದು ದಶಕದ ಅವಧಿಯಲ್ಲಿ ಅಂಬಾನಿಯ ನೆರಳಿದ್ದ ಸಂಸ್ಥೆಯಿಂದ ಅದಾನಿ ನೆರಳಿಗೆ ಬಂದ ವಿಸಿಪಿಎಲ್ ಕಂಪನಿ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯನ್ನು ಖೆಡ್ಡಾಕ್ಕೆ ಕೆಡವಿಬಿಟ್ಟಿತ್ತು. ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳು ಆಡಳಿತದ ಮತ್ತು ಅಂಬಾನಿ-ಅದಾನಿಗಳ ಮಡಿಲಿನಲ್ಲಿ ಕೂತಿರುವಾಗ, ಎನ್‌ಡಿಟಿವಿ ಅಂತಹ ಎಲ್ಲ ಪ್ರಭಾವಗಳಿಂದ ದೂರ ಉಳಿದು ವೃತ್ತಿಗೆ ಬದ್ಧವಾಗಿ ಉಳಿದಿತ್ತು. ಆದರೆ ವ್ಯಾವಹಾರಿಕ ಪ್ರಮಾದವೊಂದು, ಮಾದರಿ ಮಾಧ್ಯಮ ಸಂಸ್ಥೆಯೊಂದನ್ನು ಕಳೆದುಕೊಳ್ಳುವಂತೆ ಮಾಡಿಬಿಟ್ಟಿತು. ರಾಯ್ ಚುನಾವಣೆಯ ಲೆಕ್ಕಾಚಾರಗಳಲ್ಲಿ ನಿಖರತೆ, ಸ್ಪಷ್ಟತೆಯನ್ನು ಪ್ರದರ್ಶಿಸಿ ದೇಶದ ಜನರ ವಿಶ್ವಾಸ ಗೆದ್ದಿದ್ದರು. ಹಣವಂತರ ಈ ಲೆಕ್ಕಾಚಾರವನ್ನು ಗ್ರಹಿಸದೆ, ಎನ್‌ಡಿಟಿವಿಯನ್ನು ಕಳೆದುಕೊಂಡರು. ಸುರುಳಿ ಸುತ್ತಿಕೊಂಡು ಬಾನೆತ್ತರಕ್ಕೆ ಏರಿ ನಿಂತಿದ್ದ ಎನ್‌ಡಿಟಿವಿ, ಬಂಡವಾಳಶಾಹಿಗಳ ಕುತಂತ್ರದ ಸುಳಿಗೆ ಸಿಲುಕಿದ್ದು ದುರಂತ. ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ಮಾಧ್ಯಮ ಸಂಸ್ಥೆ ಎಂಬ ಆಶಾಭಾವನೆ, ಭರವಸೆ, ನಂಬಿಕೆಗಳನ್ನು ಜೀವಂತವಾಗಿರಿಸಿದ ಎನ್‌ಡಿಟಿವಿಯನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆ ಎಲ್ಲರನ್ನೂ ಕಾಡುತ್ತಿದೆ.

ಲೋಕಸಭೆ ಚುನಾವಣೆಗೆ ಪಕ್ಷಗಳು ಸಿದ್ಧವಾಗುತ್ತಿವೆ. ಇನ್ನೇನಿದ್ದರು ಮುಂದಿನದು ತಯ್ಯಾರಿಯ ಕಾಲ. ಇಂತಹ ಹೊತ್ತಲ್ಲಿ ದೇಶದಾದ್ಯಂತ ಅಭಿಪ್ರಾಯ ರೂಪಿಸುವ ಶಕ್ತಿ ಇದ್ದ ಮಾಧ್ಯಮ ಸಂಸ್ಥೆ ಎನ್‌ಡಿಟಿವಿ ಈಗ ಇದ್ದೂ ಇಲ್ಲವಾಗಿರುವುದನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರು ಯಾರಿಗೂ ಅರಗಿಸಿಕೊಳ್ಳಲಾಗದ ಸಂಗತಿ. ಡಿಜಿಟಲ್ ಮಾಧ್ಯಮದ ಈ ಕಾಲದಲ್ಲಿ ರಾಯ್ ಹೊಸ ಅವತಾರದಲ್ಲಿ ಮತ್ತೊಮ್ಮೆ ಬಿರುಗಾಳಿಯಾಗಿ ಕಾಣಿಸಿಕೊಳ್ಳುತ್ತಾರಾ ಎಂಬ ನಿರೀಕ್ಷೆಯಿಂದ ಕಾಯುವಂತಾಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಹಿರಿಯ ಪತ್ರಕರ್ತರು, ಈದಿನ.ಕಾಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...