ಪ್ರೊ.ಕಬಡ್ಡಿ 9ನೇ ಆವೃತ್ತಿಯ ಪ್ಲೇ ಆಫ್‌ನ ಎಲಿಮೇಟರ್ ಪಂದ್ಯಗಳು ಇಂದು ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಪಂದ್ಯ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ಕೆ.ಸಿ ನಡುವೆ ಸಂಜೆ 7.30ಕ್ಕೆ ನಡೆದರೆ, ಎರಡನೇ ಪಂದ್ಯ ಯು.ಪಿ ಯೋಧ ಮತ್ತು ತಮಿಳು ತಲೈವಾಸ್ ನಡುವೆ 8.30ಕ್ಕೆ ನಡೆಯಲಿದೆ. ಎರಡೂ ಪಂದ್ಯಗಳಲ್ಲಿ ಗೆದ್ದವರಿಗಷ್ಟೇ ಸೆಮಿಫೈನಲ್ ತಲುಪುವ ಅವಕಾಶವಿದೆ. ಸೋತ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ.
ಅಂಕ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟಾನ್ ತಂಡಗಳು ಈಗಾಗಲೇ ನೇರವಾಗಿ ಸೆಮಿಫೈನಲ್ ತಲುಪಿವೆ. ಸೆಮಿಫೈನಲ್ ಪಂದ್ಯಗಳು ಡಿಸೆಂಬರ್ 15 ರಂದು ನಡೆಯಲಿವೆ.
ಬೆಂಗಳೂರು ಬುಲ್ಸ್ ಗೆಲುವಿನ ನಿರೀಕ್ಷೆ
ಈ ಆವೃತ್ತಿಯಲ್ಲಿ ಬೆಂಗಳುರು ಬುಲ್ಸ್ ಭರ್ಜರಿ ಪ್ರದರ್ಶನದೊಂದಿಗೆ ಸುಲಭವಾಗಿ ಪ್ಲೇ ಆಫ್ ತಲುಪಿದೆ. ತಾನಾಡಿದ 22 ಪಂದ್ಯಗಳಲ್ಲಿ 13 ಗೆಲುವು, 8 ಸೋಲು ಮತ್ತು 1 ಟೈನೊಂದಿಗೆ 74 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಆದರೆ ದಬಾಂಗ್ ಡೆಲ್ಲಿ ಪ್ರಯಾಸಕರವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಅದು 10 ಗೆಲುವು, 10 ಸೋಲು ಮತ್ತು 2 ಟೈನೊಂದಿಗೆ 63 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. ಅಲ್ಲದೆ ಡೆಲ್ಲಿ ಮತ್ತು ಬೆಂಗಳೂರು ನಡುವಿನ ಎರಡೂ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಗೆದ್ದು ಬೀಗಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕಡೆ ಒಲವು ಹೆಚ್ಚಿದೆ.
ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಡೆಲ್ಲಿಯನ್ನು 47-43 ಅಂತರದಲ್ಲಿ ಗೆದ್ದರೆ ಎರಡನೇ ಪಂದ್ಯವನ್ನು 52-49 ಅಂತರದಲ್ಲಿ ಗೆಲುವು ಸಾಧಿಸಿತ್ತು. 2018ರ ಚಾಂಪಿಯನ್ ಬೆಂಗಳೂರು ತಂಡ, 2021ರ ಹಾಲಿ ಚಾಂಪಿಯನ್ ಡೆಲ್ಲಿ ವಿರುದ್ಧ ಇಂದು ಸೆಣಸಲಿದೆ.
ಭರತ್ ಮೇಲೆ ಭಾರ
ಬೆಂಗಳೂರು ತಂಡ ಲಿಂಗ್ ಹಂತದ ಕೊನೆಯ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಹೀನಾಯ ಸೋಲು ಕಂಡಿತು. ಬೆಂಗಳೂರಿನ ಭರವಸೆಯ ರೈಡರ್ ಭರತ್ ಅನುಪಸ್ಥಿತಿಯೇ ಅದಕ್ಕೆ ಪ್ರಮುಖ ಕಾರಣವಾಗಿತ್ತು. ಆ ಔಪಚಾರಿಕ ಪಂದ್ಯದಲ್ಲಿ ಭರತ್ ಸೇರಿದಂತೆ ಇತರ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಹಾಗಾಗಿ ಬೆಂಗಳೂರು ಸೋತಿತು. ಇಂದಿನ ಪಂದ್ಯದಲ್ಲಿ ಭರತ್ ಮಿಂಚಿದರೆ, ಡಿಫೆಂಡರ್‌ಗಳು ಉತ್ತರ ಆಟ ಪ್ರದರ್ಶಿಸಿದರೆ ಬೆಂಗಳೂರಿಗೆ ಗೆಲುವು ಖಚಿತ.
ದೆಹಲಿ ವಿರುದ್ಧದ ಪಂದ್ಯಗಳಲ್ಲಿ ಬೆಂಗಳೂರಿನ ಮೇನ್ ರೈಡರ್ ವಿಕಾಸ್ ಖಂಡೋಲ, ನೀರಜ್ ನರ್ವಾಲ್ ಸಹ ಉತ್ತಮ ಸಾಧನೆ ತೋರಿದ್ದಾರೆ. ಇಂದು ಯಾವ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಿದೆ.
ಇನ್ನೊಂದೆಡೆ ದಬಾಂಗ್ ಡೆಲ್ಲಿ ತಂಡದ ಪರವಾಗಿ ನವೀನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರಿಗೆ ಆಶು ಮಲ್ಲಿಕ್ ಮತ್ತು ವಿಜಯ್ ಮಲ್ಲಿಕ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಅವರನ್ನು ಕಟ್ಟಿಹಾಕಲು ಬೆಂಗಳೂರಿನ ಗೂಳಿಗಳು ಸಜ್ಜಾಗಿದ್ದಾರೆ. ಇಂದು ಬೆಂಗಳೂರು ಗೆದ್ದರೆ ಡಿಸೆಂಬರ್ 15 ರಂದು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ.
ಯುಪಿ ಯೋಧ ವರ್ಸಸ್ ತಮಿಳು ತಲೈವಾಸ್
ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧ ತಂಡವನ್ನು ತಮಿಳು ತಲೈವಾಸ್ ಎದುರಿಸಲಿದೆ. ಎರಡೂ ತಂಡಗಳು ಸಹ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಯುಪಿ ಯೋಧದ ಪರವಾಗಿ ಪರ್ದೀಪ್ ನರ್ವಾಲ್ ಪ್ರಮುಖ ರೈಡರ್. ಸರೇಂದರ್ ಗಿಲ್ ಅವರಿಗೆ ಸಾಥ್ ನೀಡುತ್ತಿದ್ದಾರೆ. ಇನ್ನು ತಮಿಳು ತಲೈವಾದ್ ಪರವಾಗಿ ಅಜಿಂಕ್ಯ ಪವಾರ್ ಮತ್ತು ನರೇಂದರ್ ಉತ್ತಮ ರೈಡರ್‌ಗಳಾಗಿದ್ದಾರೆ. ಇಂದು ಗೆದ್ದ ತಂಡ ಡಿಸೆಂಬರ್ 15 ರಂದು ಪುಣೇರಿ ಪಲ್ಟನ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುತ್ತದೆ. ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದುವರೆಗಿನ ಪ್ರೊ ಕಬಡ್ಡಿ ಚಾಂಪಿಯನ್‌ಗಳು
ಮೊದಲ ಆವೃತ್ತಿ 2014: ಜೈಪುರ್ ಪಿಂಕ್ ಪ್ಯಾಂಥರ್ಸ್
ಎರಡನೇ ಆವೃತ್ತಿ 2014: ಯು ಮುಂಬಾ
ಮೂರನೇ ಆವೃತ್ತಿ 2015: ಪಟ್ನಾ ಪೈರೇಟ್ಸ್
ನಾಲ್ಕನೇ ಆವೃತ್ತಿ 2016: ಪಟ್ನಾ ಪೈರೇಟ್ಸ್
ಐದನೇ ಆವೃತ್ತಿ 2017: ಪಟ್ನಾ ಪೈರೇಟ್ಸ್
ಆರನೇ ಆವೃತ್ತಿ 2018: ಬೆಂಗಳೂರು ಬುಲ್ಸ್
ಏಳನೇ ಆವೃತ್ತಿ 2019: ಬೆಂಗಾಲ್ ವಾರಿಯರ್ಸ್
ಎಂಟನೇ ಆವೃತ್ತಿ 2021: ದಬಾಂಗ್ ಡೆಲ್ಲಿ
ಇದನ್ನೂ ಓದಿ; 2022ರಲ್ಲಿ ಆಸ್ಟ್ರೇಲಿಯಾಗೆ ಮೊದಲ ಟಿ20 ಸೋಲುಣಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ


