2002ರ ಕೋಮು ಹಿಂಸಾಚಾರದ ಸಂದರ್ಭದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿ ತನ್ನ ಕುಟುಂಬದ ಹಲವು ಸದಸ್ಯರನ್ನು ಕೊಂದ 11 ಮಂದಿಯ ಬಿಡುಗಡೆಯ ವಿರುದ್ಧ ಸಂತ್ರಸ್ತೆ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಎರಡು ಅರ್ಜಿಗಳಲ್ಲಿ ಒಂದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈಗ ವಜಾಗೊಳಿಸಲಾಗಿರುವ ಅರ್ಜಿಯಲ್ಲಿ- ಬಿಡುಗಡೆಯ ಮನವಿಯನ್ನು ಪರಿಗಣಿಸಲು ಗುಜರಾತ್ ಸರ್ಕಾರಕ್ಕೆ ತಿಳಿಸಿದ ಮೇ 2022ರ ಆದೇಶವನ್ನು ಪರಿಶೀಲಿಸುವಂತೆ ಬಿಲ್ಕಿಸ್ ಬಾನೋ ಅವರು ನ್ಯಾಯಾಲಯವನ್ನು ಕೋರಿದ್ದರು. “ಬಿಡುಗಡೆಯ ಆಧಾರದ ಮೇಲೆ ಸವಾಲು ಹಾಕಿರುವ ಬಿಲ್ಕಿಸ್ ಅವರ ಇನ್ನೊಂದು ಪ್ರಕರಣ, ಈ ನಿರ್ಧಾರದಿಂದ ತಕ್ಷಣವೇ ಪರಿಣಾಮ ಬೀರುವುದಿಲ್ಲ, ವಿವರವಾದ ಆದೇಶ ಇನ್ನೂ ಲಭ್ಯವಿಲ್ಲ” ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
BIG BREAKING: Review plea filed by Bilkis Bano against the remission order granted in favour of the 11 convicts in the 2002 gang rape case has been DISMISSED BY SUPREME COURT #SupremeCourt #BilkisBano pic.twitter.com/63cQO62CdD
— Bar & Bench (@barandbench) December 17, 2022
ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ 11 ಅಪರಾಧಿಗಳನ್ನು ಆಗಸ್ಟ್ 15ರಂದು ಜೈಲಿನಿಂದ ಹೊರಗೆ ಬಿಡಲಾಯಿತು. ಅವರಿಗೆ ಅವಧಿಪೂರ್ವ ಬಿಡುಗಡೆಯನ್ನು ನೀಡಲಾಯಿತು. ‘ಉತ್ತಮ ನಡವಳಿಕೆ’ ಕಾರಣವನ್ನು ನೀಡಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಯೊಂದಿಗೆ ಗುಜರಾತ್‌ನ ಬಿಜೆಪಿ ಸರ್ಕಾರವು 1992ರ ನೀತಿಯ ಅಡಿಯಲ್ಲಿ ಬಿಡುಗಡೆಗೆ ಅನುಮತಿ ನೀಡಿತ್ತು.
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಇತ್ತಿಚಿನ ನೀತಿಯು ಹೇಳುತ್ತದೆ. ಆದರೆ ಅಂತಹ ಯಾವುದೇ ವಿನಾಯಿತಿಯನ್ನು ಹೊಂದಿರದ 1992ರ ನೀತಿಯು ಈ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. 2008ರಲ್ಲಿ ಈ ಅಪರಾಧಿಗಳಿಗೆ ಶಿಕ್ಷೆಯಾದಾಗ 1992ರ ನೀತಿಯು ಜಾರಿಯಲ್ಲಿತ್ತು.
ಇದನ್ನು ಪ್ರಶ್ನಿಸಿದ್ದ ಬಿಲ್ಕಿಸ್ ಬಾನೊ, ನೆರೆಯ ಮಹಾರಾಷ್ಟ್ರದಲ್ಲಿ ವಿಚಾರಣೆ ನಡೆದಿರುವುದರಿಂದ ನಿರ್ಧಾರ ಕೈಗೊಳ್ಳಲು ಗುಜರಾತ್ ಸೂಕ್ತ ರಾಜ್ಯವಲ್ಲ ಎಂದು ವಾದಿಸಿದ್ದರು. ಗುಜರಾತ್‌ನಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಬಾನೊ ಅವರು 2004ರಲ್ಲಿ ತಿಳಿಸಿದ್ದ ಬಳಿಕ ಸುಪ್ರೀಂ ಕೋರ್ಟ್‌ನ ಸೂಚನೆ ಮೇರೆಗೆ ವಿಚಾರಣೆಯನ್ನು ಮುಂಬೈಗೆ ಸ್ಥಳಾಂತರಿಸಲಾಗಿತ್ತು.
ಅಪರಾಧಿಗಳು ಸುಮಾರು 15 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರಲ್ಲಿ ಒಬ್ಬಾತ ‘ಜೀವಾವಧಿ ಕೈದಿಗಳ ನೀತಿ’ಯ ಪ್ರಕಾರ ಅವಧಿಪೂರ್ವ ಬಿಡುಗಡೆಗೆ ಪರಿಗಣಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ಆ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಈ ವರ್ಷದ ಮೇನಲ್ಲಿ ಗುಜರಾತ್ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು.
ಮೂರು ತಿಂಗಳ ನಂತರ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಅವರಲ್ಲಿ ಒಬ್ಬರು ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿರುವ ತಮ್ಮ ಮಗಳ ಪರವಾಗಿ ಪ್ರಚಾರ ಮಾಡಿದ್ದರು.
ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ 2002ರ ಅವಧಿಯಲ್ಲಿ ಕೋಮು ಗಲಭೆಗಳು ನಡೆದಿದ್ದವು. ಆ ಸಮಯದಲ್ಲಿ ನಡೆದಿದ್ದ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಸರ್ಕಾರ ಈ ಬಿಡುಗಡೆಯನ್ನು ಸಮರ್ಥಿಸಿದೆ. ಬಿಜೆಪಿಯ ನಾಯಕರು ಅಪರಾಧಿಗಳನ್ನು ಬಣ್ಣಿಸಿದ್ದು, ‘ಸಂಸ್ಕೃತಿ (ಸಂಸ್ಕೃತಿ) ಬ್ರಾಹ್ಮಣರು’ ಎಂದಿದ್ದಾರೆ.
ಬಿಡುಗಡೆಗೆ ಶಿಫಾರಸು ಮಾಡಿದ ಸಮಿತಿಯಲ್ಲಿ ಬಿಜೆಪಿ ನಾಯಕರು ಇದ್ದರು, ಇದನ್ನು ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಅನುಮೋದಿಸಿದೆ.
ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಬಿಲ್ಕಿಸ್ ಬಾನೋ ಅವರ ಅರ್ಜಿಗೆ ಸಂಬಂಧಿಸಿದಂತೆ, ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ಪ್ರಕರಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಅರ್ಜಿ ವಿಚಾರಣೆಯನ್ನು ಕಳೆದ ವಾರ ಮುಂದೂಡಲಾಗಿತ್ತು. ಹಿಂದೆ ಸರಿದಿದ್ದಕ್ಕೆ ಕಾರಣವನ್ನು ನ್ಯಾಯಾಧೀಶರು ನೀಡಿರಲಿಲ್ಲ.


